ಗೆಜ್ಜೆ ಕಟ್ಟಿ ಅಜ್ಜಿ ಮನೆಯಲ್ಲಿ

img_18851

ಕೆ ಅಕ್ಷತಾ

ಪ್ರಾಥಮಿಕ ಶಾಲೆಯಲ್ಲಿದ್ದ ದಿನಗಳು. ಬೇಸಿಗೆ ರಜೆ ಬಂತೆಂದರೆ ಎಲ್ಲಾ ಗೆಳತಿಯರು ಅವರವರ ಅಜ್ಜಿ ಮನೆಗೆ ಹೋಗಿ ಬಿಡೋರು. ನನಗೆ ಹೋಗಲಿಕ್ಕೆ ಅಜ್ಜಿಯ ಮನೆಯೇ ಇಲ್ಲ ಅಂತ ಬೇಜಾರಾಗೋದು. ಅಮ್ಮನ ಅಮ್ಮ ನಮ್ಮನೆಯಲ್ಲೆ ಇದ್ದರು. ಅಪ್ಪನ ಅಮ್ಮನ ಮನೆಯು ನಮ್ಮನೆಗೆ ಒಂದರ್ಧ ಮೈಲಿ ದೂರದಲ್ಲಿ ಕಾಡೊಳಗಿತ್ತು. ನಾನು ಶಿಶುವಿಹಾರದಲ್ಲಿದ್ದಾಗ ಅಲ್ಲಿನ ಟೀಚರ್ ಗೊಬ್ಬೆ ಸೀರೆ ಉಟ್ಟ ಒಬ್ಬ ಅಜ್ಜಮ್ಮನನ್ನು ತೋರಿಸಿ ಅವರು ನಿಮ್ಮಜ್ಜಿ ಕಣೇ ಅಂದಿದ್ರು. ನಾನು ಇಲ್ಲ ಇವರು ನಮ್ಮಜ್ಜಿಯಲ್ಲ, ನಮ್ಮಜ್ಜಿ ಮನೇಲಿದ್ದಾರೆ ಅಂದಿದ್ದೆ. ಆದರೂ ಅನುಮಾನ ಕಾಡಿ ಅಮ್ಮನ ಬಳಿ ಈ ಬಗ್ಗೆ ಕೇಳಿದಾಗ; ಹೌದು ಅವರು ನಿಮ್ಮ ಅಣ್ಣ(ಅಪ್ಪ)ನ ಅಮ್ಮ ಅಂದಿದ್ರು. ಅವರ್ಯಾಕೆ ನಮ್ಮನೆಗೆ ಬರೋಲ್ಲ ಅನ್ನೋ ಪ್ರಶ್ನೆ ಕಾಡಿದ್ರೂ ಕೇಳೋಕೆ ಹೋಗ್ಲಿಲ್ಲ. ನನ್ನ ಅಪ್ಪ ಅಮ್ಮ ಬೇರೆ ಬೇರೆ ಜಾತಿಯವರು ಆದ್ದರಿಂದ ಕಟ್ಟೇರಮನೆಯರು ನಮ್ಮನೆಗೆ ಬರೋಲ್ಲ ನಾವು ಅಲ್ಲಿಗೆ ಹೋಗೋಲ್ಲ ಅನ್ನೋದು ಮುಂದೆ ತಿಳೀತಾ ಹೋಯ್ತು. ಆಮೇಲೆ ನಿಧಾನಕ್ಕೆ ಆ ಮನೆಯಿಂದ ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ಅಕ್ಕ ಎಲ್ಲ ನಮ್ಮನೆಗೆ ಬರೋಕೆ ಶುರು ಮಾಡಿದ್ರು. ಅಪ್ಪನೂ ಆಗೀಗ ಆ ಮನೆಗೆ ನಮ್ಮನ್ನು ಕರ್ಕೊಂಡ್ಹೋಗೋರು. ಆದರೆ ಅಜ್ಜಿ, ದೊಡ್ಡಮ್ಮ ಮಾತ್ರ ನಮ್ಮನೆಗೆ ಬರ್ತಿರಲಿಲ್ಲ. ಅಮ್ಮನೂ ಅವರ್ಮನೆಗೆ ಹೋಗ್ತಿರಲಿಲ್ಲ. ಅಮ್ಮಮ್ಮ ನಮ್ಜೊತೆ ಇದ್ದಿದ್ದರಿಂದ ನನಗೇನೂ ಬೇರೆ ಅಜ್ಜಿ ಬೇಕೆನ್ನಿಸುತ್ತಾ ಇರಲಿಲ್ಲ.

XXL_-L-464377227ಕಲೆ: ಗುಜ್ಜಾರ್

ನಾನಾಗ ಐದನೇ ಕ್ಲಾಸಿನಲ್ಲಿದ್ದೆ, ಬೇಸಿಗೆ ರಜೆಯಿತ್ತು ನಮ್ಮಮ್ಮ ಟೀಚರಾಗಿದ್ರೂ ರಜೆಯಲ್ಲಿ ಪ್ರವಾಸ, ನೆಂಟರಮನೆ ಅಂತ ಎಲ್ಲಿಗೂ ಕರ್ಕೊಂಡು ಹೋಗ್ತಾ ಇರಲಿಲ್ಲ. ಮನೆಯಲ್ಲೆ ಕೆಲ್ಸ ಮಾಡ್ಕೊಂಡು ಇರಬೇಕಾಗಿತ್ತು. ಒಂದಿನ ಸಂಜೆ ಅಪ್ಪ, ಅಮ್ಮ, ತಂಗಿ,ತಮ್ಮ, ನಾನು ಎಲ್ಲ ಮಾತಾಡ್ತಾ ಕೂತಿದ್ವಿ. ಯಾವುದೋ ಮಾತಿಗೆ ಅಪ್ಪ ಇದ್ದೋರು `ಕಟ್ಟೇರಮನೆಯಲ್ಲಿ ಒಂದ್ವಾರ ಇದ್ದು ಬನ್ನಿ ನೋಡನಾ’ ಅಂತ ಸವಾಲೊಡ್ಡಿದರು. ಆಯ್ತು ನಾನಿದ್ದು ಬರ್ತೀನಿ ಅಂದೆ. ಹತ್ತಿರದಲ್ಲೆ ಇದ್ದರೂ ಒಂದು ರೀತಿಯಲ್ಲಿ ಅಪರಿಚಿತವಾಗಿಯೇ ಉಳಿದಿರುವ ಆ ಮನೆಯಲ್ಲಿ ಅದೂ ಒಂದ್ವಾರ ಉಳಿದುಕೊಳ್ಳಲು ತಮ್ಮ ಮಕ್ಕಳ್ಯಾರೂ ಇಷ್ಟು ಸುಲಭಕ್ಕೆ ಒಪ್ತಾರೆ ಅಂತ ಅಪ್ಪನೇ ನಂಬಿರ್ಲಿಲ್ಲ ಅನಿಸತ್ತೆ. ಅದಕ್ಕೆ ಇದೇ ಸಂದರ್ಭ ಅಂತ; `ಹೋದ ಪುಟ್ಟ ಬಂದ ಪುಟ್ಟ’ ಕಥೆಯಾಗಬಾರ್ದು, ಹೋದ ಮೇಲೆ ಅಲ್ಲಿ ಒಂದ್ವಾರ ಉಳಿದುಕೊಂಡೆ ಬರ್ಬೇಕು ಯಾವುದೇ ಕಾರಣಕ್ಕೂ ಮಧ್ಯದಲ್ಲೇ ಬರಬಾರ್ದು ಅಂದ್ರು. ನಾನು ಅಪ್ಪ ಹೇಳಿದಕ್ಕೆಲ್ಲ ಹೂಂ ಗುಟ್ಟಿದೆ. ಬೇಸಿಗೆ ರಜೆ ಮುಗಿಸಿ ಬಂದ ಗೆಳತಿಯರು ಅವರಜ್ಜಿ ಮನೆಯ ಪ್ರವಾಸ ಕಥನ ಹೇಳುವಾಗ ಒಂದು ರೀತಿಯ ಅನಾಥಭಾವ ಅನುಭವಿಸುತ್ತಿದ್ದ ನನಗೆ ಈ ಬಾರಿ ನನ್ನ ಕಥನವನ್ನು ಹೇಳುವ ಸಂದರ್ಭವನ್ನು ಅಪ್ಪ ಕಲ್ಪಿಸಿಕೊಡುತ್ತಿರುವಾಗ ಹೋಗಲೊಲ್ಲೆ ಎಂದು ಬಿಟ್ಟೇನೆ ನಾನು?

ಸರಿ, ಇವಳ ಬಟ್ಟೆ ಪ್ಯಾಕ್ ಮಾಡಿ, ಬಿಟ್ಟು ಬರ್ತೀನಿ ಅಂತ ಅಪ್ಪ ಕೂಡಲೇ ಹೊರಟು ಬಿಟ್ರು. ಅಮ್ಮ, ಅಮ್ಮಮ್ಮ ಇಬ್ರಿಗೂ ನಾನು ಅಜ್ಜಿ ಮನೆಗೆ ಕುಣಿದುಕೊಂಡು ಹೊರಟಿದ್ದು ಇರಿಸು ಮುರಿಸು ತಂದಿತ್ತು. ಆ ಮನೆ ಅಪ್ಪನನ್ನು ಬಿಟ್ಟು ಉಳಿದವರಿಗೆ ಅಪರಿಚಿತವಾಗಿ ಇದ್ದಿದ್ದೇ ಇದಕ್ಕೆ ಕಾರಣವಿರಬಹುದು. ಆದರೆ ನಾನೇ ಹೋಗ್ತೀನಿ ಅಂತ ನಿಂತ ಕಾಲಲ್ಲಿ ಹೊರಟಿರುವಾಗ ಬೇಡ ಹೋಗೋದು ಅಂತ ತಡೆದರೆ ಅಪ್ಪನಿಗೆ ನೋವಾಗ್ತದೆ ಅನ್ಕೊಂಡು ಸುಮ್ಮನಾದ್ರು. ಆದರೆ ಅಮ್ಮನ ಭಾವನೆಯನ್ನು ಅವರ ಕಣ್ಣುಗಳು ಸ್ಪಷ್ಟವಾಗಿ ಸಾರುತ್ತಿದ್ದವು. ಆದ್ದರಿಂದಲೇ ನಾನು ಅವುಗಳನ್ನು ದೃಷ್ಟಿಸುವ ಸಾಹಸಕ್ಕೆ ಹೋಗ್ಲಿಲ್ಲ. ಅಮ್ಮ ಜಾಣತನದಿಂದ ಒಂದೇ ಒಂದು ಜೊತೆ ಬಟ್ಟೆಯನ್ನು ಚೀಲಕ್ಕೆ ಹಾಕಿಕೊಟ್ರು. ನಾನು ನಂಗೆ ಒಂದೆ ಜೊತೆ ಬಟ್ಟೆ ಸಾಲಲ್ಲ, ಏಳು ದಿನಕ್ಕೆ ಏಳು ಜೊತೆ ಬಟ್ಟೆ ಬೇಕು ಅಂತಾ ಎಷ್ಟೇ ಹಠ ಹಿಡಿದ್ರೂ ಅಮ್ಮ ಕೇಳಲಿಲ್ಲ. ಕಟ್ಟೇರಮನೆಯೇನು ಕಾಶಿಯಲ್ಲಿಲ್ಲ. ಅಲ್ಲಿಂದ ಪ್ರಕಾಶ, ನರೇಂದ್ರ ಯಾರಾದ್ರೂ ಬರ್ತಾನೆ ಇರ್ತಾರೆ, ಅವರ ಹತ್ರ ಬೇಕಂದ್ರೆ ನಿನ್ನ ಬಟ್ಟೆ ಕಳಿಸಿಕೊಡ್ತೀನಿ ಅಂತ ಖಡಾ ಖಂಡಿತವಾಗಿ ಘೋಷಿಸಿ ನನ್ನ ಬಾಯಿ ಮುಚ್ಚಿಸಿದ್ರು.

ಅಪ್ಪ ಆಕ್ಷಣವೇ ನನ್ನನ್ನು ಹೊರಡಿಸಿಕೊಂಡು ಕಟ್ಟೇರಮನೆಗೆ ಹೋಗಿ ಅಲ್ಲಿ ಅಜ್ಜಿ ಮತ್ತು ಚಿಕ್ಕಮ್ಮಂಗೆ `ಇವಳು ಇಲ್ಲೊಂದ್ವಾರ ಇದ್ದು ಬರ್ತೀನಿ ಅಂತ ಇವರಮ್ಮಂಗೆ ಹೇಳಿ ಬಂದಿದ್ದಾಳೆ. ಇರ್ತಾಳೋ ನಾಳೇನೆ ಟೆಂಟ್ ಕೀಳ್ತಾಳೋ ನೋಡನಾ’ ಅಂತ ಹೇಳಿ ನನ್ನನ್ನ ಅಲ್ಲೆ ಬಿಟ್ಟು ವಾಪಾಸ್ ಹೋದ್ರು. ಅಜ್ಜಿ ಮನೆಯಲ್ಲಿ ಎರಡು ಸಂಸಾರಗಳು ವಾಸ ಮಾಡ್ತಿದ್ವು. ಒಂದು ಭಾಗದಲ್ಲಿ ಅಜ್ಜಿ ಚಿಕ್ಕಪ್ಪ, ಚಿಕ್ಕಮ್ಮ, ಮತ್ತೊಂದು ಭಾಗದಲ್ಲಿ ದೊಡ್ಡಪ್ಪ, ದೊಡ್ಡಮ್ಮ, ಅಣ್ಣ, ಅಕ್ಕ (ದೊಡ್ಡಪ್ಪನ ಮಕ್ಕಳು)ಇರುತ್ತಿದ್ದರು.

ಅಜ್ಜಿ ಮನೆಗೆ ಬಂದ ಅರೆಗಳಿಗೆಯಲ್ಲೇ ಬೇಸರವಾಗಲಿಕ್ಕೆ ಶುರುವಾಯ್ತು. ನಮ್ಮನೆಯಲ್ಲಾಗಿದ್ರೆ ರಾಶಿ, ರಾಶಿ ಪತ್ರಿಕೆ, ಪುಸ್ತಕಗಳಿರುತಿದ್ದವು. ಅವುಗಳನ್ನು ಓದುತ್ತಾ ಹಾಗೆ ಮೈ ಮರೆತು ಬಿಡುತ್ತಿದ್ದೆ. ಜೊತೆಗೆ ಅಕ್ಕಪಕ್ಕದ ಮನೆಯಲ್ಲಿ ಓರಗೆಯ ಗೆಳತಿಯರಿದ್ದರು. ಆದರೆ ಇಲ್ಲಿ ಎಲ್ಲಿ ಹುಡುಕಿದರೂ ಒಂದು ಪುಸ್ತಕ, ಪತ್ರಿಕೆ ಏನೂ ಸಿಗಲಿಲ್ಲ. ಅಕ್ಕಪಕ್ಕದಲ್ಲಿ ಮನೆಗಳು ಇರಲಿಲ್ಲ. ಕೊನೆಗೆ ಇಡೀ ಮನೆ ಶೋಧಿಸಿ ದೇವರ ಪಟದಡಿಯ ಕಪಾಟಿನಲ್ಲಿ ಸರ್ವಜ್ಞನ ವಚನಗಳು ಅನ್ನೋ ಪುಸ್ತಕ ಸಿಕ್ಕಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಅದನ್ನು ಮತ್ತೆ ಮತ್ತೆ ಓದಿದೆ.

ಅಜ್ಜಿ ಮನೆಯಲ್ಲಿ ಎಲ್ಲರಿಗೂ ಬೇಗ ಮಲಗಿ ಬೇಗ ಏಳೋ ಅಭ್ಯಾಸ ಇತ್ತು. ಅಜ್ಜಿ ಆ ದಿವಸ ನನ್ನನ್ನು ತಮ್ಮ ಪಕ್ಕ ನಡುಮನೆಯಲ್ಲಿ ಮಲಗಿಸಿಕೊಂಡ್ರು. ಆದರೆ ಮಲಗುತ್ತಿದ್ದಂತೆ ಗಾಢ ನಿದ್ದೆಗೆ ಜಾರುತಿದ್ದ ನನಗೆ ನನಗೆ ಎಷ್ಟು ಹೊತ್ತಾದ್ರೂ ನಿದ್ದೇನೆ ಬರ್ಲಿಲ್ಲ. ಚಿಕ್ಕಪ್ಪನ ಕೋಣೆಯಿಂದ ಹಿಟ್ಟು ಬೀಸ್ತಾ ಇರೋ ಶಬ್ದ ಬರ್ತಿತ್ತು. `ಅಜ್ಜಿ, ಚಿಕ್ಕಮ್ಮ ಈಗ್ಯಾಕೆ ಹಿಟ್ಟು ಬೀಸ್ತಿದಾರೆ’ ಅಂದೆ. ಅಜ್ಜಿ ನಿದ್ದೆಗಣ್ಣಲ್ಲೆ, ಹೂಂ ಹಿರೇರು ಗಾದೆ ಮಾಡಿದಾರಲ್ಲ, `ಹಗಲಿಡೀ ಹಾರಾಟ, ಗಂಡ ಬರೋ ಹೊತ್ತಿಗೆ ಗೂರಾಟ’ ಅಂತ ಇದೂ ಹಂಗೇಯ’ ಎಂದು ಜೋರಾಗೇ ಗೊಣಗಿದ್ರು. ನನಗೆ ಮಲಗಿದಲ್ಲೇ ಕಸಿವಿಸಿ ಆಗೋಕೆ ಶುರುವಾಯ್ತು. ಥೂ ಅಜ್ಜಿ ಎಷ್ಟು ಕೊಳಕು ಶಬ್ದ ಮಾತಾಡ್ತಾರಪ್ಪ, ಅಮ್ಮ ಇದಕ್ಕೆ ಹೋಗೋದು ಬೇಡ ಅಂದ್ರೇನೋ ಅನ್ನಿಸ್ತು. ಅಮ್ಮ ಕೊಂಕಣಿಯವರಾದ್ದರಿಂದ ಮನೆಯಲ್ಲಿ ಅಪ್ಪ ಒಬ್ಬರನ್ನು ಬಿಟ್ಟು ಎಲ್ಲರೂ ಕೊಂಕಣಿ ಮಾತಾಡ್ತಿದ್ವಿ. ಗಂಡ ಬರೋಹೊತ್ತಿಗೆ.., ಗೂರಾಟ ಇಂಥ ಶಬ್ದಗಳೆಲ್ಲ ಅಪರಿಚಿತವಾಗಿದ್ವು. ಜೊತೆಗೆ ಅಮ್ಮ ಮನೆಯಲ್ಲೂ ಸ್ಟ್ರಿಕ್ಟ್ ಟೀಚರ್ರೆ. ಅಮ್ಮನ ಲಿಸ್ಟ್ನಲ್ಲಿ ಕೆಲವು ಕೆಟ್ಟ ಪದಗಳು ಅಂತ ಇದ್ವು. ಅವನ್ನೂ ಯಾರೂ ಮಾತಾಡುವಂತಿರಲಿಲ್ಲ. ಒಂದುವೇಳೆ ಮಾತಾಡಿದ್ವಿ ಅಂದ್ರೆ ಶಿಕ್ಷೆ ಗ್ಯಾರಂಟಿ. ಈಗ ಅಜ್ಜಿ ಮಾತಾಡಿದ್ದು ಆ ಲಿಸ್ಟಿಗೆ ಸೇರಿತ್ತು. ಜೊತೆಗೆ ನಂಗೆ ಒಳಗೊಳಗೆ ಖುಷಿನೂ ಆಯ್ತು. ನಾನು ಓದುತ್ತಿದ್ದ ಕನ್ನಡ ಶಾಲೆಯಲ್ಲಿ ನನ್ನ ಗೆಳತಿಯರು ಆಡೋ ಎಷ್ಟೋ ಶಬ್ದಗಳನ್ನು ನಾನು ಅಮ್ಮನ ಹೆದರಿಕೆಯಿಂದ ಆಡ್ತಿರಲಿಲ್ಲ. ಆದರೀಗ ಅಜ್ಜಿ ಮನೆಯಲ್ಲಿ ಯಾರದೇ ಹೆದರಿಕೆ ಇಲ್ಲದೇ ಮಾತಾಡಬಹುದು ಅನ್ನಿಸ್ತು.

ನನ್ನ ಅಜ್ಜಿಯ ಮಾತುಕತೆ ಕೇಳಿಸಿ ಚಿಕ್ಕಪ್ಪ ಎದ್ದು ಬಂದು ನಿದ್ದೆ ಬರ್ಲಿಲ್ವಾ ಪಾಪು ಅಂದ್ರು, ನಾನು ಉಹೂಂ ಅಂದೆ. ಅವರು ನನ್ನ ಪಕ್ಕ ದಿಂಬು ಹಾಕ್ಕೊಂಡು ಒರಗಿ ಕಥೆ ಹೇಳಲಿಕ್ಕೆ ಸುರು ಮಾಡಿದ್ರು. ಅಸ್ಸಾಂನಲ್ಲಿ ಮಿಲಿಟ್ರಿಯಲ್ಲಿದ್ದ ಚಿಕ್ಕಪ್ಪ ಆಗ್ತಾನೆ ರಜಾ ಹಾಕಿ ಊರಿಗೆ ಬಂದಿದ್ರು. ನನಗೆ ಅವರ ಸೈನ್ಯದ ಕಥೆಯನ್ನೇ ಹೇಳ್ತಾ ಹೋದ್ರು. ಚಿಕ್ಕಮ್ಮ ಹಿಟ್ಟು ಬೀಸಿ ಮುಗಿಸೋ ಹೊತ್ಗೆ ಚಿಕ್ಕಪ್ಪ ಕಥೆ ಹೇಳೋದನ್ನ ಮುಗಿಸಿ ಎದ್ದು ಹೋದ್ರು. ನನಗೂ ನಿದ್ದೆ ಆವರಿಸಿತು.

ಮರುದಿನ ನಾನು ಏಳುವ ಹೊತ್ತಿಗೆ ಎಲ್ಲ ಎದ್ದಾಗಿತ್ತು. ಒಂದು ಮನೆಯಲ್ಲಿ ರೊಟ್ಟಿ ಮತ್ತೊಂದು ಮನೆಯಲ್ಲಿ ಕಡಬು ತಯಾರಾಗಿತ್ತು. ನಮ್ಮನೆಯಲ್ಲಿ ಅಮ್ಮ ಯಾವಾಗ್ಲೂ ಇಡ್ಲಿ, ದೋಸೆ, ನೀರುದೋಸೆ, ಚಿತ್ರಾನ್ನ ಮಾಡ್ತಿದ್ರು. ನಿಂಗೆ ರೊಟ್ಟಿ, ಕಡಬು ಹಿಡ್ಸದಿಲ್ಲೇನೋ ಅಂದ್ರು ದೊಡ್ಡಮ್ಮ. ಇಲ್ಲ ನಂಗಿದೆ ಇಷ್ಟ ಅಂದೆ. ಇನ್ನೂ ಒಂದ್ವಾರ ಅಲ್ಲಿ ಕಳಿಬೇಕಾಗಿರುವುದರಿಂದ ಅವರೇನು ತಿಂತಾರೋ ಅದನ್ನೇ ತಿಂದು, ಅವರು ಏನು ಕೆಲ್ಸ ಮಾಡ್ತಾರೋ ಅದನ್ನೇ ಮಾಡಿ, ಅವರು ಹ್ಯಾಗಿರ್ತಾರೋ ಹಾಗೆ ಇದ್ದು ಅವರ ಅದಕ್ಕಿಂತ ಹೆಚ್ಚಾಗಿ ಅಪ್ಪನ ಮೆಚ್ಚಿಗೆ ಪಡೀಬೇಕು ಅನ್ನೋದು ಮೊದಲ ದಿನವೇ ನನ್ನ ಸುಪ್ತ ಮನಸ್ಸಿಗೆ ಬಂದ್ಬಿಟ್ಟಿತ್ತು.

ಆದರೆ ನನಗೆ ಅರ್ಧ ರೊಟ್ಟಿ ತಿಂದು ಅದರ ಮೇಲೆ ಒಂದು ಕಡಬು ತಿನ್ನಲಿಕ್ಕಾಗ್ತ ಇರಲಿಲ್ಲ. ಪೇಟೆ ಹುಡಗ್ರಿಗೆ ಸರಿ ತಿನ್ನೋಕು ಬರೋಲ್ಲ, ಕೆಲ್ಸ ಮಾಡೋಕು ಶಕ್ತಿ ಇರಲ್ಲ ಅಂತ ದೊಡ್ಡಮ್ಮ ಹೇಳೋರು. ನಾನು ಎಷ್ಟೆ ಅವರ ರೀತಿ ಇರೋಕೆ ಪ್ರಯತ್ನಿಸಿದರೂ ಆಗ್ತಿರಲಿಲ್ಲ. ಅವರೆಲ್ಲ ಚೆನ್ನಾಗಿ ಊಟ ಮಾಡೋರು, ನಾನು ತಟ್ಟೆಯಲ್ಲಿ ಕೋಳಿ ಕೆದಕಿದಂಗೆ ಕೆದಕ್ತಾ ಗಂಟೆ ಗಟ್ಟಲೆ ಮಾಡ್ತಿದ್ದೆ. ನಮ್ಮನೆಯಲ್ಲಾದರೆ ದಿನಗಳು ಪುಸ್ತಕ ಓದ್ತಾ, ಗೆಳತಿಯರ ಜೊತೆ ಆಡ್ತಾ, ಕಳೆದು ಬಿಡ್ತಿದ್ವು. ಆದರಿಲ್ಲಿ ಅದು ಸಾಧ್ಯ ಆಗ್ತಾ ಇರ್ಲಿಲ್ಲ. ನಾನು ಯಾರು ಗದ್ದೆಗೆ ಹೋಗ್ತಾರೆ, ಯಾರು ಕಾಡಿಗೆ ಹೋಗ್ತಾರೆ ಅಂತ ಕಾಯ್ತಾ ಇರ್ತಿದ್ದೆ. ಯಾರೂ ಹೊರಟರೂ ಅವರ ಜೊತೆ ಎದ್ದು ಬಿಡುತ್ತಿದ್ದೆ. ಅವರು ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಗದ್ದೆ ಕಾಯಲಿಕ್ಕೆ ಅಕ್ಕ ಹೊರಟರೆ ಅವಳ ಹಿಂದೆ ನಾನು ಬಸವನ ಹಿಂದೆ ಬಾಲದಂತೆ ಹೊರಟು ಬಿಡ್ತಿದ್ದೆ. ಆದರೆ ದಾರಿಯಲ್ಲಿ ಸುರಗಿ, ಅರಳೆ ಸಂಪಿಗೆ, ಮುತ್ತುಗ ಏನೇನೋ ಮರಗಳಿರ್ತಿದ್ವು. ತರತರದ ಹಕ್ಕಿಗಳು ಬೇರೆ. ನನಗೆ ಖುಷಿಯೋ ಖುಷಿ. ಆದರೆ ಅವುಗಳ ಹೆಸರೆಲ್ಲ ಗೊತ್ತಾಗ್ತಾ ಇರಲಿಲ್ಲ. ಅದೊಂದು ಹೊಸ ಲೋಕವೇ ಸೈ. ಆದರೆ ತಿಳಿಯುವ ಅದಮ್ಯ ಕುತೂಹಲ ಇತ್ತು. ಅಕ್ಕನ ಹತ್ತಿರ ಅದೇನು ಇದೇನು ಅಂತ ಯಾವಾಗ್ಲೂ ಕಾಡ್ತಾ ಇದ್ದೆ. ಕಾಡಿನ ದಾರಿಯ ಪಯಣದ ಪರಿಚಯವೂ ಇರಲಿಲ್ಲ. ಆದ್ದರಿಂದ ಹೆಜ್ಜೆ ಇಡೋದು ನಿಧಾನ ಮಾಡ್ತಿದ್ದೆ. ಮತ್ತೊಮ್ಮೆ ಏನಾದ್ರೂ ಹೊಸ ಹೂ, ಪಕ್ಷಿ ಏನೇ ನೋಡಿದ್ರೂ ಮೈ ಮರೆತು ನಿಂತು ಬಿಡ್ತಿದ್ದೆ. ಅಕ್ಕ ಹೋಗೋಣ ನಡಿ ಅಂದ್ರೆ ಒಪ್ತಾನೇ ಇರ್ಲಿಲ್ಲ. ಇಲ್ಲ ಸ್ವಲ್ಪ ಹೊತ್ತಾದ್ರೂ ಇರಣಾ ಅಂತ ಹಠ ಮಾಡ್ತಿದ್ದೆ. ಅಕ್ಕ, ಸರಿ ನೀನಿಲ್ಲೇ ಇರು, ನಾನು ಗದ್ದೆ ಕಾಯ್ತಾ ಇರ್ತೀನಿ ನೀನು ಕೂಗು ಹಾಕು ನಾನು ಬಂದು ಕರ್ಕೊಂಡು ಹೋಗ್ತೀನಿ ಅಂದ್ರೆ ಅದಕ್ಕೂ ಒಪ್ತಾ ಇರ್ಲಿಲ್ಲ. ಉಹೂಂ ಹೆದ್ರಿಕೆ ಆಗತ್ತೆ ಅಂತಿದ್ದೆ. ಗದ್ದೆಗೇನಾದ್ರೂ ದನ ನುಗ್ಗಿದ್ರೆ ದೊಡ್ಡಮ್ಮನ ಹತ್ತಿರ ಅವಳು ಬೈಗುಳ ತಿನ್ನಬೇಕಾಗ್ತಿತ್ತು. ಅದಕ್ಕೆ ಅಕ್ಕ ನನ್ನನ್ನು ಎಳ್ಕೊಂಡೆ ಗದ್ದೆಗೆ ಧಾವಿಸೋಳು. ಅಕ್ಕ ಎಂಥ ಕೊಂಬಿನ ದನ ಎತ್ತುಗಳಿಗೂ ಹೆದರ್ತಾ ಇರಲಿಲ್ಲ. ಅವು ಅಷ್ಟು ದೂರ ಬರ್ತಿದ್ದಂಘೆ ಸುಳಿವು ಹಿಡಿದು ಓಡಿ ಹೋಗಿ ಅವುಗಳನ್ನು ಓಡಿಸಿ ಬರೋಳೂ. ಅವಳ ಜೊತೆ ಸಹಾಯಕಳಾಗಿ ಹೋಗ್ತಿದ್ದ ನಾನು ಮಾತ್ರ ದನ ಓಡಿಸೋದು ಇರಲಿ, ಸ್ವಲ್ಪ ದೊಡ್ಡ ಕೊಂಬಿನ ದನ ನನ್ನ ಹತ್ತಿರ ಬಂದ್ರೆ ಸಾಕು ಅಕ್ಕಾ, ಅಕ್ಕಾ ಎಂದು ಬೊಬ್ಬೆ ಹೊಡೆದುಕೊಳ್ಳಲು ಶುರು ಮಾಡ್ತಿದ್ದೆ.

ನಮ್ಮನೆಯಲ್ಲಿ ಅಮ್ಮ ಸ್ನಾನ ಮಾಡದೇ ಊಟ ಹಾಕ್ತಿರಲಿಲ್ಲ. ಕೆಲವೊಮ್ಮೆಯಂತೂ ಬೆಳಗಿನ ತಿಂಡಿಯನ್ನು ಸ್ನಾನವಾಗದೇ ತಿನ್ನುವಂತಿರಲಿಲ್ಲ. ಆದರಿಲ್ಲಿ ಬಚ್ಚಲೊಲೆಗೆ ಬೆಂಕಿ ಹಾಕೋದೆ ಸಂಜೆ! ಕೆಲಸ ಮುಗಿಸಿ ಬಂದೋರು ರಾತ್ರಿ ಊಟಕ್ಕೆ ಮುನ್ನ ಸ್ನಾನ ಮಾಡೋರು. ಮತ್ತೊಂದು ಸಮಸ್ಯೆ ಎಂದರೆ ಇಲ್ಲಿ ಬಚ್ಚಲು ಮನೆ ಅಂತ ಇರಲಿಲ್ಲ. ಕೊಟ್ಟಿಗೆಯ ಕೊನೆಯಲ್ಲಿ ಒಂದು ಕಡೆ ಬಿದಿರು ತಟ್ಟಿ ಕಟ್ಟಿ ಒಂದು ಹಾಸುಗಲ್ಲು ಹಾಸಿ ಒಲೆ ಮಾಡಿ ಅದರ ಮೇಲೊಂದು ಹಂಡೆ ಇಟ್ಟಿದ್ರು. ಅಲ್ಲಿಗೆ ಬಾಗಿಲೂ ಇರಲಿಲ್ಲ. ಹಗಲು ಸ್ನಾನ ಮಾಡುವ ನನಗಾಗಿ ಯಾರಾದ್ರೂ ಉರಿ ಹಾಕಿಕೊಡಬೇಕಿತ್ತು. ನಂತರದ ಸಮಸ್ಯೆ ಎಂದರೆ ಬಾಗಿಲಿಲ್ಲದ ಬಚ್ಚಲಲ್ಲಿ ಸ್ನಾನ ಮಾಡೋದಾದರೂ ಹೇಗೆ ಅನ್ನೋದು? ಚಿಕ್ಕಮ್ಮ ನನಗೋಸ್ಕರ ಅಡ್ಡಲಾಗಿ ಬಚ್ಚಲಿಗೆ ಅಡ್ಡಲಾಗಿ ಒಂದು ಬಟ್ಟೆ ಕಟ್ಟಿಕೊಟ್ಟಿದ್ದರು. ಆದರೆ ಹಾಗೆಲ್ಲ ಸ್ನಾನ ಮಾಡಿ ಅಭ್ಯಾಸವಿಲ್ಲದ ನಾನು ಬಟ್ಟೆ ತೊಟ್ಟೆ ಸ್ನಾನದ ಶಾಸ್ತ್ರ ಮುಗಿಸ್ತಿದ್ದೆ. ನಂತರ ಒದ್ದೆ ಮುದ್ದೆಯಾದ ಬಟ್ಟೆಯನ್ನು ಒಕ್ಕೊಳ್ತಾ ಇದ್ದೆ. ಒಗೆದು ಕೊಳ್ಳದಿದ್ದರೆ ವಿಧಿ ಇರ್ಲಿಲ್ಲ. ಇದ್ದಿದ್ದು ಎರಡು ಜೊತೆ ಬಟ್ಟೆ. ನಮ್ಮನೆಯಲ್ಲಿ ಇರುವಾಗ ಬಟ್ಟೆ ಕೊಳೆಯಾಗ್ತಾ ಇರಲಿಲ್ಲ. ಆದರಿಲ್ಲಿ ಮಣ್ಣಿನದೇ ನೆಲ, ಒರಗಿದರೆ ಕೆಮ್ಮಣ್ಣು ಮೆತ್ತಿದ ಗೋಡೆ, ಜೊತೆಗೆ ಗದ್ದೆಯ ಅಂಟಂಟು ಮಣ್ಣು ಎಲ್ಲ ಸೇರಿ ಬಟ್ಟೆ ಕೊಳೆಯಾಗಿರೋದು, ಸರಿ ಒಕ್ಕೊಳಕೂ ಬರ್ತಿರಲಿಲ್ಲ. ಆದರೆ ಮನೆಯ ಮೂಲೆಯಲ್ಲೆಲ್ಲೋ ಬಿಚ್ಚೆಸೆದ ಬಟ್ಟೆಯನ್ನು ಹುಡುಕಿ ಒಗೆದಿಡಲು ಅಮ್ಮ ಇರ್ಲಿಲ್ವಲ್ಲ.

ಒಂದಿನ ಬೆಳಿಗ್ಗೇನೆ ಅಕ್ಕ ಹಂದಿ ದೊಡ್ಡಿಗೆ ಹೋಗೋಕೆ ಒಂದು ದೊಡ್ಡ ಬಾಲ್ದಿಯಲ್ಲಿ ಗಂಜಿ, ತೌಡು, ಹಲಸಿನ ಸ್ಯಾಡ ಎಲ್ಲ ಹಾಕ್ಕೊಂಡು ಹೊರಟಳು. ನಾನು ಅವಳ ಹಿಂದೇನೆ ಹೊರಟೆ ಮೊದಲನೆಯದಾಗಿ ಹಂದಿ ದೊಡ್ಡಿ ಅಂದ್ರೇನು ಅನ್ನೋದೆ ತಿಳಿದಿರ್ಲಿಲ್ಲ. ಅಜ್ಜಿ ಮನೆಗೆ ಬಂದಂದಿನಿಂದ ನೋಡ್ತಾ ಇರೋದು ಹಿಂದೆ ನೋಡಿರದ ಹೊಸ ಲೋಕವಾಗಿತ್ತು. ಅಕ್ಕ, ಹಂದಿ ದೊಡ್ಡಿ ಅಂದ್ರೇನು ಅಂದೆ ಸುಮ್ನೆ ಬಾ ತೋರಿಸ್ತೀನಿ ಅಂದ್ಲು. ಅವಳಿಗೂ ಅದೇನು, ಇದೇನು ಅನ್ನೋ ನೂರು ಪ್ರಶ್ನೆಗೆ ಉತ್ತರ ಕೊಟ್ಟು ಸಾಕಾಗಿತ್ತೇನೋ, ನಾನು ಹಂದಿಗಳನ್ನು ಎಲ್ಲೋ ಅಪರೂಪಕ್ಕೆ ನೋಡಿದ್ದೆ. ಆದರೆ ಹಂದಿದೊಡ್ಡಿ ನೋಡಿರಲಿಲ್ಲ. ಅಕ್ಕ ಬಾಲ್ದಿಯಲ್ಲಿದ್ದ ಗಂಜಿ ತುಳಕದಂಗೆ ತಲೆ ಮೇಲೆ ಹೊತ್ತು ಸ್ವಲ್ಪ ದೂರ ನಡೆದಾದ ಮೇಲೆ ಸ್ವಲ್ಪ ಬಯಲಿದ್ದ ಪ್ರದೇಶದಲ್ಲಿ ಬಾಲ್ದಿಯನ್ನು ಇಳಿಸಿ, ಅಲ್ಲಿದ್ದ ಅಗಲವಾದ ಮಣ್ಣಿನ ಮಡಕೆಗೆ ಅದರಲ್ಲಿದ್ದ ಪದಾರ್ಥಗಳನ್ನು ಸುರಿದ್ಲು. ಆದರೆ ಅಲ್ಯಾವ ಹಂದಿಯು ನಂಗೆ ಕಾಣಿಸ್ಲಿಲ್ಲ. ಮಣ್ಣಿನಲ್ಲಿ ಕಟ್ಟಿದ್ದ ಎರಡ್ಮೂರು ಗುಡ್ಲು ಮನೆಗಳಿದ್ದವು. ಅವುಗಳ ಮೇಲೆ ದಬ್ಬೆ ಹೊದಿಸಲಾಗಿತ್ತು. ದಬ್ಬೆಯ ಬಾಗಿಲು ಬಿಗಿದಿದ್ರು. ಹೊರಗಿನಿಂದ ನೋಡುವವರಿಗೆ ಸಣ್ಣ ಸಂಚಲನವೂ ಗೊತ್ತಾಗ್ತಾ ಇರಲಿಲ್ಲ. ಆದರೆ ಅಕ್ಕ ಒಂದೊಂದರ ಬಾಗಿಲು ತೆರೆದಂತೆ ಐದಾರು ಹಂದಿಗಳು ಪ್ರತಿ ಗೂಡಿನಿಂದ ದಬದಬನೇ ಹೊರಬಂದವು. ನಂಗೆ ಹೆದರಿಕೆಯಾಗಿ ಕೂಗಲು ಶುರು ಮಾಡಿದೆ. ಅಕ್ಕ, ಹಂದಿಗೆದರ್ತೀಯ, ಬಲೇ ಪಾಪದ ಪ್ರಾಣಿಗಳವು ನಾವೇ ಸಾಕಿರೋದು, ಇವಕ್ಕೆ ಹೆದರ್ತಿಯಲ್ಲ ಎಂದು ನಕ್ಕಳು. ಹೊರಬಂದ ಹಂದಿಗಳು ತಮ್ಮ ತಮ್ಮಲ್ಲೆ ತಳ್ಳಾಡ್ತ ನೂಕಾಡ್ತ ಅಲ್ಲಿಟ್ಟ ಆಹಾರ ಹೀರಲಿಕ್ಕೆ ಶುರು ಹಚ್ಕಂಡವು. ತಟ್ಟಿ ತೆರೆಯುತ್ತಿದ್ದಂತೆ ಅವು ದಬದಬನೇ ಹೊರಬಂದಿದ್ದು ನೋಡಿ ನಂಗೆ ಅಮ್ಮ ಹೇಳಿಕೊಟ್ಟಿದ್ದ ಕುವೆಂಪು ಅವರ ಕಿಂದರಿ ಜೋಗಿ ಪದ್ಯದ ಚಿಕ್ಕಿಲಿ, ಮೂಗಿಲಿ, ಸಣ್ಣಿಲಿ, ದೊಡ್ಡಿಲಿಗಳು ನೆನಪಾಗಿ ನಾನು ನಕ್ಕೆ.

ಚಿಕ್ಕಮ್ಮ ಒಂದಿನ ಮದ್ಯಾಹ್ನದ ಮೇಲೆ ಗದ್ದೆಗ್ಹೋಗಿ ಏಡಿ ಹಿಡ್ಕಂಡು ಬರಾಣ, ರಾತ್ರಿ ಸಾರು ಮಾಡಬಹುದು ಅಂತ ಹೇಳಿ ನನ್ನ ಕರ್ಕೊಂಡ್ಹೋದರು. ಗದ್ದೆ ಬದುವಿನ ಕುಣಿಗಳಲ್ಲಿ ಏಡಿಗಳಿದ್ವು. ಒಂದೊಂದು ಏಡಿಯನ್ನು ಹಿಡಿದ ಕೂಡಲೆ ಅದರ ಕೊಂಬನ್ನು ಲಟಲಟ ಅಂತ ಮುರಿದು ಏಡಿಯನ್ನು ಅಡಿಕೆ ಹಾಳೆಯಲ್ಲಿ ಹಾಕ್ತಾ ಇದ್ದರು. ಲಲಿತಕ್ಕ ಯಾಕೆ ಅದರ ಕೊಂಬನ್ನು ಮುರಿತೀರಿ ಅಂದೆ. ಕೊಂಬು ಮುರಿದಿದ್ರೆ ಕಚ್ತಾವೆ ಅದಕ್ಕೆ ಹಿಡಿದ ಕೂಡ್ಲೇ ಮೊದ್ಲು ಕೊಂಬನ್ನ ಮುರ್ಕೋಬೇಕು ಅಂದ್ರು. ನಾನು ಏಡಿ ತುಂಬಿದ ಹಾಳೆ ಹಿಡ್ಕೊಂಡು ಚಿಕ್ಕಮ್ಮನ ಹಿಂದಿಂದೆ ಓಡುತ್ತಿದ್ದೆ. ಅವರೂ ಗದ್ದೆಯ ಬದುವಿನುದ್ದಕ್ಕೂ ಇದ್ದ ಏಡಿಗಳನ್ನ ಹಿಡಿದು ಹಾಕ್ತಿದ್ದರು. ನಂಗೆ ಹೆದರಿಕೆನೂ ಇತ್ತು ಎಲ್ಲಿ ಏಡಿಗಳು ಮೈಮೇಲೆ ಹಾರಿ ಬಿಡ್ತಾವೋ ಅಂತ ಆದರೆ ಕೊಂಬು ಮುರಿದ ಏಡಿಗಳು ತುಸು ಹೊತ್ತು ಒದ್ದಾಡಿ ಶಾಂತವಾಗೋವು. ಆವತ್ತು ರಾತ್ರಿ ಏಡಿ ಸಾರಿನ ಊಟ ಮಾಡಲು ಅಪ್ಪನಿಗೂ ಕರೆ ಹೋಯಿತು.

ಹಿಂದೆಂದೂ ಏಡಿ ತಿಂದಿರದ ನಾನು, ಈಗ ಅಜ್ಜಿ ಮನೆಯಲ್ಲಿ ಏಡಿ ತಿಂದ ವಿಷಯ ತಿಳಿದರೆ ಅಮ್ಮನಿಗೆ ಏನೆನ್ನಿಸಬಹುದು? ಬೈಯಬಹುದಾ ಅಂತೆಲ್ಲ ಯೋಚನೆಯಾಗಿ ಊಟಕ್ಕೆ ಕೂತ ಕ್ಷಣದಲ್ಲಿ ನಾನು ಏಡಿ ತಿನ್ನಲ್ಲಾ ಅಂತ ಅಂದೆ. ಅಜ್ಜಿ ಇದ್ದೋರು ಮೊದಲು ಚೂರು ರುಚಿ ನೋಡು ಆಮೇಲೆ ಎಲ್ಲ ಸರಾಗವಾಗಿ ಹೊಟ್ಟೆಗಿಳಿಯುತ್ತೆ. ಮಕ್ಕಳು ಅದು ತಿನ್ನಲ್ಲ, ಇದು ತಿನ್ನಲ್ಲ ಅಂತ ಅನ್ನಬಾರದು ಎಲ್ಲ ತಿನ್ನಬೇಕು ಅಂದರು. ನನಗಾಗಿ ಬೇರೆ ಸಾರೂ ಮಾಡಿರಲಿಲ್ಲ. ಬರಿಯ ಅನ್ನ ಮಜ್ಜಿಗೆ ತಿಂದು ಮಲಗಬೇಕಿತ್ತು. ಅದೆಲ್ಲಾ ಆಗದ ಕೆಲಸ ಅನ್ಕೊಂಡು ಒಂದೆ ಒಂದು ಏಡಿಯ ತುಂಡು ಮತ್ತು ಒಂಚೂರು ಸಾರು ಹಾಕಿಸಿಕೊಂಡು ಊಟ ಶುರು ಮಾಡಿದೆ. ನಾಲಿಗೆಗೆ ಅದರ ರುಚಿ ಹಿಡಿದು ಚಿಕ್ಕಮ್ಮನಿಗೆ ಸಾರು ಬಡಿಸುವುದೇ ಕೆಲಸವಾಯಿತು. ಏಡಿಯಂತಹ ರುಚಿಕರ ಪದಾರ್ಥ ಇನ್ನೊಂದಿಲ್ಲ ಅನ್ನಿಸ್ತು.

ಗದ್ದೆ ತೋಟ ಇರೋರೆಲ್ಲ ಆಳುಗಳನ್ನ ಇಟ್ಕೊಂಡು ಕೆಲ್ಸ ಮಾಡಿಸ್ತಾರೆ. ಯಜಮಾನರೇನಿದ್ರು ಮೇಲ್ವಿಚಾರಣೆ ಮಾಡ್ತಾರೆ ಅನ್ಕಂಡಿದ್ದೆ. ಆದರಿಲ್ಲಿ ಪ್ರತಿ ಕೆಲ್ಸವನ್ನೂ ಅದರಲ್ಲೂ ಹೆಂಗಸರ ಕೈಲಿ ಸಾಧ್ಯವೇ ಇಲ್ಲ ಇದೇನಿದ್ರು ಗಂಡಸರ ಕೆಲ್ಸ ಅನ್ಕಂಡವೆಲ್ಲವನ್ನು ದೊಡ್ಡಮ್ಮನೇ ಸರಾಗವಾಗಿ ನಿರ್ವಹಿಸೋದು ನೋಡಿ ದಂಗಾದೆ. ಮನೆ ಮುಂದಿನ ಕಣದಲ್ಲಿ ಭತ್ತದ ರಾಶಿ ರಾಶಿಯನ್ನು ದೊಡ್ಡಮ್ಮ ಒಬ್ರೆ ತೂರಿ ಹಸನುಗಳಿಸ್ತಿದ್ರು.. ದೊಡ್ಡಮ್ಮನ ರಟ್ಟೆಗೆ ಭೀಮಬಲ ಅನ್ನೋದು ಖಾತ್ರಿಯಾಗಿತ್ತು. ಆಮೇಲೆ ದೊಡ್ಡಮ್ಮ ರೊಟ್ಟಿ ಒಂದನ್ನು ಒಲೆ ಮುಂದೆ ಕೂತು ತಟ್ಟತಾ ಇದ್ದಿದ್ದು ಬಿಟ್ಟರೆ, ಮತ್ಯಾವ ಅಡಿಗೆ ಮಾಡ್ಬೇಕಿದ್ರು ಒಲೆ ಮುಂದೆ ಕೂತಿದ್ದನ್ನೇ ನಾ ನೋಡಿರಲಿಲ್ಲ. ಒಲೆ ಮೇಲೆ ಎಸರಿಟ್ಟು ಹೋಗಿ ಕಣದಲ್ಲಿ ಕೆಲ್ಸ ಮಾಡ್ತಾ ಇರೋರು ಆಮೇಲೆ ಎಷ್ಟೋ ಹೊತ್ತಿಗೆ ಬಂದು ಕಾರ ಅರೆದು ಹಾಕೋದು, ಅನ್ನ ಬಸಿಯೋದು ಮಾಡೋರು. ನನಗಂತೂ ಅರೆಗಳಿಗೆ ಕೂರದೇ ಕೆಲಸ ಮಾಡ್ತಾನೇ ಇರುತ್ತಿದ್ದ ದೊಡ್ಡಮ್ಮನನ್ನು ನೋಡ್ತಾ ಇರೋದೆ ಕೆಲಸ.

ಅಜ್ಜಿ ಮನೆಯಲ್ಲಿ ಅಡಿಗೆಗೆ, ನೀರು ಕಾಯಿಸೋದು ಎಲ್ಲವೂ ಕಟ್ಟಿಗೆ ಒಲೆಯಲ್ಲೇ, ಅದಕ್ಕೆ ತುಂಬಾ ಕಟ್ಟಿಗೆ ಬೇಕಾಗೋದು. ದೊಡ್ಡಮ್ಮ ಅಕ್ಕ, ಅಣ್ಣನನ್ನು ಕರೆದುಕೊಂಡು ಕಾಡಿಗೆ ಹೋಗಿ ಕಟ್ಟಿಗೆ ಕಡಿದು, ಆರಿಸಿಕೊಂಡು ಬರೋರು. ಒಮ್ಮೆ ಕಟ್ಟಿಗೆಗೆ ಹೋಗುವಾಗ ದೊಡ್ಡಮ್ಮ ನನ್ನನ್ನು ಕರ್ಕೊಂಡ್ಹೋಗಿ ಅಂತ ಹಠ ಹಿಡಿದೆ. ಚಿಕ್ಕಮ್ಮ ಇದ್ದವರು. ಬ್ಯಾಡ ಹೋಗೋದು, ನಾಲ್ಕು ದಿನ ಉಳಿಯಾಕೆ ಬಂದ ಮಗು ಕೈಲಿ ಕಟ್ಟಿಗೆ ಹೊರಿಸ್ತಿದಾರೆ ಅಂತ ಜನ ಮಾತಾಡಿಕೊಳ್ತಾರೆ ಅಂದ್ರು. ಅವರ ಮಾತು ಕೇಳದೆ ಹಠ ಮಾಡಿ ಹೊರಟೆ.

ಕಾಡಿನಲ್ಲಿ ದೊಡ್ಡಮ್ಮ ಚಕಚಕನೇ ಒಣಗಿದ ಮರದ ಕೊಂಬೆ ಕಡಿದು ಕಟ್ಟಿಗೆ ಮಾಡಿದ್ರು. ನಾವು ಮೂವರು ಕೆಳಗೆ ಬಿದ್ದ ಪುಳ್ಳೆಗಳನ್ನ ಆರಿಸಿ ಒಟ್ಟು ಮಾಡಿದ್ವಿ. ದೊಡ್ಡಮ್ಮ ಒಂದೊಂದು ಹೊರೆ ಮಾಡಿ ಅಕ್ಕ, ಅಣ್ಣನ ತಲೆ ಮೆಲೆ ಹೊರಿಸಿದ್ರು ಮತ್ತು ನನಗೆ ಕತ್ತಿ ಹಿಡ್ಕೊಂಡು ಬಾ ಅಂತ ಆದೇಶಿಸಿದ್ರು. ನಾನೂ ಹೊರೆ ಹೊತ್ಕೋತಿನಿ ಅಂತ ಹಠ ಹಿಡಿದೆ. ಪುಟ್ಟದೊಂದು ಹೊರೆ ಮಾಡಿ ನನ್ನ ತಲೆ ಮೇಲೆ ಬಟ್ಟೆಯ ಪೌಲಿ ಸುತ್ತಿ ಅದರ ಮೇಲೆ ಹೊರೆ ಇಟ್ರು. ಅವರು ಮೂವರೂ ಬಿರುಸಾಗಿ ನಡೀತಿದ್ರು. ಮೂವರ ತಲೆ ಮೇಲೂ ದೊಡ್ಡ ಹೊರೆಯೇ ಇದ್ದಿದ್ದರಿಂದ ಭಾರವನ್ನು ಇಳಿಸಿಕೊಳ್ಳೋದು ಅವರ ಗುರಿಯಾಗಿತ್ತು. ನಾನೋ ನಿಧಾನವಾಗಿ ಇರುವೆ ಹೆಜ್ಜೆ ಹಾಕ್ತಿದ್ದೆ. ಅಷ್ಟೊತಿಗೆ ಸರಿಯಾಗಿ ನಮ್ಮನೆ ಹತ್ರದ ಇಬ್ಬರು ಹೆಂಗಸರು ಕಟ್ಟಿಗೆಗೆ ಹೋಗ್ತಿದ್ದೋರು ನನ್ನನ್ನು ತಡೆದು ಇಲ್ಲಿಗ್ಯಾವಾಗ ಬಂದೆ ಎಂದು ವಿಚಾರಿಸಿ, ತಲೆ ಮೇಲಿನ ಹೊರೆ ನೋಡಿ ;ಅಯ್ಯೋ ಮುದ್ದಾಗಿ ಬೆಳೆಸಿಬಿಟ್ಟು, ನಿಮ್ಮಪ್ಪ ಕಟ್ಟಿಗೆ ಹೊರೆಸೋಕೆ ಇವರ ಮನೆಗೆ ಕಳಿಸಿದಾರ? ಎಂಥ ಜನ ಮಗು ಕೈಲಿ ಇವನ್ನೆಲ್ಲ ಮಾಡ್ಸಬಾರದು ಅಂತ ಗೊತ್ತಿಲ್ವ? ಅದೂ ಅಲ್ಲದೆ ಈ ಮಗೀಗೆ ಕಟ್ಟಿಗೆ ಹೊತ್ತಾದ್ರೂ ಅಭ್ಯಾಸ ಇದ್ಯಾ? ಅಂತ ಜೋರು ಜೊರಾಗಿ ಬಯ್ಯೋ ಸ್ವರದಲ್ಲಿ ಹೇಳಲಿಕ್ಕೆ ಪ್ರಾರಂಭಿಸಿದ್ರು. ನಾನು ಇಲ್ಲ ಇಲ್ಲ, ದೊಡ್ಡಮ್ಮ ಬ್ಯಾಡಾ ಬರೋದು ಅಂತ ಎಷ್ಟು ಹೇಳಿದ್ರೂ ಕೇಳದೇ ನಾನೇ ಬಂದಿದ್ದು ಎಂದರೂ ಅವರು ಸುಮ್ಮನಾಗಲಿಲ್ಲ. ಮಗೂಗೆ ಬುದ್ದಿ ಇಲ್ಲಾಂದ್ರೆ ದೊಡ್ಡೋರಿಗೂ ಬುದ್ಧಿ ಬೇಡ್ವಾ. ಎಂಥ ಜನ ಎಂದು ಗೊಣಗಿಕೊಳ್ತಾ ಹೊರಟೋದ್ರು. ನನಗೆ ಎಲ್ಲಿ ಈ ವಿಷಯವನ್ನು ಬಣ್ಣ ಕಟ್ಟಿ ಅಮ್ಮನ ಹತ್ತಿರ ಇವರು ಹೇಳಿಬಿಡ್ತಾರೋ ಅಂತ ಭಯ ಶುರುವಾಯಿತು.

ಈ ಘಟನೆ ನಂತರ ನನಗೆ ಅಮ್ಮನ ನೆನಪು ತೀವ್ರವಾಗಿ ಕಾಡಲಿಕ್ಕೆ ಶುರುವಾಯಿತು. ಜೊತೆಗೆ ಅಮ್ಮನಿಗೆ ನನ್ನ ಮೇಲೆ ಸಿಟ್ಟು ಬಂದಿರಬಹುದು ಅನ್ನೋ ಅನುಮಾನ ಸಹ. ಏಕೆಂದ್ರೆ ಚಿಕ್ಕಪ್ಪ, ಅಣ್ಣ ಇಬ್ಬರೂ ನಮ್ಮನೆಗೆ ಎರಡ್ಮೂರು ಸರ್ತಿ ಹೋಗಿದ್ರು ನನಗೆ ಕೊಟ್ಟ ಮಾತಿನಂತೆ ಅಮ್ಮ ಬಟ್ಟೆ ಕೊಟ್ಟು ಕಳಿಸಿರ್ಲಿಲ್ಲ. ಹೋಗ್ಲಿ ಅಂದ್ರೆ ನಾನು ಹ್ಯಾಗಿದ್ದೀನಿ ಅಂತ ವಿಚಾರಿಸಿಕೊಂಡ ಹಾಗೂ ಇರಲಿಲ್ಲ. ಅದೇ ದಿನ ಸಂಜೆ ಮತ್ತೊಂದು ಘಟನೆ ನಡೀತು. ಪೇಟೆಗೆ ಹೋದ ಅಣ್ಣನ ಬಳಿ ಅಮ್ಮ ಹೀರೆಕಾಯಿ ಬೋಂಡ ಮಾಡಿ ಕೊಟ್ಟು ಕಳಿಸಿದ್ರು. ಅಣ್ಣ ಮನೆಗೆ ಬಂದವನೇ ಪ್ರತಿಯೊಬ್ಬರಿಗೂ ಎರೆಡರಡು ಬೋಂಡಾದಂತೆ ಹಂಚಿದ. ನಮ್ಮಮ್ಮ ಮನೆಯಲ್ಲಿ ಬೋಂಡಾ ಕರಿಯುವಾಗ ಅವಳ ಸುತ್ತ ನಾವು ಮೂವರೂ ಮಕ್ಕಳು ಕೂತ್ಕೊಂಡು ಬಾಂಡಲೆಯಿಂದ ಹೊರಗೆ ಬರ್ತಿದ್ಹಂಗೆ ತೆಕ್ಕೊಂಡು ತಿನ್ತಾ ಹೋಗ್ತಿದ್ವಿ. ಎರಡೇ ಎರಡು ಬೋಂಡಾ ತಿಂದು ಸುಮ್ಮನಾದ ಸಂದರ್ಭವೇ ಇರಲಿಲ್ಲ. ಈಗ ಬರೀ ಎರಡೇ ಬೋಂಡಾಕ್ಕೆ ತೃಪ್ತಿ ಪಡಬೇಕಾದ ಸ್ಥಿತಿ ಬಂದಾಗ ನಮ್ಮಮ್ಮನ ಮೇಲೆ ಸಿಟ್ಟು ಬರತೊಡಗಿತು. ಅಮ್ಮ ಅಷ್ಟೂ ಬೋಂಡಾವನ್ನು ನನ್ನ ಹತ್ರಾ ಕೊಡೋಕೆ ಅಣ್ಣನಿಗೆ ತಾಕೀತು ಮಾಡಿ ಕಳಿಸಬೇಕಿತ್ತು. ಆಗ ನಂಗೆ ಬೇಕಾದಷ್ಟು ತಿಂದು ಮಿಕ್ಕಿದ್ದನ್ನು ಇವರಿಗೆ ನಾನೇ ಕೊಡುತ್ತಿದ್ದೆ ಅನ್ನಿಸ್ತು. ಅದಕ್ಕಿಂತ ಹೆಚ್ಚಾಗಿ ಇವತ್ತು ತಂಗಿ, ತಮ್ಮ ಇಬ್ಬರಿಗೂ ಬೇಕಾದಷ್ಟು ಬೋಂಡಾ ತಿನ್ನೋಕೆ ಸಿಕ್ಕಿದೆ. ಅಮ್ಮ ನನ್ನ ಅನುಪಸ್ಥಿತಿಯಲ್ಲಿ ತಂಗಿ ತಮ್ಮನ್ನ ಇನ್ನೂ ಹೆಚ್ಚು ಮುದ್ದು ಮಾಡ್ತಿರಬಹುದು ಅನ್ನಿಸಿದ ಕ್ಷಣದಲ್ಲಿ ಇಷ್ಟು ದಿನ ಇದ್ದ ಕುತೂಹಲ, ಅಪ್ಪನನ್ನ ಮೆಚ್ಚಿಸಬೇಕು ಅನ್ನೋ ಆಸೆ, ಹಂಚಿಕೊಳ್ಳುವಿಕೆಯ ಸುಖ ಎಲ್ಲ ಮರೆಯಾಗಿ ಸಿಟ್ಟು, ಅಸಹಾಯಕತೆ, ಹೊಟ್ಟೆ ಕಿಚ್ಚು ತುಂಬಿಕೊಂಡು ದುಃಖ ಉಮ್ಮಳಿಸಿ ಬಂತು.

ಮರುದಿನ ಅಣ್ಣ ಮತ್ತೊಂದು ಸುದ್ದಿ ತಂದ; ಬೀದಿಯಲ್ಲಿ ಓಡಾಡೋ ನಾಯಿಗಳಿಗೆ ವಿಷ ಹಾಕಿ ಕೊಲ್ತಾರಂತೆ ಅನ್ನೋದು ಸುದ್ದಿ. ನಮ್ಮನೆಯಲ್ಲಿ ಒಂದು ನಾಯಿ ಇತ್ತು. ನಾ ಹುಟ್ಟೋಕೆ ಎಷ್ಟೋ ವರ್ಷ ಮುಂಚೆಯಿಂದಲೂ ಅದಿತ್ತಂತೆ. ಅಮ್ಮಮ್ಮ, ಈ ನಾಯಿ ಬದುಕಿದಷ್ಟು ವರ್ಷ ಯಾವ ನಾಯಿನೂ ಬದುಕಲ್ಲ ಅನ್ನೋಳು. ನಾಯಿಗೆ ವಿಷ ಹಾಕ್ತಾರಂತೆ ಅಂತ ಕೇಳಿದ ಮೇಲಂತೂ ನಮ್ಮನೆ ನಾಯಿಯನ್ನು ನಾನೇ ಹೋಗಿ ರಕ್ಷಣೆ ಮಾಡಿದ್ರೆ ಮಾತ್ರ ಉಳಿತದೆ ಇಲ್ಲಾ ಅಂದ್ರೆ ವಿಷ ತಿಂದು ಸತ್ತು ಬಿಡ್ತದೆ. ಅನ್ನಿಸೋಕೆ ಶುರುವಾಯ್ತು. ನಾಯಿಯನ್ನು ಒಂದ್ವೇಳೆ ಕಟ್ಟಿ ಹಾಕದಿದ್ದರೆ ಇವತ್ತಿಗೆ ನಾ ಬಂದು ಆರನೇ ದಿನ. ಇವತ್ತೇ ವಿಷ ಹಾಕಿ ಬಿಟ್ಟರೆ… ದೇವರೇ ಇವತ್ತೊಂದು ದಿನ ನಾಯಿಯನ್ನು ಕಾಪಾಡಪ್ಪ, ನಾಳೆ ಬೆಳಗಾಗುವುದರೊಳಗೆ ಹೊರಟುಬಿಡ್ತೀನಿ ಅಂತ ಪ್ರಾಥರ್ಿಸಿದೆ. ನಾಯಿಯನ್ನು ಉಳಿಸಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಾನೆ ಹೊತ್ತವಳಂತೆ ಚಡಪಡಿಸಿದೆ.

ನಮ್ಮನೆ ಇದಲ್ಲ ಅನ್ನಿಸ್ತು. ನನ್ನ ಮನೆಯಲ್ಲಿ ಎಲ್ಲರೂ ನನ್ನನ್ನು ಮರೆತು ಬಿಟ್ಟಿದ್ದರೆ ಕಥೆಯೇನು ಅನ್ನಿಸ್ತು. ಈ ಮನೆಯಲ್ಲಾದರೂ ನಾನು ಏಳು ದಿನಗಳನ್ನು ಕಳೆಯೋಕೆ ಬಂದಿರೋಳು. ಇಲ್ಲಿ ನಾನು ನಾಳೆವರೆಗೆ ಮಾತ್ರ ಉಳಿದುಕೊಳ್ಳಲಿಕ್ಕಾಗ್ತದೆ. ಆಮೇಲೆ ಆಮೇಲೇನು? ಹೀಗೆ ಏನೇನೋ ಕಲ್ಪನೆ, ಕನಸು, ಕಂಗಾಲುತನದಲ್ಲಿ ಏಳನೇ ದಿನದ ಆರಂಭವೇ ತಡವಾಗ್ತಿದೆ ಅನ್ನಿಸಿತು. ರಾತ್ರಿಯಿಡಿ ಅರೆಬರೆ ನಿದ್ದೆ. ಏಳನೇ ದಿನದ ಬೆಳಕು ಹರಿತಿದ್ದಂಗೆ ಎದ್ದು ಮುಖ ತೊಳೆದು ತಿಂಡಿ ತಿನ್ನಲೂ ಹೇಳಿದರೂ ಕೇಳದೆ ಹೊರಟು ಬಿಟ್ಟೆ. ಚಿಕ್ಕಪ್ಪ ನಾನು ಬಿಟ್ಟು ಬರ್ತೀನಿ ಅಂತ ಜೊತೆಗೆ ಹೊರಟರು. ಕಾಡಿನ ದಾರಿ ಮರೆಯಾಗಿ ಇನ್ನೇನು ಮನೆಯ ದಾರಿ ಹಿಡಿದ್ವಿ ಅನ್ನೋವಾಗ ಚಿಕ್ಕಪ್ಪನ ಜೊತೆ ಜೊತೆಗೆ ಇಷ್ಟು ಹೊತ್ತು ಕಾಲು ಹಾಕ್ತಿದ್ದೋಳು ಅವರನ್ನ ಬಿಟ್ಟು ಮನೆ ಕಡೆ ವೇಗವಾಗಿ ಓಡಲಾರಂಭಿಸಿದೆ. ಪಾಪು ನಿಲ್ಲು ಅಂತ ಚಿಕ್ಕಪ್ಪ ಕೂಗೊದ್ರೊಳೋಗೆ ನಾನು ಮನೆಯ ಅಂಗಳದಲ್ಲಿದ್ದೆ. ನಾಯಿ ಅಂಗಳದಲ್ಲಿ ಬಿಸಿಲು ಕಾಯಿಸುತ್ತಾ ಮಲಗಿತ್ತು. ಒಳಗ್ಹೋದರೆ ಎಲ್ಲರೂ ಇದ್ದರು. ಹಿಂದೆ ಬಂದ ಚಿಕ್ಕಪ್ಪನನ್ನು ಅಮ್ಮ ಓ ಬಾ ಬಾ ಅಂತ ಕರೆದರು. ನನ್ನನ್ನು ಕರೆಯಲಿಲ್ಲ. ನಾನು ಇದೇ ತಾನೇ ಅಂಗಡಿಗೆ ಹೋಗಿ ವಸ್ತುಗಳನ್ನು ತೆಗೆದುಕೊಂಡು ಮರಳಿ ಮನೆಗೆ ಬಂದಷ್ಟೆ ಸಹಜವಾಗಿ ನನ್ನ ಆಗಮನವನ್ನು ಎಲ್ಲರೂ ಸ್ವೀಕರಿಸಿದಂತಿತ್ತು. ನನ್ನ ಮನೆ ನನ್ನ ಪಾಲಿಗೆ ಬದಲಾಗಿರಲಿಲ್ಲ.

‍ಲೇಖಕರು avadhi

August 7, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

6 ಪ್ರತಿಕ್ರಿಯೆಗಳು

  1. akshatha

    ಹೌದು. ಮಯೂರದಲ್ಲಿ ಈ ಲೇಖನ ಹಿಂದೆ ಪ್ರಕಟವಾಗಿತ್ತು .

    ಪ್ರತಿಕ್ರಿಯೆ
  2. ರಮೇಶ್ ಹಿರೇಜಂಬೂರು

    ಬಾಲ್ಯವನ್ನು ಚನ್ನಾಗಿ ಬಿಚ್ಚಿಟ್ಟಿದ್ದೀಯ ಅಕ್ಷತಾ, ಲೇಖನ ತುಂಬಾ ಚನ್ನಾಗಿದೆ… ಯಾವುದೇ ಮಕ್ಕಳು ನೆಂಟರ ಅಥವಾ ಸಂಭಂದಿಕರ ಮನೆಗಳಿಗೆ ಹೋದರೆ ಅವರ ಮನೆಗೆ ಅವರೇಕೆ ಹೊಸಬರಾಗುತ್ತಾರೆ…? ಬಾಲ್ಯದ ಜೊತೆಗೆ ಅಲ್ಲಲ್ಲಿ ಮಲೆನಾಡಿನ ಚಿತ್ರಣವನ್ನು ಚನ್ನಾಗಿ ಚಿತ್ರಿಸಿದ್ದಿಯ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: