ಗೋಪಾಲ ವಾಜಪೇಯಿ ಕಾಲಂ : ಗೋಣಿ ಚೀಲದ ತುಂಬ 'ರಾಣಿ ರೂಪಾಯಿ'!

ಸುಮ್ಮನೇ ನೆನಪುಗಳು- 13

– ಗೋಪಾಲ ವಾಜಪೇಯಿ

ಬಚ್ಚಾಸಾನಿಯ ಮನೆಯ ಹುಡುಗಿಯರ ಕುರಿತು ಹೇಳುತ್ತಿದ್ದೇನೆ. ಅವರೆಲ್ಲ ‘ಕಲಾವಂತ’ ಮನೆತನದ ‘ವಯಸ್ಸಿನ’ ಹುಡುಗಿಯರು. ಕಣ್ಣು ಕುಕ್ಕುವಂಥ ಸೌಂದರ್ಯ ಎಲ್ಲರದೂ. ಒಬ್ಬರಿಗಿಂತ ಒಬ್ಬರು ಅಂದಗಾತಿಯರು. ಒಳ್ಳೆಯ ಬಣ್ಣ, ಆಕರ್ಷಕ ಕಣ್ಣುಗಳು, ಕೋಗಿಲೆಯ ಕಂಠ, ನವಿಲಿನ ನಡಿಗೆ, ಆಪ್ಯಾಯಕರ ನಗೆ, ರಂಗವನ್ನೇರಿದರಂತೂ ರಂಗೋರಂಗು… ಬಚ್ಚಾಸಾನಿಯ ತಂಗಿ ಪೀರವ್ವನ ಮಗಳು ಸೋನೂಬಾಯಿ ಆ ಕಾಲದ ದೊಡ್ಡ ನಟಿ ಮತ್ತು ಗಾಯಕಿ. ಅನೇಕ ಕಂಪನಿಗಳ ಬೇಡಿಕೆಯ ಕಲಾವಿದೆಯಾಗಿ ಅಷ್ಟೇ ಅಲ್ಲ, ಸ್ವತಃ ನಾಟಕ ಕಂಪನಿ ಕಟ್ಟಿ ನಾಡಿನಾದ್ಯಂತ ಸಾಕಷ್ಟು ನಾಟಕಗಳ ಪ್ರಯೋಗಗಳನ್ನು ನೀಡಿದವಳು. ಸಂಗೀತ, ಸೌಂದರ್ಯ ಮತ್ತು ಅಭಿನಯಗಳಿಗೆ ಮತ್ತೊಂದು ಹೆಸರೆನಿಸಿ ಮೆರೆದವಳು. ತನ್ನ ಎಪ್ಪತ್ತನೆಯ ವಯಸ್ಸಿನಲ್ಲೂ ಎಲ್ಲರೂ ಕಣ್ಣು ಅಗಲಿಸಿ ಕೂತು, ಹಾಡು ಕೇಳುವಂತೆ ರಂಗಗೀತೆಗಳ ರಸದೌತಣವನ್ನು ಬಡಿಸುತ್ತಿದ್ದವಳು. ಹಿರಿಯರಾದ ಏಣಗಿ ಬಾಳಪ್ಪನವರು ಸ್ವಂತ ಕಂಪನಿ ಕಟ್ಟುವ ಮುನ್ನ, ಆಕೆಯೊಂದಿಗೆ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಅವಳ ಬಗ್ಗೆ ತಮ್ಮ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಪುಸ್ತಕದಲ್ಲಿ ಪ್ರಶಂಸಿಸಿದ್ದಾರೆ. ನಾನು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯನಾಗಿದ್ದ ಅವಧಿಯಲ್ಲಿ ಸೋನೂಬಾಯಿಗೆ ಪ್ರಶಸ್ತಿ ಬಂತು (1988). ಆ ಸಂದರ್ಭದಲ್ಲಿ ಪ್ರಶಸ್ತಿ ಪುಸ್ತಿಕೆಗಾಗಿ ಈ ಕಲಾವಿದೆಯ ಸಂದರ್ಶನ ನಡೆಸುವ ಅವಕಾಶ ನನಗೆ ಒದಗಿತ್ತು. ++++++ ಈ ಸೋನೂಬಾಯಿಯಂತೆಯೇ ಬಚ್ಚಾಸಾನಿಯ ನಿಗರಾನಿಯಲ್ಲಿ ಬೆಳೆದು, ಸೌಂದರ್ಯ, ಸಂಗೀತ ಮತ್ತು ಅಭಿನಯಗಳ ‘ರಾಣಿ’ ಎನಿಸಿದ ಮತ್ತೊಬ್ಬ ಕಲಾವಿದೆ ವಜೀರಾಬಾಯಿ ಅಥವಾ ವಜೀರವ್ವ. ಆಕೆ ಬಚ್ಚಾಸಾನಿಯ ತಮ್ಮ ಪಕರುಸಾಬನ ಮಗಳು. ರಂಗಭೂಮಿಯ ಮೇಲೆ ಬಂದು ನಿಂತರೆ, ನಿಂತು ಹಾಡಿದರೆ, ಹಾಡಿ ಅಭಿನಯಿಸಿದರೆ ಪ್ರೇಕ್ಷಕಗಣದ ತರುಣರು ಹುಚ್ಚೆದ್ದು ಹೋಗಬೇಕು. ಅಂಥ ಶರೀರ, ಶಾರೀರ ಅವಳದು. ಇಂಥ ಅಂದಗಾತಿಯನ್ನು ತಮ್ಮ ‘ಮನದನ್ನೆ’ ಎಂದುಕೊಂಡು ಮನದಲ್ಲೇ ಮಂಡಿಗೆ ತಿನ್ನುತ್ತಿದ್ದವರು ಅದೆಷ್ಟು ಜನವೋ…! ಅದಕ್ಕೇ ಮತ್ತೆ ಮತ್ತೆ ಅವಳು ಅಭಿನಯಿಸುತ್ತಿದ್ದ ನಾಟಕಗಳನ್ನು ನೋಡಲು ರಸಿಕರು ಧಾವಿಸುತ್ತಿದ್ದರು. ಸುತ್ತ ಮುತ್ತ ಅರವತ್ತು ಮೈಲಿನ ಅಂತರದಲ್ಲಿ ಎಲ್ಲಿಯೇ ಅವಳ ನಾಟಕಗಳಿದ್ದರೂ ಜನ ‘ಕೊಲ್ಲಾರಿ ಬಂಡಿ’ ಕಟ್ಟಿಕೊಂಡು ನೋಡಲು ಹೋಗುತ್ತಿದ್ದರು. ಇನ್ನು, ಅದೇ ಊರಿನ ಪಳೆಂಕರಿಗಂತೂ ರಂಗದ ಹೊರಗೊಮ್ಮೆ ವಜೀರಾಳನ್ನು ನೋಡುವ ತವಕ. ಇಂಥ ಹಂಬಲದ ಹತ್ತಾರು ತರುಣರು ಸದಾ ಕಂಪನಿ ಮನೆಯ ಸುತ್ತಲೇ ಗಿರಕಿ ಹೊಡೆಯುತ್ತಿದ್ದರು. ಕೆಲವರಂತೂ ಜೊತೆ ಮಾತಾಡುವ ಒಂದೇ ಒಂದು ಅವಕಾಶಕ್ಕಾಗಿ ಕಾದುನಿಲ್ಲುತ್ತಿದ್ದರು… ಅಂತೂ ಆಕೆ ಇದ್ದಲ್ಲೆಲ್ಲ ಸದಾ ಕಾಲವೂ ಒಂದು ನಮೂನೆಯ ‘ಮತ್ತು’ ಸುತ್ತುತ್ತಿತ್ತು. ಈಗ ಮೂವತ್ತೈದು ವರ್ಷಗಳ ಹಿಂದೆ, ನಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಕಂಪೋಜಿಟರ್ ಆಗಿದ್ದ ಒಬ್ಬನಿಗೆ ಮೊದಲಿನಿಂದಲೂ ನಾಟಕದ ಖಯಾಲಿ. ನನ್ನ ಬಳಿ ಯಾವುದೇ ಮುಚ್ಚುಮರೆಯಿಲ್ಲದೆ ತನ್ನ ರಂಗಾನುಭವಗಳನ್ನು ಹೇಳಿಕೊಳ್ಳುತ್ತಿದ್ದ. ನಿವೃತ್ತಿಯ ವಯಸ್ಸಿಗೆ ಬಂದಿದ್ದರೂ, ‘ವಜೀರಾ…’ ಎಂಬ ಪದ ಕಿವಿಗೆ ಬಿದ್ದರೆ ಸಾಕು, ಆತನ ಕಣ್ಣುಗಳಲ್ಲಿ ಹೊಸ ಹೊಳಪು, ಮೈಯಲ್ಲಿ ಹೊಸ ಹುರುಪು ಚಿಮ್ಮುತ್ತಿತ್ತು. ಆಗೆಲ್ಲ ಆಕೆಯ ನಾಟಕದ ಒಂದು ರಂಗಗೀತೆ ಅವನ ಬಾಯಿಯಿಂದ ಹೊಮ್ಮುತ್ತಿತ್ತು. ನಿಜ ಹೇಳಬೇಕೆಂದರೆ, ನಾನು ಆ ರಂಗಗೀತೆಗಾಗಿಯೇ ಪದೇ ಪದೇ ಅವನೆದುರು ವಜೀರಾಳ ಪ್ರಸ್ತಾಪ ಮಾಡುತ್ತಿದ್ದೆ. ತರುಣ ವಯದಲ್ಲಿ ತನ್ನನ್ನೇ ತಾನು ಸುರಸುಂದರಾಂಗ ಎಂದು ಭಾವಿಸಿಕೊಂಡಿದ್ದ ಆ ಮಹಾನುಭಾವ. ವಜೀರಾಬಾಯಿಯ ಅಂದ-ಚೆಂದಕ್ಕೆ ಮಾರುಹೋಗಿದ್ದ. ಒಮ್ಮೆಯಾದರೂ ಅವಳೊಂದಿಗೆ ನಾಯಕನಾಗಿ ಅಭಿನಯಿಸಬೇಕು ಎಂಬುದು ಆತನ ಜೀವನದ ಬಲುದೊಡ್ಡ ಆಸೆ. ಎಷ್ಟೇ ಪ್ರಯತ್ನಿಸಿದರೂ ಅದು ಈಡೇರಿರಲಿಲ್ಲ. ಹುಚ್ಚುಖೋಡಿ. ಒಂದೊಮ್ಮೆ ಹಿಂದೆಮುಂದೆ ಯೋಚಿಸದೆ ಅವಳ ಮನೆಗೆ ನುಗ್ಗಿಬಿಟ್ಟ. ಆದರೆ ಆಕೆಯ ಬದಲು ಅಲ್ಲಿ ಕಂಡವರು ಬಚ್ಚಾಸಾನಿಯ ಕಂಪನಿಯ ಗಂಡಸರು. ಅವರು ನುಗ್ಗಿದ ಈ ‘ಕ್ವಾಣ’ನಂಥವನನ್ನು ಹಿಡಿದು ಮೈನುಗ್ಗಾಗುವಂತೆ ಹೊಡೆದುಬಿಟ್ಟರು. ಆ ಪ್ರಸಂಗವನ್ನು ಆತ ಕತೆ ಮಾಡಿ ಹೇಳಿ ನಗುತ್ತಿದ್ದ. ಇಂಥ ಖಯಾಲಿಯ ವಯಸ್ಕ ತರುಣರನ್ನು ಕಣ್ಣಲ್ಲೇ ಹೆದರಿಸುತ್ತ, ಅವರು ತಮ್ಮ ನಟಿಯರ ಕಡೆಗೆ ತಲೆಯೆತ್ತಿ ಕೂಡ ನೋಡದ ಹಾಗೆ, ಕಾಡದ ಹಾಗೆ ಕಾಯುವುದು ಕಂಪನಿಯ ಪುರುಷರ ಬಹು ಮುಖ್ಯ ಜವಾಬ್ದಾರಿಗಳಲ್ಲೊಂದಾಗಿತ್ತು. ಇದಕ್ಕಿಂತಲೂ ಬಹು ಮುಖ್ಯವಾದ ಇನ್ನೊಂದು ಜವಾಬ್ದಾರಿ ಎಂದರೆ ತಮ್ಮ ಹೆಣ್ಣುಮಕ್ಕಳು ಇತರ ಕಂಪನಿಗಳವರ ಕಣ್ಣಿಗೆ ಬೀಳದ ಹಾಗೆ ನೋಡಿಕೊಳ್ಳುವುದು. ಯಾಕೆಂದರೆ, ಒಂದು ಕಂಪನಿಗೆ ‘ಒಬ್ಬ ಸುಂದರ ನಟಿ’ ಎಂದರೆ ‘ಬಹುಮೂಲ್ಯ ಸ್ವತ್ತು’ ಇದ್ದಂತೆ. ಆ ಸ್ವತ್ತನ್ನು ಅಪಹರಿಸಲು ಪ್ರತಿಸ್ಪರ್ಧಿ ಕಂಪನಿಗಳವರು ಸದಾ ಪ್ರಯತ್ನಶೀಲರಾಗಿಯೇ ಇರುತ್ತಿದ್ದರು. (ಇಂಥ ‘ಅಪಹರಣ’ಗಳಿಂದಾಗಿಯೇ ಹತ್ತಾರು ದಿನ ನಾಟಕಗಳನ್ನು ಆಡಲು ಸಾಧ್ಯವಾಗದೆ, ಲುಕ್ಸಾನು ಅನುಭವಿಸಿ, ಆದಾಯವಿಲ್ಲದೆ ನರಳಿದ ಕಂಪನಿ ಮಾಲಿಕರೂ ಉಂಟು. ಇಂಥ ರಾವಣರಿಂದ ತಮ್ಮ ಸೀತೆಯರನ್ನು ರಕ್ಷಿಸಿಕೊಳ್ಳುವುದಕ್ಕಾಗಿ, ಕೆಲವು ಕಂಪನಿಗಳ ಮಾಲೀಕರು ‘ಧರ್ಮಪತ್ನಿ’ ಇದ್ದಾಗಲೂ, ತಮ್ಮಲ್ಲಿಯ ಮುಖ್ಯ ನಟಿಯರನ್ನು ‘ಕಲಾಪತ್ನಿ’ಯಾಗಿ ಸ್ವೀಕರಿಸುತ್ತಿದ್ದದ್ದೂ ಇದೆ. ನಮ್ಮ ವೃತ್ತಿ ರಂಗಭೂಮಿಯ ಇತಿಹಾಸದಲ್ಲಿ ಇಂಥ ಸಾಕಷ್ಟು ಉದಾಹರಣೆಗಳಿವೆ.) ಒಮ್ಮೆ ಹೀಗಾಯಿತು. ಗದಗಿನಲ್ಲಿ ಒಂದು ನಾಟಕ. ವಜೀರಾಬಾಯಿ ಅದರ ನಾಯಕಿ. ಆಕೆ ಮೊದಲೇ ‘ದಂತದ ಗೊಂಬೆ’. ಅವಳ ಮೈಮಾಟ, ದನಿ, ಅಭಿನಯಗಳ ಕುರಿತ ರಂಜಿತ ಸುದ್ದಿಗಳು ಸುತ್ತೆಲ್ಲ ಹಬ್ಬಿದವು. ಜನ ಹುಚ್ಚೆದ್ದು ಬರತೊಡಗಿದರು. ಅವರು ಕಟ್ಟಿಕೊಂಡು ಬರುತ್ತಿದ್ದ ‘ಕೊಲ್ಲಾರಿ ಬಂಡಿ’ಗಳಿಗೆಂದೇ ವಿಶೇಷ ಜಾಗದ ಏರ್ಪಾಟು ಮಾಡಬೇಕಾಯಿತು. (ಈಗ Car Parking ಸಲುವಾಗಿ ಪ್ರತ್ಯೇಕ ವ್ಯವಸ್ಥೆ ಮಾಡುವ ಹಾಗೆ.) ಅವನ್ನು ಬಿಟ್ಟರೆ ಅಲ್ಲಿ ಆಗೊಮ್ಮೆ ಈಗೊಮ್ಮೆ ಶ್ರೀಮಂತರ ‘ಡಮಣಿ’ಗಳು (ಇವು ಐಷಾರಾಮೀ ಎತ್ತಿನ ಬಂಡಿಗಳು. ರಾಣಿಯರ ಮೇಣೆಗಳನ್ನು ಹೋಲುವಂಥವು.), ಮತ್ತು ಪೋಲಿಸ್ ಇನ್ಸ್ಪೆಕ್ಟರರ ‘ಫಟಫಟಿ’ಗಳು (ಮೋಟರ್ ಬೈಕ್) ಇತ್ಯಾದಿ. ಇಂಥದರಲ್ಲಿ ಅದೊಂದು ರಾತ್ರಿ ಕಂಪನಿಯ ತಂಬೂದ (ಟೆಂಟ್) ಬಳಿಯೇ ಒಂದು ಕಾರು ಬಂದು ನಿಂತಿತು ! ಜನ ನಾಟಕದ ಟಿಕೆಟ್ಟು ತೆಗೆದುಕೊಳ್ಳುವುದನ್ನು ಮರೆತು ಕಾರನ್ನೇ ನೋಡತೊಡಗಿದರಂತೆ. ಕಾರೆಂದರೆ ಆ ಕಾಲದಲ್ಲಿ ಸಾಕ್ಷಾತ್ ಇಂದ್ರ ರಥ. ಸುದ್ದಿ ‘ಬಣ್ಣ ಹಚ್ಚಿಕೊಂಡು’ ಬಣ್ಣದ ಮನೆಗೂ ಹೋಯಿತು. ಅಲ್ಲಿದ್ದವರಿಗೂ ಅದನ್ನು ನೋಡುವ ತವಕ. ಆದರೆ, ಬಚ್ಚಾಸಾನಿ ವೇಳೆಗೆ ಮಹತ್ವ ಕೊಡುವಾಕೆ. ಸರಿಯಾದ ಸಮಯಕ್ಕೆ ಆಟ ಶುರುವಾಗಲೇಬೇಕು. ಎಲ್ಲರನ್ನೂ ಕಣ್ಣಲ್ಲೇ ಕಂಟ್ರೋಲ್ ಮಾಡುತ್ತಿದ್ದ ಹಿರಿಯಳು ಬಚ್ಚಾಸಾನಿ. (ಹಾಂ, ಈ ವೇಳೆಗೆ ಬಚ್ಚಾಸಾನಿ ಸ್ವತಃ ಪಾತ್ರ ಮಾಡುವುದನ್ನು ನಿಲ್ಲಿಸಿದ್ದಳು. ವಯಸ್ಸಾಗಿತ್ತು. ಶಕ್ತಿಯೂ ಕುಂದಿತ್ತು. ಮಾತುಗಳು ನೆನಪಾಗುತ್ತಿರಲಿಲ್ಲ. ಹೀಗಾಗಿ, ಒಂದೆಡೆ ಕೂತು ‘ದೇಖರೀಕಿ’ ಮಾಡುತ್ತಿದ್ದಳು.) ನಾಟಕ ಆರಂಭವಾಯಿತು. ಎದುರಿನ ಸಾಲಿನಲ್ಲೇ, ನಟ್ಟನಡುವಿನ ಕುರ್ಚಿಯಲ್ಲೇ ಕಾಲು ಕುಣಿಸುತ್ತಾ, ಮೀಸೆ ತೀಡಿಕೊಳ್ಳುತ್ತಾ ಆಗೀಗ ತನ್ನ ಚಿನ್ನದ ಚೈನನ್ನು ಸರಿಮಾಡಿಕೊಳ್ಳುತ್ತಾ, ಸುತ್ತ ಮುತ್ತ ಗತ್ತಿನಿಂದ ನೋಡುತ್ತ ಕೂತಿದ್ದ ಒಬ್ಬ ಭರ್ತೀ ವಯಸ್ಸಿನ ಭರ್ತೀ ಆಳು. ಸ್ಫುರದ್ರೂಪಿ. ನಡುನಡುವೆ ಯಾರೋ ಒಬ್ಬಿಬ್ಬರು ಆತನಿಗೆ ಪಾನ್ ಕೊಡುತ್ತಿದ್ದರು, ಪೀಕದಾನಿ ಹಿಡಿಯುತ್ತಿದ್ದರು. ರಂಗದ ಮೇಲೆ ಹಾಡುತ್ತ ಕುಣಿಯುತ್ತಿದ್ದ ವಜೀರವ್ವ ನಡುವೆ ಒಂದೆರಡು ನೋಡಿ, ವಿಚಲಿತಳಾದದ್ದೂ ಉಂಟು. ಭಾರೀ ಶ್ರೀಮಂತನೇ ಇರಬೇಕೆಂದೂ, ಕಾರು ಅವನದೇ ಇರಬೇಕೆಂದೂ ಕಾಯಾಸ ಕಟ್ಟಿದ್ದೂ ಉಂಟು. ಆದರೆ ವಿಂಗಿನಲ್ಲಿದ್ದುವಲ್ಲ ದೊಡ್ಡಮ್ಮನ ‘ದೊಡ್ಡ’ ಕಣ್ಣುಗಳು. ಅವುಗಳನ್ನು ನೆನೆದಾಗ, ”ದಿನಾಲೂ ಇಂಥವ್ರು ಬರತಾರ, ಹೋಕ್ಕಾರ… ನೀವು ಅಂಥವರ ಕೂಡ ಕಣ್ಣು ಕೂಡಸಬಾರದು,” ಎಂಬ ದೊಡ್ಡಮ್ಮನ ಮಾತುಗಳು ನೆನಪಾಗಿ ಪಾತ್ರದ ಕಡೆಗೆ ಲಕ್ಷ್ಯ ಕೊಟ್ಟಳು. ನಾಟಕ ಮುಗಿಯಿತು. ಬಣ್ಣದ ಮನೆಯಲ್ಲೀಗ ಅದೇ ಸುದ್ದಿ. ಓರಗೆಯವರೆಲ್ಲ ಬಣ್ಣ ಒರೆಸಿಕೊಳ್ಳುತ್ತಾ ವಜೀರವ್ವನತ್ತ ನೋಡುತ್ತ ಹುಬ್ಬು ಹಾರಿಸಿ ನಗುವವರೇ. ಅದೇ ಹೊತ್ತಿಗೆ ಒಳಗೆ ಬಂದ ಬಚ್ಚಾಸಾನಿ ವಜೀರಾಳ ಭುಜ ತಟ್ಟಿ, ”ಬೇಶಾತು ಇವತ್ತಿನ ಆಟಾ…” ಎಂದು ಹೊಗಳಿ ಮುಂದೆ ಹೋದಳು. ಮರುಕ್ಷಣವೇ, ”ಆದ್ರೂ…” ಎಂದು ವಜೀರವ್ವನ ಕಡೆ ತಿರುಗಿ, ”ನಡುವ ಏನಾತು ಒಮ್ಮೀಲೆ…? ಆಂ…? ಇವತ್ತ ಮಾಡಿದಂಗ ಇನ್ನೊಮ್ಮೆ ಎಂದೂ ಮಾಡಾಕ ಹೋಗಬ್ಯಾಡಾ, ಏನು…?” ಎಂದು ತುಸು ಬಿರುಸಾಗಿಯೇ ಹೇಳಿದಳು. ಹಾಗೆಯೇ ಮುಂದೆ ಸಾಗಿ, ಒಂದು ಕಡೆ ಕೂಡುತ್ತ, ಚಂಚಿಯಿಂದ ಎಲೆ ಅಡಿಕೆ ಸುಣ್ಣ ತೆಗೆಯುತ್ತ, ”ಪಕರೂ…” ಅಂತ ಕೂಗಿದಳು. ”ಏನೆಕ್ಕಾ…?…” ಎನುತ್ತ ಬಂದ ಪಕರೂಸಾಬ. ವಜೀರವ್ವನಿಗೆ ಒಳಗೊಳಗೇ ಭಯ. ಅಪ್ಪನ ಮುಂದೆ ತನ್ನ ಬಗ್ಗೆ ಅತ್ತೆವ್ವ ಅದೇನು ಹೇಳಿಬಿಡುತ್ತಾಳೋ ಎಂಬ ಅಳುಕು. ”ಹೂಂ… ಬೇಶಾಗಿರಬೇಕು ಇವತ್ತಿನ ಗಲ್ಲೇ…ಎಷ್ಟಾತಂತ…?” ಎಂದು ಸಂತಸ ವ್ಯಕ್ತಪಡಿಸಿದಳು. ”ನಾಳಿಗೆ ಎಲ್ಲಾರಿಗೂ ಹೋಳಿಗಿ-ತುಪ್ಪದ ಊಟ ಆಗಬೇಕು ಪಕರೂ… ಅದಕ್ಕ, ಸಾಮಾನು ಏನೇನು ಬೇಕೋ ನೋಡ ಹೋಗಪಾ…” ಎಂದಳು. ಪಕರೂಸಾಬ ಆಗಲೆಂಬಂತೆ ತಲೆಯಾಡಿಸುತ್ತಾ ಅಲ್ಲಿಂದ ಮರೆಯಾದ. ಆದರೆ, ಹಾಗೆ ಹೋದ ಪಕರೂಸಾಬ ಮತ್ತೆ ಓಡಿ ಬಂದು ಅಕ್ಕನ ಮುಂದೆ ನಿಂತ. ”ಯಾಕೋ…? ಏನು ನೆಪ್ಪಾತು…?” ”ಎಕ್ಕಾ… ನಿನ್ನ ಬೆಟ್ಯಾಗಾsಕ ಯಾರೋ ಬಂದಾರಬೇ…” ಎಂದ. ಬೊಚ್ಚುಬಾಯಿಯ ಬಚ್ಚಾಸಾನಿ ಪಕಪಕನೆ ನಕ್ಕಳು. ”ಯಾಕಬೇ…? ಯಾಕ ನಗಾಕತ್ತೀ…?” ಪೆಕರನಂತೆ ಕೇಳಿದ ಪಕರೂಸಾಬ. ”ಅಲ್ಲೋ ಪಕರೂ… ನನ್ನಂತಾ ಮುದಕಿನ್ನ ಬೆಟ್ಯಾಗಾsಕ ಯಾರ್ ಬರ್ತಾರೋ…? ಏನಾರಾ ಒಂದ್ ಹೇಳಬ್ಯಾಡಾ… ಮುಂದಿನ ಕೆಲಸಾ ನೋಡಿಕೋ.” ಎಂದು ಅರೆಕ್ಷಣ ಸುಮ್ಮನಿದ್ದ ಬಚ್ಚಾಸಾನಿ, ”ಇವತ್ತ ಭಾಳ ಮಂದಿ ತಿಕೀಟು ಸಿಗದs ವಾಪಸ್ ಹೋಗ್ಯಾರೇನಪಾ… ಅದಕ್ಕs ನಾಳಿಗೂ ಇದs ನಾಟಕಾ. ತಿಳೀತs…? ಮುಂಜೇಲಿಗೆ ನೀ ಊರಾಗೆಲ್ಲ ‘ಇವತ್ತೂ ಇದs ನಾಟಕ ಐತಿ’ ಅಂತ ಒದರಸು…” ಆಗ ನಡೆಯುತ್ತಿದ್ದದ್ದೆ ಹಾಗೆ. ವಾರದಲ್ಲಿ ಎರಡೋ ಮೂರೋ ದಿನ ಮಾತ್ರ ನಾಟಕ ಪ್ರದರ್ಶನ. ದಿನವೂ ಬೇರೆ ಬೇರೆಯೇ ನಾಟಕಗಳು. ಜನರ ಒಲವು ನೋಡಿಕೊಂಡು ನಾಟಕಗಳನ್ನು ಆಯ್ದು ಪ್ರದರ್ಶಿಸುತ್ತಿದ್ದರು. ”ಆತೆಕ್ಕಾ…” ಎನ್ನುತ್ತ ಅಲ್ಲಿಂದ ಹೊರಟು ನಿಂತ ಪಕರೂಸಾಬ. ಅಷ್ಟರಲ್ಲೇ ಯಾರೋ ಅಲ್ಲಿಂದ ಓಡಿ ಹೋದಂತೆನಿಸಿತು. ”ಯಾರ್ ನೋಡs ತಮ್ಮಾ…” ಎಂದು ಬಚ್ಚಾಸಾನಿ. ”ಹೂನಬೇ ನೋಡ್ತೀನಿ…” ಎಂದು ಪಕರೂಸಾಬ. ಅಷ್ಟರಲ್ಲೇ ಇನ್ನಿಬ್ಬರು ತಮ್ಮಂದಿರು ಒಬ್ಬನನ್ನು ಹಿಡಿದು ತಂದು ಬಚ್ಚಾಸಾನಿಯ ಮುಂದೆ ನಿಲ್ಲಿಸಿದರು. ”ಎಕ್ಕಾ… ಹಿಡಕೊಂಬಂದೀವಿ ನೋಡಬೇ ಕಳ್ಳನ್ನ…” ಎಂದರು. ಕಾಲುಗುರಿನಿಂದ ತಲೆಗೂದಲ ತನಕ ಆತನನ್ನೊಮ್ಮೆ ಪರಕಿಸಿದಳು ಬಚ್ಚಾಸಾನಿ. ಆತ ನೋಡಲು ಒಳ್ಳೆಯವನಂತೆಯೇ ಕಾಣುತಿದ್ದ. ಆದರೆ, ಕಂಡದ್ದೆಲ್ಲ ಕಂಡಂತೆ ಇರುವುದಿಲ್ಲ ಎಂಬ ಸತ್ಯ ಅವಳಿಗೆ ಗೊತ್ತು. ಆತನ ಹಣೆಯ ಮೇಲ್ತುದಿಯ ಕಲೆಯನ್ನು ಕಂಡು ಅವನೊಬ್ಬ ಮುಸ್ಲಿಮನೇ ಹೌದು ಎಂದುಕೊಂಡಳು. ಮುಸಲ್ಮಾನಿಯಲ್ಲೇ ಸಾಗಿತು ಆಕೆಯ ಸಂಭಾಷಣೆ. ”ಏನು ಕಳೂ ಮಾಡಾಕ ಬಂದಿದ್ದೆಪಾs…? ಆಂ…?” ”ನಾ ಕಳ್ಳಲ್ರೀ.. ನಮ್ಮ ಧಣ್ಯಾರ ಕೂಡ ನಾಟಕಾ ನೋಡಾಕ ಬಂದಿದ್ನಿರೀ…” ”ಮತ್ತ, ಹೀಂಗ್ಯಾಕ ಕಳ್ಳ ಹೆಜ್ಜೀಯಿಟ್ಟು ಇಲ್ಲೀತನಾ ಬಂದಿದ್ದೀ…?” ”ನಮ್ಮ ಧಣ್ಯಾರಿಗೆ ನಾಟಕಾ ಭಾಳ ಪಸಂದಾತ್ರಿ. ಅದಕ್ಕs ನಾಯಕಿ ಪಾಲ್ಟ್ ಮಾಡಿರೋ ವಜೀರವ್ವಗ ‘ಆಯೇರ’ ಮಾಡಬೇಕಂತ ಮಾಡ್ಯಾರ್ರಿ ನಮ್ಮ ಧಣ್ಯಾರು…ಅದನ್ನs ಹೇಳಿ ಹೋಗಾಕಂತ ಬಂದಿದ್ನಿರಿ…” ”ಹಾಂಗಿದ್ರ, ಒಳಗ ಬರದs ಯಾಕ್ ಓಡಿ ಹೋದಿ…?” ”ನೀವು ‘ನಾಳಿಗೂ ಇದs ನಾಟಕಾ…’ ಅಂದ್ರೆಲಾ… ಅದಕ್ಕs ನಾಳೆ ಬಂದು, ಆಯೇರ ಮಾಡೀದ್ರಾತು ಅಂತ ನಮ್ಮ ಧಣ್ಯಾರಿಗೆ ಹೇಳಾಕಂತ ಓಡಿ ಹೋದ್ನಿರಿ…” ಹಾರುವ ಹಕ್ಕಿಯ ಪುಕ್ಕ ಎಣಿಸಬಲ್ಲ ಚಾಣಾಕ್ಷೆ ಬಚ್ಚಾಸಾನಿ. ಆಕೆ ನಸು ನಕ್ಕಳು. ”ಸುಕಾಸುಮ್ನ ಯಾರೂ ಆಯೇರ ಮಾಡೂದಿಲ್ಲ ತಮ್ಮಾ… ನಿಮ್ಮ ಆ ‘ಧಣಿ’ ಮನಸಿನ್ಯಾಗೇನೈತಿ ಅಂತ ಹೇಳಾಕತ್ತೈತಿ ನನ್ನ ಮನಸಿನ ಗಿಣಿ. ನಮ್ಮ ವಜೀರಿನ್ನ ಬಯಸಿ ಬಂದದ್ದs ಖರೇ ಅಂವಾ… ಹೌದಲ್ಲೋ…?” ಬಂದವನಿಗೋ ಅಚ್ಚರಿ… ಆತ ಏನು ಮಾತಾಡುವುದೆಂದು ತಿಳಿಯದೆ ಸುಮ್ಮನೇ ನಿಂತ. ”ಅಂದಂಗ, ಏನಪಾ ನಿನ್ಹೆಸರು…?” ಬಚ್ಚಾಸಾನಿ ನಸುನಗುತ್ತಲೇ ಕೇಳಿದಳು. ”ಬುಡನ್ ಸಾಬ್ರೀ…” ”ಬುಡನ್ ಸಾಬಾ… ವಜೀರವ್ವನ ಬಯಸಿ ಬಂದದ್ದs ಖರೇ ಹೌದಲ್ಲೋ ನಿಮ್ಮ ಧಣಿ?…ಆಂ…?” ”ಹೌದ್ರೀ…” ”ಹೂಂ… ಹೀಂಗ ಬಾ ದಾರಿಗೆ… ಏನಂದೀ ಆ ನಿಮ್ಮ ಧಣೀ ಹೆಸರು…?” ”ಗೋಣಿ ನಿಂಗಪ್ಪರೀ… ಬದಾಮಿ ತಾಲೂಕ ಹೆಬ್ಬಳ್ಳಿಯಾವ್ರೀ…” ”ಗೋಣಿ ನಿಂಗಪ್ಪನs ಆ ನಿಮ್ಮ ಧಣೀ ಹೆಸರು…? ನಮ್ಮ ವಜೀರವ್ವನ್ನ ಬಯಸಿ ಬಂದಾನಲ್ಲs ನಿಮ್ಮ ಧಣಿ…? ಕಾರ್ ಗಾಡೀ ಬ್ಯಾರೆ ತಂದಾನಲ್ಲs?… ಶ್ರೀಮಂತಿಕೀ ಘಮಿಂಡೀ ಏನವಗ…? ಹಾಂಗಿದ್ರ ನಾನೂ ಒಂದು ಮಾತು ಹೇಳ್ತೀನಿ, ಹೋಗಿ ಹೇಳು ನಿಮ್ಮ ಧಣೀಗೆ…” ಆಕೆಯ ಮಾತಿಗೆ ನಿರುತ್ತರನಾಗಿ ನಿಂತಿದ್ದ ಬುಡನ ಸಾಬ. ”ಗೋಣಿ ಚೀಲದ ತುಂಬ ರಾಣೀ ರೂಪಾಯಿ ತುಂಬಿಕೊಂಡು ಬಂದು ನನ್ನ ಮುಂದ ಸುರವು ಅಂತ ಹೇಳು… ಅಂದ್ರನs ಮುಂದಿನ ಮಾತು…” ಎಂದು ಅಲ್ಲಿಂದ ಎದ್ದಳು ಬಚ್ಚಾಸಾನಿ… ಬುಡನ ಸಾಬ ತಲೆತಗ್ಗಿಸಿ ಅಲ್ಲಿಂದ ಹೊರಗೆ ನಡೆದ. ಆತನ ಬೆನ್ನ ಹಿಂದೆ ಬಣ್ಣದ ಮನೆಯಿಂದ ಖಿಲ್ಲೆಂಬ ನಗೆ ಚೆಲ್ಲಿತು…  ]]>

‍ಲೇಖಕರು G

September 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

11 ಪ್ರತಿಕ್ರಿಯೆಗಳು

 1. umesh desai

  ಒಂದು ನಿಮಿಷ ಈ ವಾಸ್ತವ ಮರತು ಹಳೇದಿನಕ್ಕ ಹೋದಂಗಿತ್ತು
  ಅದ್ರಾಗ ನಮ್ಮ ಜವಾರಿ ಕನ್ನಡ ಅದರ ಉಪಯೋಗ ಒಂಥರಾ ಸೋನೆ ಪೆ ಸುಹಾಗಾ

  ಪ್ರತಿಕ್ರಿಯೆ
 2. Dhananjaya Kulkarni

  Tumbaa chennaagi moodi bandide…mattu intha lekhanagalanna, anubhavagalanna bahushaha nimminda maatra bareyalu saadhya GOWA sir…

  ಪ್ರತಿಕ್ರಿಯೆ
 3. ಹಿಪ್ಪರಗಿ ಸಿದ್ದರಾಮ್

  ಸರ್, ಲೇಖನ ಬಾಳ ಚಂದ ಬಂದೈತ್ರಿ…ಆಗಿನ ಕಾಲದಲ್ಲಿ ಬಣ್ಣ ಹಚ್ಚಿಕೊಂಡು ಪಾತ್ರ ಮಾಡೋರನ್ನು “ಪಾತರದವರು”, “ಪಾತರಗಿತ್ತಿಯರು” ಎನ್ನುತ್ತಿದ್ದರೆಂದು ಮೊನ್ನೆ ಹಿರಿಯ ರಂಗಕರ್ಮಿಗಳು ಹೇಳಿದ್ದನ್ನು ಜ್ಞಾಪಿಸಿಕೊಳ್ಳುತ್ತಿರುವಾಗಲೇ ನಿಮ್ಮ ಲೇಖನದಲ್ಲಿ, ಅಂದಿನ ರಂಗಭೂಮಿಯ ಪ್ರತಿಭಾವಂತ ಬುದ್ಧಿವಂತ ಚೆಲುವೆಯರ ಕಂಪನಿಗಳ ಘಟನಾವಳಿಗಳನ್ನು ವಿವರಿಸುತ್ತಾ ಆಗಿನ ಕಾಲದ ಸಾಮಾಜಿಕ/ಆರ್ಥಿಕ/ರಂಗಭೂಮಿಯ ಪರಿಸ್ಥಿತಿಗಳನ್ನು ಅರಿತುಕೊಳ್ಳಲು ಕಾತರಿಸುವ ಈಗಿನ ನಮ್ಮಂಥ ಕುತೂಹಲದ ಮನಸ್ಸುಗಳಿಗೆ ಇನ್ನಷ್ಟು ಕುತೂಹಲವುಂಟು ಮಾಡಿದ್ದೀರಿ. ಅಂದಿನ ಕಾಲದ ಚತುರೆಯರು ತಮ್ಮ ಜಾಣತನದಿಂದ ಗಂಭೀರವಾಗಬಹುದಾದ ಪ್ರಸಂಗಗಳಿಂದ ಪಾರಾಗಿರುವುದೇ ಒಂದು ಪವಾಡಗಳೇನೋ ಅಂತ ಭಾಸವಾಗುತ್ತದೆ. ಆ ರಂಗಭೂಮಿಯ ಅಮ್ಮಂದಿರಿಗೆ ಸಾವಿರದ ರಂಗನಮನಗಳು….ಇಂತಹ ಮೌಲಿಕ ಲೇಖನ ನೀಡಿದ ಗೋಪಾಲ ವಾಜಪೇಯಿ ಸರ್ ನಿಮಗೂ ಸಹ ನಮಸ್ಕಾರಗಳು, ಪ್ರಕಟಿಸಿದವರು ಅಭಿನಂದನಾರ್ಹರು….ಹೆಚ್ಚಿನದನ್ನು ನಿರೀಕ್ಷಿಸುತ್ತೇವೆ…!!!

  ಪ್ರತಿಕ್ರಿಯೆ
 4. ಹಿಪ್ಪರಗಿ ಸಿದ್ದರಾಮ್

  ಗೋಪಾಲ ವಾಜಪೇಯಿ ಸರ್ ಅವರಿಂದ ಇಂತಹ ಲೇಖನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷಿಸುತ್ತೇವೆ….ಧನ್ಯವಾದಗಳು!

  ಪ್ರತಿಕ್ರಿಯೆ
 5. prakash hegde

  ಉತ್ತರ ಕರ್ನಾಟಕದ ಗಡಸು ಭಾಷೆಯ ಸೊಗಸು…
  ಘಟನೆ ಕಣ್ಣಿಗೆ ಕಟ್ಟುವಂತೆ ಬರ್ದಿದ್ದೀರಿ …
  ಧನ್ಯವಾದಗಳು….

  ಪ್ರತಿಕ್ರಿಯೆ
 6. ಮಂಜುಳಾ ಬಬಲಾದಿ

  ನಾವು ಸಣ್ಣವರಿದ್ದಾಗ ನಾಟಕ ಬರತಿದ್ವು.. ಒಂದೋ ಎರಡೋ ಎಲ್ಲೋ ನೋಡಿದ ನೆನಪು.. ಆದರೂ ನಾಟಕದ ಜಗತ್ತಿನ ಬಗ್ಗೆ ಏನೋ ಕುತೂಹಲ! ನಿಮ್ಮ ಈ ಲೇಖನಗಳು ಕುತೂಹಲ ತಣಿಸುವುದುರೊಂದಿಗೆ ನಾಟಕ ಲೋಕದ ಒಳಹುಗಳನ್ನ, ಅಲ್ಲಿಯ ಜನರ (ಹೆಂಗಸರ) ಪ್ರೌಢಿಮೆಯನ್ನೂ ನವಿರಾಗಿ ವಿವರಿಸುತ್ತಿವೆ 🙂 ಬೇರೆಯ ಲೋಕದ ನೈಜ ಪರಿಚಯ ಮಾಡಿಸುತ್ತಿರುವುದಕ್ಕೆ ಧನ್ಯವಾದ 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: