ಗಿರಡ್ಡಿ ಗೋವಿಂದರಾಜು ಎಂದಾದರೂ ನಕ್ಕಿದ್ದಾರಾ?

ಪುಸ್ತಕ ವಿಮರ್ಶೆ 

ಕೃತಿ: ‘ಹಿಡಿಯದ ಹಾದಿ'(ಲಲಿತ ಪ್ರಬಂಧಗಳು)

ಲೇಖಕರು: ಗಿರಡ್ಡಿ ಗೋವಿಂದರಾಜ

ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ

ಪುಟ: 128

ಬೆಲೆ: 90 ರೂ.

-ಸುಭಾಷ್ ರಾಜಮಾನೆ

ಕನ್ನಡದ ಯಾವುದೋ ಒಂದು ಪತ್ರಿಕೆಯ ಸಂದರ್ಶನಕ್ಕಾಗಿ ಗಿರಡ್ಡಿ ಗೋವಿಂದರಾಜ ಅವರನ್ನು ಸಂದರ್ಶನಕಾರ ಒಂದು ಪ್ರಶ್ನೆಯನ್ನು ಕೇಳುತ್ತಾನೆ: ‘ನಿಮ್ಮ ಜೀವನದಲ್ಲಿ ನೀವು ಎಂದಾದರೂ ನಕ್ಕಿದ್ದೀರಾ ?’ ಎಂದು. ಗಿರಡ್ಡಿ ಅವರ ಗಂಭೀರ ಮುಖಭಾವವನ್ನು ಕಂಡು ಈ ಪ್ರಶ್ನೆಯನ್ನು ಕೇಳಿದಂತಿದೆ. ಆದರೆ ಗಿರಡ್ಡಿ ಅವರು ತಮ್ಮ ಗೆಳೆಯರೊಂದಿಗೆ ಹಾಗೂ ಆಪ್ತರೊಂದಿಗೆ ಸಾಕಷ್ಟು ನಕ್ಕಿರುವುದನ್ನು ಮತ್ತು ವಿನೋದ ಪ್ರವೃತ್ತಿಯು ಅವರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎಂಬುದಕ್ಕೆ ಅವರ ‘ಹಿಡಿಯದ ಹಾದಿ’ ಪ್ರಬಂಧ ಸಂಕಲನವು ಸಾಕಷ್ಟು ಕುರುಹುಗಳನ್ನು ಒದಗಿಸುತ್ತದೆ.

ಗಿರಡ್ಡಿ ಅವರು ಕಳೆದ ಐದು ದಶಕದಿಂದ ತಮ್ಮನ್ನು ಗಂಭೀರವಾದ ಸಾಹಿತ್ಯ ವಿಮಶರ್ೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಅವರು ನಿಷ್ಠಾವಂತ ನವ್ಯಪಂಥದ ವಿಮರ್ಶಕರಾಗಿ ಸಾಹಿತ್ಯ ವಿಮಶರ್ಾ ಪರಂಪರೆಯಲ್ಲಿ ಚಿರಪರಿಚಿತರು. ಆದರೆ ಗಿರಡ್ಡಿಯವರೇನೂ ಮೊದ ಮೊದಲು ವಿಮಶರ್ೆಯನ್ನೆ ಬರೆದವರಲ್ಲ; ಆದರೆ ಅವರು ವಿಮಶರ್ೆಯನ್ನು ಬರೆಯುವ ಮೊದಲೇ ಕೆಲವು ಕತೆ ಕವಿತೆ ಪ್ರಬಂಧಗಳನ್ನೂ ಬರೆದವರು. ಮುಂದೆ ಅವರು ಪ್ರಧಾನವಾಗಿ ಕೆಲಸ ಮಾಡಿದ್ದು ಗಂಭೀರವಾದ ಸಾಹಿತ್ಯ ವಿಮಶರ್ೆಯ ಕ್ಷೇತ್ರದಲ್ಲೆ. ಆದರೆ ಪ್ರಾಸಂಗಿಕವಾಗಿ ಆಗೊಮ್ಮೆ ಈಗೊಮ್ಮೆ ಲಲಿತ ಪ್ರಬಂಧಗಳನ್ನು ಬರೆಯಲು ಹಂಬಲಿಸಿದವರು.

ಗಿರಡ್ಡಿ ಅವರು ವಿಮಶರ್ೆ ಬರೆಯುವ ‘ಪ್ರಕಾರ’ವನ್ನು ಬದಲಿಸಿದ ಕಾರಣವನ್ನು ಹೀಗೆ ಹೇಳುತ್ತಾರೆ: ವಿಮಶರ್ೆಯಲ್ಲಿ ನಗಲಿಕ್ಕೇ ಬರುವುದಿಲ್ಲ. ಪ್ರತಿಯೊಂದು ಸಾಹಿತ್ಯ ಪ್ರಕಾರದ ಜೀವವಾಹಿಯಲ್ಲೂ ಅದಕ್ಕೇ ವಿಶಿಷ್ಟವಾದ ಲಕ್ಷಣಗಳಿರುತ್ತವೆ. ವಿಧಿಲಿಖಿತದಂತೆ ಅವುಗಳನ್ನು ಮೀರಲಾಗದು. ಹಾಗೆ ವಿಮಶರ್ೆಗೆ ಗಾಂಭೀರ್ಯ ಎನ್ನುವುದೊಂದು ಶಾಪ. ತುಸು ಸಡಿಲುಬಿಟ್ಟರೆ ಅದು ಹರಟೆಯಾಗಿ, ಅಪಹಾಸ್ಯವಾಗಿ, ಅನಿಸಿಕೆಗಳ ಸಡಿಲ ಲಹರಿಯಾಗಿ- ವಿಮಶರ್ೆಯೊಂದನ್ನು ಬಿಟ್ಟು- ಇನ್ನೇನೋ ಆಗಿಬಿಡುತ್ತದೆ. ಜನ ನನ್ನನ್ನು ವಿಮರ್ಶಕ ಎಂದು ಒಪ್ಪಿದ್ದೇ ನೆಪವಾಗಿ, ಅದರ ಗಾಂಭೀರ್ಯ ನನ್ನ ಎಲ್ಲ ಬರವಣಿಗೆ, ಭಾಷಣ, ಅಧ್ಯಾಪನ, ಸ್ವಭಾವಗಳನ್ನು ಆವರಿಸಿಕೊಂಡಿರಬೇಕು. ಸಾಹಿತ್ಯ ಪ್ರಕಾರಕ್ಕೂ ಮತ್ತು ಅದರ ಭಾಷೆಗೂ ಹಾಗೂ ಅದು ಅಭಿವ್ಯಕ್ತಿಸುವ ಜೀವನ ಧೋರಣೆಗೂ ಆಂತರಿಕ ಸಂಬಂಧವಿರುತ್ತದೆ. ವಿಮಶರ್ೆ ಅಪಾರವಾದ ವಿದ್ವತ್ತು ಹಾಗೂ ಹೆಚ್ಚಿನ ಬೌದ್ಧಿಕ ಶ್ರಮವನ್ನು ಅಪೇಕ್ಷಿಸುವ ಪ್ರಕಾರ. ವಿಮಶರ್ೆ ಎಂಬುದು ಒಂದು ನಿದರ್ಿಷ್ಟವಾದ ಮತ್ತು ಖಚಿತವಾದ ದಿಕ್ಕಿನಲ್ಲಿ ಚಲಿಸುತ್ತದೆ. ಆದರೆ ಪ್ರಬಂಧವು ಊಹೆ ತರ್ಕ ಹಾಗೂ ಮಾನವ ಸಹಜ ಗುಣ ಸ್ವಭಾವಗಳ ಪರಿಚಯ ಮತ್ತು ಹೆಚ್ಚಾಗಿ ಕಾಮನ್ ಸೆನ್ಸ್ನ್ನು ಬಯಸುತ್ತದೆ; ಪ್ರಬಂಧಗಳ ಭಾಷೆಯಂತೂ ನದಿಯಂತೆ ಅಂಕು ಡೊಂಕಾಗಿ ಹೇಗೆ ಬೇಕಾದರೂ ಹರಿಯುವಂತಹದ್ದು. ಈ ವಿಮಶರ್ೆ ಎಂಬ ರಾಜ ಗಾಂಭೀರ್ಯದಿಂದ ಬಿಡುಗಡೆ ಪಡೆಯಲು ಗಿರಡ್ಡಿ ಅವರು ಪ್ರಬಂಧಗಳ ಕವಲು ದಾರಿಯ ಕಡೆಗೆ ಹೊರಳಿದ್ದಿರಬಹುದು. ಲೇಖಕರು ಅಥವಾ ವಿಮರ್ಶಕರು ಮತ್ತೊಂದು ಪ್ರಕಾರಕ್ಕೆ ಜಿಗಿಯಬಾರದೆಂಬ ಯಾವ ನಿಯಮವೂ ಇರುವುದಿಲ್ಲ. ಹಾಗೆ ನೋಡಿದರೆ ನವೋದಯದ ಬಹುತೇಕ ಲೇಖಕರೆಲ್ಲ ಬಹು ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ಸವೆಸಿದವರೇ ಆಗಿದ್ದಾರೆ. ಇದಕ್ಕೆ ಬೇಂದ್ರೆ ಕುವೆಂಪು ಮಾಸ್ತಿ ಪುತಿನ ಅತ್ಯುತ್ತಮ ನಿದರ್ಶನರಾಗಿದ್ದಾರೆ.

ಆದರೆ ಇತ್ತೀಚೆಗೆ ಕನ್ನಡ ಸಾಹಿತ್ಯ ವಿಮಶರ್ೆಯಲ್ಲಿ ಪ್ರಸಿದ್ಧರಾಗಿರುವ ಅನೇಕ ವಿಮರ್ಶಕರು ಬೇರೆ ಬೇರೆ ‘ಪ್ರಕಾರ’ಗಳತ್ತ ಹೊರಳುತ್ತಿರುವುದೇಕೆ ? ಈ ಬದಲಾವಣೆ ಅವರ ವೈಯಕ್ತಿಕ ತುಡಿತವೇ ? ಓದುಗ ವಲಯದ ಪ್ರಬಾವ ಪ್ರೇರಣೆಗಳಿದ್ದಿರಬಹುದೇ ? ಇದರ ಅಧ್ಯಯನ ಕುತೂಹಲಕರ ಹಾಗೂ ಮಾಮರ್ಿಕವಾಗಿರುತ್ತದೆ. ಸಿ.ಎನ್. ರಾಮಚಂದ್ರನ್ ಅವರು ಕತೆಗಳ ಬರವಣಿಗೆಯ ಕಡೆ ವಾಲಿದರು; ರಾಜೇಂದ್ರ ಚೆನ್ನಿ ಅವರು ‘ಮಳೆಯಲ್ಲಿ ಬಂದಾತ’ ಎಂಬ ಕಥಾಸಂಕಲನ ಮತ್ತು ‘ಮಡ್ ಟೌನ್’ ಕಾದಂಬರಿಯನ್ನು ಬರೆದಿದ್ದಾರೆ. ನಟರಾಜ ಹುಳಿಯಾರ್ ಅವರು ‘ಡೇವಿಡ್ ಸಾಹೇಬರು ಮತ್ತು ಇತರ ಕತೆಗಳು’ ಬರೆದರು; ರಹಮತ್ ತರೀಕೆರೆ ಅವರ ಸುತ್ತಾಟದ ಕಥನಗಳಾದ ‘ಕದಳಿ ಹೊಕ್ಕು ಬಂದೆ’ ಕೃತಿ ಬಂತು. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮೊದಲ ಪ್ರಬಂಧ ಸಂಕಲನ ‘ಅಂತರಂಗದ ಮೃದಂಗ’ ಪ್ರಕಟವಾಗಿದೆ. ಕೇಶವ ಶರ್ಮ ಅವರು ‘ಒಡೆದ ಕನ್ನಡಿ’ ಎಂಬ ಕಾದಂಬರಿಯನ್ನು ಬರೆದರು.

ಹಾಗಂತ ಇವರು ಯಾರೂ ಕೂಡ ಗಂಭೀರ ವಿಮಶರ್ೆಯ ಬರವಣಿಗೆಯನ್ನು ನಿಲ್ಲಿಸಿದವರಲ್ಲ. ಆದರೆ ಈ ವಿಮರ್ಶಕರು ತಾವು ಬರೆಯುತ್ತಿರುವ ವಿಮಶರ್ಾ ‘ಪ್ರಕಾರ’ವನ್ನು ಬದಲಿಸಲು ಅನೇಕ ಕಾರಣಗಳಿವೆ. ಹಲವು ದಶಕಗಳಿಂದ ತಮ್ಮನ್ನು ಕೇವಲ ವಿಮಶರ್ೆಯ ಕ್ಷೇತ್ರದಲ್ಲೇ ತೊಡಗಿಸಿಕೊಂಡಿರುವುದರಿಂದ ಬರವಣಿಗೆಯು ‘ಏಕತಾನತೆ’ಯ ಜಾಡಿಗೆ ಬೀಳುತ್ತಿರುವ ಸಮಸ್ಯೆಯನ್ನು ಎದುರಿಸುತ್ತಿರಬಹುದು. ಬರೆದದ್ದನ್ನೆ ಬರೆಯುವ ಹೇಳಿದ್ದನ್ನೆ ಮತ್ತೆ ಮತ್ತೆ ಹೇಳುತ್ತಿರುವ ಅಪಾಯದಿಂದ ಪಾರಾಗುವ ಹಾಗೂ ಸೃಜನಶೀಲತೆಯ ಅನ್ಯ ದಾರಿಗಳನ್ನು ಅರಸುತ್ತಿರುವ ತಂತ್ರವೂ ಆಗಿರಬಹುದು. ವಿಮಶರ್ೆ ಶ್ರೀಸಾಮಾನ್ಯನಿಗೆ ತಲುಪುವುದು ಕಷ್ಟಕರ ಎಂಬ ಅಭಿಪ್ರಾಯವೂ ಇದ್ದಿರಬಹುದು. ವರ್ತಮಾನ ಪತ್ರಿಕೆಗಳು, ಮಾಸಿಕಗಳು, ಪುಸ್ತಕ ಪ್ರಕಾಶಕರು ಹಾಗೂ ಈ ಕಾಲದ ಅಂತಜರ್ಾಲ ತಾಣ ಮತ್ತು ಬ್ಲಾಗ್ಗಳು ಉಂಟು ಮಾಡುತ್ತಿರುವ ಒತ್ತಡವೂ ಕಾರಣವಾಗಿದ್ದಿರಬಹುದು. ಇದು ಸಾಹಿತ್ಯ ವಿಮರ್ಶಕರಲ್ಲಿ ಆಗಿರುವ ಹೊಸ ಬದಲಾವಣೆ.

ಈ ಹಿನ್ನೆಲೆಯಲ್ಲಿ ‘ಹಿಡಿಯದ ಹಾದಿ’ ಕೃತಿಯು ಹಲವು ಕಾರಣಗಳಿಂದಾಗಿ ಮಹತ್ವದ್ದಾಗಿದೆ. ಮೊದಲನೆಯದಾಗಿ ಲೇಖಕರು ತಮ್ಮ ಬದುಕಿನ ಹಲವು ಪ್ರಸಂಗಗಳನ್ನು ಆತ್ಮಕಥಾನಕ ಧಾಟಿಯಲ್ಲಿ ನಿರೂಪಿಸಿರುವುದು. ತಮ್ಮ ಜೀವನದ ಅನುಭವದಿಂದಲೇ ವಸ್ತುವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅದರ ಆಶಯಕ್ಕೆ ತರ್ಕ ಮತ್ತು ಕಲ್ಪನೆಗಳನ್ನು ಕಥನ ಮಾದರಿಯಲ್ಲಿ ಐಕ್ಯಗೊಳಿಸಿರುವುದು. ಎರಡನೆಯದಾಗಿ ಇಲ್ಲಿಯ ಕೆಲವು ಪ್ರಬಂಧಗಳುದ್ದಕ್ಕೂ ಲಘು ಹಾಸ್ಯ ಶೈಲಿಯೊಂದು ನಿರೂಪಣೆಯ ಭಾಷೆಯಲ್ಲಿ ಹದವಾಗಿ ಬೆರೆತಿರುವುದು. ಲೇಖಕರು ತಮ್ಮ ಹಲವು ವೈಯಕ್ತಿಕ ದೌರ್ಬಲ್ಯ ಮತ್ತು ಮಿತಿಗಳನ್ನು ಕಂಡು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುತ್ತಾರೆ. ಇಲ್ಲಿಯ ನಿರೂಪಣೆಯು ಮುಖ್ಯವಾಗಿ ಓದುಗನನ್ನು ಉದ್ದೇಶಿಸಿಯೇ ಮಾತನಾಡುವುದರಿಂದ ಈ ಪ್ರಬಂಧಗಳು ಓದುಗನಿಗೆ ಮತ್ತಷ್ಟು ಆಪ್ತವಾಗುವಂತೆ ಮಾಡಿದೆ.

ಈ ಸಂಕಲನದ ‘ಪುಸ್ತಕಗಳು’, ‘ಇನ್ನಷ್ಟು ಪುಸ್ತಕಗಳು’, ‘ಪ್ರಶಸ್ತಿ ಎಂಬ ಆಕಸ್ಮಿಕ’, ‘ಮುನ್ನುಡಿ ಎಂಬ ವ್ರತ’, ‘ಹಿಡಿಯದ ಹಾದಿ’ ಮತ್ತು ‘ಜಿಂಕೆ ಎಂಬ ಮಾಯಾಮೃಗ’ ಇವು ಅತ್ಯುತ್ತಮ ಪ್ರಬಂಧಗಳಾಗಿವೆ. ಈ ಎಲ್ಲ ಪ್ರಬಂಧಗಳಲ್ಲೂ ಎದ್ದು ಕಾಣುವ ಗಮನಾರ್ಹವಾದ ಗುಣಧರ್ಮವೆಂದರೆ ನವಿರಾದ ವಿಡಂಬನಾತ್ಮಕ ಭಾಷಾ ಶೈಲಿಯ ಬಳಕೆ. ಉತ್ತರ ಕನರ್ಾಟಕದ ಗ್ರಾಮ್ಯ ಭಾಷೆ ಅಲ್ಲಲ್ಲಿ ಇಣುಕುತ್ತದೆ. ಈ ಪ್ರಬಂಧಗಳ ನಿರೂಪಣೆಯು ನೇರವಾಗಿ ಓದುಗರೊಂದಿಗೆ ಸಂವಾದ ನಡೆಸುವ ಶೈಲಿಯಲ್ಲಿರುವುದರಿಂದ ಅವು ಓದುಗರ ಮನಸ್ಸನ್ನು ಹಿಡಿದಿಡುವಲ್ಲಿ ಸಫಲವಾಗಿವೆ. ‘ಇನ್ನಷ್ಟು ಪುಸ್ತಕಗಳು’ ಅತ್ಯುತ್ತಮವಾದ ಲಲಿತ ಪ್ರಬಂಧಗಳ ಸಾಲಿಗೆ ಸೇರುವಂತಹದ್ದು. ಲೇಖಕರು ಆಧುನಿಕತೆಯ ಕೊಡುಗೆಯಾದ ‘ಕೊಳ್ಳುಬಾಕ ಸಂಸ್ಕೃತಿ’ಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು. ಅಗತ್ಯವಿರದಿದ್ದರೂ ಮನೆಯಲ್ಲಿ ಹೊಸ ಹೊಸ ಭೌತಿಕ ವಸ್ತುಗಳು ಹಳೆಯ ಸಾಮಾನುಗಳ ಜಾಗವನ್ನು ಆಕ್ರಮಿಸಿಕೊಂಡಿವೆ. ಆಧುನಿಕತೆ ಪ್ರತಿಯೊಂದನ್ನೂ ಅನಿವಾರ್ಯಗೊಳಿಸುತ್ತಿರುವ ವೈರುಧ್ಯವನ್ನು ಈ ಪ್ರಬಂಧದ ನಿರೂಪಕ ಹೀಗೆ ಹೇಳುತ್ತಾನೆ: ಭೌತಿಕ ವಸ್ತುಗಳು ನಮ್ಮನ್ನು ಆಕಷರ್ಿಸುತ್ತ, ಅದೂ ಬೇಕು ಇದೂ ಬೇಕು ಎಂದು ಆಸೆಯನ್ನು ಕೆರಳಿಸುತ್ತ, ಕ್ರಮೇಣವಾಗಿ ನಮ್ಮನ್ನು ಆಕ್ರಮಿಸುತ್ತ ನಮ್ಮ ಬದುಕನ್ನೇ ಕಿರಿದುಗೊಳಿಸಿದಂತೆ, ನಮ್ಮನ್ನು ಬದುಕಿನ ಅಂಚಿಗೆ ಒತ್ತಿಬಿಟ್ಟಂತೆ ಅನಿಸತೊಡಗಿದೆ. ಆದರೂ ನಮಗೆ ಏನೂ ಆಗಿಲ್ಲವೆಂಬಂತೆ ಸಾಮಾನುಗಳನ್ನು ತಂದು ಮನೆಯನ್ನು ತುಂಬಿಕೊಳ್ಳುತ್ತಲೇ ಇದ್ದೇವೆ. ಆದರೆ ಯಾವುದನ್ನೂ ಕಳೆದುಕೊಳ್ಳಲು ಸಿದ್ಧರಿಲ್ಲ. ಆಧುನಿಕತೆ ಎಂಬುದು ಇಂದಿನ ಜನರ ಮನಸ್ಸಿನ ಮೂಲೆ ಮೂಲೆಯಲ್ಲೂ ಆವರಿಸಿಕೊಂಡಿರುವುದನ್ನು ಇದು ಧ್ವನಿಸುತ್ತದೆ.

‘ಕಿಸೆಗಳ್ಳತನ’ ಪ್ರಬಂಧವು ಲೇಖಕರು ಹಣ ಕಳೆದುಕೊಳ್ಳುವ ತಮ್ಮ ಸಾಮಾನ್ಯವಾದ ದೌರ್ಬಲ್ಯವನ್ನು ಯಾವುದೆ ಮುಜುಗರವಿಲ್ಲದೆ ನಿರೂಪಿಸುತ್ತದೆ. ಇಲ್ಲಿ ಲೇಖಕರು ತಮ್ಮನ್ನು ತಾವು ಗೇಲಿ ಮಾಡಿಕೊಳ್ಳುವ ಯಾವ ಒಂದು ಪುಟ್ಟ ಅವಕಾಶವನ್ನೂ ಕಳೆದುಕೊಳ್ಳಲಾರರು. ಯಾಕೆಂದರೆ ಕಿಸೆಗಳ್ಳರಿಂದ ಆಗಾಗ ಹಣ ಕಳೆದುಕೊಳ್ಳುವುದೇ ಒಂದು ವ್ಯಸನವಾದಾಗ ನಿರೂಪಕ ತನ್ನ ಬೆಪ್ಪುತನವನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುತ್ತಾನೆ. ಅಷ್ಟೆ ಅಲ್ಲದೆ ಕಿಸೆಗಳ್ಳರ ಚಾಣಾಕ್ಷತನದ ಬಗ್ಗೆ ಅಭಿಮಾನ ಮತ್ತು ಅವರು ಸಾರ್ವಜನಿಕವಾಗಿ ಸಿಕ್ಕಿಬಿದ್ದಾಗ ಸಹಾನುಭೂತಿಯೂ ವ್ಯಕ್ತವಾಗುತ್ತದೆ. ಆದರೆ ಕಿಸೆಗಳ್ಳರ ಈ ಕೃತ್ಯದ ಹಿಂದಿರುವ ಸಾಮಾಜಿಕ ಹಾಗೂ ಆಥರ್ಿಕ ಕಾರಣಗಳನ್ನು ಈ ಪ್ರಬಂಧ ಶೋಧಿಸಲು ಪ್ರಯತ್ನಿಸುವುದಿಲ್ಲ.

‘ಪ್ರಶಸ್ತಿ ಎಂಬ ಆಕಸ್ಮಿಕ’ ಪ್ರಬಂಧವು ಪ್ರಶಸ್ತಿಗಳಿಗಾಗಿ ನಡೆಯುವ ಲಾಬಿಯ ಹಾವಳಿಯನ್ನು ವೈನೋದಿಕ ಧಾಟಿಯಲ್ಲಿಯೇ ಅನಾವರಣಗೊಳಿಸುತ್ತದೆ. ಯಾವುದೇ ಅರ್ಹ ಲೇಖಕನಿಗೆ ಪ್ರಶಸ್ತಿ ಕೈತಪ್ಪುವ ಅಥವಾ ಅನರ್ಹ ಲೇಖಕನಿಗೆ ಅಥವಾ ಕೃತಿಗೆ ಪ್ರಶಸ್ತಿ ಸಿಗುವುದು ಕೇವಲ ಒಂದು ‘ಆಕಸ್ಮಿಕ’ ಎಂಬುದನ್ನು ತುಂಬ ಸಹಜವಾಗಿ ಚಿತ್ರಿಸುತ್ತದೆ. ಇದರ ನಿರೂಪಕ ಒಂದು ಕಡೆ ಹೇಳುತ್ತಾನೆ: ಯೋಗ್ಯತೆಗೂ ಪ್ರಶಸ್ತಿಗೂ ಸಂಬಂಧವೇ ಇಲ್ಲವೇನೋ ಅನಿಸುತ್ತದೆ. ಇದರ ಹಿಂದೆ ಕೆಲಸ ಮಾಡುವ ಇನ್ನೊಂದು ಆಕಸ್ಮಿಕವಿರುತ್ತದೆ. ಎಲ್ಲರ ಅನುಭವಕ್ಕೂ ಬಂದಿದ್ದರೂ ಯಾರೂ ಇದನ್ನು ಗಮನಿಸುವುದಿಲ್ಲ. ಪರೀಕ್ಷೆಗಳಲ್ಲಿ ಬರುವ ರ್ಯಾಂಕುಗಳು ಕೆಲಸ ಮಾಡುವುದೂ ಇದೇ ಆಕಸ್ಮಿಕತೆಯ ತತ್ವದ ಆಧಾರದ ಮೇಲೆ. ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಪ್ರತಿವರ್ಷವೂ ನನಗೆ ಮೊದಲ ರ್ಯಾಂಕು ತಪ್ಪುತ್ತಿತ್ತು. ಕಾರಣವೆಂದರೆ, ನನಗಿಂತ ಜಾಣನಾದ ಒಬ್ಬ ವಿದ್ಯಾಥರ್ಿ ನಮ್ಮ ಕ್ಲಾಸಿನಲ್ಲಿದ್ದ. ಒಂದು ವೇಳೆ ಅವನು ನಮ್ಮ ಶಾಲೆಯಲ್ಲಿ ಇರದಿದ್ದರೆ ಖಂಡಿತ ಮೊದಲ ರ್ಯಾಂಕು ನನಗೇ ಬರುತ್ತಿತ್ತು. ಆದರೆ ಆಕಸ್ಮಿಕವಾಗಿ ಅಂಥವನೊಬ್ಬ ನನಗೆ ಗಂಟುಬಿದ್ದ. ಒಂದು ವೇಳೆ ಆಕಸ್ಮಿಕವಾಗಿ ಅವನಿಗಿಂತ ಜಾಣನಾದವನೊಬ್ಬ ನಮ್ಮ ಸ್ಕೂಲಿಗೆ ಬಂದಿದ್ದರೆ ಇವನಿಗೂ ರ್ಯಾಂಕು ತಪ್ಪುತ್ತಿತ್ತು. ಅವನ ಪುಣ್ಯಕ್ಕೆ ಹಾಗಾಲಿಲ್ಲ. ಆಕಸ್ಮಿಕವಾಗಿ ನಾನು ಬೇರೆ ಸ್ಕೂಲಿಗೆ ಹೋಗಿದ್ದರೆ ಮೊದಲ ರ್ಯಾಂಕು ಸಿಗುತ್ತಿತ್ತೇನೊ ಎಂದು ನನಗೆ ಆಗ ಅನಿಸುತ್ತಿತ್ತು. ಆದರೆ ಆಕಸ್ಮಿಕವಾಗಿ ಅಲ್ಲಿಯೂ ನನಗಿಂತ ಜಾಣರು ಗಂಟು ಬೀಳುತ್ತಿರಲಿಲ್ಲವೆಂಬುದಕ್ಕೆ ಏನು ಗ್ಯಾರಂಟಿ ? ಎಂದೂ ಅನಿಸುತ್ತಿತ್ತು. ನಿರೂಪಕನ ರಸಿಕತೆ ಮತ್ತು ವಿನೋದ ಪ್ರಜ್ಞೆಯ ಹಿಂದೆ ಲೋಕವನ್ನು ಉದಾರ ದೃಷ್ಟಿಕೋನದಿಂದ ನೋಡುವ ಗುಣವಿದೆ.

ಈ ಮೊದಲು ಪ್ರಸ್ತಾಪಿಸಿದಂತೆ ವಿಮಶರ್ೆ ಹಾಗೂ ಪ್ರಬಂಧಗಳ ಗುಣಧರ್ಮಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಒಬ್ಬ ವಿಮರ್ಶಕನಿಗೆ ಇಲ್ಲದಿರುವ ಅಪರಿಮಿತವಾದ ಬರವಣಿಗೆಯ ಸ್ವಾತಂತ್ರ್ಯವು ಪ್ರಬಂಧಕಾರನಿಗೆ ಇರುತ್ತದೆ. ಸಾಹಿತ್ಯವನ್ನು ವಿಶ್ಲೇಷಣೆ ಮಾಡುವ ವಿಮರ್ಶಕನಿಗೆ ತನ್ನ ವೈಯಕ್ತಿಕ ಗ್ರಹಿಕೆಯ ನೆಲೆಯೇ ತುಂಬ ಮುಖ್ಯವಾಗಿರುತ್ತದೆ. ಆದರೆ ಪ್ರಬಂಧಕಾರನಿಗೆ ಸಮಸ್ತ ಲೋಕದ ಅನುಭವವನ್ನೆ ತನ್ನದಾಗಿಸಿಕೊಳ್ಳುವ ಹಾಗೂ ಅನ್ಯರಿಂದ ಕೇಳಿದ ಸಂಗತಿಗಳನ್ನು ತನ್ನದೆಂಬಂತೆ ನಿರೂಪಿಸುವ ಹಲವಾರು ಅನುಕೂಲತೆಗಳಿವೆ. ಈ ಹಿನ್ನೆಲೆಯಲ್ಲಿ ಗಿರಡ್ಡಿ ಅವರು ಪ್ರಬಂಧಗಳ ಬರವಣಿಗೆಯಿಂದ ಆಕಷರ್ಿತರಾದಂತೆ ಕಾಣುತ್ತದೆ. ಲೇಖಕರು ಕೊಂಚ ಜನಪ್ರಿಯರಾದ ಮೇಲೆ ಅವರು ಬರೆಯುವ ಪ್ರಬಂಧಗಳ ನಿರೂಪಣೆಯಲ್ಲಿ ‘ನಾನು’ ಎಂಬ ಸರ್ವನಾಮದ ಬಳಕೆ ಹೆಚ್ಚಾಗಿರುತ್ತದೆ. ಯಾಕೆಂದರೆ ಅದು ಓದುಗನಿಗೆ ಕಟ್ಟಿಕೊಡುವ ಅನುಭವದ ಜಗತ್ತನ್ನು ಲೇಖಕನದೇ ಎಂಬ ಭಾವನೆಯನ್ನುಂಟು ಮಾಡುತ್ತದೆ. ಇದು ಆತ್ಮಕಥನದ ಮಾದರಿಗೆ ಹೆಚ್ಚು ಹತ್ತಿರವಾಗಿರುವಂತಹದ್ದು. ಕನ್ನಡದಲ್ಲಿ ಇತ್ತೀಚೆಗೆ ಬಂದಿರುವ ಹೆಚ್ಚಿನ ಪ್ರಬಂಧಗಳು ಆತ್ಮಕಥನದ ಮಾದರಿಯ ನಿರೂಪಣೆಯನ್ನು ಹೊಂದಿವೆ. ಉದಾಹರಣೆಗೆ ಎ.ಆರ್. ಮಣಿಕಾಂತ್ ಅವರ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’, ಎಚ್.ಎಸ್. ವೆಂಕಟೇಶಮೂತರ್ಿ ಅವರ ‘ಎಚ್ಚೆಸ್ವಿ ಅನಾತ್ಮ ಕಥನ’ ಹಾಗೂ ವಸುಧೇಂದ್ರರ ಬಹುತೇಕ ಪ್ರಬಂದಗಳು ಇದಕ್ಕೆ ಸ್ಪಷ್ಟ ಸಾಕ್ಷಿಯಾಗಿವೆ. ಹಾಗೆ ನೋಡಿದರೆ ‘ಹಿಡಿಯದ ಹಾದಿ’ಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಕನ್ನಡ ಪ್ರಬಂಧ ಪ್ರಕಾರವು ಖಂಡಿತವಾಗಿ ಹೊರಳು ಹಾದಿಯಲ್ಲಿದೆ ಎಂದು ಅನ್ನಿಸುತ್ತದೆ.

ಕನ್ನಡದಲ್ಲಿ ಲಲಿತ ಪ್ರಬಂಧಗಳ ಪ್ರಕಾರವು ಮೊದಲಿನಿಂದಲೂ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗುತ್ತ ಬಂದಿದೆ. ಕತೆ ಮತ್ತು ಕಾದಂಬರಿಗಳಂತೆ ಪ್ರಬಂಧಗಳು ವಿಶಾಲವಾದ ಓದುಗ ವಲಯವನ್ನು ಪಡೆಯಲಿಲ್ಲ. ಕನ್ನಡದ ಬಹುತೇಕ ಲೇಖಕರು ಲೋಕಾಭಿರಾಮವಾಗಿ ಮತ್ತು ಪ್ರಾಸಂಗಿಕವಾಗಿ ಪ್ರಬಂಧಗಳನ್ನು ಬರೆದವರು. ಆದರೆ ಎ.ಎನ್. ಮೂತರ್ಿರಾಯರಂತಹವರು ಇದಕ್ಕೊಂದು ಅಪವಾದ; ಅಷ್ಟೆ ಅಲ್ಲದೆ ಅವರು ಲಲಿತ ಪ್ರಬಂಧಗಳನ್ನು ಕಲಾಕೃತಿಯ ಮಟ್ಟಕ್ಕೂ ಏರಿಸಿದವರು. ಆದರೆ ಕನ್ನಡ ಲಲಿತ ಪ್ರಬಂಧಗಳ ಕುರಿತು ಚಚರ್ೆಯಾದದ್ದು ಕೂಡ ಕಡಿಮೆಯೇ. ಅದರಲ್ಲೂ ನವ್ಯ ಪಂಥವು ಪ್ರಬಂಧ ಪ್ರಕಾರವನ್ನು ದೂರವೇ ಇಟ್ಟಿತ್ತು. ಯಾಕೆಂದರೆ ಲಲಿತ ಪ್ರಬಂಧಗಳು ಬದುಕಿನ ದ್ವಂದ್ವ ಹಾಗೂ ಸಂಕೀರ್ಣತೆಗಳನ್ನು ಕಟ್ಟಿಕೊಡಲಾರವು ಎಂಬುದು ನವ್ಯ ಪಂಥದ ನಂಬಿಕೆಯಾಗಿತ್ತು. ಲಲಿತ ಪ್ರಬಂಧಗಳ ‘ಪ್ರಕಾರ’ಕ್ಕೆ ಅದರದೇ ಆದ ಮಿತಿಗಳಿರುವುದು ನಿಜ. ಆದರೆ ಅದೇ ನವ್ಯ ಪಂಥದ ಮುಖ್ಯ ವಿಮರ್ಶಕರಾದ ಗಿರಡ್ಡಿಯವರು ತಮ್ಮ ನಂಬಿಕೆಯನ್ನು ಬದಲಿಸಿಕೊಂಡು ಈ ಪ್ರಬಂಧಗಳನ್ನು ಬರೆದಿರುವುದೇ ಮಹತ್ವದ ಸಂಗತಿಯಾಗಿದೆ.

 

‍ಲೇಖಕರು G

September 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This