'ಗೋವು ರಕ್ಷಿಸಿ' ಎಂದು ಪುಕ್ಕಟ್ಟೆ ಉಪದೇಶ

ಜುಗಾರಿ ಕ್ರಾಸ್ ನಲ್ಲಿ ನಡೆಯುತ್ತಿರುವ ಗೋವು ರಕ್ಷಣೆ ಮಸೂದೆ ಚರ್ಚೆಗೆ ಪೂರಕ ಮಾಹಿತಿ.
-ಬಿ ಆರ್ ಸತ್ಯನಾರಾಯಣ
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಬಾಲಕನಾಗಿದ್ದಾಗ ನಮ್ಮ ಮನೆಯಲ್ಲು ಸುಮಾರು ನಲವತ್ತಕ್ಕು ಹೆಚ್ಚು ಎಮ್ಮೆ ದನಗಳಿದ್ದವು. ನಂತರ ಅವುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಮೊನ್ನೆ ಅಂದರೆ 2009 ಆಗಸ್ಟ್ ತಿಂಗಳ ಹೊತ್ತಿಗೆ ನಮ್ಮ ಮನೆಯಲ್ಲಿ ಒಂದೇ ಒಂದು ದನವಾಗಲೀ ಎಮ್ಮೆಯಾಗಲೀ ಇಲ್ಲದಂತಾಯಿತು! ಕಾರಣ ಇಷ್ಟೆ. ಅವುಗಳನ್ನು ಸಾಕುವಷ್ಟು ಮಾನವಸಂಪನ್ಮೂಲವಾಗಲೀ ಸಮಯವಾಗಲೀ ನಮಗಿಲ್ಲ. ಜೊತೆಗೆ ಆರ್ಥಿಕವಾಗಿ ನಷ್ಟವುಂಟಾಗುತ್ತಿತ್ತು. ಹಾಲಿಗೆ ಎರಡು ರೂಪಾಯಿ ಹೆಚ್ಚಾದರೆ ಬೊಬ್ಬೆ ಹೊಡೆಯುವವರು ವರ್ಷದಲ್ಲಿ ನಾಲ್ಕು ಬಾರಿ ಬೂಸಾ ಬೆಲೆ ಹೆಚ್ಚಾದರೂ ಮಾತನಾಡುವುದಿಲ್ಲ! ಆರ್ಥಿಕವಾಗಿ ರೈತ ಎಷ್ಟೇ ನಷ್ಟ ಅನುಭವಿಸಿದರೂ ಕೇವಲ ಭಾವನಾತ್ಮಕ ತೃಪ್ತಿಗಾಗಿ ದನಗಳನ್ನು ಸಾಕಬೇಕೆ? ಹೋಗಲಿ ಆತ ಸಾಕಿದ ರಾಸುಗಳನ್ನು ಅವನಿಗೆ ಬೇಕಾದಾಗ ಮಾರುವ ಹಕ್ಕನ್ನು ಕಸಿದುಕೊಳ್ಲುವ ಈ ಕಾನೂನು ಬೇಕಿತ್ತೆ? ಮಾರುವವನಿಗೆ ಕೊಂಡುಕೊಳ್ಳುವವನು ಮಾಂಸಕ್ಕಾಗಿ ಕೊಂಡುಕೊಳ್ಳುತ್ತಾನೆಯೇ ಎಂದು ತಿಳಿಯುವುದು ಹೇಗೆ? ಯಾರೋ ಹೇಳಿದ್ದರು. ಸಾಕಲಾಗದವರು ಸರ್ಕಾರೀ ಗೋಶಾಲೆಗಳಿಗೆ ಒಪ್ಪಿಸಬಹುದು ಎಂದು. ಆದರೆ ೀಗ ಮಾಡಿರುವ ಕಾನೂನಿನಲ್ಲಿ ಅದು ಬದುಕಿರುವವರೆಗೂ ಇಂತಿಷ್ಟು ಹಣವನ್ನು ಅದರ ಮಾಲೀಕ ಸರ್ಕಾರಕ್ಕೆ ಪಾವತಿಸಬೇಕು ಎಂದಿರುವುದು ಸುಳ್ಳೆ?
ಇನ್ನು ಮಾಂಸಕ್ಕಾಗಿ ಹತ್ಯೆಯಾಗುತ್ತಿರುವ ರಾಸುಗಳ ವಿಚಾರಕ್ಕೆ ಬರೋಣ.
ನಮ್ಮ ಪ್ರದೇಶದಲ್ಲಿ ಹಾಲು ಕೊಡುವ ಹಸುವಿನ ಬೆಲೆ 15ರಿಂದ 40000 ದವರೆಗೂ ಇದೆ. ಸುಮಾರಾದ ಒಂದು ಜೊತೆ ಎತ್ತುಗಳ ಬೆಲೆ 25000 ರಿಂದ 40000 ರೂಪಾಯಿಗಳು. ಅವೆರಡನ್ನೂ ಇಡಿಯಾಗಿ ತೂಕ ಹಾಕಿದರೂ ಗರಿಷ್ಠ ಒಂದೂವರೆ ಟನ್ ಮಾಂಸ ಸಿಗಬಹುದು. ಈಗ ಮಾರುಕಟ್ಟೆಯಲ್ಲಿ 75 ರೂಪಾಯಿಗೆ ಸಿಕ್ಕುತ್ತಿರುವ ದನದ ಮಾಂಸ ಈ ರೀತಿಯ ಎತ್ತುಗಳನ್ನು ಕೊಂಡು ಮಾಂಸಕ್ಕಾಗಿ ಮಾರಿದರೆ ಕೇಜಿಗೆ 250-300 ರೂಪಾಯಿ ಆಗುತ್ತದೆ. ಈ ರೀತಿಯ ಎತ್ತುಗಳನ್ನು ಮಾಂಸಕ್ಕಾಗಿ ಮಾರುವವರು ಕೊಳ್ಳುವವರು ಯಾರಿದ್ದಾರೆ? ಈಗಲಾದರೂ ನಿಮಗೆ ಗೊತ್ತಾಗಿರಬೇಕು; ಮಾಂಸಕ್ಕಾಗಿ ಮಾರಾಟವಾಗುವ ರಾಸುಗಳು ಎಂತಹವು ಎಂದು.
ಮಾಂಸ ತಿನ್ನುವುದರಿಂದ ಗೋಸಂತತಿ ಕಡಿಮೆಯಾಗುತ್ತದೆ ಎಂಬುದು ಒಂದು ಮಿಥ್ ಅಷ್ಟೆ. ಆದರೆ ಉತ್ಥೇಜನವಿಲ್ಲದೆ, ಹಾಲಿಗೆ ಒಳ್ಳೆಯ ದರವಿಲ್ಲದೆ, ಮೇವು ಬೆಳೆಯಲು ನೀರಿಲ್ಲದೆ, ಸ್ವತಃ ರಾಸುಗಳಿಗೆ ಕುಡಿಯಲು ನೀರಿಲ್ಲದೆ, ನೀರೆತ್ತಲು ಕರೆಂಟಿಲ್ಲದೆ, ಗಗನಕ್ಕೇರುತ್ತಿರುವ ಬೂಸಾ ಬೆಲೆಯನ್ನು ತೆರಲಾರದೆ, ಹಾಗೂ ಹಳ್ಳಿಗಳಲ್ಲಿ ಕ್ಷೀಣಿಸುತ್ತಿರುವ ಯುವಕರ ಸಂಖ್ಯೆಯಿಂದಾಗಿ ಉಂಟಾಗಿರುವ ಮಾನವಸಂಪನ್ಮೂಲದ ಕೊರತೆಯಿಂದಾಗಿ ಗೋಸಂತತಿ ಕಡಿಮೆಯಾಗುತ್ತದೆ ಎಂಬ ಸತ್ಯವನ್ನು ಮರೆಮಾಚುವುದು ಎಷ್ಟು ಸರಿ?
ಅರ್ಧ ರಾತ್ರಿ ಕೊಡುವ ಮೂರುಗಂಟೆ ಮೂರು ಫೇಸ್ ವಿದ್ಯುತ್ತಿನಿಂದ ನೀರೆತ್ತಲು ಇಂದು ರೈತರು ಪಡುತ್ತಿರುವ ಕಷ್ಟ ಗೋವು ರಕ್ಷಿಸಿ ಎಂದು ಪುಕ್ಕಟ್ಟೆ ಉಪದೇಶ ಕೊಡುವವರಿಗೆ ತಿಳಿಯುವುದು ಹೇಗೆ?

‍ಲೇಖಕರು avadhi

March 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

14 ಪ್ರತಿಕ್ರಿಯೆಗಳು

 1. ಶಿವ

  ಗೋಹತ್ಯೆ ನಿಷೇದಿಸಲ್ಪಡುತ್ತಿದೆ ಎಂಬ ಕಾರಣಕ್ಕೆ ಗೋಹತ್ಯೆಯನ್ನು ಮಾಡಿಯೇ ತೀರಬೇಕು ಎಂಬ ಹಟಕ್ಕೆ ಬಿದ್ದು ಕೆಲವರು ಅಭಿಪ್ರಾಯ ಹೇಳುತ್ತಿರುವುದು ಆಶ್ಚರ್ಯಕರವಾಗಿದೆ. ಎಲ್ಲವೂ ವ್ಯಾಪಾರೀಕರಣವಾಗಿ, ಎಲ್ಲವನ್ನೂ ದುಡ್ಡಿನ ಕಣ್ಣಿಂದ ನೋಡುತ್ತಾ ಹೋಗುವುದು ಮನುಷ್ಯತ್ವವಾಗುವುದಿಲ್ಲ. ಮನುಷ್ಯನ ಜೀವನದಲ್ಲಿ ನಂಬಿಕೆ, ಭಾವನೆಗಳಿಗೂ ಅಷ್ಟೇ ಬೆಲೆ ಇದೆ, ಇರಬೇಕು.
  ಇಲ್ಲಿ ಗೋವು ದೇವರು , ಅದು ಪವಿತ್ರ ಎನ್ನುವ ಭಾವನೆಗಿಂತಲೂ ಅದರಿಂದ ನಾವು ಜೀವನವಿಡೀ ಪಡೆದುಕೊಂಡ ಉಪಯೋಗಕ್ಕೆ ಕೃತಜ್ಞನಾಗಿರುವ ಭಾವನೆ ಮುಖ್ಯವಾಗಿದೆ. ಹುಟ್ಟಿದಾಗಿಂದ ಸಾಯುವವರೆಗೆ ಹಾಲು ಮುಂತಾದ ಕಾರಣಗಳಿಗೆ ಬಳಸಿಕೊಂಡ ಇವುಗಳನ್ನು ಅವುಗಳಿಗೆ ವಯಸ್ಸಾದ ಕಾರಣಕ್ಕೆ ಕಟುಕರಿಗೆ ಕೊಡುವುದು, ಅದನ್ನು ಕ್ರೂರವಾಗಿ ಕತ್ತರಿಸಿ ತಿನ್ನುವುದೇ ಒಳ್ಳೆಯ ಮಾರ್ಗ ಎನ್ನುವುದಾದರೆ ಮನುಷ್ಯನಿಗೂ ವಯಸ್ಸಾದ ಮೇಲೆ ಇದನ್ನೇ ಅನ್ವಯಿಸಬಹುದಲ್ಲ ಎಂದು ಕೇಳಬಹುದಾಗುತ್ತದೆ. ಇವತ್ತಿಗೂ ಎಲ್ಲಾ ಜಾತಿಯ ಬಹುಪಾಲು ಕೃಷಿಕ ಜನ ರಾಸುಗಳನ್ನು ಕಟುಕರಿಗೆ ಮಾರುವುದಿಲ್ಲ ಮತ್ತು ಅದರ ಮಾಂಸವನ್ನು ತಿನ್ನುವುದಿಲ್ಲ. ಹಳ್ಳಿಗಳಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯಿಂದ ಮತ್ತು ಕೃಷಿಯಲ್ಲಿ ಹೆಚ್ಚಿದ ಯಂತ್ರಗಳ ಬಳಕೆಯಿಂದ ಇವತ್ತು ಮನೆಗಳಲ್ಲಿ ಯಾರೂ ಹಿಂಡುಗಟ್ಟಲೇ ಹಸುಗಳನ್ನು ಸಾಕುವುದಿಲ್ಲ. ಇರುವ ಕೆಲವೇ ಕೆಲವು ರಾಸುಗಳು ಹಾಲುಕೊಡುವುದನ್ನು ನಿಲ್ಲಿಸಿದ ಮೇಲೆ ಅವಕ್ಕೆ ಒಂದು ಹಿಡಿ ಹುಲ್ಲು, ಒಂದು ಬಾಂದ್ಲಿ ನೀರು ಇಡುವುದು ಎಂತಹ
  ಬಡವನಿಗೂ ಕಷ್ಟವಿರುವುದಿಲ್ಲ. ತನ್ನ ಬದುಕಿಡೀ ಮನುಷ್ಯನಿಗಾಗೇ ಬದುಕಿದ ಪ್ರಾಣಿಗೆ ಇಷ್ಟೂ ಮಾಡದೇ ಮನುಷ್ಯತ್ವ ಕಳೆದುಕೊಂಡರೆ ಅದು ಈ ಸಮಾಜದ ನೈತಿಕ ಅಧಃಪತನವೆಂದೇ
  ಅರ್ಥ. ಆಹಾರ ಪದ್ಧತಿಯಲ್ಲೂ ಇದೊಂದು optional ಆಹಾರವಷ್ಟೇ. ಅದನ್ನೇ ಕಸುಬು ಮಾಡಿಕೊಂಡಿರುವವರ ಜೀವನಕ್ಕೂ alternativeಗಳು ಇರುತ್ತವೆ. ಆದರೆ ಅದಕ್ಕೆ ತೆರೆದುಕೊಳ್ಳುವ ಮನಸ್ಸು ಬೇಕಷ್ಟೆ. ಇದರ ಜೊತೆ ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡುವುದೂ ಮುಖ್ಯ. ಆದ್ದರಿಂದ ಗೊಡ್ಡು ರಾಸುಗಳು ವ್ಯರ್ಥ ಎನ್ನುವ ಗೊಡ್ಡು ಮನಃಸ್ಥಿತಿಯಿಂದ ಒಳ್ಳೆಯದಲ್ಲ.
  ಈ ಗೋಹತ್ಯೆಯ ಪ್ರತಿಪಾದಕರಿಗೂ ವಯಸ್ಸಾಗುತ್ತದೆ. ದುಡಿಯುವ ಕಸುವಿಲ್ಲದೇ ಅವರೂ ನಿಷ್ಪ್ರಯೋಜಕರಾಗುತ್ತಾರೆ ಒಂದು ದಿನ. ಅವರಿಂದ ಕುಟುಂಬಕ್ಕೆ ದೇಶಕ್ಕೆ ಆರ್ಥಿಕ ನಷ್ಟ.
  ನಗರಗಳಲ್ಲಿ ವೃದ್ಧಾಶ್ರಮಕ್ಕೆ ಕಳಿಸಬಹುದೇನೋ. ಅಲ್ಲೂ ಕೂಡ ಕಾಸು ಕೊಡಬೇಕು. ಹಳ್ಳಿಯವರಿಗೆ ಆ ಸೌಲಭ್ಯವೂ ಇಲ್ಲ. ಅವರಿಗೆ ದಿನದ ನಾಲ್ಕು ತುತ್ತು ಊಟ ವೇಸ್ಟ್ ಎಂದು ಅವರನ್ನು
  ಕಡಿದು ಬಗೆದು ಮೂಳೆಗಳಿಂದ ಕ್ಯಾಲ್ಸಿಯಂ ತೆಗೆದು , ಚರ್ಮ ಸುಲಿದು ಬಳಕೆ ಮಾಡಿ ಲಾಭ ಮಾಡಿಕೊಳ್ಳಬಹುದಾ?

  ಪ್ರತಿಕ್ರಿಯೆ
  • ಡಾ.ಬಿ.ಆರ್.ಸತ್ಯನಾರಾಯಣ

   ‘ಇಲ್ಲಿ ಗೋವು ದೇವರು ಅದು ಪವಿತ್ರ ೆನ್ನುವ ಭಾವನೆಗಿಂತಲೂ ಅದರಿಂದ ನಾವು ಜೀವನವಿಡೀ ಪಡೆದುಕೊಂಡ ುಪಯೋಗಕ್ಕೆ ಕೃತಜ್ಞನಾಗಿರುವ ಭಾವನೆ ಮುಖ್ಯವಾಗಿದೆ’ ನಿಮ್ಮ ಈ ಮಾತಿನ ಹಿನ್ನೆಲೆಯಲ್ಲಿ ಒಂದು ಪ್ರಶ್ನೆ. ನೀವು ಒಂದು ಕಂಪೆನಿಯಲ್ಲಿ ಸರಾಸರಿ ತಿಂಗಳಿಗೆ 10000 ರೂಪಾಯಿ ಸಂಬಳ ಪಡೆದುಕೊಂಡು ಸುಮಾರು ಹತ್ತು ವರ್ಷಗಳ ಕಾಲ ದುಡಿದಿರುತ್ತೀರಿ. ಆಗ ನಿಮ್ಮ ಅನುಭವವನ್ನು ಗಮನಿಸಿದ ಬೇರೆ ಕಂಪೆನಿಯೊಂದು 20000 ಸಂಬಳಕ್ಕೆ ನಿಮ್ಮನ್ನು ಆಹ್ವಾನಿಸುತ್ತದೆ. ಆಗ ನೀವೇನು ಮಾಡುತ್ತೀರಿ. 10 ವರ್ಷ ಅನ್ನ ನೀಡಿದ ಕಂಪೆನಿಯೆಂದು ಆ ಹಳೇ ಕಂಪೆನಿಯಲ್ಲಿ ಅದೇ 10000ಕ್ಕೆ ದುಡಿಯುತ್ತೀರಾ? 20000 ಕೊಡಮಾಡುವ ಕಂಪೆನಿಯನ್ನು ನೀವು ಆಯ್ಕೆ ಮಾಡಿಕೊಳ್ಳುವುದಿಲ್ಲವಾ? ಈ ಆಯ್ಕೆಯ ಸ್ವಾತಂತ್ರ್ಯವನ್ನು ರೈತರಿಂದ ಕಸಿದುಕೊಳ್ಳುವ ಹಕ್ಕು ನಿಮಗಿದೆಯೇ ಎಂಬುದು ನನ್ನ ಪ್ರಶ್ನೆ.

   ಪ್ರತಿಕ್ರಿಯೆ
   • ಶಿವ

    ಇಲ್ಲಿ ರೈತರಲ್ಲಿ ರೈತನಾಗಿಯೇ ನಾನು ಮಾತಾಡುತ್ತಿದ್ದೇನೆ. ಮತ್ತೂ ಈ ವಿಚಾರವನ್ನು ವಾಣಿಜ್ಯ
    ದೃಷ್ಟಿಯಿಂದಲೇ ನೋಡುತ್ತಿದ್ದೀರಿ. ಕಂಪನಿ, ಸಂಬಳಕ್ಕೆ ಹೋಲಿಕೆ ಮಾಡುವುದು ಬಿಡಿ.
    ನಿಮ್ಮ ಪ್ರಕಾರ ಹೇಳಲು ಹೋದರೆ, ನನಗೆ ಬಹುಪತ್ನಿತ್ವ ಬೇಕು, ಆದರೆ ಸಂವಿಧಾನ ಆ ಹಕ್ಕು ಕೊಟ್ಟಿಲ್ಲ ಅದು ಅಪರಾಧ ಎನ್ನುತ್ತದೆ. ಆದ್ದರಿಂದ ನಾನು ನನ್ನ ಸ್ವಾತಂತ್ರ್ಯವನ್ನು ನಮ್ಮ ಕಾನೂನು ಕಿತ್ತುಕೊಂಡಿದೆ ಅನ್ನಬಹುದಾ? ಅವರವರ ಪತ್ನಿ/ಪತಿ ಸಂಖ್ಯೆಯ ಆಯ್ಕೆಯ ಸ್ವಾತಂತ್ರ್ಯ ಅವರಿಗೇ ಬಿಡಬೇಕಲ್ಲವಾ? (ಇದು ಉದಾಹರಣೆ ಅಷ್ಟೆ).

    ಪ್ರತಿಕ್ರಿಯೆ
    • ಡಾ.ಬಿ.ಆರ್.ಸತ್ಯನಾರಾಯಣ

     ನೀವು ಚರ್ಚೆಯಿಂದ ದೂರ ಸರಿಯುತ್ತಿದ್ದೀರಿ. ನೀವು ಅದನ್ನು ತಂದೆ ತಾಯಿ ಅನ್ನದಾತೆಗೆ ಹೋಲಿಸುತ್ತೀರಿ. ನಾನು ಹಸುವನ್ನು ಅನ್ನ (ಸಂಬಳ) ರೂಪದಲ್ಲಿ ಕೊಡುವ ಕಂಪೆನಿಗೆ ಹೋಲಿಸಿದರೆ ‘ಸಂಬಳಕ್ಕೆ ಹೋಲಿಕೆ ಮಾಡುವುದನ್ನು ಬಿಡಿ’ ಎನ್ನುತ್ತೀರಿ. ಆದರೆ ನಾನು ನೀವು ಹೋಲಿಸಬೇಡಿ ಎಂದು ಹೇಳುವುದಿಲ್ಲ!
     ನನ್ನ ಪ್ರಶ್ನೆ ನಿಮಗಿರುವ ಆಯ್ಕೆ ಸ್ವಾತಂತ್ರ್ಯವನ್ನು ಬೇರೆಯವರಿಗೆ ಬೇಡ ಎನ್ನುವುದು ಎಷ್ಟು ಸರಿ ಎಂಬುದಷ್ಟೆ.
     ನಾವು ಮಾತ್ರ ನಮಗಿಷ್ಟವಾದ ಹೆಚ್ಚು ಸಂಬಳ ಕೊಡುವ ಕಂಪೆನಿಯನ್ನು ಆಯ್ಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವುದು.
     ಪಶುಸಂಗೋಪನೆಗೆ ಪೂರಕವಾದ ವಾತಾವರಣ ಅಂದರೆ, ಮೇವು, ಹುಲ್ಲುಗಾವಲು, ಕೆರೆ, ಕುಂಟೆ ಎಲ್ಲವನ್ನೂ ನಿರ್ನಾಮ ಮಾಡಿ ನೀನು ಮಾತ್ರ ಎಷ್ಟು ಕಷ್ಟವಾದರೂ ರಾಸುಗಳನ್ನು ಸಾಕುತ್ತಲೇ ಆರ್ಥಿಕವಾಗಿ ದುರ್ಬಲನಾಗಿಯೇ ಇರು ಎಂದು ರೈತನಿಗೆ ಹೇಳುವುದು ಎಷ್ಟು ಸರಿ?
     ಕೀಟನಾಶಕ ಔಷಧಿ ಕುಡಿದು ರೈತ ಆತ್ಮಹತ್ಯೆ ಮಾಡಿಕೊಂಡರೆ ಕೀಟನಾಶಕ ಕಂಪೆನಿಯ ಮೇಲಾಗಲೀ ಅದನ್ನು ಮಾರಾಟ ಮಾಡಿದ ಅಂಗಡಿಯ ಮೇಲಾಗಲೀ ಕೇಸು ಹಾಕುತ್ತಾರೆಯೇ? ಹಾಗೇ ರೈತ ಮಾರಿದ ರಾಸನ್ನು ಕೊಂಡವನು ಕತ್ತರಿಸಿ ತಿಂದರೆ, ನೀನು ಅದನ್ನು ಹತ್ಯೆ ಮಾಡುವವನಿಗೆ ಮಾರಿದ್ದೀಯಾ ಎಂದು ರೈತನ ಮೇಲೆ ಕೇಸು ಜಡಿದು ಹಿಂಸಿಸುವುದಿಲ್ಲ ಎಂದು ಏನು ಖಾತರಿಯಿದೆ?

     ಪ್ರತಿಕ್ರಿಯೆ
 2. ಪಂಡಿತಾರಾಧ್ಯ

  ಮಾನ್ಯರೆ,
  ಪಂಡಿತ ಪುಟ ವನ್ನು ಮತ್ತೆ ಆರಂಭಿಸಿದ್ದೇನೆ.
  panditaputa.wordpress.com
  ಗೋಹತ್ಯೆ ನಿಷೇಧ ಮತ್ತು ಸಾವರಕರ್ ಎಂಬ ಲೇಖನ ಮತ್ತು ಅದಕ್ಕೆ
  ಶ್ರೀ ಜಿ ಎನ್ ಆಶೋಕವರ್ಧನ ಅವರ ಪ್ರತಿಕ್ರಿಯೆಗಳಿವೆ.
  ದಯವಿಟ್ಟು ಜೋಡಿ.
  ನಿಮ್ಮ ಪ್ರತಿಕ್ರಿಯೆಗಳಿಗೆ ಮುಕ್ತ ಸ್ವಾಗತವಿದೆ.
  ಪಂಡಿತಾರಾಧ್ಯ
  ಮೈಸೂರು

  ಪ್ರತಿಕ್ರಿಯೆ
  • ಡಾ.ಬಿ.ಆರ್.ಸತ್ಯನಾರಾಯಣ

   <>
   ಈ ಮಾತಿಗೆ ನನ್ನ ಪ್ರತಿಕ್ರಿಯೆ. ನಾನೇನೂ ಗೋಹತ್ಯೆ ಮಾಡಿಸಿಯೇ ತೀರಬೇಕೆಂದು ಹಠ ಹಿಡಿದು ಕುಳಿತಿಲ್ಲ. ಗೋಹತ್ಯೆ ನಿಷೇಧದಿಂದ ಅವುಗಳನ್ನು ಸಾಕಬೇಕಾಗಿರುವ ರೈತಸಮುದಾಯ ಎದುರಿಸಬೇಕಾದ ಸಮಸ್ಯೆಗಳನ್ನು ನನ್ನ ಅನುಭವದ ಹಿನ್ನೆಲೆಯಲ್ಲಿ ತಿಳಿಸುವುದಷ್ಟೇ ನನ್ನ ಉದ್ದೇಶ. ಅವುಗಳನ್ನು ಸಾಕುವ, ಮಾರಾಟ ಮಾಡುವ ಪರಮಾಧಿಕಾರ ರೈತನದೇ ಅಲ್ಲವೆ? ಪಶುಸಂಗೋಪನೆ ಒಂದು ಲಾಭದಾಯಕ ಉದ್ಯಮವಾಗಿ ಎಲ್ಲಿಯವರೆಗೆ ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಗೋಸಂತತಿಯನ್ನು ಕೇವಲ ಕಾಗದದ ಮೇಲಷ್ಟೆ ಉಳಿಸಲು ಸಾಧ್ಯ!

   ಪ್ರತಿಕ್ರಿಯೆ
 3. ಪಂಡಿತಾರಾಧ್ಯ

  ಗೋಹತ್ಯೆ ನಿಷೇಧ ಮತ್ತು ಸಾವರಕರ್ ಎಂಬ ಲೇಖನ ಮತ್ತು ಅದಕ್ಕೆ ಶ್ರೀ ಜಿ ಎನ್ ಅಶೋಕವರ್ಧನ ಅವರ ಪ್ರತಿಕ್ರಿಯೆಗಳಿಗೆ ನೋಡಿ:
  panditaputa.wordpress.com
  ಪಂಡಿತಾರಾಧ್ಯ
  ಮೈಸೂರು

  ಪ್ರತಿಕ್ರಿಯೆ
 4. kiran kumari

  sir,
  what you are rising , its valid point reg. conteporary disscussion on cowslaughter. I agree with your arguments. now we have to think and act…! is the only solution.
  regards
  regares,

  ಪ್ರತಿಕ್ರಿಯೆ
 5. Shivarama Bhat

  ನಿಮ್ಮ ವಾದದಂತೆ ಗಣಿತದಲ್ಲಿಯು ಎಡವಿದಂತೆ ತೋರುತ್ತಿದೆಯಲ್ಲ?
  (40000×2 )/ 15,೦೦ = 53. 300 ಅಥವಾ 400 ಅಲ್ಲವೇ ಅಲ್ಲ ಅಲ್ಲವೇ?.
  ಸುಮ್ಮನೆ ಸಸ್ಯಹಾರಿಗಲಾಗಿರುವುದು ಬೇರೆ.. ಮಾಂಸಾಹಾರ ತಿಂದರೆ ಹೊಟ್ಟೆಗೆ ಸೇರುವುದಿಲ್ಲವಲ್ಲ?
  ಪ್ರಾಣಿ ವಧೆಯನ್ನು ವಿರೋಧಿಸುವ ತತ್ವಾಧಾರಿತ ಸಸ್ಯಾಹಾರ ಬೇರೆಯೇನೂ..
  ಗೋಹತ್ಯೆ ವಿರೋಧಿಸುವವರಲ್ಲಿ ಪ್ರಾಣಿಹತ್ಯೆ ವಿರೋಧಿಸುವವರೂ ಅನೇಕರಿದ್ದಾರೆ ಅಲ್ಲವೇ?
  ಪಂಡಿತಾರಾಧ್ಯರು ಎಲ್ಲ ವಿಷಯದಲ್ಲೂ ಸಾವರ್ಕರರನ್ನು ಅನುಸರಿಸುತ್ತಾರೋ? ಅಥವಾ ಕೇವಲ ತಮ್ಮ ವಾದಕ್ಕೆ ಬೆಮ್ಬಲಕ್ಕಾಗೋ?
  ದೇವರನ್ನು ಮತ್ತು ಗೋವನ್ನು ವಾದಕ್ಕಾಗಿ ತಳಕು ಹಾಕಿ ದೇವರು ಕಟುಕರನ್ನು ಕೊಲ್ಲಲಾಗದಷ್ಟು ಅಸಮರ್ಥನೆ? ಎಂದು ಪ್ರಶ್ನಿಸುವುದು ಸರಿಯೇ?
  ಹಾಗಿದ್ದರೆ ತನ್ನ ಶಕ್ತಿಯನ್ನು ತೋರಿಸಲು ಗೋವಧೆ ಮಾಡುವವರಿಗೆಲ್ಲ ಪ್ರತ್ಯಕ್ಷನಾಗುವಸ್ತು ಅಗ್ಗವೇ ದೇವರು ?
  ಧರ್ಮ ಗ್ರಂಥಗಳನ್ನು ಶ್ರಧ್ಧೆ ನಂಬಿಕೆ ಗಾಗಿ ಓದಿ ಅರ್ಥೈಸುವದು ಒಂದಾದರೆ ವಿತಂಡ ವಾದಕ್ಕೆ ಓದುವುದು ಇನ್ನೊಂದು ವರ್ಗ.
  ಹುಳುಕನ್ನು ಮಾತ್ರ ಹಿಡಿಯುವ ಮನೋಧರ್ಮ ಸರ್ವ ಮಜಲು ಮಗ್ಗುಲುಗಳಿಂದ ತೂಗಿ ನೋಡಿದ್ದು ಎಂದು ನನಗಂತೂ ಅನಿಸಿಲ್ಲ.
  ಸಮಯದ ಅಭಾವ… ನಿಮ್ಮ ಮತ್ತು ಸಾವರ್ಕರ ಎಲ್ಲ ಅಭಿಪ್ರಾಯಕ್ಕೂ ನಮ್ಮಲ್ಲಿ ಉತ್ತರವಿದೆ.
  ಯಾವ ಚಿಂತನೆ ಬಲಾಧ್ಯವೋ ಅದು ಗೆಲ್ಲುವುದು ಸಹಜ…ಗೋಹತ್ಯ ನಿಷೇಧದ ಕಾನೂನಿನಂತೆ.
  ಅದು ನಮ್ಮ ಭಾವನೆಯು ಆಗಿದ್ದರೆ ಮಾತ್ರ ಖುಷಿ ಅಲ್ಲವೇ?
  http://shivarama-bhat.blogspot.com/2010/03/blog-post_12.html

  ಪ್ರತಿಕ್ರಿಯೆ
  • ಡಾ.ಬಿ.ಆರ್.ಸತ್ಯನಾರಾಯಣ

   ಇಡಿಯಾಗಿ ತೂಗಿದರೆ 1500 ಕೇಜಿ ಎಂದು ಬರೆದಿದ್ದೇನೆಯೇ ಹೊರತು, ಉತ್ಪತ್ತಿಯಾಗುವ ಮಾಂಸ 1500 ಕೆಜಿ ಎಂದು ಬರೆದಿಲ್ಲ. ಇನ್ನು ಕೊಂಡುಕೊಳ್ಳುವ ರಾಸನ್ನು ಸಾಗಿಸಬೇಕಾದರೆ ಖರ್ಚಾಗುವ ಹಣವೂ,(ಇಪ್ಪತ್ತೈದು ಕಿಲೋಮೀಟರ್ ದೂರದ ನನ್ ಹಳ್ಳಿಗೆ ಒಂದು ಹಸು ಸಾಗಿಸಲು ಸುಮಾರು ಮೂರು ವರ್ಷಗಳ ಹಿಂದೆ ನಾವು ಐನೂರು ರೂಪಾಯಿ ಕೊಟ್ಟಿದ್ದೆವು) ಅದು ವಧೆಯಾಗುವವರೆಗೆ ಅದಕ್ಕೆ ನೀಡುವ ಆಹಾರ ನೀರುಗಳೀಗೆ ಖರ್ಚಾಗುವ ಹಣ, ವಧಾಗಾರದಲ್ಲಿ ಕಟ್ಟಬೇಕಾದ ತೆರಿಗೆ, ಮಾಂಸದಂಗಡಿಯನ್ನು ನೆಡಸಲು ಆಗುವ ಖರ್ಚು, ಅದರ ಮೇಲೆ ಅವನು ಮಾಡಬೇಕಾದ ಲಾಭ ಎಲ್ಲವೂ ಉತ್ಪತ್ತಿಯಾಗುವ ಮಾಂಸದ ಮೇಲೆಯೇ ಬೀಳುತ್ತದೆ ಅಲ್ಲವೆ? ನಾನು 250ರಿಂದ 300 ಎಂದು ಬರೆದಿರುವುದನ್ನು ನೀವು 300 ರಿಂದ 400 ಎಂದು ತಿರುಚುವ ಅಗತ್ಯವೇನಿತ್ತೋ ನನಗೆ ತಿಳಿಯಲಿಲ್ಲ. ಒಂದು ಮಾತನ್ನು ಸ್ಪಷ್ಟಪಡಿಸುತ್ತೇನೆ. ನಾನಿಲ್ಲಿ ರೈತನಿಗೆ ಆಗಬಹುದಾದ ತೊಂದರೆಗಳನ್ನು ನನ್ನ ಅನುಭವದ ಹಿನ್ನೆಲೆಯೆಲ್ಲಿ ಹೇಳಲು ಪ್ರಯತ್ನಿಸಿದ್ದೇನೆಯೇ ಹೊರತು, ಇದೇ ಸರಿ ಎಂದು ಸಾಧಿಸಲು ಹೊರಟಿಲ್ಲ. ರೈತನ ಹಕ್ಕನ್ನು ರೈತನಿಗೇ ಬಿಡಿ ಎನ್ನುವುದು ತಪ್ಪಲ್ಲ ೆಂದು ಭಾವಿಸುತ್ತೇನೆ.

   ಪ್ರತಿಕ್ರಿಯೆ
 6. ಡಾ.ಬಿ.ಆರ್.ಸತ್ಯನಾರಾಯಣ

  (ನನ್ನ ಲೇಖನಕ್ಕೆ ಮಾಣ್ಯ ಪರಾಂಜಪೆಯವರು ಕಳುಹಿಸಿದ ಈ ಮೇಲ್ ನಲ್ಲಿರುವ ಒಂದೆರಡು ಅಭಿಪ್ರಯಾಗಳಿಗೆ ನನ್ನ ಪ್ರತಿಕ್ರಿಯೆ)
  ಪರಾಂಜಪೆ ಸರ್, ನಮಸ್ಕಾರ. ಇಂದು ಬೆಳಿಗ್ಗೆ ನಿಮ್ಮ ಈ ಮೇಲ್ ಓದುವುದರಿಂದ ಪ್ರಾರಂಭವಾಗುತ್ತಿರುವುದಕ್ಕೆ ಖುಷಿಯಾಗಿದೆ.
  ನಿಮ್ಮ ಮೇಲಿನ ಈ ಸಾಲುಗಳು ಬಗ್ಗೆ ಸ್ವಲ್ಪ ವಿವರಣೆ ನೀಡಬೇಕೆಂದಿದ್ದೇನೆ.
  <>
  ಇಂದು ಕರ್ನಾಟಕದ ಹಲವಾರು ಮೃಗಾಲಯದಲ್ಲಿ ಇರುವ (ಗೋ)ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಚಿರತೆ ಮತ್ತು ಸಿಂಹ ಇವುಗಳಳಿಗೆ ದಿನವೊಂದಕ್ಕೆ ಸುಮಾರು 1800 ಕೆಜಿ ಗೋಮಾಂಸದ ಅವಶ್ಯಕತೆಯಿದೆ. ಗೋಹತ್ಯೆ ನಿಷೇಧ ವಿಧಾನ ಸಭೆಯಲ್ಲಿ ಅಂಗೀಕಾರವಾಘುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಸ್ಚರ್ಯ ಕಾದಿತ್ತು. ಅದರಲ್ಲಿ ಆ ಪ್ರಾಣಿಗಳ ಾಹಾರಕ್ಕೆ ಪರ್ಯಾಯವನ್ನು ಸೂಚಿಸಿರಲಿಲ್ಲ. ಈ ಗೊಂದಲವನ್ನು ನಿವಾರಿಸಿಕೊಳ್ಳಲು ಎಲ್ಲಾ ಮೃಗಾಲಯದ ಅಧಿಕಾರಿಗಳು ಪರಸ್ಪರ ಸಭೆ ನಡೆಸಿ ಗೋಮಾಂಸಕ್ಕೆ ಪರ್ಯಾಯವಾಗಿ ಬೇರೆ ಮಾಂಸವನ್ನು ನೀಡಬಹುದೆ ಎಂದು ಪರಿಶೀಲಿಸಿದರು. ಯಾವ ವೈದ್ಯರೂ ಇದಕ್ಕೆ ಒಪ್ಪಲಿಲ್ಲ. ಕಾರಣ, ಮೃಗಾಳಯದಲ್ಲಿರುವ ಪ್ರಾಣಿಗಳು ಗೋಮಾಂಸಕ್ಕೆ ತಮ್ಮ ಾಹಾರಕ್ರವನ್ನು ಒಗ್ಗಿಸಿಕೊಂಡುಬಿಟ್ಟಿವೆ. ಗೋಮಾಂಸಕ್ಕಿಂತ ಅತೀ ಹೆಚ್ಚು ಕೊಲೆಸ್ಟರಾಲ್ ಉಳ್ಳ ಬೇರೆ ಕುರಿ/ಮೇಕೆ ಮಾಂಸವನ್ನು ಅವುಗಳಿಗೆ ಕೊಟ್ಟರೆ ಕೆಲವೇ ವರ್ಷಗಳಲ್ಲಿ ಅವುಗಳು ಹೃದಯಸಂಬಂಧಿ ಖಾಯಿಲೆಗಳಿಗೆ ತುತ್ತಾಗುತ್ತವೆ. ಆದರೆ ಕಾಡಿನಲ್ಲಿರುವ ಪ್ರಾನಿಗಳಿಗೆ ಇದು ಅನ್ವಯಿಸುವುದಿಲ್ಲ. ಏಕೆಮದರೆ ಅವು ದಿನವೊಂದಕ್ಕೆ ಕನಿಷ್ಠ ಿಪ್ಪತ್ತು ಮೈಲಿ ಓಡಾಟ ನಡೆಸುತ್ತವೆ. ಈಗ ಉನ್ನತಾಧಿಕಾರಿಗಳು ಮತ್ತೆ ಸಭೆ ಸೇರಿ ಮುಂದೇನು? ಎಂದು ಚಿಂತಿಸುತ್ತಿದ್ದಾರೆ.
  <>
  ಹೌದು. ನಾವೆಂದೂ ನಮ್ಮ ರಾಸುಗಳನ್ನು ಕಟುಕರಿಗೆ ಕೊಡಲಿಲ್ಲ. ಅಥವಾ ನಮಗೆ ಗೊತ್ತಿಲ್ಲದೇ ಅವು ಕಟುಕರಿಗೆ ಮಾರಾಟವಾಗಿರಲೂ ಬಹುದು. ಗೋಮಾಂಸ ಸೇವನೆಯೊಂದೇ ಗೋಸಂತತಿ ಅಳಿವಿನ ಅಂಚಿನಲ್ಲಿರುವುದಕ್ಕೆ ಕಾರಣವಲ್ಲ ಎಂಬುದು ಸ್ಪಷ್ಟ. ಪಶುಸಂಗೋಪನೆ ಒಂದು ಲಾಭದಾಯಕ ಉದ್ಯಮವಾಗುವವರೆಗೂ ಕೇವಲ ಕಾನೂನಿನಿಂದ ಮಾತ್ರ ಗೋಸಂತತಿಯನ್ನು ಉಳಿಸಲಾಗುವುದಿಲ್ಲ. ಗೋಹತ್ಯೆ ನಿಷೇಧ ಮಾಡುವುದಕ್ಕೆ ಹೋಗಿ, ಅವುಗಳ ಮಾರಾಟದ ವಿಷಯದಲ್ಲೂ ಸರ್ಕಾರ ಗೊಂದಲವುನ್ನುಂಟು ಮಾಡಿರುವುದು ಬೆಳಕಿನಷ್ಟೇ ಸತ್ಯ. ಎಂದೂ ಗೋಮಾಂಸ ತಿನ್ನದ ರೈತ ಕೂಡಾ ಈ ಮಸೂದೆಯ ಬಿಸಿಯನ್ನು ಅನುಭವಿಸಬೇಕಾಗಿರುವುದು ದುರದೃಷ್ಟಕರ. ಆದರ ಬದಲು ಪಶುಸಂಗೋಪನೆಗೆ ವಿಫುಲ ಅವಕಾಶ, ಮತ್ತು ಗೋಉತ್ಪನ್ನಗಳಿಂದಲೇ ನಡೆಯುವ ಕೈಗಾರಿಕೆಗಳಿಗೆ ಹೆಚ್ಚಿನ ಗೊತ್ತು ಕೊಡಬಹುದಿತ್ತು. ಬೂಸಾ ಮೇಲಿನ ಾಮದು ಸುಂಕ, ಮಾರಾಟ ಸುಂಕ ಇತ್ಯಾದಿಗಳನ್ನು ತೆಗೆದು ಹಾಕಬಹುದಾಗಿತ್ತು. ಹಾಳಿನ ಬೆಲೆ ಹೆಚ್ಚಳ ಮಾಡಬಹುದಿತ್ತು. ಹಾಲಿನಿಂದ ಮಾಡಬಹುದಾದ ತಿನ್ನುವ ವಸ್ತುಗಳನ್ನು ಹೆಚ್ಚು ಜನಪ್ರಿಯ ಮಾಡಬಹುದಾಗಿತ್ತು. ಹಾಳಿನ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸುವ ಶಕ್ತಿ ತುಂಬಬೇಕಾಗಿತ್ತು. ಇದ್ಯಾವುದನ್ನೂ ಮಾಡದೆ, ಕೇವಲ ಗೋಹತ್ಯ ನಿಷೇಧದಿಂದ ಮಾತ್ರ ಗೋಸಂತತಿ ಹೆಚ್ಚಾಗುತ್ತದೆ ಎಂಬುದು ಭ್ರಮೆ ಮಾತ್ರ ಎಂದು ನನಗನ್ನಿಸುತ್ತದೆ. ನಮ್ಮ ಪಕ್ಷಾಧಾರಿತ ರಾಜಕೀಯ ವ್ಯವಸ್ಥೆಯಲ್ಲಿ ಮುಳುಗಿ ಏಳುತ್ತಿರುವ ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಅರ್ಥವಾದರೂ ಅವರು ಅದನ್ನು ಜಾಣತನದಿಂದ ಮೂಲೆಗುಂಪಾಗಿಸುತ್ತಿದ್ದಾರೆ.
  ಗೋಹತ್ಯಗೆ ಮಾತ್ರ ನಿಷೇಧ ಹೇರಲಾಗಿದೆಯೇ ಹೊರತು ಗೋಮಾರಟಕ್ಕೇನೂ ನಿಷೇಧ ಹೇರಲಾಗಿಲ್ಲ ಎನ್ನುವ ನಿಮ್ಮ ಮಾತು ನನಗೆ ಆಶ್ಚರ್ಯ ತಂದಿದೆ. ರೈತರು ಗೋವುಗಳನ್ನು ಮಾರುವಾಗ ಅವುಗಳನ್ನು ಮಾಂಸಕ್ಕಾಗಿ ಮಾರುವಂತಿಲ್ಲ ಮತ್ತು ಸಾಗಾಟ ಮಾಡುವಂತಿಲ್ಲ. ಇಲ್ಲಿ ಒಂದು ಪ್ರಶ್ನೆ ಹೇಳುತ್ತದೆ. ತನ್ನ ತುರ್ತಿಗಾಗಿ ತನ್ನ ವಸ್ತುವನ್ನು ಮಾರಾಟ ಮಾಡಲು ಹೋದವನಿಗೆ ಒಳ್ಳೆಯ ಬೆಲೆಯನ್ನು ನಿರೀಕ್ಷಿಸುತ್ತಾನೆಯೆ ಹೊರತು, ಕೊಂಡುಕೊಳ್ಳುವವನು ಅದನ್ನು ಏನು ಮಾಡುತ್ತಾನೆ ಎಂದು ಯೋಚಿಸುವುದಿಲ್ಲ. ಜೊತೆಗೆ ಬೇರೆ ಉದ್ದೇಶಕ್ಕೂ ಮಾರಾಟ ಮತ್ತು ಸಾಗಾಣಿಕೆ ಮಾಡಲು ಅಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಗೋಹತ್ಯೆ ನಿಷೇದ ಕಾನೂನು ಹೇಳುತ್ತಿದೆ. ಇದನ್ನು ಪತ್ರಿಕೆಗಳೂ ಹೈಲೈಟ್ ಮಾಡಿದ್ದಾರೆ. ಅಂದರೆ ರೈತರು ತನ್ನ ವ ಸ್ತುವನ್ನು ಮಾರಾಟ ಮಾಡಲೂ ಅಧಿಕಾರಿಗಳ ಮರ್ಜಿಗಾಗಿ ಕಾಯಬೇಕಾಗುತ್ತದೆ. ಈಗಾಗಲೇ ಭ್ರಷ್ಟಾಚಾರದ ಕೂಪಮಂಡೂಕಗಳಾಗಿರುವ ಅಧಿಕಾರಿಗಳಿಗೆ ಮತ್ತೊಂದು ಸವರ್ಣ ಅವಕಾಶವನ್ನು ಈ ಕಾನೂನು ಮಾಡಿಕೊಡುತ್ತದೆ ಎಂದು ನನಗನ್ನಿಸುತ್ತದೆ.
  ವಿಶ್ವಾಸದೊಂದಿಗೆ
  ನಿಮ್ಮವ
  ಸತ್ಯನಾರಾಯಣ

  ಪ್ರತಿಕ್ರಿಯೆ
 7. ಡಾ.ಬಿ.ಆರ್.ಸತ್ಯನಾರಾಯಣ

  ‘ಪ್ರತಿಗಂಟೆಗೆ ರೂ ಐವತ್ತು ಲಕ್ಷ ವೆಚ್ಚ’ ಮಾಡಿ ‘ನಿರಂತರ ವಿದ್ಯುತ್ ಪೂರೈಕೆ ತಂತ್ರ’ವನ್ನು ಬಿ.ಬಿ.ಎಂ.ಪಿ ಚುನಾವಣೆಯ ಹಿನ್ನೆಲೆಯಲ್ಲಿ ಮಾಡಲಾಗುತ್ತಿದೆ. ಅಂದರೆ ದಿನಕ್ಕೆ 12 ಕೋಟಿ! ಈ ತಿಂಗಳ ಕೊನೆಯವರೆಗೂ ನಿರಂತರ ವಿದ್ಯುತ್ ಪೂರೈಕೆ ಮಾಡಿದರೂ ಸುಮಾರು ಇನ್ನೂರಕ್ಕೂ ಹೆಚ್ಚು ಕೋಟಿಗಳನ್ನು ಹೆಚ್ಚುವರಿಯಾಗಿ ಭರಿಸಬೇಕಾಗಿದೆ. ಆದರೆ ದುರಂತ ನೋಡಿ. ರೈತರಿಗೆ ಹೆಚ್ಚುವರಿಯಾಗಿ ಕೇವಲ ೊಂದು ಗಂಟೆ ಕರೆಟ್ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಬೇಕಾಯಿತು. ಕೋರ್ಟುಗಳಿಗೆ ಅರ್ಥವಾಗುವ ವಿಷಯ ಸರ್ಕಾರಗಳಿಗೆ ಅರ್ಥವಾಗುವುದಿಲ್ಲ! ಇದನ್ನೆಲ್ಲ ನೋಡಿದರೆ ಇಂದು ರೈತಸಮುದಾಯದ ಅಧೋಗತಿ-ಸ್ಥಿತಿ ಭಯವನ್ನುಂಟುಮಾಡುತ್ತದೆ.

  ಪ್ರತಿಕ್ರಿಯೆ
 8. Dr Kiran Acharya

  People who are crying foul about the purchase of electricity are very same people who prevented the power genration projects in Karnataka!
  Were they paid by the power lobbies?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: