ಚಂದಮಾಮದಿಂದ ಎಸ್ಸೆಮ್ಮೆಸ್ ತನಕ

ಮುಲ್ಲಾನಾಸಿರುದ್ದೀನ್ ಒಬ್ಬ ಸೂಫಿ ಸಂತ ಎನ್ನುವುದನ್ನು ಹೊರತುಪಡಿಸಿದರೆ ಆತ ಯಾರು ಎನ್ನುವುದು ಯಾರಿಗೂ ಗೊತ್ತಿಲ್ಲ. ಸೂಫಿಗಳ ಕುರಿತು ಬಹಳಷ್ಟು ಸಂಶೋಧನೆಗಳನ್ನು ನಡೆಸಿದ ಇದ್ರಿಸ್ ಶಾನೇ ಈ ಅಭಿಪ್ರಾಯಕ್ಕೆ ಬಂದಿದ್ದಾನೆ. ಈತ ಸೂಫಿ ಸಂತರ ದರ್ವೇಶ್ ಪಂಥದ ಅನುಭಾವಿಗಳ ಸೃಷ್ಟಿ ಎಂಬ ಮತ್ತೊಂದು ವಾದವೂ ಇದೆ. ಮುಲ್ಲಾ ಇದ್ದನೇ ಇಲ್ಲವೇ ಎಂಬುದನ್ನು ಹೀಗೆ ವಾದಗಳನ್ನಿಟ್ಟುಕೊಂಡು ನಿರ್ಧರಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸೂಫಿ ಸಂತರಿಗೆ ಮುಖ್ಯವಾಗುವುದು ಸಂದೇಶವೇ ಹೊರತು ಸಂದೇಶ ನೀಡುವವನಲ್ಲ. ಮುಲ್ಲಾ ಇದ್ದಿದ್ದರೂ ತನ್ನ ಬಗ್ಗೆ ಹೆಚ್ಚೇನೂ ಹೇಳಿಕೊಂಡಿರಲಾರ. ಇಂಥ ಅನೇಕ ಸಮಸ್ಯೆಗಳಿದ್ದರೂ ಮುಲ್ಲಾನಾಸಿರುದ್ದೀನ್ ಗೂ ಒಂದು ಇತಿಹಾಸವಿದೆ. ಮುಲ್ಲಾ “ವಿದ್ವಾಂಸ”ರನ್ನು ತಮಾಷೆ ಮಾಡಲು ಬಳಸುವ ಪರಿಕರಗಳನ್ನು ಬಳಸಿಕೊಂಡು ಆತನ ಇತಿಹಾಸ ಕಂಡುಕೊಳ್ಳಲು “ಇತಿಹಾಸದ ವಿದ್ವಾಂಸರು” ಪ್ರಯತ್ನಿಸಿದ್ದಾರೆ. ಈ ಪ್ರಯತ್ನಗಳ ಪರಿಣಾಮವಾಗಿ ಮುಲ್ಲಾನ ಕಾಲ, ಆತನಿಗೊಂದು ಸಮಾಧಿ ಮುಂತಾದುವುಗಳೆಲ್ಲಾ ಸೃಷ್ಟಿಯಾಗಿವೆ. ಈ ಪ್ರಯತ್ನ ಮುಲ್ಲಾನಿಗೇ ಹೃದಯ ತುಂಬಿ ಬರಲು ಕಾರಣವಾಗಿತ್ತಂತೆ. ಒಬ್ಬರು ವಿದ್ವಾಂಸರ ಪ್ರಕಾರ ಮುಲ್ಲಾನದ್ದು ಉಲ್ಟಾ ಜಗತ್ತು. ಹಾಗಾಗಿ ಮುಲ್ಲಾನ ಸಮಾಧಿ ಕಲ್ಲಿನ ಮೇಲಿರುವ ಬರಹದಲ್ಲಿ ೩೮೬ ಎಂದು ಬರೆದಿರುವುದನ್ನು ೬೮೩ ಎಂದು ಓದಬೇಕು. ಮತ್ತೊಬ್ಬರು ವಿದ್ವಾಂಸರು ಈ ಸಂಖ್ಯೆಯನ್ನೇ ಇಟ್ಟುಕೊಂಡು ಮತ್ತೊಂದು ವಾದ ಮಂಡಿಸಿದ್ದಾರೆ. ಈ ಸಂಖ್ಯೆ ಅರಾಬಿಕ್ ನಲ್ಲಿ ಬರೆದದ್ದಾಗಿದ್ದರೆ ಅವುಗಳನ್ನು ತಿರುಗು ಮುರುಗಾಗಿಸಿದಾಗ ೨೭೪ ಆಗುತ್ತದಂತೆ. ಈ ವಾದಗಳನ್ನು ಕೇಳಿ ಬೇಸತ್ತ ದರ್ವೇಶ್ ಪಂಥದ ಸಂತನೊಬ್ಬ “ಒಂದು ಜೇಡವನ್ನು ಶಾಯಿಯಲ್ಲಿ ಮುಳುಗಿಸಿ ಕಾಗದದ ಮೇಲೆ ಬಿಟ್ಟರೆ ಸರಿಯಾದ ದಿನಾಂಕವನ್ನು ಬರೆಯಬಹುದು ಅಥವಾ ಸರಿಯಾದ ಏನನ್ನಾದರೂ ತೋರಿಸಬಹುದು” ಎಂದಿದ್ದ.

ಈ ಎಲ್ಲಾ ವಾದಗಳನ್ನು ಬಿಟ್ಟು ನೋಡಿದರೂ ಮುಲ್ಲಾ ಒಬ್ಬ ಬರಹಗಾರ ಎಂಬ ತೀರ್ಮಾನಕ್ಕೆ ನಾವಂತೂ ಬರಬಹುದು. ಏಕೆಂದರೆ ಮುಲ್ಲಾನ ಕಥೆಗಳು ನಮ್ಮೆದುರು ಇವೆ. ಮುಲ್ಲಾನ ಕಥೆಗಳನ್ನು ನಾವು ಚಂದಮಾಮದಿಂದ ಆರಂಭಿಸಿ ಎಸ್ ಎಂಸ್ ಜೋಕ್ ಗಳವರೆಗೆ ಎಲ್ಲೆಲ್ಲಾ ಓದಿದ್ದರೂ ಅವುಗಳ ಲೇಖಕ ಇಂಥವನೆಂದು ನಮಗೆ ತಿಳಿದಿದೆಯೇ? ಇಲ್ಲ. ಹಾಗಿರುವುದರಿಂದ ಇವುಗಳ ಲೇಖಕ ಮುಲ್ಲಾನೇ ಸರಿ!

ಮುಲ್ಲಾನಾಸಿರುದ್ದೀನ್ ಕೇವಲ ಸರ್ದಾರ್ಜಿಯಂತೆ ನಗೆಹನಿಯ ಪಾತ್ರವಲ್ಲ. ಮುಲ್ಲಾ ಕಥೆಗಳನ್ನು ಕೇವಲ ನಗೆಹನಿಯಾಗಿ ಓದಬಹುದಾದರೂ ಅವುಗಳು ಆಧ್ಯಾತ್ಮಿಕ ಅರ್ಥಗಳನ್ನೂ ಹೊಂದಿವೆ. ಒಂದು ಕಥೆಯನ್ನು ಆಧ್ಯಾತ್ಮದ ಪರಿಧಿಯಲ್ಲಿ ಚರ್ಚಿಸಲು ಪ್ರಯತ್ನಿಸೋಣ.

gonchalu.jpgಮುಲ್ಲಾ ಕತ್ತೆಗೆ ಬುದ್ಧಿ ಕಲಿಸಿದ ಈ ಕಥೆ ಹೆಚ್ಚಿನವರಿಗೆ ಗೊತ್ತಿದೆ. ಮುಲ್ಲಾ ಕತ್ತೆಯ ಮೇಲೆ ಉಪ್ಪು ಹೇರಿಕೊಂಡು ಸಂತೆಗೆ ಹೊರಟ. ದಾರಿಯಲ್ಲೊಂದು ಹೊಳೆ ಸಿಕ್ಕಿತು. ಉಪ್ಪು ನೀರಿನಲ್ಲಿ ನೆನೆಯುವಂತೆ ನದಿ ದಾಟಿತು. ನದಿಯಿಂದ ಮೇಲೇರುವಷ್ಟರಲ್ಲಿ ಉಪ್ಪಿನಲ್ಲಿ ಬಹಳಷ್ಟು ಭಾಗ ಕರಗಿ ಹೋಗಿ ಅದರ ಹೊರೆ ಕಡಿಮೆಯಾಯಿತು. ಕತ್ತೆ ಹೊಸತೊಂದು ವಿದ್ಯೆ ಕಲಿತೆ ಎಂದು ಸಂತೋಷಿಸಿತು. ಆದರೆ ಉಪ್ಪು ಕರಗಿ ಹೋದದ್ದರಿಂದ ಮುಲ್ಲಾನಿಗೆ ಕೋಪ ಬಂತು.

ಮರುದಿನ ಮುಲ್ಲಾ ಕತ್ತೆಯ ಮೇಲೆ ಉಣ್ಣೆಯನ್ನು ಹೇರಿದ. ಕತ್ತೆ ಹಿಂದಿನಂತೆಯೇ ನದಿ ದಾಟುವಾಗ ಉಣ್ಣೆಯನ್ನೂ ನೀರಿನಲ್ಲಿ ಮುಳುಗಿಸಿತು. ಈ ಬಾರಿ ಹೊರೆ ಇಳಿಯುವುದರ ಬದಲಿಗೆ ಹೆಚ್ಚಿತು. ನದಿ ದಾಟಿ ಬಹಳ ಕಷ್ಟದಿಂದ ಮಾರುಕಟ್ಟೆಯವರೆಗೆ ಸಾಗಿತು.

ಈ ಕಥೆಯಲ್ಲಿ ಎರಡು ಸೂಫೀ ಪಾರಿಭಾಷಿಕಗಳಿವೆ. ಒಂದು “ಉಪ್ಪು”, ಮತ್ತೊಂದು “ಉಣ್ಣೆ”. ಉಪ್ಪನ್ನು ಸೂಫಿ ಪರಿಭಾಷೆಯಲ್ಲಿ ಒಳ್ಳೆಯತನದ ರೂಪಕವಾಗಿ ಬಳಸಲಾಗುತ್ತದೆ. ಕತ್ತೆ ಇಲ್ಲಿ ಮನುಷ್ಯನ ರೂಪಕ. ಮನುಷ್ಯ ಈ ಒಳ್ಳೆಯತನದ ಹೊರೆಯನ್ನು ಸದಾ ಹೊತ್ತು ಸಾಗುತ್ತಿರುತ್ತಾನೆ. ಒಳ್ಳೆಯತನದ ಹೊರೆಯನ್ನು ಕಳಚಿಕೊಂಡಾಗ ಆತನಿಗೆ ಯಾವುದೋ ಬಿಡುಗಡೆ ಸಿಕ್ಕ ಸಂತೋಷವಾಗುತ್ತದೆ. ಆದರೆ ಇದರ ಪರಿಣಾಮವಾಗಿ ಆತ ತನ್ನ ಆಹಾರವನ್ನೇ ಕಳೆದುಕೊಳ್ಳುತ್ತಾನೆ. ಅಂದರೆ ಉಪ್ಪನ್ನು ಮಾರಿ ಮುಲ್ಲಾ ಕತ್ತೆಗೆ ಬೇಕಾದ ಹುಲ್ಲು ಖರೀದಿಸಬೇಕಿತ್ತು. “ಉಣ್ಣೆ” ಸೂಫಿಗಳ ಹೆಸರಿನೊಂದಿಗೇ ಸಂಬಂಧ ಇಟ್ಟುಕೊಂಡಿರುವ ಪದ. ಒಂದು ರೀತಿಯಲ್ಲಿ ಇದು ಸೂಫಿ ಎಂಬುದಕ್ಕೆ ಸಮಾನಾರ್ಥಕ. ಮರುದಿನದ ಪ್ರಯಾಣದಲ್ಲಿ ಕತ್ತೆ ಉಣ್ಣೆಯನ್ನು ನೀರಿನಲ್ಲಿ ಮುಳುಗಿಸಿ ತನ್ನ ಮೇಲಿನ ಹೊರೆಯನ್ನು ಹೆಚ್ಚಿಸಿಕೊಂಡಿತು. ಒಳ್ಳೆಯತನ ಎಂಬ ಹೊರೆ ತನಗೆ ಆಹಾರವನ್ನು ಒದಗಿಸುತ್ತದೆ ಎಂದು ಅರಿವಾದ ಮನುಷ್ಯ ಅದನ್ನು ಮತ್ತೆ ಗಳಿಸಿಕೊಳ್ಳಲು ಗುರುವಿನ ಮೊರೆ ಹೋಗುತ್ತಾನೆ. ಅಂದರೆ ತನ್ನ ಹೊರೆಯನ್ನು ಹೆಚ್ಚಿಸಿಕೊಳ್ಳುತ್ತಾನೆ. ಈ ಹೆಚ್ಚುವರಿ ಹೊರೆ ಹೊತ್ತ ಕತ್ತೆ ಕಷ್ಟಪಟ್ಟು ಮಾರುಕಟ್ಟೆ ತಲುಪುತ್ತದೆ. ಆದರೆ ಅಂತ್ಯ ಇಲ್ಲಿ ಸುಖದ್ದು. ಏಕೆಂದರೆ ಅದಕ್ಕೆ ಬೇಕಿರುವ ಆಹಾರ ದೊರೆಯುತ್ತದೆ. ಮನುಷ್ಯನೂ ಹಾಗೆಯೇ. ಗುರುವಿನ ಹೊರೆಯನ್ನು ಹೊತ್ತು ಸಾಗುವುದು ಕಷ್ಟವಾದರೂ ಅದು ಅವನಿಗೆ ಒಳಿತನ್ನೇ ನೀಡುತ್ತದೆ. ನೀರಿನಲ್ಲಿ ಒದ್ದೆಯಾಗುವ ಉಣ್ಣೆ ಎಂಬುದು ಭಾರ ಹೆಚ್ಚಿಸಿಕೊಂಡದ್ದರಿಂದ ಹೆಚ್ಚು ಹಣವನ್ನೂ ಗಳಿಸಿಕೊಟ್ಟಿತು ಎಂಬ ಅಂಶವನ್ನು ಗಮನಿಸಬೇಕು.

ಇದು ಮುಲ್ಲಾನ ಕಥೆಗಳ ಸೂಫೀ ಓದು. ಆತನ ಎಲ್ಲಾ ಕಥೆಗಳಲ್ಲೂ ಹೀಗೊಂದಷ್ಟು ಗೂಡಾರ್ಥಗಳಿರುತ್ತವೆ. ಅಷ್ಟೇನೂ ಪ್ರಸಿದ್ಧವಲ್ಲದ ಕೆಲವು ಕಥೆಗಳು ಇಲ್ಲಿವೆ. ಓದಿ, ಹಾಗೆಯೇ ಧ್ಯಾನಿಸಿ, ಹೊಸ ಅರ್ಥಗಳು ಹೊಳೆದರೆ ನಮಗೂ ಬರೆದು ತಿಳಿಸಿ.

‍ಲೇಖಕರು avadhi

August 23, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This