ಚಂದನೆಯ ಬಾಲ್ಯದ ಫೋಟೋಕ್ಕೊಂದು ಬರಹದ ಫ್ರೇಮ್…..

ಪಿ ಎಸ್ ಅಮರದೀಪ್

ಈಗೆಲ್ಲಾ ಫೋಟೋ ಶೂಟ್ ಎನ್ನುತ್ತಾರೆ.  ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್, ಗರ್ಭಿಣಿ ಸ್ತ್ರೀಯರ ಫೋಟೋ ಶೂಟ್, ಮಗುವಿನ ಫೋಟೋ ಶೂಟ್, ಆಹಾ!  ಈ ಫೋಟೋ ಶೂಟ್ ನಿಂದಾಗಿ ಹೊಸದಾಗಿ ಹಸೆಮಣೆ ಏರುವವರೇ ನೀರುಪಾಲಾಗಿ ಜೀವ ಕಳೆದುಕೊಂಡ ಸುದ್ದಿಯನ್ನು ಓದಿ ಕಸಿವಿಸಿಯಾಗಿದ್ದಂತೂ ನಿಜ. 

ಆದರೆ,  ನಿಜವಾಗಿಯೂ ಸ್ಟುಡಿಯೋಗೆ ತೆರಳಿ ಫೋಟೋ ತೆಗೆಸಿಕೊಳ್ಳುವ ಉಮ್ಮೇದಿ ಇದ್ದಿದ್ದ ದಿನಗಳನ್ನು, ಆ ಖುಷಿಯನ್ನು, ಮಲ್ಲಿಗೆ ಮೊಗ್ಗಿನ ಜಡೆ ಹೆಣೆದು, ಸಿಂಗಾರಗೊಳಿಸಿ ಹಿಂಬದಿಯ ಕನ್ನಡಿಯಲ್ಲಿ ಬಿಂಬ ಕಾಣುವಂತೆ ಫೋಟೋ ತೆಗೆಸಿಕೊಳ್ಳುತ್ತಿದ್ದ ಹುಡುಗಿಯರು, ಇದ್ದ ಸವಲತ್ತಿನಲ್ಲೇ ಚೆಂದನೆಯ ಡ್ರೆಸ್ ತೊಡಿಸಿ ಫೋಟೋ ತೆಗೆಸುತ್ತಿದ್ದ, ಮದುವೆ ಮಾಡಲು ಕನ್ಯೆ ತೋರಿಸಲು ಮೊಗ್ಗಿನ ಜಡೆ ಭಾವಚಿತ್ರವನ್ನೇ ತೋರಿಸುತ್ತಿದ್ದ ಆಗಿನ ತಂದೆ ತಾಯಿಗಳನ್ನು ಕೇಳಿ ನೋಡಿ ಹೆಣ್ಣು ಮಕ್ಕಳಿಗೆ ಫೋಟೋ ತೆಗೆಸುವುದೆಂದರೆ ಎಷ್ಟು ಖುಷಿ ಇತ್ತೆಂದು…?

ಇದು 1986ರಲ್ಲಿ ತೆಗೆದ ಚಿತ್ರ….  ಗಂಗಾವತಿಯ ಕರ್ನಾಟಕ ಫೋಟೋ ಸ್ಟುಡಿಯೋದಲ್ಲಿ, ದಿನಾಂಕವನ್ನು ನೀಟಾಗಿ ಬರೆದು ಫ್ರೇಮ್ ಹಾಕಿದ್ದ ಅಪ್ಪ.  ಆಗ ಅದು ಅಪ್ಪನ ವೃತ್ತಿ.

ನಾನು, ಅಕ್ಕ ಮತ್ತು ತಮ್ಮ ವಿಜಿ ಇರುವ ಫೋಟೋ. ರಜಾ ದಿನಗಳಲ್ಲಿ ಹಗರಿಬೊಮ್ಮನಹಳ್ಳಿಯಿಂದ ಬಂದ‌ ದಿನಗಳು. ವಿಜಿಯಂತೂ ಅವ್ವ ಅಪ್ಪನ ಜೊತೆಗೆ ಇರುತ್ತಿದ್ದ.  ಅವನ ದಿನಚರಿ ಶುರುವಾಗುತ್ತಿದ್ದುದು ನೀಲಮ್‌ ಬೇಕರಿಯಿಂದ ತಂದ ಬನ್ ನಿಂದ. ಅವನಿಂದಾಗಿ ನಮಗೆ ಚಾದೊಂದಿಗೆ  ಬ್ರೆಡ್ಡು ತಿನ್ನುವ ಭಾಗ್ಯ.  

ಆಗ ನಮ್ಮ ಮನೆ ದೊಡ್ಡ ಮಸೀದಿ ಹತ್ತಿರದ ಬಳ್ಳಾರಿ ಬುಕ್ ಡಿಪೋ ಹಿಂದಿನ ಶಂಕ್ರಯ್ಯ ಮಳೇಮಠ್ ಅನ್ನುವವರ ಮನೆ ಪಕ್ಕದಲ್ಲಿ ಅವರದೇ ಚಿಕ್ಕ ಗುಡಿಸಲಿತ್ತು. ಅದರಲ್ಲಿ ವಾಸ. ಶಿವಮ್ಮಜ್ಜಿ ಇದ್ದರು. ಅದೇ ದಾರಿಯ ಪಾಟೀಲ್ ದಾವಾಖಾನಿ ರಸ್ತೆಗೆ ಡಾ. ರಾಮರಾಯರ ಕ್ಲಿನಿಕ್ ಇತ್ತು. ಪ್ರತಿ ದಿನ ಸಂಜೆ ರಿಕ್ಷಾದಲ್ಲಿ ಶುಭ್ರ  ಶ್ವೇತ ವರ್ಣದ ಉಡುಪಿನಲ್ಲಿ ಬರುತ್ತಿದ್ದರು. ಹಣೆಗೆ ಕಪ್ಪು ಉದ್ದನೆಯ ನಾಮ. ಕುಳಿತು ಬಾಯಲ್ಲಿ ಸದಾ ಕಾಲ ಎಲೆ ಅಡಿಕೆ ಅಗಿಯುತ್ತಿದ್ದರು. ಬ್ಯಾಗಿನಲ್ಲಿ ಪದ್ಧತಿ ಸರಿಯಾದ ಏಲಕ್ಕಿ, ಲವಂಗ, ಕೊಬ್ಬರಿ ಪುಡಿ ಸಕ್ಕರೆ  ತುಂಬಿರುವ ಸ್ಟೀಲ್ ಡಬ್ಬಾ ಇರುತ್ತಿತ್ತು.

ಸಂಜೆ ರಸ್ತೆಯಲ್ಲಿ ಆಡುತ್ತಿರುವ ಎಲ್ಲಾ ಮಕ್ಕಳನ್ನು ತಮ್ಮ ಕ್ಲೀನಿಕ್ಕಿಗೆ ಬರಲು ಹೇಳಿ ಹೊರಡುತ್ತಿದ್ದರು.  ಮಸುಕು ಕತ್ತಲಾಗುತ್ತಿದ್ದಂತೆಯೇ ಓಣಿಯ ಎಲ್ಲಾ ಹುಡುಗರು ಕೈಕಾಲು ಮುಖ ತೊಳೆದು ಸೀದಾ ರಾಮರಾಯರ ಕ್ಲೀನಿಕ್ಕಿಗೆ ಹೊರಟು ಸಾಲಿಡುತ್ತಿದ್ದೆವು.  ಬಂದು ಕುಳಿತ ಪೇಶೆಂಟ್ ಗಳನ್ನು “ಏನವ್ವ, ತಾಯಿ, ತಮ್ಮ” ಎಂದು ಕರೆಯುತ್ತಾ ಮನೆಯವರ, ಹಿರಿಯರ ಯೋಗ ಕ್ಷೇಮ ಕೇಳುತ್ತಾ, ನಗುತ್ತಾ, ತಮಾಷೆ ಮಾಡುತ್ತಾ, ಚೀಟಿ ಬರೆದು ಕಳಿಸುತ್ತಿದ್ದರು.  

ಮಧ್ಯೆ ನಮ್ಮನ್ನು ಕರೆದು “ನೀ ಯಾರ್ ಮಗ, ನಿಮ್ಮಪ್ಪ ಏನ್ಮಾಡ್ತಾನ, ನೀ  ಎಷ್ಟ್ನೇ ಕ್ಲಾಸು? , ಓಹೋ, ನೀ ಆ ಊರಾಗ ಓದ್ತೀ?! ” ಅಂತೆಲ್ಲಾ ತಮಗೆ ಬರುವ ಮಂತ್ರಗಳನ್ನು ಹೇಳಿಕೊಟ್ಟು ಕೈಗೆ ಒಂದು ದಾರ ಕಟ್ಟಿ ಕಳಿಸುತ್ತಿದ್ದರು.  ನಾಳೆ ನಾಡಿದ್ದು ಬಂದಾಗ ಮಂತ್ರಗಳನ್ನು ಅವರಿಗೆ ಒಪ್ಪಿಸಿ ಹೇಳಿದರೆ ನಮ್ಮ ಕೈಗೆ ಬಿಸ್ಕತ್ತೋ ಸಣ್ಣ ಚಾಕುಲೇಟೋ ಕೊಟ್ಟು ಕಳಿಸುವುದು ಅವರ ರೂಢಿ.  

ಒಂದೂವರೆ ಎರಡು ತಿಂಗಳ ರಜೆಯಲ್ಲಿ ಕನಿಷ್ಠ ನಲವತ್ತರಿಂದ ಐವತ್ತು ದೇವರ ಮಂತ್ರಗಳನ್ನು ಉರು ಹೊಡೆದು ಒಪ್ಪಿಸುತ್ತಿದ್ದುದು ನೆನಪಿದೆ. ಈಗ ನೆನಪಿರುವುದೆಂದರೆ, “ಪೂಜ್ಯಾಯಾ, ರಾಘವೇಂದ್ರಾಯ, ಸತ್ಯಧರ್ಮ ರಚಾಯತಾ ನಮತಾಂ ಕಾಮಧೇನುವೇ” ಮಾತ್ರ. 

ನನಗೆ ನೆನಪಿದ್ದಂತೆ ಮಳೇಮಠ್  ವಂಶಸ್ಥರ ಕುಟುಂಬಗಳ ಮನೆಗಳೇ ಸುತ್ತಮುತ್ತ.  ಗುರು, ಕವ್ವಿ, ಉಮ್ಮಿ, ಶೋಭಿ, ಈಯೇಶ (ಅವನು ಹೆಸರು ವೀರೇಶ ಅನ್ನೋದನ್ನ ಹೇಳುತ್ತಿದ್ದ ರೀತಿಯೇ ಹಾಗೆ) ಶಿವು, ಜಯಕ್ಕ, ಗಿರಿ, ಮಲ್ಲಿ, ಕೊಟ್ರ, ಇನ್ನೂ ಬೇರೆ ಬೇರೆ ಹುಡುಗರಿದ್ದರು, ಹೆಸರು ನೆನಪಾಗುತ್ತಿಲ್ಲ.  ಆ ಗುಂಪಿನೊಂದಿಗೇ ಗೋಲಿ, ಚಿನ್ನಿದಾಂಡು, ಮತ್ತಿತರ ಆಟ ನಮ್ಮಲ್ಲಿ…

ಅದರಲ್ಲೂ ಶಿವು ಹೇಳುತ್ತಿದ್ದ ತಮ್ಮ ಕಾರನ್ನು ಅಡ್ಡಗಟ್ಟಿ ಕಳ್ಳತನ ಮಾಡಲು ಬಂದ ಕತೆ, ಸಿನಿಮಾ ನಟರ ಕತೆ ಕಟ್ಟಿ ಹೇಳುವ ರೀತಿ ಅದ್ಭುತ…. ಶಿವು ತಂದೆ ಷಡಾಕ್ಷರಯ್ಯನವರು ಇಂದಿರಾ ಗಾಂಧಿಯವರ ಜೊತೆಗೆ ತಿಂಡಿ ತಿನ್ನುತ್ತಿರುವ ಒಂದು ಫೋಟೋ ನೋಡಿದರೆ  ನಾವು ಹುಡುಗರು ಅಬಾಬಾಬಾಬಾ… ಅಂದುಕೊಳ್ಳುತ್ತಿದ್ದೆವು.

ನಮಗಿಂತ ವಯಸ್ಸಲ್ಲಿ ಹಿರಿಯನಿದ್ದ ಶಂಕ್ರಯ್ಯನವರ ಮಗ ನೀಲಕಂಠ ಆಗಲೇ ಸಕಲಾಕಲಾವಲ್ಲಭ….ಅವನನ್ನು ರಾತ್ರಿಯಾದರೆ ಸಾಕು ನಮ್ಮನ್ನು ಅವನೊಂದಿಗೆ ಮಾತಾಡಲು ಅವ್ವ ಬಿಡುತ್ತಿರಲಿಲ್ಲ… ಮುಂದೆ ಅವನ ವಿದ್ಯೆಗಳಿಂದಾಗಿ ಶಂಕ್ರಯ್ಯನವರು ತೀರಿದ ವರ್ಷಗಳು ಕಳೆಯುವುದರಲ್ಲೇ ಬೀದಿಗೆ ಬಿದ್ದಿದ್ದ.  ಎಷ್ಟೋ ವರ್ಷಗಳ ನಂತರ ಹರಪನಹಳ್ಳಿಯ ಬಸ್ ನಿಲ್ದಾಣದ ಮುಂದೆ  ಟೀ ಸೋಸುತ್ತಿದ್ದದನ್ನು ನಾನೇ ನೋಡಿದ್ದೇನೆ.  ಅಷ್ಟೊತ್ತಿಗೆ ನಾನು ನೌಕರಿಯಲ್ಲಿದ್ದೆ.

ಇರಲಿ, ಈಗ ಫ್ಲಾಶ್ ಬ್ಯಾಕ್ ಗೆ ಬರೋಣ.  ಅದೊಮ್ಮೆ ನನ್ನ ತಮ್ಮ ಇಜ್ಜಿ (ನಾವೆಲ್ರೂ ಕರೆಯೋದು ಹಾಗೇನೆ) ಮನೆಯಲ್ಲಿ ಯಾವುದೋ ವಿಷಯಕ್ಕೆ ರೊಳ್ಳೆ ತೆಗೆದು ನಿಂತಿದ್ದಾನೆ. ಪಾಟಿಚೀಲ ನೇತುಹಾಕಿಕೊಂಡು ಮತ್ತು ಒಂದು ಕೌದಿಯನ್ನು ಬಗಲಲ್ಲಿಟ್ಟು ” ನಾನ್ ಮನೆ ಬಿಟ್ಟು ಹೋಗ್ತೀನಿ” ಅಂದವನೇ ಗುಡಿಸಲಿನಿಂದ ರಸ್ತೆಗೆ ಬಂದು ನಿಂತಿದ್ದಾನೆ. ಆಗ ಸಮಯ ಬಹುಶಃ ರಾತ್ರಿ ಎಂಟೂವರೆ ಒಂಭತ್ತು ಗಂಟೆ ಆಗಿರಬಹುದು.  ವಿಜಿಯ ವಯಸ್ಸು ಆಗ ಏಳೋ ಎಂಟು ವರ್ಷ.

“ಪಾಟೀಚೀಲ ಯಾಕ್ ಬೇಕು?  ಎಲ್ಲಾದ್ರೂ ಕುಂತು ಓದ್ಕ್ಯಂತೀನಿ…ಸರಿ, ಕೌದಿ ಯಾಕ್ ಇಟ್ಗಂಡೀ ಅಂದರೆ ನಿದ್ದಿ ಬಂದ್ರ ಹಾಸ್ಗ್ಯಂಡ್‌ ಮಕ್ಕಂತೀನಿ” ಅನ್ನುತ್ತಾ ಊದಿಕೊಂಡಿದ್ದಾನೆ. ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. ಶಿವಮ್ಮಜ್ಜಿಗೂ ಇಜ್ಜೀಗೂ ಆಗಾಗ ಜಗಳ. ಅದನ್ನು ಅಪ್ಪ ಬಿಡಿಸಬೇಕು. ಅಂತದೇ ದಿನಗಳಲ್ಲಿ ಇಜ್ಜಿಯ ಈ ಜಗಳ. 

ಅದೇ ಸಮಯಕ್ಕೆ ಕ್ಲೀನಿಕ್ ನಿಂದ ರಿಕ್ಷಾದಲ್ಲಿ ರಾಮರಾಯ ವೈದ್ಯರು ಮನೆ ಮುಂದೆ ಹೊರಟಿದ್ದಾರೆ. ರಿಕ್ಷಾ ನಿಲ್ಲಿಸಿ ಅವ್ವನ್ನ ಮತ್ತು ರೊಳ್ಳೆ ತೆಗೆದ ವಿಜಿಯನ್ನು ಸಮಾಧಾನಿಸುತ್ತಾ ರಮಿಸಿ ಮನೆಯೊಳಗೆ ಕಳಿಸಿದ್ದರಂತೆ. ಇಂಥದ್ದೇ ದಿನಗಳಲ್ಲಿ ಅಪ್ಪ ಅವ್ವ ಅಕ್ಕನದೊಂದು ಫೋಟೋ ತೆಗೆಸುವ ಆಸೆಯಾಗಿದೆ.  ಕಿವಿ ಓಲೆ, ಕೊರಳಲ್ಲಿ ಬಂಗಾರದ ಚೈನು, ಬಳೆ ಯಾರಿಂದಲೋ ಪಡೆದು ನೀಟಾಗಿ ಮಗ್ಗಿ ಜಡೆ ಹೆಣೆದು ಸಿಂಗಾರ ಮಾಡಿದ್ದಾರೆ.

ಬರೀ ಅವಳೊಬ್ಬಳದೇ ತೆಗೆಸಿದರಾಯಿತಾ? ಇಜ್ಜಿ ಮತ್ತು ನನಗೂ ತಟುಗು ಪೌಡರ್ ಮೆತ್ತಿ, ಎಣ್ಣೆ ಹಚ್ಚಿ ಬೈತೆಲೆ ತಿರುವಿ ಕರೆದೊಯ್ದಿದ್ದಾರೆ.  ಮಗ್ಗಿ ಜಡೆ ಹೆಣೆದ ಅಕ್ಕನ ಸಿಂಗಲ್ ಫೊಟೋ ತೆಗೆಸಿ ಮೂವರನ್ನು ನಿಲ್ಲಿಸಿ ತೆಗೆಸಿದ ಫೋಟೋ, ನಾಲ್ಕು ದಿನಗಳ ನಂತರ ಅಪ್ಪನ ಕೈಗೆ ಸಿಕ್ಕಿದೆ.  ನೋಡಿದರೆ ನನ್ನದು ಗಂಟು ಮುಖ.  

ಮೊನ್ನೆ ದೀಪಾವಳಿ ಹಬ್ಬಕ್ಕೆ ಅಟ್ಟದಲ್ಲಿಟ್ಟಿದ್ದ ಎಲ್ಲವನ್ನು ಕ್ಲೀನ್ ಮಾಡಲು ಇಳಿಸಿ ಧೂಳು ತೆಗೆದು ಇಡುವಾಗ ಉಳಿದ ಫೋಟೋಗಳು ಬೇರೆ ಬೇರೆ ಕತೆ ನೆನಪಿಸುತ್ತವೆಂಬುದೇನೋ ನಿಜ. ಆದರೆ, ಇದೊಂದು ಫೋಟೋ ಮತ್ತೆ ಮತ್ತೆ ನೋಡಿದೆ. ನನ್ನ ಮುಖ ನೋಡಿ ನಕ್ಕುಬಿಟ್ಟೆ. ಎರಡೆರಡು ವರ್ಷಗಳ ಅಂತರವಷ್ಟೇ ನಮ್ಮಲ್ಲಿ. ಈಗಲ್ಲ, ನಾವು ಮೊದಲಿನಿಂದಲೂ ಅಕ್ಕ, ಅಣ್ಣ ಅನ್ನುವುದಿಲ್ಲ, ಹೆಸರಿನಿಂದಲೇ ಕರೆಯುವುದು.   

ಅಪ್ಪ ಅವ್ವ  ಅಜ್ಜಿ ಅಷ್ಟು ಖುಷಿಯಿಂದ ಮೊಗ್ಗಿನ ಜಡೆ ಹೆಣೆದು ತೆಗೆಸಿದ ಮೂವತ್ತೈದು ವರ್ಷಗಳ ಹಿಂದಿನ ಅಕ್ಕನ ಒಂದು ಫೋಟೋ ರಜೆಯಲ್ಲಿ ಮಾತ್ರವೇ ಕಳೆದ ಗಂಗಾವತಿಯ ಬಾಲ್ಯದ ಸರಣಿ ನೆನಪನ್ನು ಹರವಿ ನಿಂತಿತ್ತು.  ಅದಕ್ಕೊಂದು ಬರಹದ ಫ್ರೇಮ್ ಹಾಕಿದೆ ಅಷ್ಟೇ……

‍ಲೇಖಕರು Avadhi

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This