ಚರ್ಚೆಗೆ ಬಾಗಿಲು ತೆರೆದಿದೆ

 
ಭಯೋತ್ಪಾದಕರ ಉದ್ದೇಶವನ್ನು ಮಾಧ್ಯಮದವರು ಈಡೇರಿಸಿದ್ರಾ ?
ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು? ಮಾಡಬಾರದು? ಎಲ್ಲಿಯವರೆಗೆ ಅದು ಆಕ್ರಮಿಸಿಕೊಳ್ಳಬೇಕು ಎಂಬ ಪ್ರಶ್ನೆ ಹಲವು ವಿಚಾರ, ಚರ್ಚೆಗೆ ಎಡೆ ಮಾಡಿ ಕೊಡುವಂತಿದೆ.
ಇದರೊಂದಿಗೆ ನಾವು ಮಾಧ್ಯಮ ಹಾಗೂ ಅದರ ಜವಾಬ್ದಾರಿಯನ್ನು ಚರ್ಚಿಸೋಣ. ದಯವಿಟ್ಟು ಪ್ರತಿಯೊಬ್ಬರೂ ಈ ಚರ್ಚೆಯಲ್ಲಿ ಭಾಗವಹಿಸಿ-
mumbai
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ತನಗೊಂದು ಲಕ್ಷ್ಮಣರೇಖೆ ತಾನೇ ಬರೆದುಕೊಳ್ಳುವ ತುರ್ತು ಅಗತ್ಯವನ್ನು ಮುಂಬೈ ಮೇಲಿನ ಉಗ್ರರ ದಾಳಿ ತೆರೆದಿರಿಸಿದೆ. ಡೆಮಾಕ್ರೆಸಿಯ ನಾಲ್ಕನೇ ಅಂಗವಾಗಿ ತಾನೇ ಡೆಮಾಕ್ರೆಸಿಯ ಗುತ್ತಿಗೆ ಹಿಡಿದ ತೆರದಲ್ಲಿ ಮಾಧ್ಯಮ ಭ್ರಮಿಸಿ ಕಾರ್ಯ ನಿರ್ವಹಿಸುತ್ತಿರುವಂತಿದೆ.
ಮುಂಬೈ ಮೇಲಿನ ಉಗ್ರರ ದಾಳಿ ಜಗತ್ತಿನ ಗಮನ ಸೆಳೆಯುವುದು ಮೂಲ ಉದ್ದೇಶವಾಗಿತ್ತು. ಭಯೋತ್ಪಾದನೆಯ ಭೀತಿಯನ್ನು ಸೃಷ್ಟಿಸುವುದರ ಮೂಲಕ ಭಾರತದಲ್ಲಿ ರಕ್ಷಣೆಯಿಲ್ಲದ ಅತಂತ್ರ ಸ್ಥಿತಿಯನ್ನು ಬಿಂಬಿಸಬೇಕಾಗಿತ್ತು. ಆ ಕೆಲಸವನ್ನು ಪರಿಣಾಮಕಾರಿಯಾಗಿ ತನಗರಿವಿಲ್ಲದೆಯೇ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ದೃಶ್ಯ ಮಾಧ್ಯಮಗಳು ಮಾಡಿದವೇ? ಎಂಬ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ.
ಪ್ರಜಾಪ್ರಭುತ್ವದ ಗುತ್ತಿಗೆದಾರರಂತೆ ವರ್ತಿಸುತ್ತಿರುವ ಮಾಧ್ಯಮಗಳ ಸರ್ವ ಶ್ರೇಷ್ಠತೆಯ ಬಗೆಗೂ ಚರ್ಚೆಗೆ ಇದು ಸಕಾಲ. ಮಾಧ್ಯಮಗಳಲ್ಲಿನ ಪರಸ್ಪರ ಪೈಪೋಟಿ ಎಂತಹ ಅತಿರೇಕಕ್ಕೆ ತಲುಪಬಹುದು ಎಂಬುದಕ್ಕೆ ಮುಂಬೈ ಮೇಲಿನ ದಾಳಿಯ ಸಂದರ್ಭದ ಸತತ ನಾಲ್ಕು ದಿನಗಳ ನಿರಂತರ ‘ಕಮೆಂಟರಿ’ ನೈಜ ಉದಾಹರಣೆಯಾಗಿದೆ.
ಭಾರತದ ಆಡಳಿತಗಾರರು ಬಫೂನ್ ಗಳು, ಪೋಲೀಸ್-ಸರಕಾರ ನಿಷ್ಪ್ರಯೋಜಕ ಎಂಬ ಧಾಟಿಯಲ್ಲಿ ನಡೆದ ಚರ್ಚೆ, ಉಗ್ರರನ್ನು ಮಟ್ಟ ಹಾಕಿದ ನಂತರ ‘ಯುದ್ಧಗೆಲ್ಲಿಸಿಕೊಟ್ಟ’ ವೀರರಂತೆ ಬೀಗಿದ ರೀತಿ ಅಸಹ್ಯ ಹುಟ್ಟಿಸುವ ತೆರದಲ್ಲಿತ್ತು. ಪೈಪೋಟಿಯ ವರದಿಯ ಭಾವೋದ್ವೇಗದಲ್ಲಿದ್ದ ಮಾಧ್ಯಮಗಳು ‘ಗೌಪ್ಯತೆಯ’ ಜವಾಬ್ದಾರಿಯನ್ನು ಗಾಳಿಗೆ ತೂರಿದ್ದು ಗಮನಾರ್ಹವಾಗಿತ್ತು.
‘ಎಕ್ಸ್ಕ್ಲೂಸಿವ್’ ಭರಾಟೆಯಲ್ಲಿ ಸ್ಥಿಮಿತತೆ ಕಳೆದುಕೊಂಡ ಅದೆಷ್ಟು ವರದಿಗಳು ಕಾರ್ಯಾಚರಣೆಗೆ ಅಡ್ಡಿಯಾದವು. ಸೂಕ್ತ ಜ್ಙಾನವಿಲ್ಲದ, ತರಬೇತಿ ಇಲ್ಲದ ವರದಿಗಾರಿಕೆಯ ಅಪಾಯವೂ ಬಯಲಾಯಿತು. ಶ್ರೀಮಂತರ ಆವಾಸ ಸ್ಥಾನಗಳಾದ ಮುಂಬೈನ ತಾಜ್, ಓಬಿರಾಯ್, ಟ್ರಿಡೆಂಟ್ ನಂತಹ ಹೋಟೆಲ್ ಗಳ ಮೇಲಿನ ದಾಳಿ ಉಗ್ರರು ಪ್ರಪಂಚದ ಗಮನಸೆಳೆಯಲೆಂದೇ ನಡೆಸಿದ ಕೃತ್ಯ.
ಈ ಉದ್ದೇಶವನ್ನು ಈಡೇರಿಸಲು ಮಾಧ್ಯಮಗಳು ಸಹಕರಿಸಿದವು ಎಂಬ ಅಭಿಪ್ರಾಯ ಕೇಳಿ ಬಂತು. ಅದೇ ಸಂದರ್ಭದಲ್ಲಿ ದಾಳಿಗೊಳಗಾಗಿ ಮಡಿದ ನೂರಾರು ಜೀವಗಳ, ಬದುಕುಗಳ ಬಗ್ಗೆ ಗಮನ ಕೊಡಲು ಮಾಧ್ಯಮಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಇದೇ ಸಂದರ್ಭದಲ್ಲಿ ಲಾಭಕೋರ ಮಾಧ್ಯಮ ಮಾಲೀಕರು, ಆಡಳಿತಗಾರರು ಇಂತಹ ವರದಿಗಾರಿಕೆಯ ಹೊಣೆಯನ್ನು ಸಿಬ್ಬಂದಿಗೆ ರವಾನಿಸುವಾಗಲೇ ಅವರ ರಕ್ಷಣೆಯ ಬಗ್ಗೆ ಅದೆಷ್ಟು ಜವಾಬ್ದಾರರು ಎಂಬುದೂ ಕೂಡ ಪ್ರಶ್ನಾರ್ಹ.
1129080159131_450
‘ಸುದ್ದಿಮನೆ ಸೈನಿಕರು’ ಎಂಬ ಬಿರುದಿದ್ದರೆ ಸಾಲದು, ಅದಕ್ಕೆ ಪೂರಕವಾದ ಸಿದ್ಧತೆಯನ್ನು ಮಾಡಬೇಕಾದ ಅನಿವಾರ್ಯತೆ ಖಂಡಿತಾ ಮಾಧ್ಯಮದ ಮುಂದಿದೆ. ಅಂತಹ ಸಂದಿಗ್ದತೆಯಲ್ಲಿನ ಒತ್ತಡ, ಆತಂಕ, ಉದ್ವೇಗ, ಸವಾಲುಗಳನ್ನು ನಿಭಾಯಿಸ ಬೇಕಾಗಿದೆ. ಆಧುನಿಕ ಭಯೋತ್ಪಾದನೆಯ ವರದಿಗೆ ವರದಿಗಾರರನ್ನು ತಯಾರು ಮಾಡಬೇಕಾಗಿದೆ.
ಕ್ಷಣಕ್ಷಣದ ಘಟನಾವಳಿಗಳ ‘ಲೈವ್’ ವರದಿಗೆ ಒಂದು ಲಕ್ಷ್ಮಣರೇಖೆ ಎಳೆದು ಕೊಳ್ಳಬೇಕಾದ ಅಗತ್ಯವಿದೆ. ದೇಶದ ಸಮಗ್ರತೆ, ಗೌಪ್ಯತೆಯ ಅರಿವು ವರದಿಗಿರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವರದಿಗಾರಿಕೆಗೆ ಎದೆಯೊಡ್ಡಲು ಕಳುಹಿಸುವ ಮಾಧ್ಯಮ ನಿರ್ವಾಹಕರು ಪತ್ರಕರ್ತರಿಗೆ ಪೈಪೋಟಿಯನ್ನು ಮೀರಿ ಅವರಿಗೆ ರಕ್ಷಣೆ, ವಿಪತ್ತು ನಿರ್ವಹಣೆಯ ತರಬೇತಿ ಕೊಡಬೇಕಾಗಿದೆ. ಜೀವವನ್ನು ಒತ್ತೆಯಿಟ್ಟು ಸುದ್ದಿ ನೀಡುವ ಸುದ್ದಿ ಮನೆ ಸೈನಿಕರ ಜೀವಗಳಿಗೂ ಪತ್ರಕರ್ತ ಎನ್ನುವ ಕಿರೀಟವನ್ನೂ ಮೀರಿದ ರಕ್ಷಣೆ ಬೇಕಾಗಿದೆ.
-ಲೀಲಾ ಸಂಪಿಗೆ 
ಚಿತ್ರ ಕೃಪೆ: ಇಂಡಿಯಾ ಟುಡೆ

‍ಲೇಖಕರು avadhi

December 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

8 ಪ್ರತಿಕ್ರಿಯೆಗಳು

 1. guru

  leela avaru heliddu correct. yake andre namma hage ugraru t v nodta irtare avarigu ella vishaya tilidu bidutte. adakke adannu live toriso badalu. karyacharane pura adamele torisidare olleyadu alva?

  ಪ್ರತಿಕ್ರಿಯೆ
 2. ನೀಲಾಂಜಲ

  enu sarino tappo gottilla, adre kaleda muru nalku dinadinda nanu sariyagi paper odutta illa. sambhanda patta suddi noduttilla. Terrorist vandu jeep tappisi kondiddarante, taj nalli iddavaru hostage dress hakkondu horage bandiddarante, ninne aste live RDX bomb CSTnalli sikkitante………suddi keli mane horage kalidalo beda annistide. nijavaglu terror andre enu anta svalpa anubhava agide. kanninda nodidavaru, adannu anubhavisidavaru E terror annu life timenalli mareyolla. haganta hedrakondu manele irake agutta. luck chennagiro tanaka badukodu mattu life edurisodu.

  ಪ್ರತಿಕ್ರಿಯೆ
 3. parasurama kalal

  ಲೀಲಾ ಸಂಪಿಗೆ ಅವರು ಎತ್ತಿರುವ ಪ್ರಶ್ನೆ ಬಹಳ ಮುಖ್ಯ. ಇದು ಭಯೋತ್ಪಾದನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಮೂಲಭೂತವಾದಿಗಳಿಗೂ ಸಂಬಂಧಿಸಿದ್ದಾಗಿದೆ ಎನ್ನುವುದು ನನ್ನ ಸೇರ್ಪಡೆ.
  ಮೂಲಭೂತವಾದಿ ಸಂಘಟನೆಯ ಯಾವುದೇ ತಲೆತಿರುಕ ಏನಾದರೂ ಮಾತನಾಡಿದರೂ ಅದು ಆಲ್ ಎಡಿಸನ್ ಸುದ್ದಿಯಾಗುತ್ತದೆ. ಸೆನ್ಸೆಷನಲ್ ಎಂಬ ಹೆಸರಲ್ಲಿ ಆ ಸುದ್ದಿಗೆ ಪ್ರಾಮುಖ್ಯತೆ ಸಿಗುತ್ತದೆ.
  ಸುದ್ದಿ ಮಾಧ್ಯಮದದಲ್ಲಿ ಬಹಳ ವರ್ಷಗಳ ಕಾಲ ಕೆಲಸ ಮಾಡಿದ ನನ್ನ ಅನುಭವವೆಂದರೆ ಕೆಲವೇ ಕೆಲವು ಬೆರಳೆಣಿಕೆಯ ಜನರು ನಡೆಸುವ ಇಂತಹ ಪ್ರತಿಭಟನೆಗಳಿಗೆ ಮಾಧ್ಯಮಗಳೇ ದೊಡ್ಡ ಪ್ರಚಾರ ನೀಡುತ್ತವೆ. ಮಾಧ್ಯಮದವರು ಬರುವವರಿಗೆ ಅವರು ಪ್ರತಿಭಟನೆಯನ್ನೇ ನಡೆಸುವುದಿಲ್ಲ.. ಮಾಧ್ಯಮದವರು ಬಂದ ಮೇಲೆಯೇ ಅವರು ಪ್ರತಿಭಟನೆ ನಡೆಸಿ ಬಂಧಿತರಾಗುತ್ತಾರೆ. ಹಂಪಿಯಲ್ಲಿ ಕೋಮುವಾದಿಗಳು ಇಂತಹ ಕೆಲಸ ನಡೆಸಿಯೇ ರಾಜ್ಯಾದ್ಯಾಂತ ಸುದ್ದಿಗೆ ಪಾತ್ರರಾಗಿದ್ದಾರೆ. ಹಿರೋಗಳಾಗಿ ಮೆರೆದಿದ್ದಾರೆ. ಮಾಧ್ಯಮದವರು ಯಾರು ಅಲ್ಲಿಗೆ ತೆರಳದೇ ಅದನ್ನು ಉಪೇಕ್ಷೆ ಮಾಡಿದರು ಅಂತಾ ಇಟ್ಟುಕೊಳ್ಳಿ. ಆಗ ಅವರ ಧ್ವನಿಯೇ ಉಡುಗಿ ಹೋಗುತ್ತದೆ. ಈ ಬಗೆಯಲ್ಲೂ ಚರ್ಚೆ ನಡೆಯಬೇಕು ಎನ್ನುತ್ತೇನೆ ನಾನು.
  – ಪರುಶುರಾಮ ಕಲಾಲ್

  ಪ್ರತಿಕ್ರಿಯೆ
 4. gnanadev

  ಮಾಧ್ಯಮದವರು ಈ ಹೇಯ ಘಟನೆಯ ವೇಳೆಗೆ ರಾಜಕಾರಣಿಗಳನ್ನು ಹೇಗೆ ಬಹಿಷ್ಕರಿಸಬೇಕು ಎ೦ದು ಹೇಳಿದ್ದರೋ ಹಾಗೆಯೇ ಮಾಧ್ಯಮದವರಿಗೂ ಬಹಿಷ್ಕಾರ ಅಗತ್ಯ. ಸ್ವಲ್ಪ ಅ೦ಕೆ, ಹಿಡಿತ ಅವಶ್ಯ. ಈ ಘಟನೆಯನ್ನು ಯಾವುದೋ ಒ೦ದು ಫಿಲ್ಮ್ ಚಿತ್ರೀಕರಣದ೦ತೆ ಮಾಡಿದ್ದನ್ನು ನಾವೆಲ್ಲರೂ ಖ೦ಡಿಸಬೇಕು. ಒ೦ದು ಮಿತಿಯಲ್ಲಿ ಇರಬೇಕು. ಎಲ್ಲರೂ ವಿವೇಕದಿ೦ದ ವರ್ತಿಸುವ ಅಗತ್ಯವಿದೆ

  ಪ್ರತಿಕ್ರಿಯೆ
 5. ಸಂದೀಪ್ ಕಾಮತ್

  ಒಂದು ದೃಷ್ಟಿಯಲ್ಲಿ ನೋಡಿದ್ರೆ ಮಾಧ್ಯಮದವರು ಮಾಡಿದ್ದು ತಪ್ಪು.ಆದ್ರೆ at the same time ಟಿವಿ ಮುಂದೆ ಕೋಟ್ಯಾಂತರ ಜನ ಕಣ್ಣು ಮಿಟುಕಿಸದೆ ಕೂತಿದ್ರೂ ಅನ್ನೋದೂ ನಿಜ. ಜನರಿಗೆ ಮಾರನೇ ದಿನದ ಪೇಪರ್ ನಲ್ಲಿ ಬರೋ ನ್ಯೂಸ್ ನೋಡೋ ಅಷ್ಟು ವ್ಯವಧಾನವೂ ಇಲ್ಲ ಬಿಡಿ. ಈಗ ತೋರಿಸಿದ ನ್ಯೂಸೇ ಇನ್ನು ಒಂದು ಘಂಟೆ ಬಿಟ್ಟು ತೋರಿಸಿದ್ರೆ ’ಬಡ್ಡಿ ಮಕ್ಕಳು ತೋರಿಸಿದ್ದೇ ತೋರಿಸ್ತಾರೆ, ಏನೂ ಹೊಸದು ತೋರಿಸ್ತಾ ಇಲ್ಲ ’ ಅಂತ ಬಯ್ಯೋದೂ ನಾವೇ ಅಲ್ವ??
  ಒಂದು ಕಾಲ ಇತ್ತು ಪಕ್ಕದ ಊರಿನಲ್ಲಿ ಭೂಕಂಪ ಆಗಿ ಸತ್ರೂ ರಾತ್ರಿ ೮.೩೦ ಕ್ಕೆ ಡಿಡಿ ನ್ಯೂಸ್ ನೋಡಿನೇ ಅಥವಾ ಮಾರನೇ ದಿನ ಪ್ರಜಾವಾಣಿ ನೋಡಿನೇ ಗೊತ್ತಾಗೋ ಪರಿಸ್ಥಿತಿ ಇತ್ತು.
  ಆದ್ರೆ ಈಗ ಇನ್ಸ್ಟಂಟ್ ಕಾಫಿ ಥರ ಎಲ್ಲ ಥಟ್ ಅಂತ ಬರಬೇಕು. ಇಂಟರನೆಟ್ ಪೇಜ್ ಸ್ವಲ್ಪ ತಡವಾಗಿ ಓಪನ್ ಆದ್ರೂ ಬಿ.ಎಸ್.ಎನ್.ಎಲ್ ಗೆ ಹಿಡಿ ಶಾಪ ಹಾಕಿನೇ ಮುಂದೆ ಪಯಣ ನಮ್ಮದು!
  ನನಗೆ ಗೊತ್ತಿರೋ ಪ್ರಕಾರ ನ್ಯೂಸ್ ಚ್ಯಾನೆಲ್ ನವರು ಡಿಲೇಡ್ ಲೈವ್ ತೋರಿಸಿದ್ದು .ನಾನು ನೋಡಿದ್ದು ಟೈಮ್ಸ್ ನೌ ಹಾಗಾಗಿ ಅರ್ನಾಬ್ ಪದೇ ಪದೇ ’ನೀವು ನೋಡ್ತಾ ಇರೋದು ಅರ್ಧ ಘಂಟೆ ಹಿಂದೆ ರೆಕಾರ್ಡ್ ಮಾಡಿರೋದು ’ ಅಂತ ಪದೇ ಪದೇ ಹೇಳ್ತಾ ಇರೋದು ನಾನೇ ನೋಡಿದ್ದೆ.
  ಆದರೂ ಮಾಧ್ಯಮದವ್ರು ಎಚ್ಚರವಾಗಿರ್ಬೇಕು ನಿಜ.ಆ ಉಗ್ರಗಾಮಿ ಚಡ್ಡಿಯ ಕಲರ್ ನಿಂದ ಹಿಡಿದು ಎಲ್ಲ ಹೇಳಿ ಬಿಡ್ತಾರೆ. ಅದು ನಿಜ ಹೇಳ್ತಾರೋ ಊಹಿಸಿ ಹೇಳ್ತಾರೋ ದೇವರಿಗೇ ಗೊತ್ತು!
  ಇದನ್ನು ಉಗ್ರಗಾಮಿಗಳು ನೋಡಿ ಮುಂದಿನ ಸ್ಟ್ರಾಟೆಜಿ ಮಾಡೋದೂ ನಿಜ!
  ನೀವೇನೆ ಹೇಳಿ ಲೈವ್ ಅನ್ನೋದು ಜನರ ಹಾಸುಹೊಕ್ಕಾಗಿ ಬಿಟ್ಟಿದೆ.ಕೇವಲ ಏಳು ನಿಮಿಶ ಡೀಲೇ ಮಾಡಿ ತೋರಿಸೋ ಕ್ರಿಕೆಟ್ ಮಾಚೇ ನಮಗೆ ಬೇಡ ಅಂತ ಹೆಳಿದ್ದು ನಾವೇ ಅಲ್ವ??
  ಅದಿನ್ನ್ನೇನು ಲೈವ್ ನೋಡ್ತೀವೊ ನಾವು!!!(ಅಮೆರಿಕಾದಲ್ಲಿ ಮಿಲನ ಮಹೋತ್ಸವವನ್ನೆ ಲೈವ್ ತೋರಿಸ್ತಾರಂತೆ ಕಾಸ್ ಕೊಟ್ರೆ! )

  ಪ್ರತಿಕ್ರಿಯೆ
 6. ಡಿ.ಎಸ್.ರಾಮಸ್ವಾಮಿ

  ಮಾಧ್ಯಮ ಇಲ್ಲದಿದ್ದರೆ ಬರಿಯ ಗಾಸಿಪ್ಗಳಲ್ಲೇ ಸುದ್ದಿಗಳನ್ನು ಕೇಳಿ ಇನ್ನಷ್ಟು ಭಯ ಜಾಸ್ತಿಯಾಗುತಿತ್ತು.ಬ್ರೇಕಿಂಗ್ ನ್ಯೂಸ್ ನಮ್ಮೆದೆ ಗುಂಡಿಗೆಗಳ ಕೆಲಸ ಎಪರಾ ತೆಪರಾ ಮಾಡುತ್ತಿದೆಯಾದರೂ ಕನಿಷ್ಠ ಎಚ್ಚರಿಕೆಯ ಗಂಟೆ ಬಾರಿಸುವುದು ನಿಜ ತಾನೆ? ಮುಖ್ಯ ನಮ್ಮ ವ್ಯವಸ್ಥೆಯ ಅವ್ಯವಸ್ಥೆ. ಒಬ್ಬ ಉಗ್ರವಾದಿ/ ನಕ್ಸಲೈಟ್ ಜನಮಾನಸವನ್ನು ಕಲಕುವಷ್ಟು ಬೆಳೆಯುವುದಕ್ಕೆ ಬಿಟ್ಟದ್ದು ಯಾರ ತಪ್ಪು? ಮಾಧ್ಯಮಗಳ ವರದಿಗಾರಿಕೆ ಇಲ್ಲದೇ ಇದ್ದರೆ ನಮಗೆ ಗತಿಯಾಗುತ್ತಿದ್ದುದು ಕಬ್ಬಿಣದ ಪರದೆಯೇ! ಹೌದು, ಕೆಲವೊಮ್ಮೆ ಇವರ ಅತಿರಂಜಿತ ಮತ್ತು ಅವಸರದ ವರದಿಗಳು ಗಾಬರಿ ಹುಟ್ಟಿಸಿ ಮತ್ತೇನನ್ನೋ ಮಾಡಿವೆ, ನಿಜ. ಕತ್ತರಿ ಇರುವುದು ಕತ್ತರಿಸಲಿಕ್ಕೆ ಆದರೆ ಏನನ್ನು ಅಂತ ಉಪಯೋಗಿಸುವವರು ನಿರ್ಧರಿಸಬೇಕು. ಮತ್ತೊಂದು ವಿಷಯ; ವಿಶೇಷ ಇಲ್ಲದ್ದು ಸುದ್ದಿಯಾಗುಲ್ಲ. ನಾಯಿ ಮನುಷ್ಯನನ್ನು ಕಚ್ಚಿದರೆ ಸುದ್ದಿ ಅಲ್ಲ; ಅದೇ ಮನುಷ್ಯ ನಾಯಿ ಕಚ್ಚಿದರೆ ಸುದ್ದಿ. ಏನು ಮಾಡೋಣ? ಪಾರ್ಲಿಮೆಂಟಿಗೆ ನುಗ್ಗಿದ್ದ ಟೆರರಿಸ್ಟ್ ಗಳಿಗೆ ಮುಂಬೈ ಯಾವ ಮಹಾ ಲೆಕ್ಕ? ಮೊದಲು ನಮ್ಮ ವ್ಯವಸ್ಥೆ ಸರಿಪಡಿಸಬೇಕು.ದೇಶಾಭಿಮಾನ ನಮ್ಮ ಅನುದಿನದ ಹಸಿವು, ನಿದ್ರೆ, ಮೈಥುನದಷ್ಟೇ ನಮ್ಮನ್ನು ಕಾಡಿದರೆ ಇದಕ್ಕೆಲ್ಲ ಒಂದು ಅಂತ್ಯ ಸಿಕ್ಕೀತು.ಅದಕ್ಕೆ ಮೊದಲು ತುಷ್ಟೀಕರಣ ರಾಜಕೀಯನೀತಿ ಇರುವ ಎಲ್ಲ ಪಕ್ಷಗಳನ್ನೂ ನಮ್ಮೆದೆಯಿಂದ ಉಚ್ಛಾಟಿಸಬೇಕು-ಡಿ.ಎಸ್.ರಾಮಸ್ವಾಮಿ

  ಪ್ರತಿಕ್ರಿಯೆ
 7. VRCARPENTER

  VRCARPENTER
  ಮಾದ್ಯಮ ಮಿತ್ರರು ಜೀವದ ಹಂಗು ತೊರೆದು ಯೋಧರ ರೀತಿ ಹೋರಾಡಿದ್ದಾರೆ ಎಂಬುದನ್ನು ಮರೆಯಬರದು ಲೀಲಾ ಅವ್ರೆ. ಭಯೋತ್ಪಧಕರು ವಿಜಯಿಯಾಗಿದ್ದಾರೆ, ನಿಜ ಆದ್ರೆ ಅದಕ್ಕೆ ಕಾರಣ ನಮ್ಮ ಭದ್ರತಾ ವೈಪಲ್ಯವೇ ಹೊರತು ಅದು ಮಾಧ್ಯಮದವರ ತಪ್ಪಿನಿಂದಾಗಿಯೇ ಹೀಗೆಲ್ಲ ಆಯಿತು ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ. ನೀವೇನೋ ಇಲ್ಲಿ ಬೆಂಗಳೂರಿನಲ್ಲಿ ಇಲ್ಲಿ ಇದ್ದುಬಿಡುತ್ತೀರ ಅಂದುಕೊಂಡರೆ ಅಲ್ಲಿ ಹೋಟೆಲ್ಗಳಲ್ಲಿ ಸಿಕ್ಕಿ ಹಾಕಿಕೊಂಡ ಕುಟುಂಬದವರ ಗತಿ ಏನು? ಎಂದು ಸ್ವಲ್ಪ ಯೋಚಿಸಿ ನೋಡಿ. ಅವರ ತಳಮಳಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು.

  ಪ್ರತಿಕ್ರಿಯೆ
 8. minchulli

  ವರದಿ ಮಾಡಬೇಕಾದ ಅನಿವಾರ್ಯತೆಯ ನಡುವೆಯೇ ಆತ ಅಲ್ಲಿನ ಪರಿಸ್ಥಿತಿ ತಂದೊಡ್ಡುವ ಆತಂಕ, ಉದ್ವೇಗಗಳ ಸವಾಲುಗಳನ್ನು ನಿಭಾಯಿಸ ಬೇಕಾಗಿದೆ. ಅಸುರಕ್ಷತೆ ಕಾಡುತ್ತಲೇ ಇರುವುದಲ್ಲದೆ ಸಾವು ತನ್ನ ಬೆನ್ನ ಹಿಂದೆಯೇ ಹೊಂಚು ಹಾಕಿ ಕುಳಿತಿದೆ ಎಂಬ ಸತ್ಯವನ್ನು ಕೂಡ ಆತ ಒಪ್ಪಿಕೊಂಡು ಕರ್ತವ್ಯಕ್ಕೆ ನ್ಯಾಯ ಒದಗಿಸ್ಬೇಕಿದೆ.
  ಅದರ ಜತೆಗೇ ತಮ್ಮ ವರದಿಗೆ ಲಕ್ಷ್ಮಣರೇಖೆ ಎಳೆದು ಕೊಳ್ಳಬೇಕಾದ ಅಗತ್ಯವಿದೆ. ದೇಶದ ಆಂತರಿಕ ಭದ್ರತೆಯ ಕೆಲವು ಗೌಪ್ಯತೆಗಳನ್ನೂ ಅಲ್ಲದೆ ಹೋರಾಡಿ ಮಡಿಯುತ್ತಲೇ ಇರುವ ಜೀವಗಳ ಹಿಂದಿನ ಶ್ರಮವನ್ನೂ ಆತ ಗಮನದಲ್ಲಿಟ್ಟುಕೊಂಡೇ ಮಾತಾಡಬೇಕಿದೆ. ತಮ್ಮ ಜೀವವನ್ನು ಒತ್ತೆಯಿಟ್ಟು ಸುದ್ದಿ ನೀಡುವ ಕ್ಷಣದಲ್ಲಿ ಎಂಥ ಹಿರಿಯ ಪತ್ರಕರ್ತ ಕೂಡ ತಪ್ಪು ಮಾಡಬಹುದು. ಅದಾಗದಂತೆ ಅವರಿಗೆ ತರಬೇತಿಯ ಅವಶ್ಯಕತೆ ಇದೆ. ಇನ್ನು ಉಳಿದ ಮಾಧ್ಯಮಗಳ (ದೃಶ್ಯ/ಪತ್ರಿಕೆ) ಜತೆ ಪೈಪೋಟಿಗೆ ಬಿದ್ದು ಜಯಿಸುವ ಹುಮ್ಮಸ್ಸಿನಲ್ಲಿ ತಮ್ಮ ವಿವೇಚನೆ ಕಳೆದುಕೊಳ್ಳದೆ ದೇಶದ ರಕ್ಷಣಾ ವಿಚಾರಗಳಿಗೆ ಸಂಬಂಧಿಸಿದಂತೆ ತಮಗೆ ತಿಳಿದ ಎಲ್ಲವನ್ನೂ ಬಯಲಾಗಿಸದೆ ಇರುವ ಆದ್ರೆ ಅವಶ್ಯಕ ಎನಿಸಿದ್ದನ್ನು ಬಿಡದೆ ಹೇಳುವ ಜಾಣ್ಮೆಯನ್ನು ಮಾಧ್ಯಮಗಳು ಬಹಳಷ್ಟು ಕಲಿಯಬೇಕಿದೆ. ಇಂದಿನ ಆಧುನಿಕ ಭಯೋತ್ಪಾದನಾ ಜಗತ್ತಿನಲ್ಲಿ ನಮ್ಮನ್ನು ನಾವು ರಕ್ಷಿಸುವತ್ತ ತೃಣ ಮಾತ್ರ ಪ್ರಯತ್ನವಾದರೂ ಇದರಿಂದ ಆಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಅದಕ್ಕೇ ಹೇಳಿದ್ದು “ಮಾತೇ ಮುತ್ತು; ಮಾತೇ ಮೃತ್ಯು”

  ಪ್ರತಿಕ್ರಿಯೆ

Trackbacks/Pingbacks

 1. ಕ್ರೈಂ ಸ್ಟೋರಿ ಥರ ಎಂಜಾಯ್ ಮಾಡ್ತಿದ್ರು « ಅವಧಿ - [...] ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಲೀಲಾ ಸಂಪಿಗೆ. ಮುಬೈನಲ್ಲಿ ಉಗ್ರರ ಅಟ್ಟಹಾಸವನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ನೋಡಿದ ಲೀಲಾ ಅವರು ಈ ಪ್ರಶ್ನೆ ಎತ್ತಿದ್ದಾರೆ. ಮಾಧ್ಯಮಗಳು ಏನು ಮಾಡಬೇಕು?…

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: