ಗೋಪಾಲ ವಾಜಪೇಯಿ ಕಾಲಂ : ಚ್ಯಾಷ್ಟಿಗೆ ಹೇಳಿದ ಮಾತು!

ಸುಮ್ಮನೇ ನೆನಪುಗಳು – 14 ”ಗೋಣಿ ಚೀಲದ ತುಂಬ ರಾಣೀ ರೂಪಾಯಿ ತುಂಬಿಕೊಂಡು ಬಂದು ನನ್ನ ಮುಂದ ಸುರವು ಅಂತ ಹೇಳು… ಅಂದ್ರನs ಮುಂದಿನ ಮಾತು…” ಎಂದು ಹೇಳಿ ಅಲ್ಲಿಂದ ಎದ್ದಳಲ್ಲ ಬಚ್ಚಾಸಾನಿ… ಆಗ ತಲೆತಗ್ಗಿಸಿ ಅಲ್ಲಿಂದ ಹೊರಗೆ ನಡೆದ ಬುಡನ ಸಾಬ. ತನ್ನ ಬೆನ್ನ ಹಿಂದೆಯೇ ಬಣ್ಣದ ಮನೆಯಿಂದ ನುಗ್ಗಿಬಂದ ಖಿಲ್ಲೆಂಬ ನಗೆಯನ್ನೂ ಲಕ್ಷಿಸದೆ ಆತ ದಡಬಡನೆ ಕಾರುಗಾಡಿಯತ್ತ ಹೆಜ್ಜೆ ಹಾಕಿದ. ಅಲ್ಲಿ ದೂರದಲ್ಲಿ ನಿಂತಿತ್ತು ಕಾರು ಗಾಡಿ. ಕೌನೆಳ್ಳು ಬೇರೆ. ಅಂಥದರಲ್ಲೂ ಬುಡನ ಸಾಬನನ್ನು ಕಂಡ ಕಾರಿನಲ್ಲಿದ್ದವರ ಕಣ್ಣುಗಳು ಅರಳಿದವು. ಗೋಣಿ ನಿಂಗಪ್ಪ ಗಂಧದೆಣ್ಣೆಯ ಬಾಟಲು ತೆಗೆದು ಅರಳಿಯಲ್ಲಿ ಒಂದು ಹನಿ ಹಾಕಿಕೊಂಡ. ಬಾಟಲು ಮುಚ್ಚಿಟ್ಟು, ಅರಳೆಯನ್ನು ಕತ್ತಿನ ಆಚೀಚೆ ಸವರಿಕೊಂಡು, ಉಳಿದ ಹತ್ತಿಯನ್ನು ಎರಡು ತುಂಡುಗಳನ್ನಾಗಿ ಮಾಡಿ ಕಿವಿಗಳಲ್ಲಿಟ್ಟುಕೊಂಡ. ಕತ್ತಿನಲ್ಲಿದ್ದ ಬೆರಳಿನಷ್ಟು ದಪ್ಪದ ಚಿನ್ನದ ಚೇನಿನ ಪದಕ ಎದೆಯ ಮೇಲೆ ಬರುವಂತೆ ಮಾಡಿಕೊಂಡ. ಅಷ್ಟರಲ್ಲಿ ಬುಡನ ಸಾಬ ಕಾರು ಗಾಡಿಯ ಬಳಿಗೆ ಬಂದಾಗಿತ್ತು. ಒಳ್ಳೆಯ ಸುದ್ದಿಯನ್ನೇ ತಂದಿರುತ್ತಾನೆಂಬ ನಿರೀಕ್ಷೆಯಿಂದ, ”ಏನಾತೋ…? ಕಾಯೋ ಹಣ್ಣೋ?” ಎಂದು ಕೇಳಿದ ನಿಂಗಪ್ಪ. ಬುಡನ ಸಾಬ ತಲೆ ತಗ್ಗಿಸಿ ನಿಂತ. ”ಏನಾತೋ…? ಹೇಳಬಾರದs…?” ”ಹೀಂಗ್ಯಾಕ ದೆವ್ವ ಬಡದವ್ರಂಗ ನಿಂತೀಯೋ ಮಾರಾಯಾ…? ಹೇಳ ಗಡಾನ ಏನಾತಂತ…” ನಿಂಗಪ್ಪನ ಜತೆಗಿದ್ದವರು ಕೇಳಿದ್ದಕ್ಕೂ ನಿರುತ್ತರನಾಗೇ ನಿಂತಿದ್ದ ಬುಡನ ಸಾಬ. ”ಇದ್ಯಾಕೋ ಲಕ್ಸಣ ಬರಾಬರೀ ಕಾಣವಲ್ದು…” ಎಂದು ನಿಂಗಪ್ಪ ಅಂದುಕೊಳ್ಳುತ್ತಿರುವಷ್ಟರಲ್ಲೇ ಆಚೆ ಕೌನೆಳ್ಳಿನಲ್ಲಿ ಒಂದಿಬ್ಬರು ಧಾಂಡಿಗರು ಕಂಡರು. ”ಹೂಂ… ಬುಡನ್ಯಾ, ಗಡಾನ ಗಾಡೀ ಏರು. ಹಾದ್ಯಾಗ ಮಾತಾಡೀದ್ರಾತು,” ಎಂದು ಗಾಡಿ ಶುರು ಮಾಡಿದ ನಿಂಗಪ್ಪ.

೦-೦-೦-೦-೦

ಕಾರು ಬದಾಮಿಯ ದಾರಿ ಹಿಡಿದಿತ್ತು. ಬುಡನ ಸಾಬನಿಂದ ಎಲ್ಲವನ್ನೂ ಕೇಳಿ ತಿಳಿದ ನಿಂಗಪ್ಪನ ಮನಸ್ಸು ಎಂದಿನಂತಿರಲಿಲ್ಲ. ಆತ ಕಾರು ಓಡಿಸುತ್ತಿದ್ದ ವೇಗಕ್ಕೆ ಜತೆಗಾರರು ಥರ ಥರ ನಡುಗಿ ಹೋದರು. ”ಸವಕಾಶರೀ ಸಾವಕಾರs…” ಎಂಬ ಬುಡನ ಸಾಬನ ದನಿ ಆತನಿಗೆ ಕೇಳಿದರೆ ತಾನೇ? ನಿಂಗಪ್ಪನಿಗೆ ಸಿಟ್ಟು ಬಂದರೆ ಮುಗಿಯಿತು. ಮೈಮೇಲೆ ದೆವ್ವ ಬಂದವರಂತೆ ಇರುತ್ತಿತ್ತು ಆತನ ವರ್ತನೆ. ಅಪ್ಪನ ಒಬ್ಬನೇ ಮುದ್ದಿನ ಮಗ ನಿಂಗಪ್ಪ. ಬಹಳ ವರ್ಷಗಳ ನಂತರ ದೇವರ ಹರಕೆಯಿಂದ ಹುಟ್ಟಿದವ. ಹುಟ್ಟಿನಿಂದಲೂ ಅಷ್ಟೇ. ಬಯಸಿದ್ದನ್ನು ಪಡೆದೇತೀರುವ ಛಲ ಬೆಳೆಸಿಕೊಂಡವ. ಹೆಬ್ಬಳ್ಳಿಯ ಆಸುಪಾಸಿನಲ್ಲೆಲ್ಲ ಗೋಣಿಯವರದೇ ಜಮೀನುಗಳು. ಜೊತೆಗೆ ಬೇಕಾದ್ದನ್ನು ಕೊಡುವಂಥ ತೋಟ. ಮನೆಯೋ ಥೇಟ್ ಅರಮನೆ. ಮಣಗಟ್ಟಲೆ ಬೆಳ್ಳಿ ಬಂಗಾರ. ಮನೆ ತುಂಬ ಹಾಲು ಹೈನಿನ ಕೋಡಿ. ಹದಿನಾರು ಎತ್ತುಗಳ ಕಮತ. ಮನೆತುಂಬ ಆಳು-ಕಾಳು. ಇಂಥ ಮನೆಯ ಮಗನಾಗಿ ಹುಟ್ಟಿದವ ನಿಂಗಪ್ಪ. ಮನೆಯ ದೀಪವಾಗಿ, ಓಣಿಯ ಶೋಭೆಯಾಗಿ, ಊರ ಹೆಮ್ಮೆಯಾಗಿ ಬೆಳೆದ. ಧನವಂತನಷ್ಟೇ ಅಲ್ಲ, ಗುಣವಂತನೂ ಆದ. ವಯಸ್ಸಿಗೆ ತಕ್ಕ ತುಂಟತನಗಳಿದ್ದರೂ, ಎಲ್ಲರ ಅನುವು-ಆಪತ್ತುಗಳಿಗೆ ನೆರವಾಗುವ ಉಪಕಾರಿ ಎನಿಸಿದ. ಧೀಮಂತಿಕೆಯಲ್ಲಿ ‘ಅಪ್ಪನ ಮಗ’ನೆ. ಧಾರಾಳತನ ಅಮ್ಮನ ಬಳುವಳಿ. ಇಂಥ ಮಗ ಹದಿನಾರನೆಯ ವಯಸ್ಸಿಗೆ ಕಾಲಿಡುತ್ತಿದ್ದಂತೆಯೇ ಅಪ್ಪ ಕಣ್ಣು ಮುಚ್ಚಿದ. ಕೆಲವೇ ದಿನಗಳಲ್ಲಿ ತನ್ನ ತವರಿನ ಕಡೆಯ ಲಕ್ಷಣವಂತ ಕನ್ಯೆ ಮಲ್ಲವ್ವನನ್ನು ಮಗನಿಗೆ ನಿಶ್ಚಯಿಸಿದಳು ಗದಿಗೆವ್ವ. ಇಡೀ ಊರಿಗೆ ಹಾಕಿದ ಹಂದರದಲ್ಲಿ, ಹುಗ್ಗಿ ಉಂಡು, ಹಿಗ್ಗಿನಿಂದಲೇ ಮದುಮಕ್ಕಳನ್ನು ಹರಸಿದರು ಸಾವಿರಾರು ಜನ. ಆದರೆ, ವರುಷಗಳು ಉರುಳಿದರೂ ಮನೆ ತುಂಬ ನಗೆ ಚೆಲ್ಲುವ, ಕಾಲ್ಗೆಜ್ಜೆ ನಾದ ಅನುರಣಿಸುವಂತೆ ಮಾಡುತ್ತ ಓಡಾಡುವ, ಮನೆಯ ಮುಂದಿನ ರಂಗೋಲಿ ಅಳಿಸುವ ಪುಟ್ಟ ಕಂದ ಹುಟ್ಟಲೇ ಇಲ್ಲ. ಯಾವ ಪ್ರಯತ್ನವೂ ಫಲ ನೀಡಲಿಲ್ಲ. ಹರಕೆಗಳೆಲ್ಲವೂ ಹುಸಿಯಾದವು. ಇದು ಮಲ್ಲವ್ವನಿಗಿಂತ ಗದಿಗೆವ್ವನಿಗೇ ಹೆಚ್ಚು ವೇದನೆ ನೀಡಿತು. ಆದರೂ, ತಾಯಿ ಮಗ ಇಬ್ಬರೂ ಮಲ್ಲವ್ವನನ್ನು ಎಂದಿನಂತೆ ಪ್ರೀತಿಯಿಂದಲೇ ನೋಡಿಕೊಂಡರು. ಮಲ್ಲವ್ವನೂ ಅಷ್ಟೇ. ಇಬ್ಬರಿಗೂ ಮೆಚ್ಚಿನವಳೆನಿಸಿದಳು. ತನ್ನ ನಡತೆಯಿಂದ ಊರ ಮಂದಿಗೂ ಪ್ರೀತಿಯವಳಾದಳು. ಗಂಡ ಏನು ಮಾಡಿದರೂ, ಎಷ್ಟೇ ತಡವಾಗಿ ಮರಳಿದರೂ ಆಕೆ ಚಕಾರವೆತ್ತುತ್ತಿರಲಿಲ್ಲ. ಆತ ಯಾವ ತಪ್ಪು ಹೆಜ್ಜೆಯನ್ನೂ ಇಡುವುದಿಲ್ಲ ಎಂಬ ನಂಬಿಕೆ ಅವಳಿಗೆ. ನಿಂಗಪ್ಪನಾದರೂ ಅಷ್ಟೇ ; ಮನೆತನದ ಮರ್ಯಾದೆಗೆ ಮಸಿ ಬಳಿಯುವಂಥ ಯಾವ ವಿಚಾರದತ್ತಲೂ ಗಮನ ಹರಿಸಲಿಲ್ಲ. ಸಿರಿತನದ ಮದವನ್ನು ತಲೆಗೇರಿಸಿಕೊಂಡು ಮೆರೆಯಲಿಲ್ಲ. ತನ್ನ ಮನೆತನದ ಘನತೆಯನ್ನು ಹೆಚ್ಚಿಸುವ ಕೆಲಸಗಳನ್ನೇ ಆತ ಮಾಡುತ್ತಿದ್ದುದು. ಸುತ್ತಲಿನ ಸೀಮೆಯಲ್ಲಿ ಅಷ್ಟೇ ಏಕೆ, ಆ ಇಲಾಖೆಯಲ್ಲೇ ಸ್ವಂತ ಕಾರು ಖರೀದಿಸಿದವರಲ್ಲಿ ಇವನೇ ಮೊದಲು. ಇದರಿಂದ ಆತನ ವರ್ಚಸ್ಸು ಇನ್ನಷ್ಟು ಹೆಚ್ಚಿತು. ನಿಂಗಪ್ಪನಿಗೆ ಮೊದಲಿನಿಂದಲೂ ದೊಡ್ಡಾಟ, ಡಪ್ಪಿನಾಟ, ನಾಟಕಗಳೆಂದರೆ ಆಸಕ್ತಿ. ವರ್ಷಕ್ಕೊಮ್ಮೆ ಊರ ದೇವಿಯ ಜಾತ್ರೆಯಲ್ಲಿ ಈತನ ಸ್ನೇಹಿತರದೇ ಭಕ್ತಿಪ್ರಧಾನ ನಾಟಕ. ಅಷ್ಟೇ ಅಲ್ಲ, ಸುತ್ತಮುತ್ತಲಿನ ನೂರು ಮೈಲಿನ ಅಂತರದ ಯಾವುದೆ ಊರಲ್ಲಿ ನಾಟಕ ಕಂಪನಿ ಬಂದಿದೆ ಎಂದು ಗೊತ್ತಾದರೆ ಸಾಕು, ತನ್ನ ಜೀವದ ಗೆಳೆಯರನ್ನು ಹೇರಿಕೊಂಡು ಆ ಊರಿಗೆ ಕಾರು ಓಡಿಸಿದನೆ… ಯಾವ್ಯಾವ ಊರಲ್ಲಿ ಯಾವ್ಯಾವ ಕಂಪನಿಯ ನಾಟಕ ಇದೆ ಎಂಬ ಸಮಾಚಾರವನ್ನು ನಿಂಗಪ್ಪನಿಗೆ ತಲಪಿಸುವ ವಾರ್ತಾಹರನಾಗಿದ್ದ ಬುಡನ ಸಾಬ. ಬಚ್ಚಾಸಾನಿಯ ಕಂಪನಿ ಗದಗಿಗೆ ಬಂದಿದೆ ಎಂಬ ಸುದ್ದಿಯನ್ನು ನಿಂಗಪ್ಪನಿಗೆ ಹೇಳಿದ್ದವನೂ ಬುಡನ ಸಾಬನೇ.

-೦-೦-೦-೦-೦-

ಮರುದಿನ ರಾತ್ರಿ. ಕಂಪನಿಯ ಯಾರಾದರೂ ಗುರುತು ಹಿಡಿದಾರೆಂಬ ಕಾರಣಕ್ಕಾಗಿ ಈ ನಾಲ್ವರೂ ತೀರ ಹಿಂದೆ ಚಾಪೆಯ ಮೇಲೆ ಕೂತಿದ್ದರು. ನೋಡಿದ ನಾಟಕವನ್ನೇ ಮತ್ತೆ ನೋಡುವುದರಲ್ಲಿ ಬುಡನ ಸಾಬ ಮತ್ತು ರಾಚಪ್ಪನಿಗೆ ಆಸಕ್ತಿ ಇರಲಿಲ್ಲ. ಆದರೂ, ನಾಟಕ ನೋಡುತ್ತ ಮೈಮರೆತು ಕೂತಿದ್ದ ನಿಂಗಪ್ಪನನ್ನು ಕಂಡು ಅವರು ‘ಮಜಾ’ ತೆಗೆದುಕೊಂಡರು. ನಿಂಗಪ್ಪ ಅಕ್ಷರಶಃ ಆ ಸುಂದರಿಯ ಜೊತೆಗೆ ‘ಮಾನಸವಿಹಾರ’ ನಡೆಸಿದ್ದ. ತಾನೇ ಅವಳ ನಾಯಕನಾದಂತೆ ಕನಸು ಅವನಿಗೆ. ಒಂದು ಸಂದರ್ಭದಲ್ಲಿ ಆಕೆ (ವಜೀರಾ) ”ಪ್ರಾಣನಾಥಾ… ಎಲ್ಲಿರುವೆ…? ನಿನ್ನನ್ನೇ ಹುಡುಹುಡುಕಿ ನಾನು ಬಳಲಿರುವೆ… ಬಾರೆಯಾ, ಮುಖ ತೊರೆಯಾ… ಬಂದೆನ್ನ ಈ ಬಂಧನದಿಂದ ಪಾರು ಮಾಡೆಯಾ…?” ಎಂದು ಶೋಕತಪ್ತಳಾಗಿ ನುಡಿದಾಗ, ‘ಇದೋ ಬಂದೆ ನನ್ನ ಸುಂದರಿ…’ ಎಂಬಂತೆ ಎದ್ದು ಹೊರಟಿದ್ದ ನಿಂಗಪ್ಪನನ್ನು ಎಳೆದು ಕೂಡಿಸಿದ್ದ ಬುಡನ ಸಾಬ. ಪಾಪ, ನಿಂಗಪ್ಪನಾದರೂ ಏನು ಮಾಡಿಯಾನು? ವಜೀರಾ ಆತನನ್ನು ಪೂರ್ತಿ ‘ಆವರಿಸಿ’ಕೊಂಡುಬಿಟ್ಟಿದ್ದಳಲ್ಲ… ನಾಟಕ ಇನ್ನೇನು ಮುಗಿಯುತ್ತದೆ ಎಂದಾಗ, ಅಲ್ಲಿಂದೆದ್ದ ನಾಲ್ವರೂ ಕತ್ತಲಲ್ಲಿ ಮರೆಯಾದರು.

-೦-೦-೦-೦-೦-

ಬಣ್ಣದ ಮನೆಯಲ್ಲಿ ಆವತ್ತು ನಟಿಯರ ಕಿಲಿಬಿಲಿ ಇರಲಿಲ್ಲ. ಅಷ್ಟರಲ್ಲಾಗಲೇ ಕಾರು ಬಂದು ನಿಂತಿದೆಯೆಂಬ ಸುದ್ದಿಯನ್ನು ಧಾಂಡಿಗರು ಬಚ್ಚಾಸಾನಿಗೆ ಮುಟ್ಟಿಸಿದ್ದರು. ವಜೀರವ್ವನನ್ನು ‘ಎತ್ತಿಕೊಂಡು’ ಹೋಗುವ ಯೋಜನೆಯಿಂದಲೇ ಅವರು ಬಂದಿರಬೇಕು ಎಂದುಕೊಂಡಳು ಬಚ್ಚಾಸಾನಿ. ಅವರನ್ನು ಎದುರಿಸಲು ಎಲ್ಲ ತಯಾರಿ ಮಾಡಿಕೊಳ್ಳಲು ಹೇಳಿ, ಬಣ್ಣದ ಮನೆಯ ಬಾಗಿಲಲ್ಲಿ ತಾನೇ ಕೂತುಕೊಂಡಳು. ಇದ್ದಕ್ಕಿದ್ದಂತೆ ಓಡಿಬಂದ ಪಕರೂ ಸಾಬ ”ಎಕ್ಕಾs…” ಎಂದ. ”ಏನೋ ಪಕರೂ ಸಾಬಾ…?” ”ಅವರು ಬಂದಾರಬೇ…” ”ಗೊತ್ತೈತಿ… ಅದಕ್ಕs ನಾ ಇಲ್ಲೆ ಕುಂತದ್ದು…” ”ಊಹೂಂ… ಅವರು ನಿನ್ನ ಬೆಟ್ಯಾಗಾಕಂತ ಬಂದಾರಬೇ…” ”ಬೆಟ್ಯಾಗಾಕಂತ ಬಂದಾರs…? ಹ್ಞೂ… ಕರಿ. ಬೋಲ್ಡಿಂಗ್ ಮನ್ಯಾಗ ಕುಂದರ್ಸು…” ಪಕರೂ ಸಾಬ ಆಗಲೆಂಬಂತೆ ತಲೆಯಾಡಿಸಿದ. ”ಏಸ್ ಮಂದ್ಯದಾರೋ…?” ”ಒಬ್ಬನs…ಪಂಚ್ವೀಸಿನೊಳಗಿನ ಹುಡಗಾ…” ”ಹಾಂಗಿದ್ರ ಇಲ್ಲೇ ಬರಾಕ ಹೇಳು…” ಮುಂದೆ ಸ್ವಲ್ಪ ಹೊತ್ತಿನಲ್ಲಿ ಗಾಳಿಯೊಡನೆ ನುಗ್ಗಿ ಬಂದ ಗಂಧದೆಣ್ಣೆಯ ವಾಸನೆಯ ಜೊತೆಗೆ ಅಲ್ಲಿ ಪ್ರತ್ಯಕ್ಷನಾದ ಸುರಸುಂದರಾಂಗನನ್ನು ಕಂಡು ಬಚ್ಚಾಸಾನಿಯಂಥ ಬಚ್ಚಾಸಾನಿಯೇ ‘ಅವ್ವಯ್ಯಾ…’ ಎಂದು ಬಾಯಿ ತೆರೆದು ಕೂತಳು. ಆತ ರೂಪದಲ್ಲಿ ಕಾಮ… ಮೈಕಟ್ಟಿನಲ್ಲಿ ಭೀಮ… ಕಾಂತಿಯಲ್ಲಿ ಸೋಮ… ಹೀಗಿರುವಾತ ತುಂಟತನದಲ್ಲಿ ಶಾಮನೂ ಆಗಿರಲೇಬೇಕು ಎಂದುಕೊಂಡಳು ಬಚ್ಚಾಸಾನಿ. ಹಾಗೇ ಬಾಯಿ ತೆರೆದು ಕೂತವಳ ಬಳಿ ಬಂದ ಹುಡುಗ, ಸುತ್ತಲೂ ಒಮ್ಮೆ ಕಣ್ಣಾಡಿಸಿ, ”ಹ್ಞೂ…ರಾಣಿ ರೂಪಾಯಿ ತುಂಬಿದ ಗೋಣೀನ ತಂದು ಸುರವು ಅಂತ ಹೇಳಿದ್ರೆಂತಲಾ… ಈಗ ಹೇಳ್ರಿ, ಎಲ್ಲೆ ಸುರವಸಬೇಕು…?” ಎಂದು ಕೇಳಿದ. ಆಚೆ ಬಣ್ಣದ ಮನೆಯ ಪರದೆಯ ಸಂದಿಯಿಂದ ಒಂದಷ್ಟು ಮುಖಗಳು ಹೊರಗೆ ಚಾಚಿಕೊಂಡವು. ಈತನ ಕಣ್ಣುಗಳು ಅತ್ತ ಸರಿಯುವಷ್ಟರಲ್ಲಿಯೇ ಆ ಮುಖಗಳೆಲ್ಲ ಪರದೆಯ ಹಿಂದೆ ಮರೆಯಾದವು. ಆ ಗಲಾಟೆಯಿಂದ ಎಚ್ಚೆತ್ತವಳಂತೆ, ”ಆಂ…? ಖರೆವಂದ್ರೂ ಗೋಣೀ ತುಂಬ ರಾಣಿ ರೂಪಾಯಿ ತಂದ್ರೀ…?” ಎಂದು ಗಾಬರಿಯಾಗಿ ಕೇಳಿದಳು ಬಚ್ಚಾಸಾನಿ. ”ಹೌದು… ಒಂದಲ್ಲಾ… ಎರಡು. ಎರಡು ಗೋಣೀ ಚೀಲದ ತುಂಬ ರಾಣಿ ರೂಪಾಯಿ ತುಂಬಿ ತಂದೀನಿ… ಹೇಳ್ರಿ, ಎಲ್ಲೆ ಸುರವಸಬೇಕು ಹೇಳ್ರಿ…” ಕೂತ ಮುದುಕಿ ಗಕ್ಕನೆ ಎದ್ದು ನಿಂತಳು. ”ಎಪ್ಪಾ… ನಾ ಚ್ಯಾಷ್ಟಿಗೆ ಹೇಳಿದ ಮಾತ್ನ ನೀವು ಖರೇ ಅಂತ ನಂಬೀದ್ರೀ…?” ”ನಿನ ಚ್ಯಾಷ್ಟಿ ಗೀಷ್ಟಿ ನನಗ ಗೊತ್ತಿಲ್ಲಬೆ… ನೀ ಹೇಳಿಧಾಂಗ ಒಂದಲ್ಲ, ಎರಡ ಚೀಲಾ ತುಂಬಿಕೊಂಬಂದೀನಿ… ಇನ್ನ ನಿನ್ನ ಮಾತಿನಾಂಗ ನೀ ನಡಿಯೂದು ನಿನ್ನ ಧರ್ಮ…” ”ಎಪ್ಪಾ… ನೀವು ಮದಿವ್ಯಾದವರು… ಮನ್ಯಾಗ ಗೌರಿಯಂತಾ ಹೇಣತಿರಬೇಕು… ಅಂತಾದ್ರಾಗ…” ”ಈ ಹುಡಗಿನ್ನೂ ನಾ ಕಣ್ಣಿನಷ್ಟs ಜ್ವಾಕಿಲೆ ನೋಡಿಕೊಂತೀನಿ…” ಎಂದವನೇ ”ಬುಡನ್ಯಾ… ತೊಗೊಂಬರ್ರೆಪಾ ಆ ಚೀಲಗೋಳನ…” ಎಂದು ಕೂಗಿದ. ನಾಲ್ಕು ಜನ ಗಟ್ಟಿ ಗಂಡಾಳುಗಳು ಮುಸಿಗುಡುತ್ತ ಒಂದೊಂದೇ ಚೀಲವನ್ನು ತಂದು ಬಚ್ಚಾಸಾನಿಯ ಮುಂದೆ ಇರಿಸಿದರು. ಈಗಿನ ಲೆಕ್ಕದಲ್ಲಿ ನೂರು ಕಿಲೋ ಜೋಳ ಹಿಡಿಸುವಂಥ ಚೀಲಗಳವು. ಎರಡರಲ್ಲೂ ಪೂರ್ತಿ ತುಂಬಿ ಹುರಿಯಿಂದ ಹೊಲಿದಂಥವು. ಆಕೆ ಏನು ಮಾತಾಡುವುದಕ್ಕೂ ತೋಚದೆ ತಲೆಯ ಮೇಲೆ ಕೈ ಹೊತ್ತು ಕೂತುಬಿಟ್ಟಿದ್ದಳು. ಉಳಿದವರಂತೂ ಗರ ಬಡಿದವರಂತಾಗಿದ್ದರು. ”ಹೂಂ… ಎಲ್ಲೆ ಸುರವಸಬೇಕಬೇ…?” ಮತ್ತೆ ಕೇಳಿದ ನಿಂಗಪ್ಪ. ”ಹೂವಿನ ಚೀಲಾಗಿದ್ರ ಅಮ್ಮನ ತೆಲೀಮ್ಯಾಲ ಸುರವಾಕಾಕ್ಕಿತ್ತು…” ಎಂದು ನಕ್ಕ ಬುಡನ ಸಾಬ. ‘ಈ ಮುದಕೀ ತೆಲೀಮ್ಯಾಲ ಅಲ್ಲಾ, ನನ್ನ ರಾಣೀ ತೆಲೀಮ್ಯಾಲ…’ ಎಂದು ಮನದಲ್ಲೇ ಅಂದುಕೊಂಡ ನಿಂಗಪ್ಪ. ”ಎಪ್ಪಾ… ಅದು ರೊಕ್ಕಾ… ಲಕಸ್ಮಿ ಆಕಿ. ಆಕಿನ್ನ ಹಂಗೆಲ್ಲಾ ಎಲ್ಲೆ ಬೇಕಲ್ಲೇ ಸುರವಬಾರದೆಪ್ಪಾ… ಸಿಟ್ಟಾಕ್ಕಾಳು… ಏನೋ… ಬಾಯಿಗೆ ತೆಪ್ಪಿ ಬಂದ ಮಾತು. ಮರತಬಿಡ್ರಿ…” ”ಮತ್ತ ಮತ್ತ ಅದs ಅದs ಮಾತು ಹೇಳಾಕ ಸುರೂ ಮಾಡೀದ್ರ ನಾ ಸಿಟ್ಟಾಗಬೇಕಾಕ್ಕೈತಿ…” ”ನಮ್ಮ ಸಾವಕಾರು ಎಷ್ಟ ಶಾಂತನೋ ಅಷ್ಟs ಸಿಟ್ಟಿನವರಬೇ… ಸುಮ್ಕ ಗಡಾನ ಕೆಲಸಾ ಮುಗಿಸಿ ನಿರಂಬಳಾಗ್ರಿ…” ಬುಡನ ಸಾಬ ಒಗ್ಗರಣೆ ಹಾಕಿದ. ”ವಜೀರಾನ ಮ್ಯಾಲೇರೀ ಈಗ ಕಂಪನಿ ನಡದದ್ದು. ಆಕಿ ಹ್ವಾದ್ರ ನಾವು ಕಂಪನಿ ಮುಚ್ಚಬೇಕಾಕ್ಕೈತಿ ಎಪ್ಪಾ…” ಠರಾಣೀ ರುಪಾಯಿಗೋಳನ ಸಲಿಕೀಲೆ ಬಳದು ಬಳದು ಚೀಲಾ ತುಂಬಿಸೀನಿ… ಮತ್ತ ಈಗ ನೀವು ರೊಳ್ಳೀ ತಗದ್ರ ಅದs ಸಲಿಕೀನ ‘ಬ್ಯಾರೇದಕ್ಕ’ ಉಪಯೋಗಸಬೇಕಾಕ್ಕೈತಿ, ಹುಶಾsರಂದೆ…” ನಿಂಗಪ್ಪ ಒಮ್ಮೆ ಗುಡುಗು ಹಾಕಿದ. ಎಲ್ಲರೂ ತಣ್ಣಗಾದರು. ಬಚ್ಚಾಸಾನಿ ಪಕರೂ ಸಾಬನೆಡೆ ನೋಡಿದಳು. ಆತ ವಜೀರಾಳೆಡೆ ನೋಡಿದ. ವಜೀರಾ ಒಪ್ಪಿಗೆ ಎಂಬಂತೆ ಕತ್ತು ಅಲ್ಲಾಡಿಸಿದ್ದನ್ನು ನಿಂಗಪ್ಪ ಸೂಕ್ಷ್ಮವಾಗಿ ಗಮನಿಸಿದ. ಆಕೆ ಕಳ್ಳಗಣ್ಣಿನಿಂದ ತನ್ನನ್ನೇ ನೋಡುತ್ತಿರುವುದನ್ನು ಖಾತ್ರಿ ಮಾಡಿಕೊಂಡ. ಒಳಗೊಳಗೇ ರೊಟ್ಟಿ ತುಪ್ಪದಾಗ ಬಿದ್ದ ಖುಷಿ ಅವನಿಗೆ. ”ಎಕ್ಕಾ… ನಿಂತ ಕಾಲಮ್ಯಾಲೆ ಆಗಬೇಕಂದ್ರ ಆಗೂ ಹೋಗೂ ಕೆಲಸಲ್ಲಿದು… ಎಲ್ಲಾರೂ ಕೂಡಿ ಮಾತಾಡೂಣು… ಒಂದು ನಿರ್ದಾರಕ್ಕ ಬರೂಣು…” ಎಂದ ತಮ್ಮನ ಮಾತಿಗೆ ತಲೆದೂಗಿದಳು ಬಚ್ಚಾಸಾನಿ. ”ಹಾಂಗs ಆಗ್ಲಿ… ಮುಂಜೇಲಿಗೆ ಬರತೀವು…” ಎಂದು ತನ್ನವರೊಂದಿಗೆ ಅಲ್ಲಿಂದ ಹೊರ ನಡೆದ ನಿಂಗಪ್ಪ.]]>

‍ಲೇಖಕರು G

September 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

16 ಪ್ರತಿಕ್ರಿಯೆಗಳು

 1. umesh desai

  ಅಗದಿ ಕಣ್ಣಿಗೆ ಕಟ್ಟಿದಂಗ ಬರದೀರಿ..ಹಾಂ ಕೆಲವು ಶಬ್ಡ್ ಉದಾ.ರೊಳ್ಳಿ ನಾ ಕೇಳಿಯೇ ಇರಲಿಲ್ಲ..
  ಲೇಖನ ಕೊನಿಯಾಗ ಅರ್ಥ ನೂ ಕೊಡಬಹುದು…ಆ ಒಂದು ಜಮಾನಾಕ್ಕ ಪುಕಟ ಕರಕೊಂಡು ಹೋಗಿದ್ದಕ್ಕ
  ಧನ್ಯೋಸ್ಮಿ…!

  ಪ್ರತಿಕ್ರಿಯೆ
 2. Dr. Vasanthkumar Perla

  ಒಳ್ಳೆಯ-ಹೃದಯಂಗಮವಾದ ಭಾಷೆ ಮತ್ತು ವರ್ಣನೆಯ ಸ್ವಾರಸ್ಯ ವಾಜಪೇಯಿಯವರ ಬರೆವಣಿಗೆಯ ಜೀವಾಳ. ಹೀಗಾದಾಗ ಬದುಕಿನ ಅತಿ ಸಣ್ಣ ವಿಷಯಗಳಿಗೂ ಓದಿಸಿಕೊಳ್ಳುವ ಗುಣ ಬಂದು ಬಿಡುತ್ತದೆ. ಆದರೆ ಇಂತಹ ಸಣ್ಣ ವಿವರಗಳಲ್ಲೂ ಏನೋ ಒಂದು ತಾತ್ವಿಕತೆ ಅಡಗಿರುವುದು ಖುಷಿ ಕೊಡುವ ಸಂಗತಿ… ಗೋಪಾಲ ವಾಜಪೇಯಿಯವರು ನಿವೃತ್ತಿಯ ಬಳಿಕ ಹೀಗೆ ತೊಡಗಿಸಿಕೊಂಡಿರುವುದು ನನಗೆ ತುಂಬ ಸಂತೋಷ ಕೊಟ್ಟ ಸಂಗತಿ..
  -ಡಾ.ವಸಂತಕುಮಾರ ಪೆರ್ಲ, ಮಂಗಳೂರು.

  ಪ್ರತಿಕ್ರಿಯೆ
 3. prajna

  ನಾನು, ಇತ್ತೀಚೆಗಿನ ಮೂರು ನಾಲ್ಕು ಕಂತುಗಳಿಂದ ಓದಲಾರಂಭಿಸಿದ್ದೇನೆ. ಆಸಕ್ತಿದಾಯಕವಾಗಿದೆ. ಮೊದಲಿನ ಕಂತುಗಳನ್ನ ಓದಬೇಕು.
  -ಪ್ರಜ್ಞಾ

  ಪ್ರತಿಕ್ರಿಯೆ
 4. ramesh kulkarni

  ಸರ್..ಉತ್ತರ ಕರ್ನಾಟಕದ ನೈಜ ಶೈಲಿಯ ನಿಮ್ಮ ಲೇಖನ ಸುಂದರವಾಗಿ ಮೂಡಿ ಬಂದಿದೆ..ಭಾಳ ಛಲೋ ಅಂದ್ರ..ಅಗ್ದೀ ಛಲೋ ಅದರಿ ಕಥಿ…ಗುಳೇದಗುಡ್ಡ ಖರದಂಟು ತಿಂದಷ್ಟು ಖುಷಿ ಆತರೀ..

  ಪ್ರತಿಕ್ರಿಯೆ
 5. Guruprasad Kurtkoti

  ಅದ್ಭುತವಾಗಿದೆ ಸರ್. ನೀವು ಓದುಗ ಮಹಾಶಯನನ್ನ ಭೂತಕಾಲಕ್ಕೆ ಆರಮಾಗಿ ಕರ್ಕೊಂಡು ಹೋಗ್ತೀರಿ!

  ಪ್ರತಿಕ್ರಿಯೆ
 6. ತ.ನಂ.ಜ್ಞಾನೇಶ್ವರ

  ಚೆನ್ನಾಗಿದೆ.ಕಿಂಚಿತ್ತೂ ಕೃತಕತೆಯಿಲ್ಲ. ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿದ್ದೀರಿ.ಉತ್ತರ ಕರ್ನಾಟಕದ ಭಾಷೆಯಾದ ಕಾರಣ ಅರ್ಥವಾಗಬೇಕಾದರೆ ಎರಡು ಸಲ ಓದಬೇಕು.

  ಪ್ರತಿಕ್ರಿಯೆ
 7. Pushparaj Chauta

  ಅವಧಿಯೊಳಗ ಬರೋ ನಿಮ್ಮ ಬರವಣಿಗೆ ನಾ ಮೊದಲಿಂದ ಓದ್ಕೋಂತ ಬರಾಕತ್ತೀನಿ. ನಾ ಉತ್ತರಕರ್ನಾಟಕದಂವನಲ್ಲವಾದ್ರೂ ಆ ಭಾಷೆಯ ಗೀಳು ನನ್ನನ್ನು ತೊರೆದಿಲ್ಲ. ಇಂದಿಗೂ ಅವಕಾಶ ಸಿಕ್ಕಾಗೆಲ್ಲ, ಆ ‘ಮಂದಿ’ ಭೆಟ್ಟಿಯಾದಾಗೆಲ್ಲ ನಾ ಅದೇ ಭಾಷ ಮಾತಾಡಾಂವ.
  ಆ ಭಾಷದೊಳಗ ಒಂದ್ ಸೆಳೆತ ಅದೇರಿ ಸರ್s…
  ಈ ಸರಣಿಯೊಳಗ ಹಾಗೆ ಸುಮ್ಮನೇ ಅನ್ನಂಗಿಲ್ಲ. ಅಗ್ದಿ ಛಲೋ ನೆನಪುಗಳು ನಮ್ಮ ಮೆದುಳೊಳಗ ಮೆಲುಕು ಹಾಕಿವೆ. ಜೋಳದ ರೊಟ್ಟಿ, ಗುರೆಳ್ಳ್ ಚಟ್ನಿ ತರ ತಿನ್ನಾಕ್ಹತ್ತೀನಿ. ‘ಹಾಗೆ ಸುಮ್ಮನೇ’ ಧಾರವಾಡ ಫೇಢಾದ ರುಚಿ ನಾಲಗೆ ಮೇಲೆ ಕುಣೀತಾ ಇದೆ.

  ಪ್ರತಿಕ್ರಿಯೆ
 8. Gayathri Deshkulkarni

  ತುಂಬ ಚೆನ್ನಾಗಿದೆ ಎಸ್ಟೊ ಪದಗಳು ಓದಿಯೇ ತೃಪ್ತಿ ಪತ್ಕೊಬೇಕು ಅರ್ಥ ಆಗಲ್ಲ.
  ಮುಂದೆ ಏನಾಯ್ತು, ಅವಳನ್ನ ಮದುವೆ ಆಗತಾನ?

  ಪ್ರತಿಕ್ರಿಯೆ
 9. Suresha D.A.

  Dear Sri.Gopala Vaajapeyi Sir, Nimma baraha bahala Adbhutha Sir. Oduvaaga nammannu naavu nimma katha lokadolage kaledu hogi bidutheve. Nimage namma Anantha Namaskaragalu.

  ಪ್ರತಿಕ್ರಿಯೆ
 10. ಸುಧಾ ಚಿದಾನಂದಗೌಡ

  ಪಕರುಸಾಬ…ಏನ್ ಹೆಸರೂ..ಏನ್ ಕಥೀ…ಮೊದಲೇ ಓದದಿದ್ದುದಕ್ಕೆ ಪಶ್ಚಾತ್ತಾಪವಾಗಿದೆ ಸರ್. ಭಾಷಾಬಳಕೆಯಲ್ಲಿ ನಿಮಗೆ ನೀವೇ ಸಾಟಿ.
  ಮತ್ತೆ ಕಥೆ ಕೂಡ ರೋಚಕವಾಗಿ ಸಾಗುತ್ತಿದೆ. ಮುಂದೇನಾಯ್ತು ಎಂಬ ಕುತೂಹಲ…

  ಪ್ರತಿಕ್ರಿಯೆ
 11. ಆನಂದ ಯಾದವಾಡ

  ನಮ್ಮೂರ ನಾಟಕ ನೋಡಾಕ ಹರಕು ತಟ್ಟ ತುಗೊಂಡು, ಎಲ್ಲಾರಕಿನ ಮೊದಲ ಬಂದು ಮುಂದ ಕುತಗೊಂಡು, ಕ್ಯಾಕಿ ಹಾಕಿದ್ದೇನು, ತಾಲೀಮಿನ್ಯಾಗ ನೂರಸತೆ ನೋಡಿದ್ರೂ ಸೈತ, ಬಣ್ಣ ಬಣ್ಣದ ಪಡದೇ ಮುಂದ, ಮಾರಿಗೆಲ್ಲಾ ಬಣ್ಣಾ ಬಡಕೊಂಡ, ತಬಲಾ ಪೇಟಿಗಳ ಮ್ಯಾಳದ ಜೊತಿ ಡಿಸ್ಕೋ ಲೈಟಿನ ಇಫೆಕ್ಟು, ಬ್ಯಾರೆ ಊರಿಂದ ಕರೆಸಿದ ಡ್ಯಾನ್ಸಿಗಳ ವಾರಿನೋಟ, ನಮ್ಮ ಸುತ್ತ ಕುಂತವರೆಲ್ಲಾ ಇಡೀ ದಿವಸ ಕಡ್ಲಿ ಹೋಳಿಗಿ, ಕಡುಬು, ಮಿರ್ಚಿ ಬಜಿ ತಿಂದು ಒಂದ ಸಮನ ಬಿಡೋ ಮಿಸೈಲ ವಾಸನಿ ಕುಡಕೊತ ಬೆಳತನಕಾ ನಾಟಕ ನೋಡು ಮಜಾ… ಇವ ಎಲ್ಲಾನೂ ನಿಮ್ಮ ಬರವನಿಗಿ ನೋಡಿ ಒಮ್ಮಿಗೆ ಒತ್ತರಿಸಿ ಬಂದು ನೋಡ್ರಿ ಸರ್…

  ಪ್ರತಿಕ್ರಿಯೆ
 12. Hipparagi Siddaram

  ಅಬ್ಬಾ ! ಲೇಖನದ ಆರಂಭದಲ್ಲಿ ಕಣ್ಣು ನೆಟ್ಟ ನಾನು ಲೇಖನ ಕೊನೆಯವರೆಗೂ ತದೇಕ ಚಿತ್ತದಿಂದ ಓದಿ ಮುಗಿಸಿದಾಗ ಬೇಜಾರಾಯಿತು…ಎಷ್ಟು ಬೇಗ ಈ ಸಲದ ಕಂತು ಮುಗಿಯಿತಲ್ಲಾ ಅಂತಾ….ಸರ್, ನಿಮ್ಮ ಭಾಷಾ ಬಳಕೆ ಸುಪರ್….ನನ್ನ ಬಾಳ್ಯ ಜೀವನದ ವಿಜಾಪೂರ_ಬಾಗಲಕೋಟೆ ಅವಳಿ ಜಿಲ್ಲೆಯ ಜವಾರಿ ಭಾಷೆಯನ್ನು ನೆನಪಿಸಿದಿರಿ…ನಿಂಗಪ್ಪನಂಥಾ ಮನಶ್ಯಾ…ಬಚ್ಚಾಸಾನಿಯಂಥಾ ಹೆಣಮಗಳು…ಜೊತೆಗೊಬ್ಬ ಬುಡನ್ ಸಾಬ್…ಎಂಥಾ ಕಾಂಬಿನೇಶನ್ ಸರ್ ಇದು…ಆಗಿನ ಕಾಲದ ಜನರು ಕೇವಲ ಮಾತಿಗೆ ಎಷ್ಟೊಂದು ಮಹತ್ವ ನೀಡುತ್ತಿದ್ದರು ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ. ಹುಡುಗಾಟಿಗೆ-ತಮಾಷೆಗಳು ಹೇಗೆ ಗಂಭೀರ ಸ್ವರೂಪ ಪಡೆಯುತ್ತಿದ್ದವು ಎನ್ನುವುದನ್ನು ಆಗಿನ ಕಾಲಘಟ್ಟದ ಸಾಮಾಜಿಕ ಜೀವನದ ಕುರಿತು ನೀಡಿದ ವಿವರಣೇಯಂತೂ ಗೋಪಾಲ ವಾಜಪೇಯಿ ಸರ್ ನಿಮಗೆ ನೀವೇ ಸಾಟಿ…ಮತ್ಯಾರು ನನಗೆ ಕಾಣಿಸುತ್ತಿಲ್ಲ….ಅಭಿನಂಧನೆಗಳು…ನಿಮ್ಮ ನೆನಪಿನ ಬುತ್ತಿಯ ಸವಿಯೂಟಕ್ಕಾಗಿ ಇನ್ನು ಮುಂದೆ ಪ್ರತಿ ರವಿವಾರ ಕಾಯುವಂತೆ ಮಾಡಿದ ಶಬ್ದ ಗಾರುಡಿಗರು ನೀವು….ನಿಮಗೆ ನಮಸ್ಕಾರ…ಪ್ರಕಟಿಸಿದವರೂ ಅಭಿನಂಧನಾರ್ಹರು…ಶುಭದಿನ…

  ಪ್ರತಿಕ್ರಿಯೆ
 13. Keshav

  ‘ರೂಪದಲ್ಲಿ ಕಾಮ
  ಮೈಕಟ್ಟಿನಲ್ಲಿ ಭೀಮ
  ಕಾಂತಿಯಲ್ಲಿ ಸೋಮ
  ತುಂಟತನದಲ್ಲಿ ಶಾಮ’
  ಎಷ್ಟು ಚಂದದ ಭಾಷೆ.
  ಕತಿ ಅಂತೂ ರಂಗೇರ್ಲಿಕತ್ತದ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: