ಗಾಳಿ ಹೆಜ್ಜೆ ಹಿಡಿದ ಸುಗಂಧ

ಖ್ಯಾತ ಚಲನ ಚಿತ್ರ ನಿರ್ದೇಶಕ ಅಬ್ಬಾಸ್‍ ಕಿರೊಸ್ತಾಮಿ ಕವಿಯೂ ಹೌದು. ಅದಕ್ಕೆ ಸಾಕ್ಷಿ ಆತನ ಸಿನಿಮಾಗಳೇ. ಆತನ ಎರಡು ಕವನ ಸಂಕಲನಗಳು ಅದಕ್ಕೆ ಮತ್ತಷ್ಟು ಪುರಾವೆ ನೀಡಿವೆ.

ಹೇಮಾ ಶ್ರೀನಿವಾಸಮೂರ್ತಿ ಅವರು ಕಿರೋಸ್ತಾಮಿ ಅವರ ಅಪರೂಪದ ಕವಿತೆಗಳನ್ನು ನಮ್ಮ ಕೈಗಿಟ್ಟಿದ್ದಾರೆ. ‘ಹೆಸರಿಲ್ಲದ ಹೂ’ ಸಂಕಲನ ಇದೇ ೪ ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಹೇಮಾ ಬರೆದ ಮಾತುಗಳು ಇಲ್ಲಿವೆ. 

hema hebbagodi1

ಹೇಮಾ ಶ್ರೀನಿವಾಸಮೂರ್ತಿ 

ಪುಟ್ಟ ಹೆಸರಿಲ್ಲದ ಹೂ

ಅರಳುತಿದೆ ಒಬ್ಬಂಟಿ

ದೊಡ್ಡ ಬೆಟ್ಟದ ಬಿರುಕಿನಲ್ಲಿ

ಅಬ್ಬಾಸ್‍ ಕಿರೊಸ್ತಾಮಿ ದೃಶ್ಯಕಾವ್ಯದ ಅನನ್ಯ ಕಲೆಗಾರ. ವಿಶ್ವಸಿನೆಮಾ ರಂಗದಲ್ಲಿ ಈತನ ಹೆಸರು ಚಿರಪರಿಚಿತ. ಮೊದಲಿಗೆ ಅಬ್ಬಾಸನ ಪರಿಚಯವಾದದ್ದು ಆತನ ಸಿನೆಮಾಗಳ ಮೂಲಕವೇ. ಬ್ರೆಡ್‍ ಅಂಡ್‍ ಆ್ಯಲಿ, ಟೇಸ್ಟ್‍ ಆಫ್‍ ಚೆರ್ರಿ, ಥ್ರೂ ದ ಆಲೀವ್‍ ಟ್ರೀಸ್‍, ದ ವಿಂಡ್‍ ವಿಲ್‍ ಕ್ಯಾರಿ ಅಸ್‍, ಟೆನ್‍,… ಈತನ ಬೆನ್ನುಹತ್ತಿ ಹೋದಾಗ ತಿಳಿದದ್ದು ಈತ ಕಾವ್ಯಪ್ರೇಮಿ ಮತ್ತು ಸ್ವತಃ ಕವಿ.

inivitation-1ಕಾವ್ಯಕ್ಕೂ ಈತನ ಚಿತ್ರಗಳಿಗೂ ನಡುವೆ ಗಾಢವಾದ ಸಂಬಂಧವಿದೆ. ಪರ್ಷಿಯನ್‍ ಭಾಷೆಯ ಈ ಕವಿ ಇರಾನಿನವನು. ಜಗತ್ತಿನ ಪ್ರಾಚಿನ ಸಾಹಿತ್ಯಗಳಲ್ಲಿ ಪರ್ಷಿಯನ್‍ ಸಾಹಿತ್ಯವೂ ಒಂದು. ಪರ್ಷಿಯನ್‍ ಸಾಹಿತ್ಯದ ಸೂಫಿ ಕಾವ್ಯಪರಂಪರೆ ಹಾಗೂ ಗಝಲ್‍ಗಳು ಜಗತ್ತಿಗೆ ಹೆಚ್ಚು ಪರಿಚಿತವಾದದ್ದು. ಉಮರ್‍ ಖಯ್ಯಾಂ, ರೂಮಿ ಇವರಿಬ್ಬರೂ ಅತಿ ಹೆಚ್ಚು ಜಗತ್ತಿನ ಭಾಷೆಗಳಿಗೆ ಅನುವಾದಗೊಂಡಿರುವ ಕವಿಗಳು. ಕನ್ನಡದಲ್ಲೂ ಇವರ ಕಾವ್ಯದ ಅನುವಾದದ ಪ್ರಯತ್ನಗಳು ನಡೆದಿರುವುದನ್ನು ಕಾಣಬಹದು.

ಅಬ್ಬಾಸ್‍ ಕಿರೊಸ್ತಾಮಿ ಇಂತಹ ಕಾವ್ಯಪರಂಪರೆಯಿಂದ ಪ್ರಭಾವಿತನಾದವನು. ಈತನನ್ನು ಕಾವ್ಯಾತ್ಮಕ ಸಿನೆಮಾದ ಗಾರುಡಿಗ ಎಂದು ಗುರುತಿಸುತ್ತಾರೆ. ಕಾವ್ಯವನ್ನು ಅತಿ ಹೆಚ್ಚು ಪ್ರೀತಿಸುವ ಕಿರೊಸ್ತಾಮಿ ‘ತನ್ನ ಚಿತ್ರಗಳು ಕಾವ್ಯದಂತಿರಬೇಕು. ಪ್ರೇಕ್ಷಕನ ಮನದಲ್ಲಿ ಸಿನೆಮಾ ಬೆಳೆಯಬೇಕು ಎನ್ನುತ್ತಾನೆ. ತನಗೆ ಕತೆಯನ್ನು ಹೇಳುವ ಚಿತ್ರಗಳಿಗಿಂತ ಕಾವ್ಯದ ಹಾಗೆ ತೆರೆದರೂ ತೆರೆಯದಂತಿರುವ ಚಿತ್ರಗಳು ಇಷ್ಟ ಎನ್ನುತ್ತಾನೆ. ತನಗೆ ಕಾವ್ಯ ಏಕೆ ಇಷ್ಟ ಎನ್ನುವುದನ್ನು ಹೇಳುವಾಗ ಕಿರೊಸ್ತಾಮಿ ಸಂದರ್ಶನವೊಂದರಲ್ಲಿ “ತನ್ನ ಮನೆಯ ಗ್ರಂಥಾಲಯದಲ್ಲಿ ಕತೆ, ಕಾದಂಬರಿಯ ಪುಸ್ತಕಗಳು ಹೊಚ್ಚ ಹೊಸದಂತಿರುತ್ತದೆ. ಅದೇ ಕಾವ್ಯದ ಪುಸ್ತಕಗಳು ಹಳತಾಗಿರುತ್ತವೆ” ಎಂದು ಹೇಳುತ್ತಾನೆ.

ಕಿರೊಸ್ತಾಮಿಗೆ ನಿಡುಗಾಲ ಭಾಷಾಂತರಕಾರ್ತಿಯಾಗಿ ಕೆಲಸ ಮಾಡಿದ ಡೊರನ ಕಜೆ಼ನಿ ಆತನ ‘ವಾಕಿಂಗ್‍ ವಿಥ್‍ ವಿಂಡ್‍’ ಪುಸ್ತಕ ಕುರಿತು ಬರೆಯುವಾಗ ಒಂದು ಘಟನೆಯನ್ನು ಉಲ್ಲೇಖಿಸುತ್ತಾಳೆ : “ಆತನ ‘ಟೇಸ್ಟ್ ಆಫ್‍ ಚೆರ್ರಿ’ ಚಿತ್ರಕ್ಕೆ ಪ್ರತಿಷ್ಟಿತ ಕ್ಯಾನ್ಸ್ ಪ್ರಶಸ್ತಿ ದೊರೆತಿದ್ದ ಸಂದರ್ಭದಲ್ಲಿ ಅದರ ಪ್ರದರ್ಶನ ಯು.ಎಸ್‍ನಲ್ಲಿ ಏರ್ಪಟ್ಟಿತಂತೆ. ಆಗ ಕಿರೊಸ್ತಾಮಿ ಖಯ್ಯಾಂನ ಕವಿತೆಗಳ ಪುಸ್ತಕವನ್ನು ಸದಾ ತನ್ನೊಂದಿಗೆ ಇಟ್ಟುಕೊಂಡು ಓಡಾಡುತ್ತಿದ್ದವನು ಸಮಯ ಸಿಕ್ಕಾಗೆಲ್ಲ ಅದನ್ನು ಓದುತ್ತಿದ್ದನಂತೆ. ತನ್ನ ಮುಂದಿನ ಚಿತ್ರದ ತಯಾರಿಗಾಗಿ ಆ ಪುಸ್ತಕವನ್ನು ಓದುತ್ತಿರುವುದಾಗಿ ಆಕೆಗೆ ಹೇಳಿದನಂತೆ.

ಆ ಚಿತ್ರ ‘ದ ವಿಂಡ್‍ ವಿಲ್‍ ಕ್ಯಾರಿ ಅಸ್‍’. ಆ ಚಿತ್ರದಲ್ಲಿ ಪಾತ್ರವೊಂದು ಖಯ್ಯಾಂನ ಪದ್ಯವನ್ನು ಹೇಳುವ ದೃಶ್ಯವೊಂದನ್ನು ಆತ ಕಟ್ಟಿದ್ದಾನೆ. ಅಂದು ಸಂಜೆಯ ಪಾರ್ಟಿಯಲ್ಲಿ ತಮಗೆ ವೈನ್‍ ಕೊಟ್ಟ ಇಟಾಲಿಯನ್‍ ಗೆಳೆಯರಿಗೂ ಕಿರೊಸ್ತಾಮಿ ಖಯ್ಯಾಂನ ಪದ್ಯಗಳನ್ನು ಓದಿದ್ದನಂತೆ.”  ‘ದ ವಿಂಡ್‍ ವಿಲ್‍ ಕ್ಯಾರಿ ಅಸ್‍’ ಚಿತ್ರದ ಶೀರ್ಷಿಕೆ ಸಹ ಫರೋಹ್‍ ಫರೋಕ್ಜಾದ್‍ ಎನ್ನುವ ಕವಿಯಿತ್ರಿಯ ಕವನವೊಂದರ ಶೀರ್ಷಿಕೆಯಂತೆ.

ಅಬ್ಬಾಸ್‍ ಕಿರೊಸ್ತಾಮಿ ಎರಡು ಸಂಕಲನಗಳನ್ನು ಪ್ರಕಟಿಸಿದ್ದಾನೆ. ‘ವಾಕಿಂಗ್ ವಿಥ್‍ ದ ವಿಂಡ್’ ಮತ್ತು ‘ಎ ವುಲ್ಫ್ ಲೈಯಿಂಗ್‍ ಇನ್‍ ವೇಯ್ಟ್  ಈ ಎರಡೂ ಸಂಕಲನಗಳಲ್ಲಿನ ಕವನಗಳು ಜಪಾನಿನ ಹಾಯ್ಕು ಮಾದರಿಗಳಿಗೆ ಹತ್ತಿರವಾದದ್ದು. ಈ ಮಾದರಿಯ ಪದ್ಯಗಳನ್ನು ಪರ್ಷಿಯನ್‍ ಸಾಹಿತ್ಯದಲ್ಲಿ ‘ಶೇರ್‍ – ಏ –ಸೆಪಿದ್‍’ ಎನ್ನುವರು. ಇದರ ವಾಚ್ಯಾರ್ಥ ‘ಬಿಳಿ ಪದ್ಯ’. ಆಧುನಿಕ ಪರ್ಷಿಯನ್‍ ಸಾಹಿತ್ಯದ ಬಹುಮುಖ್ಯ ಪ್ರಕಾರವಾಗಿ ಇದನ್ನು ಬೆಳಸಿದ್ದು ನಿಮಾ ಮತ್ತು ಅಹಮದ್‍ ಶಾಮ್ಲು ಎಂದು ಹೇಳಲಾಗುತ್ತದೆ. ಕಿರೊಸ್ತಾಮಿ ಈ ಮಾದರಿಯನ್ನು ಆಯ್ಕೆ ಮಾಡಿಕೊಂಡರೂ ಸಹ ಈತನ ಕಾವ್ಯದಲ್ಲಿ ರೂಮಿ ಹಾಗೂ ಹಫೀಜನ ಕಾವ್ಯದ ಗುಣಗಳಿರುವುದನ್ನು ವಿಮರ್ಶಕರು ಗುರುತಿಸುತ್ತಾರೆ.

‘ವಾಕಿಂಗ್‍ ವಿಥ್‍ ದ ವಿಂಡ್‍’ ಸಂಕಲನಕ್ಕೆ ಇಂಗ್ಲೀಷ್‍ ಮುನ್ನುಡಿ ಬರೆದಿರುವ ಅಹಮದ್‍ ಕನಿಮ್‍ ಹಕಕ್‍ ಮತ್ತು ಮೈಕೆಲ್‍ ಬೆಯರ್ಡ್‍ ಆತನ ಕಾವ್ಯದ ಹಿನ್ನೆಲೆಯಲ್ಲಿ ಪ್ರಭಾವ ಬೀರಿರುವ ಕವಿಗಳು ಹಾಗೂ ಆತನ ಕಾವ್ಯದ ವಸ್ತುಗಳ ಬಗ್ಗೆ ಚರ್ಚಿಸುತ್ತಾರೆ. ಈ ಸಂಕಲನದ ಕೇಂದ್ರವಸ್ತುವಾಗಿರುವ ‘ಗಾಳಿ’ಯನ್ನು ಕುರಿತಂತೆ ಹೇಳುತ್ತಾ ಆಧುನಿಕ ಪರ್ಷಿಯನ್‍ ಸಾಹಿತ್ಯದಲ್ಲಿ ಕವಿಗಳು ನಿಸರ್ಗದ ಪಂಚಭೂತಗಳಲ್ಲಿ ಒಂದನ್ನು ತಮ್ಮ ತಾತ್ವಿಕ, ಆಧ್ಯಾತ್ಮಿಕ ವಿಷಯಗಳ ಅಭಿವ್ಯಕ್ತಿಗೆ ಬಳಸಿದ್ದನ್ನು ಗುರುತಿಸುತ್ತಾರೆ. ಆ ಹಿನ್ನೆಲೆಯಲ್ಲಿ ನೋಡಿದಾಗ ಅಬ್ಬಾಸ್‍ ಕಿರೊಸ್ತಾಮಿಯ ಪದ್ಯಗಳ ವಸ್ತುಗಳು, ಪ್ರತಿಮೆಗಳು ಹಾಗೂ ಭಾಷೆ ವಿಶಿಷ್ಟವಾದದ್ದು.

kiarostami81979ರಲ್ಲಿ ಇರಾನಿನಲ್ಲಿ ನಡೆದ ಕ್ರಾಂತಿಯಲ್ಲಿ ಒಟ್ಟೂ ಇರಾನಿನ ಸಾಂಸ್ಕೃತಿಕ ರಾಜಕೀಯ ಸ್ವರೂಪ ಬದಲಾಯಿತು. ಈ ಅವಧಿ ತನ್ನ ವೃತ್ತಿ, ಸಾಮಾಜಿಕ ಜೀವನದಲ್ಲಿ ಮಹತ್ತರವಾದದ್ದು ಎಂದು ಕಿರೊಸ್ತಾಮಿ ಹೇಳುತ್ತಾನೆ. ಅದೇ ರೀತಿ ಆತನ ವೈಯುಕ್ತಿಕ ಬದುಕು ಕೂಡ ಇದೇ ಕಾಲಘಟ್ಟದಲ್ಲಿ ಸಂಘರ್ಷಮಯವಾಗಿದ್ದು ಅದು ಕೂಡ ತನ್ನ ಕೃತಿಗಳನ್ನು ಪ್ರಭಾವಿಸಿತೆಂದು ಹೇಳುತ್ತಾನೆ. ಆ ಸಮಯದಲ್ಲೇ ಆತ ಬರವಣಿಗೆ, ಛಾಯಾಗ್ರಹಣ, ಹೊಸಅಲೆಯ ಚಲನಚಿತ್ರಗಳಂತಹ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾನೆ. ಇರಾನಿನ ಹೊಸಅಲೆಯ ಚಿತ್ರಗಳ ನಿರ್ಮಾತೃಗಳ ಮುಂಚೂಣಿಯಲ್ಲಿ ಈತ ನಿಲ್ಲುತ್ತಾನೆ.

ಈ ಸಂಕಲನ ಆತನ ‘ವಾಕಿಂಗ್‍ ವಿಥ್‍ ದ ವಿಂಡ್‍’ನ ಕೆಲವು ಪದ್ಯಗಳ ಅನುವಾದ. ಇಲ್ಲಿನ ಪದ್ಯಗಳಲ್ಲಿ ಒಬ್ಬ ಏಕಾಂಗಿ ಪಯಣಿಗನನ್ನು ಕಾಣಬಹುದಾಗಿದೆ. ಇಲ್ಲಿ ಅಚ್ಚರಿ, ದುಃಖ, ಕಾಯುವಿಕೆ, ಆಧ್ಯಾತ್ಮಿಕ ಸೆಳೆತವಿದೆ. ಕೆಲವು ಪದ್ಯಗಳು ಸ್ವಗತಗಳಂತಿದ್ದರೆ ಕೆಲವು ಮೆಲುದನಿಯ ಮಾತುಕತೆಯಂತಿದೆ. ಇಲ್ಲಿನ ಪ್ರತಿ ಪದ್ಯವೂ ಸ್ವಸಂಪೂರ್ಣವಾದ ಚಿತ್ರವತ್ತಾದ ಪ್ರತಿಮೆಗಳಾಗಿವೆ. ಪ್ರಕೃತಿಯೊಂದಿಗೆ ಪಯಣದಲ್ಲಿ ಕಂಡ ಮಕ್ಕಳು, ಹೆಂಗಸರು, ಕೆಲಸಗಾರರು, ಪ್ರಾಣಿಗಳು, ಸ್ವತಃ ತಾನು ಇಲ್ಲಿನ ವಸ್ತುಗಳಾಗಿ ಬಳಕೆಯಾಗಿರುವುದನ್ನು ಕಾಣಬಹುದಾಗಿದೆ. ಎರಡು ವಿರುದ್ಧವೆನಿಸುವ ಚಿತ್ರಗಳನ್ನು ಎದುರುಬದುರು ಇಡುವುದರ ಮೂಲಕ ಹೊಸದೊಂದು ಧ್ವನಿಯನ್ನು ಹೊಮ್ಮಿಸುತ್ತಾನೆ.

ಹಿಮ ಮುಚ್ಚಿದ ಬಯಲಿನಲ್ಲಿ

ಕಪ್ಪು ಕಾಗೆ

ತನ್ನನ್ನೇ ನೋಡಿಕೊಳ್ಳುತ್ತಿದೆ

ಕಕ್ಕಾಬಿಕ್ಕಿಯಾಗಿ

 

ರಾತ್ರಿಗಳು ದೀರ್ಘ…

ದಿನಗಳು ದೀರ್ಘ…

ಬದುಕು

ಪುಟ್ಟದು.

“ನಮ್ಮ ಕಣ್ಣಮುಂದಿರುವುದನ್ನು ಒಂದು ಚೌಕಟ್ಟಿನಲ್ಲಿ ಹಾಕಿಡದ ಹೊರತು ನಾವು ಗಮನಿಸುವುದಿಲ್ಲ ಅಂತ ನನಗೆ ಹಲವು ಬಾರಿ ಅನ್ನಿಸಿದೆ” ಎಂದು ಕಿರೊಸ್ತಾಮಿ ಒಂದು ಸಂದರ್ಭದಲ್ಲಿ ಹೇಳುತ್ತಾನೆ. ಆತನ ಪದ್ಯಗಳು ದಿನನಿತ್ಯದ ಬದುಕಿನಲ್ಲಿ ನಾವು ಕಾಣುವುದಕ್ಕೆ ಚೌಕಟ್ಟು ಹಾಕಿಟ್ಟ ಚಿತ್ರಗಳು. ಆತ ತಾನು ನೋಡುತ್ತಿರುವುದನ್ನು ಕ್ಯಾಮರಾ ನೋಡುಗನಿಗೆ ದಾಟಿಸುವಂತೆ ಪದ್ಯಗಳ ಮೂಲಕ ಓದುಗನಿಗೆ ದಾಟಿಸುತ್ತಾನೆ. ದೃಶ್ಯಭಾಷೆ ಮತ್ತು ಕಾವ್ಯಭಾಷೆಯ ಹದವರಿತ ಕುಶಲಕರ್ಮಿಯ ಹುತ್ತಗಟ್ಟಿದ ಕೈ ಕಡೆದ ನೋಟ ಇಲ್ಲಿನ ಪದ್ಯಗಳು.

‍ಲೇಖಕರು Admin

December 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

2 ಪ್ರತಿಕ್ರಿಯೆಗಳು

 1. sangamitradiggi

  ಅಬ್ಬಾಸ್ ಕಿರೋಸ್ತಮಿ …!
  ಈ ಹೆಸರು ನನ್ನೊಳಗೆ ಏನೋ ಒಂದು ಪುಳಕ ಉಂಟು ಮಾಡುತ್ತದೆ. ಆತನ ಸಿನೆಮಾಗಳು ಹೇಗಿರುತ್ತವೆ ಎಂದರೆ ಬೆಲ್ಲದಲ್ಲಿ ಅದ್ದಿದ ಪುಟಾಠಿ ಕಾಳುಗಳಂತೆ. ತಿಂದರೂ ತಿನ್ನಬೇಕೆಂಬ ಆಸೆ. ಮುಗಿದರೂ ಬೆರಳಿಗೆ ಅಂಟಿದ ಬೆಲ್ಲ ನೆಕ್ಕುವಂತೆ. ಈತ ದೃಶ್ಯಕಾವ್ಯಗಾರ.
  ಆತನ ಕವನಗಳ ಭಾವಾನುವಾದ ಬರುತ್ತಿರುವುದು ಖುಷಿಯ ಸಂಗತಿ…ಪುಸ್ಕತ ಓದುವುದಕ್ಕೆ ಕಾತರನಾಗಿದ್ದೆನೆ. ಹೇಗೆ ಪಡೆದುಕೊಳ್ಳಬೇಕು ಎನ್ನುವ ಮಾಹಿತಿ ನೀಡಿದರೆ ಅನುಕೂಲವಾಗುತ್ತದೆ.

  ಪ್ರತಿಕ್ರಿಯೆ
  • hema

   ಸಂಚಯ ಪ್ರಹ್ಲಾದ್‍ರವರು ಈ ಪುಸ್ತಕ ಪ್ರಕಟಿಸಿದ್ದು ಪ್ರತಿಗಳಿಗಾಗಿ ಅವರನ್ನೇ ಸಂಪರ್ಕಿಸಬೇಕು. ಅವರ ದೂರವಾಣಿ ಸಂಖ್ಯೆ : 9844063514.

   ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ sangamitradiggiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: