ಗೋಪಾಲವಾಜಪೇಯಿ ಕಾಲಂ : ಮನೆಯವರಿಗೆಲ್ಲ ‘ಮೊದಲ ಗುರು’

ಸುಮ್ಮನೇ ನೆನಪುಗಳು – 12

– ಗೋಪಾಲ ವಾಜಪೇಯಿ

ಸಂಗೀತ ಯಾರಿಗೆ ಇಷ್ಟವಾಗುವುದಿಲ್ಲ? ತಿಳಿಯಲಿ ತಿಳಿಯದಿರಲಿ ಸಂಗೀತ ಕಿವಿಗೆ ಬಿದ್ದೊಡನೆ ತಲೆಯಾಡಿಸದೆ ಇರುವ ಮನುಷ್ಯ ಇಲ್ಲವೇ ಇಲ್ಲ. ಯಾಕೆಂದರೆ, ಹುಟ್ಟಿದಾರಭ್ಯ ಸಂಗೀತ ಮನುಷ್ಯನ ಸಂಗಾತಿಯಾಗಿಬಿಡುತ್ತದೆ. ಮಗು ಹುಟ್ಟಿದಾಗ ಹಾಡುತ್ತ ಕುಣಿಯುತ್ತ ಸ್ವಾಗತಿಸುತ್ತೇವೆ. ತೊಟ್ಟಿಲಲ್ಲಿದ್ದಾಗ ಜೋಗುಳದ ಸಂಗೀತ. ಬೆಳೆಯುತ್ತ ಬೆಳೆಯುತ್ತ ನಾನಾ ನಾದಗಳ ಪ್ರಭಾವ. ಕೊನೆಗೆ ಸತ್ತಾಗಲೂ ಹಾಡಿಕೊಂಡತ್ತು ಬೀಳ್ಕೊಡುತ್ತೇವೆ, ಅಲ್ಲವೇ? ಅಂದರೆ ಸಂಗೀತ ‘ಬಾಳ’ ಸಂಗಾತಿ.

ನಾದದ ಮೋದವೇ ಅಂಥದ್ದಲ್ಲವೇ? ಅದು ಶಿಶು-ಪಶು-ಫಣಿ ಎಲ್ಲರನ್ನೂ ಮೋಹಗೊಳಿಸುವಂಥದು ಎಂದಿದ್ದಾರೆ. ರಾಗಕ್ಕೆ ಸಾಹಿತ್ಯದ ಮೇಳವೂ ಆಗಿಬಿಟ್ಟರೆ ಆಹಾ… ಅದೆಂತಹ ಆನಂದ… !

ಅದು ಶಾಸ್ತ್ರೀಯವೇ ಇರಲಿ, ಜಾನಪದವೇ ಇರಲಿ ಜನರನ್ನು ಹಿಡಿದಿಡುವುದಂತೂ ನಿಜವೇ. ಆದರೆ, ಶಾಸ್ತ್ರೀಯ ಸಂಗೀತ ಯಾವಾಗಲೂ ರಾಜಾಶ್ರಯ ಪಡೆದು ಅರಮನೆಗಳ ಅಂಗಣದಲ್ಲಿಯೇ ಅನುರಣಿಸುತ್ತ ಬಂತು. ದೊಡ್ಡವರು ಮಾತ್ರ ಅದನ್ನು ಶೋಕಿ ಎಂಬಂತೆ ಬೆಳೆಸಿಕೊಂಡು ಬಂದರು. ಜಾನಪದ ಸಂಗೀತ ಜನರ ನಡುವಿನಿಂದ ಹುಟ್ಟಿ ಬೆಳೆದು ಜನಮನದಲ್ಲಿ ನಿಂತಿತು. ರೈತನೆ ಮೊದಲಾಗಿ ಹಳ್ಳಿಯ ಸಮಸ್ತರೂ ಜಾನಪದ ಸಂಗೀತವನ್ನು ಎದೆಯೊಳಗಿನ ಪದವನ್ನಾಗಿ ಪ್ರೀತಿಸಿದರು.

ಜನಸಾಮಾನ್ಯರಿಗೆ ಶಾಸ್ತ್ರೀಯ ಸಂಗೀತವನ್ನು ಆಲಿಸುವ ಅವಕಾಶ ತೀರ ಅಪರೂಪವೆನಿಸಿದ್ದ ಕಾಲವೂ ಒಂದಿತ್ತು. ಆ ಕೊರತೆಯನ್ನು ನೀಗಿಸಿದವರು ಕೀರ್ತನಕಾರರು. ಅವರೆಲ್ಲ ಒಳ್ಳೆಯ ನಟರೂ ಹೌದು, ಸಂಗೀತ ಪ್ರವೀಣರೂ ಹೌದು. ಪೌರಾಣಿಕ ಸನ್ನಿವೇಶಗಳನ್ನೆಲ್ಲ ನಿರೂಪಕನಾಗಿಯೂ, ಪಾತ್ರಗಳಾಗಿಯೂ ಆಸಕ್ತ ರಸಿಕರಿಗೆ ಅವರು ತಲಪಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತು. ನಾಟಕ ಪ್ರಕಾರ ಹುಟ್ಟಿಕೊಂಡದ್ದು ಬಹುಶಃ ಈ ಕೀರ್ತನಕಾರರ ಕಲ್ಪನೆಯ ಪರಿಣಾಮವಾಗಿಯೇ ಇರಬೇಕು. ಕೀರ್ತನಕಾರರು ನುರಿತ ಸಂಗೀತ ಪಟುವೂ ಆಗಿರುತ್ತಿದ್ದರು. ಹೀಗೆ, ಜನಸಾಮಾನ್ಯರ ಸಂಗೀತದ ಹಸಿವನ್ನು ನಾಟಕಗಳು ಹಿಂಗಿಸಲಾರಂಭಿಸಿದವಲ್ಲ, ಆಗ ಅವುಗಳ ಜನಪ್ರಿಯತೆ ಹೆಚ್ಚಾಗತೊಡಗಿತು. ಹೀಗಾಗಿ ಆಗಿನ ನಟ-ನಟಿಯರೆಲ್ಲ ನುರಿತ ಸಂಗೀತ ಪಟುಗಳೇ. ಸಂಗೀತ ಬಾರದವ ಹಾಸ್ಯಪಾತ್ರವನ್ನೋ ಮತ್ತೇನನ್ನೋ ಮಾಡಬೇಕಾಗುತ್ತಿತ್ತು. ಆಗಿನ ನಾಟಕಗಳಿಗೆ ಸಂಗೀತವೆ ತಮ್ಮ ಟ್ರಂಪ್ ಕಾರ್ಡ್. ಅದೇ ಕಾರಣಕ್ಕೆ ಆಗೆಲ್ಲ ಕಂಪನಿಯ ಮಾಲೀಕರು ತಮ್ಮಲ್ಲಿರುವ ಮಕ್ಕಳಿಗೆ, ಯುವಕ-ಯುವತಿಯರಿಗೆ ಸಂಗೀತಾಭ್ಯಾಸ ಮಾಡಿಸುವುದರೆಡೆ ಹೆಚ್ಚು ಗಮನ ಹರಿಸಿದರು. ಅವರಿಗೆ ಪಾಠ ಹೇಳಿ ಕೊಡುವುದಕ್ಕಾಗಿಯೇ ಪರಿಣಿತ ಮೇಷ್ಟ್ರನ್ನು ನೇಮಿಸಿಕೊಳ್ಳತೊಡಗಿದರು. ಇದಕ್ಕೊಂದು ಶ್ರೇಷ್ಠ ಉದಾಹರಣೆ ಎಂದರೆ ಗುಬ್ಬಿ ವೀರಣ್ಣನವರು. ಅವರ ಕಂಪನಿಯಲ್ಲೇ (ಅದನ್ನು ‘ಚಿಕ್ಕಂಪನಿ’ ಎಂದೆನ್ನುತ್ತಿದ್ದರೆಂದು ನೆನಪು) ಅಲ್ಲವೇ ಬಿ. ವಿ. ಕಾರಂತ, ಮುತ್ತುರಾಜ್ (ಡಾ. ರಾಜ್ ಕುಮಾರ್) ಮೊದಲಾದವರಿಗೆ ಚಿಕ್ಕಂದಿನಲ್ಲೇ ಸಂಗೀತ ದೀಕ್ಷೆ ದೊರೆತದ್ದು…

ಹಾಂ… ಬಚ್ಚಾಸಾನಿಯ ವಿಷಯಕ್ಕೆ ಬರೋಣ.

‘ಆಕೆಯ ಸೋದರಿಯರೆಲ್ಲ ಬಚ್ಚಾಸಾನಿಯ ಶಿಷ್ಯೆಯರೆ. ಅವರಿಗೆಲ್ಲ ಸಂಗೀತ ಮತ್ತು ಅಭಿನಯದ ಆರಂಭದ ಪಾಠ ಅವಳಿಂದಲೇ. ಮುಂದೆ ಹೆಚ್ಚಿನ ಸಾಧನೆಗಾಗಿ ಅವರು ಬೇರೆ ಬೇರೆ ಘರಾಣೆಗಳ ಶಿಷ್ಯೆಯರಾದರು. ಅವರ ಪುತ್ರಿಯರೂ ಸ್ವಲ್ಪ ದೊಡ್ಡವರಾದ ಮೇಲೆ ವಿಖ್ಯಾತ ಸಂಗೀತ ಗುರುಗಳಲ್ಲಿ ‘ಶಿಷ್ಯತ್ವ’ ಪಡೆಯುತ್ತಿದ್ದರು. ತನ್ನ ಮನೆತನದ ಮುಂದಿನ ಪೀಳಿಗೆಯ ಹುಡುಗಿಯರನ್ನೆಲ್ಲಾ ಬಚ್ಚಾಸಾನಿ ಒಳ್ಳೆಯ ಸಂಗೀತ ಬಲ್ಲ ನಟಿಯರನ್ನಾಗಿ ರೂಪಿಸುವತ್ತ ಗಮನಹರಿಸತೊಡಗಿದಳು.

ಅದರ ಪರಿಣಾಮವಾಗಿಯೇ ಸೋನುಬಾಯಿ ದೊಡ್ಡಮನಿ ಮತ್ತು ವಜೀರಾಬಾಯಿ ದೊಡ್ಡಮನಿ ಮುಂದೆ ಕನ್ನಡ ರಂಗಭೂಮಿಯಲ್ಲಿ ರಾಣಿಯರಾಗಿ ರಾರಾಜಿಸುವಂತಾಯಿತು.

ಇವರಿಬ್ಬರಲ್ಲದೆ ಬಚ್ಚಾಸಾನಿಯಿಂದ ಬೆನ್ನು ತಟ್ಟಿಸಿಕೊಂಡು ಬೆಳೆದ ಇನ್ನೂ ಕೆಲವು ಜನರಿದ್ದಾರೆ. ಹಾಸ್ಯ ಸ್ತ್ರೀ ಪಾರ್ಟಿಗೆ ಹೆಸರಾಗಿದ್ದ ಅಹಮ್ಮದ ಸಾಬ್, ಬಳ್ಳಿಯಂತೆ ಬಳುಕುಕುತ್ತ ಪ್ರೇಕ್ಷಕರಿಗೆ ಹುಚ್ಚು ಹಿಡಿಸುತ್ತಿದ್ದ ಲಲಿತಾಕುಮಾರಿ, ಇನ್ನೊಬ್ಬ ಖ್ಯಾತ ನಟ ಹಸನಸಾಬ್ ಮುಂತಾದವರು ಕನ್ನಡ ರಂಗಭೂಮಿಗೆ ಬಚ್ಚಾಸಾನಿಯ ಕೊಡುಗೆಯೇ.

ಸೋನುಬಾಯಿ ದೊಡ್ಡಮನಿ… ನಿಮಗೀಗಾಗಲೇ ಹೇಳಿರುವಂತೆ ಈಕೆ ಬಚ್ಚಾಸಾನಿಯ ತಂಗಿ ಪೀರಾಸಾನಿಯ ಮಗಳು. ‘ಬಚ್ಚಾಸಾನಿಯ ಕಂಪನಿ’ ಆಗ ಆ ಭಾಗದಲ್ಲಿ ‘ಸ್ತ್ರೀ ಸಂಗೀತ ನಾಟಕ ಮಂಡಳಿ’ ಅಥವಾ ‘ಬರೇ ಹೆಣಮಕ್ಕಳ ನಾಟಕ ಕಂಪನಿ’ ಎಂದೇ ಹೆಸರು ಮಾಡಿದ್ದ ಕಾಲ.ಕನ್ನಡದಲ್ಲಿ ಸಿನೆಮಾ ಇನ್ನೂ ಕಣ್ಣು ಬಿಟ್ಟಿರಲಿಲ್ಲವಲ್ಲ…(ಮೊದಲ ಸಿನೆಮಾ ಪ್ರಯತ್ನ ನಡೆದದ್ದು ನಮ್ಮಲ್ಲಿ ಮುಂದೆ 1926 ರಲ್ಲಿ.) ಲಕ್ಷ್ಮೇಶ್ವರದಂಥ ಊರುಗಳ ಜನಕ್ಕೆ ‘ಸಿನೆಮಾ’ ಎಂಬ ಪದವೂ ಗೊತ್ತಿರಲಿಲ್ಲ. ಈಗ ಸಿನೆಮಾಗಳಿಗೆ ಮುಗಿಬೀಳುವಂತೆ ಆಗ ಜನಸಾಮಾನ್ಯರು ಸಂಗೀತ ಮತ್ತು ಮನರಂಜನೆಗಾಗಿ ನಾಟಕಗಳಿಗೆ ಧಾವಿಸುತ್ತಿದ್ದರು.”…’ಬಚ್ಚಾಸಾನಿಯ ಕಂಪನಿ’ಯಲ್ಲಿ ಬರೀ ಹೆಂಗಸರೇ ಪಾರ್ಟು ಮಾಡುತ್ತಾರಂತೆ…!” ಎಂಬ ಸುದ್ದಿಯೇ ಎಲ್ಲೆಡೆಗೂ. ಅವರು ಒಬ್ಬರಿಗಿಂತ ಸುಂದರಿಯರು ಎಂಬ ಖ್ಯಾತಿ ಬೇರೆ. ಅಂದ ಮೇಲೆ ಜನ ಹುಚ್ಚೆದ್ದು ಮತ್ತೆ ಮತ್ತೆ ಆ ಕಂಪನಿಯ ನಾಟಕಗಳನ್ನು ನೋಡುತ್ತಿದ್ದರು.

ಅಂಥ ಕಾಲದಲ್ಲಿ ರಂಗಭೂಮಿಯ ವಿಂಗಿನಲ್ಲಿಯೇ ಜನಿಸಿದವಳು ಈ ಸೋನೂಬಾಯಿ (1920).

ಆಕೆ ಹೊಟ್ಟೆಯಲ್ಲಿದ್ದಾಗಲೇ ‘ರಂಗದೀಕ್ಷೆ’ ಪಡೆದ ಅಭಿಜಾತ ಕಲಾವಿದೆ. ಮನೆಯ ವಾತಾವರಣವೇ ಮಗುವಿನ ಭವಿಷ್ಯ ಜೀವನವನ್ನು ರೂಪಿಸುತ್ತದೆ. ಬುದ್ಧಿ ‘ತಿಳಿ’ಯತೊಡಗಿದ ದಿನದಿಂದ ನಾಟಕದ ಸಂಗೀತ ಮತ್ತು ಸಂಭಾಷಣೆಗಳು ಮಗುವಿನ ಕಿವಿಗೆ ಬೀಳತೊಡಗಿದರೆ ಖಂಡಿತ ಆ ಮಗು ಒಳ್ಳೆಯ ಸಂಗೀತ-ಅಭಿನಯಪಟು ಆಗುತ್ತದೆ.

ಸೋನುಬಾಯಿಯ ವಿಚಾರದಲ್ಲಿ ಆದದ್ದೂ ಹೀಗೆಯೇ.

ಐದರ ಎಳವೆಯಲ್ಲೇ ರಂಗಭೂಮಿಯ ಮೇಲೆ ಬಾಲ ಪ್ರಹ್ಲಾದ, ಭಕ್ತ ಧ್ರುವ ಮುಂತಾದ ಪಾತ್ರಗಳನ್ನು ಸೋನೂಬಾಯಿಯಿಂದ ಮಾಡಿಸಿ ಸಂತೋಷಪಟ್ಟಾಕೆ ಬಚ್ಚಾಸಾನಿ. ಆದರೆ, ಪ್ರೀತಿಯ ‘ಸೋನು’ವಿನಿಂದ ಬೇಗನೆ ಅಗಲುವ ಪ್ರಸಂಗವೂ ಬಚ್ಚಾಸಾನಿಗೆ ಬಂತು. ವಯಸ್ಸೇನು ಸುಮ್ಮನೇ ಇರುತ್ತದೆಯೇ? ಬಚ್ಚಾಸಾನಿಗೆ ವಾರ್ಧಕ್ಯ ಸಮೀಪಿಸಿತು. ಮೊದಲಿನ ಉತ್ಸಾಹ ಬಾ ಅಂದರೆ ಹೇಗೆ ಬಂದೀತು? ಹೀಗಾಗಿ, 1926 ರ ಸುಮಾರಿಗೆ ಕ್ರಮೇಣ ಆಕೆಯ ಕಂಪನಿಯ ಜನಪ್ರಿಯತೆ ಕಡಿಮೆಯಾಗುತ್ತ ಬಂತು. ಆದಾಯಕ್ಕೆ ಪೆಟ್ಟು ಬಿತ್ತು. ಅಷ್ಟಲ್ಲದೇ ಆಗ ಲಕ್ಷ್ಮೇಶ್ವರದಲ್ಲಿ ಮಹಾಮಾರಿ ಪ್ಲೇಗಿನ ಅಟ್ಟಹಾಸ ಬೇರೆ. ಜನರೆಲ್ಲಾ ಊರುಬಿಟ್ಟು ದೂರ ಹೋಗತೊಡಗಿದ್ದ ಆ ಸಂದರ್ಭದಲ್ಲಿ ‘ಬಚ್ಚಾಸಾನಿಯ ಕಂಪನಿ’ ನಡೆದೀತಾದರೂ ಹೇಗೆ?

ಆಗಲೇ ಪೀರವ್ವ ತನ್ನ ಮಕ್ಕಳೊಂದಿಗೆ ಲಕ್ಷ್ಮೇಶ್ವರವನ್ನು ಬಿಟ್ಟು ಹೊರಡಲು ಯೋಚಿಸಿದ್ದು. ಸೋನುಬಾಯಿಗೆ ತಾರವ್ವ, ಮಲಕವ್ವ, ಪ್ಯಾರವ್ವ, ಅಮೀನವ್ವ ಎಂಬ ನಾಲ್ವರು ಅಕ್ಕಂದಿರು. ಅವರೆಲ್ಲ ಕುಲಪರಂಪರೆಯಂತೆ ಅಭಿನಯ ಕಲೆ ಮತ್ತು ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಬೇಕು ಎಂದು ಬಚ್ಚಾಸಾನಿ ಹಾಗೂ ಪೀರವ್ವನ ಬಯಕೆ. ಆ ದಿಸೆಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಮಲಕವ್ವ ಒಬ್ಬಳನ್ನು ಬಿಟ್ಟರೆ ಉಳಿದವರಿಗೆ ಈ ಎರಡೂ ಕಲೆಗಳು ಒಲಿಯಲೇ ಇಲ್ಲ. ಈ ಮೊದಲೇ ನಿಮಗೆ ಹೇಳಿರುವ ಹಾಗೆ ಅವರೆಲ್ಲ ರೂಪದಲ್ಲಿ ಅಪರೂಪದವರು. ಯೌವ್ವನ ಬೇರೆ. ಹೀಗಾಗಿ ಹದಿನಾರರ ಹೊತ್ತಿಗೆ ಸಂಸಾರ ಆರಂಭಿಸಿದವರು. ಮಲಕವ್ವ ದೊಡ್ದವ್ವನ ಇಚ್ಚೆಯಂತೆ ಸಂಗೀತ ಕಲಿತಳು. ಆದರೆ ಅಭಿನಯದಿಂದ ದೂರವೇ ಉಳಿದಳು. ಮುಂದೆ ಅವಳು ಕೂಡ ‘ಸಂಸಾರಸ್ಥೆ’ಯಾಗಿ ಹಾವೇರಿಯಲ್ಲಿ ನೆಲೆಸಿದಳು. ತಂಗಿ ಸೋನವ್ವನೊಂದಿಗೆ ಹಾವೇರಿಗೆ ಬಂದು ಇರುವಂತೆ ತಾಯಿ ಪೀರವ್ವನಿಗೆ ಸಲಹೆ ನೀಡಿದವಳೇ ಈ ಮಲಕವ್ವ.

ಆಕೆ ಹಾವೇರಿಗೆ ಹೋಗಿ ನೆಲೆಸಿದ ಮೇಲಿನದು ಮತ್ತೊಂದು ಕಥೆ.

‍ಲೇಖಕರು G

September 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

2 ಪ್ರತಿಕ್ರಿಯೆಗಳು

  1. Dhananjaya Kulkarni

    “ಗೋವಾ” ತಮ್ಮ ಅಕ್ಷರಗಳ ಮೂಲಕ ನಮ್ಮನ್ನೆಲ್ಲ ಹಿಡಿದು ಹಾಕಿ ಬಿಡುತ್ತಾರೆ. ಅವರ ಬರವಣಿಗೆಯಲ್ಲಿ ಅದೆಂತಹ ಮೋಡಿ ಇದೆಯೋ ಗೊತ್ತಿಲ್ಲ….ಅವರು ಬರೆಯುತ್ತಿರುವ ಎಲ್ಲ ಘಟನೆಗಳಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ ಎಂದೆನಿಸುತ್ತದೆ….

    ಪ್ರತಿಕ್ರಿಯೆ
  2. ಹಿಪ್ಪರಗಿ ಸಿದ್ದರಾಮ್

    ರಂಗಭೂಮಿಗಿರುವ ತಾಕತ್ತು ಇರುವುದೇ ಹಾಗೆ, ರಂಗಪ್ರಯೋಗವಿರಲಿ, ರಂಗಲೇಖನವಿರಲಿ ತನ್ನ ಅದ್ಭುತ ಶಕ್ತಿಯಿಂದ ಪ್ರೇಕ್ಷಕ/ವೀಕ್ಷಕ/ಶ್ರೋತೃ ಮುಂತಾದ ವರ್ಗಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಲುವುದು ಅದರ ಜಾಯಮಾನ, ಅದರಂತೆ ವಾಜಪೇಯಿ ಸರ್ ಲೇಖನಿಯು ಸಹ ಲೇಖನ ಮುಗಿಯುವತನಕ ಬೇರೆಡೆ ಲಕ್ಷ್ಯಗೊಡದಂತೆ ಓದಿಸಿಕೊಂಡು ಹೋಗುವ ತಾಕತ್ತಿನದು ಎಂದರೆ ಅತಿಶಯೋಕ್ತಿಯೇನಲ್ಲ ! ಗೋಪಾಲ ವಾಜಪೇಯಿ ಸರ್ ನಿಮಗೆ ಧನ್ಯವಾದಗಳು !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: