ಗೋಪಾಲ ವಾಜಪೇಯಿ ಕಾಲಂ : ಲಕ್ಷ್ಮಣಲಿಂಗನ ಸೇವೆಯಲ್ಲಿ

ಸುಮ್ಮನೇ ನೆನಪುಗಳು – 11

– ಗೋಪಾಲ ವಾಜಪೇಯಿ

ನಿಮಗೆ ‘ಬಚ್ಚಾಸಾನಿ’ಯ ಕುರಿತು, ಆಕೆಯ ‘ನಾಟಕ ಕಂಪನಿ’ಯ ಕುರಿತು ಹೇಳುತ್ತಿದ್ದೇನೆ. ಇದು ‘ಕರ್ನಾಟಕದ ಮೊಟ್ಟ ಮೊದಲ ಸ್ತ್ರೀ ನಾಟಕ ಮಂಡಳಿ’ ಎಂಬುದನ್ನು ನಿಮಗೆ ಮತ್ತೊಮ್ಮೆ ನೆನಪಿಸಿಯೇ ಮುಂದುವರಿಯುತ್ತೇನೆ. ಈ ಕಂಪನಿಯಲ್ಲಿ ಎಲ್ಲ ಪಾತ್ರಗಳನ್ನೂ ಸ್ತ್ರೀಯರೇ ನಿರ್ವಹಿಸುತ್ತಿದ್ದರು ಎಂದು ಈಗಾಗಲೇ ನಿಮಗೆ ಗೊತ್ತಾಗಿದೆ. ಹಾಗಿದ್ದರೆ ‘ಬಚ್ಚಾಸಾನಿ ಕಂಪನಿ’ ಸೇರಲು ಗಂಡಸರಿಗೆ ಅವಕಾಶವೇ ಇರಲಿಲ್ಲವೇ? ಅಲ್ಲಿ ಅವರಿಗೆ ಏನೂ ಕೆಲಸವೇ ಇರಲೇ ಇಲ್ಲವೇ? ಎಂಬ ಪ್ರಶ್ನೆ ನಿಮಗೀಗ ಎದುರಾಗಿರಬಹುದು. ಹಾಗೇನಿಲ್ಲ. ಅಲ್ಲಿಯೂ ಎಂಟತ್ತು ಜನ ಗಂಡಸರಿದ್ದರು. ಅವರೂ ಆ ದೊಡ್ದಮನೆಯ ಸದಸ್ಯರೇ. ಕೆಲವರು ಬಚ್ಚಾಸಾನಿಯ ತಮ್ಮಂದಿರು, ಕೆಲವರು ಸೋದರಸಂಬಂಧಿಗಳು. ಪಾತ್ರ ಮಾಡುವುದೊಂದನ್ನು ಬಿಟ್ಟು, ಕಂಪನಿಯ ಇನ್ನಿತರ ಕೆಲಸಗಳ ಹೊಣೆ ಈ ಗಂಡಸರ ಮೇಲಿರುತ್ತಿತ್ತು. ಅಂದರೆ, ಯಚ್ಚಾವತ್ (ಇದು ‘ಯತ್ ಯಾವತ್’ ಎಂಬುದರ ಅಪಭ್ರಂಶ ರೂಪ ಇರಬೇಕು.) ವ್ಯವಸ್ಥಾಪನೆಯ (ಮೆನೆಜ್ ಮೆಂಟ್) ಜವಾಬ್ದಾರಿ. ಊಟದ ಮನೆಗೆ ಬೇಕಾದ ರೇಶನ್ ಸರಬರಾಜು, ಪ್ರಚಾರ, ಟಿಕೀಟು ಮಾರುವುದು, ನಾಟಕಕ್ಕೆ ಬೇಕಾದ ದಿರಿಸುಗಳನ್ನು ಮಡಿ ಮಾಡಿಸಿ ತರಿಸಿಡುವುದು, ನಾಟಕದ ಸಂದರ್ಭದಲ್ಲಿ ಗ್ಯಾಸ್ ಲೈಟ್ ಹೊತ್ತಿಸುವುದು, ಅವು ರಿಪೇರಿಗೆ ಬಂದರೆ ದುರಸ್ತಿಗೊಳಿಸುವುದು, ಹೊಸ ನಾಟಕಗಳಿಗೆ ಹೊಸ ಪರದೆಗಳನ್ನು ಬರೆಯಿಸುವುದು, ದೃಶ್ಯ ಬದಲಾವಣೆಗೆ ತಕ್ಕಂತೆ ಪರದೆಗಳನ್ನು ಎಳೆಯುವುದು, ಮತ್ತು ಆಕಸ್ಮಿಕವಾಗಿ ಎದುರಾಗುವ ಸವಾಲುಗಳನ್ನು ಎದುರಿಸುವುದು ಹಾಗೂ ಸಮರ್ಥವಾಗಿ ನಿರ್ವಹಿಸುವುದು. ಇವೆಲ್ಲವುಗಳ ಜೊತೆ ಪುಂಡ-ಪೋಕರಿಗಳನ್ನು, ದುಷ್ಕರ್ಮಿಗಳನ್ನು ಅಂಕೆಯಲ್ಲಿ ಇಟ್ಟುಕೊಳ್ಳುವುದು. ಈ ಕೆಲಸಗಳಿಗೆ ಬಚ್ಚಾಸಾನಿಯ ತಮ್ಮಂದಿರು, ಪರಿವಾರದ ಮತ್ತಿತರ ಪುರುಷರು ಸದಾ ಸಿದ್ಧರಾಗಿಯೇ ಇರುತ್ತಿದ್ದರು. ನಮಗೆ ಬಚ್ಚಾಸಾನಿಯ ತಂಗಿಯರು ಯಾರು ಯಾರು ಎಂಬುದರ ವಿವರ ನಮಗೆ ದೊರೆಯುತ್ತದೆ ಹೊರತು ಒಬ್ಬಿಬ್ಬ ತಮ್ಮಂದಿರು ಮತ್ತು ಪರಿವಾರದ ಮತ್ತಿತರ ಪುರುಷರ ಹೆಸರುಗಳು ಏನೆಂಬ ಮಾಹಿತಿ ಸಿಕ್ಕುವುದಿಲ್ಲ. ಬಚ್ಚಾಸಾನಿ ಸ್ವತಃ ಒಬ್ಬ ಸಂಗೀತ ವಿದುಷಿ, ಶ್ರೇಷ್ಠ ನಟಿ ಮತ್ತು ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಅಚ್ಚುಮೆಚ್ಚಿನ ಆಸ್ಥಾನ ಗಾಯಕಿ. ಹೀಗಾಗಿ ಊರಿನ ಪ್ರತಿಷ್ಠಿತರು ಮತ್ತು ಪೋಲಿಸ್ ಇಲಾಖೆಯ ಅಧಿಕಾರಿಗಳು ಅವಳ ಬಗ್ಗೆ ವಿಶೇಷ ಗೌರವವನ್ನು ಇಟ್ಟುಕೊಂಡಿದ್ದರು. ಅವಳೂ ಅಷ್ಟೇ. ಗೌಡರು, ಶಾನುಭೋಗರು, ಜಮೀನುದಾರರು ಹಾಗೂ ಪೋಲಿಸ್ ಅಧಿಕಾರಿಗಳನ್ನು ಅವರಿಗೆ ಉಚಿತವಾದ ಮರ್ಯಾದೆಯೊಂದಿಗೆ ಮಾತನಾಡಿಸುತ್ತಿದ್ದಳು. ವಿನಯ ಅವಳ ಜನ್ಮಜಾತ ಗುಣವೇ ಆಗಿತ್ತು. ಆ ವಿನಯದ ಕಾರಣದಿಂದಲೇ ಆಕೆ ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಅಚ್ಚುಮೆಚ್ಚಿನ ಗಾಯಕಿ ಎನಿಸಿದ್ದು. ಈಗಾಗಲೇ ಹೇಳಿರುವಂತೆ, ಗ್ವಾಲಿಯರ್ ಘರಾಣೆಯ ದಿಗ್ಗಜ ಬಾಲಕೃಷ್ಣಬುವಾ ಈಚಲಕರಂಜೀಕರರ ಶಿಷ್ಯೆ ಈ ಬಚ್ಚಾಸಾನಿ. ಮಿರಜಿನಲ್ಲಿಯೇ ಸಂಗೀತಾಭ್ಯಾಸ ಮಾಡಿದವಳು. ಅಂದಮೇಲೆ ಶ್ರೀಮಂತ ಬಾಳಾಸಾಹೇಬರ ಕಿವಿಗೆ ಅವಳ ಹೆಸರು ಬೀಳದೆ ಇರುತ್ತದೆಯೇ? ಅವರು ಬಚ್ಹಾಸಾನಿಯ ಸಂಗೀತವೆಂದರೆ ಇದ್ದ ಕಾರ್ಯ ಬಿಟ್ಟು ಆಲಿಸುತ್ತ ಕೂಡುವಂಥವರು. ಲಕ್ಷ್ಮೇಶ್ವರದ ವಾಸ್ತವ್ಯದಲ್ಲಿ ಬಾಳಾಸಾಹೇಬರ ಸನ್ನಿಧಾನದಲ್ಲಿ ಕನಿಷ್ಠ ತಿಂಗಳಿಗೆ ನಾಲ್ಕು ಸಲವಾದರೂ ಬಚ್ಚಾಸಾನಿಯ ಕಚೇರಿ ನಡೆಯುತ್ತಿತ್ತು. ಅಲ್ಲದೆ ಊರಿನ ಇನ್ನಿತರ ಪ್ರತಿಷ್ಠಿತರಿಗಾಗಿಯೂ ಕಿಲ್ಲೆಯಲ್ಲಿ ಆಕೆಯ ಸಂಗೀತ ಕಾರ್ಯಕ್ರಮದ ಏರ್ಪಾಟಾಗುತ್ತಿತ್ತು. ಈ ಸಂದರ್ಭದಲ್ಲಿ ಅವಳಿಗೆ ಸಂಸ್ಥಾನಿಕರ ಪರವಾಗಿ ಉಚಿತ ಮರ್ಯಾದೆಯೂ ಕಾಣಿಕೆಗಳೂ ಸಲ್ಲುತ್ತಿದ್ದವು. ಇದಲ್ಲದೆ ಗಣೇಶೋತ್ಸವ, ನವರಾತ್ರಿ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕರಿಗಾಗಿಯೂ ಬಚ್ಚಾಸಾನಿಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಅವೆಲ್ಲ ನಡೆಯುತ್ತಿದ್ದದ್ದು ಕೋಟೆಯ ಹೊರಗೆ. ಕಿಲ್ಲೆಯ ದಕ್ಷಿಣ ದ್ವಾರದ ಬಗ್ಗೆ, ಲಕ್ಷ್ಮಣಲಿಂಗನ ಗುಡಿಯ ಬಗ್ಗೆ ಈ ಮೊದಲು ನಿಮಗೆ ಹೇಳಿದೆನಲ್ಲ. ಅವುಗಳ ಮಧ್ಯದಲ್ಲಿ ಒಂದು ಗಣಪತಿ ಗುಡಿ. ಅದರ ಎದುರಿಗೆ ಎರಡು ಸಾವಿರ ಜನ ಕೂಡಬಹುದಾದ ಒಂದು ದೊಡ್ಡ ಮೈದಾನದಂಥ ಜಾಗ. ಒಂದೆಡೆ ಒಂದನೆಯ ನಂಬರ್ ಕನ್ನಡ ಪ್ರಾಥಮಿಕ ಶಾಲೆಯ ಕಾಂಪೋಂಡು. ಇನ್ನೊಂದೆಡೆ ದೇವರ ಬಾವಿಯ ಕಟ್ಟೆ. ಬೆನ್ನಿಗೆ ಕೋಟೆಯ ಎತ್ತರದ ಗೋಡೆ. ಎದುರು ಗಣಪತಿ ಗುಡಿಯ ಜಗುಲಿ. ಅಲ್ಲಿ ಕೂತು ಬಚ್ಚಾಸಾನಿ ಹಾಡತೊಡಗಿದರೆ ಆಹಾ ಸಾವಿರಾರು ಜನರ ತಲೆಗಳು ತೂಗುವ ತೆನೆಗಳಂತೆ ಕಂಡುಬರುತ್ತಿದ್ದುವಂತೆ. ತಮ್ಮ ಬಾಲ್ಯದಲ್ಲಿ ಅಂಥದೊಂದು ಕಾರ್ಯಕ್ರಮವನ್ನು ನೋಡಿದ ನಮ್ಮೂರಿನ ತೊಂಬತ್ತೆರಡರ ಹಿರಿಯರೊಬ್ಬರು ಹೇಳುತ್ತಾರೆ : ”ಕೂತ ಪಟ್ಟಿಗೆ ಆಕಿ ಎರಡು ತಾಸು ಹಾಡತಿದ್ದಳು. ಅವು ಯಾವ ಯಾವ ರಾಗ ಅನ್ನೋದು ಆಗ ನಮಗ ತಿಳೀತಿದ್ದಿಲ್ಲಾ. ಆದರ ತಿಳದವರು ನಡನಡವ ‘ವಾ..’. ‘ಬೌತ ಅಚ್ಚಿ…’ ‘ಕ್ಯಾ ಬಾತ್ ಹೈ…’ ಎಂದೆಲ್ಲ ಹೇಳುತ್ತಿದ್ದರು. ಆಮ್ಯಾಲೆ ಆಕಿ ಒಂದೆರಡು ನಾಟಕದ ಹಾಡೂ ಹಾಡತಿದ್ದಳು. ಮುದಕೀ ದನಿ ಗಂಟೀ ಹಾಂಗಿತ್ತು…” ಇಂಥ ಬಚ್ಚಾಸಾನಿ ತಾನು ಸಂಸ್ಥಾನಿಕರ ಆಸ್ಥಾನದ ‘ನವಮಣಿ’ಗಳಲ್ಲಿ ಒಬ್ಬಳೆಂಬ ಜಂಬವನ್ನಾಗಲಿ, ಸಂಘದ ಒಡತಿ ತಾನೆಂಬ ಹಮ್ಮು-ಬಿಮ್ಮುಗಳನ್ನಾಗಲಿ ಎಂದಿಗೂ ಪ್ರದರ್ಶಿಸಿದವಳಲ್ಲ. ಆಕೆಯದು ಸಜ್ಜನ ನಡವಳಿಕೆ. ಕಂಪನಿಯ ಆಡಳಿತೆ ನೋಡಿಕೊಳ್ಳುವಾಗ ಮಾತ್ರ ಆಕೆಯದು ಅತಿ ಕಟ್ಟುನಿಟ್ಟು. ಅತಿ ಶಿಸ್ತು. ಮನೆಮಂದಿಯ ಬಗ್ಗೆ ಅತಿ ಪ್ರೀತಿ, ಅಕ್ಕರತೆ. ನಿಜಕ್ಕೂ ಮಾತೃಹೃದಯದ ದೊಡ್ಡಕ್ಕ ಆಕೆ. ತಂಗಿಯರು ಮತ್ತು ತಮ್ಮಂದಿರೆಲ್ಲರ ಪುತ್ರಿಯರು ಸಂಗೀತ, ನೃತ್ಯ ಮತ್ತು ಅಭಿನಯಗಳಲ್ಲಿ ಪರಿಣತಿ ಪಡೆಯುವತ್ತ ಸಂಪೂರ್ಣ ಗಮನ ಆಕೆಯದಾಗಿರುತ್ತಿತ್ತು. ಯಾರಿಗೆ ಯಾವ ಗುರು ಎಂಬುದನ್ನು ಅವಳೇ ನಿರ್ಧರಿಸುತ್ತಿದ್ದಳು. ಇಂಥ ಅಪರೂಪದ ಗಾಯಕಿ-ನಾಯಕಿಯ ಬಗ್ಗೆ ಒಂದೇ ಕಂತಿನಲ್ಲಿ ಹೇಳಿ ಮುಗಿಸಲು ಆಗುವುದಿಲ್ಲ. ಮುಂದಿನ ವಾರ ಮತ್ತೆ ಬಚ್ಚಾಸಾನಿಯ ಬಳಿಗೆ ನಿಮ್ಮನ್ನು ಕರೆದೊಯ್ಯುತ್ತೇನೆ.  

ಲಕ್ಷ್ಮೇಶ್ವರದ ಲಕ್ಷ್ಮಣಲಿಂಗನ ಗುಡಿ

]]>

‍ಲೇಖಕರು G

August 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

2 ಪ್ರತಿಕ್ರಿಯೆಗಳು

  1. Guruprasad Kurtkoti

    ಬಹಳ interesting ಇದೆ, ಮುಂದಿನ ಕಂತಿಗಾಗಿ ಕಾಯುತ್ತಿರುವೆ! ಅಂದ ಹಾಗೆ ನಾನು ಚಿಕ್ಕವನಿದ್ದಾಗಿಂದ ಈ ಗುಡಿಗೆ “ಲಕ್ಶ್ಮೀ ಲಿಂಗನ ಗುಡಿ” ಅಂತ ಹೇಳಿ ನೆನಪು. ಅದು ನನ್ನ ತಪ್ಪು ಕಲ್ಪನೆ ಇರಬಹುದು. ಆದರೆ ವಾಸ್ತವದಲ್ಲಿ ಅದಕ್ಕೆ ಲಕ್ಶ್ಮಣ ಲಿಂಗನ ಗುಡಿ ಅಂತ ಅನಿಸುತ್ತೆ. ಈ ನನ್ನ ದ್ವಂದ್ವಕ್ಕೆ ಉತ್ತರ ನಿಮ್ಮ ಮುಂದಿನ ಕಂತಿನಲ್ಲಿ ಸಿಗಬಹುದು ಎಂದು ನಂಬಿದ್ದೇನೆ.

    ಪ್ರತಿಕ್ರಿಯೆ
  2. umesh desai

    ಸರ್ ಮತ್ತೊಂದು ಸೊಗಸಾದ ಕಂತು..ಮುಂದಿನ ಕಂತಿಗೆ ಕಾಯುತ್ತಿರುವೆ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: