ಗೋಪಾಲ ವಾಜಪೇಯಿ ಕಾಲಂ : ಸಂಗೀತ ವಿದುಷಿ, ಅಭಿನಯ ಚತುರೆ

ಸುಮ್ಮನೇ ನೆನಪುಗಳು – 10

– ಗೋಪಾಲ ವಾಜಪೇಯಿ

ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಆಸ್ಥಾನದ ‘ನವಮಣಿ’ಗಳ ಕುರಿತು ಹೇಳುತ್ತಿದ್ದೇನಷ್ಟೇ… ಈ ‘ನವಮಣಿ’ಗಳಲ್ಲಿ ಮುಖ್ಯರಾದ ‘ದಶವಾದ್ಯ ಚತುರ’ ಶಿರಹಟ್ಟಿ ನಾಗಪ್ಪ ಮತ್ತು ‘ವೇದ ಶಾಸ್ತ್ರ ಪಾರಂಗತ’ ಶ್ರೀಪಾದ ದೀಕ್ಷಿತ    ವಾಜಪೇಯಿಯವರನ್ನು ಈಗಾಗಲೇ ನಿಮಗೆ ಪರಿಚಯಿಸಿದ್ದೇನೆ. ಇದೀಗ ‘ಮೂರನೆಯ ಮಣಿ’ಯ ಬಗ್ಗೆ ಹೇಳುತ್ತೇನೆ. ಇದು ಅಂತಿಂಥ ಮಣಿಯಲ್ಲ, ಅಪರೂಪದ ಮಣಿ. ಹಾ, ಮೊದಲು ನಿಮಗೊಂದು ಪ್ರಶ್ನೆ : ”ಕರ್ನಾಟಕದ ಮೊಟ್ಟ ಮೊದಲ ಸ್ತ್ರೀ ನಾಟಕ ಮಂಡಳಿ ಯಾವುದು?” ನೀವು ಥಟ್ಟಂತ ”ಆರ್. ನಾಗರತ್ನಮ್ಮನವರದು,” ಅಂತ ಹೇಳಿಬಿಡುತ್ತೀರಿ ಅಂತ ನನಗೆ ಗೊತ್ತು. ನಿಮ್ಮ ಉತ್ತರ ತಪ್ಪು. ಯಾಕಂದರೆ, ಆರ್. ನಾಗರತ್ನಮ್ಮನವರ ಕಂಪನಿ ಶುರುವಾದದ್ದು 1958 ರಲ್ಲಿ. ಆದರೆ, ಅದಕ್ಕೂ ನಲವತ್ತು ವರ್ಷ ಮೊದಲು ‘ಕರ್ನಾಟಕದ ಮೊಟ್ಟ ಮೊದಲ ಸ್ತ್ರೀ ನಾಟಕ ಮಂಡಳಿ’ ಗದಗು, ಶಿರಹಟ್ಟಿ, ಲಕ್ಷ್ಮೇಶ್ವರ, ಹಾವೇರಿ ಭಾಗಗಳಲ್ಲಿ ಜನಪ್ರಿಯತೆ ಗಳಿಸಿತ್ತು. ಅದನ್ನು ಸ್ಥಾಪಿಸಿದಾಕೆ ಬಚ್ಚಾಸಾನಿ ಎಂಬ ಸಂಗೀತ ವಿದುಷಿ. ಆಕೆ ಅಸಮಾನ ಅಭಿನಯ ಚತುರೆಯೂ ಹೌದು. ಆ ‘ನಟೀಮಣಿ’ಯೇ ಶ್ರೀಮಂತ ಬಾಳಾಸಾಹೇಬ ಪಟವರ್ಧನರ ಆಸ್ಥಾನದ ಮೂರನೆಯ ಮುಖ್ಯ ‘ನವಮಣಿ.’ ಆಕೆ ಸ್ಥಾಪಿಸಿದ ನಾಟಕ ಮಂಡಳಿ ‘ಬಚ್ಚಾಸಾನಿ ಕಂಪನಿ’ ಎಂದೇ ಹೆಸರು ಮಾಡಿತ್ತು. ಅದನ್ನು ಜನ ಕರೆಯುತ್ತಿದ್ದದ್ದು ‘ದೊಡ್ಡಮನಿ ಬಚ್ಚಾಸಾನಿ ಕಂಪನಿ’ ಎಂದೇ. ಹೌದು. ದೊಡ್ಡಮನಿ. ಇದು ಉತ್ತರ ಕರ್ನಾಟಕದ ಕಡೆ ಸಾಮಾನ್ಯವಾಗಿ ಕೇಳಿಬರುವ ಅಡ್ಡಹೆಸರು (ಸರ್ ನೇಮ್). ಆಗೆಲ್ಲ ಕೂಡುಕುಟುಂಬಗಳೇ ಜಾಸ್ತಿ. ಪ್ರತಿ ಊರಲ್ಲಿಯೂ ಒಂದೊಂದು ಅತಿ ದೊಡ್ಡ ಕೂಡುಕುಟುಂಬ ಇರುತ್ತಿತ್ತು. ಜನ ಆ ಮನೆಯವರನ್ನು ”ದೊಡ್ಡಮನಿಯವರು…” ಅಂತ ಕರೆಯುತ್ತಿದ್ದರು. ಮುಂದೆ ಅದೇ ಆ ಮನೆತನಕ್ಕೆ ಅಡ್ಡಹೆಸರಾಗಿ ನಿಲ್ಲುತ್ತಿತ್ತು. (ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಬಳಿಯಲ್ಲೂ ಒಂದು ‘ದೊಡ್ಮನೆ’ಯಿದೆ. ನಮ್ಮ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಆ ‘ದೊಡ್ಮನೆ’ಯವರು.) ನಿಮ್ಮಲ್ಲಿ ಯಾರಿಗಾದರೂ ರಂಗಗೀತೆಗಳಲ್ಲಿ ಆಸಕ್ತಿ ಇದ್ದರೆ, ಧಾರವಾಡ ಆಕಾಶವಾಣಿಯಲ್ಲಿ ಆಗೀಗ ಕೇಳಿಬರುವ ಹೆಸರು ಸೋನುಬಾಯಿ ದೊಡ್ದಮನಿ. ಆಕೆ ಅನುಪಮ ಗಾಯಕಿ. ಮತ್ತು ಅನುಪಮ ನಾಯಕಿ. ನಮ್ಮ ವೃತ್ತಿರಂಗಭೂಮಿಯ ಶಕಪುರುಷ ಡಾ. ಏಣಗಿ ಬಾಳಪ್ಪನವರು ಬಾಲ್ಯದಲ್ಲಿ ಈ ಸೋನುಬಾಯಿಯ ಜೊತೆ ಪಾತ್ರ ಮಾಡಿದವರು. ಅಷ್ಟೇ ಅಲ್ಲ, ನಾನೀಗ ಹೇಳಹೊರಟಿರುವ ಬಚ್ಚಾಸಾನಿ ಎಂಬ ‘ಪ್ರತಿಭೆಯ ಬೆಟ್ಟ’ವನ್ನು ಕಣ್ಣಾರೆ ಕಂಡು ಕೈಮುಗಿದವರು. ಈ ‘ಪ್ರತಿಭೆಯ ಬೆಟ್ಟ’ಕ್ಕೆ ಹಾಗೆ ಕೈಮುಗಿದವರಲ್ಲಿ ನಮ್ಮ ಕಾದಂಬರೀ ಸಾರ್ವಭೌಮ ಅ.ನ.ಕೃಷ್ಣರಾಯರೂ, ಸಂಗೀತ ದಿಗ್ಗಜ ಮಲ್ಲಿಕಾರ್ಜುನ ಮನ್ಸೂರರೂ, ಆ ಕಾಲದ ಇನ್ನಿತರ ನಟಸಾರ್ವಭೌಮರೂ ಸೇರುತ್ತಾರೆ. ಈ ‘ಪ್ರತಿಭಾ ಪರ್ವತ’ದ ವಂಶದ ಕುಡಿಯೇ ಈ ಸೋನುಬಾಯಿ ದೊಡ್ಡಮನಿ. ಅದೊಂದು ಅತಿ ದೊಡ್ಡ ಪರಿವಾರ ಎಂದು ಈಗಾಗಲೇ ಹೇಳಿದ್ದೀನಲ್ಲವೆ?. ಒಟ್ಟು ಏಳು ಜನ ಸೋದರಿಯರು. ಅವರಲ್ಲಿ ಬಚ್ಚಾಸಾನಿಯೇ ದೊಡ್ಡಕ್ಕ. ಇವರೆಲ್ಲರಿಗೂ ಇಬ್ಬರು ಮೂವರು ಹೆಣ್ಣುಮಕ್ಕಳು. ಬಚ್ಚಾಸಾನಿಗೆ ಸೋದರರೂ ಇದ್ದರು. ಸೋದರ ಸಂಬಂಧಿಗಳೂ ಜೊತೆಯೇ ವಾಸಿಸುತ್ತಿದ್ದರು. ಇವರೆಲ್ಲರನ್ನೂ ಜನ ‘ದೊಡ್ಡಮನಿ’ಯವರು ಎಂದೇ ಗುರುತಿಸುತ್ತಿದ್ದರು. ಬಚ್ಚಾಸಾನಿಯನ್ನು ‘ದೊಡ್ಡ ರಾಜಾಸಾನಿ’ ಎಂದೂ ಕರೆಯುತ್ತಿದ್ದರಂತೆ. ಹೆಸರಿಗೆ ತಕ್ಕ ಹಾಗೆ, ಆಕೆ ರಾಜನ ಪಾರ್ಟು (ಪಾತ್ರ) ಮಾಡುವುದರಲ್ಲಿ ಎತ್ತಿದ ಕೈ. ರಾಜಪೋಷಾಕು ಧರಿಸಿ ಬಚ್ಚಾಸಾನಿ ರಂಗದ ಮೇಲೆ ಬಂದರೆ ಆಕೆ ಹೆಂಗಸು ಎಂದು ನಂಬಲು ಸಾಧ್ಯವೇ ಇರುತ್ತಿರಲಿಲ್ಲ. ‘ಭಕ್ತ ಪುಂಡರೀಕ,’ ‘ಭಕ್ತ ಅಂಬರೀಶ’ ಮುಂತಾದ ಪೌರಾಣಿಕ ನಾಟಕಗಳಲ್ಲಿ ಆಕೆಯದೆ ಪ್ರಮುಖ ಪುರುಷ ಪಾತ್ರ. ತಂಗಿಯರೆಲ್ಲ ಈ ದೊಡ್ಡಕ್ಕನ ಮಾತಿನಂತೆಯೇ ನಡೆದುಕೊಳ್ಳುತ್ತಿದ್ದರು. ಹಾಗಂತ ಎಂದೂ ದರ್ಪ ಮೆರೆದವಳಲ್ಲ ಬಚ್ಚಾಸಾನಿ. ನಯ, ವಿನಯ, ಅನುನಯಗಳಿಂದ ಎಲ್ಲರ ಒಲವಿಗೆ ಪಾತ್ರಳಾಗಿದ್ದವಳು. ‘ಸಾನಿ’ಯರ ಮನೆತನವಾದ್ದರಿಂದ ಏಳೂ ಜನ ಸೋದರಿಯರು ಸಂಗೀತ, ನೃತ್ಯ, ಅಭಿನಯ ಈ ಮೂರೂ ಕಲೆಗಳಲ್ಲಿ ಪಾರಂಗತರಾಗಿದ್ದರು. ಇವರೆಲ್ಲರಿಗೂ ಇಬ್ಬರು ಮೂವರು ಹೆಣ್ಣುಮಕ್ಕಳು ಎಂದು ಹೇಳಿದೆನಲ್ಲ. ಅವರೆಲ್ಲರಿಗೂ ಹುಟ್ಟುತ್ತಲೇ ಸಂಗೀತ, ನೃತ್ಯಗಳ ದೀಕ್ಷೆ ಸಿಗುತ್ತಿತ್ತು. ಹೆಣ್ಣುಮಕ್ಕಳು ದೊಡ್ದವರಾಗುತ್ತಿದ್ದಂತೆಯೇ ಯೋಗ್ಯ ಗುರುವಿನಿಂದ ಈ ಎರಡೂ ಕಲೆಗಳಲ್ಲಿ ಹೆಚ್ಚಿನ ತರಬೇತಿ ಪಡೆಯುತ್ತಿದ್ದರು. ಇದೆಲ್ಲ ನಡೆಯುತ್ತಿದ್ದದ್ದು ದೊಡ್ದವ್ವನ ನಿಗಾದಲ್ಲಿಯೇ. ಇತ್ತ ಕಂಪನಿಯ ನಾಟಕಗಳಲ್ಲಿಯೂ ಈ ಮಕ್ಕಳು ನಟಿಸುತ್ತಿದ್ದರು. ಬಚ್ಚಾಸಾನಿ ಸ್ವತಃ ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪಟು. ಆಕೆಯದು ಗ್ವಾಲಿಯರ್ ಘರಾಣೆ. ಮಿರಜದಲ್ಲಿರುತ್ತಿದ್ದ ಬಾಲಕೃಷ್ಣ ಬುವಾ ಈಚಲಕರಂಜಿಕರ್ ಈ ಘರಾಣೆಯ ಪ್ರಖ್ಯಾತ ಸಂಗೀತ ವಿದ್ವಾಂಸ. ಬಚ್ಚಾಸಾನಿ ಈ ಮಹನೀಯರ ಶಿಷ್ಯೆ. ಈಕೆಯನ್ನು ‘ಬಚ್ಚಾ’ ಎಂದು ಕರೆಯುತ್ತ, ‘ಮಗ’ನಂತೆಯೇ ನೋಡಿಕೊಂಡು ರಾಗಧಾರೆ ಎರೆದವರು ಬಾಲಕೃಷ್ಣ ಬುವಾ. ಅವರೇ ‘ರಾಜಾಸಾನಿ’ಗೆ ‘ಬಚ್ಚಾಸಾನಿ’ ಎಂದು ಪುನರ್ ನಾಮಕರಣ ಮಾಡಿದರಂತೆ. ಲಕ್ಷ್ಮೇಶ್ವರದ ಎಲ್ಲ ಮುಖ್ಯ ದೇವಸ್ಥಾನಗಳಲ್ಲಿ ಗಾಯನ ನರ್ತನ ಸೇವೆ ಮಾಡಿಕೊಂಡು ಇದ್ದವರು ಈ ಏಳೂ ಜನ ಸೋದರಿಯರು. ಒಬ್ಬೊಬ್ಬರಿಗೆ ಒಂದೊಂದು ದೇವಸ್ಥಾನದ ಸೇವೆ. ಬಚ್ಚಾಸಾನಿ ಇಲ್ಲಿಯ ಲಕ್ಷ್ಮಣಲಿಂಗ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಳು.

ಲಕ್ಷ್ಮಣಲಿಂಗ ಗುಡಿಯ ಹಿಂಭಾಗದ ನೋಟ

ನಮ್ಮ ಊರಲ್ಲಿ ರಾಮಲಿಂಗನ ಗುಡಿ, ಲಕ್ಷ್ಮಣಲಿಂಗನ ಗುಡಿ ಎಂಬೆರಡು ದೇವಾಲಯಗಳು. ಸುಮಾರು ಎಂಟು ನೂರು ವರ್ಷ ಹಳೆಯವು ಎಂದು ಹೇಳಲಾಗುವ ಈ ಎರಡೂ ದೇವಾಲಯಗಳು ಒಂದು ಕಾಲಕ್ಕೆ ಬಹುಶಃ ಒಂದೇ ಆವಾರದಲ್ಲಿರಬಹುದು. ಈ ಮಾತಿಗೆ ಸಾಕಷ್ಟು ಕುರುಹುಗಳೂ ಸಿಗುತ್ತವೆ. ಕಾಲಾಂತರದಲ್ಲಿ ರಾಮಲಿಂಗನ ಗುಡಿ ಬಿದ್ದು ಹೋಗಿ, ಅದರ ಆವಾರ ಪ್ರದೇಶವೆಲ್ಲ ಪರರ ಸ್ವತ್ತಾಗಿ ಹೋಯಿತೆನಿಸುತ್ತದೆ. ಲಕ್ಷ್ಮಣಲಿಂಗನ ಗುಡಿ ಇನ್ನೂ ಸುಸ್ಥಿತಿಯಲ್ಲಿದೆ. ಕರ್ನಾಟಕ ಸರಕಾರದ ಪ್ರಾಚ್ಯವಸ್ತು ಇಲಾಖೆ ಇದನ್ನೀಗ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ನಮ್ಮ ಊರನ್ನು ಆಳುತ್ತಿದ್ದ ಮಾಂಡಲಿಕ ದೊರೆ ಲಕ್ಷ್ಮಣರಸ ಎಂಬಾತ ಇದನ್ನು ಜೀರ್ಣೋದ್ಧಾರಗೊಳಿಸಿದನಂತೆ. (ಇನ್ನು ಕೆಲವೆಡೆ, ”ಈ ದೇವಾಲಯವು ಲಕ್ಷ್ಮಣರಸನ ಸ್ಮರಣಾರ್ಥ ಕಟ್ಟಿಸಲ್ಪಟ್ಟಿತು,” ಎಂದು ಹೇಳಲಾಗಿದೆ.)

ಇದೇ ಗುಡಿಯ ಒಂದು ಭಿತ್ತಿಚಿತ್ರ

ಮೊದಲು ಈ ಸೋದರಿಯರನ್ನು ಪರಿಚಯಿಸಿಯೇ ಮುಂದುವರಿಯುತ್ತೇನೆ. ನಿಮಗೆ ಗೊತ್ತಿರುವಂತೆ ಬಚ್ಚಾಸಾನಿಯೇ ಹಿರಿಯಕ್ಕ. ನಮ್ಮ ಕಡೆ ಹೆಂಗಸರ ಹೆಸರಿನ ಮುಂದೆ ‘ಅವ್ವ’ ಎಂದು ಸೇರಿಸುವುದು ವಾಡಿಕೆ. ಅದು ಗ್ರಾಮೀಣರು ಮಹಿಳೆಗೆ ನೀಡುವ ಗೌರವ. ಈ ಏಳೂ ಜನ ಸೋದರಿಯರನ್ನು ಜನ ಹಾಗೆಯೇ ಸಂಬೋಧಿಸುತ್ತಿದ್ದರು. ಬಚ್ಚಾಸಾನಿಯ ಇನ್ನೊಂದು ಹೆಸರು ‘ದೊಡ್ಡ ರಾಜಾಸಾನಿ’ ಎಂದು ನಿಮಗೆ ಈಗಾಗಲೇ ಹೇಳಿದ್ದೇನೆ. ಇವಳನ್ನು ‘ರಾಜವ್ವ’ ಎಂದೂ ಕರೆಯುತ್ತಿದ್ದರು. ಇವಳ ದೊಡ್ಡ ತಂಗಿ ದೊಡ್ಡ ಸಾಬವ್ವ. ವೀಣೆ ನುಡಿಸುವಲ್ಲಿ ಎತ್ತಿದ ಕೈ. ಇವಳಿಗೆ ‘ಸಾಬಾಸಾನಿ’ ಎಂಬ ಹೆಸರೂ ಇತ್ತು. (ವೀಣೆ ನುಡಿಸುವ ಭಂಗಿಯ ಇವಳ ಒಂದು ಫೋಟೋ ನಮ್ಮೂರ ಹಿರಿಯರೊಬ್ಬರ ಮನೆಯಲ್ಲಿತ್ತು. ಅವರು ಅವಳ ‘ಯಜಮಾನರು’.) ಈಕೆಯ ಹಿಂದೆಯೇ ಹುಟ್ಟಿದವಳು, ಅಂದರೆ ಮೂರನೆಯವಳು ಸಣ್ಣ ಸಾಬವ್ವ. ನಾಲ್ಕು ಮತ್ತು ಐದನೆಯವರು ದೊಡ್ಡ ದಾದವ್ವ, ಸಣ್ಣ ದಾದವ್ವ. ಆರನೆಯವಳು ಮುಂಜೆವ್ವ. ಏಳನೆಯವಳು ಪೀರವ್ವ. (ಮೇಲೆ ಹೇಳಿದ ಸೋನುಬಾಯಿ ಈ ಪೀರವ್ವ ಅಥವಾ ‘ಪೀರಾಸಾನಿ’ಯ ಮಗಳು.) ಈ ಏಳೂ ಸೋದರಿಯರು, ಮತ್ತವರ ಹೆಣ್ಣುಮಕ್ಕಳು ‘ಬಚ್ಚಾಸಾನಿ ಕಂಪನಿ’ಯ ಕಲಾವಿದೆಯರು. ಒಬ್ಬರಿಗಿಂತ ಒಬ್ಬರು ಚೆಂದಕಿಂತ ಚೆಂದ. ಹಾಡುಗಾರಿಕೆ ಅಭಿನಯ ನರ್ತನಗಳಲ್ಲೂ ಮೂವರದೂ ಅಸಮಾನ ಪ್ರತಿಭೆ. ನಡೆ ನುಡಿಗಳಲ್ಲೂ ಅತಿ ಶುದ್ಧರು. ತಮಗೊಲಿದವನನ್ನೇ ‘ಯಜಮಾನ’ನೆಂದು ನಂಬಿಕೊಂಡು, ಕೊನೆಯುಸಿರಿನ ತನಕ ಆತನೊಂದಿಗೆ ಬಾಳುವೆ ಮಾಡಿದವರು. ಹಾಗಿದ್ದರೆ ‘ಬಚ್ಚಾಸಾನಿ ಕಂಪನಿ’ಯಲ್ಲಿ ಗಂಡಸರಿಗೆನೂ ಕೆಲಸವೇ ಇರಲೇ ಇಲ್ಲವೇ? ಅದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇನೆ.]]>

‍ಲೇಖಕರು G

August 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This