‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

|ಕಳೆದ ವಾರದಿಂದ|

ಜನ್ಮಜಾತ ಪ್ರತಿಭಾವಂತರು ಕೆಲವರು ಇರುತ್ತಾರೆ. ಅಂಥವರನ್ನ ‘ಗಿಫ್ಟೆಡ್ ರೈಟರ್, ಗಿಫ್ಟೆಡ್ ಆರ್ಟಿಸ್ಟ್’ ಎಂದು ಕರೆಯುವುದು ರೂಢಿಯಲ್ಲಿದೆ. ನಮ್ಮ ಪತ್ರಕರ್ತರಲ್ಲೂ ಅಂಥವರು ಇದ್ದರು, ಇದ್ದಾರೆ. ಆದಾಗ್ಯೂ ನಮ್ಮ ವೃತ್ತಿಯಲ್ಲಿ ಈ ‘ಗಿಫ್ಟೆಡ್’ ಒಂದು ‘ಕೊಂಕು’ ಪದವಾಗಿಯೇ ಪ್ರಯೋಗಿಸುತ್ತಿದ್ದ ದಿನಗಳು ಇದ್ದವು. ಈಗಿಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಾರೆ.

ಅವನೊಬ್ಬ ಗಿಫ್ಟೆಡ್ ಜರ್ನಲಿಸ್ಟ/ಗಿಫ್ಟೆಡ್ ರಿಪೋರ್ಟರ್ ಎಂದರೆ ‘ಗಿಫ್ಟ್’ ಪದ ಕೊಂಕು ನುಡಿಯಾಗಿಯೇ‌ (ಸ್ಲ್ಯಾಂಟ್) ಧ್ವನಿ ಪಡೆದುಕೊಳ್ಳುತ್ತಿತ್ತು. ಅಂದರೆ, ಪತ್ರಿಕಾಗೋಷ್ಠಿ ಮತ್ತೆಡೆಗಳಲ್ಲಿ ಗಿಫ್ಟ್ ಯಾನೆ ಉಡುಗೊರೆಗಳಿಗೆ ಹಾತೊರೆಯುವವರು ಎಂದು ನಮ್ಮಲ್ಲೇ ‘ಯಂಗ್ ಟರ್ಕ್ಸ್’ಗಳು, ‘ಗಿಫ್ಟೆಡ್’ ಸಹೋದ್ಯೋಗಿಗಳನ್ನು ಲೇವಡಿ ಮಾಡುತ್ತಿದ್ದೆವು.

ಸಾಮಾನ್ಯವಾಗಿ ಆ ದಿನಗಳಲ್ಲಿ ಸಚಿವರುಗಳು, ಶಾಸಕರು, ವಾಣಿಜ್ಯೋದ್ಯಮಿಗಳು, ಸಿನಿಮಾ ನಿರ್ಮಾಪಕ/ನಿರ್ದೇಶಕರುಗಳು ನಡೆಸುತ್ತಿದ್ದ ಪತ್ರಿಕಾ ಗೊಷ್ಠಿಗಳಲ್ಲಿ ಪುಷ್ಕಳವಾದ ತಿಂಡಿತೀರ್ಥಗಳ ಜೊತೆಗೆ ಉಡುಗೊರೆಯ ಪ್ರಲೋಭನೆಯೂ ಇರುತ್ತಿತ್ತು. ಅದರಿಂದಾಗಿ ವರದಿಗಾರರಲ್ಲಿ ಹೆಚ್ಚು ಮಂದಿ ಇಂಥ ಪತ್ರಿಕಾಗೋಷ್ಠಿಗಳಿಗೆ ಹೋಗಲು ಹಂಬಲಿಸುತ್ತಿದರು. ಉಪ ಸಂಪಾದಕರುಗಳೂ ಇಂಥ ಅವಕಾಶಗಳಿಗಾಗಿ ಕಾಯುತ್ತಿದ್ದರು.

ನಾನು ಡೆಸ್ಕಿನಲ್ಲಿದ್ದ ದಿನಗಳಲ್ಲಿ ಸಂಜೆ ವೇಳೆ ವೈಕುಂಠರಾಜು ಸಿನಿಮಾ ಸುದ್ದಿ ತರಲು ನನ್ನನ್ನು ಸಿನಿಮಾ ಸೆಟ್ಟುಗಳಿಗೆ ಕಳುಹಿಸುತ್ತಿದ್ದರು. ಆ ದಿನಗಳಲ್ಲಿ ಡಾ ರಾಜಕುಮಾರ್ ಅಂಥವರು ಬಿಟ್ಟರೆ, ಬಾಕಿಯಂತೆ ಹಿರಿಕಿರಿಯ ತಾರೆಯರೆಲ್ಲರೂ ಪ್ರಚಾರಕ್ಕಾಗಿ, ತಮ್ಮದೊಂದೊ ಸಂದರ್ಶನ ಪ್ರಕಟಣೆಗಾಗಿ ಹಾತೊರೆಯುತ್ತಿದ್ದರು. ಪತ್ರಕರ್ತರನ್ನ ‘ಚೆನ್ನಾಗಿ ನೋಡಿಕೊಂಡರೆ’ ಇದೆಲ್ಲ ಸಾಧ್ಯ ಎಂಬ ಭಾವನೆ ಕೆಲವು ಕಲಾವಿದರಲ್ಲೂ ಇತ್ತು. ಹೀಗಾಗಿ ಸೆಟ್ಟುಗಳಲ್ಲಿ/ಹೊರಾಂಗಣ ಚಿತ್ರೀಕರಣ ಸ್ಥಳಗಳಲ್ಲಿ ಪತ್ರಕರ್ತರಿಗೆ ವಿಶೇಷ ಸ್ವಾಗತ, ಆದರಾತಿಥ್ಯಗಳು ಇರುತ್ತಿದ್ದವು.

ತಿಂಡಿ, ತೀರ್ಥ, ಸಿಗರೇಟು ಹೀಗೆ. ಕೆಲವರು, ಕೊನೆಗೆ ಹೋಗುವಾಗ ಎಳ್ಳಷ್ಟೂ ಲಜ್ಜೆ ಇಲ್ಲದೆ ಕೇಳಿ, ದಾರಿಗೋ ಮನೆಗೋ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದುದನ್ನು ನಾನು ಅನೇಕ ಸಲ ಕಂಡಿದ್ದೆ. ಈ ಆಮಿಷಗಳನ್ನು ನಿರಾಕರಿಸುತ್ತಿದ್ದ ನನ್ನಂಥವರನ್ನು ವೃತ್ತಿಬಾಂಧವರಿರಲಿ, ನಟ-ನಿರ್ದೇಶಕರುಗಳೂ ‘ಮಡಿವಂತರು-ಮಿಸ್ಟರ್ ಕ್ಲೀನ್’ ಎಂದು ಲೇವಡಿ ಮಾಡುತ್ತಿದ್ದರು. ಈ ಮಧ್ಯೆ ನನ್ನನ್ನು ವಿವಂಚನೆಗೀಡು ಮಾಡುವಂಥ ಒಂದು ಪ್ರಸಂಗ ಜರುಗಿತು.

1977ರಲ್ಲಿ ಆಂಧ್ರಪ್ರದೇಶದಲ್ಲಿ ‘ದಿವಿಸೀಮಾ’ ಎಂಬ ಭೀಕರ ಚಂಡಮಾರುತವೆದ್ದು ಹತ್ತು ಸಾವಿರಕ್ಕೂ ಹೆಚ್ಚು ಜನ ಅದಕ್ಕೆ ಆಹುತಿಯಾಗಿದ್ದರು. ಹತ್ತು ಲಕ್ಷ ಮನೆಗಳು ನೆಲ ಸಮವಾಗಿದ್ದವು. ಇಂಥ ಸ್ಥಿತಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥರು ನೊಂದವರಿಗೆ ಅನ್ನ, ಆಶ್ರಯ ಕಲ್ಪಿಸಲು ಧಾವಿಸಿದ್ದರು. ವಿಶ್ವೇಶತೀರ್ಥರು ನೆಲಸಮವಾಗಿದ್ದ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿ ನಿರ್ವಸತಿಗರಾದವರಿಗೆ ಪುನರ್ವಸತಿ ಕಲ್ಪಿಸಿದ್ದರು.

ಆ ಗ್ರಾಮದಲ್ಲಿ ಮನೆ ಕಳೆದುಕೊಂಡವರಿಗೆಲ್ಲ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಅವರ ಬದುಕಿಗೆ ಆಧಾರ ಕಲ್ಪಿಸಿದ್ದರು. ಈ ಪುನರ್ವಸತಿ ಗೃಹಪ್ರವೇಶ ಸಮಾರಂಭಕ್ಕೆ ಬೆಂಗಳೂರಿನಿಂದ ಪೇಜಾವರ ಶ್ರೀಗಳು ಪತ್ರಕರ್ತರನ್ನು ಆಹ್ವಾನಿಸಿದರು. ‘ಪ್ರವಾ’ದಿಂದ ನಾನು, ‘ಸಂಕಾ’ದಿಂದ ರಾಜಾರಾವ್, ‘ಕಪ್ರ’ದಿಂದ ಶ್ರೀಹರ್ಷ ಹಾಗೂ ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಹಿಂದೂ ಪತ್ರಿಕೆಗಳ ಮಿತ್ರರೂ ಈ ತಂಡದಲ್ಲಿ ಇದ್ದರು.

ಚಂಡಮಾರುತದ ಪ್ರವಾಹದಲ್ಲಿ ಕೊಚ್ಚಿ ಹೋದ ಸಮುದ್ರ ತೀರದ ಈ ಎರಡು ಗ್ರಾಮಗಳ ಪುನರುಜ್ಜೀವನವನ್ನು ನಮಗೆ ತೋರಿಸಲಾಯಿತು. ಹೋಮ, ಹವನ, ಪೂಜೆ, ಪುನಸ್ಕಾರಗಳ ನಂತರ ಗ್ರಾಮದ ಜನತೆ ಹೊಸ ಮನೆಗೆ, ಹೊಸ ಬದುಕಿಗೆ ಪದಾರ್ಪಣ ಮಾಡಿದರು. ಅಲ್ಲಿಗೆ ನಮ್ಮ ಕೆಲಸ ಮುಗಿದಿತ್ತು. ವಾಪಸು ಹೋಗಿ ವರದಿ ಬರೆಯಬೇಕು. ಅಷ್ಟರಲ್ಲಿ ನಮ್ಮಲ್ಲಿ ಕೆಲವರಿಗೆ, “ಇಷ್ಟು ಹತ್ತಿರ ಬಂದಿದ್ದೀವಿ ತಿಮ್ಮಪ್ಪನ ದರ್ಶನ ಮಾಡದೇ ಹೋಗುವುದೇ” ಎಂಬ ದೈವ ಭಕ್ತಿ ಜಾಗೃತವಾಯಿತು. ಅದನ್ನು ವಿಶ್ವೇಶತೀರ್ಥರ ಕಾರ್ಯದರ್ಶಿಯವರಲ್ಲಿ ಬಿನ್ನವಿಸಿಕೊಂಡರೂ ಕೂಡ.

“ನಾವು ಬಂದ ಕೆಲಸ ಮುಗಿಯಿತು. ದೇವರ ದರ್ಶನ ನಮ್ಮ ಕಾರ್ಯಸೂಚಿಯಲ್ಲಿಲ್ಲ. ನಾವು ಕೂಡಲೇ ಬೆಂಗಳೂರಿಗೆ ಹೋಗುವುದು ಸೂಕ್ತ” ಎಂಬುದು ನನ್ನ, ಹರ್ಷ ಹಾಗೂ ಇನ್ನೂ ಒಬ್ಬಿಬ್ಬರ ಅಭಿಪ್ರಾಯವಾಗಿತ್ತು. ಆದರೆ ಭಕ್ತರು ಗೆದ್ದರು. ನಮ್ಮ ತಿರುಪತಿ ತಿಮ್ಮಪ್ಪನಿಗೂ ಉಡುಪಿ ಕೃಷ್ಣನಿಗೂ ಹಳೆಯ ನಂಟು ಉಂಟಲ್ಲ. ಶ್ರೀಗಳು ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಿದರು.

ನಮ್ಮನ್ನು ತಿರುಪತಿಗೆ ಕರೆದೊಯ್ದು ದೇವರ ದರ್ಶನ ಮಾಡಿಸುವ ಜವಾಬ್ದಾರಿಯನ್ನು ಶಿಷ್ಯರೊಬ್ಬರಿಗೆ ವಹಿಸಿ ಸ್ವಾಮಿಗಳು ಉಡುಪಿಯ ಹಾದಿ ಹಿಡಿದರು. ಹೊರಡುವ ಮುನ್ನ ನಮ್ಮಲ್ಲಿ ಒಬ್ಬೊಬ್ಬರನ್ನೂ ಕರೆದು, ಯೋಗಕ್ಷೇಮ ವಿಚಾರಿಸಿ ಫಲ ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ನಾವು ಹೀಗೆ ತಿರುಪತಿ ಯಾತ್ರ ಮಾಡಿ ತಿಮ್ಮಪ್ಪನ ದರ್ಶನ  ಪಡೆದುಕೊಂಡೆವು. (ನನ್ನ ಮಟ್ಟಿಗೆ ಅದೇ ಮೊದಲು, ಅದೇ ಕೊನೆಯಾದ ತಿರುಪತಿ ಯಾತ್ರೆ. ನಂತರ ನನ್ನ ಕೈ ಹಿಡಿದ ಸರಳಾ ಸಹ ತಿರುಪತಿಗೆ ಹೋಗುವಾ ಎಂದು ಎಂದೂ ಒತ್ತಾಯಪಡಿಸಲಿಲ್ಲ).    

ಬೆಂಗಳೂರಿಗೆ ಹಿಂದಿರುಗಲು ನಾವು ಸಜ್ಜಾದೆವು. ನಮ್ಮ ನಮ್ಮ ಕಾರುಗಳನ್ನು ಏರಲಿದ್ದೆವು. ಅಷ್ಟರಲ್ಲಿ ಸ್ವಾಮಿಗಳ ಪ್ರತಿನಿಧಿಗಳು ಓಡೋಡುತ್ತಾ ಬಂದು ನಮ್ಮ ಕೈಯ್ಯಲ್ಲಿ ಒಂದೊಂದು ಕವರುಗಳನ್ನು ಇಟ್ಟರು.

“ಇದೇನಿದು” ಎಂದು ನಾನು ಕೇಳಿದೆ?
ಹರ್ಷನೂ ಅದನ್ನೇ ಕೇಳಿದರು.
“ಸ್ವಾಮಿಗಳ ಆಶೀರ್ವಾದ” ಎನ್ನುವ ಉತ್ತರ ಬಂತು.
“ಫಲ ಮಂತ್ರಾಕ್ಷತೆಕೊಟ್ಟು ಸ್ವಾಮಿಗಳು ಆಗಲೇ ಆಶೀರ್ವದಿಸಿ ಆಗಿದೆಯಲ್ಲ, ಇದಿನ್ನೇಕೆ?”
“ಹೇ..ಹೇ…ಕೃಷ್ಣನ ಕೃಪೆ”
“ನಮಗೆ ಇದು ಬೇಡ, ಫಲ ಮಂತ್ರಾಕ್ಷತೆ ಸಾಕು” ಎಂದು ನಾನು ಮತ್ತು ಹರ್ಷ ಕವರನ್ನು ಹಿಂದಿರುಗಿಸಿದೆವು.
“ದೇವರ ಕೃಪೆಯನ್ನು ಧಿಕ್ಕರಿಸುವಷ್ಟು ಅಹಂಕಾರ ಇರಬಾರದು” ಎಂದು ಉಳಿದವರು ಕವರನ್ನು ‘ಕಿಸಾ’ಯಿಸಿ (ಪಾಕೆಟೆಡ್) ಕೊಂಡರು.

ಪತ್ರಕರ್ತರ ಮಾನ ಹೀಗೆ ಹರಾಜಾಗುತ್ತಿರುವುದನ್ನು ಕಂಡು ಸಹಸಿಕೊಳ್ಳಲಾಗದೆ ನಾವು ಕೆಲವರು; ನಾನು, ಕನ್ನಡ ಪ್ರಭಾದ ಶ್ರೀಹರ್ಷ, ಸಂಯುಕ್ತ ಕರ್ನಾಟಕದ ವೆಂಕಟಸುಬ್ಬು, ದೇವನಾಥ್, ಇಂಡಿಯನ್ ಎಕ್ಸಪ್ರೆಸ್‌ನ ಬಿ ಕೆ ವಿಟ್ಠಲ್, ಪ್ರಜಾಮತದ ಪಿ ಎನ್ ರಂಗನ್ ಮೊದಲಾಗಿ ಕೆಲವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಈ ವಿಷಯವನ್ನು  ಪ್ರಸ್ತಾಪಿಸಿದೆವು.

ಡಿ ವಿ ಗುಂಡಪ್ಪನವರು ಸ್ಥಾಪಿಸಿದ ಈ ಸಂಘ ಕೇವಲ ಹಕ್ಕುಗಳಿಗಾಗಿ ಹೋರಾಡುವ ಸಂಘವಷ್ಟೇ ಅಲ್ಲ, ಪತ್ರಿಕಾ ಧರ್ಮ ಮತ್ತು ನೀತಿಗಳನ್ನು ಕಾಪಾಡುವ, ಆ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡುವ ಹೊಣೆಗಾರಿಕೆಯೂ ಅದಕ್ಕಿದೆ. ಆದ್ದರಿಂದ ಈ ಗಿಫ್ಟ್ ಇತ್ಯಾದಿ ಸೇವೆಗಳನ್ನು ಪಡೆಯುವುದರಲ್ಲಿ ಪತ್ರಕರ್ತರಿಗೆ ಒಂದು ನೀತಿ ಸಂಹಿತೆ ರೂಪಿಸುವಂತೆ ಒತ್ತಾಯಿಸಿದೆವು. ಸಾಕಷ್ಟು ಚರ್ಚೆಯ ನಂತರ ಈ ವಿಷಯದ ಮಂಥನಕ್ಕಾಗಿಯೇ ಒಂದು ವಿಶೇಷ ಸಭೆ ಕರೆಯಲು ಅಂದಿನ ವಾರ್ಷಿಕ ಸಭೆ ನಿರ್ಧರಿಸಿತು.

ವಿಶೇಷ ಸಭೆಯೂ ನಡೆಯಿತು. ಇದರಲ್ಲಿ ಬೆಂಗಳೂರಿನ ಪ್ರಮುಖ ಪತ್ರಿಕೆಗಳ ಪತ್ರಕರ್ತರು ಭಾಗವಹಿಸಿದ್ದರು. ಪತ್ರಕರ್ತರು ಯಾವುದೇ ಆಮಿಷ/ಪ್ರಲೋಭನೆಗಳಿಗೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕೆಂಬುದು ಈ ಸಭೆಯ ಸರ್ವಸಮ್ಮತ ಅಭಿಪ್ರಾಯವಾಗಿತ್ತು. ಆದರಾತಿಥ್ಯ ಮತ್ತು ಉಡುಗೊರೆಗಳ ಪ್ರಶ್ನೆ ಬಂದಾಗ ಸಭೆಯಲ್ಲಿ ಎರಡು ಅಭಿಪ್ರಾಯಗಳು ವ್ಯಕ್ತವಾದವು.

ಅತಿಥಿಗಳನ್ನು ಸತ್ಕರಿಸುವುದು ನಮ್ಮ ಸಂಪ್ರದಾಯ. ಹೀಗಾಗಿ ವ್ಯವಸ್ಥಾಪಕರು ಆತಿಥ್ಯ ನೀಡುವುದು ಸಹಜ. ಅದನ್ನು ಸ್ವೀಕರಿಸುವುಷದರಲ್ಲಿ ತಪ್ಪೇನಿಲ್ಲ-ಎನ್ನುವುದು ಒಂದು ತರ್ಕವಾದರೆ, ಪತ್ರಕರ್ತರು ಅತಿಥಿಗಳಾಗಿ ಹೋಗಿರುವುದಿಲ್ಲ, ತಮ್ಮ ಕರ್ತವ್ಯ ನಿರ್ವಹಣೆಗಾಗಿ ಹೋಗಿರುತ್ತಾರೆ. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಹಂಗಿಗೆ ಒಳಗಾದರೂ ವಸ್ತುನಿಷ್ಠ ಕರ್ತವ್ಯ ಸಾಧ್ಯವಾಗದು. ಪ್ರಲೋಭನೆಗಳಿಗೆ ಈಡಾಗುವುದು ಮಾನವ ಸಹಜ ದೌರ್ಬಲ್ಯ. ಇದನ್ನು ಹತ್ತಿಕ್ಕಿ ನಾವು ನಿಲ್ಲಬೇಕು, ಇಲ್ಲವಾದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ದೌರ್ಬಲ್ಯದ ಲಾಭ ಪಡೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ ಎನ್ನುವುದು ಇನ್ನೊಂದು ತರ್ಕವಾಗಿತ್ತು.

ಸಾಕಷ್ಟು ಚರ್ಚೆಯ ನಂತರ, “ಪತ್ರಕರ್ತರು ಯಾವುದೇ ಆಮಿಷ, ಪ್ರಲೋಭನೆಗಳಿಗೆ ಒಳಗಾಗದೆ ಸತ್ಯವನ್ನು ವರದಿ ಮಾಡುವ ವೃತ್ತಿ ಧರ್ಮಕ್ಕೆ ಬದ್ಧರಾಗಿರಬೇಕು. ಕಾಫಿ, ತಿಂಡಿಯ ಸೌಜನ್ಯದ ಆತಿಥ್ಯವನ್ನು ಸ್ವೀಕರಿಸುವುದು, ಆತಿಥೇಯರಂತೆ ಆತಿಥಿಗೂ ಒಂದು ಸೌಜನ್ಯದ ನಡೆಯಾಗಿರುತ್ತದೆ. ಉಡುಗೊರೆಗಳನ್ನು ಸ್ವೀಕರಿಸಬಾರದು ಎಂಬ ನಿರ್ಣಯಕ್ಕೆ ಬರಲಾಯಿತು. ವೃತ್ತಿಪರ ಸಂಸ್ಥೆಯೂ ಆದ ಕೆಯುಡಬ್ಲ್ಯೂಜೆ  ತನ್ನ ಸದಸ್ಯರಿಗೆ ಈ ನಿಯಮ ಪಾಲಿಸುವಂತೆ ಸೂಚಿಸಬೇಕು ಎಂದು ನಿರ್ಧರಿಸಲಾಯಿತು.” ಆದರೆ ಈ ನಿರ್ಣಯಗಳು ಕಾಗದದ ಮೇಲೇ ಉಳಿದವು.

ಉಡುಗೊರೆಗಳನ್ನು ಕೊಡುವುದು, ಸ್ವೀಕರಿಸುವುದು ಯಾವುದೂ ನಿಲ್ಲಲಿಲ್ಲ. ಎಂಬತ್ತು-ತೊಂಬತ್ತರ ದಶಕದಲ್ಲಿ ಇನ್ನೊಂದು ಹೊಸ ವಿದ್ಯಮಾನ ಕಾಣಿಸಿಕೊಂಡಿತು. ವಾಣಿಜ್ಯೋದ್ಯಮಗಳ ಪತ್ರಿಕಾಗೋಷ್ಠಿಗಳಲ್ಲಿ ತಿಂಡಿ-ತೀರ್ಥಗಳ ಜೊತೆಗೆ ಆಹ್ವಾನಿತ ಪತ್ರತಕರ್ತರಿಗೆ ಉಡುಗೊರೆ ಬದಲು ‘ಗಿಫ್ಟ್ ಕೂಪನ್’ ಕೊಡುವ ಹೊಸ ಪದ್ಧತಿ ಶುರುವಾಯಿತು. ಗಿಫ್ಟ್ ಕೂಪನ್ ತೋರಿಸಿ ಗೊತ್ತಾದ ಮಳಿಗೆಗಳಲ್ಲಿ ಅದರಲ್ಲಿ ನಮೂದಾದ ನಿಗದಿತ ಮೊತ್ತಕ್ಕೆ ಸಮನಾದ ಯಾವುದೇ ವಸ್ತುವನ್ನು ಪತ್ರಕರ್ತರು ಪಡೆದುಕೊಳ್ಳಬಹುದಿತ್ತು.

ಈ ಗಿಫ್ಟ್ ಕೂಪನ್ನುಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ವರದಿಗಾರರರಿಗೆ ಕೊಡುವುದರ ಜೊತೆಗೆ ಆ ಪತ್ರಿಕೆಯ ಸಂಪಾದಕರು, ಸುದ್ದಿ ಸಂಪಾದಕರು ಮತ್ತು ಮುಖ್ಯ ವರದಿಗಾರರಿಗೂ ವರದಿಗಾರರ ಮೂಲಕ ಕಳುಹಿಸಿ ಕೊಡುವ ಮುತುವರ್ಜಿಯನ್ನು ವ್ಯವಸ್ಥಾಪಕರು ವಹಿಸುತ್ತಿದ್ದರು. ಕೆಲವೆಡೆ ವರದಿಗಾರರರೇ ನಮ್ಮ ಸಂಪಾದಕರಿಗೆ, ಸುದ್ದಿ ಸಂಪಾದಕರಿಗೊಂದು ಗಿಫ್ಟ್ ಕೂಪನ್ ಕೊಡಿ ಎಂದು ಒಂದಕ್ಕಿಂತ ಹೆಚ್ಚಿನ ಗಿಫ್ಟ್ ಕೂಪನ್ ಪಡೆದುಕೊಳ್ಳುತ್ತಿದ್ದರು ಎಂಬುದೂ ನನ್ನ ಗಮನಕ್ಕೆ ಬಂದಿತ್ತು.

ವರದಿಗಾರರೊಬ್ಬರು ‘ಸರ್ ಇದು ತಮಗೆ’ ಎಂದು ನನ್ನ ಮುಂದೆ ಗಿಫ್ಟ್ ಕೂಪನ್ ಒಂದನ್ನು ಇಟ್ಟಾಗ ಈ ಹೊಸ ಪದ್ಧತಿ ನನ್ನ ಗಮನಕ್ಕೆ ಬಂತು. “ಇಂಥದನ್ನೆಲ್ಲ ನಾವು ಪತ್ರಕರ್ತರು ಸ್ವೀಕರಿಸಬಾರದು, ನಾವು ಇಂಥ ಹಂಗುಗಳಲ್ಲಿ ಸಿಗಬಾರದು” ಎಂದು ಕಟ್ಟುನಿಟ್ಟಾಗಿ ಹೇಳಬೇಕಾಯಿತು. ಹಾಗೂ ಮುಖ್ಯ ವರದಿಗಾರರ ಮೂಲಕ ಎಲ್ಲ ವರದಿಗಾರರಿಗೂ ಇದನ್ನು ಅರುಹಲಾಯಿತು. ವರದಿಗಾರರರು ಇದನ್ನು ಎಷ್ಟರಮಟ್ಟಿಗೆ ಪಾಲಿಸಿದರೋ ತಿಳಿಯದು. ನನಗಂತೂ ‘ಗಿಫ್ಟ್ ಕೂಪನ್’ ಬರುವುದು ನಿಂತಿತು.

ನಮ್ಮಲ್ಲಿ ಒಬ್ಬರು ಸುದ್ದಿ ಸಂಪಾದಕರಿದ್ದರು. ಅವರೂ ನನ್ನ ಸರೀಕರೆ. ಆಗ ನಾನು ‘ಸುಧಾ’ದಲ್ಲಿದ್ದೆ. ಅವರು ‘ಪ್ರವಾ’ದಲ್ಲಿ ಸು.ಸಂ ಆಗಿದ್ದರು. ವರದಿಗಾರರ ದಿನದ ಕೆಲಸಗಳನ್ನು ತೋರಿಸುವ ಸೂಚಿಯನ್ನು ಬಂದ ಕೂಡಲೇ ಗಂಭೀರವಾಗಿ ಪರಾಮರ್ಶಿಸಿ, ವರದಿಗಾರರರು ಕಾಲಕ್ಕೆ ಸರಿಯಾಗಿ ವರದಿಗಳನ್ನು ತಮಗೆ ರವಾನಿಸುವಂತೆ/ಕೊಡುವಂತೆ ಬಹಳ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದರು.

ಹೀಗೆ ಗಮನಿಸುವಾಗ ಯಾವುದು ಉಡುಗೊರೆ ಲಾಭದ ಪತ್ರಿಕಾಗೋಷ್ಠಿ ಎಂಬುದು ಅವರ ಕಣ್ಣುಗಳನ್ನು ಮರೆಮಾಚುತ್ತಿರಲಿಲ್ಲ. ಅಂಥ ಗೋಷ್ಠಿಗೆ ಹೋಗಿ ಬಂದ ವರದಿಗಾರರನನ್ನು ಕರೆದು, ಪತ್ರಿಕಾ ಗೋಷ್ಠಿಯಲ್ಲಿ ಏನಾಯಿತೆಂದು ಕೇಳಿ ತಿಳಿದುಕೊಳ್ಳುತ್ತಿದ್ದರು. ನಂತರದ ಪಶ್ನೆ: “ಏನು ಗಿಫ್ಟ್ ಕೊಟ್ಟರು. ಅದನ್ನು ತಾ ಇಲ್ಲಿ.” ವರದಿಗಾರ ತಂದು ತೋರಿಸಿದಾಗ, ಗಿಫ್ಟ್ ನ್ನು ತಮ್ಮಲ್ಲೇ ಇರಿಸಿಕೊಂಡು, “ಆಯಿತು, ಇದು ಇಲ್ಲಿರಲಿ, ನೀನು ಬೇಗ ವರದಿಕೊಡು, ಅದು ಮಾರ್ನಿಂಗ್ ಎಡಿಷನ್‌ಗೆ ಹೋಗಬೇಕು” ಎಂದು ತಾಕೀತು ಮಾಡುತ್ತಿದ್ದರು.

ಕಿರಿಯ ವರದಿಗಾರರು ‘ಗಿಫ್ಟ’ನ್ನು ‘ಸುಸಂ’ಗೆ ಒಪ್ಪಿಸಿದರೆ, ಇನ್ನು ಕೆಲವರು ‘ಗಿಫ್ಟೇನೂ ಇಲ್ಲ ಸರ್’ ಎಂದು ತಾರಮ್ಮಯ್ಯ ಆಡಿಸಿ ಖುಷಿಪಡುತ್ತಿದ್ದರು. ಇದನ್ನೆಲ್ಲ ಒಬ್ಬಿಬ್ಬರು ವರದಿಗಾರರು ನನ್ನ ಬಳಿ ತೋಡಿಕೊಂಡಿದ್ದರು.

1999 ಎಸ್ ಎಂ ಕೃಷ್ಣ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಎಲ್ಲರನ್ನು ತಮ್ಮ ಜೊತೆಗೆ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸಮಾಡಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಮಾಡಿದರು. ಅದಕ್ಕೆ ಉಡುಗೊರೆಯಾಗಿ ಅವರಿಗೆ ಮುಖ್ಯಮಂತ್ರಿ ಪದವಿಯೂ ಸಿಕ್ಕಿತು. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವಾರವಾಗಿರಬೇಕು. ಒಂದು ದಿನ ನಾನು ದಿನದ ಕೆಲಸ ಮುಗಿಸಿಕೊಂಡು ರಾತ್ರಿ 11ಕ್ಕೆ ಮನೆಗೆ ಹೋದಾಗ, ವೆರಾಂಡಾದಲ್ಲೇ ಒಂದು ಭಾಂಗಿ ನನ್ನ ಕಣ್ಣಿಗೆ ಬಿತ್ತು.

“ಏನದು?” ಎಂದು ಸರಳಾಳನ್ನು ಕೇಳಿದೆ.
“ಯಾರೋ ಕಾಂಗ್ರೆಸ್ಸಿನವರಂತೆ, ನಿಮ್ಮನ್ನು ಕೇಳಿಕೊಂಡು ಬಂದು ಅದನ್ನು ಕೊಟ್ಟು ಹೋದರು.”

ಅದರಲ್ಲಿ ಏನಿರಬಹುದು? ಕಾಂಗ್ರೆಸ್ಸಿನವರು ಅದನ್ನು ಏಕೆ ಕಳುಹಿಸಿರಬಹುದು ಎಂಬ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹುಟ್ಟಿದವು. ಅದೇ ಯೋಚನೆಯಲ್ಲೇ ಊಟ ಮುಗಿಸಿ ಮಲಗಿದೆ. ಮರುದಿನ ಎಂದಿನ ಅಭ್ಯಾಸದಂತೆ ಪತ್ರಿಕೆಗಳನ್ನು ಓದಿ, ನಮ್ಮ ಕೊರತೆಗಳೇನು, ತಪ್ಪುಗಳೇನು ಎಂದೆಲ್ಲ ಟಿಪ್ಪಣಿ ಮಾಡಿಕೊಂಡು, ನಿತ್ಯ ವಿಧಿಯಂತೆ ಮುಖ್ಯ ವರದಿಗಾರ ಜಗದೀಶ್ ಅವರಿಗೆ ಫೋನ್ ಮಾಡಿದೆ. ಅಂದಿನ ಸಂಚಿಕೆ, ಅಂದಿನ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ ನಂತರ ಜಗದೀಶ್ ಅವರಿಗೆ ಭಾಂಗಿಯ ವಿಚಾರ ತಿಳಿಸಿ ಅದರ ಬಗ್ಗೆ ನಿಮಗೇನಾದರೂ ಗೊತ್ತೇ? ಎಂದು ಕೇಳಿದೆ.

“ಅದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ ವಿಜಯೋತ್ಸವ ಆಚರಿಸುತ್ತಿರುವ ರೀತಿ” ಎಂದು ಅವರು ಉತ್ತರಿಸಿದರು.

“ತಾವು ಮತ್ತೆ ಅಧಿಕಾರಕ್ಕೆ ಬಂದುದಕ್ಕೆ ಖುಷಿಯಿಂದ ವಿಜಯೋತ್ಸವ ಆಚರಿಸುತ್ತಿರುವ ಕೆಪಿಸಿಸಿ ನಗರದ ಎಲ್ಲ ಪತ್ರಿಕೆಗಳ ಸಂಪಾದಕರು, ಮುಖ್ಯವರದಿಗಾರರು ಸೇರಿದಂತೆ  ಹಿರಿಯ ಪತ್ರಕರ್ತರಿಗೆ ವಿಜಯೋತ್ಸವದ ಉಡುಗೊರೆ ಕಳುಹಿಸುತ್ತಿದೆ. ಸೀರೆ, ಕುಪ್ಪುಸದ ಖಣ, ಪ್ಯಾಂಟ್ ಮತ್ತು ಷರ್ಟ್ ಪೀಸ್, ಇಷ್ಟೇ ಸರ್ ಇನ್ನೇನೂ ಇಲ್ಲ ಎಂದು ಜಗದೀಶ್ ನಿಷ್ಕಾಳಜಿಯಿಂದ ಹೇಳಿದರು.

ಇದನ್ನು ಕೇಳಿ ನನಗೆ ಮೈ ಉರಿದುಹೋಯಿತು. ಗೆದ್ದ ಪಕ್ಷ ಒಳ್ಳೆಯ ಆಡಳಿತ ನೀಡುವತ್ತ ಗಮನ ಹರಿಸುವುದು ಬಿಟ್ಟು ಪತ್ರಕರ್ತರನ್ನು ಓಲೈಸಿಕೊಳ್ಳಲು ಹೊರಟಿದೆಯೇ? ಭ್ರಷ್ಟಾಚಾರ ಇಲ್ಲಿಂದಲೇ ಶುರುವಾಗುತ್ತಿದೆಯೇ? ಎಂದು ಪ್ರಕ್ಷುಬ್ಧನಾದೆ. ಈ ಮುಜುಗರದಲ್ಲೇ ಆಫೀಸಿಗೆ ಹೋಗಿ ಮುಖ್ಯ ಮಂತ್ರಿ ಕೃಷ್ಣ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಎರಡು ಮೂರು ಟೆಲಿಫೋನ್ ಕರೆಗಳ ನಂತರ ಆಪ್ತ ಕಾರ್ಯದರ್ಶಿ ಕೃಷ್ಣ ಅವರಿಗೆ ಫೋನ್ ಕನೆಕ್ಟ್ ಮಾಡಿದರು.

“ನಮಸ್ಕಾರ ಸರ್, ನಮ್ಮ ವಾಚಕರ ಪರವಾಗಿ ನಿಮಗೆ ಅಭಿನಂದನೆಗಳು. ಜನತೆ ನಿಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಒಬ್ಬ ಪತ್ರಕರ್ತನಾಗಿ ನಾನು ಇದನ್ನು ನಿಮ್ಮಿಂದ ನಿರೀಕ್ಷಿಸಿರಲಿಲ್ಲ?”

“ಏನದು ಹೇಳಿ ರಾಯರೆ?”

“ನಿಮ್ಮ ಪಕ್ಷ ಪತ್ರಕರ್ತರನ್ನು ಖರೀದಿಯ ಸರಕು ಎಂದು ತಿಳಿದಿದೆಯೆ? ಉಡುಗೊರೆಯಂಥ ಆಮಿಷಗಳಿಂದ ಪತ್ರಕರ್ತರನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂದು ತಿಳಿದಿದೆಯೆ?”

“ನನಗೆ ನಿಮ್ಮ ಮಾತು ಅರ್ಥವಾಗ್ತಿಲ್ಲ.ಸ್ವಲ್ಪ ವಿವರಿಸಿ?”
“ಕೆಪಿಸಿಸಿ ಕಚೇರಿಯಿಂದ ನನಗೊಂದು ಉಡುಗೊರೆಯ ಪಾರ್ಸೆಲ್ ಬಂದಿದೆ. ಅದರರ್ಥ ಏನು ಎಂಬುದನ್ನು ನೀವೇ ಹೇಳಬೇಕು.”
“ಹೌದೆ! ನನಗೆ ಆ ವಿಚಾರ ತಿಳಿಯದು”

“ಇದು ನಿಮಗೆ ತಿಳಿಯದೆ ನಡೆದಿದೆ ಎನ್ನುತ್ತಿದ್ದೀರಿ, ಇದನ್ನು ನಾವು ನಂಬಬೇಕು ಎಂಬುದು ನಿಮ್ಮ ಇಚ್ಛೆಯಾಗಿರುವಂತೆ ತೋರುತ್ತಿದೆ. ಏನೇ ಇರಲಿ, ನಿಮ್ಮ ಪಕ್ಷದ ಈ ವರ್ತನೆಯಿಂದ ನನಗೆ ನೋವಾಗಿದೆ. ಇದು ನಮ್ಮ ವೃತ್ತಿ ಪಾವಿತ್ರ್ಯ ಮತ್ತು ನೀತಿ ನಿಯಮಗಳಿಗೆ ತೋರಿದ ಅಗೌರವ.”

“ನಾನು ವಿಚಾರಿಸುತ್ತೇನೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ನೀತಿನಿಯಮಗಳ ಬಗ್ಗೆ ನನಗೆ ಗೌರವವಿದೆ. ನಿಮಗೆ ನೋವಾಗಿದ್ದರೆ ಸಾರಿ”

“ಹೌದು ನೋವಾಗಿದೆ. ಮೊದಲು ಕೆಪಿಸಿಸಿ ಆ ಉಡುಗೊರೆಯನ್ನು ನನ್ನ ಮನೆಯಿಂದ ವಾಪಸು ತೆಗೆದುಕೊಂಡು ಹೋಗಬೇಕು” -ಎಂದು ನಾನು ಖಡಾಖಂಡಿತವಾಗಿ ಹೇಳಿದೆ. ಅಲ್ಲಿಗೆ ಒಂದೆರಡು ಶಿಷ್ಟಾಚಾರದ ಮಾತುಗಳ ನಂತರ ಮುಖ್ಯಮಂತ್ರಿ ಕೃಷ್ಣ ಅವರೊಂದಿಗೆ ನನ್ನ ಫೋನ್ ಸಂಭಾಷಣೆ ಮುಗಿಯಿತು.

ರಾತ್ರಿ ಮನೆಗೆ ಹೋದ ಕೋಡಲೇ, “ನಿನ್ನೆ ಬಂದ ವ್ಯಕ್ತಿಯೇ ಬಂದು ಆ ಪಾರ್ಸೆಲನ್ನ ವಾಪಸು ತೆಗೆದುಕೊಂಡು ಹೋದರು. ‘ಬೇರೆ ಯಾರಿಗೋ ಕೊಡಬೇಕಾದ್ದು ತಪ್ಪಾಗಿ ನಿಮಗೆ ಕೊಟ್ಟುಬಿಟ್ಟ ಸಾರಿ’ ಎಂದು ಹೇಳಿ ವಾಪಸು ತೆಗೆದುಕೊಂಡು ಹೋದರು” ಎಂದು ಸರಳಾ ಹೇಳಿದಳು.

ಈ ‘ಗಿಫ್ಟ್’ ಪುರಾಣದಲ್ಲಿ ಯಾರೊಬ್ಬರನ್ನೂ ದೂಷಿಸುವ ಅಥವಾ ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ಇಲ್ಲ. ನನ್ನ ಆತ್ಮಸಾಕ್ಷಿಯನ್ನು ತಿಳಿಗೊಳಿಸಿಕೊಳ್ಳುತ್ತಿದ್ದೇನೆ, ಅಷ್ಟೇ.  

। ಮುಂದಿನ ವಾರಕ್ಕೆ ।

November 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಸಿ. ಎನ್. ರಾಮಚಂದ್ರನ್

    ಪ್ರಿಯ ಜಿ ಎನ್ ಆರ್ ಅವರಿಗೆ: ನಿಮ್ಮ ಈ ವಾರದ ಅಂಕಣವನ್ನು ಇಂದು ಓದಿದೆ; ತುಂಬಾ ಸ್ವಾರಸ್ಯಕರವಾಗಿದೆ. ಪತ್ರಕರ್ತರಿಗೆ ಪತ್ರಿಕಾಗೋಷ್ಠಿಗಳಲ್ಲಿ ಅದನ್ನು ಆಯೋಜಿಸುವವರು ಯಾವುದಾದರೂ ಒಂದು ಬಗೆಯ ಗಿಫ಼್ಟ್ ಕೊಡುವುದರ ಬಗ್ಗೆ ಕೇಳಿದ್ದೆ; ಹೆಚ್ಚಿನವರು ನೀವು ದಾಖಲಿಸಿರುವಂತೆ ’ಅವರು ಕೊಡುವುದನ್ನು ಕೊಡಲಿ, ನಾವು ಬರೆಯುವುದನ್ನು ಬರೆಯೋಣ. ಇದಕ್ಕೆ ಮಹತ್ವ ಏಕೆ ಕೊಡಬೇಕು?’ ಎಂಬ ನಿಲುವಿಗೆ ಅಂಟಿಕೊಂಡವರು ಎಂದು ಓದಿದ್ದೆ. ಆದರೆ, ನಿಮ್ಮಂತೆ ರಾಜಾರೋಷಾಗಿ ತಿರಸ್ಕರಿಸುವವರೂ ಇರುತ್ತಾರೆ ಎಂದು ಗೊತ್ತಿರಲಿಲ್ಲ. ಅದೂ ಮುಖ್ಯ ಮಂತ್ರಿಗಳಿಂದ ಬಂದ ಗಿಫ಼್ಟ್ ಅನ್ನು ತಿರಸ್ಕರಿಸುವುದಕ್ಕೆ ಅಗಾಧ ನೈತಿಕ ಸ್ಥೈರ್ಯ ಬೇಕು; ಅದು ಆವಾಗಲೇ (ಎಂದರೆ ನೀವು ಸಂಪಾದಕರಾಗಿ ಪ್ರಸಿದ್ಧರಾಗುವ ಮೊದಲೇ) ನಿಮ್ಮಲ್ಲಿತ್ತು ಎಂದು ತಿಳಿದು ಆಶ್ಚರ್ಯವಾಗುತ್ತದೆ, ನಿಮ್ಮ ಬಗ್ಗೆ ಇದ್ದ ಮೆಚ್ಚುಗೆ ಹೆಚ್ಚಾಗುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: