ಗುಬ್ಬಿಹಳ್ಳದ ಸಾಕ್ಷಿಯಲ್ಲಿ

sumitra-book
ತಮ್ಮ ವೈವಿಧ್ಯಪೂರ್ಣ ಬರವಣಿಗೆಯಿಂದ ಈಗಾಗಲೇ ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ಎಲ್. ಸಿ. ಸುಮಿತ್ರಾ ಅವರ ಮೊದಲ ಕಥಾಸಂಕಲನ ಇದೀಗ ಪ್ರಕಟವಾಗುತ್ತಿದೆ. ಈ ಸಂಕಲನದ ಹೆಚ್ಚಿನ ಕತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಲೇಖಕಿಗೆ ಹೆಸರು ತಂದಿವೆ. ಬಿಡಿಬಿಡಿಯಾಗಿ ಕತೆಗಳನ್ನು ಓದುವಾಗ ಒಂದು ರೀತಿಯ ಅನುಭವವಾದರೆ, ಅವುಗಳನ್ನು ಸಮಗ್ರವಾಗಿ, ಒಟ್ಟಂದದಲ್ಲಿ ಓದುವಾಗಿನ ಅನುಭವ ಮತ್ತೊಂದು ಬಗೆಯದು. ಲೇಖಕಿಯ ಜೀವನದೃಷ್ಟಿಯನ್ನು ಹೆಚ್ಚು ನಿಚ್ಚಳವಾಗಿ ಗ್ರಹಿಸಲು ಇಂಥ ಸಂಕಲನದ ಪ್ರಕಟಣೆ ಅನುವು ಮಾಡಿಕೊಡುತ್ತದೆ.
ಬಿಡಿಬಿಡಿಯಾಗಿ ಓದಿದ್ದಾಗ ಕೇವಲ ಪ್ರಯೋಗಗಳಾಗಿ ಕಂಡದ್ದು ಈಗ ಒಟ್ಟಾಗಿ ನೋಡಿದಾಗ ಸುಮಿತ್ರಾ ಅವರ ಬರವಣಿಗೆ ಒಂದು ಹೊಸ ಮಜಲನ್ನೇ ಮುಟ್ಟಿದ್ದು ಗೋಚರಿಸುತ್ತದೆ. ಸಾಹಿತ್ಯವಿಮರ್ಶೆ, ಸಂಶೋಧನೆಗಳಿಂದ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದ ಸುಮಿತ್ರಾ ಮುಂದೆ ಕವಿತೆ ಮತ್ತು ಕತೆಗಳ ರಚನೆಯಲ್ಲಿ ತಮ್ಮ ಸೃಜನಶೀಲ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ತಮ್ಮ ಅಭಿರುಚಿ, ಆಸಕ್ತಿ ಹಾಗೂ ಶೋಧನೆಗಳನ್ನು ಸಾಹಿತ್ಯದ ಆಚೆಗೂ ಕೊಂಡೊಯ್ದಿದ್ದಾರೆ. ತೋಟಗಾರಿಕೆ ಅವರ ಮುಖ್ಯ ಆಸಕ್ತಿಗಳಲ್ಲಿ ಒಂದು. ‘ಮಯೂರ’ ಮಾಸಪತ್ರಿಕೆಯಲ್ಲಿ ವಿವಿಧ ರೀತಿಯ ಸಸ್ಯಗಳ ಬಗ್ಗೆ ಸುಮಿತ್ರಾ ಬರೆಯುತ್ತಿರುವ ಸಚಿತ್ರ ಅಂಕಣ ತುಂಬಾ ಸ್ವಾರಸ್ಯಕರವಾಗಿಯೂ, ಪ್ರಯೋಜನಕಾರಿಯಾಗಿಯೂ ಇದೆ. ತಮ್ಮ ಇದುವರೆಗಿನ, ಮೇಲುನೋಟಕ್ಕೆ ವಿಭಿನ್ನವಾಗಿ ಕಾಣುವ, ಆಸಕ್ತಿಗಳನ್ನು ಏಕತ್ರಗೊಳಿಸಿ ಹೆಣೆದ ಹಲವು ಸಾರ್ಥಕ ರಚನೆಗಳು ಈ ಸಂಕಲನದಲ್ಲಿ ಸಂಗ್ರಹಗೊಂಡಿದೆ. ಲೇಖಕಿಯ ಲೋಕಗ್ರಹಿಕೆ ಹೆಚ್ಚಿನ ಪ್ರಬುದ್ಧತೆ ಪಡೆದಂತೆ ಬರವಣಿಗೆಯ ಕೌಶಲ್ಯವೂ ಸಾಧಿತವಾಗಿದೆ.
ಮಲೆನಾಡಿನ ಪರಿಸರದಲ್ಲಿ ಆಳವಾಗಿ ಬೇರುಬಿಟ್ಟ ಲೇಖಕಿ ಸುಮಿತ್ರಾ. ಅವರ ಸಂಶೋಧನಾ ಪ್ರಬಂಧದ ವಿಷಯ ಕುವೆಂಪು-ಕಾರಂತರ ಕಾದಂಬರಿಗಳಲ್ಲಿ ಪ್ರಕೃತಿ. ಅವರ ಸದ್ಯದ ಅಂಕಣದ ಭೂಮಿಕೆಯೂ ಪರಿಸರವೇ. ಆದ್ದರಿಂದ ಈ ಕತೆಗಳ ಕೇಂದ್ರದಲ್ಲಿ ಮಲೆನಾಡು ಇದ್ದರೆ ಅದು ಕಾಕತಾಳೀಯವಲ್ಲ. ಮಲೆನಾಡು ಸುಮಿತ್ರಾ ಅವರಿಗೆ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡೂ ಹೌದು. ಹಾಗಾಗಿ ಅವರ ಒಟ್ಟಾರೆ ವಾಙ್ಮಯದಲ್ಲಿ ಕುವೆಂಪು-ಕಾರಂತ-ತೇಜಸ್ವಿ ಮಲೆನಾಡನ್ನು ಗ್ರಹಿಸಿದ ರೀತಿಯ ಅರಿವಿದೆ. ತಾವು ಹುಟ್ಟಿಬೆಳೆದ, ಸದ್ಯ ನೆಲೆಸಿರುವ, ಮಲೆನಾಡು ಹೇಗೆ ಬದಲಾಗುತ್ತಿದೆ ಎಂಬ ಎಚ್ಚರವೂ ಇದೆ. ತನ್ನ ಪರಂಪರೆಯೊಂದಿಗೂ, ಈಗಿನ ಪರಿಸರದೊಂದಿಗೂ ಏಕಕಾಲಕ್ಕೆ ಸಂಭಾಷಿಸುವ ಗುಣ ಇಲ್ಲಿನ ಬರಹಗಳಿಗೆ ಸಹಜವಾಗಿ ಪ್ರಾಪ್ತವಾಗಿದೆ.
ಮಲೆನಾಡಿನ ಈಗಿನ ಲೇಖಕ-ಲೇಖಕಿಯರಿಗೆ ತಮ್ಮ ಹಿರಿಯರ ಪ್ರಭಾವಳಿಯಿಂದ ತಪ್ಪಿಸಿಕೊಂಡು ಬರೆಯುವುದು ತುಂಬಾ ಕಷ್ಟ. ಈ ದೃಷ್ಟಿಯಿಂದ ನೋಡಿದಾಗ ಸುಮಿತ್ರಾ ಅವರಿಗೆ ತಮ್ಮ ಪರಂಪರೆ ಹೊರಲಾರದ ಭಾರವಾಗದೆ ಕೇವಲ ದಾರಿದೀಪವಾಗಿರುವುದು ಕಂಡು ಬರುತ್ತದೆ. ಕುವೆಂಪು ಆರಂಭಿಸಿದ ಶೋಧ ವರ್ತಮಾನ ಲೇಖಕಿಯ ಹೊಸ ಗ್ರಹಿಕೆಗಳಿಂದ ಹೊಸ ದಿಕ್ಕುಗಳಲ್ಲಿ ಚಲಿಸುತ್ತಿರುವಂತೆ ತೋರುತ್ತದೆ. ಈ ಕಾಲದ ಹೊಸ ಬೆಳವಣಿಗೆಗಳು ಇಲ್ಲಿ ಕೇವಲ ಹೊಸ ಸಾಮಾಜಿಕ ವಿವರಗಳಾಗಿ ಬರದೆ ಲೇಖಕಿಯ ಅವಲೋಕನವನ್ನು ಚೂಪುಗೊಳಿಸುವ ಸಂಗತಿಗಳಾಗಿ ಒದಗಿಬಂದಿವೆ.
-ಟಿ ಪಿ ಅಶೋಕ ಅವರ ಮುನ್ನುಡಿಯಿಂದ

‍ಲೇಖಕರು avadhi

January 10, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

2 ಪ್ರತಿಕ್ರಿಯೆಗಳು

 1. kaligananath gudadur

  sumitra madem, shubhashayagalu nimma hosa
  katha sankalana ‘gubbi hallada sakshiyalli.
  Oduva kutuhal bahala kaduttide.
  -kaligananath gudadur

  ಪ್ರತಿಕ್ರಿಯೆ
 2. ಕೆ. ಉಷಾ ಪಿ. ರೈ

  ನಾನೂ ಈ ಪುಸ್ತಕ ಓದಿದ್ದೇನೆ.ಬಹಳ ಖುಷಿ ಪಟ್ಟಿದ್ದೇನೆ.ಪ್ರಕೃತಿಯನ್ನು ತು೦ಬಾ
  ಸಮಪ೯ಕವಾಗಿ ತಮ್ಮ ಬರವಣಿಗೆಯಲ್ಲಿ ಅಳವಡಿಸಿಕೊ೦ಡಿದ್ದಾರೆ. ಕೆಲವು ಕಡೆ
  ಪ್ರಕೃತಿಯೇ ಪಾತ್ರವಾಗಿ ಕಥೆಗಳಲ್ಲಿ ಹಾಸುಕೊಕ್ಕಾಗಿವೆ. ಅಭಿನ೦ದನೀಯ ಪ್ರಯತ್ನ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: