ಗೋಪಾಲ್ ವಾಜಪೇಯಿ ಕಾಲಂ : ದೊಡ್ಡಮನಿ ಘರಾಣೆದ ಕಪ್ಪರದ ಗೊಂಬಿ…

ಸುಮ್ಮನೇ ನೆನಪುಗಳು – 15   ಮುಂಜೇಲಿಗೆ ಬರತೀವು…” ಎಂದು ಬಚ್ಚಾಸಾನಿಗೆ ಹೇಳಿ ಹೋಗಿದ್ದನಲ್ಲ ನಿಂಗಪ್ಪ… ಇನ್ನೂ ಬೆಳಗಾಗಿ ತಾಸೂ ಕಳೆದಿರಲಿಲ್ಲ. ಥೇಟರಿನ ಹತ್ತಿರ ಕಾರು ಬಂದು ನಿಂತಿತು. ಅದನ್ನು ನಿರೀಕ್ಷಿಸಿಯೇ ಇದ್ದಳು ಬಚ್ಚಾಸಾನಿ. ಕಾರಿನ ಸದ್ದು ಕೇಳಿದೊಡನೆಯೇ ಆಕೆ, ‘ಭಾಳ ಅವಸರದ ಮನಶ್ಯಾ ಇರಬೇಕು ಈ ಹುಡಗಾ…’ ಎಂದು ಮನದಲ್ಲಿಯೇ ಅಂದುಕೊಂಡು ನಕ್ಕಳು. ಹಾಗೆ ನಗುತ್ತಿರುವಾಗಲೇ ಆಕೆಯ ಎದುರು ನಿಂತಿದ್ದ ವರಮಹಾಶಯ… ಆತ ವಜೀರವ್ವಳನ್ನು ತುಂಬ ಜೀವದಷ್ಟೇ ಜೋಪಾನವಾಗಿ ನೋಡಿಕೋಬಲ್ಲ ಎಂದು ಹಿಂದಿನ ರಾತ್ರಿಯೇ ಅವಳಿಗೆ ಖಾತ್ರಿಯಾಗಿಬಿಟ್ಟಿತ್ತು. ‘ಮುದುಕಿನೂ ಭಾಳ ಮುಂದಾಲೋಚನೀಯಾಕ್ಯಾs ಮತ್ತ… ಬೆಳಗಾಗೋಗೊದ್ರೊಳಗs ಎಲ್ಲಾ ತಯಾರಿ ಮಾಡಿಟ್ಟಬಿಟ್ಟಾಳ…’ ಎಂದು ನಿಂಗಪ್ಪ ಮನದಲ್ಲೇ ಅವಳನ್ನು ಪ್ರಶಂಸಿಸಿದ. ಪಕ್ಕದ ಬೋರ್ಡಿಂಗ್ ಮನೆಯೇ ಲಗ್ನ ಮಂಟಪ. ಅಷ್ಟರಲ್ಲೇ ತಳಿರು ತೋರಣ, ಬಾಳೆಯ ಕಂಬ, ದೊಡ್ಡ ರಂಗೋಲಿ ಎಲ್ಲ ಅಲ್ಲಿತ್ತು. ಹೊಸ ಧೋತ್ರ, ಹೊಸ ಅಂಗಿ, ಬಣ್ಣದ ಪಟಕದಲ್ಲಿ ಶೋಭಿಸುತ್ತಿದ್ದ ಮನೆಯ ಗಂಡಸರು. ಹೊಸ ಸೀರೆಗಳನ್ನು ಉಟ್ಟು, ಒಡವೆಗಳನ್ನು ಧರಿಸಿ, ಕುಲುಕುಲು ನಗುತ್ತ ಸಡಗರದಿಂದ ಸುತ್ತಾಡುತ್ತಿದ್ದ ಹೆಂಗಸರು. ವಜೀರಾಳ ಸಮವಯಸ್ಕ ಹುಡುಗಿಯರೂ ಅಷ್ಟೇ. ನಿಂಗಪ್ಪನ ಕಣ್ಣಿಗೆ ಅವರೆಲ್ಲ ‘ಅವಳಂತೆಯೇ’ ಕಂಡರು. ಆತ ಗಮನಿಸಿ ನೋಡಿಯೇ ನೋಡಿದ. ತಾನು ಫಸಗೀ ಬಿದ್ದೆನೆಂದು ಆತನಿಗೆ ಗೊತ್ತಾದದ್ದು ಅವರೆಲ್ಲ ಪಿಸಿ ಪಿಸಿ ನಗತೊಡಗಿದಾಗಲೇ. ಆದರೂ ಆತನ ಕಣ್ಣುಗಳು ಆಕೆಯನ್ನು ಅರಸುತ್ತಲೇ ಇದ್ದವು. ಅಷ್ಟರಲ್ಲೇ ಒಬ್ಬ ಹುಡುಗ ಪುರೋಹಿತನನ್ನು ಕರೆತಂದ. ಒಳಗೆ ಹೆಜ್ಜೆಯಿರಿಸುತ್ತಿದ್ದಂತೆಯೇ ಏನೇನೋ ಮಂತ್ರ ಆರಂಭಿಸಿದ ಪುರೋಹಿತ. ತಾನೇ ಎದರಾ ಬದರಾ ಎರಡು ಮಣೆಗಳನ್ನು ಹಾಕಿದ. ಪೂರ್ವಕ್ಕೆ ಮುಖವಾಗಿ ವಜೀರಾಳನ್ನು ಕೂಡಿಸಿದ. ಆಕೆಯ ಎಡಬದಿಗೆ ತಬಲಾ, ಪೇಟೀ (ಹಾರ್ಮೋನಿಯಂ), ತಂಬೂರಿ ಮತ್ತು ಗೆಜ್ಜೆಗಳನ್ನು ಇಡಿಸಿದ. ಪುರೋಹಿತನ ಅಪ್ಪಣೆಯಂತೆ ಎದುರಿನ ಮಣೆಯ ಮೇಲೆ ನಿಂಗಪ್ಪ ಆಸೀನನಾದ. ದೇವದಾಸಿ ಪದ್ಧತಿಯಂತೆ ‘ಮುತ್ತು ಕಟ್ಟಿಸುವ’ ಶಾಸ್ತ್ರ ಶುರುವಾಯಿತು. ನಿಂಗಪ್ಪ ಮತ್ತು ಆತನ ಗೆಳೆಯರನ್ನು ಬಿಟ್ಟರೆ ಬೇರಾರ ಮುಖದಲ್ಲೂ ಸಂತಸದ ಸುಳಿವೇ ಇರಲಿಲ್ಲ. ಹೆಣ್ಣು ‘ಒಪ್ಪಿಸಿಕೊಡು’ವಾಗ ಎಲ್ಲರ ಕಣ್ಣುಗಳೂ ಹನಿಗೂಡುವುದು ಸಾಮಾನ್ಯ. ಆದರಿಲ್ಲಿ ಶಾಸ್ತ್ರ ಶುರುವಾದ ಕೂಡಲೇ ಎಲ್ಲರೂ ಬಿಕ್ಕಿ ಬಿಕ್ಕಿ ಅಳಲು ಶುರು…! ದೊಡ್ಡಮನಿ ಮನೆತನದಲ್ಲಿ ಈ ಎಲ್ಲರೂ ಯಾವುದೇ ಭೇದಭಾವವಿಲ್ಲದೆ ಹಿರಿಯರ ಪ್ರೀತಿ ಮತ್ತು ಕಾಳಜಿಗಳನ್ನು ಸಮಾನವಾಗಿ ಹಂಚಿಕೊಂಡು ಬೆಳೆದವರು. ಇದಕ್ಕೂ ಮುಂಚಿನ ಇಂಥ ಸಂದರ್ಭಗಳಲ್ಲಿ ಹೀಗಾಗಿತ್ತೋ ಇಲ್ಲವೋ… ಆದರೆ ಈಗ ವಜೀರಾಳ ಕುತ್ತಿಗೆಗೆ ಭಟ್ಟರು ತಾಳಿ ಕಟ್ಟಿದ್ದೇ ತಡ ಬಚ್ಚಾಸಾನಿ ದುಃಖ ಒತ್ತರಿಸಿ ಬಂದು, ಅಲ್ಲಿ ನಿಲ್ಲಲಾರದೆ ಸೆರಗು ಬಾಯಿಗಿಟ್ಟುಕೊಂಡು ಎದ್ದು ಹೋಗಿಬಿಟ್ಟಳು. ಪಕರೂ ಸಾಬ ‘ಕೋಟೀ ಖೋಲಿ’ಗೆ ಹೋಗಿ ಕದ ಮುಚ್ಚಿ ಕೂತ. ಹಿರಿಯರಿಬ್ಬರೂ ಹಾಗೆ ಮಾಡಿದ್ದನ್ನು ಕಂಡು ಉಳಿದವರೂ ಭೋರಾಡಿ ಅಳತೊಡಗಿದರು. ಪೀರವ್ವ, ಸಾಬವ್ವ ಮಾತ್ರ ಪರಿಸ್ಥಿತಿಯನ್ನು ಅರಿತು ಮುಂದೆ ಆಗಬೇಕಾದ ಕೆಲಸಗಳ ಕಡೆ ಗಮನ ಹರಿಸಿದರು. ಹಿರಿಯರಿಬ್ಬರನ್ನೂ ಕರೆತರಲು ಅವರು ಹರಸಾಹಸ ಪಡಬೇಕಾಯಿತು. ಅಂತೂ ಹೊರಗೆ ಬಂದ ಬಚ್ಚಾಸಾನಿ ಕಂಬನಿ ತುಂಬಿದ ಕಣ್ಣುಗಳಿಂದಲೇ ಎಲ್ಲವನ್ನೂ ವೀಕ್ಷಿಸಿದಳು. ಪಕರೂ ಸಾಬ ಮಾತ್ರ ಏನೂ ಮಾತಾಡದೆ ನಡೆಯುತ್ತಿರುವುದನ್ನು ನೋಡುತ್ತ ಒಂದೆಡೆ ಕಂಬದಂತೆ ನಿಂತುಬಿಟ್ಟ. ಇಂಥದರಲ್ಲೇ ಪುರೋಹಿತರು ಎಲ್ಲವನ್ನೂ ಸಾಂಗಗೊಳಿಸಿದ್ದರು. ಈಗ ವಜೀರವ್ವನನ್ನು ಕಳಿಸಿಕೊಡುವ ಕಾರ್ಯಕ್ರಮ. ಬಚ್ಚಾಸಾನಿ ಗಟ್ಟಿ ಧೈರ್ಯ ಮಾಡಿ ಎದ್ದಳು. ವಜೀರವ್ವನ ಕೈ ಹಿಡಿದು ನಿಂಗಪ್ಪನ ಕೈಯಲ್ಲಿಡುತ್ತ, ”ಸಾವ್ಕಾರs, ನಮ್ಮ ದೊಡ್ಡಮನಿ ಘರಾಣೆದ ಕಪ್ಪರದ ಗೊಂಬಿ ಈ ವಜೀರವ್ವಾ… ನನಗಂತೂ ಕಣ್ಣಿದ್ದಂಗ. ಈ ನನ್ನ ಕಣ್ಣನ ನಾ ನಿಮಗೀಗ ಕಿತ್ತಿ ಕೊಡಾಕತ್ತೀನಿ. ಈ ಹುಡಗೀ ಕಣ್ಣಾಗ ಹಿಂದೆಂದೂ ನೀರು ಬಂದಿಲ್ಲಾ. ಮುಂದೂ ಎಂದೂ ನೀರ ಬರದಂಗ ನೋಡಿಕೋರಿ ಎಪ್ಪಾ… ಇದಕ್ಕಿನಾ ಹೆಚಿಗಿ ನಾ ಏನೂ ಹೇಳೂದುಲ್ಲಾ…” ಎಂದಳು. ಕೂಡಲೇ ನಿಂಗಪ್ಪ ಅವಳ ಕಾಲಿಗೆ ಬಿದ್ದ. ”ಹಿರೇರು ನೀವು. ನಮ್ಮವ್ವನಕಿಂತಾ ದೊಡ್ಡವರು. ಇಕಾ, ನಿಮ್ಮ ಈ ‘ಕಪ್ಪರದ ಗೊಂಬಿ’ ಸಮೀಪ ಎಂದೂ ಬೆಂಕಿ ಸುಳೀದಂಗ ನೋಡಿಕೊಂತೀನಿ,” ಎಂದ. -0-0-0-0-0-

ಕಾರು ಮನೆಯ ಮುಂದೆ ಬಂದು ನಿಂತಾಗ, ಗದಿಗೆವ್ವ ಒಂದು ಕ್ಷಣ ಮನಸ್ಸನ್ನು ಗಟ್ಟಿ ಮಾಡಿಕೊಂಡಳು. ನಿಂಗಪ್ಪ ಅಂಜುತ್ತಂಜುತ್ತಲೇ ಒಳಗೆ ಬಂದ. ಎದುರಿಗೆ ನಿಂತಿದ್ದ ಅವ್ವನನ್ನು ನೋಡಿ ಅಳುಕಿದನಾದರೂ ನೇರ ಹೋಗಿ ಅವಳ ಕಾಲಿಗೆ ಬಿದ್ದು, ”ನಾ ಮಾಡಿದ್ದು ತೆಪ್ಪು ಅನಿಸೀದ್ರ ಏನ್ ಬೇಕಾರೂ ಶಿಕ್ಷಾ ಕೊಡಬೇ… ಅನುಭವಸಾಕ ತಯಾರದೀನಿ…” ಎಂದು ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ. ಗದಿಗೆವ್ವ ಒಮ್ಮೆ ಕೋಣೆಯತ್ತ ನೋಡಿದಳು. ಅಲ್ಲಿ ಅಳುತ್ತ ಕೂತಿದ್ದ ಮಲ್ಲವ್ವ ಕಂಡಳು. ಈಗ ತಾನು ತುಂಬ ಸಂಯಮದಿಂದ ವರ್ತಿಸಬೇಕು. ಇಲ್ಲದಿದ್ದರೆ ಈ ಮನೆ ಮುರಿಯುತ್ತದೆ. ಹಾಗೆ ಆಗಗೊಡಬಾರದು. ತಲೆತಲಾಂತರದಿಂದ ಹೆಚ್ಚುತ್ತಲೇ ಬಂದ ಮನೆತನದ ಮರ್ಯಾದೆ ಇನ್ನಷ್ಟು ವರ್ಧಿಸುವಂತೆ ನಡೆದುಕೊಳ್ಳಬೇಕು. ಸ್ವಲ್ಪ ಆಚೀಚೆ ಆದರೂ ಅದೊಂದು ‘ವಿನಾಶಕಾರಣ’ವಾಗಿ ಪರಿಣಮಿಸಬಹುದು ಎಂಬ ವಿವೇಕ ಅವಳನ್ನು ಎಚ್ಚರಿಸಿತು. ”ಹೂಂ… ಸಾಕ್ ಸಾsಕು… ಮಾಡಿಕೊಂಡ ಬಂದ ಮ್ಯಾಲೆ ಇನ್ನೇನ ಮಾಡಾಕಾಕ್ಕೈತಿ? ನೀ ಎಂದೂ ಗೈರ್ ಕೆಲಸಾ ಮಾಡಾವಲ್ಲಾ ಅನ್ನೋದು ಗೊತ್ತೈತಿ. ಏಳು,” ನಿಂಗಪ್ಪ ಅಚ್ಚರಿಯಿಂದ ಅವ್ವನ ಮುಖ ನೋಡಿದ. ನಸುನಗೆಯೊಂದಿಗೆ ಮಗನ ಮೈದಡವಿ ಎಬ್ಬಿಸಿದ ಗದಿಗೆವ್ವ ಕೇಳಿದಳು, ”ಎಲ್ಲೆದಾsಳ ಆ ನಿನ್ನ ರಂಬಿ?” ”ಹೊರಗ ಕಾರಿನ್ಯಾಗ…” ”ಕೈ ಹಿಡದಾಕಿನ್ನ ಹಂಗೆಲ್ಲಾ ಹೊರಗ ಕುಂದರಸಬಾರದು ಮಗನs… ಹೋಗ್, ಗಡಾನs ಕರಕೊಂಬಾ ಹೋಗ್… ಅಂತಿಂಥವರ ನಜರು ಬೀಳೂದ ಬ್ಯಾಡಪಾ ಆಕಿ ಮ್ಯಾಲs… ಮೈತುಂಬ ಸೆರಗು ಹೊದಿಸಿ, ಯಾರಿಗೂ ಮಕಾ ತೋರಸದಂಗ ಕರಕೊಂಬಾ ಅಂಗಳಕ…” ಎಂದವಳೇ ಸೊಸೆ ಮಲ್ಲವ್ವನನ್ನು ಕೂಗಿದಳು. ಮಲ್ಲವ್ವ ಏನೂ ಮಾತಾಡದೆ ಬಂದು ನಿಂತಳು. ಅತ್ತು ಅತ್ತು ಅವಳ ಮುಖ ದದ್ದರಿಸಿದಂತಾಗಿತ್ತು. ”ಅಯ್ಯs ಹುಚ್ಚೀ… ಈಟಕೆಲ್ಲಾ ಹೀಂಗ ಅಳಕೋಂತ ಕುಂದರತಾರೇನs…? ಹೋಗು, ಮಕಾ ತೊಕ್ಕೊಂಡು, ಚಂದಾಗಿ ದೇವರ ಮುಂದಿನ ಆರತೀನ ತೊಗೊಂಬಾ ಎವ್ವಾ…” ಯಾವತ್ತೂ ಅತ್ತೆಗೆ ಎದುರಾಡಿ ಗೊತ್ತಿರದ ಮಲ್ಲವ್ವ ಸುಮ್ಮನೇ ಒಳನಡೆದಳು. ಈಚೆ ಮುಂಬಾಗಿಲಿನ ಬಳಿ ಮೈ-ಮುಖವನ್ನು ಪೂರ್ತಿ ಮುಚ್ಚಿಕೊಂಡ ವಜೀರವ್ವ ಬಂದು ನಿಂತಳು. ಅವಳ ಪಕ್ಕದಲ್ಲಿದ್ದ ನಿಂಗಪ್ಪ, ”ಎವ್ವಾ…” ಎಂದ. ಮುದುಕಿ ಮೈಯೆಲ್ಲಾ ನಗೆಯಾಗಿ ವಜೀರವ್ವನ ಬಳಿ ಧಾವಿಸಿ ಬಂದಳು. ಅವಳು ಇನ್ನೇನು ಹೊಸಬಳ ಮುಖದ ಮೇಲಿನ ಸೆರಗನ್ನು ಸರಿಸಬೇಕು, ಅಷ್ಟರಲ್ಲಿ ”ಅತ್ತೆವ್ವಾ…” ಎಂದೆನ್ನುತ್ತ ಆರತಿಯೊಂದಿಗೆ ಪ್ರತ್ಯಕ್ಷಳಾದಳು ಮಲ್ಲವ್ವ. ”ಬೇಶಾತು ನೋಡ ತಂಗಿ… ಇಕಾ, ಇನ್ನೀ ಹುಡಗಿಗೆ ಆರತಿ ಬೆಳಗ ಮಗಳ…” ಮಲ್ಲವ್ವ ಆರತಿ ಬೆಳಗಿದ ಮೇಲೆ ಗದಿಗೆವ್ವ ಅಲ್ಲಿಯೇ ಇದ್ದ ಕಸಬರಿಗೆಯಿಂದ ಒಂದಷ್ಟು ಕಡ್ಡಿಗಳನ್ನೆಳೆದು, ಎಡಗೈಯಲ್ಲಿ ಹಿಡಿದು, ”ಮಲ್ಲವ್ವಾ, ಸೇರು ತುಂಬಿಕೊಂಡು ತೊಗೊಂಬಾ…” ಎಂದು ಹೇಳಿ, ವಜೀರವ್ವನಿಗೆ, ”ಅಯ್ಯs… ಒಂದೀಟು ನಿನ ಮಾರೀ ತೋರ್ಸs ಹುಡುಗಿ,” ಎಂದಳು. ವಜೀರವ್ವ ಮುಖದ ಮೇಲಿನ ಸೆರಗು ಸರಿಸುತ್ತಿದ್ದಂತೆಯೇ ಅವಳ ಮುಖ ನೋಡಿ ಹಾಗೇ ಅವಾಕ್ಕಾಗಿ ಬಾಯಿ ತೆರೆದು ನಿಂತುಬಿಟ್ಟಳು ಗದಿಗೆವ್ವ… ನಿಂಗಪ್ಪ ನಕ್ಕ. ವಜೀರವ್ವನಿಗೆ ಮುಡಿಯಿಂದ ಅಡಿಯವರೆಗೆ ನಿವಾಳಿಸುತ್ತ, ”ಕಳ್ಳಗಣ್ಣು, ಮೆಳ್ಳಗಣ್ಣು ; ಕಾಗೀ ಕಣ್ಣು, ಗೂಗೀ ಕಣ್ಣು ; ಕಾಳೀ ಕಣ್ಣು, ಗೂಳೀ ಕಣ್ಣು ; ಅಂತಾ ಕಣ್ಣು , ಇಂತಾ ಕಣ್ಣು ; ಎಲ್ಲಾ ಕಣ್ಣಿನ ನೆದರೂ ಉದರಿ ಹೋಗ್ಲಿ ಬಾ ಮಗಳ…” ಎಂದು ಪ್ರೀತಿಯಿಂದ ನೋಡಿದಳು ಗದಿಗೆವ್ವ. ಅದೇ ವೇಳೆಗೆ ಮಲ್ಲವ್ವ ಸೇರು ತುಂಬಿ ತಂದು ಹೊಸ್ತಿಲಿನ ಮೇಲಿಟ್ಟಳು… ”ಅಕ್ಕಿ ಹಿಟ್ಟಿನ ಗೊಂಬಿ ಆಗ್ಯಾಳ ನೋಡು ಹಂಗ ಹಂಗ…” ಎಂದು ನಕ್ಕು, ”ಹಾಂ… ಆ ಸೇರು ಒದ್ದು ಒಳಗ ಬಾ ಹುಡಗಿ…” ಎಂದಳು. ವಜೀರವ್ವ ಸೇರು ಒದ್ದು ಒಳಗೆ ಹೆಜ್ಜೆ ಇರಿಸಿದಳು. ಬುಡನ ಸಾಬ ಮೊದಲೇ ಬಂದು, ಗದಿಗೆವ್ವನಿಗೆ ‘ಪರಿಸ್ಥಿತಿ’ಯನ್ನು ಅರುಹಿದ್ದು ಒಳ್ಳೆಯದೇ ಆಯಿತು. ಆದರೂ, ಮನೆಯಲ್ಲಿ ಅದೇನು ದೊಡ್ಡ ರಾದ್ಧಾಂತ ಆಗುತ್ತದೋ, ರಂಪಾಟ ನಡೆಯುತ್ತದೋ ಎಂದು ಹೆದರಿದ್ದ ನಿಂಗಪ್ಪ ಈಗ ನಿರಂಬಳವಾಗಿದ್ದ. ಮನೆಯ ಹೆಂಗಸರು ತನ್ನನ್ನು ಹೇಗೆ ನಡೆಸಿಕೊಳ್ಳುವರೋ ಎಂದು ಅಂಜಿದ್ದ ವಜೀರವ್ವ ಮೈಚಳಿ ಬಿಟ್ಟು ಇರಲಾರಂಭಿಸಿದಳು. ವಜೀರವ್ವನನ್ನು ‘ವಜ್ರವ್ವ’ ಎಂದೇ ಪ್ರೀತಿಯಿಂದ ಕರೆಯತೊಡಗಿದ ಗದಿಗೆವ್ವ ಅಂದು ಸಂಜೆಯೇ ಮನೆಯ ಆಳುಗಳನ್ನೆಲ್ಲ ಕರೆದು, ”ಇನ್ನ ಮುಂದ ಇಕಿನೂ ನಿಮ್ಮ ಸಾವ್ಕಾರ್ತೀನs… ನನಗ, ಮಲ್ಲವ್ವಗ ಎಷ್ಟು ಮರ್ಯಾದಿ ಕೊಡತೀರೋ ಅಷ್ಟs ಇಕಿಗೂ ಮರ್ಯಾದಿ ಕೊಡಬೇಕು… ಇನ್ನ ಮುಂದ, ವಜ್ರವ್ವನ ಪರಪಂಚ ಅಟ್ಟದ ಮ್ಯಾಲೆ. ಆಕೀ ಇರೋ ಮ್ಯಾಲ್ಮನೀಗೆ ಹೊತ್ತೊತ್ತಿಗೆ ಊಟ, ಫಳಾರಾ ಮುಟ್ಟಸಬೇಕು…ತಿಳೀತs…?” ಅಂತ ಅವರಿಗೆಲ್ಲ ತಾಕೀತು ಮಾಡಿದಳು.

-0-0-0-0-0-

ಹೆಬ್ಬಳ್ಳಿಯವರೆಲ್ಲ ಸಂಭ್ರಮಿಸುವ ಕಾಲ ಬೇಗನೆ ಬಂತು. ಅವರೆಲ್ಲರ ಪ್ರೀತಿಯ ವಜ್ರವ್ವ ತಾಯಿಯಾಗುವ ಸುದ್ದಿ ಕೊಟ್ಟಿದ್ದಳು. ಗೋಣಿ ಮನೆತನದವರಿಗಂತೂ ಎಲ್ಲಿಲ್ಲದ ಸಂತಸ. ಗದಿಗೆವ್ವ ಅಜ್ಜಿಯಾಗುವ ಸಡಗರದಲ್ಲಿ ಉಬ್ಬಿ ಹೋದರೆ ಮಲ್ಲವ್ವನಿಗೆ ತಾನೇ ಬಸಿರಿ ಎಂಬಷ್ಟು ಖುಷಿ. ನಿಂಗಪ್ಪನಂತೂ ‘ನಕ್ಷತ್ರಗಳನ್ನು ಹರಿದುಕೊಂಡು ಬರುವಷ್ಟು ಎತ್ತರಕ್ಕೆ’ ಬೆಳೆದೆನೆಂಬ ಹಿಗ್ಗಿನಿಂದ ಹೆಜ್ಜೆ ಹಾಕತೊಡಗಿದ್ದ… ಅದೊಂದು ದಿನ ಗದಿಗೆವ್ವ ಸೊಸೆಯನ್ನು ಕರೆದು, ”ಮಲ್ಲವ್ವಾ… ನಾಳೆ ದಿನಾ ಚೊಲೋ ಐತಿ ಅಂತ ಐನಾರು ಹೇಳ್ಯಾರ. ವಜ್ರವ್ವಗ ಕುಬಸದ ಕಾರ್ಯೇ ಒಂದು ಮುಗಿಸಿಬಿಟ್ರ ಬೇಶಾಕ್ಕೈತೆವಾ…” ಎಂದಳು. ”ಅತ್ತೀ… ಈ ಮನ್ಯಾಗ ತೊಟ್ಲ ತೂಗೂವಂಗಾತಲಾ, ಖುಶೀಲೆ ಮಾಡೂನಂತ…” ಎಂದಳು. ಮರುದಿನ ಊರ ಮುತ್ತೈದೆಯರೆಲ್ಲ ಬಂದು, ವಜ್ರವ್ವನನ್ನು ”ಈ ಮನೀ ಬೆಳಗೋ ಚಂದ್ರಾಮನಂತಾ ಮಗನ್ನ ಹಡಿ…” ಎಂದು ಮನಸಾರೆ ಹರಸಿದರು. ‘ಅಪ್ಪ ಅವ್ವಾ ಇಬ್ಬರೂ ರೂಪವಂತರs ಅಂದಮ್ಯಾಕ ಚಂದ್ರಾಮನಂತಾ ಮಗ ಹುಟ್ಟದs ಏನು?’ ಎಂದು ಮನಸ್ಸಿನಲ್ಲಿಯೆ ಅಂದುಕೊಂಡಳು ಗದಿಗೆವ್ವ. ಪೂರ್ಣ ಪೂರ್ಣ ಒಂಬತ್ತು ತಿಂಗಳು ತುಂಬಿದ ಮೇಲೆಯೇ ಹುಟ್ಟಿದ ಹುಡುಗ ನಿಜಕ್ಕೂ ಪೂರ್ಣಚಂದ್ರನಂತೆಯೇ ಇದ್ದ. ನಿಂಗಪ್ಪ ಜಾತಿ-ಪಾತಿ ಎನ್ನದೆ ಹೆಬ್ಬಳ್ಳಿಯ ಮನೆಮನೆಗೂ ಅಮೀನಗಡದ ಕರದಂಟು ಹಂಚಿ ಹರ್ಷ ಪಟ್ಟ. ಬಾಳಂತನದಲ್ಲಿ ಯಾವುದೇ ಹೈಗೈ ಆಗದಂತೆ ನೋಡಿಕೊಂಡಳು ಗದಿಗೆವ್ವ. ಮಲ್ಲವ್ವನಂತೂ ಕೂಸು-ಬಾಳಂತಿಗೆ ಬೇಕಾದ ಎಲ್ಲವನ್ನೂ ಕ್ಷಣಮಾತ್ರದಲ್ಲಿ ಒದಗಿಸುತ್ತಿದ್ದಳು. ಅವರಿಬ್ಬರ ‘ಸೇವೆ’ಯಿಂದ ಜಗತ್ತಿನಲ್ಲಿ ಜನ ಹೀಗೂ ಇರಬಹುದೇ? ಎಂಬ ಅಚ್ಚರಿ ವಜೀರವ್ವನಿಗೆ. ಮಗುವಿಗೆ ನಿಂಗಪ್ಪನ ಇಚ್ಚೆಯಂತೆ ‘ರಾಮ’ ಎಂದೂ, ವಜೀರವ್ವನ ಆಸೆಯಂತೆ ‘ರಹಮಾನ’ ಎಂದೂ ಹೆಸರುಗಳನ್ನಿಡಲಾಯಿತು. -0-0-0-0-0- ‘ಭಾಳ ಅವಸರದ ಮನಶ್ಯಾ ಇರಬೇಕು ಈ ಹುಡಗಾ…’ ನಿಂಗಪ್ಪನ ಬಗ್ಗೆ ಬಚ್ಚಾಸಾನಿ ಹೇಳಿದ್ದ ಈ ಮಾತು ನಿಮಗೆ ನೆನಪಿರಬೇಕು… ಈಗ ಅದೇ ಮಾತನ್ನು ಹೆಬ್ಬಳ್ಳಿಯ ಜನ ಮತ್ತೊಮ್ಮೆ ಹೇಳುವಂತಾಯಿತು. ಬರೀ ಹೇಳುವಂತಾಯಿತಷ್ಟೇ ಅಲ್ಲ, ಹೇಳಿ ಹೇಳಿ ನಗುವಂತಾಯಿತು. ರಾಮನಿಗೆ ಇನ್ನೂ ವರ್ಷ ತುಂಬುವ ಮೊದಲೇ ವಜೀರವ್ವ ಮತ್ತೆ ಬಸಿರಿಯಾಗಿದ್ದಳು…! ”ಹೆಣ್ಣು ಅಂದ್ರೇನ್ ವರಸ್ದಾಗ ಎರಡೆರಡು ಮಕ್ಕಳನ ಹಡದು ಕೊಡೋ ಯಂತ್ರದ ಗೊಂಬಿ ಅಂತ ತಿಳದಿಯೇನೋ…?” ಗದಿಗೆವ್ವ ಮಗನನ್ನು ತರಾಟೆಗೆ ತೆಗೆದುಕೊಂಡಳು. ”ಇನ್ನೂ ಎರಡರಾಗೈತಿ… ಪಿಂಡಾ ತಗಿಸಿಬಿಡೂನು…” ಎಂಬ ಸಲಹೆಯನ್ನೂ ನೀಡಿದಳು. ”ಹಾಂಗ ಮಾಡೋದು ಪಾಪದ ಕೆಲಸ ಅಲ್ಲೇನಬೇ…” ಅಂತ ನಿಂಗಪ್ಪ. ”ನಾಳೆ ಏನಾರೆ ಹೆಚ್ಚು ಕಮ್ಮಿ ಆತಂದ್ರ…?” ”ಹಂಗೇನೂ ಆಗೂದಿಲ್ಲೇಳಬೇ… ಸುಮ್ಮಕ ಹೆದರತಿ ನೀ…” ಅಂತ ವಾದಿಸಿದ. ”ಕೂಸಿಗೆ ಎರಡ ವರ್ಸಾರೆ ಆಗಬೇಕಪಾ… ಅಂದ್ರ ಹಡದ ಹೆಂಗಸಿನ ಮೈಗೆ ಒಂದೀಟು ಕಸುವು ಬರತೈತಿ… ಹೆಣ್ಣ ಜೀವ ಅದು… ನಿಮಗೇನ ಗೊತ್ತಾಕ್ಕೈತಿ ಗಂಡಸರಿಗೆ ಹೆಂಗಸರ ಕಷ್ಟಾ…?” ತಾಯಿಗೆ ಏನು ಉತ್ತರ ಕೊಡುವುದೆಂದು ತಿಳಿಯದೆ ನಿಂಗಪ್ಪ ಹೆಂಡತಿಯತ್ತ ನೋಡಿದ. ಈ ವಿಚಾರದಲ್ಲಿ ತಾನು ಸುಮ್ಮನಿರುವುದೇ ವಾಸಿ ಎಂಬ ನಿಲುವು ತಳೆದ ಮಲ್ಲವ್ವ ಏನೋ ಕೆಲಸದ ನೆವ ಮಾಡಿಕೊಂಡು ಅಲ್ಲಿಂದ ಆಚೆ ಹೋದಳು. ಯಾಕೋ ಅವಳ ಮುಖ ‘ಸಣ್ಣ’ಗಾಗಿದೆ ಅನಿಸಿತು ನಿಂಗಪ್ಪನಿಗೆ. ಆಗದೇ ಏನು ಮತ್ತೆ? ಬಂಜೆಯ ಪಟ್ಟ ಹೊರಲು ಯಾವ ಹೆಣ್ಣು ತಾನೇ ಬಯಸುತ್ತಾಳೆ…? ಮುಂದೆ ಕೆಲವು ದಿನ ತಾಯಿ-ಮಗನ ನಡುವೆ ‘ಪಿಂಡ’ದ ಕುರಿತೇ ವಾದ ನಡೆಯಿತು. ನಿಂಗಪ್ಪ ಸುತರಾಂ ಒಪ್ಪಲಿಲ್ಲ. ಗದಿಗೆವ್ವ ಈಗ ಈ ವಿಚಾರದಲ್ಲಿ ಏನಾದರೂ ಹೇಳಲೇಬೇಕೆಂದು ಮಲ್ಲವ್ವನನ್ನು ಒತ್ತಾಯಿಸಿದಳು. ”ನನಗಂತೂ ಬ್ಯಾನೀ ತಿನ್ನೋ ಭಾಗ್ಯ ಇಲ್ಲ… ಈ ಭಾಗ್ಯಾನಾರೆ ಸಿಕ್ಕೈತೆಲ್ಲಾ… ಈ ಬಾಳಂತನಾನೂ ಮಾಡಿ ಮುಗಸೂನು…” ಎಂದು ಟೊಂಕಕ್ಕೆ ಸೆರಗು ಬಿಗಿದು ನಿಂತಳು ಮಲ್ಲವ್ವ. ನಿಂಗಪ್ಪನಿಗೆ ಹೆಂಡತಿಯ ಮೇಲಿನ ಗೌರವ ಇನ್ನಷ್ಟು ಹೆಚ್ಚಾಯಿತು. ರಾಮ ತಾಯಿಯಿಂದ ದೂರವಾಗಬೇಕಾಯಿತು. ಕಿರಿಕಿರಿ ಮಾಡುತ್ತಿದ್ದ ಆತನನ್ನು ಮಲ್ಲವ್ವನೆ ಸಂಬಾಳಿಸತೊಡಗಿದಳು. ಆದರೂ ಆತ ಅಳು ನಿಲ್ಲಿಸದಿದ್ದರೆ ರಾಮನನ್ನು ಎತ್ತಿಕೊಂಡೇ ನಿಂಗಪ್ಪ ಹೊಲ-ಮನೆಗಳ ಕೆಲಸಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ. ಆಗೆಲ್ಲ ಆತನಿಗೆ ತಾನು ಅವಸರ ಮಾಡಬಾರದಾಗಿತ್ತು ಎನಿಸಿ, ಅವ್ವನ ಮಾತಿನ ಸತ್ಯ ಅರಿವಿಗೆ ಬರುತ್ತಿತ್ತು. ಆಗೆಲ್ಲ ‘ಮುಂದಿನ ಸಲ ಖಂಡಿತ ಹಾಗೆ ಮಾಡುವುದಿಲ್ಲ,’ ಎಂದು ಅಂದುಕೊಳ್ಳುತ್ತಿದ್ದ. ಆದರೆ, ಮುಂದಿನ ಸಲ ಹಾಗೆ ಮಾಡಲು ವಿಧಿ ಅವಕಾಶವನ್ನೇ ಕೊಡಲಿಲ್ಲ… ವಜೀರಾಳಿಗೆ ಬೇನೆ ಶುರುವಾಯಿತು… ಮೊದಲೇ ಬಂದು ಎಲ್ಲ ತಯಾರಿ ಮಾಡಿಕೊಂಡಿದ್ದ ಸೂಲಗಿತ್ತಿ ತುಂಬ ಕಷ್ಟಪಡಬೇಕಾಯಿತು. ಕೂಸು ಹೊಟ್ಟೆಯ ಒಳಗೆ ತಿರುಗಿಕೊಂಡದ್ದರಿಂದ, ಮಗುವಿನ ಕಾಲುಗಳು ಮೊದಲು ಹೊರ ಬಂದಿದ್ದವು. ಸೂಲಗಿತ್ತಿ ಶತಪ್ರಯತ್ನ ಮಾಡಿದರೂ ಬಗೆಹರಿಯಲೇ ಇಲ್ಲ. ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆ ತನಕ ಸಂಕಟದಿಂದ ಒದ್ದಾಡುತ್ತಿದ್ದ ವಜೀರಾ ಕೂಡ ಸ್ತಬ್ಧಳಾಗಿಬಿಟ್ಟಳು. ಮಗುವಿನ ಅಳುವಾಗಲೀ ವಜೀರಾಳ ನೋವಿನ ಕೂಗಾಗಲೀ ಕೇಳದೆ ಇದ್ದದ್ದು ಗದಿಗೆವ್ವನ ಎದೆಗೆಡಿಸಿತು. ಆಕೆ ಹೆರಿಗೆಯ ಕೊನೆಯ ಬಳಿ ಬರುವುದಕ್ಕೂ ಸೂಲಗಿತ್ತಿ ಬಾಗಿಲು ತೆರೆಯುವದಕ್ಕೂ ಸರಿಹೋಯಿತು. ಗದಿಗೆವ್ವ ಜೋರಾಗಿ ಅರಚಿಕೊಂಡು, ಎದೆ ಎದೆ ಬಡಿದುಕೊಂಡು ಅಳತೊಡಗಿದಳು. ಸಮೀಪದ ಮನೆಗಳವರೆಲ್ಲ ಗಾಬರಿಯಾಗಿ ಓಡಿಬಂದರು. ನಿಂಗಪ್ಪ ನಿಂತಲ್ಲೇ ಕುಸಿದುಬಿದ್ದಿದ್ದ. ಮಲ್ಲವ್ವ ರಾಮನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತಿದ್ದಳು. -0-0-0-0-0- ರಾಮನಿಗೆ ಹತ್ತು ವರ್ಷವಾದಾಗ ಗದಿಗೆವ್ವ ಹೇಳುತ್ತಿದ್ದಳಂತೆ, ”ಹೋಗಪಾ ಕೂಸs… ನಿಮ್ಮಪ್ಪನ್ನ ಹುಡಿಕ್ಯೋಂಬಾ ಹೋಗು…” ಹುಡುಗ ನೇರ ಓಡುತ್ತಿದ್ದದ್ದು ಊರ ಮುಂದಿನ ಗೋಣಿಯವರ ಹೊಲಕ್ಕೆ. ಅಲ್ಲಿ ಕೂತಿರುತ್ತಿದ್ದ ಹರಕು ಬಟ್ಟೆಯ ನಿಂಗಪ್ಪ. ”ಎಪ್ಪಾ… ಅಮ್ಮ ಕರಿಯಾಕತ್ಯಾಳ… ಗಡಾನ ಮನೀಗೆ ಬಾ…” ಎಂದು ರಾಮ ಅಪ್ಪನ ಕೈ ಹಿಡಿದೆಳೆದರೆ, ಆತ ಕೈಕೊಸರಿಕೊಂಡು, ಗೋರಿಯನ್ನು ಇನ್ನಷ್ಟು ಗಟ್ಟಿಯಾಗಿ ಅಪ್ಪಿಕೊಂಡು, ”ಇಲ್ಲೆ ಒಳಗ ನನ್ನ ವಜೀರಾ ಜಳಕಾ ಮಾಡಾಕತ್ತಾಳ… ಆಕಿನ್ನ ಕರಕೊಂಡು ಆಮ್ಯಾಕ ಬರತೀನ ಹೋಗ್…” ಎಂದು ಅಲ್ಲಿಯೇ ಕೂತುಬಿಡುತ್ತಿದ್ದನಂತೆ. ಯಾರಾದರೂ ಸ್ನೇಹಿತರು ಒತ್ತಾಯದಿಂದ ಅವನನ್ನು ಮನೆಗೆ ಎಳೆದುಕೊಂಡು ಹೊರಟರೆ ಅವರ ಕೈ ಕಚ್ಚಿ, ಬಿಡಿಸಿಕೊಂಡು ಓಡಿ ಹೋಗಿ, ವಜೀರಾಳ ಗೋರಿಯನ್ನು ಅಪ್ಪಿಕೊಂಡು, ”ವಜೀರಾ… ವಜೀರಾ… ಗಡಾನ ಕದಾ ತೆಗೀ… ಒಳಗ ಬರ್ತೀನಿ…” ಎಂದು ಅಳತೊಡಗುತ್ತಿದ್ದನಂತೆ]]>

‍ಲೇಖಕರು G

September 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

15 ಪ್ರತಿಕ್ರಿಯೆಗಳು

 1. umesh desai

  ಗುರುಗಳ ನಿಮ್ಮ ನಿರೂಪಣಾ ಶೈಲಿಗೆ ಏನೆನ್ನಲಿ..
  ಅಗದಿ ಕಣ್ಣಿಗೆ ಕಟ್ಟಿದಂಗ ಅದ..ಆ ವಜೀರಾ,ನಿಂಗಪ್ಪ, ಮಲ್ಲವ್ವ….
  ಉಫ್ ಎಲ್ಲೋ ಸುತ್ತಮ್ಮುತ್ತ ಸುಳದಾಡಿ ತಮ್ಮ ಕತಿ ತೆರೆದಿಟ್ಟಾರ..

  ಪ್ರತಿಕ್ರಿಯೆ
 2. ramesh kulkarni

  ತುಂಬಿರಲಿ ಬರಹವೆಂಬ ಬಟ್ಟಲು..ಬರಿದಾಗದಿರಲಿ ನಿಮ್ಮ ಅಕ್ಷರದ ಅಕ್ಷಯಪಾತ್ರೆ ..
  ಸರ್ ಕಥೆ ಓದಿದ ಮೇಲೆ ಮನಸ್ಸು ಯಾಕೋ ಗಿರಗಿಟ್ಲೆ ಆಡ್ತಾ ಇದೆ..

  ಪ್ರತಿಕ್ರಿಯೆ
 3. prakash hegde

  ಏನ್ ಛಂದ ಬರೀತಿರ್ರೀ ಗುರುಗಳೆ… !
  ಕಣ್ನಲ್ಲಿ ಒದ್ದೆ ಆತ್ರಿ ……..

  ಪ್ರತಿಕ್ರಿಯೆ
 4. Anitha Naresh Manchi

  ಸುಂದರ ಬರಹ.. ಶಬ್ಧಗಳಿಲ್ಲ ನೋವಿನ ವರ್ಣನೆಗೆ ….

  ಪ್ರತಿಕ್ರಿಯೆ
 5. ಮಂಜುಳಾ ಬಬಲಾದಿ

  ಖರೇನss ಈ ಕಥಿ ಒಳಗ ನಾ ಇಷ್ಟು ಕಳದ ಹೋಗ್ತೀನಿ ಅನ್ನೂ ಕಲ್ಪನಾನss ಇರ್ಲಿಲ್ಲ ನಂಗ.. ವಜೀರವ್ವನ ಕಥಿ ಶುರು ಆಗ್ತಿದ್ದಂಗ ಮುಗಿದು ಬಿಟ್ಟಹಂಗ ಅನಿಸ್ತು… ಬ್ಯಾಸರ ತರಿಸಿತು ಅವಳ ಸಾವು..:-( ಆದ್ರೂ ಮುಂದೇನು ಅನ್ನೂ ಕುತೂಹಲ ಅಂತೂ ಬೆಳೀಲಿಕ್ಕೇ ಹತ್ತೇದ!

  ಪ್ರತಿಕ್ರಿಯೆ
 6. Mudgal Venkatesh

  ಗೋವಾ ಸಾಹೇಬ್ರೆ, ನಿಮ್ಮ ಬರಹದ ಶೈಲಿಗೆ ನಾನು ಮನಸೋತೆ …..super write-up

  ಪ್ರತಿಕ್ರಿಯೆ
 7. Pushparaj Chauta

  ಸಾಮರಸ್ಯದ ನೆಲೆಗಟ್ಟು ಕೂಡ ಓದುಗನಿಗೆ ಮುದ ನೀಡುತ್ತದೆ.ಸರ್. ಮಾತಿಲ್ಲ ನನ್ನ ಬಳಿ.. ಮೂರು ಸಲ ಓದಿದೆ. ಅಂತ್ಯ ಗದ್ಗದಿತ!

  ಪ್ರತಿಕ್ರಿಯೆ
 8. Atmananda

  sir!!! naa illi en baribeku??? mounave uttama…nim bagge bhaal hemme ada sir…

  ಪ್ರತಿಕ್ರಿಯೆ
 9. ಹಿಪ್ಪರಗಿ ಸಿದ್ದರಾಮ್

  ಸರ್, ನಾ ಇಲ್ಲೇ ಏನಂಥ ಬರೀಲಿ…ಗೊತ್ತಾಗುವಲ್ಲದು…(ಇದರ ನಡುವೆ ಎಲ್ಲೋ ಒಂದು ಕಡೆ ವಿಜಾಪೂರ-ಹಾವೇರಿ ಸೀಮೆಯ ಪ್ರೇಮಿ ನಿಮ್ಮ ‘ದೊಡ್ಡಪ್ಪ’ ನೆನಪಾಗುತ್ತಿದ್ದಾನೆ)ಯಾಕಂದ್ರ ವಜೀರಾ…ವಜ್ರಮ್ಮ…ನ ಜೀವನ ಬೇಗನೆ ಮುಗಿತಲ್ಲಾ….ಅನ್ನೂದು ಒಂದು ಕಡೀಗಾದರ….ರಾಮ ಅನ್ನೋ ಅವಳ ಕುಡಿಗೂಸು ಮುಂದ ಏನಾಗತಾನ…..ಅನ್ನೋ ಕುತೂಹಲಾನಾ ನೀವು ನಮ್ಮಲ್ಲಿ ಹುಟ್ಟಿಸಿಬಿಟ್ಟೀರಿ….ಈ ಪ್ರೇಮಕಥಾನಕ ಇಲ್ಲೇ ಎಲ್ಲೋ ನಮ್ಮ ಸುತ್ತಾ ಮುತ್ತಾ ನಡೀಲಿಕತ್ತಾದೇನೋ ಅನ್ನೂವಂಗ ಪ್ರಸ್ತುತಪಡಿಸುವ ಶೈಲಿಗೆ ಸಾವಿರದ ಶರಣೇಂದೇನು ! ಮುಂದುವರಿಯಲಿ ಮಾಗಿದ ಮನಸ್ಸಿನಿಂದ ಮರುನೆನಪಿಸುವ ಇಂತಹ ಕಥಾನಕಗಳು….ಧನ್ಯವಾದಗಳು ಗೋಪಾಲ ವಾಜಪೇಯಿ ಸರ್…..ಶುಭದಿನ

  ಪ್ರತಿಕ್ರಿಯೆ
 10. arathi ghatikaar

  ಗೋಪಾಲ್ ಮಾಮ ,
  ಈ ಕಥಿ ಕೊನೆ ಮುಟ್ಟುದ್ರೋಳಗ ವಜ್ರವ್ವನಗತೆನಾ ನನ್ನ ಮನಸೂ ಸ್ಥಬ್ದವಾಗಿಬಿಟ್ಟದ ನೋಡ್ರಿ . ಏನ್ ಹೇಳ್ಲಿ, ಈ ಗಡಿಗೆವ್ವ , ಮಲ್ಲವ್ವ , ನಿಂಗಪ್ಪ ಎಲ್ಲ ಪಾತ್ರಗಳ ಕಥಿ ಬರ್ದಿಲ್ಲ ನೀವು , ಅದರ ಬದ್ಲು ಸಿನಿಮಾನೇ ತೋರ್ಸಿ ಬಿಟ್ಟೀರಿ . ನಮ್ಮ ಕಡೆ ಭಾಷಾ ನಿರೂಪಣ ಶ್ಯಲಿ ಅಗದಿ ಭಾಳ ಶೇರತು ! ನಿಮ್ಮ ಬರವಣಿಗೆಗೆ ನನ್ನ ಸಲಾಂ .
  ಆರತಿ ಘತಿಕಾರ್
  ದುಬೈ

  ಪ್ರತಿಕ್ರಿಯೆ
 11. Swarna

  ಹೆಬ್ಬಳ್ಳಿಯ ಹಂಚಿನ ದೊಡ್ಡ ಮನೆಗಳು ಕಣ್ಣ ಮುಂದೆ ಬಂದವು.
  ಮುಂದಿನ ಭಾಗಕ್ಕಾಗಿ ಕಾಯುತ್ತೇವೆ.
  ಸ್ವರ್ಣಾ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: