ಗೋಪಾಲ ವಾಜಪೇಯಿ ಕಾಲ೦ : ದಶ ವಾದ್ಯ ಚತುರ!

ಸುಮ್ಮನೇ ನೆನಪುಗಳು-5

– ಗೋಪಾಲ ವಾಜಪೇಯಿ

ಗಣೇಶ ಚತುರ್ಥಿಯಲ್ಲಿ ಒಂಬತ್ತು ದಿನದ ಕಾರ್ಯಕ್ರಮ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗಣೇಶನನ್ನು ಇಟ್ಟು ಪೂಜೆ ಮಾಡುವುದಂತೂ ಸರಿಯೇ. ಆದರೆ, ಕಿಲ್ಲೆಯ ಗಣೇಶನ ಪೂಜೆಯನ್ನು ಎಂದಿಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಯಾಕಂದರೆ, ಅದು ದೊರೆಯ ಅರಮನೆಯಲ್ಲಿ ನಡೆಯುವ ಪೂಜೆ ! ಸ್ವತಃ ಬಾಳಾ ಸಾಹೇಬರೇ ಮಾಡುವ ಪೂಜೆ ! (ಈ ಅರಮನೆಯ ಬಗ್ಗೆ ಸ್ಥೂಲ ಕಲ್ಪನೆ ಬರಬೇಕೆಂದರೆ ನೀವು ಬೆಂಗಳೂರಿನ ಟಿಪ್ಪು ಸುಲ್ತಾನನ ಅರಮನೆ, ಅಥವಾ ಇಕ್ಕೇರಿಯ ಶಿವಪ್ಪನಾಯಕನ ಅರಮನೆಯನ್ನು ಕಣ್ಣೆದುರು ತಂದುಕೊಳ್ಳಿ.) ಅದರ ದರ್ಬಾರ ಹಾಲ್ ಅಥವಾ ಸಭಾಂಗಣದಲ್ಲೊಂದು ವಿಶಾಲವಾದ ಪೂಜಾಗೃಹ. ಅದರಲ್ಲಿ ಆಳೆತ್ತರದ ಸುಂದರವಾದ ಬೆಳ್ಳಿಯ ಮಂಟಪ. ಅದರೊಳಗೆ ಎಷ್ಟು ನೋಡಿದರೂ ಮತ್ತೆ ಮತ್ತೆ ನಿಂತು ನೋಡಬೇಕೆನಿಸುವಂಥ ಎರಡು ಅಡಿ ಎತ್ತರದ ಬೆಳ್ಳಿಯ ಗಣೇಶನ ವಿಗ್ರಹ. ಅದನ್ನಲಂಕರಿಸಿದ ಚಿನ್ನದ ಆಭರಣಗಳು. ಗಣೇಶನ ಕೈಯಲ್ಲಿ ಚಿನ್ನದ ಮೋದಕ. (ಈ ಬೆಳ್ಳಿಯ ಗಣೇಶನ ವಿಗ್ರಹ ಸದಾಕಾಲವೂ ಅದೇ ಸ್ಥಾನದಲ್ಲಿಯೇ ಇರುತ್ತಿತ್ತು. ಉಳಿದ ದಿನಗಳಲ್ಲಿ ಅದನ್ನು ಗಾಜಿನ ಕಪಾಟಿನಲ್ಲಿ ಇರಿಸಲಾಗಿರುತ್ತಿತ್ತು.) ಬೆಳ್ಳಿಯ ಮಂಟಪದ ಅಕ್ಕಪಕ್ಕದಲ್ಲಿ ಆರು ಅಡಿ ಎತ್ತರದ ದೀಪಸ್ತಂಭಗಳು. ಅವೂ ಬೆಳ್ಳಿಯವೇ. ಇವನ್ನೆಲ್ಲ ಕಾಯುವುದಕ್ಕಾಗಿಯೇ ವಿಶೇಷ ಸಿಬ್ಬಂದಿಯೂ ಇತ್ತು. ಆದರೆ ಪ್ರತಿ ವರ್ಷದ ಪೂಜೆಗೆ ಪ್ರತಿಷ್ಠಾಪಿಸುತ್ತಿದ್ದದ್ದು ನಾಲ್ಕಡಿ ಎತ್ತರದ, ಎದ್ದು ತೋರುವಂಥ, ಸುಂದರ ಗಣೇಶನ ಮಣ್ಣಿನ ಮೂರ್ತಿ. ಇದನ್ನು ಮಹಾರಾಷ್ಟ್ರದಿಂದಲೇ ಮಾಡಿಸಿ ತರಿಸುತ್ತಿದ್ದರು. ಪೂಜೆ-ಪುನಸ್ಕಾರಾದಿಗಳು ನಡೆಯುತ್ತಿದ್ದದ್ದು ಈ ‘ಮೃಣ್ಮೂರ್ತಿ’ಗೇನೇ. ಎದುರಿಗೆ ಇರಿಸಿದ ಟೀಪಾಯ್ ಮೇಲೆ ದಂತದ ಇನ್ ಲೇ. ಅದರ ಮೇಲೆ ಚಿನ್ನದ ಹರಿವಾಣದಲ್ಲಿ ನಾನಾ ವಿಧ ಫಲ-ಪುಷ್ಪಗಳ ರಾಶಿ. ಅಲ್ಲೆಲ್ಲ ನಮುನಮೂನೆಯ ಧೂಪ-ಸಾಂಬ್ರಾಣಿ-ಲೋಬಾನಗಳ ಹೊಗೆ. ನಾನಾ ವಾದ್ಯ ಸೇವೆಯೊಂದಿಗೆ, ಮಂತ್ರೋಚ್ಹಾರಣೆಯೊಂದಿಗೆ ಶಾಸ್ತ್ರೋಕ್ತವಾಗಿ ನಡೆಯುತ್ತಿದ್ದ ಪೂಜೆ ಅದು. ಒಂದೆಡೆ ರಾಣೀ ಸಾಹೇಬರು ಮತ್ತವರ ಪರಿಚಾರಕ ವರ್ಗದ ಸ್ತ್ರೀಯರು, ಇನ್ನೊಂದೆಡೆ ಬಾಳಾ ಸಾಹೇಬರ ಪರಿಚಾರಕ ವರ್ಗದ ಪುರುಷರು, ಮಗದೊಂದೆಡೆ ಆಸ್ಥಾನದ ‘ನವಮಣಿ’ಗಳು ಆ ವೇಳೆಗೆ ಹಾಜರಿರುತ್ತಿದ್ದರು. ಈ ‘ನವಮಣಿ’ಗಳಲ್ಲಿ ವೇದ – ಶಾಸ್ತ್ರ ಪಾರಂಗತ ಶ್ರೀಪಾದ ದೀಕ್ಷಿತ ವಾಜಪೇಯಿ, ಸಂಗೀತ ವಿದುಷಿ ಅಭಿನಯ ಚತುರೆ ಬಚ್ಹಾಸಾನಿ ಮತ್ತು ದಶ ವಾದ್ಯ ಚತುರ ಶಿರಹಟ್ಟಿ ನಾಗಪ್ಪ ಈ ಮೂವರು ಅತಿ ವಿಶಿಷ್ಟರು. ಅವರನ್ನು ಬಾಳಾ ಸಾಹೇಬರು ವಿಶೇಷವಾಗಿ ಗೌರವಿಸುತ್ತಿದ್ದರು. ಈ ಹಬ್ಬದಲ್ಲಿ ‘ದಶ ವಾದ್ಯ ಚತುರ’ ಶಿರಹಟ್ಟಿ ನಾಗಪ್ಪನೆ ಮುಖ್ಯ ಆಕರ್ಷಣೆ. ನಿಮಗೆ ಮೊದಲೇ ಹೇಳಿದಂತೆ ಬಾಳಾ ಸಾಹೇಬರು ಸಂಗೀತಪ್ರಿಯರು ಅಷ್ಟೇ ಅಲ್ಲ ಪೋಷಕರು ಕೂಡ. ಹೀಗಾಗಿ ತಮ್ಮ ರಾಜ್ಯದ ಸಂಗೀತ ಪ್ರತಿಭೆಗಳನ್ನು ಗುರುತಿಸಿ, ಗೌರವಿಸುವ ಪರಿಪಾಠವನ್ನು ಅವರು ಹಾಕಿಕೊಂಡಿದ್ದರು. ಹಾಗೊಮ್ಮೆ ಅವರ ಕಣ್ಣಿಗೆ ಬಿದ್ದು, ಮನದಲ್ಲಿ ಮನೆಮಾಡಿ ನಿಂತವನು ಈ ಶಿರಹಟ್ಟಿ ನಾಗಪ್ಪ. ಆತನೊಬ್ಬ ಕೃಷಿಕ. ಚರ್ಮ ವಾದ್ಯಗಳನ್ನು ನುಡಿಸುವುದು ಆತನ ಹವ್ಯಾಸವಾಗಿತ್ತು. ಅದರಲ್ಲೂ ಅಪರೂಪದ ಚರ್ಮವಾದ್ಯಗಳನ್ನೇ ಆತ ಕರಗತಗೊಳಿಸಿಕೊಂಡಿದ್ದ. ಹೀಗೊಮ್ಮೆ ಬಾಳಾ ಸಾಹೇಬರ ಸವಾರಿ ನಮ್ಮ ಊರಿನತ್ತ ಬರುತ್ತಿದ್ದಾಗ ಆತನ ವಾದ್ಯದ ನಾದಕ್ಕೆ ಮನಸೋತು, ಅದು ನಿಲ್ಲುವವರೆಗೂ ಸವಾರಿಯನ್ನು ಅಲ್ಲಿಯೇ ಇರಹೇಳಿ, ಆಮೇಲೆ ಮುಂದುವರಿದರಂತೆ. ಅವರು ಕಿಲ್ಲೆ ತಲಪಿದ ಕೂಡಲೇ ಮಾಡಿದ ಮೊದಲ ಕೆಲಸವೆಂದರೆ ಶಿರಹಟ್ಟಿ ನಾಗಪ್ಪನಿಗೆ ಕರೆ ಕಳುಹಿಸಿದ್ದು. ದೊರೆಯ ಕರೆಯಿಂದ ಗಾಬರಿಗೊಂಡು ಗಡಬಡಿಸಿಕೊಂಡು ಕಿಲ್ಲೆಗೆ ಓಡಿ ಬಂದಿದ್ದ ನಾಗಪ್ಪ. ಅವನನ್ನು ಪ್ರೀತಿಯಿಂದಲೇ ಮಾತಾಡಿಸಿದ ಬಾಳಾ ಸಾಹೇಬರು, ”ಇಂದು ಸಂಜೆ ನಿನ್ನ ವಾದ್ಯ ವಾದನದ ‘ಕೈ ಚಳಕ’ವನ್ನು ನಮ್ಮೆದುರು ಪ್ರದರ್ಶಿಸಬೇಕು,” ಎಂದರಂತೆ. ನಾಗಪ್ಪನ ವಾದ್ಯ ವಾದನದ ಸವಿಯುಣ್ಣಬೇಕೆಂಬುದು ಅವರ ‘ಆಶೆ’ಯಾಗಿತ್ತು, ಅಷ್ಟೇ. ಆದರೆ, ಅದು ಆಳುವ ದೊರೆಯ ‘ಆದೇಶ’ವೆಂದು ಭಾವಿಸಿದ ನಾಗಪ್ಪ, ಆ ಸಂಜೆಗೆ ಚಕ್ಕಡಿಯಲ್ಲಿ ವಾದ್ಯಗಳನ್ನು ಹೇರಿಕೊಂಡು ಕಿಲ್ಲೆಯ ಅಂಗಳಕ್ಕೆ ಬಂದಿಳಿದನಂತೆ. ಅವನ್ನೆಲ್ಲ ಸಾಲಾಗಿ ಜೋಡಿಸಿಟ್ಟುಕೊಂಡು, ದೊರೆಯ ಬರುವಿಕೆಯನ್ನೇ ಎದುರುನೋಡುತ್ತ ನಿಂತನಂತೆ. ನಗುನಗುತ್ತಲೇ ಬಂದ ಬಾಳಾ ಸಾಹೇಬರಿಗೆ ಅಚ್ಚರಿ. ತಮ್ಮೆದುರು ಸಾಲಾಗಿ ಜೋಡಿಸಿಡಲ್ಪಟ್ಟ ವಾದ್ಯಗಳನ್ನು ಕಂಡು ಮೂಕವಿಸ್ಮಿತರಾದರಂತೆ. ಅಲ್ಲಿದ್ದದ್ದು ಊಟದ ತಟ್ಟೆಯಷ್ಟು ಚಿಕ್ಕ ಆಕಾರದಿಂದ ಹಿಡಿದು ಬಂಡಿಯ ಗಾಲಿಯಷ್ಟು ದೊಡ್ಡ ಆಕಾರದವರೆಗಿನ ಚರ್ಮವಾದ್ಯಗಳು…! ”ನೀನು ಬೆಳಿಗ್ಗೆ ಹೊಲದಾಗ ನುಡಸ್ತಿದ್ದೆಲ್ಲಾ, ಆ ವಾದ್ಯ ಯಾವುದು? ತೋರಸು,” ಎಂದು ಕೇಳಿದರು. ”ದೊರೀ, ಅದನ್ನ ನಾ ಮನೀಗೆ ತರೂದಿಲ್ರಿ. ಅಲ್ಲೆ ಹೊಲದ ಗುಡಸಲದಾಗs ಇಟ್ಟಿರತೀನ್ರಿ…” ”ಅದನ್ನ ‘ಕೇಳ’ಬೇಕಲ್ಲಾ ನಾವು…” ”ಹಾಂಗಿದ್ರ, ನಾಳೆ ತೋಂಬರತೀನ್ರಿ ದೊರೀ…” ಎಂದು ನಾಗಪ್ಪ ಕೈ ಮುಗಿದ. ”ನಾಳೆ ಅಲ್ಲೋ… ಇವತ್ತs ಕೇಳಬೇಕು ನಮ್ಮ ರಾಜಾ ಸಾಹೇಬ್ರು…” ಎಂದು ಒಬ್ಬ ಅಬ್ಬರಿಸಿದ. ಥಟ್ಟನೆ ಬಾಳಾ ಸಾಹೇಬರು ಆ ‘ಅಬ್ಬರದವ’ನತ್ತ ಮುಖ ಹೊರಳಿಸಿದರು. ಅವರ ಕಣ್ಣುಗಳು ಕೆಂಡದುಂಡೆಯಾಗಿದ್ದವು. ಅವನನ್ನು ಹಾಗೇ ಕೆಕ್ಕರಿಸಿ ನೋಡುತ್ತ,, ”ಕಲಾವಿದ ಅಂವಾ… ಕಲಾವಿದರ ಮ್ಯಾಲೆ ಹಾಂಗೆಲ್ಲಾ ಟಬರು ಮಾಡಬಾರದು ನೀವು. ಖಬರದಾರ್….” ಆತ ಸುಮ್ಮನಾಗಿಬಿಟ್ಟ. ಆಮೇಲೆ ಶಾಂತವಾದ ಬಾಳಾ ಸಾಹೇಬರು, ಹಾಂಗಿದ್ರ ಇವತ್ತ ಯಾವದಾದರೂ ವಾದ್ಯ ನುಡಸು… ಕೇಳೂಣು,” ಎಂದರು. ನಾಗಪ್ಪ ಒಂದು ವಾದ್ಯವನ್ನು ಕೈಗೆತ್ತಿಕೊಂಡು, ನಾಲ್ಕೂ ದಿಕ್ಕಿಗೂ ಭಕ್ತಿಯಿಂದ ನಮಿಸಿ, ದೊರೆಗೂ ವಂದಿಸಿ ನುಡಿಸಲು ಆರಂಭಿಸಿದ… ಹಾಗೇ ಆತ ಎಷ್ಟು ಹೊತ್ತು ಮೈಮರೆತು ನುಡಿಸಿದನೋ, ಬಾಳಾ ಸಾಹೇಬರು ಎಷ್ಟು ಹೊತ್ತು ತಲ್ಲೀನರಾಗಿ ಆಲಿಸಿದರೋ… ಕೊನೆಗೊಮ್ಮೆ , ”ನಾಳಿಯಿಂದ ಪ್ರತಿ ಸಂಜಿಗೆ ನಿನ್ನ ವಾದ್ಯದ ನಾದ ಈ ಕಿಲ್ಲೇದ ತುಂಬ ಪ್ರತಿಧ್ವನಿಸ್ತದ…” ಎಂದು ಅಂದಿನ ಬೈಠಕ್ಕು ಮುಗಿಸಿದರಂತೆ.]]>

‍ಲೇಖಕರು G

July 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This