ಗೋಪಾಲ ವಾಜಪೇಯಿ ಕಾಲ೦ : ಅವರು ಬಂದರೆ ಅಬ್ಬ, ನಿಜಕ್ಕೂ ಹಬ್ಬ!

ಸುಮ್ಮನೇ ನೆನಪುಗಳು-೩

– ಗೋಪಾಲ ವಾಜಪೇಯಿ

ಪಟವರ್ಧನ ಮನೆತನಸ್ಥರೆಲ್ಲರ ಕುಲದೇವಿ ಖಡ್ಗಧಾರಿಣಿ ಕಾರಂಜೇಶ್ವರಿ

  1760-61 ರ ಸುಮಾರಿಗೆ ಪೇಶ್ವೆಗಳು ತಮ್ಮ ಆಡಳಿತದ ಎಲ್ಲ ಭಾಗವನ್ನೂ ಪಟವರ್ಧನ ಮನೆತನಕ್ಕೆ ಜಾಗೀರಾಗಿ ನೀಡಿದರು. (ಹೈದರಾಬಾದ ನಿಜಾಮ ಮತ್ತು ಮೈಸೂರಿನ ಹೈದರ್ ಅಲಿಯೊಂದಿಗಿನ ಬ್ರಿಟಿಶರ ಸೆಣಸಾಟದಲ್ಲಿ ಈ ಮನೆತನದ ಮೊದಲ ಸಂಸ್ಥಾನಿಕರು ಬಿಳಿಯರ ಪರವಾಗಿ ಕೆಲಸ ಮಾಡಿದ್ದರು.) ಸಾಂಗ್ಲಿ ಪಟವರ್ಧನರು, ಮಿರಜ್ ಪಟವರ್ಧನರು, ಕುರಂದವಾಡ ಪಟವರ್ಧನರು ಮುಂತಾಗಿ ನಾಲ್ಕೈದು ಪಟವರ್ಧನ ಮನೆತನಗಳು (ಮೊದಲು ಪೇಶ್ವೆಗಳ ಕೈಯಲ್ಲಿದ್ದ) ಕೃಷ್ಣಾ ತೀರದಿಂದ ತುಂಗಭದ್ರಾ ತೀರದ ವರೆಗಿನ ಗ್ರಾಮಗಳ ಆಡಳಿತವನ್ನು ಪ್ರತ್ಯೇಕವಾಗಿ ನೋಡಿಕೊಳ್ಳತೊಡಗಿದವು. 1820 ರಲ್ಲಿ ಈ ಆಡಳಿತ ಪ್ರದೇಶ ಹಿರೇ ಮಿರಜ್ ಮತ್ತು ಕಿರೇ ಮಿರಜ್ (ಸೀನಿಯರ್ ಮಿರಜ್ ಮತ್ತು ಜ್ಯೂನಿಯರ್ ಮಿರಜ್) ಎಂಬುದಾಗಿ ಇಬ್ಭಾಗ ಮಾಡಲ್ಪಟ್ಟಿತು. ಆ ಪೈಕಿ ಹಿರೇ ಮಿರಜ್ ಸಂಸ್ಥಾನದ ಆಡಳಿತಕ್ಕೆ ಮಿರಜ್, ನಾಡ್ನಿಂಬ್, ಮತ್ತು ನಮ್ಮ ಊರು ಲಕ್ಷ್ಮೇಶ್ವರ, ಹೀಗೆ ಮೂರು ತಾಲೂಕುಗಳು ಬಂದವು. ಲಕ್ಷ್ಮೇಶ್ವರದ ಐತಿಹಾಸಿಕ-ಸಾಂಸ್ಕೃತಿಕ ಮಹತ್ವವನ್ನು ಮನಗಂಡ ಮಿರಜ್ ಸಂಸ್ಥಾನಿಕರು ಇದನ್ನು ತಮ್ಮ ಉಪರಾಜಧಾನಿಗಳಲ್ಲಿ ಒಂದೆಂದು ಪರಿಗಣಿಸಿದರು. (ಈ ವಿಚಾರದಲ್ಲಿ ಏನಾದರೂ ತಪ್ಪು ಮಾಹಿತಿಯಿದೆ ಎನಿಸಿದರೆ ಗೊತ್ತಿದ್ದವರು ದಯವಿಟ್ಟು ಸರಿ ಮಾಹಿತಿಯನ್ನು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.) ಪಟವರ್ಧನ ವಂಶಸ್ಥರು ಮಹಾರಾಷ್ಟ್ರ ಕೊಂಕಣ ಪಟ್ಟಿಯ ಚಿತ್ಪಾವನ ಪಂಗಡಕ್ಕೆ ಸೇರಿದವರು. ಬೆಕ್ಕಿನ ಕಣ್ಣಿನ ಚಿತ್ಪಾವನರು ಸ್ಫುರದ್ರೂಪಿಗಳು. ಸಾಹಸಿಗಳು. ಮಹದಾಕಾಂಕ್ಷಿಗಳು. ಗುರಿ ಸಾಧನೆಯಲ್ಲಿ ನಿಪುಣರು. ಎಲ್ಲ ರಂಗಗಳಲ್ಲೂ ಅಗ್ರಗಣ್ಯರು. ರಾಜ್ಯಾಡಳಿತದಲ್ಲೂ ಅಷ್ಟೇ. ಈ ಆಡಳಿತಗಾರರ ಹೆಸರುಗಳು ‘ಹೀಜ್ ಹೈನೆಸ್ ರಾಜಾ ಶ್ರೀಮಂತ’ ಎಂಬ ಉಪಾಧಿಯಿಂದಲೇ ಆರಂಭವಾಗುತ್ತಿದ್ದವು. ಇವರೆಲ್ಲ ತಮ್ಮ ‘ಇಶಾರೆ’ಯಂತೆ ನಡೆದುಕೊಳ್ಳುತ್ತಿದ್ದುದರಿಂದ ಬ್ರಿಟಿಶರು ಕೆಲವರಿಗೆ ‘ಸರ್’ ಪದವಿಯನ್ನೂ ದಯಪಾಲಿಸುತ್ತಿದ್ದರು. ಪಟವರ್ಧನ ಮನೆತನಸ್ಥರೆಲ್ಲರ ಕುಲದೇವಿ ಕಾರಂಜೇಶ್ವರಿ. (ಈ ಕ್ಷೇತ್ರ ಕೊಂಕಣದ ಚಿಪಳೂಣದ ಬಳಿ ಇದೆ.) ಈ ಕಾರಂಜೇಶ್ವರಿ ದೇವಿಯ ಕೃಪೆಯಿಂದ 1866 ರ ಫೆಬ್ರವರಿ 9 ರಂದು ಜನಿಸಿದವರು ರಾಜಾ ಶ್ರೀಮಂತ ಸರ್ ಗಂಗಾಧರರಾವ್ ಗಣೇಶ (ಬಾಳಾ ಸಾಹೇಬ್) ಪಟವರ್ಧನರು. ‘ಯುವರಾಜ’ ಎನಿಸಿಕೊಂಡದ್ದು 1874 ರಲ್ಲಾದರೆ, ಪಟ್ಟಾಭಿಷಿಕ್ತರಾಗಿ ಸೀನಿಯರ್ ಮಿರಜ್ ಸಂಸ್ಥಾನದ ಮೂರನೆಯ ದೊರೆಯೆನಿಸಿದ್ದು 1875 ರ ಜೂನ್ 6 ರಂದು. (‘ಬಾಳ’, ‘ಬಾಳಾ’ ಅಂದರೆ ಮಗು, ಚಿಕ್ಕವ ಎಂದು. ಬಾಳಾ ಸಾಹೇಬ ಎಂದರೆ ‘ಚಿಕ್ಕ ಧಣಿ’ ಎಂದರ್ಥ. ನಮ್ಮ ಹಳ್ಳಿಗಳ ಕಡೆ ‘ಅಪನಾರು’, ‘ಸಣ್ಣಪನಾರು’ ಎಂದೆಲ್ಲ ಕರೆಯುವುದಿದೆಯಲ್ಲವೇ?) ಇಲ್ಲಿ ಪದೇ ಪದೇ ಪ್ರಸ್ತಾಪಿಸಲ್ಪತ್ತಿರುವ ‘ಸಾಹೇಬ’ ಪದದ ಕುರಿತು ಒಂದಷ್ಟು ಹೇಳಬೇಕು. ‘ಸಾಹೇಬ’ ಎಂಬುದು ಗೌರವ ಸೂಚಕ ಪದ. ಮಹಾರಾಷ್ಟ್ರದ ರಾಜಮನೆತನಗಳು ಮತ್ತು ದೇಸಾಯಿ, ದೇಶಮುಖ ಮುಂತಾದ ಶ್ರೀಮಂತ ಕುಟುಂಬಗಳವರನ್ನು ‘ಸಾಹೇಬ’ ಎಂದೇ ಅತ್ಯಂತ ಗೌರವಯುತವಾಗಿ ಸಂಬೋಧಿಸಲಾಗುತ್ತಿತ್ತು. ಪುರುಷರಾದರೆ ರಾಜಾ ಸಾಹೇಬ, ತಾತ್ಯಾ ಸಾಹೇಬ, ಅಪ್ಪಾ ಸಾಹೇಬ, ಬಾಳಾ ಸಾಹೇಬ, ಅಣ್ಣಾ ಸಾಹೇಬ ಮುಂತಾಗಿ ; ಇನ್ನು ಸ್ತ್ರೀಯರಾದರೆ ತಾಯೀ ಸಾಹೇಬ (ರಂ. ಶಾ. ಅವರ ಕಾದಂಬರಿ ನೆನಪಾಯಿತೇ?), ಬಾಯೀ ಸಾಹೇಬ, ಅಕ್ಕಾ ಸಾಹೇಬ, ವೈನೀ ಸಾಹೇಬ ಮುಂತಾಗಿ… ಈಗಲೂ ನೀವು ಮಹಾರಾಷ್ಟ್ರದ ಊರುಗಳಿಗೆ ಹೋದರಾಗಲೀ, ಅಥವಾ ಕರ್ನಾಟಕದಲ್ಲಿ ನೆಲೆಸಿದ ಮಹಾರಾಷ್ಟ್ರೀಯರ ಮನೆಗಳಿಗೆ ಹೋದರಾಗಲೀ ಅವರು ನಿಮ್ಮನ್ನು ಸ್ವಾಗತಿಸುವುದು, “ಯಾ ಸಾಹೇಬ್ ಯಾ… ಬಸಾ…” (‘ಬರ್ರಿ ಮಾನ್ಯರೇ ಬರ್ರಿ, ಕೂಡಿರಿ…’) ಎಂದೇ. ಈ ಪಟವರ್ಧನ ಬಾಳಾಸಾಹೇಬರು ವೇದಾಧ್ಯಯನದ ಜೊತೆ ಸಮರಕಲೆಯ ಎಲ್ಲ ‘ಗುಟ್ಟು-ಪಟ್ಟು’ಗಳನ್ನೂ ‘ಕರಗತ’ಗೊಳಿಸಿ ಕೊಂಡಿದ್ದರಂತೆ. ಮಲ್ಲಖಂಬ, ಸೂರ್ಯ ನಮಸ್ಕಾರಗಳ ಬಗ್ಗೆಯೂ ಅಪಾರ ಒಲವು. ಸತತ 50 ವರ್ಷಗಳ ವರೆಗೆ ಸ್ವತಃ ಸೂರ್ಯ ನಮಸ್ಕಾರವನ್ನು ಹಾಕುತ್ತಿದ್ದವರು ಬಾಳಾಸಾಹೇಬರು. ‘ಯುವಜನರು ಬಲವಂತರಾದಷ್ಟೂ ಹೆಚ್ಚು ಬುದ್ಧಿವಂತರಾಗುತ್ತಾರೆ,’ ಎಂಬುದು ಅವರ ದೃಢ ನಂಬಿಕೆ. ಅದಕ್ಕೇ ತಮ್ಮ ಸಂಸ್ಥಾನದ ಎಲ್ಲ ಕಡೆ ಗರಡಿ ಮನೆಗಳನ್ನು ಸ್ಥಾಪಿಸಲು ಅವರು ಪ್ರೋತ್ಸಾಹಿಸಿದ್ದು. ಮಲ್ಲಖಂಬ ಹಾಗೂ ಸೂರ್ಯ ನಮಸ್ಕಾರ ತರಬೇತಿಗೆ ವಿಶೇಷ ಗಮನ ನೀಡಿದ್ದು. ಅವರ ಕಾಲದಲ್ಲಿ ಆರಂಭವಾದ ಮಲ್ಲಖಂಬದ ಪರಂಪರೆ ಲಕ್ಷ್ಮೇಶ್ವರದಲ್ಲಿ ಇನ್ನೂ ಜೀವಂತವಾಗಿದೆ. ಈಗಲೂ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಮಲ್ಲಖಂಬ ಪ್ರದರ್ಶನಗಳಲ್ಲಿ ನಮ್ಮ ಊರಿನ ಪಟುಗಳದೆ ಮೇಲುಗೈ. ಜನಾನುರಾಗಿಯಾದ ಬಾಳಾಸಾಹೇಬರು ಕೃಷಿ, ಧರ್ಮ, ಶಿಕ್ಷಣ, ಸಂಸ್ಕೃತಿ, ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ ಕಲೆಗಳು, ಕ್ರೀಡೆ ಎಲ್ಲದಕ್ಕೂ ಸಮಾನ ಮಹತ್ವ ನೀಡುತ್ತಿದ್ದರೆಂದು ಅವರನ್ನು ಕಂಡ ನಮ್ಮೂರ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಮಿರಜದವರಾದ್ದರಿಂದ ಕೃಷ್ಣೆಯ ಕಲರವ ಕೇಳುತ್ತಲೇ ಜನಿಸಿದ ಅವರು ಸಂಗೀತದ ಆಲಾಪನೆ ಕೇಳುತ್ತಲೇ ಬೆಳೆದವರು, ಬಾಳಿದವರು. ಹೀಗಾಗಿ ಮಿರಜದಲ್ಲಿ ಅವರು ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು. ‘ಗಂಧರ್ವ ಮಹಾವಿದ್ಯಾಲಯ’ ಯಾರಿಗೆ ಗೊತ್ತಿಲ್ಲ? ಸಂಗೀತದಲ್ಲಿ ಆಸಕ್ತಿ ಇರುವವರೆಲ್ಲ ಈ ಮಹಾವಿದ್ಯಾಲಯದ ಹೆಸರನ್ನೂ ಅದನ್ನು ಸ್ಥಾಪಿಸಿದ ಪಂ. ವಿಷ್ಣು ದಿಗಂಬರ ಪಲುಸ್ಕರರ ಹೆಸರನ್ನೂ ಕೇಳಿಯೇ ಇರುತ್ತಾರೆ. ‘ವಂದೇ ಮಾತರಂ’ ಗೀತೆಗೆ ಒಂದು ಸುಂದರ ಧಾಟಿ ಹಾಕಿಕೊಟ್ಟವರು ಈ ಪಲುಸ್ಕರರು. ನಾವು ಇಂದಿಗೂ ಎಲ್ಲ ಸಭೆ ಸಮಾರಂಭಗಳಲ್ಲಿ ಹಾಡಲ್ಪಡುವ ಇದೇ ಧಾಟಿಯ ‘ವಂದೇ ಮಾತರಂ’ ನಮಗೆ ಪ್ರಿಯವಾದದ್ದು. ನರಸೋಬವಾಡಿಯಲ್ಲಿ ನಡೆಯುವ ‘ದತ್ತ ಜಯಂತಿ’ ಸಂದರ್ಭದಲ್ಲಿ ಪಟಾಕಿಯೊಂದು ಮುಖದ ಬಳಿಯೇ ಸಿಡಿದು ಗಂಭೀರವಾಗಿ ಗಾಯಗೊಂಡರಂತೆ ಸಂಗೀತದ ಬಾಲ ಪ್ರತಿಭೆ ವಿಷ್ಣು ಪಲುಸ್ಕರ್. ಕುರಂದವಾಡದ ರಾಜಾ ದಾಜೀಸಾಹೇಬರು ಈ ಪ್ರತಿಭಾನ್ವಿತ ಬಾಲಕನನ್ನು ಕೂಡಲೇ ಮಿರಜದ ಆಸ್ಪತ್ರೆಗೆ ಕಳಿಸಿಕೊಟ್ಟರು. ಅಲ್ಲಿ ಡಾ. ಭಡಭಡೆ ಎಂಬವರ ಶುಶ್ರೂಷೆಯಿಂದ ಅಪಾಯದಿಂದ ಪಾರಾದ ಬಾಲಕ ಪಲುಸ್ಕರರಿಗೆ ತಮ್ಮ ಸಂಗೀತ ಸಾಧನೆಯದೆ ಚಿಂತೆ. ಇದನ್ನು ಅರಿತ ಡಾ. ಭಡಭಡೆ ”ಆ ಬಾಲಕನ ಸಂಗೀತಾಭ್ಯಾಸಕ್ಕೆ ಏನಾದರೂ ಏರ್ಪಾಡು ಮಾಡಿ,” ಎಂದು ಹಿರೇ ಮಿರಜದ ರಾಜಾ ಶ್ರೀಮಂತ ಸರ್ ಬಾಳಾ ಸಾಹೇಬ್ ಪಟವರ್ಧನರನ್ನು ವಿನಂತಿಸಿಕೊಂಡರಂತೆ. ಅವರು ಬಾಳಾ ಸಾಹೇಬರೊಂದಿಗೆ ಅಷ್ಟು ಸಲುಗೆಯಿಂದ ಇದ್ದವರು. ಹೀಗೆ ಮಿರಜ್ ಸಂಸ್ಥಾನದ ಆಸ್ಥಾನ ವಿದ್ವಾಂಸರ ಬಳಿಯೇ ಬಾಲಕ ವಿಷ್ಣು ದಿಗಂಬರ ಪಲುಸ್ಕರ್ ಸಂಗೀತಾಭ್ಯಾಸವನ್ನು ಮುಂದುವರಿಸಿದ್ದು ತಮ್ಮ ಹದಿನೈದನೆಯ ವಯಸ್ಸಿನಲ್ಲಿ (1887). ತೀರ ಬಡ ಕುಟುಂಬದ ಒಬ್ಬ ಬಾಲಕ ರಾಷ್ಟ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುವಂಥ ಪ್ರತಿಭೆಗಳ ಹೊಮ್ಮುವಿಕೆಗೆ ಕಾರಣವಾದರು. ಅಂಥ ದೊಡ್ಡ ಮನಸ್ಸು ಶ್ರೀಮಂತ ಸರ್ ಬಾಳಾ ಸಾಹೇಬರದು. ‘ಗಂಧರ್ವ ಮಹಾವಿದ್ಯಾಲಯ’ದ ಆಡಳಿತ ಕಚೇರಿ ಇರುವುದು ‘ಸಂಗೀತ ಕಾಶಿ’ ಮಿರಜದಲ್ಲಿಯೇ. ಹೌದು, ಮಿರಜ ‘ಸಂಗೀತ ಕಾಶಿ’ಯೇ… ಹಿಂದುಸ್ತಾನಿ ಸಂಗೀತ ಲೋಕದ ‘ಧ್ರುವತಾರೆ’ಗಳಾದ ಉಸ್ತಾದ್ ಅಬ್ದುಲ್ ಕರೀಂ ಖಾನ್ ಸಾಹೇಬರು (ಕಿರಾಣಾ ಘರಾಣೆ), ಪಂ. ಭಾತಖಂಡೆ, ಶ್ರೀಮತಿ ಹೀರಾಬಾಯಿ ಬಡೋದೇಕರ್, ಪಂ. ವಿನಾಯಕರಾವ್ ಪಟವರ್ಧನ ಇವರೆಲ್ಲ ಇದೇ ಮಿರಜಿನವರು. ‘ಮರಾಠಿ ರಂಗಭೂಮಿಯ ಚಿರ ಸುಂದರಿ’ ಬಾಲಗಂಧರ್ವ ತಮ್ಮ ಮೊದಲ ರಂಗಪ್ರದರ್ಶನವನ್ನು ನೀಡಿದ್ದು ಇಲ್ಲಿಯ ಹಂಸಪ್ರಭಾ ಥಿಯೇಟರಿನಲ್ಲಿ. ಇದೇ ಜಾಗದಲ್ಲಿ ಈಗ ‘ಬಾಲಗಂಧರ್ವ ನಾಟ್ಯಗೃಹ’ವಿದೆ. ಇಂಥ ಪರಂಪರೆಯ ಊರಿನ ದೊರೆ ಶ್ರೀಮಂತ ಸರ್ ಬಾಳಾ ಸಾಹೇಬರಿಗೆ ಎಲ್ಲಿಯೇ ಹೋದರೂ ಸಂಗೀತ ಬೇಕೇ ಬೇಕು. ಅಂಥ ನಾದದ ಗುಂಗು ಅವರದು. ಅದು ಶಾಸ್ತ್ರೀಯವೇ ಇರಲಿ, ಜಾನಪದವೇ ಇರಲಿ ; ಹಾಡುಗಾರಿಕೆಯೇ ಇರಲಿ, ವಾದ್ಯ ವಾದನವೇ ಆಗಲಿ, ಒಟ್ಟು ಅವರಿಗೆ ಸಂಗೀತ ಆಲಿಸದೆ ಒಂದು ಕ್ಷಣವೂ ಇರಲಾಗುತ್ತಿರಲಿಲ್ಲವಂತೆ. ಹೀಗಾಗಿ, ಲಕ್ಷ್ಮೇಶ್ವರಕ್ಕೆ ಬಂದರೆ ತಮ್ಮ ‘ಸಂಗೀತದ ದಾಹ’ವನ್ನು ಇಂಗಿಸಿ, ತೃಪ್ತಿಪಡಿಸಬಲ್ಲಂಥವರು ಇರಲಿ ಎಂಬ ಕಾರಣಕ್ಕೆ ವಿಖ್ಯಾತ ಗಾಯಕರು ಮತ್ತು ವಾದನಕಾರರನ್ನು ಬಾಳಾಸಾಹೇಬರು ನಿಯಮಿಸಿಕೊಂಡಿದ್ದರಂತೆ. ಅವರು ಲಕ್ಷ್ಮೇಶ್ವರಕ್ಕೆ ಬರುತ್ತಿದ್ದದ್ದು ವರ್ಷದಲ್ಲಿ ಎರಡೋ ಮೂರೋ ಸಲ. ಅದೂ, ಗಣೇಶ ಚತುರ್ಥಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ. ದೊರೆ ಬರುತ್ತಾರೆಂದರೆ ಅದರ ರಂಗೇ ಬೇರೆ, ಕಳೆಯೇ ಬೇರೆ, ಸಂಭ್ರಮವೇ ಬೇರೆ… ಅವರ ಸ್ವಾಗತಕ್ಕೆ ನಡೆಯುತ್ತಿದ್ದ ತಯಾರಿಗಳೇ ‘ಬೇರೆ’. ಹೌದು. ‘ಬೇರೆ’ ಅಂದರೆ ಮತ್ತೆಲ್ಲೂ ಕಾಣದಷ್ಟು ‘ಬೇರೆ’ಯೇ… ಆ ತಯಾರಿಗಳ ಪೈಕಿ ಮೊದಲನೆಯದೆಂದರೆ ಊರಲ್ಲೆಲ್ಲ ಬಲೆಗಳನ್ನು ಹಾಕಿ, ಮಂಗಗಳನ್ನು ಹಿಡಿಯುವುದು. ಹಿಡಿದ ಮಂಗಗಳನ್ನು ಗಾಡಿಗಳಲ್ಲಿ ತುಂಬಿ ದೂರದ ಕಾಡುಗಳಿಗೆ ಬಿಟ್ಟುಬರುವುದು. ಬಾಳಾಸಾಹೇಬರಿಗೆ ಮಂಗಗಳೆಂದರೆ ಎಲ್ಲಿಲ್ಲದ ಭಯ. ಅವು ಕಚ್ಚಿಬಿಟ್ಟರೆ ಎಂಬ ಆತಂಕ. ಹೀಗಾಗಿ ಈ ‘ಮರ್ಕಟ ಬಂಧನ’ದ ಸಾಹಸ. ಹೀಗಾಗಿ, ಊರಲ್ಲಿ ಹೀಗೆ ಬಲೆ ಹಾಕುವವರು ಕಂಡರೆ ಬಾಳಾಸಾಹೇಬರು ಬರುವವರಿದ್ದಾರೆಂದೇ ಲೆಕ್ಕ. ಈ ಸುದ್ದಿ ಬೇಗನೆ ಹಬ್ಬಿಬಿಡುತ್ತಿತ್ತು. ಸರಿ. ಊರಲ್ಲಿ ಎಲ್ಲೆಡೆಯೂ ಸಡಗರ ಶುರು. ಅವರು ಆಗಮಿಸುವ ಮಾರ್ಗದುದ್ದಕ್ಕೂ ಇಕ್ಕೆಲಗಳಲ್ಲೂ ಇರುವ ಮನೆಗಳ ಗೋಡೆಗಳಿಗೆ ಸುಣ್ಣ ಕಾರಣೆ. ಮಾರ್ಗದಲ್ಲಿರುವ ತಗ್ಗು-ದಿನ್ನೆಗಳಿಗೆ ಕಲ್ಲು-ಮಣ್ಣು-ಗಚ್ಚು (ಗಾರೆ). ಕಿಲ್ಲೆಯ ಬಾಗಿಲುಗಳ ಕೀಲುಗಳಿಗೆ ಅವು ಕಿರುಗುಟ್ಟದಂತೆ ಎಣ್ಣೆ ಹಾಕಿಸುವುದು. ಅಲ್ಲಿಯ ಬಾವಿಯನ್ನು ಸ್ವಚ್ಛಗೊಳಿಸಿ ಸ್ನಾನದ ಮನೆಯ ನೀರು ಹಂಡೆಗಳನ್ನು ಹುಣಿಸೆ ಹಣ್ಣು ಹಚ್ಚಿ ತಿಕ್ಕಿ ಲಕಲಕಗೊಳಿಸುವುದು. ಸುತ್ತ ಮುತ್ತ ಎಲ್ಲೂ ಕಸ ಕಡ್ಡಿಗಳು ಇರದಂತೆ, ‘ಡಾಸ’ (ಸೊಳ್ಳೆ) ಮತ್ತು ‘ಬಾಸ’ (ಕೆಟ್ಟ ವಾಸನೆ) ಬರದಂತೆ ನೋಡಿಕೊಳ್ಳುವುದು. ಮತ್ತು , ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ. ಕಿಲ್ಲೆಯಲ್ಲಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳ ಆಯೋಜನೆ. ಇವು ದೊರೆಯ ಬರುವಿಕೆಗೆ ಮುನ್ನ ಕಿಲ್ಲೆಯ ವ್ಯವಸ್ಥಾಪಕರು ನೋಡಿಕೊಳ್ಳ ಬೇಕಾಗಿದ್ದ ಕೆಲಸಗಳು. ಇನ್ನು, ಊರಲ್ಲಿಯ ಎಲ್ಲ ಪಡಿತರ ಅಂಗಡಿಗಳಲ್ಲೂ ಎಲ್ಲ ಪಡಿತರದಾರರಿಗೂ ಸೋನಾ ಮಸೂರಿ ಅಕ್ಕಿ ಮತ್ತು ಕಾಲ್ಪಿ ಸಕ್ಕರಿ (ಕಲ್ಲು ಸಕ್ಕರೆ) ಸಿಗುವ ಏರ್ಪಾಡು ಮಾಡಿ, ಡಂಗುರ ಸಾರಿಸುತ್ತಿದ್ದರಂತೆ. ತಾವು ಬಂದಾಗ ಊರಿನ ಎಲ್ಲರೂ ಪಾಯಸದೂಟ ಉಣ್ಣಬೇಕೆಂಬುದು ದೊರೆಯ ಇಚ್ಚೆ. ಅವರು ಇರುತ್ತಿದ್ದದ್ದು ನಮ್ಮ ಊರ ಕಿಲ್ಲೆಯಲ್ಲಿ ಇದ್ದ ಮಹಲಿನಲ್ಲಿ. ಈ ಕಿಲ್ಲೆ ಒಂದು ಮಣ್ಣಿನ ಕೋಟೆ. (ಇದನ್ನು ವಿಜಾಪುರದ ಆದಿಲ್ ಶಾಹಿಯ ಮಾಂದಲಿಕ ಅಂಕುಶ್ ಖಾನ್ ಎಂಬಾತ ಕಟ್ಟಿಸಿದ ಎನ್ನುತ್ತಾರೆ.) ಬಾಳಾಸಾಹೇಬರು ಬರುವಾಗ ಅಲ್ಲಿಯ ‘ಪೂರ್ವ ದ್ವಾರ’ ಪೂರ್ತಿ ತೆರೆದುಕೊಳ್ಳುತ್ತಿತ್ತಂತೆ. ಅದರ ಮೂಲಕವೇ ಊರ ಗಣ್ಯರು ಸಂಸ್ಥಾನಿಕರ ದರ್ಶನ ಪಡೆದು, ಗೌರವ ಸಲ್ಲಿಸಿ, ಆತಿಥ್ಯ ಸೀಕರಿಸಿ, ಊರಿನ ಯೋಗಕ್ಷೇಮ, ಆಗುತ್ತಿರುವ ಸುಧಾರಣಾ ಕಾರ್ಯ ಇತ್ಯಾದಿ ವಿವರ ನೀಡುತ್ತಿದ್ದರಂತೆ. ನಾನು ನೋಡುವ ಹೊತ್ತಿಗೆ ಈ ‘ಪೂರ್ವ ದ್ವಾರ’ ಪೂರ್ತಿ ಬಿದ್ದು ಹೋಗಿತ್ತು. ಒಂದೆರಡು ಕಲ್ಲಿನ ಕಂಬಗಳು ಮಾತ್ರ ಗತಕಾಲದ ಗುರುತುಗಳಾಗಿ ನಿಂತುಕೊಂಡಿದ್ದವು. ಎರಡು ಆನೆಗಳು ಎಳೆದರೂ ಮಿಸುಗಲಾರದಷ್ಟು ಭಾರವಾದ್ದರಿಂದ ಈ ಕಲ್ಲುಗಳು ಕಂಡವರ ಮನೆಯ ಸ್ವತ್ತಾಗದೆ ಉಳಿದಿದ್ದವು. ಈ ಕಿಲ್ಲೆಗೆ ಒಂದು ದಕ್ಷಿಣ ದ್ವಾರವೂ ಇತ್ತು. ಇದರ ವಿಚಾರವನ್ನು ನಿಮಗೆ ಮುಂದಿನ ಕಂತಿನಲ್ಲಿ ವಿವರಿಸುತ್ತೇನೆ.  ]]>

‍ಲೇಖಕರು G

July 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. suresha deshkulkarni

    Dear Sri Gopal Vajapeyi Sir,
    An excellent narration of the history of your hometown Lakshmeshwar, and we are enjoying your style of describing the details !! Thanks for the historical brifing and we are eagerly waiting for the next issue of your column.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: