ಗೋಮೂತ್ರ: ಔಷಧವೋ?, ಅಪಮಾನವೋ?

ಶ್ರೀನಿವಾಸ ಕಕ್ಕಿಲ್ಲಾಯ ಜನಪರ ಕಾಳಜಿಯ ವೈದ್ಯ. ಒಂದು ಆರೋಗ್ಯವಂತ ಸಮಾಜಕ್ಕಾಗಿ ದುಡಿಯುತ್ತಿರುವವರು. ಕಕ್ಕಿಲ್ಲಾಯರಿಗೆ ಆರೋಗ್ಯ ಎನ್ನುವುದು ದೇಹಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಸಮಾಜದ ಮಾನಸಿಕ ಆರೋಗ್ಯ ಕೂಡಾ. ಹಾಗಾಗಿಯೇ ಸಾಕಷ್ಟು ಚಳವಳಿಗಳನ್ನು ಕಟ್ಟಿದ್ದಾರೆ.
ಕಕ್ಕಿಲ್ಲಾಯ ಕುಟುಂಬಕ್ಕೆ ಹೋರಾಟ ಉಸಿರಿನಷ್ಟೇ ಸಹಜವಾದದ್ದು. ಬಿ ವಿ ಕಕ್ಕಿಲ್ಲಾಯ ಯಾರಿಗೆ ಗೊತ್ತಿಲ್ಲ. ಅವರ ಮಗ ಶ್ರೀನಿವಾಸ ಕಕ್ಕಿಲ್ಲಾಯ ವೈದ್ಯಕೀಯ ರಂಗದ ಆರೋಗ್ಯಕ್ಕೂ ದುಡಿಯುತ್ತಿದ್ದಾರೆ.
ಗೋ ಸಮ್ಮೇಳನದ ಹಿನ್ನೆಲೆಯಲ್ಲಿ ಗೋವುಗಳನ್ನು ವೈದ್ಯಕೀಯ ದೃಷ್ಟಿಯಿಂದ ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಇಲ್ಲಿದೆ ಅವರ ಒಂದು ಲೇಖನ. ಚರ್ಚೆಗೆ ಸ್ವಾಗತ-
+++
ಗೋಮಯ, ಗೋಮೂತ್ರ: ಔಷಧಗಳೋ, ಅಪಮಾನವೋ?
ಶ್ರೀನಿವಾಸ ಕಕ್ಕಿಲ್ಲಾಯ
ಕೃಪೆ: ಆರೋಗ್ಯ ಸಂಪದ
ಮನುಷ್ಯ ಕೃಷಿಕಾರ್ಯಗಳಲ್ಲಿ ತೊಡಗಿದಾಗ ತನಗೆ ನೆರವಾಗಲೆಂದು ಆಕಳನ್ನು ಸಾಕಲಾರಂಭಿಸಿದ.[1] ಇಂದು ಕೃಷಿಕೆಲಸಗಳು ಸಾಕಷ್ಟು ಯಾಂತ್ರೀಕೃತಗೊಂಡಿರುವುದರಿಂದ ಸಾಕಲ್ಪಟ್ಟ ಮೂಲ ಉದ್ದೇಶಕ್ಕೆ ಈ ಪ್ರಾಣಿಗಳು ಅಪ್ರಸ್ತುತವೆನಿಸಿಬಿಟ್ಟಿವೆಯಾದರೂ, ಕೃಷಿಪ್ರಧಾನವಾದ ನಮ್ಮ ಸಮಾಜದಲ್ಲಿ ಅವುಗಳಿಗಿದ್ದ ಪ್ರಾಮುಖ್ಯತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿ, ‘ಎರಡನೇ ತಾಯಿ’,[2] ‘ವಿಶ್ವದ ಮಾತೆ'[3,4] ಎಂಬಿತ್ಯಾದಿಯಾಗಿ ಬಿಂಬಿಸುವ ಪ್ರಯತ್ನಗಳೀಗ ವ್ಯವಸ್ಥಿತವಾಗಿ ನಡೆಯುತ್ತಿವೆ. ‘ಗೋ ಮಾತೆಯ’ ರಕ್ಷಣೆಗಾಗಿ ನಡೆಯುತ್ತಿರುವ ‘ಹೋರಾಟಗಳು’,[4,5] ದನದ ಗೌರವ ರಕ್ಷಣೆಗಾಗಿ ನಡೆದ ದಲಿತರ ಕೊಲೆಗಳು ಮತ್ತು ಹಲವಾರು ದೊಂಬಿಗಳನ್ನು[6,7] ನೋಡಿದಾಗ, ನಮ್ಮ ದೇಶದಲ್ಲಿ ಮನುಷ್ಯನ ಜೀವಕ್ಕಿಂತ ಸತ್ತಿರುವ ದನದ ಸ್ಥಾನಮಾನವೇ ಹೆಚ್ಚೆಂದು ಅನಿಸದಿರಲಾರದು. ಹೀಗಿರುವಾಗ, ದನಗಳು ಸ್ರವಿಸುವ ಹಾಲು ಮತ್ತು ವಿಸರ್ಜಿಸುವ ಮಲ-ಮೂತ್ರಗಳನ್ನು ಬಳಸಿ ಹಲವು ‘ಉತ್ಪನ್ನಗಳನ್ನು’ ತಯಾರಿಸಿ ಮಾರಾಟ ಮಾಡುವುದಕ್ಕೂ, ಈ ‘ಉತ್ಪನ್ನಗಳು’ ಹೈನುಗಾರಿಕೆಗಿಂತಲೂ ಹೆಚ್ಚಿನ ಲಾಭವನ್ನು ತರಬಹುದೆಂದು ಪ್ರಚಾರ ಮಾಡುವುದಕ್ಕೂ ದನಗಳ ಮೇಲಿನ ವಿಶೇಷವಾದ ಮಮತೆ ಹಾಗೂ ಭಕ್ತಿಗಳಷ್ಟೇ ಕಾರಣವೇ ಅಥವಾ ಇದರ ಹಿಂದೆ ಬೇರೇನಾದರೂ ಉದ್ದೇಶವಿದೆಯೇ ಎಂಬ ಪ್ರಶ್ನೆಗಳೇಳುತ್ತವೆ.[8]
‘ಗೋ ಉತ್ಪನ್ನಗಳು’:
ದನದ ಹಾಲು ಹಾಗೂ ಮಲ-ಮೂತ್ರಗಳಿಂದ ತಯಾರಿಸಲಾದ ‘ಉತ್ಪನ್ನಗಳ’ ಪಟ್ಟಿಯು ಸಾಕಷ್ಟು ದೊಡ್ಡದಿದೆ. ಇವುಗಳ ಪೈಕಿ, ಪಂಚಗವ್ಯ ಹಾಗೂ ಗೋ ಅರ್ಕಗಳ ಬಗ್ಗೆ ಹೆಚ್ಚಾಗಿ ಹೇಳಲಾಗಿದೆ.
ಗೋವಿನ ಐದು ಉತ್ಪನ್ನಗಳ – ಸೆಗಣಿ, ಮೂತ್ರ, ಹಾಲು, ಮೊಸರು ಮತ್ತು ತುಪ್ಪ – ಮಿಶ್ರಣವೇ ಪಂಚಗವ್ಯ.[9,10] ಗೋಮೂತ್ರವನ್ನು ಹುಳಿಬರಿಸಿ ತಯಾರಿಸಿದ ಗೋ ಮೂತ್ರಾಸವ, ಭಟ್ಟಿ ಇಳಿಸಿ ತಯಾರಿಸಿದ ಗೋ ಅರ್ಕ ಮತ್ತು ಗನವತಿ ಮಾತ್ರೆಗಳನ್ನೂ ಔಷಧಗಳಾಗಿ ಬಳಸಬಹುದಂತೆ.[8,11] ಗೋ ಅರ್ಕಕ್ಕೆ ಅಮೆರಿಕದ ಎರಡು ಪೇಟೆಂಟ್ ಗಳನ್ನೂ ಪಡೆಯಲಾಗಿದ್ದು, [11]ಈ ವಿಚಾರವನ್ನು ಬಹು ದೊಡ್ಡ ಸಾಧನೆಯೆಂಬಂತೆ ತೋರಿಸಲಾಗುತ್ತಿದೆ.
ವಿವಿಧ ಗೋ ಉತ್ಪನ್ನಗಳು ಜ್ವರದಿಂದ ಹಿಡಿದು ಕ್ಯಾನ್ಸರ್ ವರೆಗೆ ನೂರಾರು ರೋಗಗಳನ್ನು ವಾಸಿ ಮಾಡಬಹುದೆಂದು ಹೇಳಲಾಗುತ್ತಿದೆ.[8,11,12] ಕುಟುಂಬದಲ್ಲಿ ಜನನ ಮರಣಗಳಾದಾಗ ‘ಮೈಶುದ್ಧಿ’ ಮಾಡಿಸಿಕೊಳ್ಳಲು ಬಳಸಲಾಗುವ ಪಂಚಗವ್ಯವನ್ನು ಹಲವು ರೋಗಗಳ ಚಿಕಿತ್ಸೆಯಲ್ಲಿಯೂ, ಗಿಡಗಳಲ್ಲಿ ಕೀಟನಾಶಕವಾಗಿಯೂ, ಮಣ್ಣಿನ ಸಾರವನ್ನು ಹೆಚ್ಚಿಸುವುದಕ್ಕೂ ಬಳಸಬಹುದೆಂದು ಹೇಳಲಾಗುತ್ತಿದೆ.[10](ಇಷ್ಟೊಂದು ವೈವಿಧ್ಯಮಯವಾದ ಉಪಯೋಗಗಳುಳ್ಳ ವಸ್ತು ಬಹುಷಃ ಇನ್ನೊಂದಿರಲಾರದು!) ಇತ್ತೀಚೆಗೆ, ಚಿಕುಂಗುನ್ಯಾ ರೋಗದ ಚಿಕಿತ್ಸೆಯಲ್ಲೂ ಪಂಚಗವ್ಯವು ಪರಿಣಾಮಕಾರಿಯಾಗಿದೆಯೆಂದು ಘೋಷಿಸಿ [13]ಅದನ್ನು ವಿತರಿಸುವ ಶಿಬಿರಗಳನ್ನೂ ಕೆಲವೆಡೆಗಳಲ್ಲಿ ನಡೆಸಲಾಯಿತು. ಕೇಶತೈಲ, ಶಾಂಪೂ, ಚರ್ಮದ ಮುಲಾಮುಗಳು ಇತ್ಯಾದಿಗಳಲ್ಲೂ ಗೋಮೂತ್ರವನ್ನು ಬಳಸಬಹುದಂತೆ.[8]

ಸಾಬೂನು, ಮೂಗಿಗೆ ಏರಿಸುವ ಪುಡಿ, ಮೈಗೆ ಹಾಕುವ ಪುಡಿ, ಮುಲಾಮು, ಅಗರಬತ್ತಿ, ಹಲ್ಲಿನ ಪುಡಿ ಇತ್ಯಾದಿಗಳನ್ನು ದನದ ಸೆಗಣಿಯಿಂದ ತಯಾರಿಸಬಹುದೆಂದೂ, ಇವಕ್ಕೆ ಔಷಧೀಯ ಗುಣಗಳಿವೆಯೆಂದೂ ಹೇಳಲಾಗುತ್ತಿದೆ.[8]
ಯಾವ್ಯಾವುದೋ ದನಗಳ ಮಲ ಮೂತ್ರಗಳನ್ನು ಬಳಸಿದರೇನೂ ಪ್ರಯೋಜನವಾಗದಂತೆ! ಭಾರತೀಯ ಶುದ್ಧ ಗೋತಳಿಗಳ ಉತ್ಪನ್ನಗಳ ‘ರೋಗ ಪ್ರತಿರೋಧ ಶಕ್ತಿಯು’ ಶೇ. 90ರಿಂದ 98ರಷ್ಟಿದ್ದರೆ, ಮಿಶ್ರ ತಳಿಗಳ ಶಕ್ತಿಯು ಶೇ. 40ಕ್ಕೂ ಕಡಿಮೆಯಿದೆಯೆಂದು ‘ಗುರುತಿಸಿದ’ ಸಂಶೋಧನೆಗಳೂ ನಡೆದಿವೆ.[11]
‘ಆಧಾರ’ಗಳೇನು?
ಪಂಚಗವ್ಯದ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲದಿಂದ ಆಯುರ್ವೇದದ ವೈದ್ಯರೊಬ್ಬರಲ್ಲಿ ಆ ಬಗ್ಗೆ ವಿಚಾರಿಸಿದೆ. ಗೋ ಮಯ, ಗೋ ಮೂತ್ರ ಹಾಗೂ ಪಂಚಗವ್ಯಗಳ ಸತ್ಪ್ರಯೋಜನಗಳ ಬಗ್ಗೆ ಚರಕ ಸಂಹಿತೆಯನ್ನುದ್ಧರಿಸಿ ಅವರು ನನಗೆ ವಿವರಿಸಿದರು. ಆದರೆ ಇಪ್ಪತ್ತೊಂದನೇ ಶತಮಾನದಲ್ಲಿರುವ ನಾವು ಆದಿ ಕಾಲದ ಅಂತಹಾ ಬರಹಗಳ ಆಧಾರದಲ್ಲಿ ದನದ ಮಲ-ಮೂತ್ರಗಳನ್ನು ಸೇವಿಸಬೇಕೆ ಎಂದು ಕೇಳಿದೆ. ಚರಕನ ಕಾಲದಲ್ಲೇ ಈ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ ಎಂದರವರು. ಆದರೆ ಜೈವಿಕ ಸಂಯುಕ್ತಗಳ ಬಗೆಗಾಗಲೀ (ಅವುಗಳನ್ನು ಅಳೆಯುವ ಪರೀಕ್ಷೆಗಳಾಗಲೀ), ಸೂಕ್ಷ್ಮಾಣು ಜೀವಿಗಳ ಬಗೆಗಾಗಲೀ (ಅವುಗಳನ್ನು ಬೆಳೆಸಿ ಪ್ರತ್ಯೇಕಿಸುವ ವಿಧಾನಗಳಾಗಲೀ) ಆಗ ತಿಳಿದಿರಲಿಲ್ಲವಲ್ಲ? ಆದರೇನಂತೆ, ದನದ ಮೂತ್ರವೇನೂ ಬದಲಾಗಿಲ್ಲವಲ್ಲ ಎಂದು ಥಟ್ಟನೇ ಉತ್ತರ ಬಂತು. ನಾನು ದಂಗಾದೆ!
ಗೋವುಗಳು ವಿಸರ್ಜಿಸುವ ಕಶ್ಮಲಗಳ ಸತ್ಪ್ರಯೋಜನಗಳ ಬಗ್ಗೆ ಬರೆದಿರುವ ಹೆಚ್ಚಿನ ಲೇಖನಗಳಲ್ಲಿ ಆದಿಕಾಲದ ಬರಹಗಳನ್ನೂ, ಚರಕ ಸಂಹಿತೆಯನ್ನೂ ಬಹಳಷ್ಟು ಸಲ ಉದ್ಧರಿಸಲಾಗಿದ್ದು, ಕೆಲವೊಂದು ವಾದಗಳು ಇಂತಿವೆ:

  • ಗೋವು ನಮ್ಮ ಮಾತೆ, ನಾವು ಅದರ ಮಕ್ಕಳು; ಆದ್ದರಿಂದ ಗೋಮೂತ್ರವು ಪ್ರಯೋಜನಕರ.[8,11]
  • ಪಿತ್ತ, ಕಫ ಮತ್ತು ವಾಯುಗಳ ಅಸಮತೋಲನದಿಂದಲೇ ಕಾಯಿಲೆಗಳು ಉಂಟಾಗುವುದಿದ್ದು, ಗೋಮೂತ್ರವು ಇವುಗಳ ನಡುವೆ ಸಮತೋಲನವನ್ನು ಸಾಧಿಸುತ್ತದೆ.[8]
  • ಮೂತ್ರಗಳಲ್ಲೆಲ್ಲ ಗೋಮೂತ್ರವೇ ಶ್ರೇಷ್ಠವಾದುದು.[8]
  • ಗೋಮೂತ್ರದಲ್ಲಿ ಗಂಗಾಜಲವಿದೆ, ಅಮೃತವೆನಿಸುವ ತಾಮ್ರ ಹಾಗೂ ಚಿನ್ನದ ಧಾತುಗಳಿವೆ. ಗೋಮೂತ್ರವು ಕ್ಷಯಿಸುವುದಿಲ್ಲ, ಅದು ಹಳೆಯದಾದಂತೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.[8]

ಗೋಮೂತ್ರದ ಬಗ್ಗೆ ಪಡೆಯಲಾಗಿರುವ ಪೇಟೆಂಟ್ ಗಳು ಇತ್ತೀಚೆಗೆ ಬಹಳಷ್ಟು ಸುದ್ದಿಯಲ್ಲಿವೆ. ಜೀವನಿರೋಧಕ ಔಷಧಗಳು ಹಾಗೂ ಕ್ಯಾನ್ಸರ್ ನಿರೋಧಕ ಔಷಧಗಳ ಪರಿಣಾಮಗಳನ್ನು ಗೋ ಅರ್ಕವು ಹೆಚ್ಚಿಸುತ್ತದೆಯೆಂದು ಪ್ರಯೋಗಗಳು ತೋರಿಸಿವೆಯೆಂಬ ಆಧಾರದಲ್ಲಿ ಪೇಟೆಂಟ್ ಪಡೆದಿರುವುದು ಒಂದೆಡೆಯಾದರೆ,[14,15] ಗೋಮೂತ್ರ ಚಿಕಿತ್ಸೆಗಾಗಿಯೇ ಇನ್ನೊಂದು ಪೇಟೆಂಟ್ [16] ಪಡೆಯಲಾಗಿದೆ. ಗೋ ಮೂತ್ರ ಚಿಕಿತ್ಸೆಯ ಬಗ್ಗೆ ಮ್ಯಾನ್ಮಾರ್ ನಿಂದಲೂ,[17] ಅಪಸ್ಮಾರ ಚಿಕಿತ್ಸೆಯಲ್ಲಿ ಗೋಮೂತ್ರದ ಕಷಾಯದ ಬಳಕೆಯ ಬಗ್ಗೆ ನೈಜೀರಿಯದಿಂದಲೂ ವರದಿಗಳಿವೆ.[18] ಗೌಟ್ ಸಂಧಿವಾತ, ಬಿಳಿರಕ್ತಕಣಗಳ ಕಾರ್ಯ, ಯಕೃತ್ತಿನ ಜೀವಕೋಶಗಳ ಮೇಲೆ ಕಾರ್ಬನ್ ಟೆಟ್ರಾಕ್ಲೋರೈಡ್ ನ ಪರಿಣಾಮ ಇತ್ಯಾದಿಗಳಲ್ಲಿ ಗೋ ಅರ್ಕದ ಪ್ರಯೋಜನಗಳ ಬಗ್ಗೆ ಪ್ರಾಣಿಗಳ ಮೇಲೆ ಸಣ್ಣ ಪ್ರಮಾಣದ ಪ್ರಯೋಗಗಳು ನಡೆದಿವೆ.[19-22] ಇಂತಹಾ ವರದಿಗಳನ್ನು ಉತ್ಪ್ರೇಕ್ಷಿಸಿ, ಮನುಕುಲವನ್ನು ಕಾಡುತ್ತಿರುವ ಸುಮಾರು ಎಲ್ಲಾ ಕಾಹಿಲೆಗಳಿಗೂ ಗೋಮೂತ್ರವೇ ಅತ್ಯಂತ ಪರಿಣಾಮಕಾರಿಯಾದ, ಸುರಕ್ಷಿತವಾದ ಚಮತ್ಕಾರಿಕ ಚಿಕಿತ್ಸೆಯೆಂಬಂತೆ ಡಂಗುರ ಸಾರಲಾಗುತ್ತಿದೆ. ಭಾರತ ಸರ್ಕಾರದ ಕೃಷಿ ಸಚಿವಾಲಯದಡಿಯಲ್ಲಿರುವ ಹೈನುಗಾರಿಕಾ ಇಲಾಖೆಯು ಕೂಡಾ ದನದ ಮೂತ್ರವನ್ನು ಔಷಧವನ್ನಾಗಿ ಮಾರುವುದಕ್ಕೆ ಪೂರಕವಾದ ವರದಿಗಳನ್ನು ಪ್ರಕಟಿಸಿದೆ.[23]
ಸತ್ಯವೇನು?
ದನದ ಮೂತ್ರವನ್ನು ಎಲ್ಲೆಂದರಲ್ಲಿ ಮಾರಾಟ ಮಾಡುವ ಭರಾಟೆಯನ್ನೂ, ಅದಕ್ಕೆ ದೊರೆಯುತ್ತಿರುವ ಸರಕಾರದ ಸಕ್ರಿಯ ಬೆಂಬಲವನ್ನೂ ನೋಡಿದಾಗ ಅಮಾಯಕರ ಗಂಟಲೊಳಗೆ ದನದ ಕಶ್ಮಲಗಳನ್ನು ತಳ್ಳುವ ಅಪಾಯಕಾರೀ ಪ್ರವೃತ್ತಿಯು ಹೆಚ್ಚುತ್ತಿರುವುದು ದಿಟವಾಗುವುದರಿಂದ ಇದರ ಹಿಂದಿರುವ ಸತ್ಯವನ್ನು ಕೆದಕುವುದು ಅನಿವಾರ್ಯವಾಗಿದೆ.
ಗೋ ಮೂತ್ರ ವ್ಯಾಪಾರದ ಪ್ರವರ್ತಕರ ಸೋಗಲಾಡಿತನವನ್ನು ಕಾಣಬೇಕಾದರೆ, ಗೋಮೂತ್ರದ ಔಷಧೀಯ ಗುಣಗಳನ್ನು ತಿಳಿಸುವ ಮೂಲಾಧಾರಗಳೆನ್ನಲಾದ ಆಯುರ್ವೇದದ ಗ್ರಂಥಗಳನ್ನೇ ಪರಿಶೀಲಿಸಿದರೆ ಸಾಕಾಗುತ್ತದೆ. ಆಯುರ್ವೇದದ ಮೂರು ಗ್ರಂಥಗಳಾದ ಚರಕ ಸಂಹಿತೆ (1-2ನೇ ಶತಮಾನ), ಸುಶ್ರುತ ಸಂಹಿತೆ (3-4ನೇ ಶತಮಾನ) ಹಾಗೂ ವಾಗ್ಭಟನ ಬರಹಗಳಲ್ಲಿ (7ನೇ ಶತಮಾನ) ರೋಗ ಚಿಕಿತ್ಸೆಯಲ್ಲಿ ಗೋಮಾಂಸದ ಪ್ರಯೋಜನಗಳ ಬಗ್ಗೆಯೂ ಹೇಳಲಾಗಿದೆಯಾದರೂ,[24,25] ಗೋ ಮೂತ್ರ ವ್ಯಾಪಾರದ ಪ್ರವರ್ತಕರು ಆ ಬಗ್ಗೆ ಚಕಾರವನ್ನೆತ್ತುವುದಿಲ್ಲ. ಭಾರತೀಯ ಸಂಸ್ಕೃತಿಯ ಸ್ವಯ ಘೋಷಿತ ಸಂರಕ್ಷಕರ ವಾದಗಳನ್ನು ಒಪ್ಪುವುದಾದರೆ, ಗೋಮಾಂಸ ಭಕ್ಷಣೆಯು ಪಾಪವೆನಿಸುತ್ತದೆ, ಗೋಮೂತ್ರವನ್ನು ಕುಡಿಯುವುದು ಹಾಗೂ ಗೋವಿನ ಸೆಗಣಿಯನ್ನು ತಿನ್ನುವುದು ಪುಣ್ಯದ ಕೆಲಸವಾಗುತ್ತದೆ.
ಆದರೆ ಗೋಮೂತ್ರಕ್ಕೆ ಪೇಟೆಂಟ್ ಪಡೆಯಲಾಗಿಲ್ಲವೇ? ಯಾವುದೇ ಸಂಶೋಧನೆಯನ್ನು ಇತರರು ನಕಲು ಮಾಡದಂತೆ ಯಾ ಮಾರದಂತೆ ನಿರ್ಬಂಧಿಸುವ ಏಕಸ್ವಾಮ್ಯತೆಯನ್ನಷ್ಟೇ ಪೇಟೆಂಟ್ ಒದಗಿಸುತ್ತದೆಯಲ್ಲದೆ, [26] ಅದು ಆ ಸಂಶೋಧನೆಯ ಉಪಯುಕ್ತತೆಗೆ ಆಧಾರವೆನಿಸದು. ಇನ್ನೊಂದೆಡೆ, ಗೋಮೂತ್ರಕ್ಕೆ ವಿದೇಶಗಳಲ್ಲಷ್ಟೇ ಪೇಟೆಂಟ್ ಪಡೆಯಲಾಗಿದ್ದು, ಭಾರತ ಸರಕಾರದಿಂದ ಪೇಟೆಂಟ್ ಪಡೆದ ಬಗ್ಗೆ ವರದಿಗಳಿಲ್ಲ. ಅಂತರರಾಷ್ಟ್ರೀಯ ಪೇಟೆಂಟ್ ಗಿರುವ ಮಾನ್ಯತೆಯಾಗಲೀ, ಸುದ್ದಿಮೌಲ್ಯವಾಗಲೀ ಭಾರತೀಯ ಪೇಟೆಂಟಿಗೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿರಬಹುದೇನೋ? ಅಲ್ಲದೆ, ವಿದೇಶೀಯರೂ ಗೋಮೂತ್ರದ ಮಹತ್ವವನ್ನು ಗುರುತಿಸಿದ್ದಾರೆಂದು ಹೇಳಿಕೊಳ್ಳಲು ಇದಕ್ಕಿಂತ ಉತ್ತಮವಾದ ಪುರಾವೆಯೇನು ಬೇಕು?
ಗೋಮೂತ್ರದ ಪ್ರಯೋಜನಗಳ ಬಗ್ಗೆ ಪ್ರಯೋಗಾಲಯಗಳಲ್ಲಿ ಕೆಲವು ಅಧ್ಯಯನಗಳನ್ನು ನಡೆಸಲಾಗಿರುವ ಬಗ್ಗೆ ವರದಿಗಳಷ್ಟೇ ಇವೆಯಲ್ಲದೆ, ಮನುಷ್ಯರಲ್ಲಿ ಯಾವುದೇ ವೈಜ್ಞಾನಿಕವಾದ ಅಧ್ಯಯನಗಳನ್ನು ನಡೆಸಲಾದ ಬಗ್ಗೆ ವರದಿಗಳಿಲ್ಲ. ಅಲ್ಲಿಲ್ಲೊಂದು ‘ಅನುಭವದ ವರದಿಗಳು’ ಹಾಗೂ ಸ್ವಯಂಘೋಷಿತ ‘ಗೋಮೂತ್ರ ಚಿಕಿತ್ಸಕರು’ ನಡೆಸಿದ್ದಾರೆನ್ನಲಾದ ಅಧ್ಯಯನಗಳ ವರದಿಗಳು ಲಭ್ಯವಿವೆಯಾದರೂ ಇವು ಯಾವುದೇ ವೈಜ್ಞಾನಿಕ ಮಾನದಂಡಗಳಿಗೂ ನಿಲುಕುವುದಿಲ್ಲ.[27] ಒಂದಕ್ಕೊಂದು ತಾಳೆ ಹೊಂದದ ಹಲವು ವಿಚಾರಗಳು ಅಂತಹಾ ವರದಿಗಳಲ್ಲಿ ಯಥೇಷ್ಟವಾಗಿ ದೊರೆಯುತ್ತವೆ: ಉದಾಹರಣೆಗೆ, ಗೋಮೂತ್ರದಲ್ಲಿ ತಾಮ್ರ ಹಾಗೂ ಚಿನ್ನದ ಅಂಶಗಳಿವೆ ಎಂದು ಹೇಳಲಾಗಿರುವ ಲೇಖನದಲ್ಲಿಯೇ ಇದನ್ನು ನಿರಾಕರಿಸುವ ವಿವರಗಳನ್ನೂ ನೀಡಲಾಗಿದೆ![8,28]
ಮೂತ್ರ ಬರೇ ಮೂತ್ರ, ಪ್ರಾಣಿಯ ಮೂತ್ರ ಪಿಂಡಗಳು ರಕ್ತದಿಂದ ಕಶ್ಮಲಗಳನ್ನು ಬೇರ್ಪಡಿಸಿ, ಮೂತ್ರನಾಳಗಳ ಮೂಲಕ ವಿಸರ್ಜಿಸುವ ಒಂದು ದ್ರಾವಣ, ಅಷ್ಟೆ. ಪ್ರಾಣಿಯ ಶರೀರದಲ್ಲಾಗುವ ಉಪಾಪಚಯದ ಕ್ರಿಯೆಗಳಲ್ಲಿ ಹುಟ್ಟಿಕೊಳ್ಳುವ ಹಲವು ಸಂಯುಕ್ತಗಳು, ದೇಹಕ್ಕೆ ಅಗತ್ಯವಿಲ್ಲದ ಲವಣಗಳು ಹಾಗೂ ಮೂತ್ರವು ಸಲೀಸಾಗಿ ವಿಸರ್ಜನೆಗೊಳ್ಳುವುದಕ್ಕೆ ನೆರವಾಗಲು ಮೂತ್ರನಾಳಗಳು ಸ್ರವಿಸುವ ಕೆಲವೊಂದು ವಿಶೇಷವಾದ ಸಂಯುಕ್ತಗಳು ಮೂತ್ರದಲ್ಲಿರುತ್ತವೆ. ಸಹಜವಾಗಿಯೇ, ಪ್ರಾಣಿಗಳು ಹಾಗೂ ಮನುಷ್ಯರ ಮೂತ್ರಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ. [28,29] ಮೂತ್ರವು ವಿಸರ್ಜನೆಗೊಳ್ಳುವಾಗ ಹೆಪ್ಪುಗಟ್ಟದಂತೆ ತಡೆಯುವ ಯೂರೋಕೈನೇಸ್ ಎಂಬ ಕಿಣ್ವವೊಂದು ಮೂತ್ರದಲ್ಲಿದೆ. ಮಾನವ ಮೂತ್ರದಿಂದ ಯೂರೋಕೈನೇಸ್ ಅನ್ನು ಪ್ರತ್ಯೇಕಿಸಿ, ರಕ್ತವು ಹೆಪ್ಪುಗಟ್ಟಿ ಮುಚ್ಚಿಹೋಗಿರುವ ಹೃದಯದ ಅಪಧಮನಿಯನ್ನು ತೆರೆಯಲು ಹೃದಯಾಘಾತದ ಸಂದರ್ಭದಲ್ಲಿ ತುರ್ತುಚಿಕಿತ್ಸೆಗಾಗಿ ಅದನ್ನಿಂದು ನಾವು ಬಳಸುತ್ತಿದ್ದೇವೆ.[30] ಹಾಗೆಂದು ಹೃದಯಾಘಾತವಾದಾಗ ರೋಗಿಗೆ ಮೂತ್ರವನ್ನು ಕುಡಿಸಿದರೆ ರೋಗಿಯನ್ನು ಉಳಿಸಲಿಕ್ಕಾಗುತ್ತದೆಯೇ ಅಥವಾ ಮನುಷ್ಯನ ಮೂತ್ರವು ಪೂಜನೀಯವಾಗಿಬಿಡುತ್ತದೆಯೇ?
ಗೋಮೂತ್ರವು ಮಾನವರಿಗೆ ಸುರಕ್ಷಿತವೇ? ಗೋಮೂತ್ರದ ಉತ್ಪನ್ನಗಳನ್ನು ಸೇವಿಸುವುದರಿಂದ ಗಂಭೀರವಾದ, ಕೆಲವೊಮ್ಮೆ ಪ್ರಾಣಾಂತಿಕವಾಗಬಹುದಾದ ದುಷ್ಪರಿಣಾಮಗಳು ಉಂಟಾಗಿರುವ ಬಗ್ಗೆ ವರದಿಗಳಿವೆ ಹಾಗೂ ಪ್ರಯೋಗಗಳಿಂದಲೂ ಇದು ಶ್ರುತಪಟ್ಟಿದೆ.[31] ಇಲಿಜ್ವರವೂ ಸೇರಿದಂತೆ ಬಾಯಿಯ ಮೂಲಕ ಹರಡುವ ಕೆಲವು ಸೋಂಕುರೋಗಗಳಿಗೂ ಗೋಮೂತ್ರವು ಕಾರಣವಾಗಬಹುದು.[32] ಗೋಮೂತ್ರ ಹಾಗೂ ಗೋಮಯ (ಸೆಗಣಿ) ಗಳಿಗೆ ಸೂಕ್ಷ್ಮಾಣುಜೀವಿನಾಶಕ ಶಕ್ತಿಯಿದೆಯೆಂಬ ಹೇಳಿಕೆಗಳು ಆಧಾರರಹಿತವಷ್ಟೇ ಅಲ್ಲ, ತೀರಾ ಅಪಾಯಕಾರಿಯೂ ಆಗಿವೆ. ಸೆಗಣಿ (ಹಾಗೂ ಎಲ್ಲಾ ಪ್ರಾಣಿಗಳ ಮಲಗಳು) ಕರುಳಿನಿಂದ ವಿಸರ್ಜಿತಗೊಂಡ ಸೂಕ್ಷ್ಮಾಣುಜೀವಿಗಳಿಂದ ತುಂಬಿ ತುಳುಕುತ್ತಿರುವುದು ಒಂದೆಡೆಯಾದರೆ, ಪಂಚಗವ್ಯದಲ್ಲಿಯೂ ಹಲವು ತರದ ಸೂಕ್ಷ್ಮಾಣುಜೀವಿಗಳಿರುವುದನ್ನು ಗುರುತಿಸಲಾಗಿದೆ.[33,34] ಸೂಕ್ಷ್ಮಾಣುಜೀವಿಗಳಿಂದ ತುಂಬಿರುವ ಈ ಮಲ-ಮೂತ್ರಗಳನ್ನು ತೆರೆದ ಗಾಯಗಳಿಗೇನಾದರೂ ಲೇಪಿಸಿದರೆ ಮಾರಣಾಂತಿಕವಾಗಬಲ್ಲ ಸೋಂಕುಂಟಾಗಬಹುದು. ಈ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಗಳಾದವರಷ್ಟೇ ದನದ ಮಲ-ಮೂತ್ರಗಳನ್ನು ಸೂಕ್ಷ್ಮಾಣುಜೀವಿನಾಶಕಗಳೆಂದು ಮಾರುವ ಸಾಹಸಕ್ಕೆ ಕೈಯಿಕ್ಕಬಹುದೆನ್ನುವುದು ನಿಜವಿದ್ದರೂ, ಆಧುನಿಕ ವೈದ್ಯವಿಜ್ಞಾನದಲ್ಲಿ ಪರಿಣತರಾದ ಕೆಲವು ವೈದ್ಯರುಗಳು, ತಮ್ಮ ‘ಆಧ್ಯಾತ್ಮಿಕ ಗುರುಗಳ’ ಅಥವಾ ಮಠಾಧಿಪತಿಗಳ ಮೇಲಿನ ಕುರುಡು ಭಕ್ತಿಯಿಂದ, ಇಂತಹುದನ್ನು ಬೆಂಬಲಿಸುತ್ತಿರುವುದು ದೊಡ್ದ ದುರಂತವೆಂದೇ ಹೇಳಬೇಕು.
ಔಷಧಗಳಲ್ಲ, ಅಪಮಾನ
ಆದ್ದರಿಂದ ಗೋಮೂತ್ರ ಹಾಗೂ ಸೆಗಣಿಗಳು, ಇತರೆಲ್ಲ ಪ್ರಾಣಿಗಳ ಮಲ-ಮೂತ್ರದಂತೆ, ದೇಹಕ್ಕೆ ಅಗತ್ಯವಿಲ್ಲದೆ ವಿಸರ್ಜಿಸಲ್ಪಟ್ಟ ಕಶ್ಮಲಗಳಷ್ಟೇ ಆಗಿವೆ ಮತ್ತು ಗೋಮೂತ್ರ ಯಾ ಸೆಗಣಿಗೆ, ಬೇರಾವುದೇ ಪ್ರಾಣಿಯ (ಮನುಷ್ಯನದೂ ಸೇರಿ) ಮಲ-ಮೂತ್ರಗಳಿಗಿಲ್ಲದ ವಿಶೇಷವಾದ, ಪೂಜನೀಯ ಸ್ಥಾನವನ್ನು ಕಲ್ಪಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲವೇ ಇಲ್ಲ.
ದನದ ಮಲ-ಮೂತ್ರಗಳು (ಮತ್ತವುಗಳ ಉತ್ಪನ್ನಗಳು) ಎಲ್ಲಾ ರೋಗಗಳ ಚಿಕಿತ್ಸೆಯಲ್ಲಿ ಅತಿ ಪರಿಣಾಮಕಾರಿಯಾಗಿವೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ, ಮಾತ್ರವಲ್ಲ, ಮನುಷ್ಯರಲ್ಲಿ ಈ ಕುರಿತು ನೇರವಾದ ಅಧ್ಯಯನಗಳು ನಡೆದಿರುವ ಬಗ್ಗೆ ವರದಿಗಳಿಲ್ಲ. ಬದಲಾಗಿ, ಗೋಮೂತ್ರದ ಬಳಕೆಯಿಂದ ಆಗಬಹುದಾದ ಗಂಭೀರವಾದ ದುಷ್ಪರಿಣಾಮಗಳ ಬಗ್ಗೆ ವರದಿಗಳಿರುವಾಗ, ಇಂತಹಾ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೂ, ಸರ್ವ ರೋಗ ನಿವಾರಕಗಳೆಂದು ಅತಿರಂಜಿತವಾಗಿ ಪ್ರಚಾರ ಮಾಡುವುದಕ್ಕೂ ಆಸ್ಪದ ನೀಡಲಾಗಿರುವುದು ಮತ್ತು ಅದಕ್ಕೆ ಭಾರತ ಸರಕಾರದ ಇಲಾಖೆಗಳ ಸಕ್ರಿಯವಾದ ಬೆಂಬಲವೂ ಇದೆಯೆನ್ನುವುದು ಅತ್ಯಂತ ಆಘಾತಕಾರಿಯಾಗಿದೆ.
ದನದ ಮಲ-ಮೂತ್ರಗಳಿಂದ ಮನುಕುಲಕ್ಕೆ ಅತ್ಯಮೋಘವಾದ ಪ್ರಯೋಜನಗಳಿವೆಯೆಂಬ ಪ್ರಚಾರದ ಹಿಂದೆ ಧಾರ್ಮಿಕ ಅಂಧಶ್ರದ್ಧೆಯನ್ನು ಬಲಪಡಿಸಬಯಸುವ ಪ್ರತಿಗಾಮಿ ಶಕ್ತಿಗಳಿರುವುದು ಸರ್ವವಿದಿತವಾಗಿದೆ ಮಾತ್ರವಲ್ಲ, ‘ಚಿಕಿತ್ಸೆ’ ಹಾಗೂ ‘ದೀರ್ಘಾಯುಷ್ಯ’ದ ಹೆಸರಲ್ಲಿ ಜನಸಾಮಾನ್ಯರನ್ನು ದನದ ಮಲ-ಮೂತ್ರ ಸೇವನೆಗೆ ತಳ್ಳುವ ದುರುದ್ದೇಶವೂ ಇರುವಂತಿದೆ. ಇದೇ ಮೂಲಭೂತವಾದಿ ಶಕ್ತಿಗಳು ದಲಿತರಿಗೆ ಮನುಷ್ಯನ ಮಲ-ಮೂತ್ರಗಳನ್ನು ತಿನ್ನಿಸಿದ ಹಲವಾರು ಪ್ರಕರಣಗಳು ವರದಿಯಾಗಿರುವಾಗ ಇದರಲ್ಲಿ ಅಚ್ಚರಿಯೇನೂ ಇಲ್ಲ.[35]
ಹಾಲನ್ನು ನೀಡುತ್ತದೆ ಎನ್ನುವ ಕಾರಣಕ್ಕಾಗಿ (ಮಲ-ಮೂತ್ರಗಳಿಗಾಗಿ ಅಲ್ಲವೆಂದು ನಂಬೋಣ) ದನವನ್ನು (ಅಷ್ಟೇ ‘ಉಪಯುಕ್ತವೆನಿಸುವ’ ಎಮ್ಮೆಯನ್ನಲ್ಲ) ‘ಎರಡನೇ ತಾಯಿ’, ‘ವಿಶ್ವಮಾತೆ’ [11] ಇತ್ಯಾದಿಯಾಗಿ ವೈಭವೀಕರಿಸುವುದನ್ನು ನೋಡುವಾಗ, ಕೇವಲ ಹಾಲೂಡಿಸುವುದಷ್ಟೇ ತಾಯ್ತನವೇ ಹಾಗೂ ಕೇವಲ ಅಷ್ಟಕ್ಕಾಗಿಯೇ ನಾವು ತಾಯಂದಿರನ್ನು ಗೌರವಿಸುತ್ತೇವೆಯೇ ಎಂಬ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ.
ವಯಸ್ಸಾದ ದನಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡದಂತೆ ತಡೆಯುವ ಮತ್ತು ಆ ಮೂಲಕ ಬಡವರಿಗೂ, ದಲಿತರಿಗೂ ಅಗ್ಗದ ಮಾಂಸವು ದೊರೆಯದಂತೆ ಮಾಡುವ ಹಾಗೂ ಮಾಂಸ ವ್ಯಾಪಾರಿಗಳ ವಹಿವಾಟಿಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದಲೇ ಹಾಲು ಕೊಡಲಾಗದ ದನಗಳನ್ನು ಮಲ-ಮೂತ್ರಗಳಿಗಾಗಿ ಸಾಕುವುದು ಆರ್ಥಿಕವಾಗಿ ಬಹಳ ಲಾಭದಾಯಕವೆಂದು (ಇದಕ್ಕೆ ಯಾವುದೇ ಆಧಾರಗಳು ಇದ್ದಂತಿಲ್ಲ) ಪ್ರಚಾರ ಮಾಡಲಾಗುತ್ತಿದೆ. ಆದರೆ ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.[36,37] ಆದ್ದರಿಂದ ಪ್ರಜ್ಞಾವಂತರೆಲ್ಲರೂ ಈ ಎಲ್ಲಾ ವಿಚಾರಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವನ್ನು ತಳೆಯುವುದು ಅತ್ಯಗತ್ಯವಾಗಿದೆ.
ಆಕರಗಳು:

  1. Cattle. The Wikipedia Available at http://en.wikipedia.org/wiki/Cattle
  2. Discover how cows have altered human life, human biology, and the
    geography of the world Availalbe at http://www.pbs.org/wnet/nature/holycow/
  3. Subhuman Das. Indian Cows: Blessed Bovines! http://hinduism.about.com/library/weekly/aa101800a.htm
  4. http://www.vishwagou.org/
  5. Cow Protection Available at http://www.vhp.org/protectthecow.php
  6. Taneja N. Mangalore ‘Riots’. People’s Democracy. October 22, 2006; 30(43) Available at
    http://pd.cpim.org/2006/1022/10222006_nalini.htm
  7. Rajalakshmi TK. Slaughter of the Dalits. Frontline November 09 –
    22, 2002;19(23) Available at http://www.hinduonnet.com/fline/fl1923/stories/20021122003703800.htm
  8. Cow Urine: Principles & Applications Available at http://www.hkrl.com/cowurine.html
  9. Panchagavya. Available at
    http://www.thereligiousproducts.com/panchagavya.html
  10. Natarajan K. Panchagavya: How to Make. Available at
    http://www.agricultureinformation.com/forums/organic-farming/15995-panchagavya-how-make.html
  11. Seminar on mother cow and Panchagavya. Available at
    http://www.goshala.com/articles/panchagavya.php
  12. http://www.goshalaindia.com/scientific-propeties.html
  13. http://www.daijiworld.com/news/news_disp.asp?n_id=48836&n_tit=Belthangady%3A+Live+Naturally%2C+Be+Free+From+Ailments+-+Raghaveswara+Bharathi
  14. Dhama K, Chauhan RS, Singhal L. Anti-cancer activity of cow urine: Current status and future directions. International Journal of Cow Science 2005;1(2) Available at
    http://indianjournals.com/ijor.aspx?target=ijor:ijcs&volume=1&issue=2&article=001
  15. Khanuja SPS et al. Use Of Bioactive Fraction From Cow Urine Distillate (‘Go Mutra’) As A Bio-Enhancer Of Anti-Infective, Anti-Cancer Agents And Nutrients Available at http://www.freepatentsonline.com/EP1330253.html
  16. Jain VK. Cow Urine Therapy And Herbal Medicinal Composition With Cow Urine And Method Of Manufacturing The Same World Intellectual Property Organisation, International Patent No WO/2002/096440 Available at
    http://www.wipo.int/pctdb/en/wo.jsp?IA=IN2001000136&WO=2002096440&DISPLAY=DESC
  17. Awale et al. An amazing cow’s urine therapy in Myanmar. J Trad Med. 2006;23:178-83 Available at http://www.jstage.jst.go.jp/article/jtm/23/5/178/_pdf
  18. Elegbe RA, Oyebola DD. Cow’s urine poisoning in Nigeria: cardiorespiratory effects of cow’s urine in dogs. Trans R Soc Trop Med Hyg. 1977;71(2):127-32.
  19. Influence of “Divine Cow Powder” on Peripheral Tissues of Acute Gouty Arthritis Acta Universitatis Traditionis Medicalis Sinensis Pharmacologiaeque Shanghai 2007 Available at
    http://www.shvoong.com/medicine-and-health/1597348-influence-divine-cow-powder-peripheral/
  20. Dipanwita Dutta, S Saravana Devi, K Krishnamurthi, T Chakrabarti Anticlastogenic effect of redistilled cow’s urine distillate in human peripheral lymphocytes challenged with manganese dioxide and hexavalent chromium. Biomed Environ Sci. 2006 Dec ;19 (6):487-94. Available at http://lib.bioinfo.pl/pmid:17319276
  21. K Krishnamurthi, Dipanwita Dutta, S D Sivanesan, T Chakrabarti. Protective effect of distillate and redistillate of cow’s urine in human polymorphonuclear leukocytes challenged with established genotoxic chemicals. Available at http://lib.bioinfo.pl/pmid:15602821
  22. Achliya GS, Kotagale NR, Wadodkar SG, Dorle AK. Hepatoprotective activity of panchagavya ghrita against carbontetrachloride induced hepatotoxicity in rats. Indian journal of pharmacology 2003;35(5):308-311 Available at http://cat.inist.fr/?aModele=afficheN&cpsidt=15240774
  23. Sunil Mansinghka. Bi Products Of Cattle – Organic Manure And Cow Urine – Medicines – Draught – Gas – Electricity. Available at http://dahd.nic.in/ch5/chap5.htm
  24. Jha DN. Paradox of the Indian Cow: Attitudes to Beef Eating in Early India. Available at http://www.indowindow.net/sad/article.php?child=17&article=11
  25. Cathy Wong Ayurvedic Foods for Your Type: How to Eat for Your Dosha. Available at
    http://altmedicine.about.com/cs/2/a/ayurveda.htm
  26. Patent. Available at
    http://en.wikipedia.org/wiki/Patent
  27. Research paper and observation. Dr. Jain’s Cow urine Therapy. Available at http://www.cowurine.com/research-paper.html
  28. The Main Elements of Cow Urine and Their Functions. Dr. Jain’s Cow urine Therapy. Available at http://www.cowurine.com/main-element-of-cow.html
  29. Putnam DF. Composition And Concentrative Properties Of Human Urine. Available at
    http://ntrs.nasa.gov/archive/nasa/casi.ntrs.nasa.gov/19710023044_1971023044.pdf
  30. Urokinase. Available at http://en.wikipedia.org/wiki/Urokinase
  31. Oyebola DD, Elegbe RA. Cow’s urine poisoning in Nigeria. Experimental observations in mice. Trop Geogr Med. 1975 Jun;27(2):194-202.
  32. Sharma S, Vijayachari P, Sugunan AP, Sehgal SC. Leptospiral carrier state and seroprevalence among animal population – a cross-sectional sample survey in Andaman and Nicobar Islands.
    Epidemiology and Infection. 2003;131:985-989
  33. Akinde SB, Obire O. Aerobic heterotrophic bacteria and petroleum-utilizing bacteria from cow dung and poultry manure. World Journal of Microbiology and Biotechnology 2008;24(9):1999-2002
  34. Bhat SS, Vinu AK, Naidu R. Association of Diverse Groups of Bacteria with ‘Panchagavya’ and their Effect on Growth Promotion of Coffee Seedlings. The Association for Science and Information on Coffee (ASIC):
    Proceedings of ASIC Conferences – 20th Colloquium : Agronomy Available at http://www.asic-cafe.org/pdf/abstract/PA224_2004.pdf
  35. Siriyavan Anand. India Shining with Hindu Diet: Cow urine and dung for caste hindus, Human shit and piss for dalits. Available at
    http://www.chowk.com/ilogs/65586/48030
  36. Rearing cattle produces more greenhouse gases than driving cars, UN report warns. Available at
    http://www.un.org/apps/news/story.asp?NewsID=20772&Cr=global&Cr1=warming
  37. Livestock’s Long Shadow–Environmental Issues and Options. Available at
    http://www.virtualcentre.org/en/library/key_pub/longshad/A0701E00.pdf

‍ಲೇಖಕರು avadhi

October 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

6 ಪ್ರತಿಕ್ರಿಯೆಗಳು

  1. Nalini

    It is high time somebody wrote an educative article on this subject! The use of gomutra is wide spread in Karnataka now! So many of my relatives are taking it! When you look at it objectively and scientifically it is quite clear that it is just an excretion of cow’s body same as human urine! Thanks for an informative article!

    ಪ್ರತಿಕ್ರಿಯೆ
  2. subramani

    ಲೇಖನದ ಮಾಹಿತಿ ತುಂಬಾ ಉಪಯುಕ್ತವಾಗಿದೆ.
    ಹಾಗೆಯೇ ಅವಧಿಯ ಮುಖ ತ್ವಜೆ ಸಖತ್ತಾಗಿದೆ.
    ಸುಬ್ರಮಣಿ

    ಪ್ರತಿಕ್ರಿಯೆ
  3. manassu

    @@
    ಆದರೆ ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.[36,37] ಆದ್ದರಿಂದ ಪ್ರಜ್ಞಾವಂತರೆಲ್ಲರೂ ಈ ಎಲ್ಲಾ ವಿಚಾರಗಳ ಬಗ್ಗೆ ವಸ್ತುನಿಷ್ಠವಾದ, ವೈಜ್ಞಾನಿಕವಾದ ಅಭಿಪ್ರಾಯವನ್ನು ತಳೆಯುವುದು ಅತ್ಯಗತ್ಯವಾಗಿದೆ.
    ಮನುಶ್ಯನೂ ಕೂಡ ಪರಿಸರಕ್ಕೆ ಹೊರೆಯಾಗಿರಬೇಕಲ್ಲವೇ? ಆಗಿದ್ದಾನೆ. ತನ್ನ ಮುಗಿಯದ ಕೊಳ್ಳುಬಾಕತನದಿಂದ ಪರಿಸರವನ್ನು ಗುಡಿಸಿ ಗುಂಡಾರ ಮಾಡಿರುವುದು ಮನುಶ್ಯ ತಾನೆ? ಅಟ್ಟ ಹಾಸದಿಂದ ಮೆರೆದಾಡುತ ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದು ತಿನ್ನುತ್ತ ನೆಲವನ್ನು ನರಕ ಮಾಡಿದವನು ಮನುಶ್ಯತಾನೆ? ಹೊಗೆಯುಗುಳುವ ಯಂತ್ರ ಕಂಡುಹಿಡಿದು ಕೋಟಿ ಕೇಜಿಗಟ್ಟಲೆ ಇಂಗಾಲದ ಡೈಆಕ್ಸಡನ್ನು ಗಾಳಿಯಲ್ಲಿ ಸೇರಿಸಿ ಬದುಕನ್ನು ಉಸಿರು ಕಟ್ಟಿಸಿದವನು ಮನುಶ್ಯತಾನೆ? ಆದುನಿಕತೆಯ ಹಣೆ ಪಟ್ಟಿ ಕಟ್ಟಕೊಂಡು ಇಂದು ಬಂದಿರುವ ಅಲೋಪತಿಯ ಮದ್ದುಗಳೆಶ್ಟು ಮರಣದ ಉರುಳುಗಳಾಗಿಲ್ಲ? ಅಂತಹ ಮರಣದ ಮದ್ದುಗಳನ್ನು ಅಮಾಯಕ ಜನಗಳ ಮೇಲೆ ಪ್ರಯೋಗ ನಡೆಸುತ್ತಿಲ್ಲ? ಕ್ಯಾನ್ಸರ್ ಬಂದಿರುವುದು ಈ ಆದುನಿಕ ಅಟ್ಟ ಹಾಸದಿಂದ ತಾನೆ? ಮಾನವನ ಕೂಳ ಬದುಕಿನಿಂದ ತಾನೆ? ಮತ್ತೆ ಮನುಶ್ಯರನ್ನು ಯಾಕೆ ಸಾಕಬೇಕು? ಸಾಲಾಗಿ ನಿಲ್ಲಿಸಿ ಕೊಂದು ಮನುಶ್ಯಸಂಕೆಯನ್ನು ಕಡಿಮೆ ಮಾಡುವುದನ್ನು ಈ ಆದುನಿಕ ರುವಾರಿಗಳೇಕೆ ಚಿಂತಿಸುತ್ತಿಲ್ಲ?
    ಈ ಆದುನಿಕ ರುವಾರಿಗಳಿಗಿರುವುದು ಕ್ರಿಶ್ಚಿಯನ್ ಧರ್ಮದ ಹಿನ್ನೆಲೆ ಅನ್ನುವುದು ಮರೆಯಬೇಡ. ಗೋವುಗಳ ಬಗ್ಗೆ ಇಶ್ಟೆಲ್ಲ ಹೆಕ್ಕಿ ತಂದಿರುವ ನಿಮ್ಮ ಬರಹ, ವರದಿಗಿರುವ ಹಿನ್ನೆಲೆ ಕ್ರಿಶ್ಚಿಯನ್ ದರ್ಮದ ಕರಾಳ ಕೈ ಅನ್ನವುದನ್ನು ತಿಳಿಯದೇ ಹೇಳಹೊರಟಿರುವ ಮಂಕು ನಿಮ್ಮದು. ದಲಿತರ ಮೇಲೆ ನಡೆದಿರುವ ಕೀಳು ನಡವಳಿಕೆಯನ್ನು ಕಂಡಿಸಿ ಅದನ್ನು ನಿಲ್ಲಿಸುವುದರ ಬಗ್ಗೆ ತಿಳಿಯೋಣ. ಅದು ಬಿಟ್ಟು ನಂಬಿಕೆಗೆ ಕೊಡಲಿ ಇಡಲು ಹೊರಟ ನಿಮಗೆ ಒಂದು ಎದರು ಮಾತು.
    @@
    ಪ್ರಾಣಿಗಳ ಸಾಕಣೆಯಿಂದಾಗಿ ಪರಿಸರದ ಮೇಲೆ ಅಗಾಧವಾದ ಹೊರೆಯಾಗುವುದೆಂದೂ, ಜಾಗತಿಕ ತಾಪಮಾನದ ಏರಿಕೆಗೆ ಮುಖ್ಯವಾದ ಕಾರಣಗಳಲ್ಲಿ ಇದೂ ಒಂದೆಂದೂ ವಿಶ್ವ ಸಂಸ್ಥೆಯ ವರದಿಯಲ್ಲಿ.
    ಪ್ರಾಣಿಗಳಿಗಿಂತ ಮನುಶ್ಯನೇ ಪರಿಸರ ಹಾನಿಗೆ ಹೆಚ್ಚು ಕಾರಣ. ಯಾವ ಪ್ರಾಣಿಯೂ ಪರಿಸರ ಹಾನಿಯಾಗುವ ರೀತಿ ಬದುಕುತ್ತಿಲ್ಲ. ಅದು ಜೀವ ವೈವಿದ್ಯದ ಸಮತೋಲನ ಕಾಪಾಡುವದರಲ್ಲಿ ಒಂದು ಮುಕ್ಯ ಪಾತ್ರವಹಿಸಿವೆ. ಅಂದ ಮೇಲೆ ಈ ಮನುಶ್ಯನನ್ನು ಸಾಕುವುದು ಬದುಕಿಸುವುದರಲ್ಲಿ ಎಂತ ಒಳಿತಿದೆ? ಸಾಲಾಗಿ ನಿಲ್ಲಿಸಿ ಕೊಂದು ಬಿಡೋಣವೆ?
    ಭಾರತದ ಗೋಮೂತ್ರ ಸಗಣಿಯ ಬಗ್ಗೆ ಅಲ್ಲಗಳೆಯುವ ನೀವು…ಆದುನಿಕ ದೇಶಗಳ ಪ್ಯಾರಸಿಟಾಮಲ್, ಬ್ರೂಫಿನ್, ಆಸ್ಪರೀನ್ ಎಂಬ ನೂರಾರು ವಿಷಗಳ ಬಗ್ಗೆ ಯಾಕೆ ಮಾತೆತ್ತಿಲ್ಲ? ಮುಂದುವರಿದ ದೇಶಗಳಲ್ಲಿ ಮಾರಾಟ ನಿಲ್ಲಿಸಿರುವ ಇಂತಹ ಸಾವಿರಾರು ಮದ್ದುಗಳು ಭಾರತದಲ್ಲಿ ಮಾರಾಟವಾಗುವುದರ ಬಗ್ಗೆ ನಿಮಗೆ ಕಾಣಿಸುವುದಿಲ್ಲವೇ? ಯಾಕೆ ಆ ನಿಟ್ಟಿನಲ್ಲಿ ಮಾತನಾಡುತ್ತಿಲ್ಲ?
    ನಿಮ್ಮ ಈ ಬರಹದಲ್ಲಿ ಹೊಸತೇನಿಲ್ಲ. ಆರು ನೂರು ವರ್ಶಗಳ ಕಾಲ ಬರೆಯುತ್ತ ಬಂದಿರುವ ಕ್ರಿಶ್ಚಿಯನ್ ಮಿಶನರಿಗಳ ಮಾತನ್ನೇ ನೀವು ಬರೆದು ಸೈ ಎನಿಕೊಳ್ಳುವ ಹುನ್ನಾರ. ಸಾವಿರಾರು ವರುಶಗಳಿಂದ ಮೂದಲಿಸುತ್ತ ಬಂದಿರುವ ಮುಸ್ಲೀಮ್ ಮುಲ್ಲಗಳ ಮಾತನ್ನೇ ಬರೆದು ಆಧುನಿಕ ಅಟ್ಟಿ ಕಟ್ಟಿದ್ದೀರ ಅಶ್ಟೆ.
    ಇನ್ನೂ ಮುಂದು ವರೆದು ಹೆಚ್ಚು ಹೆಚ್ಚು ಇದರ ಬಗ್ಗೆ ಬರೆಯಿರಿ. ನಿಮಗೆ ಅಮೇರಿಕ, ಇಂಗ್ಲಾಂಡ್, ಇನ್ನು ಮುಂದಾದ ದೇಶಗಳಿಗೆ ಕರೆದು ಕೊಂಡು ಹೋಗಿ ನೈಟ್ ಹುಡ್ ಕೊಡಿಸುತ್ತಾರೆ. ನೋಬೆಲ್ ಪ್ರಶಸ್ತಿ ಕೊಡಿಸುತ್ತಾರೆ. ಹೆಂಡ ಹೆಣ್ಣುಗಳ ರುಚಿ ತೋರಿಸುತ್ತಾರೆ.

    ಪ್ರತಿಕ್ರಿಯೆ
  4. sunaath

    ಗೋಮೂತ್ರದ ಉಪಯುಕ್ತತೆ ಅಥವಾ ಅಪಾಯ ಇದರ ಚರ್ಚೆ ಪ್ರಾರಂಭಿಸಿದ್ದಕ್ಕಾಗಿ ಡಾ| ಕಕ್ಕಿಲ್ಲಾಯ ಅವರಿಗೆ ಧನ್ಯವಾದಗಳು. ಈ ವಿಷಯದ ಬಗೆಗೆ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಒಂದು ನಿಖರವಾದ ಅಭಿಪ್ರಾಯಕ್ಕೆ ಬರಬೇಕು.
    ನನಗೆ ದುಃಖ ತರುತ್ತಿರುವ ಸಂಗತಿ ಎಂದರೆ, ದನಗಳ ಸೆಗಣಿಯನ್ನು ಉಪಯೋಗಿಸುವದರಿಂದ, ಭಾರತವು ಜಾಗತಿಕ ತಾಪಮಾನ ಹೆಚ್ಚಿಸುತ್ತಿದೆ ಎನ್ನುವ ಅಮೇರಿಕನ್ ಆರೋಪವನ್ನು ಡಾ| ಕಕ್ಕಿಲ್ಲಾಯರು ತಲೆ ಮೇಲೆ ಇಟ್ಟುಕೊಂಡು ಬರೆದಿದ್ದಾರಲ್ಲ ಎನ್ನುವದು. ಭಾರತದ ಬಡ ಜನತೆಯಿಂದ ನೀವು ದನದ ಸಗಣಿಯನ್ನೂ ಕಸಿದುಕೊಂಡರೆ, ಅವರು ಗಂಜಿಯನ್ನು ಕಾಯಿಸಿಕೊಳ್ಳುವದು ಹೇಗೆಂದು ವಿಚಾರ ಮಾಡಿದ್ದೀರಾ, ಕಕ್ಕಿಲ್ಲಾಯ? ನಮ್ಮಲ್ಲಿ ಗ್ಯಾಸ್ ಅಥವಾ ವಿದ್ಯುತ್ ಅನ್ನು ಎಲ್ಲರಿಗೂ ಇಂಧನಮೂಲವೆಂದು ಕೊಡಲು ಸಾಧ್ಯವೆ, ಕಕ್ಕಿಲ್ಲಾಯ?
    ಅಮೆರಿಕದಂತಹ ಠಕ್ಕ ದೇಶಗಳೇ ಜಾಗತಿಕ ತಾಪಮಾನಕ್ಕೆ ಅತಿ ಹೆಚ್ಚಿನ ದೇಣಿಗೆ ಕೊಡುತ್ತಿದ್ದು, ನಮ್ಮ ಮೇಲೆ ಗೂಬೆ ಕೂರಿಸುತ್ತಿರುವದು ಏತಕ್ಕೆ ಎನ್ನುವದು ತಿಳಿಯದಷ್ಟು ನೀವು ಅಮಾಯಕರೆ, ಕಕ್ಕಿಲ್ಲಾಯ?

    ಪ್ರತಿಕ್ರಿಯೆ
  5. ramesha

    ಎಕಮುಖೇನ ಬರಹ. ಯಾವುದೇ ಒಂದೆರಡು ವೆಬ್ ಸೈಟಿನ ಆದಾರದ ಮೇಲೆ ಗೋಮೂತ್ರದ ಮಹತ್ವವನ್ನು ನಿರ್ದರಿಸುವುದು ತಪ್ಪು. ಲೇಖಕರಿಗೆ ಆಯುರ್ವೇದ ಮತ್ತು ಹೋಮಿಯೋಪತಿಯ ಬಗ್ಗೆ ತಿಳಿದ ಹಾಗಿಲ್ಲ. ಹಾಗೇ ಅಲೋಪತಿ ಔಷದವನ್ನು ಹೇಗೆ ತಯಾರು ಮಾಡುತ್ತಾರೆ ಅನ್ನುವುದರ ಅರಿವಿಲ್ಲ. ಅದರಿಂದ ಆಗುವ ಸೈಡ್ ಎಫೆಕ್ಟ್ ಬಗ್ಗೆ ಇಲ್ಲಿ ಸುಳಿವಿಲ್ಲ.
    ಚಿಕುನ್ ಗುನ್ಯಾಗೆ ಯಾವ ಔಷದಿಯ ಅವಶ್ಯವಿಲ್ಲ ಎಂದಿದ್ದಾರೆ ಲೇಖಕರು. ಹಾಗಾದರೇ ಅಲೋಪತಿ ಔಷದವನ್ನು ಅಲ್ಲಿ ಬಳಸಿದ್ದೇಕೆ. ಇತಿಹಾಸ ಮರುಕಳಿಸುತ್ತಿದೆ ಅನ್ನುತ್ತಿದಾರೆ ಇಂದಿನ ಜನರು. ಅಲೋಪತಿ ಕೆಟ್ಟ ಪ್ರಭಾವದಿಂದ ಜನ ಈಗ ಆಯುರ್ವೇದ ಮತ್ತು ಹೋಮಿಯೋಪತಿಯ ಕಡೆ ಮುಖ ಮಾಡಿದ್ದಾರೆ.
    ಸುಮ್ಮನೆ ಬ್ಲಾಗಿನಲ್ಲಿ ಬರೆದು ತಮ್ಮ ಪ್ರತಿಭೆಯನ್ನು ತೋರಿಸುವುದಕ್ಕಿಂತ ಎಲ್ಲಾದರು ಒಂದು ಜಾಗದಲ್ಲಿ ಚರ್ಚೆಯಾದರೆ ಉತ್ತಮ. ಜನರಿಗೆ ಸತ್ಯದ ಅರಿವಾಗುತ್ತದೆ ಅಂತ ನನಗನಿಸುತ್ತದೆ ಇದರ ಬಗ್ಗೆ ಯಾರಾದರು ಗಮನ ಹರಿಸಬಹುದಾಗಿತ್ತು.

    ಪ್ರತಿಕ್ರಿಯೆ

Trackbacks/Pingbacks

  1. ಗೋಮೂತ್ರ: ಇನ್ನಷ್ಟು ಚರ್ಚೆಗೆ ಸ್ವಾಗತ « ಅವಧಿ - [...] ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಲೇಖನ ‘ಗೋಮೂತ್ರ: ಔಷಧವೋ?, ಅಪಮಾನವೋ?’ ಗೆ ಬಂದ ಪ್ರತಿಕ್ರಿಯೆ ಇಲ್ಲಿದೆ. ಇನ್ನಷ್ಟು [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: