ಗೋಪಾಲ ವಾಜಪೇಯಿ ಕಾಲಂ : ಅವಾಕ್ಕಾದರು ಅ.ನ.ಕೃ.

ಸುಮ್ಮನೇ ನೆನಪುಗಳು – 16

ಬಣ್ಣ ಅಳಿಸಿಹೋಗಿತ್ತು. ರಂಗದ ಬೆಳಕು ಆರಿಹೋಗಿತ್ತು. ಪರದೆಗಳು ಹರಿದು ಹಾರಾಡುತ್ತಿದ್ದವು. ಬದುಕು ಚಿಂದಿಯಾಗಿತ್ತು.

ಬಚ್ಚಾಸಾನಿ ಅಕ್ಷರಶಃ ‘ಅನಾಥೆ’ಯಂತಾಗಿಬಿಟ್ಟಳು. ಅವಳಿಗೆ ಅವರಿವರಲ್ಲಿ ಕೇಳಿ ಉಣ್ಣುವ ದೌರ್ಭಾಗ್ಯ ಒದಗಿತ್ತು.

ತುಂಬಿದ ಮನೆಯ ಹಿರಿಯಳೊಬ್ಬಳಿಗೆ ಇದ್ದಕ್ಕಿದಂತೆಯೇ ಒಬ್ಬೊಬ್ಬರೇ ‘ದೂರ’ವಾಗಿ ಹೋಗತೊಡಗಿದರೆ ಏನೆನಿಸಬೇಡ?

ಇಂಥ ಪ್ರಸಂಗ ಎಂಥವರಿಗಾದರೂ ಅಸಹನೀಯವೇ…

ಬಚ್ಚಾಸಾನಿಗೆ ಸ್ವಂತ ಮಕ್ಕಳಿರಲಿಲ್ಲ. ತಂಗಿಯರು ಮತ್ತು ತಮ್ಮಂದಿರನ್ನೇ ತನ್ನ ಮಕ್ಕಳೆಂಬಂತೆ ಬೆಳೆಸಿದಾಕೆ. ಅವರ ಮಕ್ಕಳನ್ನೇ ತನ್ನ ಹೊಟ್ಟೆಯಲ್ಲಿ ಹುಟ್ಟಿದವರೆಂಬಂತೆ ಎಣ್ಣೆಯಿಟ್ಟು ಎರೆದು ದೊಡ್ಡವರನ್ನಾಗಿ ಮಾಡಿದಾಕೆ. ಆದರೆ, ರೆಕ್ಕೆ ಬಲಿತ ಮರಿ ತಾಯಿ ಹಕ್ಕಿಯನ್ನೇ ತೊರೆದು ಹಾರಿ ಹೋಗುವುದು ಅಚ್ಚರಿಯಲ್ಲವಷ್ಟೇ. ಸ್ವಂತ ತಾಯಿಯನ್ನೇ ತೊರೆಯುವ ಮಕ್ಕಳಿರುವಾಗ, ತಾಯಿಯಂತೆ ನೋಡಿಕೊಂಡವಳನ್ನು ದೂರ ಮಾಡುವುದೇನು ಹೊಸದೇ?

ತಂಗಿಯರಲ್ಲಿ ಪೀರವ್ವ ಮೊದಲಾದವರು ತಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬೇರೆಡೆ ಹೋದರು. ಇನ್ನು ಕೆಲವರು ತಮ್ಮ ‘ಯಜಮಾನ’ರ ಜೊತೆಗೇ ಇರಲು ತೊಡಗಿದರು. ತಮ್ಮಂದಿರಲ್ಲಿ ಒಂದಿಬ್ಬರು ಹೊಟ್ಟೆಪಾಡಿಗಾಗಿ ಹುಬ್ಬಳ್ಳಿಯ ಹಾದಿ ಹಿಡಿದರು. ವಯಸ್ಸಿನ ಕಾರಣದಿಂದಲೂ ಮತ್ತು, ಅದಕ್ಕಿಂತ ಹೆಚ್ಚಾಗಿ ಜೀವದಂತಿದ್ದ ಮಗಳು ವಜೀರಾ ಕೈಬಿಟ್ಟು ಹೋಗಿದ್ದರಿಂದಲೂ ಪಕರೂ ಸಾಬ ಜರ್ಜರಿತನಾದ. ಅವರಿವರ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುವುದು ಆತನಿಗೆ ಅನಿವಾರ್ಯವಾಯಿತು. ಎರಡು ಹೊತ್ತಿನ ತುತ್ತಿಗಾಗಿ ಅಷ್ಟಾದರೂ ಮಾಡಲೇಬೇಕಲ್ಲ.

ಹೀಗಾಗಿ ಬಚ್ಚಾಸಾನಿ ‘ಒಬ್ಬಂಟಿ’ಯಾಗಿಬಿಟ್ಟಳು. ಆಗ ಆಕೆಗೆ ಸರಿ ಸುಮಾರು ತೊಂಬತ್ತನ್ನು ಮೀರಿದ ವಯಸ್ಸು. ಆದರೂ ಊರ ಮೇಲಿನ ಅಭಿಮಾನವನ್ನಾಕೆ ಬಿಡಲಿಲ್ಲ. ಏನಾದರಾಗಲಿ ಎಂದು ತಾನು ಗಾಯನ-ನರ್ತನ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಣಲಿಂಗನನ್ನೇ ನಂಬಿಕೊಂಡು ಊರಲ್ಲಿಯೇ ಇದ್ದುಬಿಟ್ಟಳು. ಕಂಪನಿಯಂತೂ ಎಂದೋ ನಿಂತು ಹೋಗಿತ್ತು. ಸದಾ ತಂಬೂರಿ, ಪೇಟಿ, ಗೆಜ್ಜೆಗಳ ನಾದದಿಂದ ತುಂಬಿರುತ್ತಿದ್ದ ಮನೆಯಲ್ಲಿ ಈಗ ಆಕೆ ರಾತ್ರಿ ಹೊತ್ತಿನ ‘ಜೀ’ ಹುಳುಗಳ ಸ್ವರದಿಂದಲೇ ಸಮಾಧಾನಪಟ್ಟುಕೊಳ್ಳುವಂತಾಗಿತ್ತು.

ಅದಾಗಲೇ ಮಿರಜ್ ಸಂಸ್ಥಾನದ ದೊರೆ ಬಾಳಾಸಾಹೇಬ ಪಟವರ್ಧನರು ವಾರ್ಧಕ್ಯ ಮತ್ತು ಅಸ್ವಾಸ್ಥ್ಯದಿಂದ ಬಳಲುತ್ತಿದ್ದುದರಿಂದ ಅವರು ಲಕ್ಷ್ಮೇಶ್ವರದ ಕಡೆ ಬರುವುದು ನಿಂತು ಹೋಗಿತ್ತು. ಅವರ ಮಗ ತಾತ್ಯಾಸಾಹೇಬರಿಗೆ ಲಕ್ಷ್ಮೇಶ್ವರದ ಬಗ್ಗೆ ಅಷ್ಟೇನೂ ಅಭಿಮಾನವಿರಲಿಲ್ಲ. ಹೀಗಾಗಿ ಅವರು ಇತ್ತ ಕಡೆ ಗಮನ ಹರಿಸುತ್ತಾರಾದರೂ ಹೇಗೆ? ಇನ್ನು ಕಿಲ್ಲೆಯ ಅಧಿಕಾರಿಗಳು ಮೊದಲಿನ ಹಾಗೆ ಶಾಸ್ತ್ರ-ಸಂಗೀತಗಳಿಗೆ ಮನ್ನಣೆ ನೀಡುತ್ತಿರಲಿಲ್ಲ. 1939 ರ ಡಿಸೆಂಬರಿನಲ್ಲಿ ಬಾಳಾಸಾಹೇಬ ಪಟವರ್ಧನರು ಮಿರಜಿನಲ್ಲಿ ಕೊನೆಯುಸಿರೆಳೆದರು.

ಬಚ್ಚಾಸಾನಿಯ ಪಾಲಿಗೆ ನಮ್ಮ ಊರಿನ ಕಿಲ್ಲೆಯ ಬಾಗಿಲು ಶಾಶ್ವತವಾಗಿ ಮುಚ್ಚಿದಂತಾಯಿತು.

(ಮುಂದೆ ತಾತ್ಯಾ ಸಾಹೇಬರು ಲಕ್ಷ್ಮೇಶ್ವರಕ್ಕೆ ಬಂದದ್ದು ಕೇವಲ ಇಲ್ಲಿಯ ಕಿಲ್ಲೆಯ ಸ್ವತ್ತುಗಳನ್ನು ಕಿತ್ತುಕೊಂಡು ಹೋಗಲು ಮಾತ್ರ. ಆವರೆವಿಗೂ ಕಿಲ್ಲೆಯಲ್ಲಿ ಪ್ರತಿ ಗಣೇಶ ಚವತಿಯ ಸಂದರ್ಭದಲ್ಲಿ ಸಾರ್ವಜನಿಕರು ನೋಡುತ್ತಿದ್ದ ಆ ಆಳೆತ್ತರದ ಸುಂದರವಾದ ಬೆಳ್ಳಿಯ ಮಂಟಪ. ಅದರೊಳಗಿದ್ದ ಮತ್ತೆ ಮತ್ತೆ ನಿಂತು ನೋಡಬೇಕೆನಿಸುವಂಥ ಎರಡು ಅಡಿ ಎತ್ತರದ ಆ ಬೆಳ್ಳಿಯ ಗಣೇಶನ ವಿಗ್ರಹ. ಅದನ್ನಲಂಕರಿಸಿದ ಚಿನ್ನದ ಆಭರಣಗಳು. ಗಣೇಶನ ಕೈಯಲ್ಲಿ ಚಿನ್ನದ ಮೋದಕ. ಬೆಳ್ಳಿಯ ಮಂಟಪದ ಆಚೀಚೆ ಇದ್ದ ಆ ಆರು ಅಡಿ ಎತ್ತರದ ಬೆಳ್ಳಿಯ ದೀಪಸ್ತಂಭಗಳು ಇವನ್ನೆಲ್ಲವನ್ನೂ ಅವರು ಮಿರಜಿಗೆ ತೆಗೆದುಕೊಂಡು ಹೋದರಂತೆ.)

ಪಾಪ, ಬಚ್ಚಾಸಾನಿ…

ಒಂದು ಕಾಲಕ್ಕೆ ರಾಜಪುರುಷರ ಪಾತ್ರಗಳಲ್ಲಿ ವಿಜ್ರಂಭಿಸಿದವಳು… ಆ ಸುತ್ತಲ ಸೀಮೆಯ ಜನರ ಅಭಿಮಾನದ ಕಲಾವಿದೆಯಾಗಿದ್ದವಳು… ಸಂಸ್ಥಾನಿಕರ ಹೆಮ್ಮೆಯ ‘ನವಮಣಿ’ಗಳಲ್ಲಿ ಮೂರನೆಯವಳೆನಿಸಿಕೊಂಡಿದ್ದವಳು… ಅವರಿಂದ ಕಾಸು-ಖಿಲ್ಲತ್ತುಗಳನ್ನು ಪಡೆಯಲು ಕೈ ಮುಂದೆ ಮಾಡುತ್ತಿದ್ದವಳು ಬಚ್ಚಾಸಾನಿ…

ಅಂಥವಳಿಗೀಗ ಊರಿನ ಶ್ರೀಮಂತರ ಮನೆಗಳೆದುರು ಕೈ ಒಡ್ಡಿ ನಿಲ್ಲುವ ಪರಿಸ್ಥಿತಿ…

”ಆಗ ನಾ ಭಾsಳ ಸಣ್ಣಾವಾ. ನಮ್ಮನೀಗೆ ಯಾವಾಗಾsರೆ ಬರತಿದ್ಲು ಮುದಕಿ. ಒಳ್ಳೇ ಠವಾ ಠವಾ ಅನ್ನೋ ಮಾರಿ… ದನಿ ಇನ್ನೂ ಗಂಟಿ ಇದ್ದಂಗಿತ್ತು. ಅಪ್ಪನ ಎದರಿಗೆ ದೂರದಾಗ ನೆಲದ ಮ್ಯಾಲೆ ಕೂಡಾಕಿ. ಒಂದೆರಡು ನಾಟಕದ ಹಾಡೋ, ಇಲ್ಲಾ ಯಾವದಾರೇ ರಾಗನೋ ಹಾಡತಿದ್ಲು. ಸುಡು ಸುಡು ಛಾ ಅಂದ್ರ ಬಲೆ ಪ್ರೀತಿ. ಒಂದು ತಾಸಿನ್ಯಾಗ ಮೂರ ಸರ್ತೆ ಛಾ ಕುಡೀತಿದ್ಲು. ಆ ಮ್ಯಾಲ, ‘ಎಪ್ಪಾ… ಬಾಳೊತ್ತಾತು ಬಂದು… ಇನ್ನ ಅಪ್ಪಣಿ ಕೊಡ್ರಿ…’ ಅಂತ ಎದ್ದು ನಿಲ್ಲತಿದ್ಲು. ಅಪ್ಪಾ ಆಳಿಗೆ ಸನ್ನೀ ಮಾಡತಿದ್ದಾ… ಅಂವಾ ಒಂದು ಪಡಿ ಜ್ವಾಳಾ ಕಟ್ಟಿ, ಅಪ್ಪ ಕೊಟ್ಟ ಎರಡು ರೂಪಾಯಿ ಜೋಡಿ ಬಚ್ಚಾಸಾನಿ ಮುಂದ ನಿಲ್ಲತಿದ್ದಾ. ಆಕೀ ಹಿಂದಿನಿಂದ ಹೋಗಿ ಮನಿತನಕಾ ಮುಟ್ಟಿಸಿಬರೂದು ಆಳಿನ ಕೆಲಸಾಗಿತ್ತು. ಇನ್ನ ನಮ್ಮ ಮನೀ ಒಳಗ ಏನಾರೇ ವಿಶೇಷ ಪೂಜಾ, ಕಾರ್ಯಾ ಇದ್ರ ಬಚ್ಚಾಸಾನಿಗೆ ‘ಊಟಕ್ಕ ಬಾ,’ ಅಂತ ಹೇಳಿ ಕಳಸ್ತಿದ್ದ ಅಪ್ಪ…” ಅಂತ ತೊಂಬತ್ತರ ಹಿರಿಯರಾದ ಬಾಬಣ್ಣ ನೆನಪಿಸಿಕೊಳ್ಳುತ್ತಾರೆ…

ಬಾಬಣ್ಣ ಅವರ ತಂದೆ ಬಸನಗೌಡ ಪಾಟೀಲಕುಲಕರ್ಣಿಯವರು ಆ ಕಾಲದಲ್ಲಿ ನಮ್ಮೂರ ಪಟೇಲರು. ತುಂಬ ಜನಾನುರಾಗಿಯಾಗಿದ್ದವರು. ಒಮ್ಮೆ ‘ಮೊಹರಂ ಸಂದರ್ಭದಲ್ಲಿ ಕೋಮು ಗಲಭೆಯಾಗಬಹುದು’ ಎಂಬ ಗುಪ್ತ ವರದಿಯನ್ನು ಆಧರಿಸಿ, ‘ಮುಸ್ಲಿಮರು ಮೆರವಣಿಗೆ ಹೊರಡಿಸಬಾರದು,’ ಎಂಬ ಆಜ್ಞೆಯನ್ನು ಅಂದಿನ ಸ್ಥಳೀಯ ಸರಕಾರ ಹೊರಡಿಸಿತು. ಸರಕಾರದ ಮನ ಒಲಿಸುವ ಎಲ್ಲ ಪ್ರಯತ್ನಗಳೂ ವಿಫಲವಾದ ಮೇಲೆ, ಮುಸ್ಲಿಂ ಬಾಂಧವರೆಲ್ಲ ಬಸನಗೌಡರ ಬಳಿ ಬಂದರಂತೆ. ”ಹ್ಯಾಂಗಾರ ಮಾಡಿ ಮೆರವಣಿಗಿಗೆ ಒಪಿಗಿ ಕೊಡಸ್ರಿ ಎಪ್ಪಾ… ನಾವೆಂದೂ ಗದ್ದಲಾ ಮಾಡಿದವರs ಅಲ್ಲಾ… ಮಾಡವ್ರೂ ಅಲ್ಲಾ…” ಎಂದು ಕೇಳಿಕೊಂಡರಂತೆ. ಬಸನಗೌಡರು ತಹಶೀಲ್ದಾರರ ಬಳಿ ಹೋಗಿ, ”ಗಲಾಟೆ ಆಗೋದಿಲ್ಲ. ಒಂದು ವೇಳೆ ಹಾಗೆ ಆದರೆ ನಾ ಜವಾಬ್ದಾರ. ಇದೋ ನನ್ನ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ರಿ,” ಎಂದು ದಾಖಲೆ ಪತ್ರಗಳನ್ನೆಲ್ಲ ಸರಕಾರದ ವಶಕ್ಕೊಪ್ಪಿಸಿ, ಮೆರವಣಿಗೆಗೆ ಅನುಮತಿ ಪತ್ರ ತಂದರಂತೆ. ಮೊಹರಂ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಆಗಿನಿಂದ ನಮ್ಮೂರಲ್ಲಿ ಅಲಾವಿ ಕುಣಿತದ ಹಾಡಿನಲ್ಲಿ, ‘ಬಸಗೌಡರು ಬಂದಾರಪ್ಪೋ ಅಲಾವಿ ಹುಕುಮು ತಂದಾರಪ್ಪೋ…’ ಎಂಬ ವಿಶೇಷ ಸಾಲು ಸೇರಿಸಲ್ಪಟ್ಟಿತಂತೆ. ನಮ್ಮೂರಿನ ಅಲಾವಿ ಕುಣಿತದಲ್ಲಿ ಇಂದಿಗೂ ಈ ಹಾಡನ್ನು ನಾವು ಆಲಿಸಬಹುದಾಗಿದೆ.

ಇಂಥ ದೊಡ್ಡ ಮನೆತನದ ಹಿರಿಯರೆಲ್ಲ ಈ ಹಿರಿಯ ಕಲಾವಿದೆಯನ್ನು ತುಂಬ ಗೌರವದಿಂದ ನೋಡಿಕೊಳ್ಳುತ್ತಿದ್ದರು.

ಆ ಸುಮಾರಿನಲ್ಲೇ ನಮ್ಮ ಕನ್ನಡದ ಕಟ್ಟಾಳು ಅ. ನ. ಕೃಷ್ಣರಾಯರು, ಮಲ್ಲಿಕಾರ್ಜುನ ಮನ್ಸೂರರು ಬಚ್ಚಾಸಾನಿಯನ್ನು ಕಂಡದ್ದು.

ಆಗ ಕರ್ನಾಟಕದ ಮೂಲೆಮೂಲೆಯಲ್ಲಿ ಸಂಚರಿಸುತ್ತಿದ್ದ ಅ.ನ.ಕೃ. ಅವರದು ಕನ್ನಡಿಗರನ್ನೆಲ್ಲಾ ಭಾವನಾತ್ಮಕವಾಗಿ ಒಗ್ಗೂಡಿಸುವ ಮಹೋದ್ದೇಶ. ನಾಟಕ, ಸಂಗೀತ ಎಂದರೆ ವಿಶೇಷ ಪ್ರೀತಿಯಿದ್ದ ಅವರಿಗೆ ಮೊತ್ತಮೊದಲ ‘ಸ್ತ್ರೀ ನಾಟಕ ಮಂಡಳಿ’ಯನ್ನು ಸ್ಥಾಪಿಸಿ ನಡೆಸಿದ ಬಚ್ಚಾಸಾನಿಯನ್ನು ಕಾಣುವ ಹಂಬಲ. ಅವಳಿಂದ ಹಿಂದೂಸ್ತಾನಿ ಗಾಯನ ಕೇಳುವ ಆಸೆ.

ಆಗಷ್ಟೇ ದೇಶದ ಎಲ್ಲೆಡೆಯ ಸಂಗೀತ ಪ್ರೇಮಿಗಳ ಮೇಲೆ ಮೋಡಿ ಮಾಡುತ್ತಿದ್ದ ಮಲ್ಲಿಕಾರ್ಜುನ ಮನ್ಸೂರರ ಸ್ನೇಹವನ್ನು ಅ.ನ.ಕೃ. ಸಂಪಾದಿಸಿಯಾಗಿತ್ತು. ಬಸವಾದಿ ಶರಣರ ವಚನಗಳನ್ನು ರಾಗಬದ್ಧವಾಗಿ ಹಾಡಲು ಮನ್ಸೂರರಿಗೆ ಪ್ರೇರಣೆಯಾದವರೇ ಅ.ನ.ಕೃ. (ಈ ವಿಚಾರವಾಗಿ ಮನ್ಸೂರರು ತಮ್ಮ ಆತ್ಮಚರಿತ್ರೆ ‘ನನ್ನ ರಸಯಾತ್ರೆ’ಯಲ್ಲಿ ಉಲ್ಲೇಖಿಸಿದ್ದಾರೆ.) ಮುಂಬಯಿ ಕರ್ನಾಟಕದ ಈ ಭಾಗದಲ್ಲಿ ಎಲ್ಲಿಯೇ ಹೋಗುವುದಿದ್ದರೂ ಅ.ನ.ಕೃ.ಗೆ ಮನ್ಸೂರರು ಜೋಡಿಯಾಗಲೇಬೇಕು.

ಅವರಿಬ್ಬರೂ ಲಕ್ಷ್ಮೇಶ್ವರಕ್ಕೆ ಬಂದರು.

ಅವತ್ತು ಮನ್ಸೂರರ ಗಾಯನವನ್ನು ಆಲಿಸಿದ ಬಚ್ಚಾಸಾನಿ, ”ನೀ ದೊಡ್ಡ ಹೆಸರ ಮಾಡತಿ…” ಅಂದಳಂತೆ. ಆ ನಂತರ ಒಂದಷ್ಟು ಹೊತ್ತು ಹಾಡಿದಳಂತೆ. ಅ.ನ.ಕೃ. ಮತ್ತು ಮನ್ಸೂರರು ಬಚ್ಚಾಸಾನಿಯ ಗಾಯನ ಕೇಳಿ ಅವಾಕ್ಕಾಗಿ ಕೂತರಂತೆ.

”ಆಗ ಆಕೆಗೆ ತೊಂಬತ್ತಾಗಿ ಹೋಗಿತ್ತು,” ಎಂದು ಮನ್ಸೂರರು ಬರೆಯುತ್ತಾರೆ.

ಆ ಸಂದರ್ಭವನ್ನು ಕುರಿತಂತೆ ಅ.ನ.ಕೃ. ಅವರು ಎಲ್ಲಿಯಾದರೂ ಏನಾದರೂ ಬರೆದಿರಲೇಬೇಕು ಅಂದು ನನ್ನ ಅನಿಸಿಕೆ. ಯಾಕೆಂದರೆ, ಬಚ್ಚಾಸಾನಿಯನ್ನು ಕಂಡು ಅವಳಿಂದ ಹಿಂದೂಸ್ತಾನಿ ಗಾಯನ ಕೇಳುವುದು ಅವರ ಬಹುದಿನದ ಆಸೆಯಾಗಿತ್ತಲ್ಲ… ಎಲ್ಲಿ ಬರೆದಿದ್ದಾರೆ, ಏನನ್ನು ಬರೆದಿದ್ದಾರೆ ಎನ್ನುವುದು ದೊರೆತರೆ ನಮಗೆ ಅದು ಒಂದು ಅಧಿಕೃತ ದಾಖಲೆಯಾಗುತ್ತದೆ.

-೦-೦-೦-೦-೦-

ನಮ್ಮ ಊರಿನ ಹೆಮ್ಮೆಯ ವ್ಯಕ್ತಿತ್ವಗಳ ಕುರಿತು ತಿಳಿದುಕೊಳ್ಳುವ ಕುತೂಹಲ ಉಂಟಾದದ್ದು ನನ್ನ ಇಪ್ಪತ್ತಮೂರನೆಯ ವಯಸ್ಸಿನಲ್ಲಿ. ಹಿರಿಯರಿಗೆ ಗಂಟು ಬಿದ್ದು ಮಾಹಿತಿ ಕಲೆ ಹಾಕತೊಡಗಿದೆ. ಕೆಲವರ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿತು. ಇನ್ನು ಕೆಲವರ ಬಗ್ಗೆ ಸಿಕ್ಕದ್ದು ಅವರು ಕೆಲಸ ಮಾಡಿದ ಕ್ಷೇತ್ರದ ಕುರಿತು ಅಷ್ಟೇ.

ಬಚ್ಚಾಸಾನಿಯ ಹೆಸರನ್ನು ನಾನು ಮೊದಲ ಬಾರಿಗೆ ಕೇಳಿದ್ದು ನಮ್ಮ ಊರಿನ ವೈದ್ಯ ಬಾಬಣ್ಣ ಅವರಿಂದ. ಇವರನ್ನು ‘ತಾತಪ್ಪನವರ ಬಾಬಣ್ಣ’ ಎಂತಲೇ ಜನ ಗುರುತಿಸುವುದು. ತಾತಪ್ಪ ಅಂದರೆ ಇವರ ತಂದೆ. ಎತ್ತರದ ನಿಲುವಿನ ವ್ಯಕ್ತಿ ಅವರು. ಸುಮಾರು ಆರು ಅಡಿ ಇರಬೇಕು. ನಾನು ನೋಡುವ ಹೊತ್ತಿಗಾಗಲೇ ಅವರಿಗೆ ಎಂಬತ್ತರ ಸಮೀಪ ವಯಸ್ಸಾಗಿತ್ತು. ಮಾಧ್ವರಾದರೂ ಅವರು ಮೈಲಾರಲಿಂಗನ ಭಕ್ತರು. ಪ್ರತಿ ರವಿವಾರ ಮೈಲಾರಲಿಂಗನ ವಾರ. ತಾತಪ್ಪನವರು ಅಂದು ಬೆಳಿಗ್ಗೆಯೇ ಸ್ನಾನ ಮಾಡಿ ಕಂಬಳಿಯುಡುಗೆ ಉಟ್ಟು, ಕೈಯಲ್ಲಿ ಗೊರವಪ್ಪಗಳು ಹಿಡಿಯುವಂಥ ಡೋಣಿ ಮತ್ತು ಡಮರುಗಳನ್ನು ಹಿಡಿದು ಮೈಲಾರಲಿಂಗನ ಗುಡಿಗೆ ಹೋಗುತ್ತಿದ್ದರು. ಇವರು ವೃತ್ತಿಯಲ್ಲಿ ಶಾನುಭೋಗರು. ಸಾಕಷ್ಟು ಜಮೀನು. ದೊಡ್ಡ ಮನೆ. ಮನೆತುಂಬ ಜನ, ದನ, ಆಳು-ಕಾಳುಗಳು. ತಾತಪ್ಪನವರಿಗೆ ಇಬ್ಬರು ಪತ್ನಿಯರು. ಹಿರಿಯಳಿಗೆ ಮಕ್ಕಳಾಗಲಿಲ್ಲ. ಆದರೂ ನೆರೆಕರೆಯ ಮಕ್ಕಳನ್ನೆಲ್ಲ ತನ್ನವೆಂದೇ ಪ್ರೀತಿ, ಅಂತಃಕ್ಕರಣದಿಂದ ನೋಡಿಕೊಂಡಾಕೆ. ನಾವೆಲ್ಲಾ ‘ದೊಡ್ಡ ಮಾಮಿ’ ಎಂದು ಕರೆಯುತ್ತಿದ್ದೆವು. ಈಕೆಗೆ ನಾಟಿ ವೈದ್ಯದಲ್ಲಿ ಆಸಕ್ತಿ. ಬೆಂಗಳೂರಿನ ಲೆಕ್ಕದಲ್ಲಿ ಕೋಟ್ಯಂತರ ಬೆಲೆಬಾಳುವ ಜಾಗವನ್ನು ಇವರ ಮನೆ ಆವರಿಸಿಕೊಂಡಿತ್ತು. ಹಿಂದೆ 4000 ಚದರಡಿಯ ಹಿತ್ತಿಲ. ಮುಂದೆ 1000 ಚದರಡಿಯ ಅಂಗಳ. ಹಿತ್ತಲಲ್ಲಿ ಕೆಲವು ಮರಗಳಲ್ಲದೆ ನಾನಾ ನಮೂನೆಯ ಔಷಧೀಯ ಸಸ್ಯಗಳನ್ನು ಬೆಳೆಸಿದ್ದರು. ದನದ ಕೊಟ್ಟಿಗೆ, ಬಾವಿಗಳೂ ಅಲ್ಲಿದ್ದವು. ಅವರ ಪಾಲಿನ ‘ಪ್ರೀತಿಯ ಹುಡುಗರು’ ನಾವು. ಯಾವುದೇ ಎಗ್ಗಿಲ್ಲದೆ ಅವರ ಮನೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಓಡಾಡುತ್ತಿದ್ದೆವು.

ವೈದ್ಯ ಬಾಬಣ್ಣ ನನ್ನನ್ನು ಚಿಕ್ಕಂದಿನಿಂದಲೇ ನೋಡಿ, ಎತ್ತಿ, ಆಡಿಸಿದವರು. ಒಳ್ಳೆಯ ಸಂಸ್ಕೃತ ಜ್ಞಾನವುಳ್ಳ ಅವರು ಅನೇಕ ಸಲ ನಾನು ಬರೆದದ್ದನ್ನು ತಿದ್ದಿ, ಅವಶ್ಯವಿದ್ದರೆ ಪರ್ಯಾಯ ಪದಗಳನ್ನು ನೀಡಿ, ಪ್ರೋತ್ಸಾಹಿಸಿದವರು. ನನ್ನ ಬೆಳವಣಿಗೆಯನ್ನು ಕಂಡು ಸಂತೋಷಪಟ್ಟವರು.

ಈ ಮೊದಲೊಮ್ಮೆ ಹೇಳಿದ್ದೆನಲ್ಲ ನಮ್ಮ ಮುತ್ತಜ್ಜ ಶ್ರೀಪಾದ ದೀಕ್ಷಿತ ವಾಜಪೇಯಿಯವರ ಬಗ್ಗೆ… ಬಾಲ್ಯದಲ್ಲಿ ಅವರಿಂದ ಬಾಬಣ್ಣ ಒಂದೆರಡು ಸಲ ಪಾಠ ಹೇಳಿಸಿಕೊಂಡವರಂತೆ. ಸದ್ಯ ನಮ್ಮ ಊರಿನ ಯಾವುದೇ ವಿಷಯದ ಇತಿಹಾಸವನ್ನು ತಿಳಿಯಬೇಕೆಂದರೂ ಅದನ್ನು ಅಧಿಕೃತವಾಗಿ ತಿಳಿಸಿಕೊಡುವ ಏಕಮಾತ್ರ ವ್ಯಕ್ತಿ ಈ ವೈದ್ಯ ಬಾಬಣ್ಣ.

1975 ರ ಆಸುಪಾಸಿನಲ್ಲಿ, ನನಗೆ ನಾಟಕಗಳಲ್ಲಿ ಆಸಕ್ತಿ ಹುಟ್ಟಿ, ಅಭಿನಯ, ನಾಟಕ ರಚನೆ, ರಂಗ ತರಬೇತಿ ಶಿಬಿರ ಅಂತೆಲ್ಲ ಓಡಾಡುತ್ತಿರುವಾಗ ಒಮ್ಮೆ ನಮ್ಮೂರು ಲಕ್ಷ್ಮೇಶ್ವರಕ್ಕೆ ಹೋದೆ. ಶಿರಹಟ್ಟಿ ನನ್ನ ಊರಿಗೆ ಕೇವಲ ಇಪ್ಪತ್ತು ಕಿಲೋಮೀಟರ್ ದೂರ. ಗದಗು ಇಪ್ಪತ್ತನಾಲ್ಕು ಮೈಲುಗಳ ಮೇಲಿರೋ ಊರು. ಈಚೆ ಪಶ್ಚಿಮಕ್ಕೆ ಎಲಿವಾಳ ಎಂಬ ಚಿಕ್ಕ ಹಳ್ಳಿ. ಈ ಮೂರೂ ಸ್ಥಳಗಳು ರಂಗಭೂಮಿಯ ಸಂಬಂಧದಲ್ಲಿ ನನಗೆ ಮಹತ್ವದ್ದೆನಿಸಿದ ಸಂದರ್ಭ ಅದು. ಗದಗಿನ ಗರುಡ ಸದಾಶಿವರಾಯರ ಬಗ್ಗೆ, ಶಿರಹಟ್ಟಿ ವೆಂಕೋಬರಾಯರ ಬಗ್ಗೆ ಮತ್ತು ಎಲಿವಾಳದ ಸಿದ್ದಯ್ಯಸ್ವಾಮಿಯ ಬಗ್ಗೆ (ಇವರು ‘ಶ್ರೀಕೃಷ್ಣ ಗಾರುಡಿ’ ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರದಲ್ಲಿ ಅಮೋಘ ಅಭಿನಯವನ್ನು ನೀಡಿದ ನಟ.) ಬಾಬಣ್ಣ ಅವರ ಬಳಿ ಏನಾದರೂ ಮಾಹಿತಿ ಸಿಗುತ್ತದೆಯೇ ಎಂದು ಕೇಳಿದೆ.

”ಯಾಕೆ ಬೇಕು…?” ಅಂತ ಬಾಬಣ್ಣ.

”ಅವರು ನಮ್ಮ ಊರಿನ ಆಜೂ-ಬಾಜೂ ಊರಿನವರಲ್ಲವೆ… ಏನೋ ಒಂದು ರೀತಿ ಹೆಮ್ಮೆ… ಅದಕ್ಕೇ ತಿಳಿದುಕೋಬೇಕು,” ಅಂದೆ.

ಬಾಬಣ್ಣ ನಕ್ಕರು. ”ನಮ್ಮ ಊರವರ ಬಗ್ಗೆ ಮೊದಲ ತಿಳ್ಕೊಂಡು, ಆಮ್ಯಾಲೆ ಆಜೂ-ಬಾಜೂ ಊರಿನವರ ಬಗ್ಗೆ ತಿಳಕೋಬೇಕು…” ಅಂದರು. ಒಂದು ಕ್ಷಣ ಸುಮ್ಮನಿದ್ದು, ”ನಮ್ಮ ಊರೂ ಏನ್ ಕಮ್ಮಿಯಿಲ್ಲ ಈ ಕ್ಷೇತ್ರದಾಗ. ರಂಗಭೂಮಿ ಕ್ಷೇತ್ರದಾಗ ಭಾಳ ವಿಶೇಷ ಅನಸೋ ಸಾಧನಾ ಮಾಡಿದವರು ನಮ್ಮ ಊರಿನ ಹೆಂಗಸರು…” ಅಂತ ನನ್ನ ಕುತೂಹಲ ಕೆರಳಿಸಿದರು.

”ಹೆಂಗಸರಾ…?!” ಅಂತ ಅವರ ಮುಖವನ್ನೇ ನೋಡುತ್ತ ಕೂತ ನನಗೆ ಸ್ವಲ್ಪದರಲ್ಲಿ ಬಚ್ಚಾಸಾನಿಯ ಬಗ್ಗೆ ವಿವರ ನೀಡಿದರು ಬಾಬಣ್ಣ.

”ಆದ್ರ ಏನ್ ಮಾಡೋದು, ಆ ಮಂದಿ ನಿಷ್ಕಾಮಕರ್ಮಿಗಳು. ರಂಗಭೂಮೀನ ಅವರು ಬರೇ ಹೊಟ್ಟಿ ತುಂಬಿಕೊಳ್ಳೋ ವೃತ್ತಿ ಅಂತ ತಿಳೀಲಿಲ್ಲ. ಅದು ಪರಮ ಪವಿತ್ರ ಸೇವಾ ಅಂತ ಭಾವಿಸಿ ಕೆಲಸಾ ಮಾಡೀದ್ರು. ಎಂದೂ ತಮ್ಮ ‘ಪ್ರಚಾರ’ ಮಾಡಿಕೊಳ್ಳಲೆ ಇಲ್ಲಾ… ಹೀಂಗಾಗಿ, ಅವರ ಬಗ್ಗೆ ಮುಂದಿನ ಜನಕ್ಕ ಜಾಸ್ತಿ ತಿಳೀಲೇ ಇಲ್ಲ…” ಎಂದು ನಿಟ್ಟುಸಿರು ಬಿಟ್ಟರು.

ನನಗೆ ನಮ್ಮ ಊರಿನ ಬಗ್ಗೆ ಹೆಚ್ಚು ಹೆಮ್ಮೆ ಎನಿಸತೊಡಗಿತು.

ಆಗಿನಿಂದ ಶುರುವಾಯಿತು ಬಚ್ಚಾಸಾನಿಯ ಬಗ್ಗೆ ಹೆಚ್ಹೆಚ್ಚು ವಿವರಗಳನ್ನು ಕಲೆಹಾಕುವ ನನ್ನ ಕೆಲಸ. ಆದರೂ ಚಿತ್ರ ‘ಪೂರ್ಣ’ವಾಗಲಿಲ್ಲ. ನಮ್ಮ ರಂಗಭೂಮಿಯ ಶತಾಯುಷಿ ಏಣಗಿ ಬಾಳಪ್ಪನವರು ಚಿಕ್ಕಂದಿನಲ್ಲಿ ಬಚ್ಚಾಸಾನಿಯನ್ನು ನೋಡಿದ್ದರಂತೆ. ಅವರೆದುರು ಹಿಂದೆ ಯಾವಾಗಲೋ ಈ ವಿಚಾರ ಪ್ರಸ್ತಾಪಿಸಿದ್ದೆ. ”ಒಳ್ಳೇ ಕೆಲಸ. ಮಾಡ್ರಿ…” ಅಂತ ತಮಗೆ ಗೊತ್ತಿದ್ದ ವಿವರಗಳನ್ನು ಕೊಟ್ಟು, ಸಂಪರ್ಕಿಸಬಹುದಾದ ಸಂಭಾವ್ಯ ವ್ಯಕ್ತಿಗಳ ಹೆಸರುಗಳನ್ನೂ ಹೇಳಿದರು. ಆದರೂ ಊಹೂಂ, ನನಗೆ ಅವಶ್ಯವಿರುವ ಮಾಹಿತಿ ದೊರೆಯಲಿಲ್ಲ.

ನಾನು ಹೈದರಾಬಾದಿನಲ್ಲಿ ನೆಲೆಸಿದ್ದಾಗ ಒಮ್ಮೆ ಏಣಗಿ ಬಾಳಪ್ಪನವರು ಫೋನ್ ಮಾಡಿ, ”ನಾ ಇರೂದ್ರಾಗs ಬಚ್ಚಾಸಾನಿ ಬಗ್ಗೆ ಒಂದು ಸಣ್ಣ ಪುಸ್ತಕಾ ಆದ್ರೂ ಸರಿ, ಬರೀರೆಪಾ… ನಾ ನೋಡಬೇಕದನ್ನ…” ಅಂತ ಪ್ರೀತಿಯಿಂದ ಹೇಳಿದರು. ಅದು ಅವರ ಒತ್ತಾಸೆ ಕೂಡ.

ಮತ್ತೆ ಶುರುವಾಯಿತು ‘ಬಚ್ಚಾಸಾನಿ’ಯ ಬೇಟೆ…

ಹುಬ್ಬಳ್ಳಿಯಲ್ಲಿ ರಂಗ ನಟಿ ಸೋನುಬಾಯಿ ದೊಡ್ದಮನಿಯವರ ಸಂಬಂಧಿಕರು ಇರುವ ವಿಚಾರ ಗೊತ್ತಿತ್ತು. ಅವರನ್ನು ವಿಚಾರಿಸಿದರೆ ಬಚ್ಚಾಸಾನಿಯ ಬಗ್ಗೆ ನಿಖರವಾಗಿ ಹೇಳಬಲ್ಲ ಯಾರೊಬ್ಬರ ಹೆಸರಾದರೂ ಸಿಕ್ಕೇ ಸಿಗುತ್ತದೆ ಎನಿಸಿತು. ಹೋಗಿ ಕೇಳಿದೆ.

”ಈಗ ಲಕ್ಷ್ಮೇಶ್ವರದಾಗ ಬಚ್ಚಾಸಾನೀ ಸಂಬಂಧಿಕರು ಯಾರಾದ್ರೂ ಸಿಗಬಹುದೇನು?”

”ಒಬ್ಬ ಇದ್ದ ನಮ್ಮ ಕಾಕಾ… ಮನ್ನೆ ಮನ್ನೆ ತೀರಿಕೊಂಡ… ಅವನ ಮಗಾ ಇಲ್ಲೆ ಅದಾನ… ಕಾಜೆಸಾಬ ದೊಡ್ಡಮನಿ ಅಂತ…”

”ಯಾರು? ಕೆ. ಎ. ದೊಡ್ಡಮನಿ ಏನು?”

”ಹೌದು ನೋಡ್ರಿ. ಅವನs…”

ನನ್ನ ಕೆಲಸ ಹೂವಿಗಿಂತ ಹಗುರವಾಯಿತು ಅಂದುಕೊಂಡು ಅಲ್ಲಿಂದ ಎದ್ದೆ.

ಆತ ಲಕ್ಷ್ಮೇಶ್ವರದಲ್ಲಿ ನನ್ನ ಕಾಲೇಜು ಸಹಪಾಠಿ. ಸರಕಾರಿ ಜ್ಯೂ. ಕಾಲೇಜಿನ ಪ್ರಾಚಾರ್ಯನಾಗಿ ನಿವೃತ್ತಿ ಹೊಂದಿ ಹುಬ್ಬಳ್ಳಿಯಲ್ಲೇ ವಾಸಿಸಿದ್ದಾನೆ.

ಆತನ ವಿಳಾಸ ದೊರಕಿಸಿಕೊಂಡು ಮನೆಗೆ ಹೋದೆ.

”ಹೌದು. ಬಚ್ಚಾಸಾನಿ ನಮಗ ಮುತ್ತಜ್ಜಿ ಆಗಬೇಕಂತ. ನಮ್ಮ ಅಪ್ಪ ಹೇಳ್ತಿದ್ದಾ…”

”ನನಗ ನಿಮ್ಮ ಮುತ್ತಜ್ಜಿ ಬಗ್ಗೆ, ಆಕಿ ನಡಸ್ತಿದ್ದ ‘ಸ್ತ್ರೀ ನಾಟಕ ಮಂಡಳಿ’ ಬಗ್ಗೆ ಮಾಹಿತಿ ಬೇಕು. ನಿನಗೇನಾರೆ ಗೊತ್ತೈತೇನು?…ನಿಮ್ಮ ಮನ್ಯಾಗ ಯಾರರೆ ಏನಾರೆ ಬರದು ಇಟ್ಟಿರಬೇಕಲ್ಲಾ ಆಕಿ ಬಗ್ಗೆ…”

”ಊಹೂಂ… ಹಂಗೇನೂ ಯಾರೂ ಬರದು ಇಟ್ಟಂಗಿಲ್ಲಪಾ… ಆಗಿನ ಮಂದಿಗೆ ಅದೆಲ್ಲ ಅಷ್ಟು ಮಹತ್ವದ್ದು ಅಂತ ಅನಿಸಿರಾಕಿಲ್ಲ…”

”ಅಲ್ಲೋ… ನೀನಾರೆ ಆ ಪ್ರಯತ್ನಾ ಮಾಡಬಹುದಾಗಿತ್ತಲ್ಲೋ… ಸಾಹಿತ್ಯದಾಗ ಆಸಕ್ತಿ ಇರಾಂವ ನೀ…”

”ಅಂಥಾದಕ್ಕೆಲ್ಲಾ ಎಲ್ಲೆ ಟೈಮ್ ಐತ್ಯೋ ಮಾರಾಯಾ…?”

”ಹೋಗ್ಲಿ. ಆಕಿ ಸಂಸ್ಥಾನಿಕರ ಅಭಿಮಾನದ ಗಾಯಕಿಯಾಗಿದ್ಲಂತ… ಆ ಸಂಬಂಧ ಏನಾರೆ ದಾಖಲೆ ಪತ್ರ…?”

ಆತ ಇಲ್ಲವೆಂಬಂತೆ ತಲೆಯಲ್ಲಾಡಿಸಿದ.

”ಬಚ್ಚಾಸಾನಿದೊಂದು ಫೋಟೋನಾರೆ…”

”ಆ ಕಾಲಕ್ಕ ಯಾರು ಫೋಟೋ ತಗಿಸಿಕೊಂತಿದ್ರೋ… ಅವರಿಗೆ ಅವೆಲ್ಲಾ ಗೊತ್ತೂ ಇರಲಿಲ್ಲಾ…”

ಅಂತೂ ನಾನು ಬರಿಗೈಯಲ್ಲಿ ಮರಳಬೇಕಾಯಿತು.

ಮುಂದೊಮ್ಮೆ ನನ್ನ ಹಿರಿಯ ಮಿತ್ರ ರಂಗಚಿಂತಕ ವಸಂತ ಕುಲಕರ್ಣಿಯವರು ತಾವು ಬಚ್ಚಾಸಾನಿಯ ಪುರುಷಪಾತ್ರದ ಒಂದು ಫೋಟೋ ನೋಡಿದ್ದಾಗಿ ಹೇಳಿ ನನ್ನಲ್ಲಿ ಮತ್ತೆ ಆಸೆ ಚಿಗುರಿಸಿದರು. ಆದರೆ ಆ ಆಸೆಯ ಬಳ್ಳಿಯೂ ಕಮರಿಹೋಯಿತು.

ನಮಗೆ ದಾಖಲಾತಿಯ ಮಹತ್ವವೇ ಗೊತ್ತಿಲ್ಲ. ಈ ಕಾರಣದಿಂದ ಅದೆಷ್ಟು ಪ್ರತಿಭೆಗಳು, ಅವರು ಮಾಡಿದ ಕಾರ್ಯಗಳು ಬೆಳಕಿಗೆ ಬಾರದೆ ಅವರೊಂದಿಗೇ ಮಣ್ಣುಪಾಲಾದವೋ…

ಕನ್ನಡ ರಂಗಭೂಮಿಯ ಬಗ್ಗೆ, ಅದರ ಇತಿಹಾಸದ ಬಗ್ಗೆ, ಅದರ ವೈಭವದ ಬಗ್ಗೆ, ಅದರ ಪ್ರಯೋಗಶೀಲತೆಯ ಬಗ್ಗೆ ಸಾಕಷ್ಟು ಜನ ಬರೆದಿದ್ದಾರೆ. ಗ್ರಂಥಗಳು ಬಂದಿವೆ. ಎಷ್ಟೋ ಜನ ಡಾಕ್ಟರೇಟ್ ಪಡೆದಿದ್ದಾರೆ. ಮಹಾಪ್ರಬಂಧಗಳು ಪ್ರಕಟವಾಗಿವೆ. ಇನ್ನೂ ಶೋಧನೆಗಳು, ಸಂಶೋಧನೆಗಳು ನಡೆಯುತ್ತಲೇ ಇವೆ. ಅಕಾಡೆಮಿಗಳಿವೆ. ಸಂಸ್ಕೃತಿ ಇಲಾಖೆ ಇದೆ. ರಂಗಭೂಮಿಯ ಬಗ್ಗೆ ಸರಕಾರ ಕೋಟ್ಯಂತರ ರೂಪಾಯಿಗಳ ಯೋಜನೆಗಳನ್ನು ಹಾಕಿಕೊಳ್ಳುತ್ತಲೇ ಬಂದಿದೆ. ಇಂಥದರ ಮಧ್ಯೆ ಕೆಲವು ನಿಜ ಸಂಗತಿಗಳು, ಕೆಲವು ಪ್ರಮುಖ ಘಟನೆಗಳು, ಕೆಲವು ಮಹತ್ತರ ಪ್ರಯೋಗಗಳು ಮತ್ತು ಅವುಗಳಿಗೆ ಕಾರಣರಾದವರು ಬೆಳಕಿಗೆ ಬಾರದೆ ಹಾಗೇ ಉಳಿದಿದ್ದಾರೆ.

ಎಂಥ ದುರಂತ ನೋಡಿ.

‍ಲೇಖಕರು G

September 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

21 ಪ್ರತಿಕ್ರಿಯೆಗಳು

 1. umesh desai

  ಖರೆ ಅದ ದಾಖಲಾತಿ ಬೇಕು ನಿಮ್ಮಿಂದ ಆ ಹಳೇ ದಿನಮಾನಗಳ, ವ್ಯಕ್ತಿಗಳ
  ಬಗ್ಗೆ ತಿಳಕೊಂಡಿದ್ದು ಒಂದು ಪುಣ್ಯಾದ ಕೆಲಸ ಅದ. ಧನ್ಯೋಸ್ಮಿ..

  ಪ್ರತಿಕ್ರಿಯೆ
 2. Ramchandra PN

  Very touching. ಲೇಖನದ ಕೊನೇಗೆ ಬಹಳ relevant questionsಳನ್ನ ಹಾಕಿದ್ದೀರಿ. ಬಚ್ಚಾಸಾನಿಯ ಬಗ್ಗೆ ಇನಷ್ಟು ತಿಳಿದುಕೊಳ್ಳ ಬೇಕೆಂದು ಅನಿಸ ತೊಡಗಿದೆ – ರಾಮಚಂದ್ರ ಪಿ ಎನ್

  ಪ್ರತಿಕ್ರಿಯೆ
 3. ಹೆಚ್.ವಿ.ವೇಣುಗೋಪಾಲ್

  ಸರ್, ನೀವು ಅಕ್ಷರದಲ್ಲಿ ಹುದುಗಿಸಿದ ಈ ನೆನಪು ನಮ್ಮ ಮನವನ್ನು ತೋಯಿಸುತ್ತದೆ. ಆರ್ದ ಮನಸ್ಸು ಇಂತಹ ನೆನಪುಗಳನ್ನು ಮತ್ತೆ ಮತ್ತೆ ಬಯಸುತ್ತದೆ. ನಿಮ್ಮ ಬರವಣಿಗೆಗೆ ಧನ್ಯವಾದಗಳು.— ಹೆಚ್.ವಿ.ವೇಣುಗೋಪಾಲ್

  ಪ್ರತಿಕ್ರಿಯೆ
 4. CHANDRASHEKHAR VASTRAD

  bachaasaani maneya jagali mele kuLitu a.na.kri. gaayana aalisiddara bagge halawaaru baari keLidde.antha adbhuta nati gaayki kewala nooru warshada awdhialli ondu chikka kuruhuu illadante maNmareyadaddu namma saamskritika lokad durnta. aasktaru eegalaadaru shrama vahisi kelasa maadalu vaajpeyi awara lekhana prerane odagiside.

  .

  ಪ್ರತಿಕ್ರಿಯೆ
 5. ಹಿಪ್ಪರಗಿ ಸಿದ್ದರಾಮ್

  ಗೋ.ವಾ. ಸರ್,ನಿಮ್ಮ ಅಭಿಪ್ರಾಯ ನಿಜ! ಯಾವುದೇ ಅಧಿಕೃತ ದಾಖಲೆಗಳು ಇಲ್ಲದ್ದರಿಂದ ಹಿರಿಯ ತಲೆಮಾರಿನ ಹಲವಾರು ಪ್ರತಿಭಾವಂತ ರಂಗದಿಗ್ಗಜರ ಕುರಿತು ಕೇವಲ ಅಕ್ಷರಗಳಲ್ಲಿ ಓದಿಕೊಂಡು, ಕಲ್ಪಿಸಿಕೊಂಡು ಸಮಾಧಾನಟ್ಟುಕೊಳ್ಳುವ ದುರಂತವನ್ನು ನಮ್ಮದಾಗಿಸಿಕೊಂಡಿದ್ದೇವೆ. ದುರಂತನಾಯಕಿಯರು…..ಅವರ ಆತ್ಮಗಳಿಗೆ ಗೌರವಪೂರ್ವಕ ರಂಗನಮನಗಳು….
  ನಮಸ್ಕಾರಗಳು ಸರ್…

  ಪ್ರತಿಕ್ರಿಯೆ
 6. ಆಸು ಹೆಗ್ಡೆ

  ಮಾನ್ಯರೇ,
  ಓದು ಸಂತಸ ನೀಡಿತು, ಜೊತೆಗೆ ಬೇಸರವನ್ನೂ ತುಂಬಿತು.
  ಇಂಥ ಅದೆಷ್ಟು ಮಹಾನ್ ವ್ಯಕ್ತಿಗಳು ಎಲೆಮರೆಯ ಕಾಯಿಗಳಂತೆ ಮರೆಯಾಗಿ ಹೋಗಿಬಿಟ್ಟಿದ್ದಾರೋ ಯಾರಿಗೆ ಗೊತ್ತು.
  ತಮ್ಮ ಈ ಪ್ರಯತ್ನ ಶ್ಲಾಘನೀಯ!

  ಪ್ರತಿಕ್ರಿಯೆ
 7. prakash hegde

  ವಾಜಪೇಯಿ ಸರ್ ಜಿ….

  ಇಂಥಹ ಎಷ್ಟೋ ಜನ ತೆರೆಯ ಹಿಂದೆ ಇದ್ದಾರೆ ಅಲ್ವಾ?

  ನಿಮ್ಮ ಹುಡುಕಾಟ ಖುಷಿ ಆಯ್ತು ………….

  ಪ್ರತಿಕ್ರಿಯೆ
 8. SavitaInamdar

  ನೀವನ್ನೂದು ಅಗದೀ ಖರೇ ಅದ. ಮೊದಲ ನಮ್ಮ ಊರವರ ಬಗ್ಗೆ ತಿಳ್ಕೊಂಡು ಆಮ್ಯಾಲೆ ಆಜೂ-ಬಾಜೂ ಊರಿನವರ ಬಗ್ಗೆ ತಿಳಕೋಬೇಕು…ಆದ್ರ ಹಿತ್ತಲ ಗಿಡ ಮದ್ದಲ್ಲ ಅನ್ನೂ ಹಾಂಗ ನಾವು ಅವರನ್ನ ಆ ದೃಷ್ಟೀಲೆ ಎಲ್ಲೆ ನೋಡತೀವಿ ಹೇಳ್ರಿ?? ಅದೂ ಅಲ್ಲದ ಆಗಿನ ಕಾಲದ ಮಂದಿಗೆ ಇದೆಲ್ಲ ಅಷ್ಟು ಮಹತ್ವದ್ದು ಅಂತ ಅನಿಸ್ತಿರಲಿಕ್ಕೂ ಇಲ್ಲ ಅಲ್ಲ? ಬಚ್ಚಾಸಾನಿ ಅಂಥಾ ಸಂಸ್ಥಾನಿಕರ ಅಭಿಮಾನದ ಗಾಯಕಿ,ಹೇಳ ಹೆಸರಿಲ್ಲದ ಕಣ್ಮರಿಯಾಗಿದ್ದೂ ಇದ ಕಾರಣಕ್ಕ ಇರಬಹುದು. ದಾಖಲಾತಿಯ ಮಹತ್ವಾನ ಗೊತ್ತಿಲ್ಲದ ಇನ್ನೂ ಅದೆಷ್ಟು ಪ್ರತಿಭೆಗಳು, ಅವರು ಮಾಡಿದ ಕಾರ್ಯಗಳು ಬೆಳಕಿಗೆ ಬರದನ ಅವರ ಜೋಡೀನ ಮಣ್ಣುಪಾಲಾಗಿರಬಹುದು ಅಂತ ಆ ದೇವರಿಗೇ ಗೊತ್ತು. ಆದ್ರ ನಿಮ್ಮ ಈ ಹುಡುಕಾಟದಿಂದ ಎಷ್ಟೆಲ್ಲಾ ಗೊತ್ತಿರದಂತಹ ಸಂದತಿಗಳು ಬೆಳಕಿಗೆ ಬರ್ಲಿಕ್ಕೆ ಹತ್ತ್ಯಾವ. ಖರೇನ ನಿಮ್ಮ ಈ ಪ್ರಯತ್ನಕ್ಕ ಸಲಾಂ…..

  ಪ್ರತಿಕ್ರಿಯೆ
 9. M.S.Prasad

  ಮಾನ್ಯರೇ,

  ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು ಈ ನಿಮ್ಮ ಸುಂದರ ಬರಹ.

  ಪ್ರತಿಕ್ರಿಯೆ
 10. paresh saraf

  ಚೆನ್ನಾಗಿತ್ತು ಸರ್.. ಎಲೆ ಮರೆ ಕಾಯಿಯನ್ನು ಪರಿಚಯಿಸಿದ ಈ ಲೇಖನ ಶ್ಲಾಘನೀಯ.

  ಪ್ರತಿಕ್ರಿಯೆ
 11. Anitha Naresh Manchi

  ಮರೆತ ಇಂತಹ ಅದೆಷ್ಟು ಮುತ್ತುಗಳು ಮರೆಯಲ್ಲೇ ಮಾಯವಾಗಿರಬಹುದಲ್ಲ.. ಪ್ರತಿ ಮನುಷ್ಯನ ದಿನಚರಿ ಕೂಡಾ ಕೆಲ ಕಾಲ ಕಳೆದ ಮೇಲೆ ಇತಿಹಾಸದ ಯಾವುದೋ ಒಂದು ಭಾಗವಾಗುವುದು ಎಷ್ಟು ಸಹಜ .. ಸುಂದರ ಬರಹ ಮತ್ತು ನಾವೆಂದೂ ಕಾಣದ ಆ ಕಾಲದ ಬದುಕನ್ನು ನಮ್ಮ ಮುಂದಿಟ್ಟದ್ದಕ್ಕಾಗಿ ಧನ್ಯವಾದಗಳು

  ಪ್ರತಿಕ್ರಿಯೆ
 12. Mohan Vernekar

  ಓದಿದೆ. ಸುಮಾರು ಹೊತ್ತು ಬಚ್ಚಾಸಾನಿಯ ಗುಂಗಿನಲ್ಲಿದ್ದೆ.ಇಂಥ ಎಷ್ಟೊಂದು ಪ್ರತಿಭೆಗಳು ಕಾಲಗರ್ಭದಲ್ಲಿ ಮರೆಯಾಗಿಬಿಟ್ಟುವಲ್ಲ. ಯೋಚಿಸಿದಾಗ ವಿಷಾದಭಾವ ಆವರಿಸುತ್ತದೆ. ಇನ್ನು ನಿಮ್ಮ ಬರವಣಿಗೆ ಶೈಲಿ ಬಿಡಿ, ಅದ್ಭುತ. ಹೃದಯಸ್ಪರ್ಶಿ ನಿರೂಪಣೆ ಮತ್ತು ಅಲ್ಲಿಯ ಪ್ರಾಂತೀಯ ಭಾಷೆಯ ಸೊಗಡು ಇಷ್ಟವಾಯಿತು. ಒಮ್ಮೆ ಭೇಟಿಯಾಗೋಣ,ಮಾತಾಡೋಣ.

  ಪ್ರತಿಕ್ರಿಯೆ
 13. naresh

  ಕಾಣಲಾರದೆ, ಕಂಡೂ ಕಾಣಿಸಲಾರದಿರುವ, ಇಂತಾ ಅದೆಷ್ಟು ಸತ್ಯಗಳು ಕನ್ನಡ ರಂಗದ ಒಡಲಲ್ಲಿ ಅಡಗಿದೆಯೋ, ಹ್ಯಾಟ್ಸ್ ಆಫ್ಫ್ ಸರ್, ಲಕ್ಸ್ಮೇಶ್ವರ ಎಂಬ ವಿಸ್ಮಯ ಲೋಕ ತೆರೆದು ತೋರಿದಕ್ಕೆ, ಇದೆಲ್ಲವೂ ಪುಸ್ತಕ ರೂಪದಲ್ಲಿ ಖಂಡಿತಾ ಬರಬೇಕು.

  ಪ್ರತಿಕ್ರಿಯೆ
 14. venkatesh

  Sir , regarding bachhasani , A.Na.Kru. mentions about her in his autobiography ‘Barahagarana Baduku’. You can refer that book.

  ಪ್ರತಿಕ್ರಿಯೆ
 15. Pushparaj Chauta

  ಹಲವು ದಿನಗಳ ತಿರುಗಾಟ ನನ್ನ ಓದನ್ನು ಕೊಂಚಮಟ್ಟಿಗೆ ಕ್ಷೀಣಗೊಳಿಸಿದರೂ ಈ ಅಂಕಣವನ್ನು ಓದದೆ ಬಿಡಲಾಗದು. ಅಷ್ಟರ ಮಟ್ಟಿನ ಒಲವಿರುವುದು ನನಗೆ ವಾಜಪೇಯಿಯವರ ನಿರೂಪಣ ಶೈಲಿ. ಮತ್ತು ನನ್ನ ನೆಚ್ಚಿನ ಉತ್ತರಕರ್ನಾಟಕ ಭಾಷೆ.

  ಅವರ ನೆನಪಿನಂಗಳದಿಂದೆದ್ದು ಹೀಗೆ ನಿಂತ ಮರೆಯಾದ ಮುತ್ತಿನಂಥ ಪಾತ್ರವೊಂದರ ಸ್ಥೂಲ ಚಿತ್ರಣ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: