ಗೋಪಾಲ ವಾಜಪೇಯಿ ಕಾಲಂ : ಅಲ್ಲಿ ಬಂದರು ಬೇಂದ್ರೆ…

ಸುಮ್ಮನೇ ನೆನಪುಗಳು – 20

ನಮ್ಮ ಊರಿನ ‘ಒನ್ನೇ ನಂಬರ್ ಸಾಲಿ’ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ ಎಂದೆನಲ್ಲ… ಮನೆಯ ಪರಿಸ್ಥಿತಿ ಸರಿಯಾಗಿರದ ಕಾರಣ ಆ ನಂತರ ನಾನು ಊರು ಬಿಡಬೇಕಾಯಿತು.

ಅದಕ್ಕೂ ಮುನ್ನ ನಮ್ಮ ಹಿರಿಯರೆಲ್ಲ ಒಂದೆಡೆ ಸೇರಿ, ”ಅಪ್ಪ ಇಲ್ಲದ ಈ ಹುಡಗನ್ನ ಓದಿಸಿ, ಬೆಳಸಿ, ದೊಡ್ದಾವನ್ನಾಗಿ ಮಾಡೂದು ನಮ್ಮೆಲ್ಲಾರ ಕರ್ತವ್ಯ… ಮ್ಯಾಟ್ರಿಕ್ ತನಕಾ ಓದಲಿಕ್ಕೆ ನಾವೆಲ್ಲಾ ಹ್ಯಾಂಗಾರೆ ಮಾಡಿ ಮದತ್ ಮಾಡೂಣು,” ಎಂಬ ನಿರ್ಧಾರಕ್ಕೆ ಬಂದಿದ್ದರು. ವರ್ಷಕ್ಕೆ ಒಬ್ಬರಂತೆ ನನ್ನ ‘ಹೊಣೆ’ಯನ್ನು ಹೊರಲು ಸಿದ್ಧರಾಗಿದ್ದರು ಆ ಕರುಣಾಳುಗಳು…

ಹೀಗೆ ಶುರುವಾಯಿತು ನನ್ನ ‘ವಿದ್ಯಾಯಾನ.’

ಎಷ್ಟು ಊರುಗಳು, ಎಷ್ಟು ಮನೆಗಳು…! ಎಷ್ಟು ಊರುಗಳ ಎಷ್ಟು ಬಗೆಯ ನೀರುಗಳು…! ಎಷ್ಟೆಲ್ಲ ಮಾತೆಯರ ಕೈತುತ್ತಿನ ರುಚಿಗಳು…! ಎಷ್ಟೆಲ್ಲ ಹಿರಿಯರ ‘ಕೈಹಿಡಿದು ಮುನ್ನಡೆಸುವಿಕೆ’ಗಳು…! ಎಷ್ಟೆಲ್ಲ ನೋಟಗಳು, ಎಷ್ಟೆಷ್ಟು ಆಟಗಳು…! ಎಷ್ಟೊಂದು ತರಹದ ‘ಪಾಠ’ಗಳು…! ಎಷ್ಟೊಂದು ರೀತಿಯ ‘ಅನುಭವ’ಗಳು…!

ಆದದ್ದೆಲ್ಲಾ ಒಳಿತೇ ಆಯಿತು…

ಈ ನನ್ನ ‘ವಿದ್ಯಾಯಾನ’ದ ಮೊದಲ ನಿಲ್ದಾಣವೇ ಧಾರವಾಡ…

ಧಾರವಾಡ… !

ಹೆಸರು ಕೇಳಿದ ಕೂಡಲೇ ಬೇಂದ್ರೆ, ಬೆಟಗೇರಿ, ಶಂ.ಬಾ., ಮನಸೂರ, ಕಣವಿಯವರ ಚಿತ್ರಗಳು ನಿಮ್ಮೆದುರು ಕುಣಿಯುತ್ತವೆ ಎಂಬುದು ನನಗೆ ಗೊತ್ತು. ಹಾಗೆಯೇ ಅಲ್ಲಿಯ ಲೈನ್ ಬಜಾರ್ ಪೇಡಾ ನೆನಪಾಗಿ ನಾಲಿಗೆ ನೀರೂರುತ್ತದೆ…

ಬನ್ನಿ, ನಾನೀಗ ನಿಮ್ಮನ್ನು ಸುಮಾರು ಐವತ್ತು ವರ್ಷಗಳ ಹಿಂದಿನ ಧಾರವಾಡಕ್ಕೆ ಕರೆದೊಯ್ಯುತ್ತೇನೆ. ‘ಮಲೆನಾಡಿನ ಸೆರಗು’ ಎಂದೇ ಪ್ರಸಿದ್ಧವಾದ ಧಾರವಾಡಕ್ಕೆ.

‘ವಿದ್ಯಾನಗರಿ’ ಎಂಬ ಬಿರುದು ಹೊತ್ತ ಧಾರವಾಡಕ್ಕೆ.

‘ಏಳು ಮರಡಿಗಳ ಮೇಲಿರುವ ಊರು’ ಈ ಧಾರವಾಡ. ಮರಡಿ ಅಥವಾ ಮೊರಡಿ ಎಂದರೆ ಬೆಟ್ಟಕ್ಕಿಂತ ಚಿಕ್ಕದು, ದಿಬ್ಬಕ್ಕಿಂತ ದೊಡ್ಡದು. ಅದೇ ಆಡುಮಾತಿನಲ್ಲಿ ‘ಮಡ್ಡಿ’ಯಾಗಿದೆ. ನಿಮ್ಮಲ್ಲಿ ಅನೇಕರಿಗೆ ಧಾರವಾಡದ ಮಾಳಮಡ್ಡಿ ಪ್ರದೇಶ ಗೊತ್ತು ಎಂದು ಭಾವಿಸಿದ್ದೇನೆ. ಅಲ್ಲಿಯೇ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಟು ಬಸವರಾಜ ರಾಜಗುರುಗಳು ಇದ್ದದ್ದು… ಹಿರಿಯ ವಿಮರ್ಶಕ ಲೇಖಕ ಶಂಕರ ಮೊಕಾಶಿ ಪುಣೇಕರ್ ವಾಸಿಸಿದ್ದು… ಹಿಂದಿ ಚಿತ್ರ ರಂಗದಲ್ಲಿ ಮನೆಮಾತಾಗಿ ಮೆರೆದ ಲೀನಾ ಚಂದಾವರಕರ್ ಹುಟ್ಟಿ ಬೆಳೆದದ್ದು…

ಇಲ್ಲಿಯ ಸುತ್ತಮುತ್ತಲಿನ ಭೂಮಿಯಲ್ಲಿ ‘ಮಮತೆ’ ತುಂಬಿದೆ. ಅದು ಅನುಭವಕ್ಕೆ ಬರಬೇಕೆಂದರೆ ನೀವು ಮಾವಿನ ಹಣ್ಣಿನ ಸೀಜನ್ನಿನಲ್ಲಿ ಇಲ್ಲಿಗೆ ಬರಬೇಕು. ನಿಮ್ಮ ತಲೆಗೆ ತಾಗುವಷ್ಟು ಎತ್ತರದಲ್ಲೇ ಮಾವಿನ ಪಾಡುಗಾಯಿಗಳು ಒಲವಿನಿಂದ ಓಲಾಡುತ್ತಿರುತ್ತವೆ. ಇದು ‘ಕಲ್ಮಿ’ ಮಾವು. ಉಳಿದ ದಿನಗಳಲ್ಲಾದರೆ ನವಲೂರ ಪೇರಳೆಯಂತೂ ಇದ್ದೇ ಇದೆ. ಬಂಗಾರ ಬಣ್ಣದ ಹಣ್ಣನ್ನು ಕತ್ತರಿಸಿದರೆ ಒಳಗೆಲ್ಲ ಗಾಢ ಗುಲಾಬಿ ಬಣ್ಣದ ತಿರುಳು… ಜೊತೆಗೆ ಅದರದೇ ಆದ ಘಮ… !

ಹಾಂ, ಐವತ್ತು ವರ್ಷಗಳ ಹಿಂದೆ ಈ ಊರಲ್ಲಿನ್ನೂ ಅನೇಕ ಕೆರೆಗಳಿದ್ದವು. ಅವುಗಳಿಗೆಲ್ಲ ಒಂದೊಂದು ಹೆಸರೂ ಇದ್ದವು : ‘ಎಮ್ಮೀಕೇರಿ’, ‘ಕೊಪ್ಪದಕೇರಿ’, ‘ಕೆಂಪೀಗೇರಿ’, ‘ಹಾಲಗೇರಿ’ ಮತ್ತು ನೋಡಿರದಿದ್ದರೂ ನೀವು ಕೇಳಿ ಬಲ್ಲಂಥ ‘ಸಾಧನಕೇರಿ’… ಹೀಗೆ ಇನ್ನೂ ಹಲವು…

ಅರೆ, ‘ಕೆರೆಗಳು’ ಎನ್ನುತ್ತೀರಿ, ಯಾವುದೋ ಕೇರಿಗಳ ಹೆಸರು ಹೇಳುತ್ತಿದ್ದೀರಿ ಎಂದು ಗೊಣಗಬೇಡಿ. ನಮ್ಮಲ್ಲಿ ಮರಾಠಿಯ ಪ್ರಭಾವದಿಂದಾಗಿ ಎಳೆದೆಳೆದು ಹೇಳುವ ಚಟ ಬೆಳೆದುಬಿಟ್ಟಿದೆ. ಆ ಜನ ಹಾಗೆಯೇ. ‘ಪೆನ್’ ಅವರ ಬಾಯಲ್ಲಿ ‘ಪೇನ್’ ಆಗುವುದನ್ನು ಕೇಳುವಾಗ ನಮಗೆ ನಿಜವಾಗಿಯೂ ನೋವಾಗುತ್ತದೆ. ನಾವು ‘ಟೆಸ್ಟ್’ ಮಾಡಲು ಕುಳಿತರೆ, ಅವರು ‘ಟೇಸ್ಟ್’ ಮಾಡತೊಡಗುತ್ತಾರೆ. ಇರಲಿ. ಧಾರವಾಡದ ಕೆರೆಗಳ ಬಗ್ಗೆ ಹೇಳುತ್ತಿದ್ದೆ. ಇಲ್ಲಿದ್ದ ಕೆರೆಗಳ ಪೈಕಿ ಲೈನ್ ಬಜಾರಿನ ಹತ್ತಿರವಿದ್ದ ಕೆಂಪೀಗೇರಿ ಮತ್ತು ಊರ ನಡುವಿದ್ದ ಹಾಲಗೇರಿಗಳು ವಿಸ್ತಾರದಲ್ಲಿ ಬಲು ದೊಡ್ಡವು.

ನೀವು ಧಾರವಾಡದ ಹಳೆಯ ಬಸ್ ನಿಲ್ದಾಣದಿಂದ ಹೊರಗೆ ಬಂದು ಬಲಕ್ಕೆ ಹೊರಳಿ ಹಾಗೇ ಸಾಗಿದರೆ ಸಿಗುವುದೇ ಸುಭಾಸ ರಸ್ತೆ. ಅದರ ಎಡಕ್ಕೆ ಅಂಗಡಿಸಾಲುಗಳ ಹಿಂದೆ ಬಲು ವಿಸ್ತಾರವಾಗಿ ಹರಡಿಕೊಂಡ ತರಕಾರಿ ಮಾರುಕಟ್ಟೆ ಕಾಣುತ್ತದೆ. ಈ ಪ್ರದೇಶ ಆ ಕಾಲಕ್ಕೆ ಒಂದು ದೊಡ್ಡ ಕೆರೆ. ಹೆಸರು ‘ಹಾಲಗೇರಿ’. ಅದನ್ನು ಎಡಕ್ಕಿಟ್ಟುಕೊಂಡೇ ಮುನ್ನಡೆದರೆ ನೀವು ಗಾಂಧೀ ಚೌಕ ಎಂಬಲ್ಲಿಗೆ ಬರುತ್ತೀರಿ. ಇಲ್ಲಿ ರಸ್ತೆ ಮೂರು ಟಿಸಿಲೊಡೆಯುತ್ತದೆ… ನೇರ ಹೋದರೆ ಮಂಗಳವಾರ ಪೇಟೆ. ಬಲಕ್ಕೆ ಹೊರಳಿ ಮುಂದುವರಿದರೆ ಹೊಸ ಯಲ್ಲಾಪುರ. ಚೌಕದ ಎಡ ರಸ್ತೆಯತ್ತ ತಿರುಗಿದರೆ ಸಿಗುವುದೇ ‘ಕೆರೀ ತೆಳಗಿನ ಓಣಿ.’ (‘ಕೆಳಗಿನ’ ಎಂಬುದು ನಮ್ಮವರ ಬಾಯಲ್ಲಿ ‘ತೆಳಗಿನ’ ಆಗಿದೆ.) ಕೆರೆಗೆ ಅತಿ ಸಮೀಪವಿದ್ದ ಕಾರಣ ಇಲ್ಲಿಯ ಮನೆಗಳೆಲ್ಲ ಆಗ ಸದಾ ತಂಪಿನ ತಾಣವಾಗಿರುತ್ತಿದ್ದವು. ನೆಲಕ್ಕೆ ಕಲ್ಲು ಹಾಸು ಇದ್ದರಂತೂ ಅಲ್ಲಿ ಕಾಲುಗಳು ಜುಮುಗುಡುವಷ್ಟು ತಂಪು. ನೆಲಮಟ್ಟದಿಂದ ಸ್ವಲ್ಪ ಮೇಲಿದ್ದ ಮನೆಗಳಲ್ಲಿ ಈ ಸಮಸ್ಯೆ ಇರುತ್ತಿರಲಿಲ್ಲ.

ಈ ‘ಕೆರೀ ತೆಳಗಿನ ಓಣಿ’ಯ ಮೂಲಕ ಹಾದು ಹೋಗುವ ರಸ್ತೆಗೆ ‘ಶಿವಾಜಿ ಬೀದಿ’ ಅಥವಾ ‘ಶಿವಾಜಿ ರಸ್ತೆ’ ಎಂದು ಹೆಸರು.

ಈ ಬೀದಿಯಲ್ಲೇ ಶುರುವಾಯಿತು ನನ್ನ ‘ವಿದ್ಯಾಯಾನ’…

ಬನ್ನಿ… 1964ರ ಅವಧಿಯ ಶಿವಾಜಿ ಬೀದಿಗೆ ಹೋಗೋಣ.

ಆಗ ಈ ಬೀದಿಯಲ್ಲಿದ್ದ ‘ರಿಸ್ಬೂಡ್ ಚಾಳ್ ‘ನಲ್ಲಿದ್ದರು ವೇದಬ್ರಹ್ಮ ಮಹಾದೇವ ಭಟ್ಟ ಸದರಜೋಶಿಯವರು. ನನ್ನ ‘ವಿದ್ಯಾಯಾನ’ದ ಯೋಜನೆಯನ್ನು ರೂಪಿಸಿದವರೇ ಈ ಮಹಾದೇವ ಭಟ್ಟರು. ಅವರ ಧರ್ಮಪತ್ನಿಯೇ ನಮ್ಮ ಸೋದರತ್ತೆ. ಆಕೆ ನನಗೆ ಒಂದರ್ಥದಲ್ಲಿ ಅಜ್ಜಿಯೂ ಹೌದು. ನನ್ನ ಅವ್ವನ ದೊಡ್ಡಮ್ಮ. (‘ಸದ್ದು ಮಾಡುವ ರೊಟ್ಟಿ’ ನೆನಪಿಸಿಕೊಳ್ಳಿ. ನನ್ನ ಅವ್ವನನ್ನು ಕಿಲ್ಲೆಗೆ ಕರೆದೊಯ್ದು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ್ದವಳು ಇದೇ ಅಜ್ಜಿ.) ದಂಪತಿ ಇಬ್ಬರೂ ಧಾರಾಳಿಗಳು.

ಮಹಾದೇವ ಭಟ್ಟರ ಹಿರಿಯ ಮಗ ತಮ್ಮಣ್ಣ ಮಾಮಾ… ಪ್ರಾಥಮಿಕ ಶಾಲಾ ಮಾಸ್ತರ್. ಆತ ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ನನ್ನನ್ನೂ ಸೇರಿಸಿದ್ದಾಯಿತು.

ಸರಕಾರೀ ಶಾಲೆ ಆದ್ದರಿಂದ ನನಗೆ ಫೀಜು-ಗೀಜುಗಳ ಗೋಜೇ ಇರಲಿಲ್ಲ. ಇನ್ನು ಪುಸ್ತಕ, ನೋಟ್ ಬುಕ್ಕು, ಬಟ್ಟೆಬರೆಗಳು… ದಯಾಳುಗಳು ತಮ್ಮ ಹುಡುಗರು ಓದಿ ಬಿಟ್ಟ ಪುಸ್ತಕಗಳನ್ನು ನನಗೆ ಕೊಡುತ್ತಿದ್ದರು. ಇನ್ನು ನೋಟ್ ಬುಕ್ ವ್ಯವಸ್ಥೆ ತಮ್ಮಣ್ಣ ಮಾಮಾನ ಹೊಣೆ. ನಮ್ಮ ಇತರ ಸಂಬಂಧಿಕರ ಮಕ್ಕಳು ಹಾಕಿಕೊಂಡು ಬಿಟ್ಟ ಅಂಗಿ-ಪ್ಯಾಂಟುಗಳನ್ನೇ ನಮ್ಮ ಅವ್ವ (ನಮ್ಮ ಊರಲ್ಲಿಯೇ ಇದ್ದ ಆಕೆ ಉಪಜೀವನಕ್ಕೆ ಬಟ್ಟೆ ಹೊಲಿಯುತ್ತಿದ್ದಳು) ಆಲ್ಟರ್ ಮಾಡಿ ಕಳಿಸುತ್ತಿದ್ದಳು.

ಆಯಿತಲ್ಲ, ಮತ್ತಿನ್ನೇನು ಬೇಕು…?

-0-0-0-

ಆ ವರ್ಷದ ಮೇ 27ರಂದು ಶುರುವಾಯಿತು ಶಾಲೆ…

ನಾನು ಹೊಸ ಶಾಲೆಯಲ್ಲಿ ಕಾಲಿರಿಸಿದ ಮೊದಲ ದಿನ. ಹೊಸ ಸಹಪಾಠಿಗಳು, ಹೊಸ ಮಾಸ್ತರುಗಳು, ಹೊಸ ವಾತಾವರಣ…

ಅವತ್ತು ನಮ್ಮೆಲ್ಲರ ‘ಹಾಜರಿ’ ತೊಗೊಂಡ ಮಾಸ್ತರರು ಮೊದಲು ಒಬ್ಬೊಬ್ಬರನ್ನೇ ಪರಿಚಯಿಸಿಕೊಂಡರು. ಕನ್ನಡ ಆಯಿತು, ಇಂಗ್ಲಿಷ್ ಆಯಿತು, ಹಿಂದಿ ಪಾಠ ಮುಗಿದರೆ ಒಂದಷ್ಟು ವಿರಾಮ.

ಅದನ್ನು ಮುಗಿಸಿಕೊಂಡು ಬರುತ್ತಿದ್ದಂತೆಯೇ ಮುಖ್ಯಗುರುಗಳು ಒಳಗೆ ಬಂದರು. ಶುಭ್ರ ಮಲ್ಲಿಗೆಯಂಥ ಬಿಳಿ ಧೋತರ, ಬಿಳಿ ಜುಬ್ಬಾ, ಬಿಳಿ ಗಾಂಧೀ ಟೋಪಿ ಧರಿಸಿದ್ದ ಅವರ ಹೆಸರು ‘ಮಲ್ಲಿಗವಾಡ ಮಾಸ್ತರು’ ಅಂತ.

ಅವರು ಬಂದವರೇ, ಕಪ್ಪು ಹಲಗೆಯ ಮೇಲೆ ಒಂದು ರೇಖಾಚಿತ್ರ ಬಿಡಿಸಿ, ”ಮಕ್ಕಳೇ, ಇವರು ಯಾರು…?” ಅಂತ ಕೇಳಿದರು.

ನಾವೆಲ್ಲ ಒಕ್ಕೊರಲಿನಿಂದ ”ಚಾಚಾ ನೆಹರೂರೀ ಸsರs…” ಎಂದು ಉತ್ತರಿಸಿದೆವು.

ಅವರು ಗದ್ಗದಿತರಾದರು. ದುಃಖಿಸುತ್ತಲೇ, ”ಮಕ್ಕಳೇ… ಇವತ್ತು ನಿಮ್ಮೆಲ್ಲರ ಪ್ರೀತಿಯ ಚಾಚಾ ನೆಹರೂ ನಿಧನರಾಗಿದ್ಡಾರೆ… ಅದಕ್ಕೇ ನಿಮಗೆಲ್ಲ ಸಾಲಿ ಸೂಟಿ…” ಎಂದರು.

ಸೂಟಿ, ರಜೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ…? ದೊಡ್ದವರೇ ‘ಹೋ’ ಎಂದು ಹಾರಾಡಿಬಿಡುತ್ತಾರೆ. ಅಂಥದರಲ್ಲಿ ನಾವು ಮಕ್ಕಳು…

ಅದು ಗೊತ್ತಿದ್ದ ಮಲ್ಲಿಗವಾಡ ಮಾಸ್ತರರು, ”ಗದ್ಲಾ ಮಾಡದ ಮನೀಗೆ ಹೋಗ್ರಿ… ನಾಳೆ, ನಾಡದ, ಅಚ್ಚೀ ನಾಡದ ಪೇಪರಿನ್ಯಾಗ ಬರೋ ಸುದ್ದೀ ಓದ್ರಿ.

ನಿಮ್ಮ ಪ್ರೀತಿಯ ಚಾಚಾ ನೆಹರೂ ಅವರ ಬಗ್ಗೆ ಒಂದೊಂದು ಪುಟದಷ್ಟು ನಿಬಂಧ ಬರಕೊಂಡು ಬರ್ರಿ…”

ಅಂದು ಬುಧವಾರ…

ನಾನು ಶಾಲೆಯಲ್ಲಿ ಕಾಲಿಟ್ಟ ‘ಗಳಿಗೆ’ಯೇ ಸರಿ ಇರಲಿಲ್ಲವೇನೋ…

-0-0-0-

ಆದರೆ, ಹೀಗೆ ಶುರುವಾದ ‘ವಿದ್ಯಾಯಾನ’ದ ಮೊದಲ ವರ್ಷ ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿಟ್ಟಂಥದು ಎಂಬುದನ್ನಂತೂ ಮರೆಯುವ ಹಾಗಿಲ್ಲ.

ಆ ಲೋಕಕ್ಕೆ ದಾರಿಯಾದದ್ದು ಈ ಶಿವಾಜಿ ಬೀದಿಯೇ.

ಅಬ್ಬಬ್ಬಾ ಅಂದರೆ ಹದಿನೈದು ಅಡಿ ಅಗಲದ ಆ ಸಣ್ಣ ಬೀದಿ ಸಾಹಿತ್ಯ ಕ್ಷೇತ್ರದ ಮಟ್ಟಿಗೆ ತುಂಬಾ ‘ಎತ್ತರ’ದ್ದು. ಬೀದಿಯ ಆರಂಭ ಬಿಂದುವಿಗೆ ಹಿನ್ನೆಲೆಯಾಗಿ ಕಂಗೊಳಿಸುತ್ತಿದ್ದದ್ದು ಸಂಸ್ಕೃತ ಪಾಠಶಾಲೆಯ ಐದಂತಸ್ತಿನ ಪ್ರಾಚೀನ ಕಟ್ಟಡ. ಅದನ್ನು ಬೆನ್ನಿಗಿಟ್ಟುಕೊಂಡು ಹಾಗೇ ಮುಂದುವರಿದರೆ ಬಲಕ್ಕೆ ಒಂದೆರಡು ಮನೆಗಳ ಸಾಲು. ಅವುಗಳಲ್ಲಿ ಕೊನೆಯ ಮನೆಯಲ್ಲಿ ಆಗ ಇದ್ದವರು ಕನ್ನಡದ ಖ್ಯಾತ ಕವಿ, ಅನುವಾದಕ, ಉರ್ದು-ಕನ್ನಡ ಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠರು. ಅವರ ಸೋದರ ಅಳಿಯ ಸ್ವಾಮೀ ಮುಂದೆ ನನ್ನ ಗೆಳೆಯನಾದ. (ಪಂಚಾಕ್ಷರಿ ಹಿರೇಮಠರಿಗೆ ನಾನು ಇಂದಿಗೂ ‘ಪ್ರೀತಿಯ’ ಗೋಪಾಲ. ಇವತ್ತಿಗೂ ಸಿಕ್ಕರೆ ಸ್ವಾಮಿಯ ವಿಚಾರ ಪ್ರಸ್ತಾಪಿಸದೆ ಇರುವುದಿಲ್ಲ ಆ ಹಿರಿಜೀವ.)

ಅವರ ಮನೆಯೆದುರಿನ ಮಹಡಿಯಲ್ಲಿ ವಾಸಿಸಿದ್ದವರು ಕಾರ್ಮಿಕ ಹಕ್ಕುಗಳ ಹೆಸರಾಂತ ಹೋರಾಟಗಾರ ಕವಿ ಕೆ.ಎಸ್. ಶರ್ಮಾ. ಆಗ ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಶರ್ಮಾಜೀ ಬಿಡುವಿದ್ದಾಗ ಮಕ್ಕಳೊಂದಿಗೆ ಚಿನ್ನಿ-ದಾಂಡು ಆಡುತ್ತಿದ್ದರು. ಅವರ ಸಹೋದ್ಯೋಗಿ ಆಗಿದ್ದವರು ಡಾ. ವಾಮನ ಬೇಂದ್ರೆ. ಅವರಿಬ್ಬರೂ (ಶರ್ಮಾ ಮತ್ತು ವಾಮನ ಬೇಂದ್ರೆ) ಹೀರೋ ಸೈಕಲ್ಲನ್ನೇರಿ ಹೀರೋಗಳಂತೆ ಹೊರಟರೆ ನಾವು ‘ಹೋ’ ಎಂದು ಅವರ ಬೆನ್ನತ್ತುತ್ತಿದ್ದೆವು. (ಆ ಕಾಲಕ್ಕೆ ಆಫೀಸು-ಗೀಫೀಸುಗಳಿಗೆ ನಡೆದುಕೊಂಡೇ ಹೋಗುವ ರೂಢಿ. ಅದಕ್ಕೇ ಅವರು ಅಷ್ಟು ಗಟ್ಟಿಯಾಗಿರುತ್ತಿದ್ದರು. ಸೈಕಲ್ ಕೊಳ್ಳುವುದೆಂದರೆ ದೊಡ್ಡ ಸಾಹಸದ ಕೆಲಸ ಆಗ. ಕೊಂಡವರಿಗೆ ಅದನ್ನು ದಿನವೂ ಲಕ ಲಕ ಹೊಳೆಯುವಂತೆ ಇಟ್ಟುಕೊಳ್ಳುವುದೇ ಒಂದು ಶೋಕಿ.)

ಅಲ್ಲಿಂದ ಹಾಗೆಯೇ ಮುಂದೆ ಸಾಗಿದರೆ ಎಡಕ್ಕೆ ‘ಸಮಾಜ ಪುಸ್ತಕಾಲಯ’ ಹಾಗೂ ‘ಪ್ರತಿಭಾ ಗ್ರಂಥ ಮಾಲೆ’ ಎಂಬ ಫಲಕಗಳನ್ನು ಹೊತ್ತು ನಿಂತ ಒಂದು ಮೂರಂತಸ್ತಿನ ಕಟ್ಟಡ. ಕನ್ನಡ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡದ್ದು ‘ಸಮಾಜ ಪುಸ್ತಕಾಲಯ.’ ಅದರ ಸ್ಥಾಪಕ ಬಾಲಚಂದ್ರ ಘಾಣೇಕರರದು ಅನನ್ಯ ರೀತಿಯ ಕನ್ನಡ ಸೇವೆ. ಕರ್ನಾಟಕ ಏಕೀಕರಣ ಮತ್ತು ಭಾರತ ಸ್ವಾತಂತ್ರ್ಯಕ್ಕಾಗಿ ಬಾಲಚಂದ್ರ ಘಾಣೇಕರರು ಪಟ್ಟ ಶ್ರಮ, ಅನುಭವಿಸಿದ ಕಷ್ಟ-ನಷ್ಟಗಳದೇ ಒಂದು ಪ್ರತ್ಯೇಕ ಅಧ್ಯಾಯವಾಗುತ್ತದೆ. ಅವರು ಬಿಳಿಯರ ವಿರುದ್ಧ ಭೂಗತರಾಗಿ ಕೆಲಸ ಮಾಡಿದವರು. 1964ರ ಹೊತ್ತಿಗಾಗಲೇ ಅವರ ಮಗ ಮನೋಹರ ಘಾಣೇಕರರು ತಂದೆಯ ಪ್ರಕಾಶನ ಕಾರ್ಯವನ್ನು ಕಾಲಕ್ಕೆ ತಕ್ಕಂಥ ಸುಧಾರಣೆಗಳೊಂದಿಗೆ ಮುನ್ನಡೆಸತೊಡಗಿದ್ದರು.

ನಾನಾಗ ಹನ್ನೆರಡರ ಬಾಲಕ. ಆಗೀಗ ಆಡುತ್ತಾಡುತ್ತಾ ಅವರ ಅಂಗಡಿಗೆ ಹೋಗುತ್ತಿದ್ದೆ. ಅದೊಮ್ಮೆ ಮನೋಹರರು ರಬ್ಬರಿನಂಥ ಒಂದು ವಸ್ತುವಿನ ಮೇಲೆ ಏನೇನೋ ರೇಖೆಗಳನ್ನು ಮೂಡಿಸಿ, ಆಮೇಲೆ ಅದನ್ನು ವಿಶೇಷ ಬ್ಲೇಡಿನಿಂದ ಕೆತ್ತಿ ತೆಗೆಯುತ್ತ ಕೂತಿದ್ದರು. ”ಅದು ಏನು?” ಎಂದು ಕೇಳಿದರೆ, ”ನೀನs ಹೇಳು ನೋಡೂಣು,” ಎಂದು ಅದನ್ನು ನನ್ನೆದುರು ಹಿಡಿದರು… ”ಗುಡ್ಡ, ಗಿಡ, ಗುಡಿ…” ಅಂದೆ. ‘ಶಬಾಶ್’ ಎಂದರು. (ಮುಂದೆ 1983ರ ಸುಮಾರಿಗೆ ಹೆಗ್ಗೋಡಿನಲ್ಲಿ ನಮ್ಮ ಕಲಾವಿದ ಇಕ್ಬಾಲ್ ಅಹ್ಮದ್ ಇಂಥದೇ ಕೆತ್ತನೆ ಮಾಡುತ್ತಿದ್ದಾಗ ಅದು ‘ಲಿನೋಲಿಯಂ ಬ್ಲಾಕ್ ‘ -ಪಡಿಯಚ್ಚು- ಎಂದು ತಿಳಿಯಿತು. ಅಕ್ಷರ ಪ್ರಕಾಶನ ಹೊರ ತಂದ ನನ್ನ ‘ದೊಡ್ಡಪ್ಪ’ ನಾಟಕದ ಮುಖಪುಟದ ಪಡಿಯಚ್ಚನ್ನು ಹೀಗೇ ರೂಪಿಸಿದ್ದು.)

ಅದೊಂದು ಸಂಜೆ ಐದು-ಐದೂವರೆ ವೇಳೆಗೆ ‘ಸಮಾಜ ಪುಸ್ತಕಾಲಯ’ದ ಆ ಕಾರ್ಯಾಲಯದಲ್ಲಿ ಬಾಲಚಂದ್ರ ಘಾಣೇಕರರ ಎದುರು ಒಬ್ಬ ವೃದ್ಧರು ಜೋರು ಜೋರು ದನಿಯಲ್ಲಿ ಮಾತಾಡುತ್ತ, ನಗುತ್ತ ಕೂತಿದ್ದರು. ಅವು ಬಲು ಚಮತ್ಕಾರಿಕ ಮಾತುಗಳು.

ಕೆಟ್ಟ ಕುತೂಹಲಿ ನಾನು. ಅವರು ಯಾರು ಎಂಬುದನ್ನು ತಿಳಿದುಕೊಂಡ ಹೊರತು ಅಲ್ಲಿಂದ ಸರಿಯಬಾರದು ಎಂದು ನಿರ್ಧರಿಸಿ ಅಲ್ಲಿಯೇ ಠಳಾಯಿಸುತ್ತಲಿದ್ದೆ. ಒಂದು ಹಂತದಲ್ಲಿ ಬಾಲಚಂದ್ರ ಘಾಣೇಕರರು, ”ಆತು ಬೇಂದ್ರೆ ಮಾಸ್ತರs… ಹಂಗs ಮಾಡೂಣು… ಅದಕ್ಕೇನಂತs?”… ಎಂದಾಗ ನನ್ನ ಕಿವಿಗಳು ನಿಮಿರಿದವು. ಜತೆಗೇ ಒಂದು ಸಣ್ಣ ಡೌಟು : ಅವರು ದ.ರಾ. ಬೇಂದ್ರೆಯವರಾ? ಅಂತ… ಅಷ್ಟೊತ್ತಿಗಾಗಲೇ ನಮಗೆ ಅವರ ‘ಪಾತರಗಿತ್ತಿ ಪಕ್ಕಾ…’ ಕವಿತೆ ಪಾಠದಲ್ಲಿ ಬಂದಿತ್ತು.

ಅಲ್ಲಿಂದ ಗೆಳೆಯರ ಕೂಡ ಆಡಲು ಹೋದವ ಆ ವಿಷಯ ಮರೆತೇ ಬಿಟ್ಟಿದ್ದೆ. ಆದರೆ, ಸಂಜೆಯ ಹೊತ್ತಿಗೆ ಮನೆಗೆ ಬಂದರೆ ಮತ್ತದೇ ನಗು ಅದೇ ಆ ದನಿ… ಅಜ್ಜಿಯ ಮನೆಯ ಮೇಲಿನ ಮನೆಯಿಂದ ಕೇಳಿಸುತ್ತಿತ್ತು.

ನಾನು ಅಜ್ಜಿಯೆದುರು ನನ್ನ ಅನುಮಾನವನ್ನು ಇಟ್ಟೆ. ”ಹೌದು… ಅವರs ಬೇಂದ್ರೆಯವರು… ಮ್ಯಾಲಿನವ್ರು ಅವರ ಸಮಂಧಿಕ್ರು…” ಅಂದಳು.

ರಿಸ್ಬೂಡ್ ಚಾಳಿನಲ್ಲಿ ಒಟ್ಟು ಒಂಬತ್ತು ಮನೆಗಳು. ಕೆಳಗೆ ನಾಲ್ಕು, ಮೊದಲ ಅಂತಸ್ತಿನಲ್ಲಿ ಐದು… ಎದುರು ಬದುರು ಮನೆಗಳು. ನಟ್ಟ ನಡುವೆ ಕಲ್ಲು ಹಾಸಿನ ಅಂಗಳ. ಮೇಲಿನ ಮನೆಗಳಿಗೆ ಹೋಗಲು ಎರಡು ಕಡೆಯಿಂದ ಕಟ್ಟಿಗೆಯ ಮೆಟ್ಟಿಲುಗಳು.

ನಮ್ಮ ಅಜ್ಜಿಯ ಮನೆಯ ಮೇಲಿನ ಮನೆಯಲ್ಲಿ ಇದ್ದವರು ಜೋಶಿ ಅಂತ. ಚಿತ್ಪಾವನರು. ದಂಪತಿ ಇಬ್ಬರೇ ಇದ್ದದ್ದು. ಆತ ಪಿ.ಡಬ್ಲು.ಡಿ.ಯಲ್ಲಿ ದೊಡ್ಡ ಹುದ್ದೆಯಲ್ಲಿದ್ದ ಗೃಹಸ್ಥ. ಆಕೆ ಮನೆಯಲ್ಲೇ ಇರುತ್ತಿದ್ದ ಹಿರಿಯ ಗೃಹಿಣಿ. ಆಕೆಯ ಹೆಸರು ಕಮಲಾ ಮಾಂಶಿ ಅಂತ. ಅಸಲಿಗೆ ದ.ರಾ. ಬೇಂದ್ರೆಯವರ ಹೆಂಡತಿಯ ತಂಗಿ ಈ ಕಮಲಾ ಮಾಂಶಿ. ಹೀಗಾಗಿ ಸಮಾಜ ಪುಸ್ತಕಾಲಯದಲ್ಲಿ ಕೆಲಸವಿದ್ದರೆ ಅವರ ರಿಸ್ಬೂಡ್ ಚಾಳಿನ ಭೆಟ್ಟಿ ನಿಶ್ಚಿತವೆ.

ಬೇಂದ್ರೆಯವರಿಗೆ ಜನ ಬೇಕು. ಮಾತು ಬೇಕು. ರಿಸ್ಬೂಡ್ ಚಾಳಿಗೆ ಅವರು ಬಂದರೆ ಒಂದೆರಡಾದರೂ ಮನೆಗಳವರನ್ನು ಮಾತಾಡಿಸಿಯೆ ಮುಂದೆ ಹೋಗುತ್ತಿದ್ದದ್ದು. ರಿಸ್ಬೂಡ್ ಕುಟುಂಬದವರು ಮರಾಠಿ ಭಾಷಿಕರು. ಕನ್ನಡವನ್ನೂ ಅಷ್ಟೇ ಚೆನ್ನಾಗಿ ಮಾತಾಡುತ್ತಿದ್ದರು. ಹೀಗಾಗಿ ಬೇಂದ್ರೆಯವರು ಅವರೊಂದಿಗೆ ಮಾತಾಡುವಾಗ ಎರಡೂ ಭಾಷೆಗಳು ಬಂದು ಹೋಗುತ್ತಿದ್ದವು. ಅವರ ಮಾತು ನಿಂತು ‘ನೋಡುವ’ ಹಾಗಿರುತ್ತಿತ್ತಷ್ಟೇ ಅಲ್ಲ, ಕೂತು ‘ಕೇಳುವಂತೆ’ಯೂ ಇರುತ್ತಿತ್ತು.

ಹಾಲಗೇರಿಯ ದಂಡೆಗುಂಟ ಕೂತಿರುತ್ತಿದ್ದ ಬಾಗವಾನರ ಬಳಿ ಬೇಂದ್ರೆ ಚೌಕಾಶಿ ಮಾಡುವಾಗ ನೋಡುವ ಹಾಗಿರುತ್ತಿತ್ತು.

ನನಗೆ ಬೇಂದ್ರೆಯವರನ್ನು ಹತ್ತಿರದಿಂದ ನೋಡಬೇಕು, ಅವರೊಂದಿಗೆ ಒಮ್ಮೆಯಾದರೂ ಮಾತಾಡಬೇಕು ಎಂಬ ಆಶೆ ಹೆಚ್ಚುತ್ತಲೇ ಹೋಯಿತು…

 

‍ಲೇಖಕರು g

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

27 ಪ್ರತಿಕ್ರಿಯೆಗಳು

 1. Rekha Nataraj

  ಧಾರವಾಡ ಹೊಕ್ಕು ಊರೆಲ್ಲ ಸುತ್ತಾಡಿದ್ದಾಯ್ತು , ಆದ್ರೆ ಬೇಂದ್ರೆಯವರು ಇನ್ನೂ ಬರಲಿಲ್ಲ ! ಅವರನ್ನೇ ಕಾಯುತ್ತ ನಿಮ್ಮ ಮುಂದಿನ ಲೇಖನಕ್ಕೆ ಕಾಯುತ್ತಿದ್ದೇನೆ. ಅಷ್ಟೆಲ್ಲಾ ಘಟನುಘಟಿಗಳನ್ನು ನೋಡುತ್ತ ಬೆಳೆದ ನೀವು ನಿಜಕ್ಕೂ ಪುಣ್ಯವಂತರು !!

  ಪ್ರತಿಕ್ರಿಯೆ
 2. Badarinath Palavalli

  ನಿಮ್ಮ ಬರಹ ಓದುತ್ತಿದ್ದಂತೆ ನಾನೂ ಆಲ್ಟರ್ ಮಾಡಿದ ನಮ್ಮ ಅಣ್ಣಂದಿರ ಬಟ್ಟೆಗಳನ್ನು ಹಾಕಿಕೊಳ್ಳುದ್ದಿದ್ದು ನೆನಪಾಯ್ತು.

  ಅಂದಿನ ಗಾಂಧಿವಾದಿಗಳಲ್ಲಿ ಚಾಚಾ ನೆಹರುವಿನ ಗಾಢ ಪ್ರಭಾವ ಗದ್ಗದಿತರಾದ ಮಲ್ಲಿಗವಾಡ ಮಾಸ್ತರರ ಮಾತುಗಳಿಂದಲೇ ಅರ್ಥವಾಗುತ್ತದೆ.

  ಶಿವಾಜಿ ಬೀದಿಯ ಚಿತ್ರಣ ಕಣ್ಣಿಗೆ ಕಟ್ಟಿದಂತಿದೆ.

  ಬೇಂದ್ರೆ ಅಜ್ಜನನ್ನು ಕಂಡು ನೀವು ಸಂಭ್ರಮಿಸಿದಂತೆಯೇ, ನನಗೆ ಮೊದಲ ಬಾರಿ ಚಾಮರಾಜ ಪೇಟೆಗೆ ಲಂಕೇಶರ ಜೊತೆ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಗೋಪಾಲಕೃಷ್ಣ ಅಡಿಗರನ್ನು ಕಂಡು ಮೈ ಪುಳಕವಾಯಿತು.

  ಪ್ರತಿಕ್ರಿಯೆ
 3. Atmananda

  ಲೀನಾ ಚಂದವಾಕರ್ ನಮ್ ಊರವರಾ? ಕೆಂಪೀಗೇರಿ ಹಾಲಗೇರಿಗಳು ನಂಗ ಇವತ್ತು ಗೋತ್ ಆತು… ಸರ್ ಆಗಿನ ಜಮಾನಕ ಕರ್ಕೊಂಡ್ ಹೋದ್ರಿ… ಕಣ್ ಮುಂದ ಕಟ್ಟಿ ಕೊಂಡಂಗ ಆತು!!! ಸರ್ ಬೇಂದ್ರೆ ಅವರ ಬಗ್ಗೆ ಇನ್ನಷ್ಟು ಬರೀರಿ… ಅವರ ಸ್ವಭಾವ, ಹೇಗ್ ಮಾತಾಡ್ತಿದ್ರು…ಭಾಳ್ ಖುಷಿ ಆತು 😉

  ಪ್ರತಿಕ್ರಿಯೆ
 4. umesh desai

  ಗುರುಗಳ ಇದು ಯೋಗಾಯೋಗ..ಅದ ಶಿವಾಜಿರೋಡನ್ಯಾಗಿನ ಗೋಡಬೋಲೆ ವಾಡಾಕ್ಕ
  ನಾ ಅನೇಕ ಸಲ ಭೇಟಿ ಕೊಟ್ಟೇನಿ..ಅಲ್ಲಿಯ ಆಶ್ರೀತರ ಮನಿ ನನ್ನ ಅತ್ತಿ ಮನಿ..
  ಆ ರೋಡು ಇಷ್ಟೆಲ್ಲಾ ಹುದುಗಿದ ರಸಕವಳ, ರತ್ನಗಳನ್ನು ಅಡಗಿಸಿಕೊಂಡಿತ್ತುಎಂಬುದು ನಿಮ್ಮ
  ಲೇಖನಓದಿದಮೇಲೆ ಗೊತ್ತಾತು.., ನಾನೂ ಬೇಂದ್ರೆಯವರನ್ನು ನೋಡಿದ್ದೆ ಭಾಳ ಸಣ್ಣಾವ..ಅವ್ವನ
  ಜೋಡಿ ಹಾಲಗೇರಿ ಹಣಮಪ್ಪನ ಗುಡಿಯಲ್ಲಿನ ಲಗ್ನಕ್ಕ ಹೋಗಿದ್ದೆ..ಅಲ್ಲಿ ಅವ್ರು ಬಂದಿದ್ರು..ನಮಸ್ಕಾರ ಮಾಡಿದ್ದೆ..
  ಅದ ಹಾಲಗೇರಿ ಹಣಮಪ್ಪನ ಗುಡ್ಯಾಗ ನಂದೂ ಲಗ್ನ ಆಗಿದ್ದು..

  ಪ್ರತಿಕ್ರಿಯೆ
 5. bharathi bv

  Abbaaa aa kaalaghattakke hogi banda hagaythu. Tumba chendakke bartide nimm column …

  ಪ್ರತಿಕ್ರಿಯೆ
 6. Guruprasad Kurtkoti

  “ಮರಡಿ” ಆಡುಮಾತಿನಲ್ಲಿ “ಮಡ್ಡಿ” ಆಗಿದ್ದು ನಂಗೆ ಗೊತ್ತೇ ಇರಲಿಲ್ಲ! ಬೇಂದ್ರೆ ಮಾಸ್ತರ್ ಜೊತೆ ಒಡನಾಟ ಮಾಡಿದ ನೀವೇ ಭಾಗ್ಯಶಾಲಿಗಳು.

  ಪ್ರತಿಕ್ರಿಯೆ
 7. Raghupathi sringeri

  ಅಧ್ಬುತ…ಧಾರವಾಡ ಪೂರ್ತಿ ಸುತ್ತಿ ಬಂದ ಅನುಭವ ಆಯ್ತು ವಾಜಪೇಯಿಯವರೇ…ನಿಮ್ಮ ಮುಂದಿನ ನೆನಪಿನ ಬರಹಗಳಿಗೆ ಕಾತರದಿಂದ ಕಾಯುತ್ತಿದ್ದೇನೆ…

  ಪ್ರತಿಕ್ರಿಯೆ
 8. ಈಶ್ವರ ಕಿರಣ

  ನಮಸ್ತೆ, ಬರಹ ಅತ್ಯಂತ ಆಪ್ತವಾಗಿದೆ. ಮುಂದಿನ ನೆನಪಿನ ಮಾಲೆಗೆ ಕಾಯುತ್ತಿದ್ದೇನೆ. ಬೇಂದ್ರೆಯವರನ್ನು ನೋಡಿದ ನೀವು ಭಾಗ್ಯವಂತರು.

  ಪ್ರತಿಕ್ರಿಯೆ
 9. samyuktha

  ಧಾರವಾಡ, ಬೇಂದ್ರೆ ಮಾಸ್ತಾರರು ಎಲ್ಲವನ್ನೂ ಖುದ್ದು ನೋಡಿ ಬಂದಂತೆ ಆಯಿತು….. ನಿಮ್ಮ ನೆರೇಶನ್ ಸೂಪರ್!

  ಪ್ರತಿಕ್ರಿಯೆ
 10. kln

  ಇದೇ ರಿಸ್ಬೂಡ್ ಚಾಳಿನಲ್ಲಿ ನಮ್ಮ ಪರಿಚಯಸ್ಥರೊಬ್ಬರಿದ್ದುದು ಹಾಗೂ ನಾವುಗಳು ಅಲ್ಲಿಗೆ ಹೋಗಿಬರುತ್ತಿದ್ದುದು (೧೯೮೦ ರ ಸುಮಾರಿಗೆ) ನೆನಪಾಗಿ; ಮನ ಪುಳಕಿತವಾಯಿತು. ಬೇಂದ್ರೆಯವರನ್ನು ಮುಖತ: ಭೇಟಿಯಾಗುವ ಅದೃಷ್ಟವಿರದ ನಮ್ಮಂತಹವರಿಗೆ ಅವರು ಓಡಾಡಿದ ಜಾಗಗಳಿಗೆ ನಾವೂ ಹೋಗಿ ಬಂದುದು ಈ ಭಾವನೆಗೆ ಕಾರಣ

  ಪ್ರತಿಕ್ರಿಯೆ
 11. pravara kottur

  ನಿನ್ನೆಯಷ್ಟೇ ಲೀಲಾ ಚಂದಾವರ್ಕರ್ ಬಗ್ಗೆ ಅಪ್ಪ ಹೇಳುತಿದ್ದರು, ಒಂದು ತಿಂಗಳುಗಳ ಕಾಲ ಧಾರವಾಡ ದಲ್ಲಿದ್ದೆ, ಬಳ್ಳಾರಿಯವನಾದ ನನಗೆ ಅದು ಸ್ವರ್ಗವೇ ಎನಿಸುತಿತ್ತು, ಸಾಧನಕೇರಿ ಯಲ್ಲಿರುವ ಬೇಂದ್ರೆ ಭವನವನ್ನ ಸುತ್ತು ಹೊಡೆದಿದ್ದೇ ಹೊಡೆದಿದ್ದು…….. ಹಸಿರ ನಡುವೆ ದಾರಿಯಲ್ಲಿ ಹಾಡು ಕೇಳುತ್ತಾ ನಡೆದಿದ್ದೇ ನಡೆದಿದ್ದು…… ಎಲ್ಲಾನು ನೆನಸಿ ಮನಸನ್ನ ಹಾಳ್ ಮಾಡಿಬಿಟ್ರಿ ಸಾರ್…… ಕುರ್ಚಿಗೆ ತಳ ಅಂಟಿಸಿ ಓದಿಸುತ್ತೀರಿ….

  ಪ್ರತಿಕ್ರಿಯೆ
 12. sumathi shenoy

  Details about the folk usage of many words and the description about the demise of Neharu are heart-warming..expecting more..the article is significant for many reasons..

  ಪ್ರತಿಕ್ರಿಯೆ
 13. keshav kulkarni

  ಮಂಗಳವಾರ ಪೇಟದಾಗ ನನ್ನ ಮಾಮಾನ ಮನಿ. ಪೂರಾ ಧಾರವಾಡ ಅಡ್ಡಾಡಿಸಿ ಬಿಟ್ರಿ. ನಾನು ಒಮ್ಮೆ ಮನೋಹರ ಗ್ರಂಥಮಾಲಾದಾಗ ಒಂದು ಪುಸ್ತಕ ತೊಗೋಳ್ಳಿಕ್ಕೆ ಹೋಗಿದ್ದೆ. ಅಲ್ಲಿ ಕೀರ್ತಿನಾಥ ಕುರ್ತಕೋಟಿಯವರನ್ನು ಭೆಟ್ಟಿ ಆಗುವ ಸೌಭಾಗ್ಯ ಒದಗಿತ್ತು. ಭಾಳ ಛಂದದ ಬರಹ.

  ಪ್ರತಿಕ್ರಿಯೆ
 14. ಆನಂದ

  ಅರೆರೆ!
  ಇವತ್ತು (ಅ.28) ಮುಂಜಾನೆ ಮತ್ತು ಸಂಜೆ ಧಾರವಾಡದ ಬೇಂದ್ರೆಯವರ ಮನೆ ಎದುರಿನಿಂದ ಹೋದೆ. ಈಗ ನೋಡಿದರೆ ಇಲ್ಲಿ ಸಾಕ್ಷಾತ್ ಬೇಂದ್ರೆಯವರೇ ‘ಅವಧಿ’ಯಲ್ಲಿ ಪ್ರತ್ಯಕ್ಷ !!
  ಮುಂದಿನ ಕಂತಿಗಾಗಿ ಕುತೂಹಲದಿಂದ ಕಾಯುತ್ತಿದ್ದೇನೆ.
  – ಆನಂದತೀರ್ಥ ಪ್ಯಾಟಿ

  ಪ್ರತಿಕ್ರಿಯೆ
 15. SHILPA

  namste sir ,
  bhal chadda anistu odi . darwda mele elarigu yak ista anta e brha odidra saku anisatada.

  ಪ್ರತಿಕ್ರಿಯೆ
 16. Raghu

  Tumba aatmiyavenisuvantha baraha. Made me to recall my old and gold days of dharwad stay.

  ಪ್ರತಿಕ್ರಿಯೆ
 17. Jayalaxmi Patil

  ಅಂಥಾವ್ರ ನಡೂ ಬೆಳೆದ್ ನೀವs ಪುಣ್ಯವಂತ್ರು!

  ಪ್ರತಿಕ್ರಿಯೆ
 18. ರಾಘವೇಂದ್ರ ಜೋಶಿ

  ಸರ..ನೀವು ಗದುಗಿನ್ಯಾಗ ಓಡ್ಯಾಡಿದ್ರ ಅದನ್ನೂ ದಯಮಾಡಿ ಬರೀರಿ..ಆವತ್ತಿನ ಗದಗು ಹೆಂಗಿತ್ತು ಅಂತ ಗೊತ್ತಾಗಬೇಕು ಅಂತ ನನ್ನ ವೈಯಕ್ತಿಕ ಆಸೆ..
  -RJ

  ಪ್ರತಿಕ್ರಿಯೆ
 19. arathi ghatikaar

  ರಿಸ್ಕೂಡ ಚಾಳನಿಂದ ಶುರುವಾದ ನಿಮ್ಮ ವಿಧ್ಯಯಾನ , ಧಾರವಾಡದ ಗಲ್ಲಿ- ರಸ್ತೆಗಳಲ್ಲಿ ನಿಮ್ಮ ಬಾಲ್ಯದ ಸವಿ ನೆನಪುಗಳನ್ನ ಆಪ್ತವಾಗಿ , ನೆನೆದು ನಮನ್ನೂ ನೆನಪಿನ ಕಾಲಚಕ್ರಕ್ಕೆ ಕೊಂಡೊಯ್ದು ಸುತ್ತಾಡಿಸಿದ್ದೀರಿ . ನಿಮ್ಮ ಯಾನ ಬಹಳ ಸ್ವಾರಸ್ಯಕರವಾಗಿದೆ , ಬೇಂದ್ರೆ ಮಾಸ್ತರ್ ಅವರ ಭೇಟಿ ಕೂತಹಲ ಕೆರಳಿಸಿದೆ . ಅವರನ್ನ ನೋಡಿ ,ಅವರ ಮಾತುಗಳನ್ನ ಪ್ರತ್ಯಕ್ಷ ಸವಿದ ನೀವು ಪುಣ್ಯವಂಥರಪ್ಪ , ಈ ಸವಿಯನ್ನ ಮೆಲ್ಲುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು .

  ಪ್ರತಿಕ್ರಿಯೆ
 20. arathi ghatikaar

  ರಿಸ್ಕೂಡ ಚಾಳನಿಂದ ಶುರುವಾದ ನಿಮ್ಮ ವಿಧ್ಯಯಾನ , ಧಾರವಾಡದ ಗಲ್ಲಿ- ರಸ್ತೆಗಳಲ್ಲಿ ನಿಮ್ಮ ಬಾಲ್ಯದ ಸವಿ ನೆನಪುಗಳನ್ನ ಆಪ್ತವಾಗಿ , ನೆನೆದು ನಮನ್ನೂ ನೆನಪಿನ ಕಾಲಚಕ್ರಕ್ಕೆ ಕೊಂಡೊಯ್ದು ಸುತ್ತಾಡಿಸಿದ್ದೀರಿ . ನಿಮ್ಮ ಯಾನ ಬಹಳ ಸ್ವಾರಸ್ಯಕರವಾಗಿದೆ , ಬೇಂದ್ರೆ ಮಾಸ್ತರ್ ಅವರ ಭೇಟಿ ಕೂತಹಲ ಕೆರಳಿಸಿದೆ . ಅವರನ್ನ ನೋಡಿ ,ಅವರ ಮಾತುಗಳನ್ನ ಪ್ರತ್ಯಕ್ಷ ಸವಿದ ನೀವು ಪುಣ್ಯವಂಥರಪ್ಪ , ಈ ಸವಿಯನ್ನ ಮೆಲ್ಲುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು .

  ಪ್ರತಿಕ್ರಿಯೆ
 21. Pushparaj Chauta

  ೨೦೦೦ನೆ ಇಸವಿಯಾಗ ನಾನಿದ್ದ ಕೇರಿಗೆ ಕರ್ಕೊಂಡ್ ಹೊಂಟ್ರಲ್ಲ ಸರ್…. ಅದೇ ಲೈನ್ ಬಝಾರ ಪೇಡಾದ ರುಚಿ!
  ನಿಮ್ಮ ನೆನಪುಗಳ ಪುಟಗಳಿಂದೆತ್ತಿದ ಮಾತುಗಳಲ್ಲಿ ಧಾರವಾಡವನ್ನು ಮತ್ತೆ ತೋರಿಸಿದಿರಿ.

  ಪ್ರತಿಕ್ರಿಯೆ
 22. ಸುಮನ್ ದೇಸಾಯಿ

  ನಾನು ಹುಟ್ಟಿದ್ದು ಧಾರವಾಡದೊಳಗ. ನಮ್ಮ ಅಮ್ಮನ ತವರು ಮನಿ ಧಾರವಾಡ. ನನ್ನ ಬಾಲ್ಯ ಎಲ್ಲಾ ಹೆಚ್ಚಾಗಿ ಧಾರವಾಡ ಮಾಳಮಡ್ಡಿಯೊಳಗ ಕಳದದ. ಧಾರವಾಡ ಅಂದ್ರ ಎನೋ ಒಂಥರಾ ಖುಷಿ ಮತ್ತ ನಂದು ಅನ್ನೊ ಭಾವನೆ ಬರತದ.ಭಾಳ ಛಂದ ಬರೆದೀರಿ. ‘ಕೆರೀ ತೆಳಗಿನ ಓಣಿ.ಎಮ್ಮಿಕೇರಿ,ಸಾಧನಕೇರಿ, ಮಾಳಮಡ್ಡಿ, ಲೈನ ಬಜಾರ್,( ಹೊಸಯಲ್ಲಾಪೂರ ಒಂದ ಬಿಟ್ರಿ) ಅಂತ ಎಲ್ಲಾ ಓದಲಿಕತ್ತಾಗ ಖುಷಿ ಆಗಿ, ಧಾರವಾಡದಿಂದ ದೂರ ಇದ್ದೇನಲ್ಲಾ ಅಂತ ಬ್ಯಾಸರಾತು. ಈಗನು ಧಾರವಾಡಕ್ಕ ಹೋಗಬೇಕಾದ್ರ ಬಸ್ ಧಾರವಾಡಕ್ಕ ಊರಾಗ ಬರೋದ ತಡಾ ಮನಸಿಗೆ ಎನೋ ತಂಪ ಅನುಭವ ಆಗತದ. ಕಳಕೊಂಡಿದ್ದು ಮಮತೆಯ ಅಪ್ಪುಗೆ ಸಿಕ್ಕಂಘ ಅನಿಸ್ತದ. ನನ್ನ ಧಾರವಾಡದ ಬಗ್ಗೆ ಓದಿ ಭಾಳ ಖುಷಿ ಆತು. ನಿಮಗ ನನ್ನ ಹೃದಯಪೂರ್ವಕ ಧನ್ಯವಾದಗಳು…. ಯೋಗಾಯೋಗ ಇದ್ರ ತಮ್ಮನ್ನ ಒಂದ ಸಲಾ ಭೆಟ್ಟಿಯಾಗಿ ನನ್ನ ಧನ್ಯವಾದಗಳನ್ನ ಹೇಳಬೇಕಂತ ಇಚ್ಛಾ ಅದ….. ಸುಮನ್ ದೇಸಾಯಿ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: