‘ಪ್ರಜಾವಾಣಿ’ಯಲ್ಲಿ ಸಣ್ಣ ಕಥೆಗಳ ಕಂಪು

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

|ಕಳೆದ ಸಂಚಿಕೆಯಿಂದ |

ಸಾಹಿತ್ಯ ಪ್ರಕಟಣೆ ಮತ್ತು ವರ್ಧಿಷ್ಣು ಲೇಖಕರನ್ನು ಪ್ರೋತ್ಸಾಹಿಸವ ಮೂಲಕ ಕರ್ನಾಟಕ ಸಂಸ್ಕೃತಿಗೆ ‘ಪ್ರವಾ’ ಕೊಡುಗೆ ಗಣನೀಯವಾದುದೆಂದು ಈಗಾಗಲೇ ಹೇಳಿದ್ದೇನೆ. ಅದನ್ನು ನಿರ್ದಿಷ್ಟವಾಗಿ ಗುರುತಿಸಲು ಒಂದೆರಡು ನಿದರ್ಶನಗಳನ್ನು ನೋಡಬಹುದು. ವಿಶೇಷವಾಗಿ ಸಣ್ಣ ಕಥೆ ಮತ್ತು ಕಾವ್ಯದ ಮೂಲಕ ಪತ್ರಿಕೆ ಈ ಮಹತ್ಕಾರ್ಯವನ್ನು ನಡೆಸಿತು. ದೀಪಾವಳಿ ಕಥಾ ಸ್ಪರ್ಧೆ, ವಿಶೇಷಾಂಕದ ವಿಶೇಷ ಕಥೆಗಳಿಂದ, ಕಾವ್ಯಗಳಿಂದ ಹೊಸಪೀಳಿಗೆಯ ಕವಿಗಳನ್ನೂ ಕಥೆಗಾರರನ್ನು ಬೆಳೆಸಿದ ಪರಿಯಲ್ಲೇ ಪತ್ರಿಕೆಯ ಸಾಂಸ್ಕೃತಿಕ ಕಾಳಜಿ
ಸ್ಪಷ್ಟವಾಗುತ್ತದೆ.

ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದವರು ಮುಂದೆ ನುರಿತ ಕಥೆಗಾರರಾಗಿ ಬೆಳೆದದ್ದು ಸಾಪು ಮತ್ತು ವಿಶೇಷ ಸಂಚಿಕೆಗಳಲ್ಲಿ. ನವ್ಯದಂತೆಯೇ, ದಲಿತ, ಬಂಡಾಯ ಚಳವಳಿಗಳ ಕಥೆಗಾರರನ್ನು ‘ಪ್ರವಾ’ ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಿತು. ಇವರ ಕೃತಿಗಳಲ್ಲಿ ಕರ್ನಾಟಕದಲ್ಲಿನ ವಿವಿಧ ಸಂಸ್ಕೃತಿಗಳು, ಅಲ್ಲಿನ ಬಹುತ್ವಗಳು ಪ್ರಕಟಗೊಂಡವು. ಚರ್ಚೆ, ವಿಚಾರವಿಮರ್ಶೆಗಳ ನಿಕಷಕ್ಕೆ ಒಡ್ಡಿಕೊಂಡವು. ಇದೆಲ್ಲದರ ಪರಿಣಾಮವೆಂಬಂತೆ ಹೊಸ ಕಥನ ಸಂಸ್ಕೃತಿಯೊಂದು ಆವಿರ್ಭವಿಸಿತು. ಅಲ್ಲಿಯತನಕ ಮಾಸ್ತಿ ಕಥಾ ಪರಂಪರೆಯನ್ನು ಚರ್ಚಿಸುವುದರಲ್ಲಿ ನಿರತವಾಗಿದ್ದ ಕನ್ನಡ ವಿಮರ್ಶೆ ಹೊಸ ಪರಂಪರೆಯೊಂದನ್ನು ಸೃಷ್ಟಿಸುವ ಸಾಮಾರ್ಥ್ಯವಿದ್ದ ಈ ಹೊಸ ಪೀಳಿಗೆಯ ಕಥೆಗಾರರರನ್ನು ಗಮನಿಸುವುದು ಅನಿವಾರ್ಯವಾಯಿತು.

ನವ್ಯ ಕಾವ್ಯದಲ್ಲಿ, ಗೋಪಾಲಕೃಷ್ಣ ಅಡಿಗ, ಗಂಗಾಧರ ಚಿತ್ತಾಲ, ರಾಮನುಜನ್, ರಾಮಚಂದ್ರ ಶರ್ಮ, ತಿರುಮಲೇಶ, ಚಂದ್ರಶೇಖರ ಕಂಬಾರ, ಮೊದಲಾದವರ ರಚನೆಗಳಲ್ಲಿ ಕಂಡಬರುವ ಸಾಂಸ್ಕೃತಿಕ ಮುಖಾಮುಖಿ ಮತ್ತು ಶೋಧನೆಗಳನ್ನು ದಲಿತ, ಬಂಡಾಯ ಚಳವಳಿಗಳ ಸಿದ್ದಲಿಂಗಯ್ಯ, ರಂಜಾನ್ ದರ್ಗ ಎಸ್.ಜಿ.ಸಿದ್ದರಾಮಯ್ಯ, ಪ್ರತಿಭಾ ನಂದಕುಮಾರ್, ಚನ್ನಣ್ಣ ವಾಲಿಕಾರ, ಬರಗೂರುರಾಮಚಂದ್ರಪ್ಪ, ಅರವಿಂದ ಮಾಲಗತ್ತಿ, ಸುಕನ್ಯಾ ಮಾರುತಿ ಮೊದಲಾದವರ ಕಾವ್ಯದಲ್ಲಿ ಗೋಚರಿಸತೊಡಗಿದ್ದನ್ನು ನಾವು ಕಾಣುತ್ತೇವೆ.

ಸಾಂಸ್ಕೃತಿಕ ಮೊನಚಿನ ಸಾಹಿತ್ಯ ನಿರ್ಮಿತಿಯ ಈ ಕಾಲಘಟ್ಟದಲ್ಲೇ ಇನ್ನೋಂದಷ್ಟು ಜನ ಹೊಸ ಕಥೆಗಾರರರು ಹುಟ್ಟಿಕೊಂಡರು. ವಿವೇಕ ಶಾನುಭಾಗ, ಎಸ್‌ದಿವಾಕರ, ಜಯಂತ ಕಾಯ್ಕಿಣಿ, ರಾಘವೇಂದ್ರ ಪಾಟೀಲ, ಕೆ. ಸತ್ಯನಾರಾಯಣ, ಕುಂ.ವೀರಭದ್ರಪ್ಪ, ವೈದೇಹಿ ಮೊಗಳ್ಳಿ ಗಣೇಶ್, ಅಮರೀಶ ನುಗಡೋಣಿ ಈ ಹೊಸ ಕಥೆಗಾರರಲ್ಲಿ ಪ್ರಮುಖರು. ಇವರುಗಳನ್ನು ನವ್ಯೋಬಂಡಾಯೋತ್ತರ ಪೀಳಗೆ ಎಂದು ಕರೆಯಬಹುದೇನೊ. ನವ್ಯ ಮತ್ತು ಬಂಡಾಯ ಇವರೆಡರ ಗುಣಧರ್ಮಗಳನ್ನು ಅರಗಿಸಿಕೊಂಡು ತಮ್ಮದೇ ಅನನ್ಯತೆಯನ್ನು ಬೆಳೆಸಿಕೊಂಡಿರುವುದು ಇವರ ವೈಶಿಷ್ಟ್ಯ. ಇವರ ಕಥೆಗಳಲ್ಲಿ ನವ್ಯದ ಕಲಾತ್ಮಕ ಶಿಸ್ತಿದೆ, ಭಾಷೆಯನ್ನು ಸೃಜನಶೀಲವಾಗಿ ಬಳಸಿಕೊಳ್ಳುವ ಪ್ರತಿಭೆ ಇದೆ, ವಿವಿಧ ಸಾಮಾಜಿಕವರ್ಗಗಳ ದನಿ ಇದೆ. ಇವರೆಲ್ಲರೂ ʼಪ್ರಜಾವಾಣಿ’ ಮತ್ತು ʼಸುಧಾ’ದಲ್ಲಿ ಬೆಳೆದ ಕಥೆಗಾರರು.

ಒಂದು ಗಾಢವಾದ ಶ್ರದ್ಧೆಯಿಂದ ಬದುಕಿನ ವ್ಯವಹಾರಗಳನ್ನೆಲ್ಲ, ಬಿಡಿಬಿಡಿಯಾಗಿ ಹಾಗೂ ಅವುಗಳ ಒಟ್ಟಂದದ ಪರಿಣಾಮಗಳಲ್ಲಿ ಕಟ್ಟಿಕೊಡುವ, ವ್ಯಾಖ್ಯಾನಿಸುವ,ಬೆಲೆಕಟ್ಟುವ ಒಂದು ಸಾತ್ವಿಕ ಪ್ರಯತ್ನವನ್ನು ನಾನು ಇವರ ಕಥೆಗಳಲ್ಲಿ ಗಮನಿಸಿದೆ. ಇದು ಮಾಸ್ತಿಯವರ ಪರಂಪರೆಯ ಹೊಸ ಆಯಾಮ ಎಂದು ತೋರಿತು. ಪತ್ರಿಕೆಗಳು ಇದನ್ನು ಪ್ರೋತ್ಸಾಹಿಸ ಬೇಕು, ಪೋಷಿಸ ಬೇಕು ಎನ್ನಿಸಿ ಇವರುಗಳ ಬೆನ್ನು ಹತ್ತಿದೆ. ಎದುರಿಗೆ ಸಿಕ್ಕಾಗ “ಒಂದು ಕಥೆ ಬರೆದುಕೊಡಿ” ಎಂದು ವಿನಂತಿಸುವುದರೊಂದಿಗೆ ಪತ್ರಗಳನ್ನೂ ಬರೆಯುತ್ತಿದ್ದೆ. ಇವರ ಕಥೆಗಳು ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದಾಗ “ನಾನು ಸೋತೆ” ಎಂದು ಮನಸ್ಸು ಖಿನ್ನವಾಗುತ್ತಿತ್ತು ಇದು ಸರಿಯಲ್ಲ. ಲೇಖಕರಿಗೆ ತಮಗೆ ಬೇಕಾದ ಪತ್ರಿಕೆಗೆ ಕೊಡುವ ಸ್ವಾತಂತ್ರ್ಯವಿದೆ ಎಂದು ವಿವೇಕ ಮೊಟಕುತಿದ್ದರೂ ಒಮ್ಮೆ ಹಿಗಾಯಿತು.

ನಮ್ಮ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ವರ್ಷಾಚರಣೆಯ ಮರುವರ್ಷ. ಒಂದು ಭಾನುವಾರ ಕನ್ನಡ ʼಪ್ರಭಾ’ ಪುರವಣಿಯಲ್ಲಿ ಕೆ.ಸತ್ಯನಾರಾಯಣ ಅವರ ‘ವಿಕ್ಟೋರಿಯಾ ಮಗ ದೇವಲಿಂಗು’ ಕಥೆ ಪ್ರಕಟವಾಯಿತು. ಓದಿದೆ. ಕಥೆ ತುಂಬ ಸಾಂದರ್ಭಿಕವಾಗಿಯೂ ಮಾರ್ಮಿಕವಾಗಿಕಯೂ ನನಗೆ ತುಂಬ ಹಿಡಿಸಿತು. ಇದು ನಾನು ಪ್ರಕಟಿಸಬೇಕಾಗಿದ್ದ ಕಥೆ. ವೈಎನ್ಕೆ ಹೇಗೆ ಇದನ್ನು ನನ್ನಿಂದ ಹಾರಿಸಿಕೊಂಡು ಹೋದರು ಎಂಬ ಭಾವನೆ ಸುಳಿದು, ಒಂದು ಕ್ಷಣ ವೈಎನ್ಕೆ ನನ್ನ ಪ್ರತಿಸ್ಪರ್ಧಿ ಖಳನಾಯಕನಂತೆ ತೋರಿ ಕಸಿವಿಸಿಯಾಯಿತು. ಆಗ ಸತ್ಯನಾರಾಯಣ್ ಮದ್ರಾಸಿನಲ್ಲಿದ್ದರು. ಕೂಡಲೇ ಅವರಿಗೆ ಫೋನ್ ಮಾಡಿ”…ದೇವಲಿಂಗು ‘ಪ್ರವಾ’ದಲ್ಲಿ ಪ್ರಕಟವಾಗಬೇಕಾದ ಕಥೇ, ನೀವು ಹೇಗೆ ಅದನ್ನು ಕಪ್ರಗೆ ಕೊಟ್ಟಿರಿ” ಎಂದು ಸತ್ಯನಾರಾಯಣರ ಕಥೆಗಳ ಹಕ್ಕುಸ್ವಾಮ್ಯ ಪಡೆದವನಂತೆ ಕೇಳಿದೆ.

ಒಳ್ಳೆಯ ಕಥಗಳನ್ನು ‘ಪ್ರವಾ’ದಲ್ಲಿ ನಾನೇ ಪ್ರಕಟಿಸಬೇಕು, ಬೇರೊಬ್ಬರಿಗೆ ಬಿಟ್ಟಕೊಡಬಾರದು, ನಾನು ನನ್ನ ಕೆಲಸದಲ್ಲಿ ಸೋತನೆ ಇತ್ಯಾದಿ ಭಾವನೆಗಳು ಆ ಕ್ಷಣದಲ್ಲಿ ನನ್ನಿಂದ ಮೇಲಿನ ಮಾತುಗಳನ್ನು ಆಡಿಸಿದ್ದವು. ಹಾಗೇ ದುಡುಕಿ ಸತ್ಯನಾರಾಯಣರ ಜೊತೆ ಮಾತನಾಡಿದ್ದನ್ನು ಜ್ಞಾಪಿಸಿಕೊಂಡರೆ ಈಗ “ಹಾಗೆ ಮಾಡಬಾರದಿತ್ತು” ಎನ್ನಿಸುತ್ತದೆ. ಇಂಥ ಅಲೋಚನೆ ನಮ್ಮ ಲೇಖಕರಲ್ಲೂ ಇದೆ. ಕೆಲವರಿಗೆ ತಾವು ಬರೆದದ್ದೆಲ್ಲವೂ ‘ಪ್ರವಾ’, ‘ಸುಧಾ’ಗಳಲ್ಲೇ ಪ್ರಕಟವಾಗಬೇಕೆನ್ನುವ ಬದ್ಧತೆ ಇದ್ದುದನ್ನುನಾನು ಕೇಳಿದ್ದೇನೆ. ನಮ್ಮ ಕೆಲವು ಕಥೆಗಾರ್ತಿಯರಿಗಂತೂ ತಾವು ಬರೆದ ಕಥೆ/ಕಾದಂಬರಿಗಳು ‘ಸುಧಾ’ದಲ್ಲೇ ಪ್ರಕಟವಾಗಬೇಕೆಂಬ ವಾಂಛೆ. ಇದಕ್ಕಾಗಿ ಸಂಪಾದಕರು ತೋರಿಸಿದ ಓರಕೋರೆಗಳನ್ನು ಪರಿಷ್ಕರಿಸಿ ಮತ್ತೆಮತ್ತೆ ಬರೆದು ವರ್ಷಗಟ್ಟಳೆ ಕಾಯ್ದವರಿದ್ದಾರೆ.

‘ಪ್ರವಾ’ ನವ್ಯ ಮತ್ತು ನವ್ಯೊತ್ತರ ಹೊಸ ಅಭಿರುಚಿ, ಹೊಸ ಸಂವೇದನೆಗಳನ್ನು ತನ್ನ ಓದುಗರಲ್ಲಿ ಬಿತ್ತನೆ ಮಾಡಿತೋ ಹಾಗೇ ಜನಪ್ರಿಯ ಕಥಾ ಸಂವೇದನೆಯೊಂದನ್ನು ತನ್ನ ಓದುಗರ ಚಿತ್ತಭಿತ್ತಿಯಲ್ಲಿ ಬಿತ್ತನೆ ಮಾಡಿ ಅದರ ಫಲವನ್ನು ಕೊಯಿಲು ಮಾಡಿದ ಕಿರ್ತಿ ‘ಸುಧಾ’ ಪತ್ರಿಕೆಯದು. ಕೃಷಿಕಾರ: ಎಂ.ಬಿ.ಸಿಂಗ್ ದೂರದರ್ಶನ ಇನ್ನೂ ಬಲುದೂರ ಎನ್ನಲಾಗುತ್ತಿದ್ದ ಆ ದಿನಗಳಲ್ಲಿ ಮಧ್ಯಾಹ್ನದ ಬಿಡುವಿನ ಗೃಹಿಣಿಯರಿಗೆ ಹಾಗೂ ನಿವೃತ್ತರಿಗೆ ಸುಧಾ’ ಮೆಚ್ಚಿನ ಸಂಗಾತಿ. ‘ಪ್ರಜಾಮತ’ ಕೃಶವಾಗುತ್ತಿತ್ತು. ‘ತರಂಗ’ ಬಂದಿರಲಿಲ್ಲ.

ಆ ಕಾಲ ಘಟ್ಟದಲ್ಲಿ ಸಿಂಗ್ ಅವರು ಮನೋರಂಜನೆ ಮತ್ತು ಮಾಹಿತಿ ಪ್ರಧಾನವಾದ ಕಥನ ಮಾರ್ಗವೊಂದಕ್ಕೆ ಬಾಗಿಲು ತೆರೆದರು. ಸಿಂಗ್ ಅವರು ಸ್ವತಃ ಸೃಜನಶೀಲ ಬರಹಗಾರರಾಗಿದ್ದರೆ ಏನೆಲ್ಲ ಬರೆಯುತ್ತಿದ್ದರೋ ತಿಳಿಯದು. ಆದರೆ ಅವರ ತಲೆಯಲ್ಲಿ ಅನೇಕ ಹೊಳಹುಗಳಿದ್ದವು. ಅದನ್ನು ಅವರು ಟಿ.ಕ.ರಾಮರಾವ್, ಶಾರದೆ, ಉಷಾ ನವರತ್ನರಾಮ್, ಸು ದರ್ಶನ ದೇಸಾಯಿ, ಅನಂತ ರಾವ್, ವಿಜಯ ಸಾಸನೂರು ಅವರುಗಳೊಡನೆ ಹಂಚಿಕೊಂಡು ಕಾದಂಬರಿ ಬರೆಯಲು ಪ್ರೇರೇಪಿಸುತ್ತಿದ್ದರು. ಹೀಗೆ ಕಾದಂಬರಿಕಾರರಿಗೆ ಹೊಸ ಥೀಮ್ ಒಂದನ್ನು ಸೂಚಿಸಿ, ಬರೆಯಿಸಿ, ಹೊಸ ಓದುಗರನ್ನು ಸ್ರೃಷ್ಟಿಸಿಕೊಳ್ಳುವ ಕಲೆ ಸಿಂಗ್ ಅವರಿಗೆ ಚೆನ್ನಾಗಿತಿಳಿದಿತ್ತು. ಆ ರೀತಿ ಅವರು ಬರೆಸಿದ ಉಷಾ ನವರತ್ನರಾಂ ಅವರ ಕೊನೆಯ ಕಾದಂಬರಿ ವಿಮಾನಯಾನದ ಗಗನ ಸಖಿಯರ ಜೀವನ ಶೈಲಿ ಕುರಿತ ಕಾದಂಬರಿ.

ಸಿಂಗ್ ಸೂಚಿಸಿದ ಗಗನ ಸಖಿಯರ ಹಾರಾಟದ ಹಾಗೂ ಅವರ ನೆಲದ ಮೇಲಿನ ಬದುಕನ್ನು ಅಭ್ಯಸಿಸಲು ತಾವು ಹತ್ತು ಹನ್ನೆರಡು ಬಾರಿ ವಿಮಾನಯಾನ ಮಾಡಿದ್ದಾಗಿ ಶ್ರೀಮತಿ ಉಷಾನವರತ್ನ ರಾಮ್ ಅವರೇ ನನಗೆ ತಿಳಿಸಿದ್ದುಂಟು. ಅದೇ ರೀತಿ ವಿಜಯಸಾಸನೂರು ಮತ್ತು ಅವರ ಪತ್ನಿ ಶ್ರೀಮತಿ ವಿದ್ಯುಲ್ಲತಾ ಸಾಸನೂರು ಅವರಿಬ್ಬರನ್ನೂ ಕೂಡಿಸಿ ಒಂದು ಸಂಯುಕ್ತ ಕಾದಂಬರಿ ಬರೆಸುವ ಪ್ರಯೋಗ ಮಾಡಿದರು. ಸಿಂಗ್ ಅವರ ಇಂಥ ಪ್ರಯೋಗಗಳು ಫಲ ಕೊಟ್ಟವು. ಓದುಗರು, ವಿಶೇಷವಾಗಿ ಮಹಿಳಾ ಓದುಗರು ಇಂಥ ಕಾದಂಬರಿಗಳಿಗಾಗಿ ಕಾಯುತ್ತಿದ್ದರು. ಪ್ರಸರಣ ಸಂಖ್ಯೇಯೇ ಮಾನದಂಡವಾಗಿತ್ತು.

ಉಷಾ ನವರತ್ನ ರಾಮ್, ಶಾರದೆ, ಟಿ.ಕೆ.ರಾಮ ರಾವ್, ಸುದರ್ಶನ ದೇಸಾಯಿ, ಅನಂತರಾವ್ ಇವರ ಕಾದಂಬರಿಗಳ ಪ್ರಕಟಣೆ ಕಾಲದಲಿಸುಧಾ’ ಪ್ರಸಾರ ಐದು-ಹತ್ತು ಸಾವಿರ ಹೆಚ್ಚುತ್ತಿತ್ತು. ಧಾರವಾಹಿ ಮುಗಿದ ಕೋಡೆಲೇ ಈ ಸಂಖ್ಯೆಯೂ ಇಳಿಯುತ್ತಿತ್ತು. ಅಂದರೆ ಈ ಲೇಖಕರುಗಳಿಗೆ ಅವರದೇ ಆದ ಆಭಿಮಾನಿ ಓದುಗರಿದ್ದರು. ಹಾಗೆಯೇ ತೆಲುಗಿನ ಯೆಂಡಮೂರಿ. ಯೆಂಡಮೂರಿ ಐದು ಸಾವಿರಕ್ಕೆ ಕಡಿಮೆ ಸಂಭಾವನೆ ಸ್ವೀಕರಿಸುತ್ತಿರಲಿಲ್ಲ. ಅವರಿಗೆ ಅಷ್ಟು ಕೊಟ್ಟ ಮೇಲೆ ಅನುವಾದಕರಿಗೆ ಅದರಲ್ಲಿ ಅರ್ಧದಷ್ಟಾದರೂ ಕೊಡ ಬೇಡವೇ? ಪತ್ರಿಕೆಯ ಪ್ರಸಾರ ಹೆಚ್ಚತ್ತಿದ್ದುದರಿಂದ ಇದು ಗೌಣವಾಗುತ್ತಿತು. ಸಿಂಗ್ ಸಾಹೇಬರು ಇದಕ್ಕೆ ಆಡಳಿತ ಮಂಡಳಿಯ ಅನುಮತಿ ದೊರಕಿಸಿಕೊಂಡಿದ್ದರು. ಹೀಗೆ ಜನಪ್ರಿಯ ಕಥಾ ಸಂಸ್ಕೃತಿಯೊಂದನ್ನು ಬೆಳೆಸಿದ ಕೀರ್ತೀ ‘ಸುಧಾ’ಕ್ಕೆ ಸಲ್ಲುತ್ತದೆ. ದೂರದರ್ಶನ ಬಂದ ನಂತರ ಈ ಓದುಗರೆಲ್ಲ ಸಾಬೂನು ನಾಟಕ ಮಂಡಳಿಯ (ಸೋಪ್ ಅಪೇರಾ) ಥಳುಕುಬಳುಕಿಗೆ ಮಾರು ಹೋಗಿ ಮುದ್ರಣ ಮಾಧ್ಯಮವನ್ನು ಬರಡಾಗಿಸಿದ್ದು ಬೇರೆ ಕಥೆ.

ನಿಯತಕಾಲಿಕ ಪತ್ರಿಕೋದ್ಯಮದಲ್ಲಿ ಕಥನ ಸಂಸ್ಕೃತಿ ಮಹತ್ವ ರೀತಿಯದು. ನಾನು ‘ಸುಧಾ’ಗೆ ಹೋದ ಒಂದರೆಡು ವರ್ಷಗಳಲ್ಲಿ (೧೯೯೩-೯೪) ಇರಬೇಕು. ಒಂದು ದಿನ ಶ್ರೀಮತಿ ಆರ್. ಪೂರ್ಣೀಮಾ ನನ್ನ ಬಳಿ ಸಮಾಲೋಚನೆಗಾಗಿ ಬಂದವರು ಆರ್. ಅನುಪಮಾ ನಿರಂಜನ ಹೊಸ ಕಾದಂಬರಿಯೊಂದನ್ನು ಬರೆದಿದ್ದಾರೆ” ಎಂದರು. “ಹೌದೆ, ಹಾಗಿದ್ದಲ್ಲಿ ಹಸ್ತಪ್ರತಿ ಇಸ್ಕೊಂಡು ಬನ್ನಿ, ಧಾರಾವಾಹಿಯಾಗಿ ಪ್ರಕಟಿಸಬಹುದೋ ನೋಡೋಣ” ಎಂದೆ. ಪೂರ್ಣಿಮಾ ಅಂದೇ ಅನುಪಮಾ ಅವರನ್ನು ಸಂಪರ್ಕಿಸಿ ಮತ್ತೆ ಬಂದರು. “ಸರ್ ಅವರೊಂದು ಶರತ್ತು ಹಾಕುತ್ತಿದ್ದಾರೆ”? “ಏನದು. ೫೦೦೦ ಸಾವಿರ ಸಂಭಾವನೆ ಕೇಳುತ್ತಿದ್ದಾರೆ?’ ಆಗ ನಮಗೆ ಒಂದು ಧಾರಾವಾಹಿಗೆ ೩೦೦೦ಕ್ಕಿಂತ ಹೆಚ್ಚು ಸಂಭಾವನೆ ಕೊಡುವ ಅಧಿಕಾರವಿರಲಿಲ್ಲ. ಯಂಡಮೂರಿ ಹೊರತಾಗಿ. ಯೆಂಡಮೂರಿ ಐದುಸಾವಿರ ಕೊಡುವುದು ಸಾದ್ಯವಾದರೆ, ಕನ್ನಡತಿ ಅನುಪಾಮಾ ಕೃತಿಗೂ ಅದು ಸಾಧ್ಯವಾಗಬೇಕೆನ್ನಿಸಿತು ನನಗೆ. “ಆಗಲಿ” -ಎಂದೆ. ಪೂರ್ಣೀಮಾ ಹಸ್ತಪ್ರತಿ ತಂದರು. ಕಾದಂಬರಿ ಚೆನ್ನಾಗಿತ್ತು. ಧಾರವಾಹಿ ಪ್ರಕಟಿಸಿದೆವು. ಶ್ರೀ ಹರಿಕುಮರ್ ಅವರಿಗೆ ಅನುಪಮಾ ಅವರ ಕೋರಿಕೆ ಹಾಗೂ ಕಾದಂಬರಿಯ ವೈಶಿಷ್ಟ್ಯವನ್ನು ತಿಳಿಸಿದೆ. ಅವರು ಒಪ್ಪಿಗೆ ಕೊಟ್ಟರು. ಅನುಪಮಾ ಅವರ ಕಾದಂಬರಿ ನಮ್ಮ ಓದುಗರಿಗೆ ಪ್ರಿಯವಾಯಿತು. ಬಹುಶಃ ಅದು ಅವರು ಬರೆದ ಕೊನೆಯ ಕಾಡಂಬರಿ.

December 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

೧ ಪ್ರತಿಕ್ರಿಯೆ

  1. ನೂತನ ದೋಶೆಟ್ಟಿ

    ಸರ್
    ಈ ಲೇಖನ ಆಗಿನ ಪತ್ರಿಕೆಗಳ ಹಾಗೂ ಕಥಾಲೋಕದ ಕಿರು ಪರಿಚಯವಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: