ಗೋಪಾಲ ವಾಜಪೇಯಿ ಕಾಲ೦ : ದರ್ಪಕ್ಕೆ ದರ್ಪ, ವಿನಯಕ್ಕೆ ವಿನಯ

ಸುಮ್ಮನೇ ನೆನಪುಗಳು- 7 

– ಗೋಪಾಲ ವಾಜಪೇಯಿ

‘ವಾದ್ಯ ನಾದದ ಮಳೆ’ಯನ್ನು ಸುರಿಸಿ ಬಾಳಾ ಸಾಹೇಬರ ಮನಸ್ಸು ಗೆದ್ದುಬಿಟ್ಟಿದ್ದನಲ್ಲ ದಶ ವಾದ್ಯ ಚತುರ ಶಿರಹಟ್ಟಿ ನಾಗಪ್ಪ… ಮರುದಿನ ಮತ್ತೆ ಅವನಿಗೆ ‘ದೊರೆಯ ಕರೆ’ ಹೋಯಿತು. ‘ಮತ್ಯಾಕಪಾ ಕರದ್ರು…?’ ಎಂದುಕೊಳ್ಳುತ್ತಲೇ ಕಿಲ್ಲೆಯ ದಾರಿ ಹಿಡಿದ ಹೊಲಕ್ಕೆ ಹೊರಟು ನಿಂತಿದ್ದ ನಾಗಪ್ಪ. ದರ್ಬಾರ್ ಹಾಲಿನಲ್ಲಿ ವಿಶೇಷ ಆಸನದಲ್ಲಿ ಆಸೀನರಾಗಿದ್ದರು ಬಾಳಾ ಸಾಹೇಬರು. ಹೋದವನೇ ‘ಸನ ಮಾಡಿ’ (ಇದು ‘ಶರಣು ಮಾಡು’ ಎಂಬುದರ ಗ್ರಾಮ್ಯರೂಪ) ದೂರದಲ್ಲಿಯೆ ನಿಂತ. ”ಊಹೂಂ… ಅಲ್ಲೆಲ್ಲಾ…. ಇಲ್ಲೆ ಬಾ, ಇಲ್ಲೆ…” ಎಂದು ತಮ್ಮ ಎದುರಿಗಿದ್ದ ಎಡ-ಬಲದ ಸಾಲು ಆಸನಗಳತ್ತ ಕೈ ತೋರಿಸಿ ಕರೆದರು. ನಾಗಪ್ಪನಿಗೆ ಹಿಂಜರಿಕೆ. ಒಬ್ಬ ಅಧಿಕಾರಿ ಈತನ ಬಳಿ ಬಂದು ತುಂಬ ಗೌರವದಿಂದ ‘ದಯವಿಟ್ಟು ಬನ್ನಿ’ ಎಂಬಂತೆ ವಿನಯದಿಂದ ಕೈಸನ್ನೆ ಮಾಡಿದ. ಒಮ್ಮೆ ಆಚೀಚೆ ನೋಡಿದ ನಾಗಪ್ಪನಿಗೆ, ಈ ಮೊದಲು ಆತನ ಮೇಲೆ ‘ಟಬರು’ ಮಾಡಿದ್ದನಲ್ಲ, ಆ ವ್ಯಕ್ತಿ ಕಂಡ. ಆಸಾಮಿಯ ಮುಖ ಸಪ್ಪಗಾಗಿತ್ತು. ತಲೆತಗ್ಗಿಸಿ ನಿಂತಿದ್ದ ಆತನನ್ನೇ ನೋಡುತ್ತ ನಾಗಪ್ಪ ಮುಂದುವರಿದ. ಅಧಿಕಾರಿ ತೋರಿದ ಆಸನದಲ್ಲಿ ಕೂತ. ತನ್ನ ಎಡ-ಬಲದಲ್ಲಿ, ಎದುರು ಸಾಲಿನಲ್ಲಿ ಕೂತವರೆಲ್ಲ ‘ದೊಡ್ಡ’ವರು. ಈತನ ಮೈ ಹಿಡಿಯಾಯಿತು. ”ಹೂಂ… ಗದ್ರೆ… ಕ್ಷಮಾ ಕೇಳ್ರಿ ನಾಗಪ್ಪ ಅವರಿಗೆ…” ಬಾಳಾ ಸಾಹೇಬರು ಗಡಸು ದನಿಯಲ್ಲಿ ಹೇಳಿದರು. ಆ ‘ಟಬರಪ್ಪ’ನ ಮುಖ ಇನ್ನಷ್ಟು ಸಣ್ಣಗಾಯಿತು. ಆತ ಗದ್ರೆ ವಾಮನರಾವ್. ಲಕ್ಷ್ಮೇಶ್ವರದ ಕಿಲ್ಲೆಯಲ್ಲಿ ಸಂಸ್ಥಾನಿಕರ ಅಧಿಕಾರಿ. ಮಿರಜದಿಂದಲೇ ಇಲ್ಲಿಗೆ ಬಂದವ. ಬಾಳಾ ಸಾಹೇಬರು ಇಲ್ಲಿಲ್ಲದ ಅವಧಿಯಲ್ಲಿ ತಾನೇ ಕಿಲ್ಲೆಯ ಮಾಲಿಕನೆಂಬಂತೆ ವರ್ತಿಸುತ್ತಿದ್ದ. ಆತನ ದರ್ಪ, ಆಟಾಟೋಪಗಳ ಕುರಿತು ಸಾಕಷ್ಟು ದೂರುಗಳು ದೊರೆಯ ಕಿವಿ ಮುಟ್ಟಿದ್ದವು. ಈಗ ಅವರೇ ಸ್ವತಃ ಆತನ ಟಬರನ್ನು ಕಣ್ಣಾರೆ ಕಂಡಿದ್ದರು. ತನ್ನ ಗತಿ ಇನ್ನೇನೋ ಎಂಬ ಆತಂಕದಲ್ಲಿಯೇ ನಿಂತಿದ್ದ ವಾಮನರಾವ್ ಒಳಗೊಳಗೆ ಏನೋ ಲೆಕ್ಕ ಹಾಕುತ್ತಲಿದ್ದ : ‘ದೊರೆಯ ಅಪ್ಪಣೆ. ಮೀರುವ ಹಾಗಿಲ್ಲ. ಅವರು ಹೇಳಿದಂತೆ ಕ್ಷಮೆ ಕೇಳಿದರಾಯಿತು. ಆ ಮೇಲೆ ಈ ನಾಗಪ್ಪನನ್ನ ಹೇಗೆ ಆಡಿಸುವುದು ಅಂತ ಯೋಚಿಸಿದರಾಯಿತು. ಹಲಿಗೆ ಬಾರಿಸುವ ಹಳ್ಳಿಯ ಯಕ್ಕಃಚಿತ್ ರೈತ…ಇವನಿಂದಾಗಿ ನಾನು ದೊರೆಯ ಕೆಂಗಣ್ಣಿಗೆ ಗುರಿಯಾಗುವಂತಾಯಿತು. ನನ್ನ ಮುಂದೆ ಈತನ ಆಟ ಹೇಗೆ ನಡೆಯುತ್ತದೋ ನೋಡೋಣ…’ ಎಂದುಕೊಂಡೇ ಮುಂದಡಿ ಇಟ್ಟ. ನಾಗಪ್ಪನ ಎದುರು ನಿಂತು, ಕೈಜೋಡಿಸಿ, ”ತಪ್ಪಾತು…ಇನ್ನೊಮ್ಮೆ ಹೀಂಗ ಎಂದೂ ಮಾಡೋದಿಲ್ಲಾ…” ಎಂದು ಎಲ್ಲರಿಗೂ ಕೇಳುವಂತೆ ಹೇಳಿದ. ಆ ನಂತರ ಬಾಳಾ ಸಾಹೇಬರತ್ತ ತಿರುಗಿ, ”ದಯಮಾಡಿ ಕ್ಷಮಸಬೇಕು ಸಾಹೇಬ್…” ಎಂದು ಕೈಮುಗಿದ. ”ನಿಮ್ಮನ್ನ ಈಗಲ್ಲಾ ಕ್ಷಮಸೋದು. ಅಲ್ಲೆ ಬರ್ರಿ ಮಿರಜಕ್ಕ… ಅಲ್ಲೇ ಮಾಡ್ತೀನಿ ನಿಮ್ ವಿಚಾರಣಿ…” ಎಂದು ಕಾರಭಾರಿಗೆ ಏನೋ ಸನ್ನೆ ಮಾಡಿದರು. ಗದ್ರೆ ಗದಗದ ನಡುಗಿಬಿಟ್ಟ. ಬಾಳಾ ಸಾಹೇಬರು ವಜ್ರಕ್ಕಿಂತ ಕಠಿಣರು, ಕುಸುಮಕ್ಕಿಂತ ಮೃದು ಸ್ವಭಾವದವರು ಎಂಬ ಸತ್ಯ ಅವನಿಗೆ ಗೊತ್ತಿತ್ತು. ಅವರು ಮಾಡುವ ವಿಚಾರಣೆ ಅಂದರೆ ತನ್ನ ಕಥೆ ಮುಗಿದಂತೆಯೇ… ಬಾಳಾ ಸಾಹೇಬರು ಇಂದೋರಿನ ರಾಜಕುಮಾರ್ ಕಾಲೇಜಿನಲ್ಲಿ ಓದಿ ಪದವಿ ಪಡೆದವರು. ಸಂಸ್ಕೃತದಲ್ಲಿ ಹೇಗೋ ಹಾಗೇ ಇಂಗ್ಲಿಷಿನಲ್ಲೂ ಅಸಮಾನ ಪಾಂಡಿತ್ಯ ಉಳ್ಳವರು. ಅವರಿಗೆ ‘ವಿನಯ’ವೂ ಗೊತ್ತಿತ್ತು, ‘ದರ್ಪ’ವೂ ಗೊತ್ತಿತ್ತು. ‘ಎಳೆ ಸಿಕ್ಕರೆ ಹಚ್ಚಡ ನುಂಗು’ವಂಥ ನಿಶಿತಮತಿ. ಯಾರು, ಏನು, ಎತ್ತ ಎಂಬುದನ್ನು ಕಣ್ಣಲ್ಲೇ ಅಳೆಯಬಲ್ಲ ಚಾಣಾಕ್ಷ. ಅಂಥ ಅಪೂರ್ವ ತರ್ಕಶಕ್ತಿ ಅವರದು. ಆದ್ದರಿಂದ, ಬಾಳಾ ಸಾಹೇಬರ ಬಗ್ಗೆ ಜನಕ್ಕೆ ಭಯ-ಗೌರವಗಳೆರಡೂ ಇದ್ದವು. ಎಲ್ಲಿಯೇ ಇದ್ದರೂ ತಮ್ಮ ಆಡಳಿತ ಪ್ರದೇಶಗಳ ಹಾಲ್-ಚಾಲ್ ಬಾಳಾ ಸಾಹೇಬರಿಗೆ ಗೊತ್ತಾಗಿಬಿಡುತ್ತಿತ್ತು. ಅಂಥ ‘ವಿಚಕ್ಷಕ ವ್ಯವಸ್ಥೆ’ ಅವರದು. ಕಾನೂನಾತ್ಮಕ ವಿಚಾರಕ್ಕೆ ಬಂದರೆ ಅವರೇ ಸಂಸ್ಥಾನದ ಪರಮೋಚ್ಚ ನ್ಯಾಯದೇವತೆ. ತೀರ ಕ್ಲಿಷ್ಟವೆನ್ನಬಹುದಾದ, ಅತ್ಯಂತ ಘಾತುಕವೆನ್ನಬಹುದಾದ ಪ್ರಕರಣಗಳು ಮಾತ್ರ ಅವರ ಕಡೆ ಬರುತ್ತಿದ್ದವು. ಆದರೆ, ತಮ್ಮ ಅರಮನೆಗೆ ಸಂಬಂಧಿಸಿದ ‘ಅವಿಧೇಯತೆ’, ‘ಅಂಧಾದುಂದಿ ವರ್ತನೆ’ ಇತ್ಯಾದಿ ಪ್ರಕರಣಗಳನ್ನು ತಾವೇ ನಿರ್ವಹಿಸುತ್ತಿದ್ದರು. ದಾಖಲೆ, ಹಕ್ಕುಪತ್ರ, ನೋಂದಾವಣಿ ಮುಂತಾದವಕ್ಕೆ ಸಂಬಂಧಿಸಿದಂತೆ ಮಿರಜ್ ಸ್ಟೇಟ್ ತನ್ನದೇ ಆದ ಛಾಪಾ ಕಾಗದಗಳನ್ನು (ಸ್ಟಾಂಪ್ ಪೇಪರ್) ಹೊಂದಿತ್ತು. ಇವು ಎರಡಾಣೆಯಿಂದ ಹಿಡಿದು ಹತ್ತು ರೂಪಾಯಿಗಳ ವರೆಗಿನ ಮೌಲ್ಯದವಾಗಿರುತ್ತಿದ್ದವು. (ನಮ್ಮ ಮನೆಯಲ್ಲಿ ಸಿಕ್ಕ ಒಂದು ಹಳೆಯ ‘ಹಕ್ಕು ಪತ್ರ’ ಎರಡು ರೂಪಾಯಿ ಮೌಲ್ಯದ ಛಾಪಾ ಕಾಗದದ ಮೇಲೆ ಬರೆಯಲ್ಪಟ್ಟಿತ್ತು. ಅದಕ್ಕೆ ಮಿರಜ್ ಸ್ಟೇಟಿನದೇ ಮೊಹರಿತ್ತು.) ತನ್ನದೇ ಆದ ಒಂದು ಪ್ರತ್ಯೇಕ ಬ್ಯಾಂಕನ್ನೂ ಮಿರಜ್ ಸ್ಟೇಟ್ ಹೊಂದಿತ್ತು. ಅದರದೊಂದು ಶಾಖೆ (‘ಮಿರಜ್ ಸ್ಟೇಟ್ ಬ್ಯಾಂಕ್’) ನಮ್ಮ ಊರಲ್ಲಿ ಮೊನ್ನೆ ಮೊನ್ನೆಯತನಕ ಇದ್ದದ್ದನ್ನು ನಾನು ನೋಡಿದ್ದೇನೆ. (ಆಮೇಲೆ ಅದು ಒಂದು ದೊಡ್ಡ ಬ್ಯಾಂಕಿನಲ್ಲಿ ವಿಲೀನಗೊಂಡಿತು.) ಅವರ ಕಾಲದಲ್ಲಿಯೇ ಮಿರಜ್ ಮತ್ತು ಲಕ್ಷ್ಮೇಶ್ವರ ಎರಡೂ ಕಡೆ ಮುನಿಸಿಪಾಲಟಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಬಾಳಾ ಸಾಹೇಬರು ಸಾರ್ವಜನಿಕ ಸ್ವಾಸ್ಥ್ಯದ ಬಗ್ಗೆಯೂ ಗಮನ ಹರಿಸಿದವರು. ಮಿರಜಿನಲ್ಲಿ ಡಾ. ಭಡಭಡೆ ಎಂಬ ಪ್ರಖ್ಯಾತ ವೈದ್ಯರು ಅವರಿಗೆ ಆತ್ಮೀಯರೂ, ಸಾರ್ವಜನಿಕ ಸ್ವಾಸ್ಥ್ಯ ಸಂಬಂಧಿ ಸಲಹಾಕಾರರೂ ಆಗಿದ್ದರು. ನಾನು ಚಿಕ್ಕವನಿದ್ದಾಗ, ನಮ್ಮ ಊರಲ್ಲಿ ಅದೇ ಮನೆತನದ ಒಬ್ಬ ಡಾಕ್ಟರರು ಇದ್ದುದನ್ನು ನೋಡಿದ್ದೇನೆ. ಬಹುಶಃ ಅವರು ಮಿರಜಿನಿಂದಲೇ ನಮ್ಮ ಊರಿಗೆ ಬಂದು ನೆಲೆಸಿರಬೇಕು. (ಅವರ ಮಗ ಶ್ರೀ ಒಂದನೆಯ ಕ್ಲಾಸಿನಿಂದಲೂ ನಮ್ಮ ಸಹಪಾಠಿ. ಈಗ ಅವನೂ ನಮ್ಮೂರಲ್ಲೇ ಹಿರಿಯ ಡಾಕ್ಟರ್.) ಇಂಥ ಬಾಳಾ ಸಾಹೇಬರು ಆ ದಿನ ಶಿರಹಟ್ಟಿ ನಾಗಪ್ಪನನ್ನು ಇನ್ನೂ ಒಂದು ಅಚ್ಚರಿಗೆ ದೂಡಿದರು. ಅದೇನೆಂದರೆ ಅವನನ್ನು ತಮ್ಮ ಆಸ್ಥಾನದ ‘ನವಮಣಿ’ಗಳಲ್ಲಿ ಒಬ್ಬ ಎಂದು ಘೋಷಿಸಿದ್ದು. ಅವನಿಗೆ ಕೆಲವು ವಿಶೇಷ ಸವಲತ್ತುಗಳನ್ನು ಕೊಡಿಸಿದ್ದು. ಮತ್ತು ಆತ ಕೇಳಿದ ಚರ್ಮವಾದ್ಯಗಳನ್ನು ಕೊಡಿಸುವ ವ್ಯವಸ್ಥೆ ಮಾಡಿದ್ದು.  ]]>

‍ಲೇಖಕರು G

July 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This