ಚರ್ಚೆಗೆ ಕಾವು ಬಂದಿದೆ…ನೀವೂ ಭಾಗವಹಿಸಿ

ಸಿದ್ಧಲಿಂಗಯ್ಯ ಅವರ ‘ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ

ಬಂದ ಪ್ರತಿಕ್ರಿಯೆಗಳನ್ನು ಪ್ರಕಟಿಸಲಾಗಿತ್ತು. ಆ ಪ್ರತಿಕ್ರಿಯೆಗಳಿಗೆ ಇನ್ನಷ್ಟು ಕಾವು ನೀಡುವ ಪತ್ರಗಳು ಬಂದಿವೆ.

ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ-

cr030307shadow_lines0111ಕಾಮತ್ ತೆಗೆದಿರುವ ರಾಗ, ಕಲ್ಲಾರೆ ಆಡಿರುವ ವ್ಯಂಗ್ಯ ಮೀಸಲಾತಿ ಬಗೆಗಿನ ಅವರ ಅಸಹನೆ ಎದ್ದು ಕಾಣುತ್ತದೆ. ಮೀಸಲಾತಿ ಎನ್ನುತ್ತಿದ್ದಂತೆ ಮೂಗು ಮುರಿಯುವ, ಅಸಹನೆ ತೋರುವ, ದ್ವೇಷ ಕಾರುವ ಇಂಥ ಮನಸ್ಸುಗಳು ಗ್ರಾಮೀಣ ಭಾರತದ ಕಟು ವಾಸ್ತವ ಮತ್ತು ನಿಜವಾದ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲವಾಗಿವೆ. ಇದಕ್ಕೆ ಅವರ ಮನಸ್ಥಿತಿಯೇ ಕಾರಣ.

ಹುಟ್ಟಿನ ಕಾರಣದಿಂದ ಮೇಲ್ಜಾತಿಯವರಿಗೆ ಸ್ಥಾನಮಾನಗಳು ಲಭಿಸಿವೆ ಎಂಬುದು ಸೂರ್ಯಸತ್ಯ. ಯಾಕೆಂದರೆ ಬಡವರು ಬೆವರು ಸುರಿಸಿ ದುಡಿದರು, ಶ್ರೀಮಂತರು ತಿಂದು ತೇಗಿದರು. ಮೆರೆದರು. ಇದಕ್ಕೆ ತಾಜಾ ಉದಾಹರಣೆ ಎಂದರೆ ತುಮಕೂರು ಸಮೀಪದ ಹಳ್ಳಿಯೊಂದರ ಶಾಲೆಯಲ್ಲಿ ಬಹುತೇಕ ಶಿಕ್ಷಕರು ಮೇಲ್ವರ್ಗದವರೇ. ಒಬ್ಬ ಮಾತ್ರ ದಲಿತ. ಈತ ಅಲ್ಲಿ ಪಾಠ ಮಾಡಲು ಸಾಧ್ಯವಾಗದಂತಹ ವಾತಾವರಣ ಇದೆ.ಈ ಕಾರಣಕ್ಕಾಗಿಯೇ ಆ ಶಿಕ್ಷಕ 15 ದಿನಗಳ ಕಾಲ ರಜೆ ಹಾಕಿದ್ದಾರೆ. ಇದು ನಿಜದ ಬದುಕು, ಅಕ್ಷರ ಕಲಿತು ಶಿಕ್ಷಿತರೆಂದು ಕರೆದುಕೊಳ್ಳುವವರಲ್ಲಿ ಇಂತಹ ನೀಚ ಅಸಹನೆ ಇದೆ ಎಂದರೆ ಏನು ಹೇಳೋಣ.

ಇಂತಹ ಸಮಸ್ಯೆಗಳನ್ನು ಕಾಮತ್ ಮತ್ತು ಕಲ್ಲಾರೆ ತಮ್ಮ ಕಣ್ಣಿನ ಮುಂದೇ ನಡೆಯುತ್ತಿರುವುದನ್ನು ನೋಡಬೇಕು. ಅದನ್ನು ತಪ್ಪಾಗಿ ಗ್ರಹಿಸಿದರೆ ಅದು ಅವರ ಮನಸ್ಥಿತಿಗೆ ಹಿಡಿದ ಕನ್ನಡಿ ಎಂದೇ ಹೇಳಬೇಕು.

– ಸಿದ್ದಮುಖಿ

+++

cr030307shadow_lines0112ನಾನೂ ಗ್ರಾಮೀಣ ಕರ್ನಾಟಕದ, ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ ಗುದ್ದಲಿ ಪಿಕಾಸು ಕೆಲಸ ಮಾಡಿಯೇ ಮುಂದಕ್ಕೆ ಬಂದವ… ವಿಷಯಕ್ಕೆ ಸೀಮಿತವಾದ ಪ್ರತಿಕ್ರಿಯೆ ಇರಲಿ ಸಿದ್ಧಮುಖಿ. ಜಾತೀಯತೆ ನಿರ್ಮೂಲನೆಯಾಗಲಿ, ಸರಿ. ಆದರೆ ಆ ಹೆಸರಲ್ಲಿ ಇಲ್ಲದ ಮಾತುಗಳು ಯಾಕೆ?

ನಮ್ಮ ನಿಮ್ಮ ತಲೆಮಾರು ಮುಗಿದರೂ ಹೀಗೆ ಹೇಳ್ತಾನೆ ಇರೋದ್ರಿಂದ ಏನೂ ಆಗಲ್ಲ. ವ್ಯಕ್ತಿಗತವಾದ ಬದಲಾವಣೆ ಆಗ್ಬೇಕು… ಇಲ್ಲೆನಿದ್ರೂ ಎಲ್ಲಮ್ಮನ ಜಾತ್ರೆ ನಡೀತಿದೆ.

-kallare

+++

cr030307shadow_lines0113ಸಿದ್ದಮುಖಿಯವ್ರೇ,

ಸಿದ್ಧಲಿಂಗಯ್ಯನವ್ರು ಹೇಳಿದ ಯಾವುದೇ ಮಾತಿಗೆ ನನ್ನ ಅಭ್ಯಂತರವಿರಲಿಲ್ಲ. ಆದರೆ ಮೇಲ್ಜಾತಿಯವರಿಗೆ ಸಿಕ್ಕಿರೋ ಎಲ್ಲಾ ಸ್ಥಾನಮಾನಗಲು ಅವರ ಹುಟ್ಟಿನಿಂದಲೇ ಬಂದಿರೋದು ಅನ್ನೋದ್ರಲ್ಲಿ ಹುರುಳಿಲ್ಲ.
ಅಷ್ಟಕ್ಕೂ ಮೇಲ್ಜಾತಿ ಅಂದ್ರೆ ಯಾವ ಜಾತಿ? ಬ್ರಾಹ್ಮಣ ಜಾತಿಯಾ? ಅಥವ ಯಾವ ಜಾತಿ? ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ಅದನ್ನು ’ನಾನು’ ಮೇಲ್ಜಾತಿ ಅಂದು ಕೊಂಡ್ರೆ ಅದು ನನ್ನ ಅಹಂಕಾರ .ಅದಕ್ಕೆ ತಕ್ಕ ಮದ್ದಾಗಬೇಕು.ಅದೇ ರೀತಿ ಯಾವನೇ ದಲಿತ ಅಥವ ಇನ್ಯಾವುದೇ ಬ್ರಾಹ್ಮಣೇತರ ಜಾತಿಯವರು ತಮ್ಮದು ’ಕೀಳು’ ಜಾತಿ ಅಂದುಕೊಂಡ್ರೆ ಅವರದ್ದು ಕೀಳರಿಮೆ ಅದಕ್ಕೂ ಮದ್ದಾಗಬೇಕು.

ನಿಜ ಹೇಳಬೇಕೂಂದ್ರೆ ನನಗೆ ಜಾತಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಷ್ಟೊಂದು ಅರಿವಿಲ್ಲ.ನನ್ನ ಮನೆಯ ಮುಂದಿರುವ ದಲಿತ ಜನಾಂಗದವರು ನನ್ನ ಮನೆಯ ಬಾವಿಯ ನೀರು ತಗೊಳ್ಳಲು ಬರುತ್ತಿದ್ದರು. ನಾವೇ ಅವರ್ಗೆ ’ಬಾವಿಯ ನೀರ್ ಸೇದಿ ತಗೊಂಡು ಹೋಗಿ’ ಅಂದ್ರೂ ಅವರು ಹಿಂಜರೀತಾ ಇದ್ರು , ಅದೃಷ್ಟವಶಾತ್ ನನ್ನ ತಂದೆ ಜಾತಿಯ ಬಗ್ಗೆ ಅಷ್ಟೆಲ್ಲಾ ತಲೆ ಕೆಡಿಸಿಕೊಳ್ಳದವರಾದ್ದರಿಂದ ಅಮೇಲೆ ಅವರೂ ಸಂಕೋಚ ಬಿಟ್ಟು ನೀರು ತಗೊಂಡು ಹೋಗೋದಕ್ಕೆ ಶುರು ಮಾಡಿದ್ರು. ಅಲ್ಲಿಗೆ ಕೊಂಚ ಮಟ್ಟಿಗಾದ್ರೂ ಜಾತಿ ಪದ್ದತಿಯನ್ನು ನಾಶ ಮಾಡಿದ ಹೆಮ್ಮೆ ನನಗಿದೆ.

ಆಮೇಲೆ ಬೆಂಗಳೂರಿಗೆ ಬಂದ  ಮೇಲಂತೂ ಜಾತಿ ಪದ್ದತಿ ಯ ಲವಲೇಶವೂ ಇಲ್ಲಿ ನನಗೆ ಅರಿವಾಗಿಲ್ಲ . ಅಂಥ ಮಾಯಾನಗರಿ ಇದು. ಅದೆಷ್ಟೊ ಬಾರಿ ಫುಟ್ಪಾತ್ ನ ಬಿರಿಯಾನಿ ತಿಂದಿದ್ದೇನೆ , ಯಾವತ್ತೂ ಅದನ್ನು ತಯಾರಿಸಿದವನ ಜಾತಿಯನ್ನು ನಾನು ಕೇಳಿಲ್ಲ. ನಾನು ಕೇಳಿದರೂ . ಅವನು ಹೇಳಿದೂ ಅವನದ್ದು ಖಚಿತವಾಗಿ ಯಾವ ಜಾತಿ ಅನ್ನೋದು ನನಗೆ ತಿಳಿಯೋದು ಅಷ್ಟರಲ್ಲೇ ಇದೆ.

ಅಗರ್ವಾಲ್ ಇದು ಯಾವ ಜಾತಿ ಹೇಳಿ. ಪಟ್ನಾಯಕ್ ಇದು ಯಾವ ಜಾತಿ ಹೇಳಿ? ನಮ್ಮ ಆಫೀಸ್ ನಲ್ಲಿ ಸಾವಿರಾರು ಜನ ಕೆಲಸ ಮಾಡ್ತಾರೆ. ಒಬ್ಬೊಬ್ಬರದ್ದೂ ಒಂದೊಂದು ಜಾತಿ. ಅವರ ಹೆಸರಿನಿಂದ ಅವರ ಜಾತಿ ತಿಳಿಯೋದಂತೂ ಅಸಾಧ್ಯವಾದ ಮಾತು .

ಹೀಗಾಗಿ ಬೆಂಗಳೂರಿನ ಸಿಟಿಯಲ್ಲಿ ಜಾತಿ ಪದ್ದತಿ ಯಾವತ್ತೋ ನಿರ್ಮೂಲನವಾಗಿದೆ ಅನ್ನೋದು ನನಗೆ ಖುಷಿ ಕೊಟ್ಟಿದೆ.

ಭಾರತದಲ್ಲಿ ಅದೆಷ್ಟೋ ಇಂಜಿನಿಯರಿಂಗ್ ಕಾಲೇಜುಗಳಿವೆ . ಯಾವ ಕಾಲೇಜಿನಲ್ಲೂ ಬ್ರಾಹ್ಮಣರಿಗೆ ಮೀಸಲಾತಿ ಇಲ್ಲ . ಅವರು ತಮ್ಮ ಪ್ರತಿಭೆಯಿಂದ ತಾನೇ ಸೀಟು ಗಳಿಸಿರೋದು?
ಮಿಲಿಟ್ರಿಯಲ್ಲಿ ಒಬ್ಬ ಮೇಜರ್ ಆಗ್ತಾನೆ ಅಂದುಕೊಳ್ಳಿ ಅವನು ತನ್ನ ಹುಟ್ಟಿನಿಂದ ಆಗಿರೋದಾ ಮೇಜರ್ ಅಥವಾ ಅರ್ಹತೆಯಿಂದ?
ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ  ಹಾಗೂ ದೇಶಪಾಂಡೆಯವರಿಗೆ ಉನ್ನತ ಸ್ಥಾನ ಮಾನಗಳಿಲ್ವಾ??

ಯಾರು ತಮ್ಮ ಹುಟ್ಟಿನಿಂದ ಸ್ಥಾನಮಾನ ಗಳಿಸಿರೋದು .ಯಾರು ಹುಟ್ಟಿನಿಂದ ಗಳಿಸಿರೋದು?
ಜಾತಿಪದ್ದತಿ ಇರಬಾರದು ಅನ್ನೋದು ನನ್ನ ಆಸೆ ಕೂಡಾ. ಅದೃಷ್ಟವಶಾತ್ ಬೆಂಗಳೂರಿನಲ್ಲಿ ಅದಿಲ್ಲ ಬಿಡಿ.

-ಸಂದೀಪ್ ಕಾಮತ್

+++

cr030307shadow_lines0114ವರದಕ್ಷಿಣಿ ನಿರ್ಮೂಲನೆಗೆ ಅಂತರ್ಜಾತಿ ವಿವಾಹಗಳೇ ಮದ್ದು. ಅಂಥ ಅಂತರ್ಜಾತಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದಕ್ಕಾಗಿ ಮೀಸಲಾತಿ ಅಗತ್ಯ ಎಂಬುದು ಡಾ.ಸಿದ್ದಲಿಂಗಯ್ಯ ಅವರ ವಾದ. ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿಯ ಆಮಿಷ ನೀಡಿದರೆ ಜಾತಿಪದ್ದತಿಯ ಬೇರುಗಳು ಸ್ವಲ್ಪ ಸಡಿಲಗೊಳ್ಳಬಹುದೆಂಬ ಕಳಕಳಿ ಅವರದು. ಅಲ್ಲದೆ ಅಂತರ್ಜಾತಿ ವಿವಾಹಿತರನ್ನು ಸಮಾಜ ನೋಡುವ ದೃಷ್ಠಿ ಇನ್ನೂ ಬದಲಾಗಿಲ್ಲ. ಅವರು ಮಕ್ಕಳು ಯಾವ ಜಾತಿಗೆ ಸೇರಬೇಕೆಂಬ ಪ್ರಶ್ನೆಯೂ ಕಾಡುತ್ತದೆ. ಅಕ್ಕಪಕ್ಕದ ಮನೆಯವರು ಆಡಿಕೊಳ್ಳುವ ಮಾತುಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ದೈಹಿಕ ಹಲ್ಲೆಗಿಂತಲೂ ಮಾನಸಿಕ ಕಿರುಕುಳ ನೀಡುವುದು ಇದೆಯಲ್ಲ ಅದು ನರಕಯಾತನೆಯೇ ಸರಿ. ಇನ್ನು ಅಂತರ್ಜಾತಿ ವಿವಾಹವಾಗುವವರು ಬಡವರಾಗಿಯೇ ಇರುತ್ತಾರೆ ಎಂಬುದನ್ನು ಮನಗಾಣಬೇಕಾಗುತ್ತದೆ. ಅವರು ಕೆಲ ವರ್ಷಗಳ ಕಾಲವಾದರೂ ಮೀಸಲಾತಿಯಿಂದ ಸಿಗುವ ಸೌಲಭ್ಯಗಳಿಂದ ನೆಮ್ಮದಿಯ ಜೀವನ ನಡೆಸಬಹುದೆಂಬುದು ಸಿದ್ದಲಿಂಗಯ್ಯ ಅವರ ಒಳತೋಟಿ.

ಇನ್ನು ಕಲ್ಲಾರೆಯವರು ನಾನೂ ಗ್ರಾಮೀಣ ಪ್ರದೇಶದವ, ಪಿಕಾಸಿ, ಗುದ್ದಲಿ ಹಿಡಿದವ ಎಂದು ಹೇಳುತ್ತಾರೆ. ಹಾರೆ ಗುದ್ದಲಿ ಹಿಡಿದರೆ ಸಾಲದು ಕಲ್ಲಾರೆ ಅವರೇ. ಅದು ನಿಮ್ಮ ದೈಹಿಕ ಶ್ರಮ. ಇದರ ನಿವಾರಣೆಗೆ ಬಿಮ್ಮಾಗಿ ನಿದ್ರೆ ಮಾಡಿದ್ರೆ  ಸಾಕು ಆ ಶ್ರಮದ ನೋವೆಲ್ಲಾ ಮಾಯವಾಗುತ್ತದೆ. ಅಷ್ಟೇ ಯಾಕೆ ಕಟ್ಟಡ ಕಟ್ಟುವವರು, ದುಡಿಯುವ ವರ್ಗ ಸಂಜೆ ಸಾರಾಯಿ ಕುಡಿದು ಬೀದಿಯಲ್ಲಿ ಹಾಕಿರುವ ಜಲ್ಲಿಯ ಮೇಲೆ ಮಲಗುತ್ತಾರೆ ಎಂದರೆ, ದಿನದ ನೋವೆಲ್ಲ ಸಾರಾಯಿ ಮಾಯ ಮಾಡುತ್ತದೆ.

ಆದರೆ ಒಬ್ಬ ದಲಿತನ ನೋವು ದೈಹಿಕವಾದ ನೋವಲ್ಲ. ಅದು ಮಾನಸಿಕ ನೋವು. ಅದನ್ನು ಹೇಳಲೂ  ಆಗದ ಅನುಭವಿಸಲು ಆಗದ ನೋವು. ಗಂಟಲಲ್ಲಿ ಸಿಕ್ಕ ಕಡುಬು.ಶಿವನ ಗಂಟಲಲ್ಲಿ ಇರುವ ವಿಷ, ಅಡಕತ್ತರಿಯಲ್ಲಿ ಸಿಕ್ಕ ಕೋತಿಯ ಸ್ಥಿತಿಯಂತೆ . ನಿಮ್ಮ ಆಲೋಚನೆ ಅಥವಾ ನೀವು ಬರೆದ ಧಾಟಿ ಕೆನೆಪದರದ್ದು. ಅದಕ್ಕೆ ಮತ್ತೆ ನೀವು ಗ್ರಾಮೀಣ ಭಾರತದ ದಲಿತ, ಬಡವರ ಒಳತೋಟಿ, ನೋವು, ಸಂಕಟ ಅರ್ಥ ಮಾಡಿಕೊಂಡಿಲ್ಲ ಎಂದೇ ನಾನು ಭಾವಿಸುತ್ತೇನೆ.

ಇನ್ನು ಕಾಮತ್ ಅವರು ಬೆಂಗಳೂರಿನಲ್ಲಿ ಜಾತಿ ಇಲ್ಲ ಬಿಡಿ ಎಂದು ಹೇಳುವ ಮಾತುಗಳು ಸಹ ಮೇಲ್ನೋಟಕ್ಕೆ ಕಾಣುವ ಸತ್ಯ. ಆದರೆ ಐಟಿ ಬಿಟಿ ಕ್ಷೇತ್ರದಲ್ಲಿ ಸ್ಲಂಗಳಲ್ಲಿ ಜಾತಿ ಪದ್ದತಿ ಇನ್ನೂ ಜೀವಂತವಾಗಿದೆ ಎಂಬುದನ್ನು ಮನಗಾಣಬೇಕು. ಇದೇ ಕಾರಣಕ್ಕೆ ‘ಸ್ಲಂಡಾಗ್ ಮಿಲೇನಿಯರ್’ ಎಂಬ ಚಿತ್ರ ಬಹು ಮುಖ್ಯವಾಗುತ್ತದೆ. ಹಿಂದೆ ಹಳ್ಳಿಗಳಲ್ಲಿ ಮಲ ಹೊರುವ ಪದ್ದತಿ ಇತ್ತು. ಇಂದು ನಗರದಲ್ಲಿ ಉನ್ನತೀಕರಣಗೊಂಡಿರುವ ಮಲ ಹೊರುವ ಪದ್ದತಿ ಮುಂದುವರಿದಿದೆ ಎಂದರೆ ನೀವು ಕನಸಿನಲ್ಲೂ ಒಪ್ಪಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ. ಇಂದು ನಗರದ ಪ್ರತಿಯೊಂದು ಮನೆಯ ಕಕ್ಕಸ್ಸು ಗುಂಡಿಗಳನ್ನು ಬಾಚುವವರು ದಲಿತರೇ, ಬಡವರೇ. ಒಪ್ಪತ್ತಿಗೆ ಗತಿಯಿಲ್ಲದವರೇ, ಇದು ಸತ್ಯ.ಸ್ವಾಮಿ

ಕಾಮತ್ ಅವರೇ ನೀವು ಮೇಲ್ವರ್ಗದವರು ಎಂದರೆ ಬ್ರಾಹ್ಮಣರೇ ಎಂದು ಪ್ರಶ್ನಿಸಿಕೊಂಡಿದ್ದೀರಿ. ನಾನು ಹೇಳಿದ ಮೇಲ್ಜಾತಿಯವರು ಯಾವುದೇ ಜಾತಿಯ  ಮೇಲ್ ಸ್ಥರದ  ಜನರನ್ನು. ನಮ್ಮೊಳಗಿನ ಅಸಹನೆ ಯಾರನ್ನೂ ಬಿಡುವುದಿಲ್ಲ. ಅದು ಬೆಂಕಿಯಂತೆ ಕುರುಹೇ ಇಲ್ಲದಂತೆ ಮಾಡುತ್ತದೆ. ಇನ್ನು ನೀವು ನಿಮ್ಮ ಮನೆಯ ಸಮೀಪವಿದ್ದ ಬಾವಿಯಿಂದ ದಲಿತರಿಗೆ ನೀರು ಸೇದಿಕೊಂಡು ಹೋಗುವಂತೆ ಹೇಳಿರುವುದು ನಿಮ್ಮ ಕುಟುಂಬದ ದೊಡ್ಡಗುಣ. ಆದರೆ ಮಡಿವಂತೆ ಮಹಿಳೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂಬುದು ನಿಮಗೂ ಗೊತ್ತಿದೆ ಎಂದು ಭಾವಿಸುತ್ತೇನೆ.

ಮತ್ತೆ ಸಿದ್ದಲಿಂಗಯ್ಯ ಅವರ ಲೇಖನದ ವಿಷಯಕ್ಕೆ ಹೋಗುತ್ತೇನೆ. ಇಂದಿಗೂ ‘ದಾಸರೆಂದರೆ ಪುರಂದರ ದಾಸರಯ್ಯ..’ ಎಂದು ಹೇಳುವುದು, ಕನಕದಾಸರನ್ನು ಕೈಬಿಟ್ಟಿರುವುದನ್ನು ಸ್ವಲ್ಪ ಗಮನಿಸಬೇಕಾದ ಸಂಗತಿ. ಇಂದಿಗೂ ಎಲ್ಲಾ ರಾಘವೇಂದ್ರ ಮಠಗಳಲ್ಲಿ ವ್ಯಾಸರಾಯರು ಮತ್ತು ಪುರಂದರ ದಾಸರ ಕೀರ್ತನೆಗಳನ್ನು ಹಾಡಲಾಗುತ್ತಿದೆಯೇ ವಿನಃ ಕನಕದಾಸರ ಕೀರ್ತನೆಗಳನ್ನು ಹಾಡುವುದೇ ಇಲ್ಲ ಎನ್ನಬಹುದು. ಬಸವಣ್ಣ ಲಿಂಗಾಯತರ ಜಾತಿಯನ್ನು ಹಾಳು ಮಾಡಿದ ಎನ್ನುವ ಬಹುತೇಕ ಲಿಂಗಾಯತರನ್ನೇ ನೋಡಿದ್ದೇನೆ. ಅಂಬೇಡ್ಕರ್ ಬರೆದ ಸಂವಿಧಾನ ಸರಿಯಿಲ್ಲಾರಿ, ದಲಿತರಿಗೆ ಮೀಸಲಾತಿ ನೀಡಿ ಇಡೀ ದೇಶವನ್ನೇ ಹಾಳು ಮಾಡಿದ ಎಂಬ ಮಾತುಗಳು ಅನೇಕ ಸಾರಿ ಕಿರಿಕಿರಿ ಉಂಟುಮಾಡಿವೆ ಎಂಬುದನ್ನು ಕಾಮತ್ ಮತ್ತು ಕಲ್ಲಾರೆ ಮನಗಾಣಬೇಕು ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

– ಸಿದ್ದಮುಖಿ

+++

cr030307shadow_lines0115ಸಿದ್ದಮುಖಿಯವರೆ,
ನನಗೆ ಸಿದ್ಧಲಿಂಗಯ್ಯ ನವರ ಹಾಗೂ ನಿಮ್ಮ ಕಾಳಜಿ ಅರ್ಥ ಆಗುತ್ತೆ.
’ಎಲ್ಲಾ’ ಮೇಲ್ಜಾತಿಯವರ ಸ್ಥಾನಮಾನಗಳಿಗೆ ಅವರ ಹುಟ್ಟೇ ಕಾರಣ ಅಂದಿದ್ರು ಅವರು ನೀವೂ ಅದನ್ನು ಸಮರ್ಥಿಸಿದ್ದೀರಿ ಅದು ನಂಗೆ ಇಷ್ಟ ಆಗಿಲ್ಲ ಅಷ್ಟೆ
ಎಲ್ಲಾ ದಲಿತರ ಸ್ಥಾನಮಾನಗಳೂ ಅವರಿಗೆ ಮೀಸಲಾತಿಯಿಂದಲೇ ಬಂದಿದ್ದು ಅದರಲ್ಲಿ ಅವರ ಪರಿಶ್ರಮ , ಸಾಧನೆ ಏನೂ ಇಲ್ಲ ಅಂದ್ರೆ ಸಿದ್ಧಲಿಂಗಯ್ಯನವರಿಗೆ ನಿಮಗೆ ಸಿಟ್ಟು ಬರೋದಿಲ್ವ?

-ಸಂದೀಪ್ ಕಾಮತ್

‍ಲೇಖಕರು avadhi

January 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. kallare

  ’ಅಂಬೇಡ್ಕರ್ ಬರೆದ ಸಂವಿಧಾನ ಸರಿಯಿಲ್ಲಾರಿ, ದಲಿತರಿಗೆ ಮೀಸಲಾತಿ ನೀಡಿ ಇಡೀ ದೇಶವನ್ನೇ ಹಾಳು ಮಾಡಿದ ಎಂಬ ಮಾತುಗಳು ಅನೇಕ ಸಾರಿ ಕಿರಿಕಿರಿ ಉಂಟುಮಾಡಿವೆ ಎಂಬುದನ್ನು ಕಾಮತ್ ಮತ್ತು ಕಲ್ಲಾರೆ ಮನಗಾಣನಬೇಕು ಎಂದು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತೇನೆ’ ನಿಮ್ಮದೇ ಮಾತುಗಳನ್ನು ನೀವೇ ಒಮ್ಮೆ ಓದಿಕೊಳ್ಳಿ.

  ನಮಸ್ಕಾರ ಸಿದ್ಧಮುಖಿಯವ್ರೇ, ಮತ್ತೆ ಹೇಳುತ್ತೇನೆ. ವಿಷಯವನ್ನು ಎಲ್ಲಿಂದರೆಲ್ಲಿ ಎಳೆಯಬೇಡಿ ನೀವು. ಅವಧಿಯವರು ನೀಡಿದ ವಿಷಯ ವಿಷಯಕ್ಕಷ್ಟೇ ಸೀಮಿತವಾಗಿದ್ದರೆ ಚೆಂದ. ನನಗೆ ಸಂದೀಪ್ ಕಾಮತ್ ಗೊತ್ತಿಲ್ಲ. ಕಡಲತೀರದ ಸಂದೀಪ್ ಕಾಮತ್ ಗೊತ್ತು. ಜೊತೆಗೆ ವಿಷಯ ಕೊಟ್ಟ ಅವಧಿ ಓದಿ ಬಲ್ಲೆ. ಆದರೆ ಸಿದ್ಧಮುಖಿ ಅನ್ನುವುದು ನಿಮ್ಮ ನಿಜವಾದ ಹೆಸರು ಅನ್ನಿಸುವುದಿಲ್ಲ. ಬದಲಾಗಿ ನಿಮ್ಮದು ಸಿದ್ಧಮುಖ ಅನ್ನಿಸುತ್ತದೆ. ಇರಲಿ, ನೀವು ಯಾರೆಂದು ತಿಳಿಯದೇ ಯಾವ ಮಾತೂ ಆಡುವುದಿಲ್ಲ ನಿಮ್ಮಂತೆ. ನಿಮ್ಮ ಪ್ರಶ್ನಿಸುವ ರೀತಿ ವಾದದಂತಿರದೇ ಜಗಳದಂತಿರುತ್ತದೆಂಬುದು ನಿಮಗೆ ತಿಳಿದಿರಲಿ. ಅಭಿಪ್ರಾಯವನ್ನು ಕೇಳುವ ಸಹನೆಯಿಲ್ಲದಂತೆ ಮತ್ತೆ ಅದೇ ರಾಗ ತೆಗೆದಿದ್ದೀರಿ ಸಿದ್ಧವಾದಿಗಳಂತೆ.

  ನೀವು ಕಾಮತ್ ಮತ್ತು ಕಲ್ಲರೆ – ಕಲ್ಲಾರೆ ಅಲ್ಲ ಅದು – ಅವರನ್ನೇ ಉದ್ದೇಶಿಸಿ ಆಡಿದ ಮಾತುಗಳು ನಿಮ್ಮ ಮನಸ್ಥಿತಿಯನ್ನು ಹೇಳುತ್ತದೆ. ಕಾಲ್ಕೆರೆದು ಬರುವ ಅಂಕದ ಕೋಳಿಯಂತಿದೆ ಮಾತು. ನಾನೂ ಗ್ರಾಮೀಣ ಭಾಗದವ, ಹಳ್ಳಿಯ ಪರಿಸರ ನನಗೂ ಗೊತ್ತು ಅಂದರೆ ವಿಷಯಾಂತರ ಮಾಡಿ ಮತ್ತೇನೋ ಹೇಳುತ್ತೀರಿ ನೀವು. ದೈಹಿಕ ಶ್ರಮ ಮಾನಸಿಕ ಶ್ರಮ ಅಂತೆಲ್ಲಾ ಎಲ್ಲೆಂದರಲ್ಲಿ ಹರಿದಾಡುತ್ತೀರಿ. ನಿಮ್ಮ ಮಾನಸಿಕ ಶ್ರಮ ಅರ್ಥವಾಗುತ್ತೆ.

  ನಾನು ನೇರವಾಗಿ ಹೇಳಿದ ವಿಷಯ ಮದುವೆಗೂ ಮೀಸಲಾತಿ ಕೊಡುವುದಕ್ಕೆ ಮಾತ್ರ ಸೀಮಿತವಾದದ್ದು. ಸುಮ್ಮನೇ ವ್ಯಂಗ್ಯವಲ್ಲ ಅದು. ಸಂದೀಪ್ ಮಾತಿಗೆ ಮತ್ತೆ ಸಹಮತವಿದೆ. ಹುಟ್ಟುವುದೇ ತಪ್ಪು ಅನ್ನುವಂತಿರುವ ನಿಮ್ಮ ವಾದಕ್ಕೆ ಎಲ್ಲಿಯ ಉತ್ತರ? ಬಡವರನ್ನು ಬಡವರಾಗಿಯೇ, ಶ್ರೀಮಂತರನ್ನು ಶ್ರ್‍ಈಮಂತರಾಗಿಯೇ ನೋಡುವುದಿಲ್ಲವೇಕೆ ನೀವು? ಜಾತಿ ನಿರ್ಮೂಲನೆಯಾಗಬೇಕೆನ್ನುವವರು ದೂರಿನಿಂದಲೇ ಅದನ್ನು ಮಾಡಹೊರಟಂತಿದೆ. ನಿಮ್ಮದೇನಿದ್ದರೂ ದೂರುಗಳ ಸಂತೆ.

  ಅಷ್ಟಕ್ಕೂ ನಿಮಗೊಂದು ಮಾತು ತಿಳಿದಿರಲಿ. ನಾನು ಜಾತಿವಾದಿಯಲ್ಲ. ಅಂತಹ ವಾತಾವರಣದಲ್ಲೂ ಬೆಳೆದಿಲ್ಲ. ದಿನದಿಂದ ದಿನಕ್ಕೆ ಜಾತೀಯತೆ ಇಲ್ಲವಾಗುತ್ತಿದೆ ಅಂತ ನಂಬಿದವನು ನಾನು. ಅದನ್ನ ನೀವೂ ಒಪ್ಪುತೀರೇನೋ! ಆದರೆ ಹುಟ್ಟಿನಿಂದಾಗೇ ಸ್ಥಾನಮಾನ ಹಾಗೂ ಮದುವೆಗೂ ಮೀಸಲಾತಿ ಅನ್ನುವ ಮಾತು ಒಪ್ಪಲಾಗುತ್ತಿಲ್ಲ.

  ಅಂದಹಾಗೇ ನೀವು ಎಂದಾದರೂ ಗುದ್ದಲಿ ಪಿಕಾಸು ಹಿಡಿದು ಕೆಲಸ ಮಾಡಿದ್ದೀರಾ? ಇಲ್ಲಾ ಸುಮ್ಮನೇ ಮಾತಷ್ಟೇ ಆಡುತ್ತೀರಾ? ಸಹಜವಾಗಿ ಕೇಳಿದೆ ಅಷ್ಟೇ. ಹಾದಿ ತಪ್ಪಿಸುವ ವಾದವನ್ನು ಬೆಳೆಸುವ ಉದ್ದೇಶವಿಲ್ಲ ಮತ್ತೆ.

  ನಮಸ್ಕಾರಗಳೊಂದಿಗೆ,

  ಪ್ರತಿಕ್ರಿಯೆ
 2. ಇವನೇ.

  ಬೆಂಗಳೂರಿನಲ್ಲಿ ಜಾತಿ ವ್ಯವಸ್ಥೆ ಇಲ್ಲ ಎನ್ನುವ ಸಂದೀಪ್ ಕಾಮತ್ ಅವರು ಒಂದು ಪೂರ್ವಗ್ರಹಕ್ಕೆ ಒಳಗಾಗಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ. ಇದರಿಂದ, ಅವರೊಂದಿಗೆ ನೀವೂ (ಸಿದ್ದಮುಖಿ) ಎಷ್ಟೇ ಚರ್ಚೆ ನಡೆಸಿದರು ಪ್ರಯೋಜನವಿಲ್ಲ. ಯಾಕೆಂದರೆ ಜಾತಿ ವ್ಯವಸ್ಥೆಯ ಕರಾಳ ಅನುಭವ ಇವರಿಗೆ ಅಗಿಲ್ಲ. ಅಲ್ಲರಿ ಬೆಂಗಳೂರು ಎಂಬ ಮಾಯನಗರಿಯಲ್ಲಿ ಹೆಸರಿನ ಮೇಲೆ ಜಾತಿ ತಿಳಿಯಲು ಸಾಧ್ವವಿಲ್ಲ ಎನ್ನುತ್ತಿರಲ್ಲ…. ಇದಕ್ಕೆ ಏನ್ ಹೇಳ ಬೇಕು… ಬಹುಶ ಬೆಂಗಳೂರಿನಲ್ಲಿರುಷ್ಟು ಕೂರ್ರ ಜಾತಿ ವ್ಯವಸ್ಥೆ ಕರ್ನಾಟಕ ಯಾವುದೇ ಹಳ್ಳಿಯುಲ್ಲು ಇಲ್ಲ. ಹಳ್ಳಿಗಳಲ್ಲಿ ಜಾತಿ ಪದ್ದತಿ ಕಣ್ಣಿಗೆ ಕಾಣುವಂತ್ತಿದ್ದರೆ, ಬೆಂಗಳೂರಿನಲ್ಲಿ ನಮ್ಮ ವಿರುದ್ಧ ನಡೆಯುತ್ತಿರುವ ಜಾತಿ ರಾಜಕೀಯ ಅರಿವಿಗೆ ಬರುವಷ್ಟರೋಳಗೆ, ಅದು ನಮ್ಮನ್ನು ಮುಗಿಸಿರುತ್ತದೆ.

  ಪ್ರತಿಕ್ರಿಯೆ
 3. ಸಂದೀಪ್ ಕಾಮತ್

  Maha Malasar, Malaikudi, Malasar, Malayekandi, Maleru. Palliyan, Paniyan.Adiga, Advichincher, Shetty, Pardhi,. Mendon. Rathawa. Sholaga,Putran,
  ಇವನೇ , ಮೇಲಿನವು ಯಾವುದೇ ಹೋಟೇಲಿನ ಮೆನು ಅಲ್ಲ ಕೆಲವು ಜಾತಿಯ ಹೆಸರುಗಳು.
  ಇವನ್ನು ನೋಡಿ ಯಾರು ಯಾವ ಜಾತಿಯವರು ,ಯಾವುದು ಮೇಲು ಜಾತಿ ,ಯಾವುದು ಕೀಳು ಜಾತಿ ಹೇಳಬಹುದಾ??
  ಜಾತಿ ರಾಜಕೀಯದ ಬಗ್ಗೆ ನಾನು ಮಾತಾಡಿಲ್ಲ ಅದೊಂದು ಪ್ರತ್ಯೇಕ ಸಮಸ್ಯೆ .ಅದನ್ನು ನಿವಾರಿಸಲು ಸಿದ್ದಲಿಂಗಯ್ಯನವರು ವಿಧಾನ ಸಭೆಯಲ್ಲಿ ಮಾತಾಡ ಹೊರಟರೆ ಯಾರೂ ಸಪೋರ್ಟ್ ಮಾಡಲ್ಲ.
  ಹಳ್ಳಿಗಳಲ್ಲಿ ನಡೆಯುವಂತೆ ಬೆಂಗಳೂರಲ್ಲಿ -ದಲಿತರಿಗೆ ಹೋಟೇಲಿಗೆ ,ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆ ಆಗಲ್ಲ ಅಂತ ಹೇಳಿದ್ದು ಅಷ್ಟೆ.
  ಇಲ್ಲಿ ಯಾವುದೇ ಜಾತಿಯವನು ಇಸ್ಕಾನ್ ನಿಂದ ಹಿಡಿದು ಬುಲ್ ಟೆಂಪಲ್ ತನಕ ;ಬನಶಂಕರಿ ದೇವಸ್ಥಾನದಿಂದ ಹಿಡಿದು ಮುತ್ಯಾಲಮ್ಮ ಗುಡಿಯ ತನಕ ಯಾವುದೇ ದೇವಸ್ಥಾನಕ್ಕೆ ನಿರಾತಂಕವಾಗಿ ಭೇಟಿ ಕೊಡಬಹುದು.ಚಪ್ಪಲಿ ಹೊರಗೆ ಕಾದಿದ್ದಕ್ಕೆ ಒಂದು ರೂಪಾಯಿ ಕೊಡಬೇಕಷ್ಟೆ.
  ಹಾಗೆಯೇ ಶಾಂತಿ ಸಾಗರದಿಂದ ಹಿಡಿದು ಅಡಿಗಾಸ್ ತನಕ; ಕಾಮತ್ ಹೋಟೇಲಿನಿಂದ ಹಿಡಿದು ತಾಜ್ ವೆಸ್ಟ್ ಎಂಡ್ ತನಕ ಯಾವುದೇ ಹೋಟೇಲಿನಲ್ಲಿ ಯಾವುದೆ ಜಾತಿಯವನು ತಿನ್ನಬಹುದು.ದುಡ್ಡು ಕೊಡಬೇಕಷ್ಟೆ.
  ಸಿದ್ದಲಿಂಗಯ್ಯನವರು ಹೇಳಿದ ಹಾಗೆ ಅಂತರ್ಜಾತಿ ವಿವಾಹದ ಕಾನ್ಸೆಪ್ಟ್ ಜಾರಿಗೆ ಬಂದ್ರೆ ಏನಾಗುತ್ತೆ ಗೊತ್ತಾ?
  A ಅನ್ನೋ ಮೇಲ್ಜಾತಿಯಂವ B ಅನ್ನೋ ಮೇಲ್ಜಾತಿಯವಳನ್ನು ;C ಅನ್ನೋ ಮೇಲ್ಜಾತಿಯವನು D ಅನ್ನೋ ಮೇಲ್ಜಾತಿಯವಳನ್ನು ಮದುವೆ ಆಗ್ತಾನೆ-ನೌಕರಿ ಗಿಟ್ಟಿಸಿಕೊಳ್ಳ್ತಾನೆ ಅಷ್ಟೆ,
  ಸಿದ್ದಲಿಂಗಯ್ಯನವರು ಅಂತರ್ಜಾತಿ ಅಂದಿದ್ದಾರೇ ವಿನಹ ಹಿಂದುಳಿದ ಜಾತಿಯವರನ್ನು ಮದುವೆ ಆಗಬೇಕೂಂತ ಹೇಳಿಲ್ಲವಲ್ಲ.(ಈ ಅಂಶ ಸಿದ್ದಲಿಂಗಯ್ಯನವರಿಗೂ ಗೊತ್ತಾಗಲಿ ಅಂತ ಹೇಳಿದೆ ಅಷ್ಟೆ)

  ಪ್ರತಿಕ್ರಿಯೆ
 4. ಹೇಮಶ್ರೀ

  ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.

  ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !

  ೧. ಹೋಟೇಲ್‍ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!

  ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ ಜಾತಿ ಧರ್ಮ ಭಾಷೆ ಇಲ್ಲ ಅಂದ್ರೆ ಸುಳ್ಳೇ. ಕೆಲವರ ಅನುಭವಕ್ಕೆ, ಗಮನಕ್ಕೆ ಬರದೇ ಹೋಗಿರಬಹುದು ಅಷ್ಟೆ.

  – ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಂದರ್ಭದಲ್ಲಿ ( ನಾಲ್ಕು-ಐದು ವರ್ಷಗಳ ಹಿಂದೆ) … ನಾನು ಯಾವ ಜಾತಿ / ವೆಜ್ಜಾ … ನಾನ್ ವೆಜ್ಜಾ / ಹುಡುಗರು ಫ್ರೆಂಡ್ಸ್ ಇದ್ದಾರಾ ಇಲ್ವಾ, ಇವೆಲ್ಲಾ ಸಂದರ್ಶನ ಆಗಿಯೇ ಕೊನೆಗೆ ಮನೆ ಬಾಡಿಗೆಗೆ ಸಿಕ್ಕಿದ್ದು.
  ಮೊನ್ನೆ ಮೊನ್ನೆ ಎರಡು ತಿಂಗಳ ಹಿಂದೆ ನನ್ನ ಗೆಳೆಯನೊಬ್ಬನ ಗಾಡಿ ಕಳುವಾಗಿ ಪೋಲಿಸ್ ಸ್ಟೇಶನ್‍ಗೆ complaint ಕೊಡ ಹೋದರೆ, ಅವನನ್ನು ಎಂತಹ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು ಎನ್ನುವುದನ್ನು ಕೇಳಿದರೆ ಇದು ಬೆಂಗಳೂರಾ ಅನ್ನಿಸಿಬಿಡ್ತು. ಅವನ ಹೆಸರು ಒಂದು ಧರ್ಮಕ್ಕೆ ಅಂಟಿಕೊಂಡಿತ್ತು. ಆದರೆ ಅವನಲ್ಲ. ಅವನು ಧರ್ಮವನ್ನು ಬಿಟ್ಟು ಯಾವ ಕಾಲವಾಗಿದೆಯೋ !!!

  ೨. ನಮಗೆ ಅಂದ್ರೆ, ಯಾರು (ಮಾನಸಿಕವಾಗಿ ಮತ್ತು ದೈಹಿಕವಾಗಿ) ತುಳಿತಕ್ಕೆ/ ಶೋಷಣೆಗೆ ಒಳಗಾಗದ ಅನುಭವ ಪಡೆದಿದ್ದಾರೆ ಅವರಿಗೆ ಮಾತುಗಳಲ್ಲಿ , ಬರಹಗಳಲ್ಲಿ – ಹೀಗಾದರೆ ಎಷ್ಟು ಒಳ್ಳೆಯದು ಎನ್ನುವ ಮೇಲ್ನೋಟದ ಆದರ್ಶದ ಭ್ರಮೆ ಇರುತ್ತದೆ. ಎಲ್ಲಾ ರೀತಿಯಲ್ಲೂ.
  ಅದು ಧರ್ಮ ಇರಬಹುದು, ರಾಜಕೀಯ ಇರಬಹುದು, economy ಇರಬಹುದು. anything and everything . ಎಲ್ಲವೂ ಬಿಟ್ಟಿ ಅನಿಸಿಕೆಗಳು ಅಲ್ವಾ. ಓದಿ ತಿಳಿದುಕೊಂಡೇ ಈ ರೀತಿ ಅಭಿಪ್ರಾಯ ನೀಡಲು ಸಾಧ್ಯ.!!!
  ನನ್ನನ್ನೂ ಸೇರಿಸಿಕೊಂಡೇ.

  – ಈ ವರೆಗೂ ನನಗೆ, ನಾನು particular ಜಾತಿಯವಳು ಎನ್ನುವ ಕಾರಣಕ್ಕೆ ಯಾವ ರೀತಿಯ ಅವಮಾನವಾಗಲೀ, ಬೇಸರವಾಗಲೀ, ದೂಶಣೆಯಾಗಲೀ ಅನುಭವಕ್ಕೆ ಬಂದಿಲ್ಲ. ಅಂದ ಮಾತ್ರಕ್ಕೆ it does not exist ಅಂತ ನಾನು ಅಂದುಕೊಂಡರೆ ತಪ್ಪಾಗಲ್ವಾ.!

  ೩.. ಕೆಲವು ಸ್ತರಗಳಲ್ಲಿ ಪ್ರಜ್ನಾಪೂರ್ವಕವಾಗಿಯಾದರೂ ನಾವು ವೈಯಕ್ತಿಕ ನೆಲೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತಬೇಕಲ್ಲಾ. ಹಿಂದಿನಿಂದಲೂ ಎಷ್ಟೊಂದು ಜನ ಇದನ್ನು ಮಾಡಿಕೊಂಡೇ ಬಂದಿದ್ದಾರೆ. ಸಮಾಜ ಅಂದ್ರೆ ನಾವೇ ಅಲ್ವಾ. ನಿಧಾನವಾಗಿಯಾದರೂ ಈ ಬಗ್ಗೆ ಯಾವ ಭಯ ಆತಂಕವಿಲ್ಲದೆ ಚರ್ಚೆ ಮಾಡುತ್ತಿದ್ದೇವೆ ಎಂದರೆ something must be happening over the period of time !!!

  ೪. ಕ್ರಾಂತಿ ಗಾಗಿ ಕ್ರಾಂತಿ ಎನ್ನುವ ಅನಿವಾರ್ಯತೆ ಈಗಲೂ ನಮ್ಮಲ್ಲಿ ಇದೆಯೇ !
  ಹೌದು ಅಂದರೆ ಇನ್ನೂ ನಾವು ಮಾಡಬೇಕಾಗಿರುವುದು ತುಂಬಾ ಇದೆ. ಒಟ್ಟು ಸಾಮಾಜಿಕ ಕ್ರಾಂತಿಯಲ್ಲಿ ನನ್ನದೂ ಒಂದು ಪಾತ್ರ ಇರುವುದರಿಂದ ಅದಾಗಿಯೇ ಅದು ಆಗುತ್ತದೆ ಎಂದರೆ ಅದು ದೊಡ್ಡ ಸುಳ್ಳು.

  – ನಾನು ಮದುವೆಯಾಗಲು ಯೋಚಿಸಿದಾಗ, ನನ್ನ ಅಪ್ಪ ಅಮ್ಮ ಮೊದಲು ಹುಡುಕಿದ್ದು ನಮ್ಮ ಜಾತಿಯಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ದಾನಾ ಅಂತ. ಅಷ್ಟು ವರ್ಷ ಅವರಿಬ್ಬರೂ ಪ್ರಗತಿಪರರಾಗಿ ಬರೆದದ್ದು, ಭಾಷಣ ಮಾಡಿದ್ದು, ಚಿಂತನೆ ನಡೆಸಿದ್ದು, ಇವೆಲ್ಲ ಸುಳ್ಳಾ ಅಂತ ಮೊದಲ ಬಾರಿಗೆ ನನಗೆ ಅನ್ನಿಸಿತ್ತು. ಆ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಆಯ್ತು ಅಂತ ನನ್ನ ಸ್ನೇಹಿತರಿಗೇ, ಅಪ್ಪ ಅಮ್ಮ ನ ಸ್ನೇಹಿತರಿಗೇ ಆಶ್ಚರ್ಯ. ಯಾಕಂದ್ರೆ ವಿಚಾರವಂತ ಬರಹಗಾರರ ಕುಟುಂಬ. ಇದು ಒಂದು ಚರ್ಚೆಯ ವಿಶಯವೇ ಅಲ್ಲ ನಮಗೆ. ಅನಾಯಾಸವಾಗಿ ನಮ್ಮ ಸಹಜ ಯೋಚನಾಕ್ರಮದಲ್ಲಿ ಇದು ಬಂದು ಹೋಗಿರಬೇಕಿತ್ತು. ಹಾಗಂತ ತಿಳ್ಕೊಂಡಿದ್ರು. ನಾನೂ ಹಾಗೇ ಅಂದ್ಕೊಂಡಿದ್ದೆ.

  ಆದ್ರೆ ಸಮಸ್ಯೆ ಅದಲ್ಲ. ವೈಯಕ್ತಿಕವಾಗಿ ನಾವು ಈ ಬಗ್ಗೆ ಯೋಚನೆ ಮಾಡುವಾಗ ಎಲ್ಲರೂ ನಮ್ಮ ನಮ್ಮ ಅನುಭವಗಳ ನೆಲೆಯಲ್ಲೇ ನಮಗೆ ಬೇಕಾಗುವ comfort zoneಗಳಲ್ಲೇ ಬದುಕಲು ಇಷ್ಟ ಪಡುವವರು.

  ಜಾತಿ, ಧರ್ಮ, ದೇವರನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಬಿಸಾಡಿದ ನನ್ನ ಮನೆಯಲ್ಲೇ ನನ್ನ ನಿರ್ಧಾರದ ಬಗ್ಗೆ ಚರ್ಚೆಯಾದರೆ, ಪಾಪ ಅವನ್ನೆಲ್ಲಾ ಇನ್ನೂ ಹೊತ್ತುಕೊಂಡು ತಿರುಗುತ್ತಿರುವವರ ಪಾಡೇನು ಅಂತ ಯೋಚಿಸಿದೆ.
  ಎಲ್ಲವೂ ಒಮ್ಮೆಲೇ ಬದಲಾಗಬೇಕು ಅಂದ್ರೆ ಹೇಗೆ. ಬಸವಣ್ಣ ಕ್ರಾಂತಿ ಮಾಡಿದ್ದು ಎಷ್ಟು ಶತಮಾನಗಳ ಹಿಂದೆ. ನಾವು ಈಗಲೂ ಹಾಗೆಯೇ ಇದ್ದೇವೆ ಅಲ್ವಾ. ನಿಧಾನವಾಗಿ ಬದಲಾಗುವ ಪ್ರಕ್ರಿಯೆ ಇದು.

  ನಾನು ಮದುವೆಯಾದಾಗ, ನಾನು ಏನೋ ದೊಡ್ದ ಕ್ರಾಂತಿ ಮಾಡಿದೆ ಎಂದು ಅನ್ನಿಸಲೇ ಇಲ್ಲ. ಯಾಕಂದ್ರೆ, ಮೊದಲೇ ನಾನು ಈ ಜಾತಿ, ಆ ಧರ್ಮ, ಈ ದೇಶ ಎನ್ನುವ ನೆಲೆಗಟ್ಟನ್ನು ಮೀರಿ ಯೋಚಿಸಲು ಸಾಧ್ಯವಾಗಿದ್ದರಿಂದ. ಜತೆಗೆ ನನ್ನ ಮೊದಲೇ ಎಷ್ಟೊಂದು ಜನ ಈ ಮೆಟ್ಟಿಲು ಹತ್ತಿ ಹೋಗಿದ್ದಾರೆ ಎನ್ನುವ ಸರಳ ಸತ್ಯದ ಅರಿವು ನನಗೆ ಇದ್ದ ಕಾರಣ. ಮತ್ತು ನನಗೆ ನನ್ನ ಅಪ್ಪ ಅಮ್ಮ ನೀಡಿದ ಆತ್ಮಬಲ. (ದ್ವಂದ್ವಗಳು ಏನೇ ಇದ್ದರೂ ಅವರ ಧೈರ್ಯ ಮತ್ತು ಪ್ರೋತ್ಸಾಹ ಜತೆಗಿದ್ದರಿಂದ).

  ನನ್ನ ಕುಟುಂಬದ ಪ್ರತಿಕ್ರಿಯೆ ಅತ್ಯಂತ ಸಹಜ and I do understand it.
  Its a micro example ಅಷ್ಟೆ. ನಮ್ಮ ಸಮಾಜ ಮಾನಸಿಕವಾಗಿ ಬದಲಾವಣೆಗೆ ರೆಡಿಯಾಗಿಲ್ಲ ಎನ್ನುವುದಕ್ಕೆ.
  ಯಾಕಂದ್ರೆ, ನಾನು ಜಾತಿ ಧರ್ಮ ದೇವರನ್ನು ಬಿಟ್ಟರೂ ನನ್ನ ಸುತ್ತಮುತ್ತ ಇರುವ ಜನರು ಇನ್ನೂ ಅದೇ ಲೇಬಲ್ ಹಚ್ಚಿಕೊಂಡಿದ್ದಾರಲ್ಲಾ. ಅವರೆಲ್ಲಾ ಯಾವಾಗ ಈ tag ಗಳನ್ನು ಕಳಚಿಡುತ್ತಾರೋ ಅಲ್ಲಿಯವರೆಗೆ ನಾನು ಅವರ ಜತೆ ಗುದ್ದಾಡಲೇಬೇಕಲ್ಲ.

  ೫. ನಾವು ಎಷ್ಟು ಮಂದಿ ಧರ್ಮ, ಜಾತಿ ಬಿಡಲು ತಯಾರು.???
  ನಮ್ಮ ನಮ್ಮ ಹೆಸರುಗಳಲ್ಲಿನ ಜಾತಿ ಸೂಚಕ, ಧರ್ಮ ಸೂಚಕ ಹೆಸರುಗಳನ್ನು ( ಸರ್ ನೇಮ್ ) ಬಿಟ್ಟರೂ ಸ್ವಲ್ಪ ಮಟ್ಟಿನ ಬದಲಾವಣೆ ಬಂದೀತು. ಅಲ್ಲವೇ.

  ಎಲ್ಲಿವರೆಗೆ ಜಾತಿ, ಧರ್ಮ ಎನ್ನುವ ಬಾಲ ಕಟ್ಟಿಕೊಳ್ಳುತ್ತೇವೆಯೋ ಅಲ್ಲಿವರೆಗೆ ಯಾವ ಮೀಸಲಾತಿ ಯಾರಿಗೆ ನೀಡಿದರೂ ಉಪಯೋಗವಾಗದು.

  ೬. ಪ್ರಸ್ತುತ ಭಾರತದ ದುರಂತ ಅಂದರೆ ಯಾವುದೇ ಸಾಮಾಜಿಕ ಬದಲಾವಣೆಯೂ, ರಾಜಕೀಯವಾದ ಫಿಲ್ಟರ್ ‍ನಿಂದ ಹಾದು ಹೋಗಲೇ ಬೇಕಾದ ಸಂದರ್ಭ ಇದೆ. ಅದನ್ನು ಅರಿತೇ ಸಿದ್ಧಲಿಂಗಯ್ಯನವರು ಇ ಮನವಿಯನ್ನು ಮಂಡಿಸಿರುವುದು.

  ಅಂಬೇಡ್ಕರ್ ಅನ್ನೋ ಮಹಾನ್ ಚಿಂತಕ ಭಾರತದಲ್ಲಿ ಹುಟ್ಟದೇ ಇರುತ್ತಿದ್ದಲ್ಲಿ ಈಗಿನ ಚರ್ಚೆ, ವಾದ, ಮೀಸಲಾತಿಯ ಹೊಸ ಹೊಳಹುಗಳು ಸಾಧ್ಯವೇ ಆಗುತ್ತಿರಲಿಲ್ಲ. ಮಾರ್ಟಿನ್ ಲುಥರ್ ನ civil rights movement ಆಗದೇ ಇರುತ್ತಿದ್ದಲ್ಲಿ ಒಬಾಮಾ ಅಮೇರಿಕಾ ಅಧ್ಯಕ್ಷನಾಗುವುದು ಸಾಧ್ಯವಿತ್ತಾ?
  ಆತ ಎಷ್ಟು ಸಬಲ ಮತ್ತು ಪರಿಣಾಮಕಾರಿ ಎನ್ನುವುದು ಬೇರೆಯೇ ಮಾತು. ಅಥವಾ ಜಾತಿ ರಾಜಕೀಯ, ಧರ್ಮ ರಾಜಕೀಯ ಅಮೇರಿಕೆಯಲ್ಲಿ ಇಲ್ಲವೇ ಎನ್ನುವ ಪ್ರತಿವಾದ ಬೇರೆಯೇ. ಅದು ಇಲ್ಲಿ ಬೇಡ.
  ಕುವೆಂಪು ಅವರ ವಿಶ್ವಮಾನವ concept ಆದರ್ಶ. ಅದು practical ಆದಾಗ ಮಾತ್ರ ಅಲ್ವಾ ನಿಜವಾದ ಬೆಲೆ.

  ೭. ಇನ್ನು ಮೀಸಲಾತಿಯಿಂದ ಉಪಯೋಗ ಏನು ಎನ್ನುವ ಅಥವಾ ಕೇವಲ ಬಡವ – ಶ್ರೀಮಂತ ಎನ್ನುವುದನ್ನು ಪರಿಗಣಿಸಿ ಎನ್ನುವ ವಾದಗಳು, ಮತ್ತೆ basic point ಗೇ ಮರಳುವಂತೆ ಮಾಡುತ್ತವೆ. ಅದು ಪ್ರಸ್ತುತ ಸಮಯ ಸಂದರ್ಭದಲ್ಲಿ ಅನಗತ್ಯ. ಯಾಕಂದ್ರೆ ಆ ಕಾಲಘಟ್ಟವನ್ನು ದಾಟಿ ಯಾವತ್ತೋ ನಾವು ಮುಂದೆ ಬಂದಾಗಿದೆ.

  ೮. ಅಂತರ್ ಧರ್ಮೀಯ, ಅಂತರ್ ಜಾತೀಯ ವಿವಾಹಗಳು ನಡೆಯುತ್ತಲೇ ಇರುತ್ತವೆ. ಆದರೆ ಸಿದ್ಧಲಿಂಗಯ್ಯ ಅವರು ಪ್ರಸ್ತಾಪಿಸಿದ ರೀತಿಯಲ್ಲಿ ….
  [ ಅವರು ಈ ರೀತಿ ವಿವಾಹವಾಗಬೇಕಾದರೆ ಅವರ ಮನಸ್ಸಿನಲ್ಲಿ ಒಂದು ಬದಲಾವಣೆ, ಆಂದೋಲನ ನಡೆದಿರುತ್ತದೆ. ಅವರು ಕ್ರಾಂತಿಯ ಕಡೆ ಒಲಿದಿರುವುದರಿಂದ ಇಂತಹ ವಿವಾಹ ಆಗಿದ್ದಾರೆ. ] …
  ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಿಕೊಳ್ಳಲಾರೆ. ಮತ್ತು ಇದೇ ಕಾರಣದಿಂದಾಗಿ ಮೀಸಲಾತಿ ನೀಡುವ ಪ್ರಯತ್ನ ಸಾಮಾಜಿಕ ಕ್ರಾಂತಿಗೆ ಉಪಯೋಗವಾಗಲಾರದು. ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೇ ಈ ರೀತಿಯ ಮದುವೆಗಳಾದರೂ ಆಶ್ಚರ್ಯವಿಲ್ಲ. ಲಾಭಕ್ಕಾಗಿ ಏನು ಬೇಕಾದರು ಮಾಡುವ ಜನ ನಾವು.

  ೯. ಅವರೇ ಹೇಳಿದ ಇನ್ನೊಂದು ಅಂಶ ಹೆಚ್ಚು ಸೂಕ್ತ : …… [ ಇವರು ಜಾತಿರಹಿತರು, ನಿಜವಾದ ಭಾರತೀಯರು, ಜಾತ್ಯತೀತರು ಎಂದು ಇವರನ್ನು ಗುರುತಿಸುವಂತಾಗಬೇಕು. ]

  ಅಂತರ್ ಜಾತಿ/ ಧರ್ಮ ವಿವಾಹವಾದವರು ತಮ್ಮ ಜಾತಿ / ಧರ್ಮ / ಭಾಷೆ ಎನ್ನುವ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
  ಆ ನೆಲೆಗಟ್ಟನ್ನು ಮೀರಿ ತಾವು, ತಮ್ಮ ಮಕ್ಕಳು ಜಾತಿ / ಧರ್ಮ ರಹಿತ ಮಾನವರು ಎನ್ನುವುದು ಗಟ್ಟಿಯಾಗಿ ಪ್ರತಿಪಾದಿಬೇಕು. ಮತ್ತು ಅದು ಮಕ್ಕಳ ಮನಸ್ಸಲ್ಲೂ ಬೆಳೆಯಬೇಕು.

  ಇಲ್ಲವಾದಲ್ಲಿ ಈಗ ಹೆಚ್ಚಾಗಿ ಆಗುತ್ತಿರುವ ಹಾಗೆ, ಒಂದು ಜಾತಿ/ ಧರ್ಮದ ಪ್ರಾಬಲ್ಯವಾಗುತ್ತದೆಯೇ ಹೊರತು ಜಾತಿ ರಹಿತ , ಧರ್ಮ ರಹಿತ ಸಮಾಜ ಸಾಧ್ಯವಾಗಲಾರದು. ಮಕ್ಕಳು ತಂದೆಯ ಜಾತಿ/ಧರ್ಮವನ್ನೇ (dominant paradigm) ಆಧಾರವಾಗಿಸಿಕೊಳ್ಳುವ ಸಂದರ್ಭವೇ ಹೆಚ್ಚು, ಅದು ಪೂರ್ವಾಗ್ರಹ ಪೀಡಿತ ಸಮಾಜದೊಳಗೆ ಬದುಕುವ ಅನಿವಾರ್ಯ ಆಯ್ಕೆ.

  ಯಾಕಂದ್ರೆ, ಪ್ರತಿಯೊಂದು application ನಲ್ಲೂ ನಿಮ್ಮ ಜಾತಿ ಯಾವುದು, ನಿಮ್ಮ ಧರ್ಮ ಯಾವುದು ಎನ್ನುವ box ಗಳು ಇರುತ್ತವಲ್ಲ. ಅವುಗಳನ್ನು ತುಂಬದೇ ಇದ್ದರೆ ಎದುರಿಗಿರುವ clerk/officer ನೀವು ಬೇರೆ ಗ್ರಹದಿಂದ ಬಂದವರೇನೋ ಅಂತ ನೋಡ್ತಾರಲ್ಲಾ. (ಈಗ ಇವು optional ಆಗಿವೆ ಅಂತ ಅಂದ್ಕೊಂಡಿದ್ದೇನೆ … ಗೊತ್ತಿಲ್ಲ). ಆ embarrassment ಯಾರಿಗೆ ಬೇಕು. ಮತ್ತೆ ಹಾಗೆ ಪ್ರತಿ ಸಲ ಎಲ್ಲರಿಗೂ ಹೇಳ್ಕೊಂಡೇ ಇರ್ಬೇಕು ಅಲ್ವಾ. ನಾನು ಹುಟ್ಟಿದ್ದು ಅಂತರ್ ಜಾತಿ / ಧರ್ಮೀಯ ವಿವಾಹವಾದ ನನ್ನ ಅಪ್ಪ ಅಮ್ಮನಿಗೆ ಅಂತ.

  – ಈಗಾಗಲೇ ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ ಅಂತರ್ ಜಾತಿ ವಿವಾಹವಾಗಿದ್ದ ನನ್ನ ಒಬ್ಬ ಅಜ್ಜ-ಅಜ್ಜಿಯ (ನನ್ನ ಅಜ್ಜನ ತಮ್ಮ) ಮಕ್ಕಳ ಮದುವೆಯ ಸಂದರ್ಭದಲ್ಲಿ ( ಇಪ್ಪತ್ತು – ಇಪ್ಪ್ಪತೈದು ವರ್ಶಗಳ ಹಿಂದೆ) ಮತ್ತೆ ಅದೇ ಪ್ರಶ್ನೆಗಳು, ಅದೇ ಸಂದರ್ಭ, ಗೊಂದಲಗಳು – ಅವರನ್ನು ಕಾಡಿದ್ದವು. ಇನ್ನು ಈಗ ಅವರ ಮೊಮ್ಮಕ್ಕಳ ಸಂದರ್ಭದಲ್ಲೂ ಹೆಚ್ಚೇನೂ ಬದಲಾಗಲಿಲ್ಲ.!!!
  ಈಗಲೂ ಸಂದರ್ಭ ಹಾಗೇ ಇದೆ ಅಂದರೆ !!! ಮೀಸಲಾತಿಯಿಂದ ಕ್ರಾಂತಿ ಸಾಧ್ಯವೇ??? …ಕೆಲವೊಮ್ಮೆ ಅನ್ನಿಸುತ್ತದೆ!!!.

  ೧೦. ಬಹುಶಃ as a concept – ಮೀಸಲಾತಿ ಎನ್ನುವುದು ಆದರ್ಶ.
  ಆದರೆ ಅದು ಆಮಿಶವಾದರೆ … ಮದುವೆ ಅನ್ನುವುದೂ ರಾಜಕೀಯ ದಾಳವಾಗಿ … ಇನ್ನು ಏನೇನೋ ಹೊಸ ಹೊಸ ರೀತಿಯ ಸಮಸ್ಯೆಗಳು ಸೃಷ್ಟಿ ಮಾಡಿಕೊಳ್ಳಬಾರದಲ್ಲಾ ನಾವು. !!!

  ಹಾಗಾಗದೇ … ಸರಿಯಾಗಿ ಸಲ್ಲುವ ಪಾತ್ರರಿಗೇ ಅದು ದಕ್ಕಿದರೆ ಆಗ ಸಹಜವಾಗಿ ಹೋರಾಟದ ದಾರಿ ಸುಲಭವಾಗುತ್ತದೆ.
  ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. ! ಅದನ್ನು ಸಿದ್ಧಲಿಂಗಯ್ಯ ಶುರು ಮಾಡಿದ್ದಾರೆ.

  – ಹೇಮಶ್ರೀ

  ಪ್ರತಿಕ್ರಿಯೆ
 5. ಪ್ರದೀಪ್

  ಮೇಲ್ಜಾತಿ, ಕೆಳಜಾತಿ, ಮೀಸಲಾತಿ ಅನ್ನುವವು ಇರೋವರೆಗೆ ಏನೂ ಬಗೆಹರಿಯುವುದಿಲ್ಲ. ಜಾತಿಯೇ ಬೇಡ. ಬಿಟ್ಟುಹಾಕಿ ಅದನ್ನು. ಯಾರ ಜಾತಿಯನ್ನೂ ಕೇಳಬೇಡಿ. ಜಾತಿ ಅನ್ನುವುದನ್ನು ನಿಷೇಧಿಸಿ. ಮತ್ತೆ ಅಂತರ್ಜಾತಿಯೂ ಇಲ್ಲ ಇಂತರ್ಜಾತಿಯೂ ಇಲ್ಲ. ಬದಲಾವಣೆ ಬೇಕಿದ್ರೆ ಬದಲಾಗಲು ಮೊದಲು ಸಿಧ್ಧರಾಗಿ! ಅದು ಬಿಟ್ಟು ಮೇಲ್ಜಾತಿ, ಕೆಳಜಾತಿ, ಅಂತರ್ಜಾತಿ, ಮೀಸಲಾತಿ ಎಂದೆಲ್ಲ ವಿಂಗಡಿಸಿ ಸಮಾಜ ಒಡೆಯುವ ಕಾರ್ಯಕ್ಕೆ ಕೈ ಹಾಕಬೇಡಿ….

  ಪ್ರತಿಕ್ರಿಯೆ
 6. ಸಿದ್ದಮುಖಿ

  ಡಾ.ಸಿದ್ದಲಿಂಗಯ್ಯ ಅವರು ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ನೀಡುವಂತೆ ವಿಧಾನಪರಿಷತ್ ನಲ್ಲಿ ದನಿ ಎತ್ತಿದರು.ಹಿರಿಯ ವಕೀಲ ಪ್ರೊ. ರವಿ ವರ್ಮಕುಮಾರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೇಕಡ 2ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದರು.ಎಚ್.ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೀಡಿದ ಶಿಫಾರಸು ಈವರೆಗೂ ಈಡೇರಿಲ್ಲ. ಮೀಸಲಾತಿಯ ಪ್ರೋತ್ಸಾಹ ಅಲ್ಪಕಾಲದವರೆಗಾದರೂ ನೀಡಿದರೆ ಅದರ ಪ್ರಯೋಜನ ಪಡೆಯುವವರಿಗೆ ಅಲ್ಪಮಟ್ಟಿನ ನೆರವು ನೀಡಿದಂತಾಗಲಿದೆ.
  ಅಂತರ್ಜಾತಿ ವಿವಾಹಿತರ ರಾಜ್ಯ ಮಟ್ಟದ ಸಮಾವೇಶ ಮಾಡಬೇಕೆಂಬ ಬಗ್ಗೆ ಪ್ರೊ.ರವಿ ವರ್ಮಕುಮಾರ್ ಅವರ ನೇತೃತ್ವದಲ್ಲಿ ಚರ್ಚೆಯೂ ನಡೆಯಿತು.ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.ಅಂತರ್ಜಾತಿ ವಿವಾಹಿತರ ಸಂಘಟಿತ ಹೋರಾಟ ನಡೆದಿದ್ದರೆ ಒಳ್ಳೆಯದಿತ್ತು.

  ಹೇಮಾಶ್ರೀ ಅವರು ತಮ್ಮ ಕುಟಂಬದೊಳಗೆ ನಡೆದ ಸಂಘರ್ಷವನ್ನು ತೆರದಿಟ್ಟಿರುವುದು ಶ್ಲಾಘನೀಯ.
  – ಸಿದ್ದಮುಖಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: