ಗೋಲಿ ಸೋಡಾ ಹುಡುಗರು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡುನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ತುಳಸಿ ವಿವಾಹಕ್ಕೆ ತಂದ ಹೊರೆ ಕಬ್ಬನ್ನು ಹುಣ್ಣಿಮೆ ದಿನ ತೆಗೆದು ತುಂಡರಿಸಿ ಹಚ್ಚಗೆ ಬೇರು ಮತ್ತು ಮೇಲಿನ ನಾರು ಹೆರೆದು ಸಣ್ಣ ಚೀಲದಲ್ಲಿ ಹಾಕಿಕೊಂಡು ಜೊತೆಗೊಂದು ಸ್ಟೀಲ್ ಡಬ್ಬ ಇಟ್ಟುಕೊಂಡು ಹೋದರೆ “ಇಲ್ಲಿ ಕಬ್ಬಿನ ಹಾಲು ಸಿಗುತ್ತದೆ” ಗಾಡಿಯ ಹುಡುಗ ಚಂದಗೆ ಹಾಲು ಮಾಡಿ ಕೊಡುತ್ತಾನೆ.

ಒಂದು ಸ್ಟೀಲ್ ತೋಪು ಹಾಲು ಮಾಡಿಕೊಟ್ಟರೆ ಇಪ್ಪತ್ತು ರೂಪಾಯಿ. ಸಣ್ಣ ಸೊಲ್ಲಿನ ಸಣ್ಣ ಊರು ಅಂಕೋಲೆಯಲ್ಲಿ ಈ ಡಿಸೆಂಬರ್ ತಿಂಗಳಲ್ಲಿ ಮುಂಜಾನೆ ಒಂಭತ್ತರಿಂದ ರಾತ್ರಿ ಒಂಭತ್ತರವರೆಗೂ ಗಡಗಡ ಸದ್ದು ಪಸರಿಸುತ್ತ ಕಬ್ಬಿನ ಹಾಲು ತೆಗೆವ ಡೀಸೆಲ್ ಗಾಣದ ಹತ್ತಾರು ಪುಟ್ಟಸ್ಟಾಲುಗಳು. ಮುಟ್ಟಿ ಮುಟ್ಟಿ ನೈಸಾಗಿ ಜಂಗೇ ಹಿಡಿಯಲಾಗದ ಅದರ ಪುಟ್ಟ ತಗಡಿನ ತೆಳು ಡಬ್ಬದಲ್ಲಿ ಅಬ್ಬಲಿಗೆ ಹೂವಿನ ಬಣ್ಣದ ಹತ್ತಾರು ಇಪ್ಪತ್ತರ ನೋಟುಗಳು.

ಸುತ್ತ ನಿಂತ ಜನರನ್ನು ತಲೆಎತ್ತಿ ನೋಡದೇ ಇದ್ದರೂ ಅವರವರದೇ ಕಬ್ಬಿನ ಹಾಲು ಅವರವರದೇ ಡಬ್ಬಕ್ಕೆ ಹಾಕಿಕೊಡುವ ಗಾಣದ ಹುಡುಗನ ಕುಶಲಮತಿಯ ಕುರಿತು ನಿಂತವರಿಗೆಲ್ಲ ಮೆಚ್ಚುಗೆಯಿದೆ. ಶುಂಠಿ ಜಜ್ಜಿ ಕಬ್ಬಿನ ಜೊತೆಗೆ ಯಂತ್ರಕ್ಕೆ ಕೊಡುವ, “ಇಂಥ ಚಾಕು ಎಲ್ಲಿ ಸಿಗುತ್ತದೆಯೋ ಏನೋ” ಅನ್ನಿಸುವ ಬಾರೀಕು ಚೂರಿಯಲ್ಲಿ ಕಚಕ್ಕನೆ ಕತ್ತರಿಸಿದ ನಿಂಬೆ ಹೋಳು ಹಿಂಡುವ ಈ ಹುಡುಗನ ಎರಡೂ ಕೈಯಿನ ಕೊನೆಯ ಎರಡೆರಡು ಸಪೂರು ಬೆರಳುಗಳಲ್ಲಿ ಸ್ಟೀಲಿನ ಅಥವಾ ಅಲ್ಯುಮಿನಿಯಂ ಹೊಳಪಿನ ದಪ್ಪ ಸುತ್ತಿನ ಉಂಗುರಗಳಿವೆ.

ಅದರ ಮೇಲಿನ ಸಣ್ಣ ಮುಚ್ಚಿಗೆಯ ಗಾಜಿನ ಕೆಳಗೆ ದಿಟ್ಟಿಸಿ ನೋಡಿದರೂ ಗುರ್ತಿಸಲಾಗದೇ ಹೋಗುವ ಬಗೆ ಬಗೆಯ ಬಣ್ಣದ ದೇವರುಗಳಿವೆ. ಅದೆಲ್ಲಿಂದ ಬಂದರು ಈ ಸಿಲ್ಕಿ ಮತ್ತು ಶೈನಿ ಕೂದಲಿನ, ಹಳದಿ ನೀಲಿ ಮಾಸಲು ಬಣ್ಣದ ಚೌಕಳಿ ಅಂಗಿಯ ಗೋಲಿ ಸೋಡಾ ಹುಡುಗರ ಕೈ ಬೆರಳಿಗಂಟಿಕೊಂಡು ಯಾವುದೋ ಊರಿಂದ ಈ ದೇವರುಗಳು.

ನಮ್ಮ ಪರಿಚಯಕ್ಕೆ ತಟ್ಟನೆ ಸಿಕ್ಕಿಬಿಡುವ ಯಲ್ಲಮ್ಮ, ಸಿಗಂಧೂರಮ್ಮ, ಚೌಡಿ, ಧರ್ಮಸ್ಥಳ ಮಂಜುನಾಥರನ್ನು ಬುಟ್ಟಿಯಲ್ಲಿಟ್ಟುಕೊಂಡು ಸಿಕ್ಕವರ ಹಣೆಗೆಲ್ಲ ಸಂಚಿಯ ಕುಂಕುಮವಿಟ್ಟು ದೈನ್ಯ ಮುಖದಲ್ಲಿ ಬುಟ್ಟಿ ಮುಂದೆಮಾಡುತ್ತ ಪೇಟೆ ಹಳ್ಳಿತಿರುಗುವ ಪರಿಚಯಸ್ತ “ದೇವರು ತಂದವರ” ಮಕ್ಕಳಾ ಇವರು? ಚಾಟಿ ಬಡಿದುಕೊಂಡು ಸುತ್ತೋಲೆಯಂತ ಸುರುಳಿ ಬಾರು ಎದ್ದ ಅವರ ಬತ್ತಲೆ ಬೆನ್ನಿನ ಹುಲುಬು ಉಂಟಾ ಈ ಚೆಹರೆಗೆ? ನೋಡುವಾ ಎಂದರೆ ಹುಡುಗ ಅರ್ಧತಾಸಿಗೊಮ್ಮೆಯಾದರೂ ತಲೆ ಎತ್ತುವುದಿಲ್ಲ.

ತಾನು ಕುಳ್ಳಲು ಇಟ್ಟುಕೊಂಡ ಸ್ಟೂಲೊಂದನ್ನು ನನ್ನ ಬದಿಗೆ ಸರಿಸಿ ತುಂಡು ಅರಿವೆಯಲ್ಲಿ ಒರೆಸುತ್ತಾನೆ ಹುಡುಗ. ತಡವಾಗಬಹುದು ಕುಳಿತುಕೊಳ್ಳಿ ಎಂತಲೇ? ಅಥವಾ ಸುತ್ತ ನಿಂತ ಹತ್ತು ಹಲವು ಗಂಡಸರಿಗೆ ನಿಮಗಾದರೆ ಇದೊಂದೇ ಕೆಲಸ.. ಹೆಣ್ಣುಮಕ್ಕಳಿಗಾದರೆ ಮನೆ ತಲುಪಿದ ಮೇಲೆ ಎಡಬಿಡದ ಬಿಡುವಿಲ್ಲದ ಕೆಲಸಗಳಿರುತ್ತವೆ ಹಾಗಾಗಿ ಅವರು ಇಲ್ಲಿಯಾದರೂ ಚೂರು ಕುಳಿತುಕೊಳ್ಳಲಿ ಅಂತಲೇ.. ಹೇಗೂ ಇರಲಿ.. ಒರೆಸಿ ಕೊಟ್ಟ ಹಸಿರು ಪ್ಲ್ಯಾಸ್ಟಿಕ್ ಸ್ಟೂಲಿಗೊಂದು ಕಿಮ್ಮತ್ತು ಉಂಟಲ್ಲ.. ಅದಕ್ಕೆ ಮರ್ಯಾದೆ ಕೊಟ್ಟು ನಾನು ಕುಳಿತ ಮೇಲೆ ಸುತ್ತಲೂ ನಿಂತು “ಎಷ್ಟೊತ್ತು.. ತಡವಾಗ್ತದೆಯಾ.. ಬೇಗಮಾಡಿಕೊಡಪ್ಪ..” ಎಂದೆಲ್ಲ ತರಹೇವಾರಿ ಕಿರಿಕಿರಿ ಮಾಡುತ್ತಿದ್ದ ಈ ಪುರುಷರು ಯಾಕೋ ಥಂಡಾದರಲ್ಲ.

ಗುಡ್ಡ ಬೆಟ್ಟ ನದಿ, ಅಡಿಕೆ ದಬ್ಬೆಯ ಸಂಕದ ಕೆಳಗಿನ ಕೆಂಪು ರಾಡಿಯ ಹಳ್ಳ, ಎಣ್ಣೆ ಹಾಕಿ ಬಹುದಿನವಾಗಿ ಆಗಾಗ ಸದ್ದು ಮಾಡುವ ಬಾವಿಯ ಗಡಗಡೆ, ಅಯ್ಯೋ ಹಣ್ಣಾಗಿ ಹೋಯ್ತಲ್ಲ ಎನ್ನುತ್ತ ಸೆರಗೊಡ್ಡಿ ಕೊಯ್ಯುವ ಕೆಂಪು ಕಾಳು ಮೆಣಸು, ಅಂಕೋಲೆ ಪೇಟೆ, ಹುಲಿದೇವರ ಪೂಜೆ, ಯಕ್ಷಗಾನ ಮುಂತಾದವಷ್ಟೇ ಪ್ರಪಂಚವಾಗಿದ್ದ ಎರಡು ವರ್ಷದ ಹಿಂದಿನವರೆಗಿನ ಸಮಯದಲ್ಲಿ ಕವಿತೆಗೆರಡು ಬಹುಮಾನ ಬಂದು ಮೂರುದಿನದ ಮಟ್ಟಿಗೂ ಊರು ಬಿಡದೇ ಇದ್ದವಳನ್ನು, ಮುಂಬಯಿ ನಗರಿ ಕೈ ಮಾಡಿ ಕರೆದಾಗ ‘ದಿಕ್ಕು ತಪ್ಪಿಸುತ್ತದೆಯಂತೆ ಜಾಗ’ ಎಂಬುದನ್ನು ತಲೆಯಲ್ಲಿಟ್ಟುಕೊಂಡು ಭಯಬೀಳುತ್ತ ಹೊರಟವಳನ್ನು “ಮುಂಬೈ ಅಂದರೆ ಏನೂ ಅಲ್ಲ ಆರಾಮ ಹೋಗಿ ಬನ್ನಿ” ಎಂದು ಮಾತೇ ಆಡದೇ ಧೈರ್ಯಕೊಟ್ಟದ್ದು, ರೈಲುತುಂಬ ಓಡಾಡುವ ಹೆಜ್ಜೆಗಳ ಮೂಲಕವೇ ಸಮಾಧಾನ ಕೊಡಿಸಿದ್ದು ಇದೇ ತರಹದ ಪುಟ್ಟ ಹುಡುಗರು.

ಪುಟ್ಟ ಕುರುಚಲು ಕಾಡಿನ ಮೂಲಕ ಹಾಯುವ ಒಂದೇ ಒಂದು ಸ್ವಚ್ಛಂದ ರೈಲು ಹಳಿಯ ಪುಟ್ಟ ಸ್ಟೇಶನ್ನು ಅಂಕೋಲೆಯ ಕೊಂಕಣದ ಪ್ರೀತಿಯ “ಮತ್ಸಗಂಧಾ” ಹತ್ತಿ ಇಪ್ಪತ್ತು ತಾಸಿಗೂ ಮಿಕ್ಕಿ ಪ್ರಯಾಣಿಸಿ ಮೂವತ್ತಕ್ಕೂ ಮಿಕ್ಕಿದ ಹಳಿಗಳ ಗೋಜಲು ಗಲೀಜು ರಾಶಿಯ ಬಾಂಬೇ ಲೋಕಮಾನ್ಯ ಟಿಲಕ್ ಟರ್ಮಿನಸ್‌ನಲ್ಲಿ ಇಳಿಯುವ ಈ ಮಧ್ಯದಲ್ಲಿ “ಇಂಥಲ್ಲಿ ಇಳಿಯಿರಿ ಮೂವರೂ.. ನಾವು ಬರುತ್ತೇವೆ ಕರೆದೊಯ್ಯಲು” ಎಂಬ ಬಾರಿ ಬಾರಿಯ ಅಭಯವಾಣಿ ಜೊತೆಗಿದ್ದರೂ ಬಿಡದೆ ಕಾಡುವ ಒಂದು ನಮೂನೆಯ ಭಯವಿತ್ತಲ್ಲ ಅಂಥದ್ದೇ ನಮೂನೆಯ ಭಯ ಎಲ್ಲಿಂದಲೋ ಉಪಾಯವಿಲ್ಲದೇ ಬರುವಾಗ ಈ ಪುಟ್ಟ ಹುಡುಗರಿಗೆ ಇತ್ತೇ?

ಹೊಟ್ಟೆಪಾಡೊಂದನ್ನೇ ದಿಟ್ಟಿಯಲ್ಲಿಟ್ಟು ನೆಲಮೂಲವನ್ನು ಬಿಟ್ಟು ಬಗೆಬಗೆಯ ಊರುಪಾಲಾಗುವ ಹುಡುಗರಿಗೆ ಹೆದರಿಕೆಯೆಲ್ಲಿಯದು.. ಕೆಲಸವೊಂದನ್ನು ಬಿಟ್ಟು ಇನ್ನೇನನ್ನೂ ಬಗೆಯರು ಅವರು.. ದೊಡ್ಡ ಥಂಡಾ ಬಾಟಲಿಗಳನ್ನಿಟ್ಟುಕೊಂಡು ಹೊತ್ತಾಡಿಸುವ ಬಕೀಟುಗಳು.. ಚಾಯ್ ಕಾಫಿ ಡಿಬ್ಬಾಗಳು.. ನಿರಂತರ ಒಜ್ಜೆ ಹೊರುವ ಶಕ್ತಿಯನ್ನು ಕೈಯಗುಂಟ ಹರಿದು ಒಳಗೆಲ್ಲೋ ಸೇರಿಹೋದ ಅವರ ದಪ್ಪ ದಪ್ಪ ನರಗಳಿಗೆ ಕೊಟ್ಟಿವೆಯೇ? ಹೌದಿರಬಹುದು.. ಅರ್ಧ ಕಿಲೋಮೀಟರ್ ಉದ್ದವಿರುವ ಹತ್ತಾರು ಟ್ರೇನುಗಳ ತುಂಬ ಸರಭರ ಹತ್ತಿಳಿವ, ಓಡಿಯಾಡುವ, ವಡಾಪಾವ್, ಬ್ರೆಡ್ ಆಮ್ಲೆಟ್, ಕಚೋರಿ, ಸಮೋಸೇ.. ಪ್ರೈಡ್ ರೈಸ್, ಎಗ್ ರೈಸ್, ಚಿಲ್ಲಿ ಚಿಕನ್, ಬಿರಿಯಾನೀ.. ಕೂಗುವ ಧ್ವನಿಗೂ ಇಂಥಹುದ್ದೇ ಯಾವುದೋ ಮಾಯಕ ಶಕ್ತಿ ಎಲ್ಲಿಂದಲೋ ಒದಗಿ ಬಂದಿರಬಹುದು.

ಹಾಜಿ ಅಲಿ ದರ್ಗಾದಲ್ಲಿ ಸೌಗಂಧಿ ಹೂವನ್ನೂ.. ಪನ್ನೀರು ಗುಲಾಬಿಯನ್ನೂ.. ದವನದ ತರಹದ್ದೊಂದು ಎಲೆಯನ್ನು ಹರಿವಾಣದಲ್ಲಿಟ್ಟು ಕೊಟ್ಟು- ಒಳಗಡೆ ಹೋಗಿ ಬನ್ನಿ ದುಡ್ಡು ಆಮೇಲೆ ಕೊಡುವಿರಂತೆ ಅಂದದ್ದು ಕೂಡ ಇದೇ ತರಹದ್ದೊಂದು ಹುಡುಗ. ಯಾವುದೋ ಊರಿನ ಯಾರೋ ಆಗಿರುವ ನನ್ನ ಮೇಲಿನ ಯಾವುದೋ ಒಂದು ನಂಬುಗೆ ಖೇಡ್ ಗಲ್ಲಿಯ ಪ್ರಭಾದೇವಿಯ ಬಳಿಯ ಬಲಮುರಿ ಸಿದ್ಧಿವಿನಾಯಕನಿಗೆ ಮಲ್ಲಿಗೆ ಮಾಲೆ ಕೊಟ್ಟ ಹುಡುಗನಲ್ಲೂ ಇತ್ತಲ್ಲವೇ.. ಧರ್ಮ ಜಾತಿ ಹೆಸರಿಲ್ಲದ ಅಥವಾ ಇದ್ದರೂ ಮಹತ್ವವಿಲ್ಲದ ಛೋಟೂ ಮೋಟೂ ಚಿಂಟೂ ಆದ ಇವರೆಲ್ಲರೂ ಒಟ್ಟಾರೆಯಾಗಿ ಹೊಟ್ಟೆಪಾಡಿಗೆ ಹೊರಡುವುದು ಕೂಡ ಒಂದೇ ತರಹದ ಎಡೆಯಿಂದ.. ರಾತ್ರಿ ಎಂಬುದು ಎಷ್ಟು ಹೊತ್ತಿರುತ್ತದೆ ಇವರ ಪಾಲಿಗೆ..

ರಾತ್ರಿ ಹನ್ನೆರಡರವರೆಗೂ ಒಟ್ಟಾರೆ ಕೂಡಿ ಫುಟ್‌ಪಾತಿನ ಮೇಲೆ ಸಾಲಾಗಿ ತೆಳು ಬೆಡ್ಶೀಟ್ ಹೊದ್ದು ಮಲಗಿ ಮೂರಕ್ಕೆ ಎದ್ದು ಕಣ್ಣುಜ್ಜುತ್ತ ಹೀಗೇ ಜೀವನಪರ್ಯಂತ ಬದುಕುವ ಹುಡುಗರು ಕೆಲವೊಮ್ಮೆ ಎಲ್ಲವೂ ಸಾಕಾಗಿ ಹೋಗಿ ಹಾದಿ ತಪ್ಪಿ ರಿಮಾಂಡ್ ಹೋಮಿನಲ್ಲಿ ಕೈದಾಗಿ.. ಅಲ್ಲೂ ಹೊಡೆದಾಡಿಕೊಂಡು ಮತ್ತೆಲ್ಲಿಗೋ ಆರ್‌ಪಾರ್ ಆಗುತ್ತಿರುವುದೂ ಉಂಟಲ್ಲವೇ..

ನಂತರ ಅವರು ಬುದ್ದಿ ಕಲಿತರೂ.. ಕಲಿಯದಿದ್ದರೂ.. ಮರಳಿ ಬರುವುದು ಎಲ್ಲ ರೆಡಿ ಇಟ್ಟುಕೊಂಡು “ತಮ್ಮದೇ ಅಂಗಡಿಗೆ ಬನ್ನಿ” ಎಂದು ಕರೆಯುತ್ತ ವಡಾಪಾವ್, ಭೇಲ್, ಚಾಟ್, ಪಾವಬಾಜಿ, ಮಸಾಲೆಪುರಿ ಗೋಭಿ, ಆಮ್ಲೆಟ್, ನಾರಿಯಲ್ ಎಂದು ನಿರಂತರ ಒದರುವ ಜುಹೂ.. ಚೌಪಾಟಿ ಬೀಚುಗಳ ಪುಟ್ಟ ಡಿಬ್ಬಾ ಅಂಗಡಿಗಳಿಗೆ.. ಇಲ್ಲಾ ನಾರಿಮನ್ ಪಾಯಿಂಟ್‌ನಿಂದ ಬಾಬುರಾಥ್ ನವರೆಗೂ ಮರೀನ್ ಡ್ರೈವ್ ಗುಂಟ ಕುಳಿತ ಜೋಡಿಗಳಿಗೆ, ವಯಸ್ಸಾದವರಿಗೆ ಸುಟ್ಟ ಜೋಳ, ತೋತಾಪುರಿ ಮಾವಿನಕಾಯಿ ಸಿಗಿದು ಮಾರುತ್ತ ಬಗಲಿಗೋ.. ಹೊಟ್ಟೆಗೋ.. ಕಟ್ಟಿಕೊಂಡು ತಿರುಗುವ  ಅಗಲಬಾಯಿಯ ಬುಟ್ಟಿಗಳಿಗೆ.. ಶೇಂಗಾ ಪೊಟ್ಲೆಯ ಸುರುಳಿ ಬಿಚ್ಚಿಹೋಗದಂತೆ ಕಟ್ಟುವ ಅವರ ಕಲೆ ಎಷ್ಟು ಪ್ರಯತ್ನಿಸಿದರೂ ನಮಗೂ ನಿಮಗೂ ಬಿಲ್ಕುಲ್ ಬರಲಿಕ್ಕಿಲ್ಲ ಅಂತ ನಿಮಗನ್ನಿಸಿದರೆ ಗೇಟ್ ವೇ ಆಫ್ ಇಂಡಿಯಾದ ಹತ್ತಿರ ಪಾರಿವಾಳಕ್ಕೆ ಹತ್ತು ರೂಪಾಯಿಯ ಧಾನ್ಯದ ಪ್ಯಾಕೆಟ್ ಮಾರುವ ಇದೇ ತರಹದ ಹುಡುಗನಿಗೆ ಒಂದು ಪಾವ್ ಮತ್ತು ಚಹ ಹೇಳದೇ ಹಾಗೇ ವಾಪಸ್ ಬರಲಾರಿರಿ ನೀವು.

ಚೋರಬಜಾರಿನ ಚೋರರನ್ನೂ.. ಕಿಶೆಗಳ್ಳರನ್ನೂ.. ಮಹಾಲಕ್ಷ್ಮೀ ಧೋಬಿಘಾಟ್‌ನ ಬಟ್ಟೆ ಒಗೆವ ಹುಡುಗರನ್ನೂ.. ಚರ್ಮ ಸಂಸ್ಕರಣೆ, ಗುಡಿಕೈಗಾರಿಕೆ, ಗಾಂಜಾ ಅಫೀಮು, ವೇಶ್ಯಾವಾಟಿಕೆ, ಭೂಗತ ಚಟುವಟಿಕೆ, ಮುಂತಾದವೆಲ್ಲವಕ್ಕೂ ಕೂಡ ಅತ್ಯವಶ್ಯವಾದ ಇಂತಹುದೇ ಬಾಲರನ್ನು ಒಳಗೊಂಡಿರುವ ಮುಂಬೈನಲ್ಲಿ ರಾಶಿರಾಶಿ ನೊಣಗಳ ಹಾಗೆ ಹಳಿಯಗುಂಟ, ಪಟ್ಟಣದ ತುಂಬ ಏನನ್ನೋ ಹುಡುಕಿ ತಿರುಗುತ್ತಾರೆ ಇವರೆಲ್ಲ. ಪುಡಿಗಾಸಿಗೆ ಮಾರಬಲ್ಲ ಎಲ್ಲ ಸೋವಿ ವಸ್ತುಗಳನ್ನೂ ಆಯಕಟ್ಟಿನ ಜಾಗದಲ್ಲಿ, ಸ್ಟೇಶನ್ನುಗಳಲ್ಲಿ, ರೈಲುಗಳಲ್ಲಿ ಮಾರುತ್ತಾರೆ.

ಈಗಲೂ ತಿಂಗಳಿಗೆ ಇನ್ನೂರು ರೂಪಾಯಿ ಲೆಕ್ಕದಲ್ಲಿ ಒಬ್ಬರು ಹೊಕ್ಕಬಲ್ಲ ಜೋಪಡಿ ಬಾಡಿಗೆಗೆ ಸಿಗುವ ವಿಶ್ವದ ಎರಡನೇ ದೊಡ್ಡ ಸ್ಲಂ ಆಗಿರುವ ಮಿಥಿ ನದಿ ದಂಡೆಯ ಮೇಲಿರುವ ಧಾರಾವಿಯ ಕೊಳಗೇರಿಯನ್ನು ಮತ್ತಲ್ಲಿಯ ಜೋಪಡಪಟ್ಟಿಗಳನ್ನು ‘ಹೇಗಿರುತ್ತದೆ’ ಎಂಬ ಕಾರಣಕ್ಕೆ ನೋಡಲು ಪ್ರವಾಸ ಕರೆದೊಯ್ಯುವ ಟೂರ‌್ಸ್ ಅಂಡ್ ಟ್ರಾವೆಲ್ಸ್ ಕಂಪನಿಗಳನ್ನು ಹತ್ತಿ ಹೊರಟರೆ ಕನಿಷ್ಠ ಮೂಲಸೌಲಭ್ಯಕ್ಕೂ ತತ್ವಾರವಾಗಿ.. ಹುಟ್ಟಿದ ತಪ್ಪಿಗೆ ಕ್ರಿಮಿಗಳ ಹಾಗೆ ಬದುಕುತ್ತಿರುವ, ಆ ಬದುಕಿನಲ್ಲೂ ಬಗೆ ಬಗೆಯ ದಾರಿ.. ಹುನ್ನಾರುಗಳನ್ನು ಕರಗತ ಮಾಡಿಕೊಂಡಿರುವ ಮನುಷ್ಯ ಬದುಕಿನ ವಿರಾಟ್ ‌ರೂಪದ ದರ್ಶನವಾಗುತ್ತದೆ. ಇದೇ ನೋಡಿ ಶಹರುಖ್ ಖಾನನ ಮನೆ.. ಇದು ಅಮಿತಾಬ್ ಬಚ್ಚನ್ನನದು.. ಬಸ್ಸು ಹಾಯುವಾಗ ಬಲಕ್ಕೆ ತೋರುಬೆರಳು ಚಾಚಿ ತೋರಿಸುವ ಹುಡುಗನ ದನಿಗೆ ತಕ್ಕಂತೆ ಡ್ರೈವರ್ರು ಗಾಡಿ ಸ್ಲೋ ಮಾಡುತ್ತಾನೆ.

ಒಳಗಿನ ಜನವೆಲ್ಲ ಎದ್ದು ಬಿದ್ದು ನಿಂತು ಬಗ್ಗಿ ಅವನು ತೋರಿಸಿದ ದಿಕ್ಕಿಗೆ ನೋಡಿ ಮುಚ್ಚಿದ ಬೃಹತ್ ಗೇಟು ಅದರಾಚೆಗೆ ಅರ್ಧ ಕಾಣುವ ಇಮಾರತನ್ನು ಕಂಡು ಧನ್ಯರಾದ ಭಾವದಲ್ಲಿ ಕುಳಿತುಕೊಳ್ಳುತ್ತಾರೆ.. ಫಿಲ್ಮೀ ನಟರ ಮಹಲು ಮನೆಯನ್ನು ತೋರಿಸುವ ಹುಡುಗ ರಸ್ತೆಗುಂಟ, ಹಳಿಯಗುಂಟ, ಬೀಚಿನಗುಂಟ ಬಹಿರ್ದೆಶೆಗೆ ಕೂತ, ಕಣ್ಣಿಗೆ ಎದ್ದು ಹೊಡೆಯುವ ತನ್ನಂತಹುದೇ ನೂರಾರು ಹುಡುಗರ ಕಡೆಗೆ ತಪ್ಪಿಯೂ ನಿಮ್ಮ ಕಣ್ಣು ಹಾಯದಂತೆ ಮಾಡಲು ನೀವು ಇಳಿದಕಡೆ ಕಿಶೆಗಳ್ಳರಿರುತ್ತಾರೆ.. ನಿಮ್ಮ ಪಾಕೀಟು ಜಾಗೃತೆ ಎಂಬುದನ್ನು ಪದೇ ಪದೇ ಹೇಳುತ್ತಿರುತ್ತಾನೆ. ಇಲ್ಲಾ ಮುಂದೆ ಬರುವ ಸ್ಥಳದಬಗ್ಗೆ ವಿವರಣೆ ಕೊಡುತ್ತಿರುತ್ತಾನೆ.

ಅಂಕೋಲೆ ಮತ್ತು ಮುಂಬೈ ನಡುವೆ ಇದೆ ಒಂದು ರಾತ್ರಿಯ ಅಂತರ.. ಇಲ್ಲಿ ಬಿಟ್ಟು ಬಂದ ಬೆಕ್ಕಿನ ಮರಿಗಳ ಧ್ಯಾನದಲ್ಲಿ ಇಡೀ ರಾತ್ರಿ ನಿದ್ದೆಗೆಟ್ಟ ಪೋರನೊಬ್ಬ ಮತ್ತವನ್ನು ವಾಪಸ್ ತರಲು ಮರುದಿನ ಹೋಗಿ ಅದೇ ಜಾಗದಲ್ಲಿ ಹುಡುಕುತ್ತಿದ್ದಾನೆ.. ಸಿಗುತ್ತಿಲ್ಲ ಅವು.. ಕಣ್ಣೀರು ಜಾರಿ ಇನ್ನೇನು ಕೆನ್ನೆಗಿಳಿಯಲಿದೆ.. ಅವನದ್ದೇ ದನಿ ಎಂದು ಗೊತ್ತಾದ ಮೇಲೆ ಅಡಗಿಕೊಂಡ ಅವು ಓಡಿಬಂದವಲ್ಲ ಈಗ.. ಹುಡುಗನ ಕೆನ್ನೆ ತುಂಬ ನಗು.. ಅಲ್ಲಿ ಮತ್ಸ್ಯಗಂಧಿಯೊಳಗೆ- ಪನವೇಲ್‌ನಲ್ಲಿ ಹತ್ತಿ ಥಾಣೆಯಲ್ಲಿ ಇಳಿದು ಹೋದ ಯಾರೂ ಹಿಂದು ಮುಂದಿಲ್ಲದ ಅನಾಥ ಹುಡುಗನೊಬ್ಬನನ್ನು ರೈಲು ಜನ ಮಾತಾಡಿಸಿ, ಚಂದಗೆ ಹಾಡುವ ಅವನಿಂದ ಹಾಡುಹೇಳಿಸಿ, ನಾನಾ ನಮೂನೆಯ ಹಾಸ್ಯ, ಅಣಕು ಎಲ್ಲ ಮಾಡಿಸಿ ಟೈಂ ಪಾಸ್ ಮಾಡಿಕೊಂಡರು.

ರಾತ್ರಿ ಊಟದ ಹೊತ್ತಿಗೆ ಅವನನ್ನು ಮತ್ತೆ ಮೊದಲಿನ ಅನಾಥನಂತೆ ಕೈಬಿಟ್ಟು ಬೆನ್ನು ಹಾಕಿ ಕೂತು ತಮ್ಮ ತಮ್ಮ ಡಬ್ಬಿ ಬಿಡಿಸಿ ಉಣ್ಣಲು ಶುರುವಿಟ್ಟುಕೊಂಡರು.. ತಲಾ ಮುಷ್ಟಿ ಅನ್ನ ಕೊಟ್ಟರೂ ಅವನೊಬ್ಬನ ಹಸಿವು ತಣಿಸಿದ ತೃಪ್ತಿಯ ನಶೀಬು ದಕ್ಕುತ್ತಿತ್ತು ಅವರಿಗೆಲ್ಲ.. ಯಾಕೋ ಮನಸ್ಸು ಮಾಡಲಿಲ್ಲ.. ಮನುಷ್ಯ ದಿನಹೋದಂತೆ ಕಡುಪಾಪಿ ಆಗುತ್ತಿದ್ದಾನೆಯೇ.. ಎಂದುಕೊಳ್ಳುತ್ತ ಹುಡುಗನಿಗೆ ಊಟಕೊಡಲು ಹೋದರೆ “ನೀವು ಊಟ ಮಾಡಿ ದೀದೀ.. ನನಗೆ ವಾರಗಟ್ಟಲೆ ಉಪವಾಸವಿದ್ದು ರೂಢಿ ಇದೆ” ಎಂದ.

ಉಣ್ಣುತ್ತಿದ್ದ ಜನ ಕತ್ತು ತಿರುಗಿಸಿ ಅವನಿಗೂ ನಿಮಗೂ ಇಬ್ಬರಿಗೂ ಸೊಕ್ಕು ಎಂಬಂತೆ ತುಟಿವಾರೆ ಮಾಡಿ ನಕ್ಕರು.. ಮತ್ತೆರಡು ಬಾರಿ ಒತ್ತಾಯಿಸಿದ ಮೇಲೆ ಉಂಡ ಹುಡುಗ ಇಳಿದು ಹೋಗುವಾಗ “ಹೋಗಿ ಬರ್ತೇನೆ” ಎಂದು ನಕ್ಕು ಹೇಳಿಯೇ ಹೋದ.. ಎಲ್ಲಾದರೂ ಸಮಾಧಾನವಾಗಿ ಬದುಕಿಕೊಂಡಿರಲಿ ಅವನು.. ಕಬ್ಬಿನ ಸಿಪ್ಪೆಗಾಗಿ ಬಂದ (ಉರುವಲಿಗೆ) ಹೆಂಗಸೊಬ್ಬಳಿಗೆ ದುಡ್ಡು ತಕ್ಕೊಳ್ಳದೇ ಹಾಗೇ ತುಂಬಿಕೊಂಡು ಹೋಗು ಎಂದ ಧಾರಾಳಿ ಸ್ಟೀಲಿನುಂಗುರದ ಗಾಣದ ಹುಡುಗನಿಂದ ಕಬ್ಬಿನ ಹಾಲು ಮಾಡಿಸಿಕೊಂಡು ಬರುವಾಗ “ವಾರಗಳವರೆಗೂ ಉಪವಾಸವಿರುವುದು.. ಮತ್ತು ಒತ್ತಾಯಿಸಿ ಊಟ ಕೊಡುವುದು.. “ಸೊಕ್ಕಿನ ಬಾಬತ್ತಿನಲ್ಲಿ ಬರುತ್ತದೆಯಾ ಹಾಗಿದ್ದರೆ..? ಎಂದು ಮತ್ತೆಷ್ಟನೆಯ ಬಾರಿಗೋ ಅಂದುಕೊಂಡೆ.. ಅಥವಾ ಪ್ರಶ್ನಿಸಿಕೊಂಡೆ..

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ...

3 ಪ್ರತಿಕ್ರಿಯೆಗಳು

 1. Kiran Bhat

  ಇಂಥಾ ಹುಡ್ಗರ ಜಗತ್ತನ್ನ ಹೊಕ್ಕು ಬೆರಯೋದಂದ್ರೆ…
  ತುಂಬ ಖುಷಿಯಾಯ್ತು.

  ಪ್ರತಿಕ್ರಿಯೆ
 2. ರೇಣುಕಾ ರಮಾನಂದ

  ಧನ್ಯವಾದ ಕಿರಣಣ್ಣ..ನಿಮ್ಮ ಓದಿಗೆ ಪ್ರೀತಿ

  ಪ್ರತಿಕ್ರಿಯೆ
 3. Vasudeva Sharma

  ವಾಸ್ತವ ಚಿತ್ರಣ.
  ಇಂಥ ಮಕ್ಕಳಿಗೂ ಬದುಕಿದೆ ವರ್ತಮಾನವಿದೆ ಭವಿಷ್ಯವಿದೆ ಎಂದು ಎಷ್ಟೋ ಜನ ಒಪ್ಪುತ್ತಲೇ ಇರಲಿಲ್ಲ.‌
  ನೂರಾರು ಯತ್ನಗಳು‌ ನಡೆದಿದೆ. ಸಾಕಷ್ಟು ಮಕ್ಕಳ ಬದುಕು ತಕ್ಕ‌ಮಟ್ಟಿಗೆ ಬದಲಾಗಿದೆ..
  ಆದರೂ ದಿನ ದಿನ ಬೀದಿಗೆ ಬರುವ, ಬದುಕು ಕಟ್ಟಿಕೊಳ್ಳಲು ಹೆಣಗಾಡುವ ಮಕ್ಕಳು ಇದ್ದೇ ಇದ್ದಾರೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: