ಗೋಪಾಲ ವಾಜಪೇಯಿ ನೆನಪಿಸಿಕೊ೦ಡ ’ಹಳದಿ ಚೇಳು’

– ಗೋಪಾಲ ವಾಜಪೇಯಿ

ಸುದರ್ಶನ ದೇಸಾಯಿ : ಮರೆಯಾಗಿ ಹೋದ ‘ಶರವೇಗದ ಸರದಾರ’

(ಒಂದು ನೆನಪು)

 

ಎದುರಾದಾಗಲೆಲ್ಲ ಅವರನ್ನು ನಾನು ‘ಹಳದಿ ಚೇಳು’ ಎಂದು ಛೇಡಿಸುತ್ತಿದ್ದೆ. ಅವರು ಅದೇ ಮುಗುಳ್ನಗೆಯೊಂದಿಗೆ ”ನಮಸ್ಕಾರ್ರೀ ‘ದೊಡ್ಡಪ್ಪ’…” ಎನ್ನುತ್ತಿದ್ದರು.

ಆ ಕೂಡಲೇ ನಮ್ಮಿಬ್ಬರಿಂದಲೂ ತಂತಾನೇ ‘ಒಂದು’ ದೀರ್ಘ ನಗೆ ಹೊಮ್ಮುತ್ತಿತ್ತು, ನಮ್ಮ ಕೈಗಳು ಬೆಸೆದುಕೊಳ್ಳುತ್ತಿದ್ದವು. ಕಾಲುಗಳು ಕ್ಯಾಂಟೀನಿನತ್ತ ನಮ್ಮನ್ನು ಎಳೆದೊಯ್ಯುತ್ತಿದ್ದವು. (‘ಹಳದಿ ಚೇಳು’ ಅವರ ಸುಪ್ರಸಿದ್ಧ ಪತ್ತೇದಾರಿ ಕಾದಂಬರಿ. ‘ದೊಡ್ಡಪ್ಪ’ ಜಾನಪದ ಶೈಲಿಯ ನನ್ನ ಮೊದಲ ಸ್ವತಂತ್ರ ನಾಟಕ ಕೃತಿ.) ಇದು ಮೊನ್ನೆ ನಮ್ಮನ್ನಗಲಿದ ಹಿರಿಯ ಗೆಳೆಯ ಕಾದಂಬರಿಕಾರ ಸುದರ್ಶನ ದೇಸಾಯಿ ಅವರ ಸ್ನೇಹದ ಪರಿ. ಅವರು ಹಾಗೆಯೇ. ಸದಾ ಹಸನ್ಮುಖಿ. ”ಗೆಳೆತನಕ್ಕೆ ಬೇಕಾದರೆ ಕೊರಳನ್ನೂ ಕೊಡಲು ಸಿದ್ಧ,” ಎನ್ನುವ ಸ್ನೇಹಜೀವಿ. ನನ್ನ ಅವರ ಸ್ನೇಹ ಸರಿಸುಮಾರು ಮೂರೂವರೆ ದಶಕಗಳಷ್ಟು ಹಳೆಯದು. ನನಗಿಂತ ಏಳೆಂಟು ವರ್ಷ ಹಿರಿಯರಾದರೂ ದೇಸಾಯರು ವಯಸ್ಸಿನ ಅಂತರ ಮರೆತು ನನ್ನೊಂದಿಗೆ ಒಡನಾಡಿದವರು. ನಾನಾಗ, ಹುಬ್ಬಳ್ಳಿಯಲ್ಲಿ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಅಷ್ಟೊತ್ತಿಗಾಗಲೇ ಅವರು ‘ಹೆಸರಾಂತ’ ಪತ್ತೇದಾರಿ ಕಾದಂಬರಿಕಾರ. ವೃತ್ತಿಯಲ್ಲಿ ಅವರು ಸರಕಾರೀ ಪ್ರಾಥಮಿಕ ಶಾಲೆಯ ಹಿಂದಿ ಮಾಸ್ತರ್. ಹೀಗಾಗಿ ಒಮ್ಮೊಮ್ಮೆ ಅಚ್ಚೆಯಿಂದ ಅವರನ್ನು ‘ದೇಸಾಯಿ ಮಾಸ್ತರ್’ ಎಂದೂ ಕರೆಯುತ್ತಿದ್ದೆ. ಹುಬ್ಬಳ್ಳಿಯ ‘ಸಂಯುಕ್ತ ಕರ್ನಾಟಕ’ ಕಚೇರಿಯ ಆವರಣವೆಂದರೆ ಆಗ ಸಾಹಿತಿ, ಲೇಖಕರ ಆಡುಂಬೊಲ. ನಿತ್ಯವೂ ಹಲವಾರು ಜನ ಸಾಹಿತಿಗಳು, ಲೇಖಕರು ಬಂದು ನಮ್ಮೊಡನೆ ಕೂತು ಎಷ್ಟೋ ವಿಷಯಗಳನ್ನು ಚರ್ಚಿಸುತ್ತ, ತಮಗೆ ಅರಿವಿಲ್ಲದಂತೆಯೇ ಹೊಸ ಹೊಸ ಪರಿಕಲ್ಪನೆಗಳ ಕುರಿತು ಸುಳುಹು ಕೊಟ್ಟುಬಿಟ್ಟಿರುತ್ತಿದ್ದರು. ಕೆಲವರು ಅಲ್ಲಿಯೇ ಕೂತು ಲೇಖನ ಬರೆದು ಕೊಟ್ಟೇ ಹೋಗುತ್ತಿದ್ದರು. ಆಗ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಲೈಬ್ರರಿ ಬಿಟ್ಟರೆ ನಮ್ಮ ಕಚೇರಿಯೇ ಎರಡನೆಯ ಅತಿ ದೊಡ್ಡ ಮಾಹಿತಿ ಕಣಜ. ಸುದರ್ಶನ ದೇಸಾಯಿ ಬಂದರೆ ನಮಗಿಷ್ಟು ‘ಚಹದ ನೈವೇದ್ಯ’ ತೋರಿಸಿ ನೇರ ನಮ್ಮ ಲೈಬ್ರರಿ ಸೇರಿಕೊಳ್ಳುತ್ತಿದ್ದರು. ಆಮೇಲೆ ತಾಸೆರಡು ತಾಸು ಕೂತು ತಮಗೆ ಬೇಕಾದ ಆಕರ ಗ್ರಂಥದಿಂದ ಮಾಹಿತಿಯ ಟಿಪ್ಪಣಿ ಮಾಡಿಕೊಂಡು ನಮ್ಮೆಡೆಗೆ ಬರುತ್ತಿದ್ದರು. ಖ್ಯಾತ ಸಂಶೋಧಕ ಡಾ. ಶ್ರೀನಿವಾಸ ಹಾವನೂರರೂ ಹಾಗೆಯೇ. ಅವರು ಕೆಲವೊಮ್ಮೆ ಒಂದೆರಡು ದಿನ ನಮ್ಮ ಲೈಬ್ರರಿಯಲ್ಲೇ ಕೂತು, ಕಸ್ತೂರಿಯ ‘ಪುಸ್ತಕ ವಿಭಾಗ’ ಅಂಕಣಕ್ಕೆಂದು ಒಂದು ಪುಸ್ತಕದ ಸಂಗ್ರಹವನ್ನು ಸಿದ್ಧಪಡಿಸಿ ಒಪ್ಪಿಸುತ್ತಿದ್ದರು. ಮೊದಲಿನಿಂದಲೂ ಅವರಿಗೂ ನನ್ನ ಹಾಗೆಯೇ ರಂಗಭೂಮಿಯ ನಂಟು. ದಶಕಗಳ ಕಾಲ ಅವರು ಹವ್ಯಾಸಿ ರಂಗಭೂಮಿಯ ನಟರಾಗಿಯೂ ಸಕ್ರಿಯರಾಗಿದ್ದವರು. ಸ್ವತಃ ನಾಟಕ ತಂಡಗಳನ್ನು ಕಟ್ಟಿ ನಾಟಕ ಪ್ರದರ್ಶಿಸಿದವರು. ತಿಂಗಳಿಗೆರಡು-ಮೂರು ಸಲ ನಮ್ಮ ಭೇಟಿಯಾಗುತ್ತಿದ್ದದ್ದು ರಂಗಮಂದಿರದಲ್ಲಿಯೇ. ಅಂಥ ಅನನ್ಯ ರಂಗಪ್ರೇಮಿ ದೇಸಾಯರು. ಅವರಿಗೆ ಸಂಗೀತದಲ್ಲೂ ಮಹಾ ಆಸಕ್ತಿ. (ಅವರ ಒಬ್ಬ ಅಣ್ಣ ತಾರಾನಾಥ ದೇಸಾಯಿ ಪ್ರಸಿದ್ಧ ಸಂಗೀತ ಪಟು.) ಆ ಆಸಕ್ತಿಯ ಫಲವಾಗಿಯೇ ದೇಸಾಯರಿಗೆ ಸಾಹಿತ್ಯ ಸಂಸ್ಕೃತಿ ಪ್ರೇಮಿ ಎಸ್. ಬಂಗಾರಪ್ಪನವರ ಪರಿಚಯವಾದದ್ದು. ಅದು ಕೆಲವೇ ದಿನಗಳಲ್ಲಿ ಸ್ನೇಹಕ್ಕೂ ತಿರುಗಿತು. ಬಂಗಾರಪ್ಪನವರು ಹುಬ್ಬಳ್ಳಿ-ಧಾರವಾಡಗಳ ಕಡೆ ಬಂದಾಗಲೆಲ್ಲ ಅವರ ಜೊತೆ ಸುದರ್ಶನ ದೇಸಾಯಿಯವರು ಇರಲೇಬೇಕು. ದೇಸಾಯರು ಹಿಂದಿಯ ಪತ್ತೇದಾರಿ ಸಾಹಿತ್ಯದಿಂದ ಪ್ರಭಾವಿತರಾಗಿ, ಕನ್ನಡದಲ್ಲಿ ಅಂಥ ಸಾಹಿತ್ಯ ರಚನೆಗೆ ತೊಡಗಿದವರು. ಅವರ ಬಹುತೇಕ ಪತ್ತೇದಾರಿ ಕಾದಂಬರಿಗಳು ‘ಸುಧಾ’ ಮುಂತಾದ ವಾರಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಅವರನ್ನು ಜನಪ್ರಿಯತೆಯ ಗೌರಿಶಂಕರದ ಮೇಲೆ ನಿಲ್ಲಿಸಿದವು. ಈ ಸಾಧನೆ ಸಾಧ್ಯವಾದದ್ದು ಸುದರ್ಶನ ದೇಸಾಯಿಯವರ ನಿರಂತರ ಬರವಣಿಗೆಯ ಕಾರಣದಿಂದ. ಸಣ್ಣ ಕಥೆಗಳ ಮೂಲಕ ಬರಹದ ಲೋಕಕ್ಕೆ ಬಂದವರು ದೇಸಾಯಿ. ತದನಂತರದಲ್ಲಿ ನಗೆ ಬರಹಗಳು, ಆಕಾಶವಾಣಿ ನಾಟಕಗಳನ್ನೂ ಬರೆದರು. ನಮಗೆ ಅವರು 85 ಪತ್ತೇದಾರಿ ಕಾದಂಬರಿಗಳನ್ನೂ, 35 ಸಾಮಾಜಿಕ ಕಾದಂಬರಿಗಳನ್ನೂ ನೀಡಿದ್ದಾರೆ. ಮತ್ತು, ಅಪಾರ ಪ್ರಮಾಣದ ಬಿಡಿ ಸಾಹಿತ್ಯವನ್ನೂ ಬರೆದಿದ್ದಾರೆ. ಶಿಕ್ಷಣ ಕ್ಷೇತ್ರದ ಗಣನೀಯ ಸೇವೆಗೆ ಅವರಿಗೆ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ದೇಸಾಯರ ನೂರನೆಯ ಕಾದಂಬರಿಯ ಹೆಸರು ‘ಸಾಂವಿ.’ ಭಿನ್ನ ಯೋಚನೆ, ಭಿನ್ನ ಬರವಣಿಗೆಯ ಶೈಲಿಯ ದೇಸಾಯರು ಧಾರವಾಡದ ತಮ್ಮ ಮನೆಗೆ ‘ಹಳದಿ ಚೇಳು’ ಎಂದೇ ಹೆಸರಿಟ್ಟಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರಸಭೆ ಅವರ ಮನೆಯಿರುವ ಪ್ರದೇಶಕ್ಕೆ ‘ಸುದರ್ಶನ ದೇಸಾಯಿ ಕಾಲನಿ’ ಎಂದು ಕರೆಯುವುದರ ಮೂಲಕ ಬಹಳ ಹಿಂದೆಯೇ ಬಲು ದೊಡ್ಡ ಗೌರವ ನೀಡಿದೆ. ದೇಸಾಯರ ಜನಪ್ರಿಯ ಕಾದಂಬರಿಗಳಲ್ಲಿ ‘ಶರವೇಗದ ಸರದಾರ’ವೂ ಒಂದು. ಕುಮಾರ ಬಂಗಾರಪ್ಪ ಅವರ ನಾಯಕತ್ವದಲ್ಲಿ ಅದು ಚಲನಚಿತ್ರವಾಯಿತು ( ನಟ ಸಿ. ಆರ್. ಸಿಂಹ ಅದರ ನಿರ್ದೇಶಕ.) ಆ ಚಿತ್ರ ಬಿಡುಗಡೆಯಾದ ನಂತರ ನಾನವರನ್ನು ”ಬರಬೇಕು ‘ಶರವೇಗದ ಸರದಾರ’ರು…” ಅಂತಲೇ ಎದುರುಗೊಳ್ಳಲಾರಂಭಿಸಿದೆ. ನನ್ನನ್ನವರು ”ನಮಸ್ಕಾರ್ರೀ ‘ನಂದಭೂಪತಿ’ಗಳs…” ಎಂದು ಎದುರುಗೊಳ್ಳಲಾರಂಭಿಸಿದರು. (‘ನಂದಭೂಪತಿ’ ನಾನು ರೂಪಾಂತರಿಸಿದ ಒಂದು ನಾಟಕ ಕೃತಿ.) ಹೀಗೇ ಮುಂದುವರೆಯಿತು ನಮ್ಮ ಸ್ನೇಹ. ನಾನು ಹೈದರಾಬಾದಿಗೆ ಹೋಗಿ ನೆಲೆಸಿದ ಮೇಲೆ ಕೆಲವು ವರ್ಷ ಅವರೊಂದಿಗಿನ ಸಂಪರ್ಕ ಸ್ವಲ್ಪ ತುಂಡರಿಸಿದಂತೆ ಆಗಿತ್ತು. 2003 ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೊಂದು ಕಾರ್ಯಕ್ರಮ ಸಂದರ್ಭದಲ್ಲಿ ಗೆಳೆಯ ಮುಕುಂದ ಮೈಗೂರ ಭೆಟ್ಟಿಯಾದರು. , ”ಮರುದಿನದ ನಮ್ಮ ರಂಗ ತರಬೇತಿ ಶಿಬಿರಕ್ಕೆ ಬಂದು ಶಿಬಿರಾರ್ಥಿಗಳೊಂದಿಗೆ ಒಂದಷ್ಟು ಹೊತ್ತು ಕಳೆಯಲು ಸಾಧ್ಯವೇ…?” ಎಂದು ಕೇಳಿದರು. ನನಗೋ ಖುಷಿ. ಮರುದಿನ ಆ ಖುಷಿ ಇಮ್ಮಡಿಸಿತು. ಸುದರ್ಶನ ದೇಸಾಯಿ ಅಲ್ಲಿದ್ದರು…! ಆ ಭೇಟಿ ಮತ್ತೆ ನಮ್ಮ ಸ್ನೇಹದ ಬಳ್ಳಿಗೆ ಎರೆದ ನೀರಿನಂತಾಯಿತು. 1985 ರಲ್ಲಿ ಹಿರಿಯ ರಂಗಕರ್ಮಿ ವಿರೂಪಾಕ್ಷ ನಾಯಕರು ಆರಂಭಿಸಿದ್ದು ‘ರಂಗತೋರಣ’ ಎಂಬ ರಂಗಭೂಮಿ ಮಾಸಿಕ ಪತ್ರಿಕೆ. ನಾಯಕರಿಗೆ ವೃದ್ಧಾಪ್ಯದ ಕಾರಣದಿಂದ ಅದನ್ನು ನಡಿಸಿಕೊಂಡು ಹೋಗುವುದು ಕಷ್ಟದ ಕೆಲಸ ಎನಿಸತೊಡಗಿತು. ಆಗ ಅದನ್ನು ವಹಿಸಿಕೊಂಡು, ಅದಕ್ಕಾಗಿಯೇ ಒಂದು ಸಲಹಾ ಸಮಿತಿ ನಿಯಮಿಸಿಕೊಂಡು, ಇನ್ನಷ್ಟು ಸುಂದರಗೊಳಿಸಿ ನಿರಂತರವಾಗಿ ಪ್ರಕಟಿಸುತ್ತ ಬಂದರು ಸುದರ್ಶನ ದೇಸಾಯಿ. ಆ ಸಮಿತಿಯಲ್ಲಿ ನನ್ನನ್ನೂ ಸೇರಿಸಿಕೊಂಡು ನನ್ನ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ರುಜುವಾತುಗೊಳಿಸಿದರು. ದೇಸಾಯಿಯವರು ದಣಿವರಿಯದ ಧೀರ. ಪತ್ತೇದಾರಿ ಸಾಹಿತ್ಯಕ್ಕೆ ಮನ್ನಣೆ ದೊರಕಿಸಿಕೊಡಲು ಅವರು ನಿರಂತರವಾಗಿ ಶ್ರಮಿಸಿದರು. ಪ್ರತಿ ವರ್ಷ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪತ್ತೇದಾರಿ ಸಾಹಿತ್ಯಕ್ಕೂ ಒಂದು ಗೋಷ್ಠಿ ಇರಲಿ ಎಂದು ಪದೇ ಪದೇ ಒತ್ತಾಯಿಸಿದರು. ಕ.ಸಾ.ಪ. ಕಿವಿಗೊಡದಿದ್ದಾಗ ತಾವೇ ಪತ್ತೇದಾರಿ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿ, ಯಶಸ್ವಿಯಾಗಿ ನಡೆಸಿದರು. ದೇಸಾಯಿಯವರ ಬದುಕಿನಲ್ಲಿ ‘ಆಗದು’ ಎಂಬ ಪದಕ್ಕೆ ಜಾಗವೇ ಇರಲಿಲ್ಲ. ಎಲ್ಲವನ್ನೂ ‘ಆಗುಮಾಡು’ವುದರಲ್ಲೆ ಅವರು ತೃಪ್ತಿಪಟ್ಟುಕೊಂಡರು. ಅವರ ಪ್ರೀತಿಯ ಕೂಸು ‘ರಂಗತೋರಣ’ವನ್ನು ಮುನ್ನಡೆಸಿಕೊಂಡು ಹೋಗುವುದೇ ರಂಗಪ್ರೇಮಿಗಳೆಲ್ಲರೂ ಸುದರ್ಶನ ದೇಸಾಯಿಯವರಿಗೆ ಸಲ್ಲಿಸುವ ಅತಿ ದೊಡ್ಡ ಶೃದ್ಧಾಂಜಲಿ.]]>

‍ಲೇಖಕರು G

August 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗೋಪಾಲ ವಾಜಪೇಯಿ ಅಂಕಣ ಆರಂಭ..

ಹಿತದ ಹೆಬ್ಬಾಗಿಲು : ಧಾರವಾಡ.. ನಾಲ್ಕನೆಯ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿದ್ದ ನಾನು ನಮ್ಮ ಊರು...

೧ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ umesh desaiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: