ಲಲಿತ ಪ್ರಬಂಧಗಳೆಂದರೆ ನನಗೆ ಬಾಲ್ಯದಿಂದಲೂ ಪ್ರೀತಿ

ಶಿವು ಕೆ ಈಗಾಗಲೇ ತಮ್ಮ ‘ವೆಂಡರ್ ಕಣ್ಣು’ ಪುಸ್ತಕದ ಮೂಲಕ ಹೆಸರಾಗಿದ್ದಾರೆ. ಕ್ಯಾಮೆರಾ ಪ್ರೇಮಿ, ಹಲವು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿವು ಅವರ ಎರಡನೆಯ ಕೃತಿ ಆಗಸ್ಟ್ ೨೨ ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಮನುಷ್ಯನಿಗಲ್ಲದೇ ಮರಗಳಿಗೆ ಟೆನ್ಷನ್ ಬರತ್ತಾ? ನಾನು ಹುಟ್ಟಿ ಬೆಳೆದ ಮಾವಳ್ಳಿ ಕೆರೆಯಂಗಳದ ಜರ್ನಲಿಸ್ಟ್ ಕಾಲನಿ ಮನೆಯ ಹಿತ್ತಿಲ ಬಾಗಿಲ ಗವಾಕ್ಷಿಯೊಳಗೆ ಗುಬ್ಬಚ್ಚಿಗಳು ಗೂಡುಕಟ್ಟುತ್ತಿದ್ದವು. ಅಜ್ಜಿಯಿಂದ ಅಕ್ಕಿ ಆರಿಸುವಾಗಿನ ಭತ್ತ, ಗೋಧಿ, ಬೇಳೆಕಾಳುಗಳನ್ನು ಪಡೆದು ಗುಬ್ಬಚ್ಚಿ ಮರಿಗಳನ್ನು ಮನೆಯೊಳಗೇ ಕರೆತರಲು ತುಂಬಿದ ಮನೆಯ ಮಕ್ಕಳಾದ ನಾವು ಹರಸಾಹಸ ಪಡುತ್ತಿದ್ದೆವು. ಮೊಟ್ಟೆಯೊಡೆದು ಬಾಯಿ ತೆರೆದ ಮರಿ ಗುಬ್ಬಚ್ಚಿಗಳಿಗೆ ತಾಯಿ ನೀಡುತ್ತಿದ್ದ ತುತ್ತಿನ ಚಿತ್ರ ನಾಲ್ಕು ದಶಕಗಳು ಮೀರಿದರೂ ನೆನಪಿನಿಂದ ಮಾಸಿಲ್ಲ. ಗುಬ್ಬಚ್ಚಿ ಎಂಬ ಪ್ರಬೇಧವಿರಲಿ, ಅಂಥದ್ದೊಂದು ಪದ ಕನ್ನಡದಲ್ಲಿ ಇದೆಯೆ? ಎಂಬ ಗುಮಾನಿ ಪಡುತ್ತಿರುವ ಸಮಯದಲ್ಲಿಯೇ ಕೆಲಸ ಬದಲಾವಣೆ ಮಾಡಿದೆ. ಕನಕಪುರ ತಾಲ್ಲೂಕಿನ ಜಕ್ಕಸಂದ್ರವೆಂಬ ಹಳ್ಳಿಯ ಹೆದ್ದಾರಿಯಲಿ ನನ್ನ ಕಾಲೇಜು. ಕೂರುವ ಕೋಣೆಯ ಕೊನೆಯ ಕಿಟಕಿಯಾಚೆ ಗುಬ್ಬಚ್ಚಿಗಳಿಂದು ಚಿಲಿಪಿಲಿಗುಡುತ್ತಿವೆ. ಎಂದೋ ಎಸೆದ ಒಂದೆರಡು ಅಕ್ಕಿಕಾಳಿನ ಆಸೆಗೆ ನೇರ ಕೋಣೆಯ ಬಳಿಯೂ ಬರುವಷ್ಟು ಧೈರ್ಯ ಮಾಡುತ್ತಿವೆ. ಬಾಲ್ಯ ಮರುಕಳಿಸಿತೆಂದು ಸಂಭ್ರಮಿಸುತ್ತಿರುವ ಸಮಯದಲ್ಲಿ ಶಿವು ಬರೆದ ‘ಗುಬ್ಬಿ ಎಂಜಲು’ ಪ್ರಬಂಧ ಸಂಕಲನ ಕೈಸೇರಿದೆ. ಲಲಿತ ಪ್ರಬಂಧಗಳೆಂದರೆ ನನಗೆ ಬಾಲ್ಯದಿಂದಲೂ ಪ್ರೀತಿ. ಈ ಪ್ರೀತಿ ಹುಟ್ಟಿದ್ದು ಹೇಗೆಂದರೆ ಮನೆಯ ಕಪಾಟಿನಲ್ಲಿ ತುಳುಕುತ್ತಿದ್ದ ಪುಸ್ತಕಗಳು ಮತ್ತು ಅಂಗಳದಲ್ಲಿ ಬಂದು ಬೀಳುತ್ತಿದ್ದ ರಾಶಿ ಪತ್ರಿಕೆಗಳು. ಅಪ್ಪ ಪತ್ರಕರ್ತ ಹಾಗೂ ಪುಸ್ತಕ ವಿಮರ್ಶಕರಾದ್ದರಿಂದ ಮನೆಯೊಳಗೆ ಸದಾ ಮುದ್ರಿತಪುಟಗಳ ಗಮಲು. ಹೀಗೊಂದು ದಿನ ಕೈಗೆತ್ತಿಕೊಂಡದ್ದು ಬಹುಶಃ ರಾ.ಕು. ಅವರು ಬರೆದ ‘ಗಾಳಿಪಟ’ ಎಂಬ ಪ್ರಬಂಧ ಸಂಕಲನ. ಮುಂದೆ ಅ.ರಾ.ಮಿತ್ರ ಅವರ ‘ಬಾಲ್ಕನಿಯ ಬಂಧುಗಳು’ ಪ್ರಬಂಧಗಳೆಂಬ ರೋಚಕ ಲೋಕದ ಪರಿಚಯ ಮಾಡಿಸಿತು. ಮುಂದೆ ಹಳೆಯ ತಲೆಮಾರಿನ ಎ.ಎನ್.ಮೂರ್ತಿರಾವ್, ತೀನಂಶ್ರೀಯವರ ಪ್ರಬಂಧಗಳು ಪ್ರಿಯವಾದವು. ಹೊಸತಾಗಿ ಪ್ರಬಂಧಗಳನ್ನು ರಚಿಸುವವರು ಇಲ್ಲವೇನೊ? ಎಂಬ ಗುಮಾನಿ ಬರುವಷ್ಟರಲ್ಲಿ ವಸುಧೇಂದ್ರರ ಬರಹಗಳು ನಮ್ಮನ್ನು ರಂಜಿಸತೊಡಗಿದವು. ಶ್ರೀವತ್ಸ ಜೋಶಿಯವರ ‘ಪರಾಗ ಸ್ಪರ್ಶ’ವೂ ನಮ್ಮ ಹೃದಯವನ್ನು ತಟ್ಟತೊಡಗಿದವು. ಎ.ಆರ್.ಮಣಿಕಾಂತ್ ಹಾಗೂ ‘ಜೋಗಿ’ ನಮ್ಮನ್ನು ರೊಮ್ಯಾಂಟಿಕ್ ಯುಗಕ್ಕೆ ಕರೆದೊಯ್ದರು. ಚಿಂತನೆಗೆ ಹಚ್ಚುವ ಜತೆಗೆ ರಂಜನೆಯನ್ನೂ ನೀಡುವ ಪ್ರಬಂಧಗಳು ಕತೆ-ಕಾದಂಬರಿಗಳಂತೆ ಗಾಂಭಿರ್ಯ, ಏಕತಾನತೆಗೆ ನಮ್ಮನ್ನು ದೂಡುವುದಿಲ್ಲ. ಕಣ್ಣಿಗೆ ಕಂಡ ರೋಚಕ ಸಂಗತಿಯೊಂದಿಗೆ ಎಂದೋ ಓದಿದ ಪುಸ್ತಕದ ಸಾಲುಗಳನ್ನು ನೆನೆಸಿಕೊಂಡು, ಲಹರಿಯೊಂದಿಗೆ ತುಣಕು ಘಟನೆಗಳನ್ನು ಪೋಣಿಸುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಅಂಥದೊಂದು ಸಾಮರ್ಥ್ಯ ಆತ್ಮೀಯ ಗೆಳೆಯ ಶಿವು ಅವರಿಗಿದೆ ಎಂದು ಹೇಳಲು ಸಂತಸವಾಗುತ್ತದೆ. ನಮ್ಮಂಥವರಿಗೆ ದಿನ ಬೆಳಕು ಕಾಣುವುದೇ ಪತ್ರಿಕೆಗಳಿಂದ. ಸುಡು ಕಾಫಿ ಬಟ್ಟಲು ತುಟಿಗೆ ತಾಕುವ ಮೊದಲೇ ಪತ್ರಿಕೆಯ ಹಾಳೆಗಳು ನಮ್ಮ ಹಸ್ತಗಳಲ್ಲಿ ನಲಿದಾಡುತ್ತಿರಬೇಕು. ಯಾವುದೋ ಕಾರಣಕ್ಕೆ ಪತ್ರಿಕೆ ಕೈಸೇರಲು ತಡವಾದರೆ ಮೊದಲು ಶಾಪ ಹಚ್ಚುವುದು ನಮ್ಮ ಶಿವು ಅವರಂಥ ‘ವೆಂಡರ್’ಗಳಿಗೆ. ಇಂಥ ‘ವೆಂಡರ್’ಗಳ ‘ಕಣ್ಣಿಗೆ’ ನಾವೂ ಸೇರಿದಂತೆ ಕಂಡ ಅನೇಕಾನೇಕ ಮುಖಗಳು ಪ್ರಬಂಧ ವಸ್ತುಗಳಾಗುವುದೆಂಬ ಕಲ್ಪನೆ ನನಗಂತೂ ಇರಲಿಲ್ಲ. ಆದರೆ ಶಿವು ಅವರಂಥ ಗಂಭೀರ ಓದುಗ, ಸರಸ ಬರಹಗಾರರಿಗೆ ಮಾತ್ರ ದಕ್ಕುವ ಪ್ರತಿಮೆಗಳಾಗಿ ನಾವು ವಿಜೃಂಭಿಸಿದೆವು. ‘ವೆಂಡರ್ ಕಣ್ಣು’ ಹುಟ್ಟಿದ್ದು ಹೀಗೆ. ಅದರ ಯಶಸ್ಸಿಗೆ ಹಿಗ್ಗಿ ಶಿವು ‘ಗುಬ್ಬಿ ಎಂಜಲು’ ಬರೆದಿದ್ದಾರೆ. ಅವರ ಕಥನಶೈಲಿಯನ್ನು ಸವಿಯಲು ಮೊದಲ ಪ್ರಬಂಧ ‘ಬೆಕ್ಕಿಗೆ ಜ್ವರ ಬರತ್ತಾ?’ ಅನ್ನು ಮತ್ತೆ ಮತ್ತೆ ಓದಬೇಕು. ರೂಢಿಮಾತಿನ ‘ಬೆಕ್ಕಿಗೆ ಜ್ವರ’ ಬರುವ ಸಂಗತಿ ಶಿವು ಅವರನ್ನು ಸೀದಾ ಪಶುವೈದ್ಯರತ್ತ ಕರೆದೊಯ್ಯುತ್ತದೆ. ಬೆಕ್ಕು ಸೇರಿದಂತೆ ಪ್ರಾಣಿಗಳಿಗೆ ಜ್ವರ ಬಂದರೆ ತಾಪಮಾನ ಅಳೆಯುವುದೆಲ್ಲಿ ಎಂಬ ಕುತೂಹಲ ನಿಮ್ಮಲ್ಲಿ ಮೂಡಿಸುತ್ತದೆ. ಕೊನೆಗೆ ಆ ರೂಢಿ ಮಾತು ‘ಬೆಂಕಿಗೆ ಜ್ವರ’ ಎಂದಿರಬಹುದೆಂಬ ಊಹೆಯನ್ನು ಖಚಿತಪಡಿಸುತ್ತದೆ, ಥೇಟ್ ‘ಸೂರ್ಯಂಗೇ ಟಾರ್ಚಾ, ಸರಸ್ವತಿಗೇ ಟ್ಯೂಷನ್ನಾ’ಗಳಂಥ ತುಂಟ ಪ್ರಶ್ನೆಗಳಂತೆ. ಈ ಊಹೆ ಸುಖಾಸುಮ್ಮನೆ ಬರುವುದಿಲ್ಲ, ಕನ್ನಡ ವಿದ್ವಾಂಸ ಶೇಷಶಾಸ್ತ್ರಿಯವರ ತರ್ಕದ ಸಮಜಾಯಿಶಿಯೂ ಸಿಗುತ್ತದೆ. ಸಣ್ಣ ಹೊಳಹೊಂದರ ಹಿನ್ನೆಲೆಯನ್ನು ಜಾಲಾಡುವ ಶಿವು ಅವರ ಜಾಣ್ಮೆಗೆ ನೀವು ತಲೆದೂಗಲೇಬೇಕು. ಯಾರ ಮನೆಯಲ್ಲಿ ಜಿರಳೆಯಿರುವುದಿಲ್ಲ? ಶಿವು ಅವರ ಮನೆಗೆ ಬಂದ ನೆಂಟರ ಸಂಸಾರ ಬೆಳೆಯುವ ಪರಿಯನ್ನು ಅಚ್ಚರಿಯಿಂದಲೇ ಗಮನಿಸುತ್ತಾರೆ. ಹಕ್ಕಿಯೊಂದು ಗೂಡು ಕಟ್ಟುವುದು, ಅದರ ಮೊಟ್ಟೆಯೊಡೆದು ಮರಿ ಹೊರಬರುವುದು ಸ್ವತಃ ಛಾಯಾಗ್ರಾಹಕರಾದ ಶಿವು ಅವರ ಕಣ್ಣಿಗೆ ಮನಮೋಹಕ ದೃಶ್ಯಾವಳಿಗಳನ್ನು ಒದಗಿಸುತ್ತದೆ. ತಮ್ಮೆಲ್ಲ ಅನುಭವಗಳನ್ನು ಗೆಳೆಯರೊಂದಿಗೆ ಹಂಚಿಕೊಳ್ಳುವ ಚಪಲದ ಶಿವು, ಒಳ್ಳೆಯ ‘ಬ್ಲಾಗ್’ ಬರಹಗಾರರೂ ಹೌದು. ಇಂಟರ್ನೆಟ್ ಮೂಲಕ ಕನ್ನಡ ನುಡಿ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವವರು. ಹಿಂದಿನ ಪುಸ್ತಕದಲ್ಲಿಲ್ಲದ ವಿಶೇಷತೆ ಈ ಪುಸ್ತಕದಲ್ಲಿದೆ, ಅದುವೇ ಮಡದಿಯ ಪ್ರಸ್ತಾಪ. ಹೆಂಡತಿಯೊಂದಿಗೆ ನಡೆಸುವ ಸರಸ ಸಂಭಾಷಣೆಗಳನ್ನು ಬಹುತೇಕ ಯಥಾವತ್ತಾಗಿ ಪ್ರಬಂಧದೊಳಗೆ ಇಳಿಸಲು ಶಿವು ಯಾವುದೇ ಕಷ್ಟ ಪಟ್ಟಿಲ್ಲ. ಪ್ರತಿಯೊಂದು ಪ್ರಬಂಧದಲ್ಲೂ ಮಿಸ್ಸೆಸ್ ಶಿವು ತಪ್ಪದೇ ಮಿಂಚಿದ್ದಾರೆ. ಶಿವು ಅವರ ಎಲ್ಲ ‘ಹುಚ್ಚಾಟ’ಗಳನ್ನೂ ತಾಳ್ಮೆಯಿಂದ ಸಹಿಸಿಕೊಳ್ಳುತ್ತಿರುವ ಆಕೆಗೆ ನ್ಯಾಯಯುತವಾದ ಗೌರವ ಸಲ್ಲಿಸಿದ್ದಾರೆ. ಹಾಗೆಯೇ ‘ನಾ ನಿನ್ನ ಮದುವೆಯಾಗೋಲ್ಲ ಅಂದೆ, ಅವಳು ಬ್ರಹ್ಮಕುಮಾರಿಗೆ ಸೇರಿದಳು’ ಎಂಬಲ್ಲಿಗೆ ಅವರದೇ ಅನುಭವ ಭಟ್ಟಿಯಿಳಿದಿದೆ. ಅವರ ಬರಹ ಧಾಟಿಯ ಚಿಕ್ಕದೊಂದು ಸ್ಯಾಂಪಲ್ ಅನ್ನು ಇಲ್ಲಿ ಉಲ್ಲೇಖಿಸಲೇಬೇಕು. ‘ಹೇಳಿ ಕೇಳಿ ಸಿಟಿ ಪಾರಿವಾಳಗಳು. ಸಿಟಿ ಜನರ ಹಾಗೆ ಇಲ್ಲಿ ಬದುಕಲು ನಾಚಿಕೆ, ಮಾನ, ಮರ್ಯಾದೆ ಎಲ್ಲವನ್ನೂ ಬಿಟ್ಟರೆ ಹಾಗೂ ಆಗಾಗ ತಮ್ಮ ಹಕ್ಕನ್ನೂ ನೆನಪಿಸುತ್ತಿದ್ದರೆ ಮಾತ್ರ ಇಲ್ಲಿ ಬದುಕಲು ಸಾಧ್ಯ ಅಂತ ಇವಕ್ಕೂ ಅನಿಸಿರಬೇಕು’. ಎರಡೇ ವಾಕ್ಯಗಳಲ್ಲಿ ಜಂಜಡವಾಗುತ್ತಿರುವ ಮಹಾನಗರಗಳ ಬದುಕನ್ನು ವರ್ಣಿಸುತ್ತಾರೆ. ಸ್ವಾರ್ಥ, ಸ್ವಹಿತಕ್ಕಾಗಿ ಮಾನವೀಯ ಸಂಬಂಧಗಳೇ ಕುಸಿಯುತ್ತಿರುವ ಬಗ್ಗೆ ವ್ಯಥೆಪಡುತ್ತಾರೆ. ಶಿವು ಅವರ ಪ್ರಬಂಧಗಳಲ್ಲಿ ಮಲ್ಲೇಶ್ವರ ರೈಲು ನಿಲ್ದಾಣದಲ್ಲಿ ಮಾಲ್ಗುಡಿ ಡೇಸ್ನ ಘಟನೆಗಳು ಜೀವಂತವಾಗುತ್ತವೆ. ತಲೆಗೂದಲುಗಳ ಪುರಾಣದಲ್ಲಿ, ಯಶವಂತಪುರದ ಸಂತೆಯಲ್ಲಿ ನಮ್ಮದೇ ಮುಖಗಳನ್ನು ಕನ್ನಡಿಯಲ್ಲಿ ಕಂಡ ಹಾಗಾಗುತ್ತದೆ. ಟೆನ್ಷನ್ ಬರಲೇ ಬೇಕು, ಬಾಲ್ಡಿಯಾಗಲೇಬೇಕು, ಟೆನ್ಷನ್ ಮನುಷ್ಯನಿಗೆ ಬರದೇ ಮರಕ್ಕೆ, ಪ್ರಾಣಿಗೆ, ಪಕ್ಷಿಗಳಿಗೆ ಬರುತ್ತಾ .. ಹಾಗೇ ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ …! ಎಂದು ಅಚ್ಚರಿ ಪಡುವಾಗ ಹೇರ್ ಕಟಿಂಗ್ ಸಲೂನಿನವನ ಬಾಯಲ್ಲಿ ನಿತ್ಯ ಅನುಭವಗಳ ಜತೆಗೆ ತತ್ವಜ್ಞಾನವನ್ನು ಲಿಂಕಿಸುತ್ತಾರೆ. ಒಂದೊಂದೇ ಪ್ರಬಂಧಗಳನ್ನು ಓದುತ್ತಿದ್ದಂತೆ ಯಶವಂತಪುರದ ವಾರದ ಸಂತೆಯಲ್ಲಿ ನೆಟ್ಟಗೆ ಖರೀದಿ ಮಾಡಲಾಗದ ಗಂಡನಾಗುತ್ತೀರಿ. ಮೆಟ್ರೋಗಾಗಿ ಅಗೆದ ರಸ್ತೆಯಲ್ಲಿ ಧೂಳು ತಿನ್ನುತ್ತಾ ಟೂ-ವೀಲರ್ ಓಡಿಸುವಾಗ ಹಾದಿಬದಿಯ ಸ್ಟಾಲ್ ಕಂಡೊಡನೆಯೇ ನಿಲ್ಲಿಸುವ ಟೀ-ಚಪಲಿಗರಾಗುತ್ತೀರಿ. ಟೂ-ವೀಲರ್ ಕನ್ನಡಿ ಒಡೆದಾಗ ಹಿಂಬದಿಯ ವಾಹನಗಳ ಹುಡುಗಿಯರು ಕಾಣಲಿಲ್ಲವೆಂದು ಪರಿತಪಿಸುತ್ತೀರಿ. ಶಾಲಾದಿನಗಳಲ್ಲಿ ಗೆಳತಿಯೊಂದಿಗೆ ‘ಗುಬ್ಬಿ ಎಂಜಲಿನಲ್ಲಿ’ ಚಾಕೊಲೇಟ್ ಹಂಚಿಕೊಂಡವರಲ್ಲಿ ನೀವೂ ಒಬ್ಬರಾಗಿದ್ದರೆ, ಆ ‘ಸವಿ’ನೆನಪುಗಳ ಮರುಮೆಲುಕಿಗೆ ಪುಸ್ತಕದ ಒಂದೊಂದೇ ಪ್ರಬಂಧಗಳನ್ನು ಆಸ್ವಾದಿಸಲಿದ್ದೀರಿ. ಶಿವು ಉತ್ತಮ ಛಾಯಾಗ್ರಾಹಕ. ‘ಪಾರಿವಾಳಗಳ ಸಂಸಾರ’ವೊಂದು ಇವರ ಮನೆಯಲ್ಲಿ ಗೂಡು ಕಟ್ಟಿದಾಗ ಫೋಟೋಗಳನ್ನು ತೆಗೆಯಲು ಇವರು ಪಟ್ಟ ಪಾಡು ಪ್ರಬಂಧವಾಗಿ ರೂಪುಗೊಂಡಿದೆ. ಇಂಥ ಫೋಟೋಗ್ರಫಿ ಅನುಭವಗಳು ಚಿತ್ರಗಳ ಸಮೇತ ಪುಸ್ತಕ ರೂಪದಲ್ಲಿ ಪ್ರಕಟವಾಗಲಿ. ಹಾಲ್ದೊಡ್ಡೇರಿ ಸುಧೀಂದ್ರ ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಹಾಗೂ ವಿಜ್ಞಾನ ಬರಹಗಾರ ಡಾ.ಆಜಾದ್.ಐ.ಎಸ್ ಅವರ ಜಲನಯನ ಪುಸ್ತಕದ ವಿವರಗಳು ಓದು ಬಝಾರ್‌ನಲ್ಲಿ]]>

‍ಲೇಖಕರು avadhi

August 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This