ಗೋಪಿನಾಥ ರಾವ್: ’ಸಾರ್ವಭೌಮ’ದ ಕೆಲವು ಕಥೆಗಳು…

-Dr. B.R. Satynarayana
ನಂದೊಂದ್ಮಾತು
ಇತ್ತೀಚಿಗೆ ಗೋಪಿನಾಥ ರಾವ್ ಅವರ ಬೇಟಿಯಾಗಿತ್ತು. ಅವರ ಒಂದೆರಡು ಕಥೆಗಳನ್ನು ಹಿಂದೆ ಓದಿದ್ದೆ. ಅದ್ಭುತವಾದ ಕಥೆಗಾರಿಕೆ ಅವರಲ್ಲಿದೆ ಎಂದು ಅರ್ಥಮಾಡಿಕೊಂಡಿದ್ದೆ.
ಅವರ ಚೊಚ್ಚಲ ಕಥಾ ಸಂಕಲನ ’ಸಾರ್ವಭೌಮ’ ದೂರದ ದುಬೈನಲ್ಲಿ ಬಿಡುಗಡೆಯಾಗಿತ್ತು. ಮೊನ್ನೆ ಅವರು ಬಂದಾಗ ಕಥಾಸಂಕಲನವನ್ನು ಕೊಟ್ಟರು. ಅವರನ್ನು ಬೀಳ್ಕೊಟ್ಟ ತಕ್ಷಣ ನಾನು ಕೆಲವು ಕಥೆಗಳ ಮೇಲೆ ಕಣ್ಣಾಡಿಸಿದೆ. ಅದರ ಹಲವಾರು ಕಥೆಗಳು ಒಂದೇ ಬಾರಿಗೆ ನನ್ನಿಂದ ಓದಿಸಿಕೊಂಡವು.

ಒಂದೇ ಒಂದು ಪದ ಆಚೀಚೆಯಾಗದಂತೆ ಬರೆಯುವ ಅವರ ಕಲೆಗಾರಿಕೆ ನನಗೆ ಇಷ್ಟವಾಯಿತು. ಒಂದು ಕಥೆಯಾದ ಮೇಲೆ ಅದರ ಬಗ್ಗೆ ನನಗನ್ನಿಸಿದ್ದನ್ನು ಆಗಲೇ ಟೈಪಿಸಿಬಿಡುತ್ತಿದ್ದೆ. ಅಂತಹ ಅನಿಸಿಕೆಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಬಯಸಿದ್ದೇನೆ. ಆ ಸಂಕಲನದ ಇನ್ನುಳಿದ ಕಥೆಗಳನ್ನು ಓದಿದ ನಂತರ ಮತ್ತೆ ಬರೆಯುತ್ತೇನೆ.
ಗೆಲುವಿನಹಳ್ಳಿ ಸೇತು
ಅತ್ಯಂತ ನಾಟಕೀಯ ತಿರುವು ತೆಗೆದುಕೊಳ್ಳುವ ’ಗೆಲುವಿನಹಳ್ಳಿ ಸೇತು’ ಕಥೆಯಲ್ಲಿ ರಾಜಕೀಯದ ಒಳಸುಳಿಗಳೆಲ್ಲಾ ಬಂದುಹೋಗುತ್ತವೆ. ಉದ್ಘಾಟನೆಗೂ ಮುಂಚೆ ಮುರಿದು ಬಿದ್ದ ಒಂದು ಸೇತುವೆ, ದಿನಗೂಲಿ ನೌಕರ ಸೇತು ಇಲ್ಲಿ ನಿಮಿತ್ತ ಮಾತ್ರ. ಆದರೆ ಈ ಸೇತು(ವೆ) ಮತ್ತು ಆ ಸೇತು ನಡುವೆ ಬೇರೆ ಪಾತ್ರಗಳು ಬಿಚ್ಚಿಡುವ ಸಂಗತಿಗಳು ಯಾವ ಆಧುನಿಕ ರಾಜಕೀಯ ಅಸಂಗತತೆಗೂ ಕಡಿಮೆಯಿಲ್ಲ.
ಸೇತುವೆ, ಕಟ್ಟಡ ಕುಸಿದಂತಹ ಅವಘಢಗಳು ನಡೆದಾಗ ತಾಂತ್ರಿಕ ಜ್ಞಾನ ಸವಲ್ಪವೂ ಇಲ್ಲದ ಮಂತ್ರಿಗಳು ಕೊಡುವ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದಾಗ ಈ ಕಥೆ ಇನ್ನೂ ಹೆಚ್ಚು ಅರ್ಥವಂತಿಕೆಯನ್ನು ಪಡೆದುಕೊಳ್ಳುತ್ತದೆ. ಮೊನ್ನೆ ಮೊನ್ನೆ ಪಶ್ಚಿಮಬಂಗಾಲದಲ್ಲಿ ರೈಲ್ವೇ ಹಳಿ ಸ್ಪೋಟವಾಗಿ ನೂರಾರು ಜನ ಸತ್ತರಲ್ಲ, ಆಗಿನ ರಾಜಕಾರಣಿಗಳ ಅಧಿಕಾರಿಗಳ ಮಾತುಗಳನ್ನು ಕೇಳಿಸಿಕೊಂಡಿದ್ದವರಿಗೆ ಈ ಕಥೆ ಇನ್ನೂ ಹೆಚ್ಚು ಅರ್ಥವತ್ತಾಗಿ ಕಂಡರೆ ಆಶ್ಚರ್ಯವಿಲ್ಲ.
ಭೂತಕ್ಕೆ ಹೆದರುವ ಅಜ್ಜ
’ಭೂತಕ್ಕೆ ಹೆದರುವ ಅಜ್ಜ’ ಕಥೆಯಲ್ಲಿನ ಪಾಟೀಲನ ಪಾತ್ರ ಪ್ರಾರಂಭದಲ್ಲಿ ಉದಾತ್ತವಾಗಿ ಕಂಡರೂ, ಆತನ ಮಾತು ನಡವಳಿಕೆಗಳು ಸ್ವಲ್ಪ ಮಟ್ಟಿಗೆ ಅಪರಿಚಿತವೆನ್ನಿಸುತ್ತವೆ. ಓದುಗನಲ್ಲಿ ಆತನ ಮಾತುಗಳು ನಂಬಿಕೆ ಹುಟ್ಟಿಸುವುದಿಲ್ಲ. ಅದಕ್ಕೆ ಪೂರಕವಾಗಿ ಆತನ ಹೆಂಡತಿ ಆಡಿದ ಮಾತುಗಳು ಓದುಗನ ಮನಸ್ಸಿನಲ್ಲಿ ನಿಂತುಬಿಡುತ್ತವೆ.
ಆಕಾಂಕ್ಷ ನನ್ನ ಮೊಮ್ಮಗಳು, ಎನ್ನುವ ಪಾಟೀಲಜ್ಜ ದೂರದ ಊರಿನಲ್ಲಿ ತನ್ನ ಹೆಂಡತಿ ಮಕ್ಕಳು ಮೊಮ್ಮಕ್ಕಳು ಇರುವುದನ್ನು ಮರೆತವನಂತೆ ವರ್ತಿಸುವುದಕ್ಕೆ ಬಲವಾದ ಕಾರಣಗಳಿಲ್ಲ. ತಾನು ಸಂಪಾದಿಸಿದ ಹಣ ಎಂಬ ಪುರುಷ ಅಹಂಕಾರಕ್ಕೆ ಅನುಗುಣವಾಗಿ ಆತನಲ್ಲಿ ಮೂಡಿದ ಸಣ್ಣ ಅನುಮಾನ ವೈವಾಹಿಕ ಸಂಬಂಧಗಳು ಗಟ್ಟಗೊಳ್ಳುವ ಬದಲು ಹರಿದುಹೋಗುವ ಹಂತ ತಲುಪಿದ್ದು ವಿಷಾದನೀಯ.
ಆದರೆ ನಿರೂಪಕನಲ್ಲಿ ಪಾಟೀಲಜ್ಜನಿಗಿದ್ದ ಆಪ್ತತೆ ನಂಬಿಕೆ ಹಾಗೂ ನಿರೂಪಕನಿಗೆ ಎರಡು ಬಾರಿ ಹೊಳೆದ ಸತ್ಯ – ಮೊದಲು ಆಕಾಂಕ್ಷ ನನ್ನ ಮೊಮ್ಮಗಳು ಎಂದಾಗ, ಎರಡನೆಯದು, ಪಾಟೀಲಜ್ಜನ ಹೆಂಡತಿ ಕೆಲವೇ ಮಾತುಗಳಲ್ಲಿ ಬಿಡಿಸಿಟ್ಟ ಸತ್ಯ – ಓದುಗನನು ಆಶಾವಾದಿಯನ್ನಾಗಿಸುತ್ತವೆ, ಕಥೆಯ ಅಂತ್ಯಕ್ಕೆ.

ಪಯಣ
’ಪಯಣ’ ಕಥೆಯಲ್ಲಿ ಮನುಷ್ಯ ಸಂಬಂಧಗಳು, ಸಂಘರ್ಷಗಳು, ನಂಬಿಕೆಗಳು ಮುಖಾಮುಖಿಯಾಗುತ್ತವೆ. ದೂರದ ಅಮೆರಿಕಾದಲ್ಲಿ ಯಶಸ್ವೀ ಉದ್ಯಮಿಯಾಗಿ ನೆಲೆಸಿರುವ ಮಗ ಕಥೆಯ ಉದ್ದಕ್ಕೂ ನೇಪಥ್ಯದಲ್ಲೇ ಉಳಿದು, ಆಗಾಗ ಖಳನಾಯಕನಂತೆ ಗೋಚರಿಸಿದರೂ, ಕಥೆಯ ಕೊನೆಯಲ್ಲಿ ಆತನಾಡುವ ಮಾತು ಓದುಗನ ಕಣ್ಣಂಚನ್ನು ಒದ್ದೆಯಾಗಿಸದೆ ಬಿಡುವುದಿಲ್ಲ. ಮಾನವೀಯತೆಯೆ ಎದ್ದುಬಂದಂತೆ ಕಾಣುವ ಮಂಜುನಾಥನ ಸಾವಿನ ನಂತರ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಬೇರೊಂದು ಮಗ್ಗುಲಿಗೆ ಹೊರಳುವುದು ಕಥೆಗಾರರ ಯಶಸ್ವೀ ತಂತ್ರವಾಗಿದೆ.
ಘಟಶ್ರಾದ್ಧ ಕ್ರಿಯೆಯ ಜಿಜ್ಞಾಸೆಯೂ ನಡೆಯುತ್ತದೆ. ಆದರೆ ತಾರ್ಕಿಕ ಅಂತ್ಯ ಕಾಣದೆ ಸುಲಭೋಪಾಯಕ್ಕೆ ಮಣಿದುಬಿಡುತ್ತದೆ. ಈ ಕೊರತೆಯನ್ನು ಕಥೆಯ ಅಂತ್ಯ ಹಾಗೂ ಪಟೇಲರ ಮಗ ಆಡುವ ’… ನಾನಿಲ್ಲದಿದ್ದರೆ ಇನ್ನೊಬ್ಬ, ಬೆಂಕಿ ಕೊಟ್ಟೇ ಕೊಡುತ್ತಾರೆ. . . ಬದುಕುಬೇಕಾದವರ ಬಗ್ಗೆ ಆಲೋಚಿಸಿ’ ಎಂಬ ಮಾತುಗಳು ಘಟಶ್ರಾದ್ಧದ ಅರ್ಥಹೀನತೆಯನ್ನೇ ಎತ್ತಿ ತೋರಿಸಿಬಿಡುತ್ತವೆ.
ಮನೆ ಜಗಲಿಯ ಕೋರ್ಟು
’ಮನೆ ಜಗಲಿಯ ಕೋರ್ಟು’ ಮಾನವೀಯ ಸಂಬಂಧಗಳು, ಸಂಘರ್ಷಗಳನ್ನು ಕೆಲವೇ ನಿಮಿಷದಲ್ಲಿ ಮೂವತ್ತು ವರ್ಷಗಳ ಇತಿಹಾಸದೊಂದಿಗೆ ತೆರೆದಿಡುವ ಭಾವಾವೇಶದಿಂದ ಕೂಡಿದ ಅತ್ಯುತ್ತಮ ಸಣ್ಣಕಥೆ. ಒಂದು ಪದ ಆಚೀಚೆ ಆಗದ ಹಾಗೆ ನಿರುಪಣೆಗೊಂಡಿರುವ ಈ ಕಥೆ ಕಥೆಗಾರರ ಕೌಶಲಕ್ಕೆ ಹಿಡಿದ ಕನ್ನಡಿ.
ಸಂಪ್ರದಾಯದ ಚೌಕಟ್ಟಿನಲ್ಲಿಯೇ ಬಾಳಿ ಬದುಕುತ್ತಿರುವ ಕುಟುಂಬಗಳಿಗೆ ಮದುವೆ, ಕನ್ಯದಾನ, ಅಪರಕರ್ಮ ಇವುಗಳು ಅತ್ಯಂತ ಪ್ರಮುಖವಾದವುಗಳು. ಅವುಗಳ ಬಗ್ಗೆ ಹಿಂದೆ ಮುಂದೆ ಯೋಚಿಸದೆ ತೀರಾ ಯಾಂತ್ರಿಕವಾಗಿಯೂ ನಡೆದುಕೊಳ್ಳುವುದು ಉಂಟು.
ಮಗ ದೊಡ್ಡ ಕಳ್ಳ ಸುಳ್ಳನಾದರೂ ತಂದೆ ಸತ್ತಾಗ ಅವರ ಅಪರಕರ್ಮ ಮಾಡಲೇಬೇಕು, ದುಃಖ ಪಡಬೇಕು! ಅವಿನೆಗ ದುಃಖವಾಗದಿದ್ದರೂ ಜನರ ಸಮಾಧಾನಕ್ಕಾಗಿ ಆತ ಅಳಬೇಕು! ಏಕೆಂದರೆ ಅದು ಸಂಪ್ರದಾಯ. ಆದರೆ ಈ ಕಥೆಯ ಶೇಷಪ್ಪಯ್ಯ ತನ್ನ ತಮ್ಮನ ಸಾವಿಗೆ ದುಃಖಿಸುವುದರಲ್ಲಿ ಅರ್ಥವಿದೆ. ಆತನ ನಾಲ್ಕು ಹನಿ ಕಣ್ಣೀರಿಗೆ ಸಾಗರದಷ್ಟು ಅರ್ಥಗಳು ಭಾವನೆಗಳು ನಮ್ಮನ್ನು ಆವರಿಸಿಬಿಡುತ್ತವೆ. ಏಕೆಂದರೆ ತಮ್ಮನ ಆಸ್ತಿಯನ್ನು ಜೋಪಾನ ಮಾಡಿ ನಿಜವಾದ ಹಕ್ಕುದಾರರಿಗೆ ತಲುಪಿಸುವ ಸತ್ಪ್ರಯತ್ನದಲ್ಲಿದ್ದ ಶೇಷಪ್ಪಯ್ಯ ನಿಜವಾದ ಅರ್ಥದಲ್ಲಿ ’ಅಣ್ಣ’!
ಬೆತ್ತಲೆ ಹಕ್ಕು
ಪುರುಷ ಅಹಂಕಾರದ ಇನ್ನೊಂದು ಉದಾಹರಣೆ ’ಬೆತ್ತಲೆ ಹಕ್ಕು’ ಕಥೆಯಲ್ಲಿ ವ್ಯಕ್ತವಾಗಿದೆ. ಗಂಡಸಿಗೆ ತಾನು ಎಷ್ಟೊಂದು ಜನ ಹೆಣ್ಣುಗಳ ಜೊತೆಗೆ ಸೇರುವುದು ತಪ್ಪಲ್ಲವೆನಿಸಿದರೂ, ತನ್ನ ಹೆಂಡತಿ ಅಥವಾ ತನಗೆ ಸೇರಿದ ವಸ್ತುಗಳು ಬೇರೆಯವರಿಗೆ ಸಿಗಬಾರದು, ಅದರ ರಕ್ಷಣೆ ನನ್ನ ಹೊಣೆ ಎಂಬ ವಿಚಿತ್ರ ಮನಸ್ಥಿತಿ ತನಗರಿವಿಲ್ಲದೇ ಮೂಡಿಬಿಡುತ್ತದೇನೋ? ಹೆಣ್ಣು ಅಬಲೆ ಎಂಬ ಪೂರ್ವಾಗ್ರಹಪೀಡಿತ ಮನಸ್ಸು ’ಅವಳ ರಕ್ಷಣೆ ನನ್ನದು’ ಎಂದು ಅಧಿಕಾರ ಚಲಾಯಿಸುತ್ತದೆ.
ಒಮ್ಮೊಮ್ಮೆ ಈ ಪುರುಷ ಅಹಂಕಾರ ಧಾನಾತ್ಮಕ ಪರಿಣಾಮವನ್ನೂ ಉಂಟುಮಾಡುತ್ತದೆ ಎಂಬುದು ಮಾತ್ರ ಈ ಸೃಷ್ಟಿಯ ವೈಚಿತ್ರ್ಯ ಅಥವಾ ಮಾನವ ನಾಗರೀಕತೆಯ ಸಂಕೀರ್ಣತೆಯ ಒಂದು ಭಾಗ. ಕಥೆಯ ಆರಂಭದಿಂದಲೂ ಚೆಲ್ಲಾಟದ ಹುಡುಗಿಯಾಗಿ (ಹಾಗೆ ನೋಡಿದರೆ ಆ ಪಾತ್ರಕ್ಕೆ ಸರಿಯಾಗಿ) ಕಾಣಿಸಿಕೊಳ್ಳುವ ಭಾವನ ಬೆತ್ತಲಾಗಿ ಕುಳಿತು, ಕಲಾವಿದನ ಕುಂಚದಿಂದ ಬಿತ್ತಿಯಲ್ಲಿ ಕಲೆಯಾಗಿ ಅರಳುವಷ್ಟರಲ್ಲಿ ತಾನೂ ಬೆಂಕಿಯಲ್ಲಿ ಅರಳಿದ ಹೂವಾಗಿ ಬಿಟ್ಟಿರುತ್ತಾಳೆ. ಮೂರು ಗಂಟೆಗಳ ಕಾಲ ಇಬ್ಬರು ಪುರುಷರ ಎದುರಿಗೆ ಬೆತ್ತಲಾಗಿ ಕುಳಿತಿದ್ದರೂ ಅವಳಿಗೆ ಸಿಕ್ಕ ಏಕಾಂತ, ಅವಳ ಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ.
ತಪಸ್ಸು ಸಾರ್ಥಕವಾಗಬೇಕಾದರೆ ದೇವರು ಪ್ರತ್ಯಕ್ಷವಾಗಲೇ ಬೇಕಿಲ್ಲ. (ಹಾಗೆ ನೋಡಿದರೆ ಬುದ್ಧ-ಮಹಾವೀರರಿಗೆ ಯಾವ ದೇವರೂ ಪ್ರತ್ಯಕ್ಷನಾಗಲಿಲ್ಲ) ಯಾವಾಗಲೂ ಹೆಣ್ಣನ್ನು ಆಳುವ ಮನಸ್ಥಿತಿಯ ಪುರುಷ ಅಹಂಕಾರ, ಅವಳ ಬೆತ್ತಲೆ ಚಿತ್ರದ ಮೇಲೂ ಪಸರಿಸುವುದು ಮಾತ್ರ ಅದರ ಔನ್ನತ್ಯದ ಅತಿರೇಕವೆನ್ನಿಸುತ್ತದೆ. ಇಲ್ಲಿ ರಾಜುವಿನ ಪಾತ್ರ ಅದರ ಪ್ರತೀಕ. ಕೇವಲ ಅವಳನ್ನೊಂದಿಷ್ಟು ಹೊತ್ತು ರೇಗಿಸುವ ಎಂದು ಬಂದ ಆತ ’ಆದಿನದ ಒಳ್ಳೆಯ ಸಂಪಾದನೆಯ’ ಫಲವಾಗಿಯೋ ಅಥವಾ ದೃಢತೆಯಿಲ್ಲದ ಮನಸ್ಥಿತಿಯೋ ಆತ ಕುಸಿಯಲಾರಂಭಿಸುತ್ತಾನೆ. ಅಂತಹವನ ಪಾತ್ರವೂ ಕಲಾವಿದನ ಸಾಮೀಪ್ಯದಿಂದ ವಿಚಿತ್ರವಾದ ಸಂಯಮವನ್ನು ಸಂಪಾದಿಸಿಕೊಂಡುಬಿಡುತ್ತದೆ.
ಭಯಂಕರ ವಾಚಾಳಿಯಾದವನೂ ಒಂದು ಅತ್ಯುತ್ತಮ ಕಲಾಕೃತಿಯ ಎದುರಿಗೆ ನಿಂತಾಗ ಒಂದರೆ ಕ್ಷಣ ಮಾತು ಮರೆಯುವಂತೆ! ಮತ್ತೆ ಕಾರಿನಲ್ಲಿ ಹೋಗುವಾಗ ’ಈಗ ನನ್ನ ರೂಮಿಗೆ ಬರುತ್ತೀಯೋ ಅಥವಾ ನಿನ್ನ ರೂಮಿಗೆ ಬಿಡಲೋ’ ಎಂಬ ಮಾತು ಆತನದು ತಾತ್ಕಾಲಿಕ ಸಂಯಮ, ಅದೂ ಕಲಾವಿದನ ಸಾಮಿಪ್ಯದಿಂದಲೇ ಬಲವಂತವಾಗಿ ತಂದುಕೊಂಡಿದ್ದು ಎಂಬಂತಾಗುತ್ತದೆ.
ಆದರೆ, ಸಾಕ್ಷಾತ್ಕಾರದ ಹಾದಿ ಮುಂದಿದ್ದ ಭಾವನಾ ಮೇಲ್ನೋಟಕ್ಕೆ ವ್ಯಾವಹಾರಿಕವಾಗಿ ವರ್ತಿಸಿದಂತೆ ಕಂಡರೂ ಸಂಯಮವನ್ನು ಪ್ರಕಟಿಸುತ್ತಾಳೆ. ಅದು ನಂತರವೂ ಮುಂದುವರೆಯುತ್ತದೆ. ಅವಳ ಬಗ್ಗೆ ಅಭಿಮಾನವೆನ್ನಿಸುತ್ತದೆ. ಕಲಾವಿದನ ಬಗ್ಗೆ ಆಕೆ ಹೇಳುವ ಮಾತುಗಳು -ರಾಜುವಿನ ಎದುರಿಗೆ ಅಪ್ರಸ್ತುವೆನ್ನಿಸಿದರೂ- ಮನಮುಟ್ಟುತ್ತವೆ. ಆ ಕ್ಷಣ ಆಕೆಗೆ ಹೆಣ್ಣಾಗಿ ಹುಟ್ಟಿದ್ದಕ್ಕೆ ಅಭಿಮಾನವೆನ್ನಿಸುತ್ತದೆ.
ಕಲೆಗೆ ಆ ಶಕ್ತಿಯಿದೆ. ಆದರೆ ನಗ್ನತೆಯನ್ನೇ ಆಧಾರವಾಗಿಟ್ಟುಕೊಂಡು ಸಂಸ್ಕೃತಿಯ ರಕ್ಷಣೆ ಮಾಡುತ್ತೇವೆ ಎಂದು ಹೊರಟವರಿಗೆ ಇಂಥದ್ದೆಲ್ಲ ಅರ್ಥವಾಗುವುದಿಲ್ಲ. ಇಡೀ ಕಥೆಯಲ್ಲಿ ಎಲ್ಲಿಯೂ ಪ್ರಸ್ತಾಪವಾಗದ ಆದರೆ ಸೂಕ್ಷ್ಮ ಓದಿಗೆ ನಿಲುಕುವ ವಿಷಯವೆಂದರೆ ಕಥೆಗಾರರ ಸಂಯಮ. ಚಿತ್ರಕಲಾವಿದನ ಸಂಯಮವನ್ನೇ ಕಥೆಗಾರರೂ ತೋರಿದ್ದಾರೆ. ಇಂತಹ ಕಥೆಗಳಲ್ಲಿ ಕೊಂಚ ಆಚೀಚೆಯಾದರೂ ಅಶ್ಲೀಲತೆಯ ಸೋಂಕು ಬಡಿದುಬಿಡುತ್ತದೆ. ಕಥೆಗಾರರ ಈ ಸಂಯಮ ’ಬೆತ್ತಲೆಯ ಹಕ್ಕು’ ಕಥೆಯನ್ನು ಸಂಕಲನದ ಅತ್ಯುತ್ತಮ ಕಥೆಗಳಲ್ಲಿ ಒಂದನ್ನಾಗಿ ಮಾಡಿದೆ.

‍ಲೇಖಕರು avadhi

September 5, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: