ಗೋಪಾಲ ವಾಜಪೇಯಿ ಕಾಲಂ: ಬೆಳಕಿನ ಕೋಲಿನಂಥವರು! 

 gopal wajapeyiಗೋಪಾಲ ವಾಜಪೇಯಿ 

 

ಕಳೆದ ವಾರ ಧಾರವಾಡದ ಶಿವಾಜಿ ಬೀದಿ ಅಥವಾ ಕೆರೀ ತೆಳಗಿನ ಓಣಿಯಲ್ಲಿ ನಿಮ್ಮನ್ನು ಅರ್ಧ ದಾರಿಯತನಕ ಕರೆದೊಯ್ದು ಬಿಟ್ಟಿದ್ದೆ… ಬನ್ನಿ, ಇದೀಗ ಮುಂದುವರಿಯೋಣ.

 ಈ ಬೀದಿಯ ಕೊನೆಯಲ್ಲಿ ಒಂದು ಚೌರಸ್ತೆ. ಅದನ್ನು ಕೂಟು, ಸರ್ಕಲ್ಲು ಮುಂತಾದ ಹೆಸರುಗಳಿಂದಲೂ ಕರೆಯುವುದಿದೆ. ಎಡಕ್ಕೆ ಹೊರಳಿದರೆ ಬೇಂದ್ರೆಯವರು ಮಾಸ್ತರರಾಗಿದ್ದ ವಿಕ್ಟೋರಿಯಾ (ವಿದ್ಯಾರಣ್ಯ) ಹೈಸ್ಕೂಲು. ಬಲಕ್ಕೆ ಹೊರಳಿದರೆ ಮಂಗಳವಾರ ಪೇಟೆ. ನೇರ ಸಾಗುವುದೇ ಹೆಬ್ಬಳ್ಳಿ ರಸ್ತೆ. ಇನ್ನು ಎಡಕ್ಕೆ ತಿರುಗಿದ ಕೂಡಲೇ ಮತ್ತೆ ಎಡಕ್ಕೆ ತಿರುಗಿದರೆ ಸಿಗುವ ರಸ್ತೆ ನಿಮ್ಮನ್ನು ಕಾಟನ್ ಮಾರ್ಕೆಟ್ಟಿನ ಕಡೆ ಕರೆದೊಯ್ಯುತ್ತದೆ.

Betageri Krushna Sharmaಸಮಾಜ ಪುಸ್ತಕಾಲಯವನ್ನು ದಾಟಿದ ಮೇಲೆ ಈ ‘ಚೌರಸ್ತೆ’ಗಿಂತ ಮೊದಲೇ ಬಲಕ್ಕೆ ವಾಡೆಯಂಥ ಒಂದು ಮನೆಯಿತ್ತು. ದೊಡ್ಡದಾದ ದಿಡ್ಡಿ ಬಾಗಿಲು. ಕಲ್ಲಿನ ಎತ್ತರದ ಗೋಡೆ. ಆ ಮನೆಯ ಹಿತ್ತಿಲಲ್ಲಿ ಒಂದು ದೈತ್ಯಾಕಾರದ ಬಾದಾಮು ಮರ ಮತ್ತು ಒಂದೆರಡು ಹುಣಿಸೆ ಮರಗಳು. ಎತ್ತರದ ಗೋಡೆಗಿಂತ ಎತ್ತರಕ್ಕೆ ಬೆಳೆದಿದ್ದ ಅವು ರಸ್ತೆಯಿಂದಲೇ ಕಾಣುತ್ತಿದ್ದವು. ಅತ್ತ ನೋಡಿದಾಗೆಲ್ಲ ಅವು ನಮ್ಮನ್ನೇ ಕೈಮಾಡಿ ಕರೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ, ಆದಿತ್ಯವಾರ ಬಂತೆಂದರೆ ನಾವು ಒಂದೇ ವಯಸ್ಸಿನ, ‘ಮಂಗ್ಯಾ’ನಂಥ ಐದಾರು ಹುಡುಗರು ಅಲ್ಲಿ ಕಾಮಿ ಬೆಕ್ಕಿನ ಹಾಗೆ ಸುತ್ತುತ್ತಲೇ ಇರುತ್ತಿದ್ದೆವು.

ಆ ಕಾಯಿಗಳ ಮೋಹವೇ ಅಂಥದು. ಬೈಸಿಕೊಂಡಾದರೂ ಸರಿ, ಬಿಗಿಸಿಕೊಂಡಾದರೂ ಸರಿ… ಒಟ್ಟು ಒಂದಷ್ಟು ಹುಣಿಸೆ ಕಾಯಿಗಳನ್ನೋ ಬಾದಾಮು ಕಾಯಿಗಳನ್ನೋ ಲಪಟಾಯಿಸಬೇಕು… ಅದು ನಮ್ಮ ಏಕೈಕ ಗುರಿ.

ಆದರೆ ಅಲ್ಲೊಂದು ತೊಂದರೆಯಿತ್ತು. ಆ ಕಟಾಂಜನದ ಮನೆಯ ಎದುರಲ್ಲಿ, ಅಂದರೆ ರಸ್ತೆಯ ಎಡಕ್ಕೆ, ಇನ್ನೊಂದು ದೊಡ್ಡ ಮನೆ. ಅದಕ್ಕೂ ದೊಡ್ಡ ತಲೆಬಾಗಿಲು. ಅದನ್ನು ದಾಟಿದ ಮೇಲೆ ಒಂದು ಕಲ್ಲು ಫರಸಿಯ ಅಂಗಳ. ಅದರಾಚೆ ಕಟಾಂಜನ. ಅದರ ಹಿಂದೆ, ಆರಾಮ ಕುರ್ಚಿಯಲ್ಲಿ ಮುದುಕರೊಬ್ಬರು ಪುಸ್ತಕವನ್ನು ಓದುತ್ತಲೋ, ಇಲ್ಲ ವರ್ತಮಾನ ಪತ್ರದ ಮೇಲೆ ಕಣ್ಣಾಡಿಸುತ್ತಲೋ ಒರಗಿಕೊಂಡಿರಬೇಕು… ನಾವು ಕಳ್ಳ ಹೆಜ್ಜೆ ಇಟ್ಟು ಮುಂದೆ ಸಾಗುವುದಕ್ಕೂ ಅವರು ಬದಿಯಲ್ಲಿದ್ದ ಬೆತ್ತವನ್ನು ನೆಲಕ್ಕೆ ಬಡಿಯುವುದಕ್ಕೂ ಸರಿ ಹೋಗುತ್ತಿತ್ತು. ಹೀಗಾಗಿ, ಎಷ್ಟೇ ಪ್ರಯತ್ನ ಮಾಡಿದರೂ ನಾವು ‘ಸಫಲ’ರಾಗಲೇ ಇಲ್ಲ…

ಕನಸು ನನಸಾಗಿಸಿಕೊಳ್ಳುವ ನಮ್ಮ ಯತ್ನಕ್ಕೆ ಯಾರಾದರೂ ಕಲ್ಲು ಹಾಕಿದರೆ ಕೋಪ ಬರದೇ ಇರುತ್ತದೆಯೇ?

ಆ ದಿನ ಸಮಾಜ ಪುಸ್ತಕಾಲಯದ ಎದುರಿನ ಚಾಳಿನಲ್ಲಿದ್ದ ತಮ್ಮಣ್ಣ ಮಾಮಾನ ಮನೆಯಲ್ಲೇನೋ ಧಾರ್ಮಿಕ ಕಾರ್ಯ. ಊಟ ಸ್ವಲ್ಪ ತಡವಾಗಿದ್ದರಿಂದ ಸಾಲೆಗೆ ಹೋಗುವುದೂ ತಡವೇ ಆಯಿತು. ಆದರೂ ಅವಸರಿಸಿಕೊಂಡು, ತಮ್ಮಣ್ಣ ಮಾಮಾನ ಜೊತೆ ಸಾಲೆಗೆಂದು ಮನೆಯಿಂದ ಹೊರಬೀಳುವುದಕ್ಕೂ, ನಮಗೆ ಅಡ್ಡಗಾಲಾಗಿದ್ದ ಆ ಮುದುಕಪ್ಪ ಬರುವುದಕ್ಕೂ ಸರಿಹೋಯಿತು.

ತಮ್ಮಣ್ಣ ಮಾಮಾ ಆ ಮುದುಕಪ್ಪನಿಗೆ ನಮಸ್ಕರಿಸಿದ. ಅವರೂ ಪ್ರತಿ ನಮಸ್ಕಾರ ಮಾಡುತ್ತಾ ನನ್ನತ್ತಲೇ ನೆಟ್ಟಗಣ್ಣಿಂದ ನೋಡುತ್ತಿದ್ದರು. ನನಗೋ ಒಳಗೊಳಗೇ ಅಂಜಿಕೆ. ನೆಲ ನೋಡುತ್ತ  ನಿಂತುಬಿಟ್ಟೆ. ಅವರಿಬ್ಬರೂ ಅದೇನು ಮಾತಾಡಿಕೊಂಡರೋ ಗೊತ್ತಾಗಲಿಲ್ಲ. ನಡುವೆ ಒಂದೆರಡು ಸಲ ಅವರಿಬ್ಬರೂ ‘ನನ್ನ ಕಡೆಯೇ’ ನೋಡಿ ಮಾತಾಡಿದಂತೆ ಭಾಸ. ‘ಕಳ್ಳನ ಜೀವ ಹುಳ್ಳುಳ್ಳಗೆ’ ಅಂತಾರಲ್ಲಾ ಹಾಗೆ. ಆ ನಂತರ ಆ ಮುದುಕಪ್ಪ ‘ಸಂಸ್ಕೃತ ಪಾಠಶಾಲೆ’ಯ ದಿಕ್ಕಿನಲ್ಲಿ ಮುನ್ನಡೆದು ಮಾಯವಾದರು. ನಾವು ಮತ್ತೊಂದು ದಿಕ್ಕಲ್ಲಿದ್ದ ಸಾಲೆಯ ಹಾದಿ ಹಿಡಿದೆವು.

ಆದರೂ ನನಗೆ ಆ ಮುದುಕಪ್ಪನದೇ ‘ಧ್ಯಾನ’…

Tamarindಕಣ್ಣು ಕುಕ್ಕುವಂಥ ಶುಭ್ರ ಬಿಳಿ ಧೋತರ, ಅಷ್ಟೇ ಬಿಳಿದಾದ ತುಂಬು ತೋಳಿನ ಶರ್ಟು. ಎಡಗಡೆಯ ಭುಜದ ಮೇಲೆ ಒಂದು ನಸು ನಸ್ಯದ ಬಣ್ಣದ ಕುಸುರು ಕಸೂತಿಯ  ಶಾಲು, ಬಲದ ಭುಜಕ್ಕೆ ನೇತುಬಿದ್ದ ಬಗಲು ಚೀಲ;  ಮೋಪಾಗಿ ಶೇವ್ ಮಾಡಿದ ತೇಜಸ್ವೀ ಮುಖ, ಮತ್ತು ಬೆಳ್ಳಿಗೂದಲನ್ನು ನೀಟಾಗಿ ಬಾಚಿ ಎಡಕ್ಕೆ ತೆಗೆದ ಬೈತಲೆ ;  ಎದೆಗೆ ಅಮಚಿಕೊಂಡ ಬಲಗೈ, ಅದರಲ್ಲಿ ಒಂದಷ್ಟು ಪುಸ್ತಕಗಳು… ಕಾಲ್ಮರಿಯಿಂದ ಹಿಡಿದು ಶಾಲು-ಚೀಲಗಳ ತನಕ ಎಲ್ಲವೂ ದೇಸಿ, ಎಲ್ಲವೂ ‘ಶುದ್ಧ’ ಖಾದಿ.

ಯಾಕೋ ಏನೋ, ಅವತ್ತೇ ಅಷ್ಟು ಹತ್ತಿರದಿಂದ, ಆ ದಿರಿಸಲ್ಲಿ ನೋಡಿದ್ದ ನನಗೆ ಆ ಮುದುಕಪ್ಪ ‘ನಾವು ತಿಳಿದಷ್ಟು ಸಿಟ್ಟಿನ ವ್ಯಕ್ತಿಯಲ್ಲ,’ ಎಂದೆನಿಸತೊಡಗಿತು.

ಮರುದಿನ ಸಾಲೆಗೆ ಸೂಟಿ. ಏನು ಕಾರಣವೋ ನೆನಪಿಲ್ಲ. ಸೂಟಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ? ನಮ್ಮಂಥ ಹುಡುಗರಂತೂ ಸೂಟಿಯ ದಿನ ಸಿಕ್ಕಾಪಟ್ಟೆ ಬೀಜಿ. ಅದಾಗಲೇ ನಮ್ಮ ದಂಡು ‘ದಂಡಯಾತ್ರೆ’ ಹೊರಡಲು ‘ರಿಸ್ಬೂಡ್ ಚಾಳ್’ನ ದ್ವಾರದೆದುರೇ ಸಿದ್ಧವಾಗಿ ನಿಂತಿತ್ತು…

ಅಷ್ಟರಲ್ಲೇ ದೂರದಿಂದ ‘ಬೆಳಕಿನ ಕೋಲಿನಂಥ’ ಆ ಅಜ್ಜ ನಡೆದು ಬರುತ್ತಿರುವುದು ಕಾಣಿಸಿತು.
”ವಾಹ್… ಇವತ್  ಬೇಕಾದಷ್ಟು ಬಾದಾಮ್ ಕಾಯಿ, ಹುಣಸೀ ಕಾಯಿ ಹರಕೋಬಹುದು ನೋಡು…” ಎಂದ ಕುಲಕರ್ಣಿ ಗುಂಡ್ಯಾ.
”ಹೌದ ಬಿಡು…  ಆ ಅಜ್ಜನ ಕಾಟ ಇರೂದಿಲ್ಲಲ್ಲೋ…” ಪಡಸಲಿಗಿ ಪಲ್ಯಾ ಕುಣಿಯುತ್ತ ಹೇಳಿದ.
ಅಷ್ಟರಲ್ಲೇ ಆ ಅಜ್ಜ ನಮ್ಮತ್ತಲೇ ನೋಡುತ್ತ ಸಮೀಪವೇ ಬಂದುಬಿಟ್ಟರು.

ತಗೋ… ದಂಡು ಬೆದರಿತು, ಚೆದರಿತು… ನಾನು ಮಾತ್ರ ಅದೇನೋ ಗಟ್ಟಿ ಧೈರ್ಯ ಮಾಡಿಕೊಂಡು ಚಾಳಿನ ದ್ವಾರದಲ್ಲೇ ನಿಂತಿದ್ದೆ.

ಅವರು ಸಮೀಪವೇ ಬಂದರು. ನಾನಲ್ಲೇ ನಿಂತಿದ್ದೆ. ನನ್ನೆದುರೇ ನಿಂತರು. ಅದೇನು ಮಾಡುತ್ತಾರೋ ಎಂಬ ಅಳುಕಿನೊಂದಿಗೆ ಸುಮ್ಮನೆ ನಿಂತೆ.

”ಬಾ ಇಲ್ಲೆ…” ಎಂದರು. ಆ ದನಿಯಲ್ಲಿ, ಕಣ್ಣಲ್ಲಿ ಅಷ್ಟೇ ಏಕೆ ಇಡೀ ಶರೀರದಲ್ಲಿ ಪ್ರೀತಿಯೇ ತುಂಬಿದೆ ಎನಿಸಿತು. ಮೋಡಿಗೊಳಗಾದವರಂತೆ ಅವರ ಬಳಿ ಸರಿದೆ. ಎಡಗೈಗೆ ಪುಸ್ತಕಗಳನ್ನು ದಾಟಿಸಿದ ಆ ಅಜ್ಜ ನನ್ನ ಬೆನ್ನ ಮೇಲೊಮ್ಮೆ ಕೈ ಆಡಿಸಿದರು. ಕೆನ್ನೆ ತಟ್ಟಿದರು. ತಲೆಸವರಿದರು. ”ಶಾಣ್ಯಾ ಆಗಬೇಕು…ತಿಳೀತs…?” ಎಂದವರೇ,  ನಗುನಗುತ್ತಲೇ ಮತ್ತೆ ಬಲಗೈಗೆ ಪುಸ್ತಕಗಳನ್ನು ದಾಟಿಸಿ, ಎದೆಗೆ ಅಮಚಿ ಹಿಡಿದುಕೊಂಡು, ಎಂದಿನಂತೆ ನೆಟ್ಟಗೆ ನಡೆಯುತ್ತ ಹೋಗಿಬಿಟ್ಟರು.

ಆ ಕೂಡಲೇ ನನಗೆ ಅವರ ಬಗೆಗಿದ್ದ ಎಲ್ಲ ಪೂರ್ವಾಗ್ರಹಗಳೂ ನಶಿಸಿ ಹೋದವು. ಅದೇ ಹೊತ್ತಿಗೆ, ಅವರ ಕೈಯ ಸ್ಪರ್ಶದ ಜೊತೆ ಅದಕ್ಕಂಟಿದ್ದ ನಶ್ಯದ ವಾಸನೆಯೂ ಪ್ರಿಯವೆನಿಸತೊಡಗಿತು.

ಹೌದು… ಅವರು ಮೈಯೆಲ್ಲಾ ಮಿಂಚು ತುಂಬಿಕೊಂಡ ಒಂದು ಬೆಳಕಿನ ಕೋಲು…!
ಒಂದಿನಿತೂ ಬಾಗದ, ಬೀಗದ ಆತ್ಮೀಯತೆಯ ಮೂರ್ತಿ…

ಅಂದಿನಿಂದ ಅವಕಾಶ ಸಿಕ್ಕಾಗಲೆಲ್ಲ ಆ ಬೆಳಕಿನ ಕೋಲಿನ ‘ಬರುವಿಕೆ’ಗಾಗಿ, ಆ ಅಂತಃಕರಣದ ‘ಸ್ಪರ್ಶ’ಕ್ಕಾಗಿ ಕಾಯುತ್ತ ನಿಂತುಕೊಳ್ಳುತ್ತಿದ್ದೆ…

ಉಳಿದದ್ದು ಮುಂದಿನ ಕಂತಿನಲ್ಲಿ…

‍ಲೇಖಕರು avadhi

January 22, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This