ಚಂಚಲತೆ, ನಿನ್ನ ಹೆಸರೇ ಸ್ವೀಟಲ್ಲವೇ!

door_number142.jpg“ಡೋರ್ ನಂ 142”

ಬಹುರೂಪಿ

ಫೀಸ್ ನಲ್ಲಿ ಏನೋ ಫಂಕ್ಷನ್ ಇತ್ತು. ಖುಷಿ ಖುಷಿಯಾಗಿದ್ವಿ. ಸ್ವೀಟ್ಸ್ ಪಾಕೆಟ್ ಬಂತು. ವಾಹ್! ಗಮಾ ಗಮ ಅಂತು. ಒಂದು ತಗೊಂಡಿದ್ದವನು ಎರಡನೆಯದಕ್ಕೆ ಕೈ ಹಾಕಿದೆ. “ಏನ್ ಸಾಯ್ತಿಯೋ ಯಾವತ್ತು ಸ್ವೀಟ್ಸ್ ಕಂಡೇ ಇಲ್ಲ ಅನ್ನೋವನ ಹಾಗೆ…” ಅನ್ನೋ ಮಾತು ಕಿವೀಗೆ ಬಂದು ಅಪ್ಪಳಿಸಿತು. ನನಗೇ ಗೊತ್ತಿಲ್ಲದ ಹಾಗೆ ಹಿಡಿದಿದ್ದ ಆ ಎರಡನೇ ಸ್ವೀಟ್ಸನ್ನ ವಾಪಸ್ ಪ್ಯಾಕೆಟ್ ಗೆ ಹಾಕ್ದೆ.

brazil.jpg

ನಾನು ನಾಲ್ಕನೇ ಕ್ಲಾಸ್ ನಲ್ಲಿದ್ದೆ. ಸಾಯಂಕಾಲ ಎಲ್ಲಾ ಚೋಟುಗಳು ಸೇರ್ಕೊಂಡು ಸಿಕ್ಕಿದ ಆಟ ಎಲ್ಲಾ ಆಡಿದ್ವಿ. ಕಣ್ಣಾಮುಚ್ಚಾಲೆ ಅಂತ ಡಿಸೈಡ್ ಆಯ್ತು. ನಮ್ಮ ಗ್ಯಾಂಗ್ ನಲ್ಲಿ ಆಡೋದಿಕ್ಕೆ ನಮ್ಮ ರೋಡ್ ನೋರು ಅಂತ ಆದ್ರೆ ಸಾಕು. ಇನ್ನೂ ಬೇಕು ಅಂದ್ರೆ ನಮ್ಮ ಪಕ್ಕದ ಗ್ಯಾಂಗ್ ನ ಫ್ರೆಂಡ್ಸ್ ಬಂದ್ರೂ ಸೇರಿಸಿಕೊಳ್ತಿದ್ವಿ. ಆಗ ಒಂದೆರಡು ತಿಂಗಳ ಹಿಂದೆ ಇರಬೇಕು, ಪಕ್ಕದ ಮನೇಗೆ ಗುಜರಾತಿ ಫ್ಯಾಮಿಲಿ ಬಂದಿತ್ತು. ನಾವೋ ಬೇರೆ ರಾಜ್ಯದವರನ್ನ ಅದುವರೆಗೂ ನೋಡಿರಲಿಲ್ಲ. ಹಾಗಾಗಿ ನಿಜವಾಗಿ ಫಾರಿನ್ನವರನ್ನ ನೋಡ್ತಿವಲ್ಲ ಹಾಗೆ ನೋಡಿದ್ವಿ. ಅವರ ಆಚಾರ, ವಿಚಾರ, ಹವ್ಯಾಸ ಎಲ್ಲಾ ಒಂಥರಾ ಬೇರೇನೆ ಇತ್ತು. ಒಂದಿನ ನಮ್ಮ ಗ್ಯಾಂಗ್ ನಲ್ಲಿದ್ದ ಗುಜರಾತಿ ಹುಡುಗ ಕಣ್ಣಾಮುಚ್ಚಾಲೇನಲ್ಲಿ ಎಲ್ಲರನ್ನ ಹುಡುಕಬೇಕಾಗಿತ್ತು. ನಮ್ಮ ಗ್ಯಾಂಗ್ ನಲ್ಲಿ ಏನಿಲ್ಲ ಅಂದ್ರೂ ೧೫ಕ್ಕಿಂತ ಜಾಸ್ತಿ ಪಿಳ್ಳೆಗಳು ಇರ್ತಿದ್ರು. ಅವರ್ನೆಲ್ಲ ಹುಡುಕೋದು ಅಂದ್ರೆ ತಮಾಷೇನಾ…? ಹಾಗಾಗಿ ನಮ್ಮ ಗುಜರಾತಿ ಹುಡುಗ ಒಂದು ಪ್ಲಾನ್ ಮಾಡ್ದ. ಮನೆಗೋಗಿ ಸ್ವೀಟ್ಸ್ ಡಬ್ಬ ಹಿಡ್ಕೊಂಡು ಬಂದ. “ಯಾರ್ಯಾರಿಗೆ ಸ್ವೀಟ್ಸ್ ಬೇಕು ಎಲ್ಲಾ ಬನ್ನೀ” ಅಂತ ಕರೆದ. ನಾವೆಲ್ಲಾ ಯಾವ ಯಾವ ಮೂಲೇಲಿ ಮೈ ಕೈಯೆಲ್ಲಾ ತರಚೋ ಹಾಗೆ ನುಗ್ಗಿಕೊಂಡು ಕೂತಿದ್ದವರು “ಹೋ…” ಅಂತ ಕೂಗಿಕೊಂಡು ಹೊರಗೆ ಜಿಗಿದ್ವಿ. ಎಲ್ಲಾರೂ ಒಂದೇ ಸಲಕ್ಕೆ ಔಟ್. ನಮಗೇನೂ ಬೇಜಾರಾಗಲಿಲ್ಲ- ಎದುರಿಗೆ ತಿಂಡಿ ಇತ್ತಲ್ಲ. ಎಲ್ಲಾರೂ ಕೈ ಹಾಕಿದ್ವಿ. ನಾನು ಎರಡು ಕೈ ಹಾಕ್ದೆ. ಆಗ್ಲೇ ಅವನು, ನನ್ನ ಹಾಗೇನೆ ನಾಲ್ಕನೇ ಕ್ಲಾಸ್ ನಲ್ಲಿ ಓದುತ್ತಿದ್ದವನೇ… “ಏನು ಸಾಯ್ತಿಯೋ.. ಯಾವತ್ತೂ ಸ್ವೀಟ್ಸ್ ಕಂಡಿಲ್ಲ ಅನ್ನೋವನ ಹಾಗೆ…” ಅಂತಂದ. ಅದು ನೆನಪಾಗಿ ಮೊನ್ನೆ ಆಫೀಸ್ನಲ್ಲಿ ಗೊತ್ತಿಲ್ಲದ ಹಾಗೆ ತಗೊಂಡ ಸ್ವೀಟ್ಸ್ ಪ್ಯಾಕೆಟ್ ಗೆ ವಾಪಸ್ ಬಿದ್ಬಿಡ್ತು.

ಅವತ್ತಿನಿಂದ ಇವತ್ತಿನವರೆಗೂ ಯಾಕೋ ಸ್ವೀಟ್ ನನಗೆ ಸ್ವೀಟ್ ಆಗಿ ಉಳಿದಿಲ್ಲಾ, ಕಹಿ ಕಹಿ ನೆನಪು ತರಿಸುತ್ತೆ. ಸಿಹಿಯಾಗಬೇಕಾದ ನಾಲಗೆ ರುಚಿ ಹತ್ತಿಸಿಕೊಳ್ಳುತ್ತೆ. ಅವನು ಹೇಳಿದ್ದು ನಿಜಾನೇ. ಯಾವತ್ತೂ ಸ್ವೀಟ್ಸ್ ಕಂಡಿಲ್ಲದವನ ಹಾಗೇನೇ ಅಲ್ಲೀವರೆಗೂ ಬೆಳೆದಿದ್ದೆ. ಹಳ್ಳಿಯಂತಾ ಹಳ್ಳಿಯಲ್ಲಿ ಅವಾಗೇನೂ ಈಗಿನ ಥರಾ ಬೀದಿ ಬೀದಿಗೂ ಸ್ವೀಟ್ಸ್ ಅಂಗಡಿ ಇತ್ತಾ? ಬೇಕರಿ ಇತ್ತಾ? ಯಾವುದು ತಿನ್ನಬೇಕು ಅನ್ನೋದಕ್ಕೆ ನಾನೇನಾದ್ರೂ ಸ್ವೀಟ್ಸ್ ಅಂದ್ರೆ ಹೇಗಿರುತ್ತೆ ಅಂತೇನಾದ್ರೂ ನೋಡಿದ್ನಾ, ಅಮ್ಮ ಮಾಡೋ ಪಾಯಸ, ವರ್ಷಕ್ಕೊಂದು ಸಲದ ಒಬ್ಬಟ್ಟು, ಕಜ್ಜಾಯ, ತಂಬಿಟ್ಟು ಬಿಟ್ರೆ ಸ್ವೀಟ್ಸ್ ಅಂತ ಇನ್ನೊಂದಿರುತ್ತೆ ಅನ್ನೋದಾದ್ರೂ ನಮಗೇನು ಗೊತ್ತಿತ್ತು? ಗೊತ್ತಿತ್ತು ಅಂತಾನೇ ಇಟ್ಕೊಳ್ಳಿ: ಅಂಗಡಿಗೆ ಹೋಗಿ ಸಿಕ್ಕಿಸಿಕ್ಕಿದ್ದು ತಿನ್ನೋದು ತಪ್ಪು ಅನ್ನೋ ಹಿರಿಯರು ಇದ್ರಲ್ಲಾ ಮನೇಲಿ ಏನ್ಮಾಡೋದು.

ಸ್ವೀಟ್ಸ್ ಅಂದ್ರೆ ಜ್ವರ ಬಂದಾಗ ಕೊಡೋ ರವೆಗಂಜಿ ಕೂಡ ಅಂತ ಅನ್ಕೊಂಡಿದ್ದ ಕಾಲ ಅದು. ರವೇಗಂಜಿನಾದ್ರೂ ಸಿಗಲಿ ಅಂತ ಎಷ್ಟು ಸಲ “ಜ್ವರ ಬರಲಪ್ಪಾ, ದೇವ್ರೇ…” ಅಂತಾ ಬೇಡ್ಕೊಂಡಿದ್ವಿ. ಹರಕೆ ಹೊತ್ತಿದ್ವಿ. ಸಕ್ಕರೆ ಹಾಕಿದ್ದೆಲ್ಲ ಸ್ವೀಟ್ಸ್ ಅಂತಾನೇ ನಮಗೆ ಗೊತ್ತಿದ್ದದ್ದು.

ಬೆಂಗಳೂರು ಅನ್ನೋ ಬೆಂಗಳೂರಿಗೆ ಬಂದ ಮೇಲೆ ನಮಗೆ ಗೊತ್ತಾಗಿದ್ದು ಓ ಸ್ವೀಟ್ಸ್ ಅಂದ್ರೆ ಹೀಗೂ ಇರುತ್ತೆ. ಬೀದೀಲಿ ಬೇಕರಿ ಇರುತ್ತೆ ಅಂತ. ಅಮ್ಮನ್ನ ಕಾಡಿಬೇಡಿ ಕ್ರೀಂ ಬನ್ ತಿಂತಿದ್ವಿ. ಸ್ವರ್ಗ ಅನ್ನೋದು ಇಳಿಯೋಕೆ ನಮಗೆ ಒಂದು ಕ್ರೀಂ ಬನ್ ಸಾಕಾಗ್ತಿತ್ತು.

ಡಾಕ್ಟರ್ ಆಂಟಿ ಇದ್ರಲ್ಲಾ, ರಜಕ್ಕೆ ಅಂತ ಅವರ ಮನೇಗೆ ಹೋದರೆ ಎಲ್ಲರ ಕಣ್ಣು ತಪ್ಪಿಸಿ ಹಾರ್ಲಿಕ್ಸ್ ಅನ್ನು ಇಡೀ ಚಮಚ ಬಾಯಿಗೆ ಸುರಿಕೋತಿದ್ವಿ. ಬೆಣ್ಣೆ ಕದಿಯೋಕೆ ಅಂತ ಕೃಷ್ಣ ಏನೇನೆಲ್ಲಾ ಮಾಡ್ದಾ, ಗಡಿಗೆ ಹೇಗೆ ಎಟುಕಿಸಿಕೊಂಡ, ಹೇಗೆ ಬಾಯೆಲ್ಲಾ ಮಾಡ್ಕೊಂಡ, ಹೇಗೆ ಮೈ ಮೇಲೆ ಸುರಕೊಂಡ. ಅವೆಲ್ಲಾ ನಾವೂ ಮಾಡಿದ್ದೀವಿ, ಬರಿ ಕೃಷ್ಣ ಏನು ಬಂತು? ಅವನು ಬೆಣ್ಣೆ ಕದ್ದ, ನಾವು ಹಾರ್ಲಿಕ್ಸ್ ಕದ್ವಿ. ಅವನು ಬೆಣ್ಣೆ ಕಳ್ಳ ಅಂತ ಹೆಸರಿಟ್ಟು ಮುದ್ದು ಮಾಡಿದ್ರು. ನಮಗೆ ಹಾರ್ಲಿಕ್ಸ್ ಕಳ್ಳ ಅಂತಾ ಹೇಳಿ ಒದ್ದಾಕಿದ್ರು ಅಷ್ಟೇ.

ಗುಜರಾತಿ ಮನೆಯವರು ಊರಿಗೆ ಹೋಗ್ತಾರೆ ಅಂದ್ರೆ ನನಗೆ ನಾಲ್ಕು ರಾತ್ರಿ ನಿದ್ದೆ ಬರ್ತಿರಲಿಲ್ಲ. ಅವರು ಮನೆ ನೋಡ್ಕೊಳ್ಳೋಕ್ಕೆ ಯಾರಾದ್ರೂ ಮಲಗ್ಲಿ ಅಂತ ಬೀಗದ ಕೀ ಕೊಟ್ಟು ಹೋಗೋರು. ಅವರು ಊರಿಗೆ ಹೋಗ್ತಾರಂತೆ ಅಂತ ಗೊತ್ತಾದ ತಕ್ಷಣವೇ ನನ್ನ ತಲೆ ಒಳಗೆ ಒಬ್ಬ ಕಳ್ಳ ಎದ್ದು ನಿಲ್ತಿದ್ದ. ಮಾಸ್ಟರ್ ಪ್ಲಾನ್ ಮಾಡೋದಕ್ಕೆ ಶುರು ಮಾಡ್ತಿದ್ದೆ. ಹೀಗೆ ಅಮ್ಮನಿಗೆ ಗೊತ್ತಾಗದೆ ಮೊದಲು ಬೀಗದ ಕೀ ಎಗರಿಸಬೇಕು. ಆಮೇಲೆ ಗೊತ್ತಿಲ್ಲದ ಹಾಗೆ ಕಳ್ಳ ಹೆಜ್ಜೆ ಇಟ್ಟು ಅವರ ಮನೆ ಸೇರಿಕೊಳ್ಳಬೇಕು. ಆಮೇಲೆ ಹೋಗಿ ಕಣ್ಣಲ್ಲೇ ನನಗೆ ಬೇಕಾಗಿರೋ ಮಾಲು ಪತ್ತೆ ಹಚ್ಚಬೇಕು. ಆಮೇಲೆ ಹೋಗಿ ಒಂಚೂರೂ ಕ್ಲೂ ಬಿಟ್ಟುಕೊಡದ ಹಾಗೆ ಕೆಲಸ ಮುಗಿಸಬೇಕು… ರಿಯಲ್ ಎಸ್ಟೇಟ್ ಧಣೀನ ಮರ್ಡರ್ ಮಾಡೋಕೂ ಈಗಿನ ಕಾಲದಲ್ಲಿ ಇಷ್ಟು ಪ್ಲಾನ್ ಮಾಡ್ತಾರೋ ಇಲ್ಲವೋ ನಾನಂತೂ ಮಾಡ್ತಿದ್ದೆ ಯಾಕೆ ಎಲ್ಲಾ ಅವರ ಮನೆ ಶೆಲ್ಫ್ ನಲ್ಲಿದ್ದ ಒಂದು ಸ್ಪೂನ್ ಸಕ್ಕರೆಗಾಗಿ.

ನನಗೂ ಪುಸ್ತಕದಲ್ಲಿ ಪಾಠ ಓದುವಾಗ ಕರುಳು ಕಿತ್ಕೊಂಡು ಬರ್ತಿತ್ತು. ಯಾಕೆ ಅಂದ್ರೆ ನಮ್ಮ ಹಿಂದಿ ಪಾಠದಲ್ಲಿ ಒಂದು ಕಥೆ ಇತ್ತು. ಒಬ್ಬ ಹುಡುಗ ಇದ್ದ. ಅವನಿಗೆ ಸ್ವೀಟ್ ತಿನ್ನಬೇಕು ಅಂತ ಆಸೆ. ಹೋಟೆಲ್ ಗಾಜಿನಲ್ಲಿಟ್ಟಿದ್ದ ಸ್ವೀಟ್ ನ ಆಸೆಯಿಂದ ನೋಡ್ತಾ ನಿಂತ್ಕೊಂಬಿಟ್ಟ, ಗೊತ್ತಲ್ಲ. ಆಮೇಲಿನ ಕಥೆ? ವಾಸನೆ ಕುಡಿದಿದ್ದಕ್ಕೆ ದುಡ್ಡು ಕೊಡು ಅಂತ ಹೋಟೆಲ್ ನೋರು ಹಿಡಕೊಂಡಿದ್ದು. ನನಗೆ ತುಂಬಾ ಬೇಜಾರಾಗಿತ್ತು. ಅದೆಲ್ಲಾ ಓದಿ ಬೇಜಾರು ಮಾಡ್ಕೊಂಡ್ನಾ, ನೆಕ್ಸ್ಟ್ ಪದ್ಯಾನೇ ನನ್ನ ಬಾಯಲ್ಲಿ ನೀರೂರಿಸೋ ಹಾಗೆ ಮಾಡ್ತಿತ್ತು. “ಇಂದರ್ ಆಯಾ… ಇಂದರ್ ಆಯಾ… ಬರ್ಫಿ ಲಡ್ಡು ಬಾದೂಶಾಹಿ…” ಅನ್ನೋ ಪದ್ಯ ಅದು. ಬಾಯಲ್ಲಿ ನೀರೂರಿಸಿಕೊಂಡು ಪಾಠ ಕೇಳ್ತಿದ್ದೆ. ಅಮ್ಮ ಪ್ರತೀಸಲಾ “ಪಾಠ ಉರೂ ಹೊಡ್ದಾ, ಪದ್ಯ ಬಾಯಿಪಾಠ ಮಾಡಿದ್ಯಾ” ಅಂತ ಗದರಿಕೋಬೇಕಿತ್ತು. ಆದ್ರೆ ವಂಡರ್! ಅಮ್ಮ ಹೇಳದೇನೆ ನನಗೆ ಬರ್ಫಿ ಲಡ್ಡು ಪದ್ಯ ಬಾಯಿಪಾಠ ಆಗೋಗಿತ್ತು. ಬಾಯಿಪಾಠ ಆದ್ರೆ ಬರ್ಫಿ ತಿಂದಂಗೆ ಆಗುತ್ತಾ…?

ಅದಾದ್ಮೇಲೆ ಏನೇನೋ ಆಗಿ ಹೋಯ್ತು. “ಚಂಚಲತೆ ನಿನ್ನ ಹೆಸರೇ ಸ್ತ್ರೀಯಲ್ತೆ…” ಎಂದ ಶೇಕ್ಸ್ ಪಿಯರ್. ನನ್ನ ಮನಸ್ಸೋ ಚಂಚಲ ಸ್ವೀಟ್ ವಿಷಯ  ಬಂದರೆ “ಚಂಚಲತೆ ನಿನ್ನ ಹೆಸರೇ ಸ್ವೀಟಲ್ತೆ…” ಅನ್ಕೋಬೇಕೇನೋ. ನನ್ನ ಫ್ರೆಂಡ್ “ಯಾಕ್ ಸಾಯ್ತಿಯೋ…” ಅಂತ ಕೇಳ್ದಾಗ್ಲಿಂದ ನಾನು ಸ್ವೀಟ್ ತಿನ್ನೋದಕ್ಕೆ ಒಂಥರಾ ತಿಲಾಂಜಲಿ ಇಟ್ಟೆ. ಆದ್ರೆ ನನ್ನ ಮನಸ್ಸು ಮಾತ್ರ ಈಗಲೂ ಸ್ವೀಟ್ ಡಬ್ಬಕ್ಕೆ ಕೈ ಹಾಕುತ್ತೆ. ಸಿಕ್ಕಾಪಟ್ಟೆ ತಿನ್ನುತ್ತೆ. ಮನಸ್ಸಲ್ಲಿ ತಿಂದ್ರೆ ಯಾವೋನ್ಗೇನು ಗೊತ್ತಾಗುತ್ತೆ ಅಲ್ವಾ…?

‍ಲೇಖಕರು avadhi

December 24, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This