ಚಳಿಗಾಲದಲ್ಲಿ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಡಿಸೆಂಬರ್ ಬಂತೆಂದರೆ ದಿಲ್ಲಿ ಶಹರವು ಅಕ್ಷರಶಃ ರೆಫ್ರಿಜರೇಟರ್ ಆಗಿಬಿಡುತ್ತದೆ.

ಅತ್ತ ಕಾಶ್ಮೀರದಲ್ಲೆಲ್ಲೋ ಹಿಮಪಾತ. ಶಿಮ್ಲಾ ಬಿಳಿಯ ಚಾದರವನ್ನು ಹೊದ್ದು ಮತ್ತಷ್ಟು ಆಕರ್ಷಕವಾಗಿಬಿಡುತ್ತದೆ. ಮರುಭೂಮಿಯ ನಾಡಾದ ರಾಜಸ್ಥಾನದಲ್ಲೂ ಚಳಿಯ ಗಡಗಡ. ಇವುಗಳ ಮುಂದುವರಿದ ಭಾಗವೇನೋ ಎಂಬಂತೆ ದೇಶದ ಬಹುತೇಕ ಪತ್ರಿಕೆಗಳು ದಿಲ್ಲಿಯು ಹೊಸ ಸಂವತ್ಸರಕ್ಕೆ ಕಾಲಿಟ್ಟ ಬಗ್ಗೆ ಮುಖಪುಟ ವರದಿಗಳನ್ನು ಪ್ರಕಟಿಸುತ್ತವೆ. ಇತ್ತ ದಿಲ್ಲಿ ನಿವಾಸಿಗಳು ಚಳಿಗಾಲವನ್ನು ಎದುರುಗೊಳ್ಳುವ ಸಂಭ್ರಮದಲ್ಲೇ ಸಣ್ಣಗೆ ನಡುಗುತ್ತಿರುತ್ತಾರೆ. ಬೇಸಿಗೆಯ ನಿರ್ದಯ ಧಗೆಯಂತೆ ಇಲ್ಲಿ ಚಳಿಯೂ ಭೀಕರ.

ದಿಲ್ಲಿಗೆ ಬಂದ ಹೊಸದರಲ್ಲಿ ಶಹರದ ಚಳಿಯು ನನ್ನನ್ನು ಅಕ್ಷರಶಃ ಕಂಗಾಲಾಗಿಸಿತ್ತು. ಚಳಿಯನ್ನೇ ಕಂಡಿರದಿದ್ದ ನನ್ನಂತಹ ಕರಾವಳಿ ಕರ್ನಾಟಕದ ಮಂದಿಗೆ ಇದೊಂದು ಸವಾಲೇ ಸರಿ. ಬೆಚ್ಚಗಿನ ಆಫೀಸಿನಲ್ಲಿ ಕುಳಿತು ಮಾಡುವ ಉದ್ಯೋಗವಾದರೂ ಮನೆಯಿಂದ ಆಫೀಸಿಗೆ ಬರುವಷ್ಟರಲ್ಲಿ ಚಳಿಯಿಂದಾಗಿ ಬೆರಳುಗಳು ಮರಗಟ್ಟಿದಂತಹ ಅನುಭವ. ಅವುಗಳಿಗೆ ಕೀಬೋರ್ಡು ಕುಟ್ಟಲೂ ಆಗದಷ್ಟಿನ ಧಾಡಸೀತನ. ಕಿವಿ, ಕತ್ತು, ಪಾದಗಳನ್ನು ನಾಜೂಕಾಗಿ ಸೋಕುವ ಚಳಿಯು ಇಂಚಿಂಚಾಗಿ ಇಡೀ ಮೈಯನ್ನು ಆವರಿಸಿಕೊಂಡಂತಹ ಅನುಭವ.

ಉತ್ತರಭಾರತದ ಹೆಚ್ಚಿನ ಸರ್ಕಾರಿ ಆಫೀಸುಗಳಲ್ಲಂತೂ ಚಳಿಗಾಲವೆಂದರೆ ಆಲಸ್ಯದ ಪರಮಾವಧಿ. ವೃತ್ತಿಯ ಆರಂಭದ ದಿನಗಳಲ್ಲಿ ಉತ್ತರಪ್ರದೇಶದ ಕೆಲ ಸರ್ಕಾರಿ ಕಾರ್ಯಾಲಯಗಳಿಗೆ ಪರಿಶೀಲನೆಯ ನಿಮಿತ್ತ ಹೋಗಿದ್ದ ನಾನು ಅಲ್ಲಿಯ ವಾತಾವರಣವನ್ನು ಕಂಡು ದಂಗಾಗಿದ್ದೆ. ಹಾಗಂತ ಅದೇನೂ ಗತಕಾಲವಲ್ಲ. ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತಷ್ಟೇ.

ಬಯೋಮೆಟ್ರಿಕ್ ವ್ಯವಸ್ಥೆಯು ಆಗಿನ್ನೂ ಕಾರ್ಯರೂಪಕ್ಕೆ ಬಂದಿಲ್ಲದ ಆ ಕಾಲದಲ್ಲಿ ಹಿರಿಯ ಅಧಿಕಾರಿಗಳು ಮಧ್ಯಾಹ್ನದ ಹನ್ನೆರಡು ಗಂಟೆಯವರೆಗೆ ಆಫೀಸು ತಲುಪುತ್ತಿದ್ದರು. ಥೇಟು ಮದುವೆಯ ಊಟಕ್ಕಷ್ಟೇ ಬರುವ ಅತಿಥಿಗಳಂತೆ. ಈ ಬಗ್ಗೆ ಚೆನ್ನಾಗಿ ಅರಿವಿದ್ದ ಕಿರಿಯ ಉದ್ಯೋಗಿಗಳು, ಕಿರಿಕಿರಿ ಉದ್ಯೋಗಿಗಳೂ ಕೂಡ ಆರಾಮಾಗಿ ಬಂದು ತಮ್ಮ ಕುರ್ಚಿಗಳನ್ನು ಬಿಸಿ ಮಾಡಿ ಮರಳುತ್ತಿದ್ದರು. ಇನ್ನು ಚಳಿಯ ನೆಪದಲ್ಲಿ ಭರಪೂರ ಹರಟೆ, ಮೂಲೆಯಲ್ಲಿ ಹೇರಿಟ್ಟ ಸೌದೆಯ ಬಿಸಿ ಮತ್ತು ಸವಿಯಲು ಗರಿಗರಿ ಮೂಫ್ಲೀ (ಶೇಂಗಾ)! ಎಲ್ಲೆಲ್ಲಿಂದಲೋ ಬರುತ್ತಿದ್ದ ಟೆಲಿಫೋನು ಕರೆಗಳು ತಮ್ಮ ಪಾಡಿಗೆ ಬಡಿದುಕೊಂಡು ಸುಮ್ಮನಾಗುತ್ತಿದ್ದಿದ್ದಕ್ಕೆ ಕಚೇರಿಯ ಬಣ್ಣ ಮಾಸಿದ ಗೋಡೆಗಳೇ ಸಾಕ್ಷಿ.

ಇಂದಿಗೂ ಪರಿಸ್ಥಿತಿಯು ಹೆಚ್ಚೇನೂ ಬದಲಾಗಿಲ್ಲ. ಹಾಜರಾತಿಯ ಬಗ್ಗೆ ತೀರಾ ಕಟ್ಟುನಿಟ್ಟಾಗಿರುವ ಬೆರಳೆಣಿಕೆಯ ಸರಕಾರಿ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದ ಹಲವೆಡೆ ಇದೇ ಕತೆ. ಅಂದಹಾಗೆ ಕೊರೋನಾ ಮಹಮ್ಮಾರಿಯ ಪರಿಣಾಮವಾಗಿ ಬಯೋಮೆಟ್ರಿಕ್ ಯಂತ್ರಗಳು ಮೂಲೆ ಸೇರಿದ್ದು ಆಲಸಿ ವರ್ಗದ ಉದ್ಯೋಗಿಗಳಿಗೆ ‘ರೋಗಿ ಬಯಸಿದ್ದೂ ಹಾಲು-ಅನ್ನ, ವೈದ್ಯರು ಹೇಳಿದ್ದೂ ಹಾಲು-ಅನ್ನ’ ಎಂಬಂತಾಗಿದೆ. ಇವರ ಪ್ರಕಾರ ಯಾರೇನೇ ಹೇಳಿದರೂ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಬೇಕಾಗಿರುವುದು ಮಾತ್ರ ಚಳಿಯೇ. ಉತ್ತರಭಾರತದ ಚಳಿಗಾಲ ಮತ್ತು ಬೆಳಗ್ಗಿನ ಸಿಹಿನಿದ್ದೆಯ ಮಹಿಮೆ ಇದು.

ಈಚೆಗೆ ಕೇಂದ್ರ ಸರ್ಕಾರಿ ಮಂತ್ರಾಲಯವೊಂದಕ್ಕೆ ಹೋಗಿದ್ದ ನಾನು ಅಲ್ಲಿಯ ಕಾರ್ಯದರ್ಶಿಗಳು ಹೊರಡಿಸಿದ್ದ ಆದೇಶವನ್ನು ಓದಿ ನಕ್ಕಿದ್ದೆ. ಅಧಿಕಾರಿಗಳು ಬೆಳಗ್ಗಿನ ಹನ್ನೊಂದೂವರೆಯಾದರೂ ಆಫೀಸು ತಲುಪದಿರುವ ಬಗ್ಗೆ ಅಲ್ಲಿ ಆಕ್ಷೇಪಿಸಿದ್ದಲ್ಲದೆ, ಎಲ್ಲಾ ಉದ್ಯೋಗಿಗಳು ಒಂಭತ್ತೂವರೆಯವರೆಗೆ ಕಾರ್ಯಾಲಯವನ್ನು ಕಡ್ಡಾಯವಾಗಿ ತಲುಪಬೇಕೆಂದು ಅದರಲ್ಲಿ ಆದೇಶವನ್ನು ನೀಡಲಾಗಿತ್ತು. ಒಂದೆರಡು ದಿನ ಇದನ್ನು ಪಾಲಿಸಿದ್ದಿರಲೂಬಹುದು. ಆದೇಶವು ಹೊರಬಂದ ಒಂದೇ ವಾರಕ್ಕೆ ಹಳೆಯ ಭೂತಬಂಗಲೆಯಂತಿದ್ದ ಆ ಸರಕಾರಿ ಮಂತ್ರಾಲಯದ ಕಚೇರಿಯಲ್ಲಿ ದಸ್ತಾವೇಜುಗಳನ್ನು ಹಿಡಿದುಕೊಂಡ ನಾನು ಅಬ್ಬೇಪಾರಿಯಂತೆ ಅಲೆದಾಡುತ್ತಿದ್ದೆ. ಬೆಳಗ್ಗಿನ ಹತ್ತೂವರೆಯಾದರೂ ಅಲ್ಲಿದ್ದಿದ್ದು ಸೆಕ್ಯೂರಿಟಿ ಗಾರ್ಡ್ ಮಾತ್ರ.

ಬೆಚ್ಚಗಿರುವ ಭಾಗ್ಯವಿದ್ದವರು ಬೆಚ್ಚಗಿದ್ದೇ ಇರುತ್ತಾರೆ. ಆದರೆ ಉಳಿದವರ ಪಾಡು? ಮನೆಗಳಿಗೆ ಹಾಲು ಹಾಕುವವನು ಮುಂಜಾನೆ ಏಳಲೇಬೇಕು. ಪೇಪರ್ ಹಾಕುವವನು ಮೈಕೊರೆಯುವ ಚಳಿಯಲ್ಲೂ ಸೈಕಲ್ ತುಳಿಯಬೇಕು. ಪೌರಕಾರ್ಮಿಕನೊಬ್ಬ ಇವತ್ತೊಂದು ದಿನ ಹೊದ್ದು ಮಲಗುತ್ತೇನೆ ಎಂದು ನಿದ್ದೆಗೆ ಜಾರಿದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಪೋಲೀಸರು, ಸೈನಿಕರು ಎಂಥಾ ಮೈಕೊರೆಯುವ ಚಳಿಯಿದ್ದರೂ ಗಡಿಗಳನ್ನು ಕಾಯಲೇಬೇಕು. ಒಟ್ಟಿನಲ್ಲಿ ಚಳಿಗಾಲವು ಆಲಸಿಗಳಿಗಲ್ಲ.

ಕೇವಲ ಸಾಮಾನ್ಯ ನಾಗರಿಕರು ಅಂತಲ್ಲ. ದಟ್ಟವಾದ ಮಂಜಿನಿಂದಾಗಿ ಶಹರದ ಒಟ್ಟಾರೆ ವ್ಯವಸ್ಥೆಯೇ ಅಸ್ತವ್ಯಸ್ತವಾಗುವುದು ದಿಲ್ಲಿಯಲ್ಲಿ ಹಳೇಕತೆ. ಚಳಿಗಾಲವೆಂದರೆ ‘ಫಾಗ್’ ಎಂದಷ್ಟೇ ತಿಳಿದಿದ್ದ ನನ್ನಂತಹ ಸಾಮಾನ್ಯರಿಗೆ ‘ಸ್ಮೋಕ್’ ಪದವನ್ನು ಇದರೊಂದಿಗೆ ಕಸಿ ಮಾಡಿಸಿ ‘ಸ್ಮಾಗ್’ ಎಂಬ ಹೊಸ ಸಂಗತಿಯನ್ನೂ ಪರಿಸರ ತಜ್ಞರು ತಿಳಿಸಿಕೊಟ್ಟಿದ್ದಾರೆ. ಮಹಾನಗರಗಳಿಗೆ ಮಾಲಿನ್ಯವೆಂಬ ಬಿಡಲೊಲ್ಲದ ಶಾಪ. ಒಟ್ಟಿನಲ್ಲಿ ಎಲ್ಲಾ ಬರೀ ‘ಹೊಗೆ’. ಇನ್ನು ಮುಂಜಾನೆ ಹೊರಡುವ ವಿಮಾನಗಳಿಗೆ ಮಂಜಿನ ದಟ್ಟ ಪರದೆ ಸರಿಸುವುದೇ ಒಂದು ದೊಡ್ಡ ಸಾಹಸ. ಅಲ್ಲಿಗೆ ಪ್ರಯಾಣಿಕರ ಗಡಿಬಿಡಿ, ತಳಮಳಗಳೇ ಕತೆಯಾಗಿಬಿಡುವ ಅನಿವಾರ್ಯ ಪರಿಸ್ಥಿತಿ.

ಇಷ್ಟಿದ್ದರೂ ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಚಳಿಗಾಲವೆಂದರೆ ಪ್ರವಾಸಗಳಿಗೆ ಪ್ರಶಸ್ತವಾದ ಕಾಲ. ದಿನದ ಬಿಸಿಲು ಹಾಯೆನಿಸುವಂತೆ ಮಾಡುವ ಶಕ್ತಿಯಿರುವುದು ಈ ಕಾಲಕ್ಕೆ ಮಾತ್ರ. ಹೀಗಾಗಿಯೇ ಅದೆಷ್ಟೋ ಮಂದಿ ಮಧ್ಯಾಹ್ನದ ಊಟದ ನಂತರ ಬಿಸಿಲಿಗೆ ಮೈಯೊಡ್ಡಿಕೊಳ್ಳುತ್ತಾ ಕಾಲಕಳೆಯುವ ದೃಶ್ಯವು ಇಲ್ಲಿ ಕಾಣುವ ಸಾಮಾನ್ಯ ನೋಟಗಳಲ್ಲೊಂದು. ರಸ್ತೆಯ ಮೂಲೆಯಲ್ಲಿ, ತೆರೆದ ಪ್ರದೇಶಗಳಲ್ಲಿ ತುಣುಕು ಬಿಸಿಲಿದ್ದರೂ ಥಟ್ಟನೆ ಹೋಗಿ ಚಳಿ ಕಾಯಿಸಿಕೊಳ್ಳುವ ಮಂದಿ. ಈಗಿರುವ ಹಿಡಿಯಷ್ಟು ಬಿಸಿಲು ಮತ್ತೆ ಇದ್ದೀತು ಎಂಬ ಬಗ್ಗೆ ಖಾತ್ರಿಯಿಲ್ಲವಲ್ಲಾ! ಹೀಗಾಗಿ ಸಿಕ್ಕಷ್ಟು ಸಿಕ್ಕೀತು ಎಂಬ ನಿರೀಕ್ಷೆ. ಪಾಲಿಗೆ ಬಂದಿದ್ದೇ ಪಂಚಾಮೃತ. 

ಇನ್ನು ದಿಲ್ಲಿಯ ಮಾರುಕಟ್ಟೆಗಳಂತೂ ಎಂದಿನಂತೆ ಮೈಕೊಡವಿಕೊಳ್ಳುತ್ತಾ ಚಳಿಗಾಲಕ್ಕೆ ಭರದಿಂದ ಸಿದ್ಧವಾಗುತ್ತವೆ. ಎಲ್ಲೆಲ್ಲೂ ನೇತುಹಾಕಿರುವ ಜಾಕೆಟ್ಟುಗಳು, ರಾಶಿ ಹಾಕಿರುವ ಸ್ವೆಟರುಗಳದ್ದೇ ರಾಜ್ಯಭಾರ. ಜೊತೆಗೇ ಆ ರಾಶಿಯಿಂದ ತಮಗೆ ಬೇಕಾದ ದಿರಿಸನ್ನು ಆರಿಸಿಕೊಳ್ಳುವ ಗ್ರಾಹಕರ ರಾಶಿ. ಇಲ್ಲೂ ಖ್ಯಾತ ಬ್ರಾಂಡುಗಳ ಅಗ್ಗದ ಗಿಮಿಕ್ಕು. ಈ ಅವಧಿಯಲ್ಲಿ ಇವುಗಳಷ್ಟೇ ಗಿಜಿಗುಡುತ್ತಿರುವ ಮತ್ತೊಂದು ಮೂಲೆಗಳೆಂದರೆ ಶಹರದಲ್ಲಿರುವ ಟೀ ಸ್ಟಾಲ್ ಗಳು. ಚಳಿಗಾಲದಲ್ಲಿ ಟೀ-ಸಿಗರೇಟು ಕಾಂಬೋಗಳು ಗ್ರಾಹಕರ ವಲಯದಲ್ಲಿ ವರ್ಕೌಟ್ ಆಗುವುದು ಹೆಚ್ಚು. ಹೀಗಾಗಿ ಇವುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.

ಇನ್ನು ಸಹಜವಾಗಿ ಮನೆಗಳಲ್ಲಾಗುವ ತಯಾರಿಯೂ ಕಮ್ಮಿಯೇನಲ್ಲ. ಚಳಿಗಾಲದ ಅಧಿವೇಶನಕ್ಕೆ ಸಿದ್ಧವಾಗುವ ಸಂಸತ್ತಿನಂತೆ ಮನೆಗಳಲ್ಲೂ ತಮ್ಮದೇ ಆದ ಸಿದ್ಧತೆಗಳು ನಡೆದೇ ಇರುತ್ತವೆ. ಈ ಕಾಲಕ್ಕೆಂದೇ ಮೀಸಲಿಟ್ಟಿದ್ದ ದಪ್ಪದಪ್ಪನೆಯ ಬಟ್ಟೆಗಳು ಮುಚ್ಚಿದ ಕಪಾಟಿನಿಂದ ಮತ್ತೆ ಹೊರಬರುತ್ತವೆ. ಎತ್ತಿಟ್ಟ ಬಟ್ಟೆಗಳನ್ನು ತಿಂಗಳುಗಳ ನಂತರ ಹೊರತೆಗೆದರೆ ಸಹಜವಾಗಿ ಅದೇನೋ ಸಣ್ಣಗೆ ಕಮಟು. ಜೊತೆಗೇ ತಿಂಗಳ ಹಿಂದೆ ಬಂದ ದೀಪಾವಳಿಯಲ್ಲಿ ಕಂಬಳಿಯು ಉಡುಗೊರೆಯಾಗಿ ಸಿಕ್ಕಿದ್ದರೆ, ಈ ಬಾರಿಯ ಚಳಿಗಾಲದಲ್ಲಿ ಉಡುಗೊರೆ ಕೊಟ್ಟ ಪುಣ್ಯಾತ್ಮನಿಗೊಂದು ಬೆಚ್ಚನೆಯ ಹಾರೈಕೆ.

ಈ ಬಾರಿ ದಿಲ್ಲಿಯ ತಾಪಮಾನವು ಇನ್ನೇನು ಶೂನ್ಯಕ್ಕೆ ತಲುಪಲಿದೆ ಎನ್ನುವಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ಜೋಕುಗಳೂ ಓಡಾಡತೊಡಗಿವೆ. ಚಳಿಯು ವಿಪರೀತ ಹೆಚ್ಚಾಗಿ ಸ್ನಾನಕ್ಕೆ ಹಿಂದೇಟು ಹಾಕುವ ಚಾಳಿಯ ಬಗ್ಗೆ ನೆಟ್ಟಿಗನೊಬ್ಬ ”ಚಳಿಗಾಲ ಬಂದ ಕೂಡಲೇ ನೀರು ಉಳಿಸಿ ಅಭಿಯಾನ ನೆನಪಾಗುತ್ತೆ” ಎಂದು ವಿನೋದಮಯ ಶೈಲಿಯಲ್ಲಿ ಬರೆದಿದ್ದ. ಗ್ಯಾಂಗ್ಸ್ ಆಫ್ ವಾಸಿಪುರ್ ಸಿನೆಮಾದಲ್ಲಿ ಮಹಿಳೆಯೊಬ್ಬಳಿಗೆ ಬಿಹಾರಿ ಗ್ಯಾಂಗ್‍ಸ್ಟರ್ ಸರ್ದಾರ್ ಸಿಂಗ್ ಶೃಂಗಾರಮಯವಾಗಿ ಹೇಳುವ ಡೈಲಾಗು ”ಕಾಂಪ್ ಕಾಹೇ ರಹೇ ಹೋ?” (ಯಾಕೆ ನಡುಗುತ್ತಿರುವೆ) ದಿಲ್ಲಿ ಚಳಿಯ ನೆಪದಲ್ಲಿ ಮೀಮ್ಸ್ ರೂಪದಲ್ಲಿ ಓಡಾಡುತ್ತಿದೆ. ಇತ್ತ ಕೆಲ ಮನೆಗಳಲ್ಲಿ ಸಾಕಿರುವ ಅದೃಷ್ಟವಂತ ಮುದ್ದು ನಾಯಿಗಳೂ ಕೂಡ ಮನುಷ್ಯರಂತೆ ಸ್ವೆಟರ್ ಹಾಕಿಕೊಂಡು ವಾಕ್ ಮಾಡುತ್ತಾ ಮತ್ತಷ್ಟು ಮೊದ್ದುಮೊದ್ದಾಗಿ ಕಾಣುತ್ತಿವೆ.  

ಹಾಗಂತ ಚಳಿಗಾಲದಲ್ಲಿ ಸರ್ವವೂ ಸುಖಮಯವೇನಲ್ಲ. ಅದು ಸರ್ವರಿಗೆ ಸಂಭ್ರಮವನ್ನು ತರುವಂಥದ್ದೂ ಅಲ್ಲ. ಮೈಕೊರೆಯುವ ಚಳಿಯನ್ನು ತಾಳಲಾರದೆ ದಿಲ್ಲಿ ಸೇರಿದಂತೆ ಹಲವೆಡೆ ಸಾವುನೋವುಗಳಾಗುತ್ತವೆ. ಈ ನಿಟ್ಟಿನಲ್ಲಿ ಕೆಲ ಸರ್ಕಾರೇತರ ಸಂಸ್ಥೆಗಳ ಸ್ವಯಂಸೇವಕರು ಕಂಬಳಿಗಳನ್ನು ಹೊತ್ತುಕೊಂಡು ಹೋಗಿ, ಬೇಕಾಗಿದ್ದವರಿಗೆ ತಲುಪಿಸಿ ಮಾನವೀಯತೆಯನ್ನು ಮೆರೆಯುವುದೂ ಇದೆ. ಅದೆಷ್ಟೋ ಸಂಸ್ಥೆಗಳು ಈ ಒಂದು ಕೆಲಸವನ್ನು ಸಂಪ್ರದಾಯದಂತೆ ನಡೆಸುತ್ತಾ ಬಂದಿರುವುದು ಮತ್ತು ತನ್ಮೂಲಕ ಇತರರಿಗೂ ಇಂತಹ ಕೆಲಸಗಳಿಗೆ ಪ್ರೇರೇಪಿಸುವ ಅವರ ನಡೆಯು ನಿಜಕ್ಕೂ ಶ್ಲಾಘನೀಯ.

ಈ ಬಾರಿಯ ಚಳಿಯು ರೈತರ ಚಳುವಳಿಯನ್ನು ಮತ್ತಷ್ಟು ಸಂಕಷ್ಟಕ್ಕೀಡಾಗಿಸಿದೆ. ರೈತರ ಈ ಐತಿಹಾಸಿಕ ಚಳುವಳಿಯನ್ನು ಮಟ್ಟಹಾಕಲು ಶತಾಯಗತಾಯ ಪ್ರಯತ್ನಗಳು ನಡೆಯುತ್ತಿರುವ ಹೊರತಾಗಿಯೂ, ಚಳಿಯನ್ನೂ ಲೆಕ್ಕಿಸದೆ ದೃಢವಾಗಿ ನಿಂತು ಪ್ರತಿಭಟಿಸುತ್ತಿದ್ದ ರೈತರ ಮೇಲೆ ಪ್ರಭುತ್ವವು ನಡೆಸಿದ ದಾಳಿಯು ಎಲ್ಲರಲ್ಲೂ ಮರುಕ ಹುಟ್ಟಿಸಿತ್ತು.

ಇನ್ನು ದಿಲ್ಲಿಯ ಕೆಟ್ಟ ಚಳಿಗಾಲದಲ್ಲೇ ದುರುಳ ಅತ್ಯಾಚಾರಿಗಳು ನಿರ್ಭಯಾ ಮತ್ತು ಆಕೆಯ ಮಿತ್ರನನ್ನು ಅಮಾನುಷವಾಗಿ ಹಿಂಸಿಸಿ, ರಾತ್ರಿಯ ರಾಕ್ಷಸ ಚಳಿಯಲ್ಲಿ ಅವರನ್ನು ನಗ್ನರನ್ನಾಗಿಸಿ, ಚಲಿಸುತ್ತಿದ್ದ ಬಸ್ಸಿನಿಂದ ಕಸದಂತೆ ಹೊರಗೆಸೆದಿದ್ದರು. ಹೀಗೆ ತಾಸುಗಟ್ಟಲೆ ಅನಾಥವಾಗಿ ಬಿದ್ದಿದ್ದ ಅವರಿಬ್ಬರನ್ನೂ ನಂತರ ಪೋಲೀಸ್ ಪೇದೆಯೊಬ್ಬ ಗಮನಿಸಿ, ಪಕ್ಕದ ಲಾಡ್ಜ್ ಒಂದರಿಂದ ಕಂಬಳಿಗಳನ್ನು ತರಿಸಿ ತಕ್ಕಮಟ್ಟಿನ ಕಂಫರ್ಟ್ ಅನ್ನು ಒದಗಿಸಿದ್ದ. ನಂತರ ಕೊಂಚ ನೀರನ್ನೂ ಕುಡಿಸಿ ಅವರಿಬ್ಬರನ್ನು ಆತ ಸುರಕ್ಷಿತವಾಗಿ ಆಸ್ಪತ್ರೆ ತಲುಪಿಸಿದ್ದ. ಭಾರೀ ಸುದ್ದಿ ಮಾಡಿದ್ದ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರದಲ್ಲಿ ಆ ಪೋಲೀಸ್ ಅಧಿಕಾರಿಯು ಖುದ್ದು ಹೇಳುವಂತೆ, ಸ್ವತಃ ಆತ ನೆರೆದಿದ್ದ ಜನರಲ್ಲಿ ನೆರವಿಗಾಗಿ ವಿನಂತಿಸಿಕೊಂಡಿದ್ದರೂ ಯಾರೂ ಹತ್ತಿರ ಬಂದಿರಲಿಲ್ಲವಂತೆ.  

ಹೀಗೆ ಒಬ್ಬನಿಗೆ ಹಾಯೆನಿಸುವ ಹವಾಮಾನವೋ, ಘಟನೆಯೋ ಮತ್ತೊಬ್ಬನಿಗೆ ತೀರಾ ಸಾವು-ಬದುಕಿನ ಪ್ರಶ್ನೆಯಾಗಿಬಿಡುವ ಬದುಕಿನ ದ್ವಂದ್ವದ ನೆಪದಲ್ಲಿ ಹಲವು ಆಸ್ಕರ್ ಪುರಸ್ಕಾರಗಳನ್ನು ಬಾಚಿಕೊಂಡಿರುವ ಚಿತ್ರ ‘Parasite’ ನೆನಪಾಗುತ್ತದೆ. ಅದರಲ್ಲೊಂದು ದೃಶ್ಯ ಹೀಗಿದೆ: ಆಕೆ ಸಿರಿವಂತೆ. ತನ್ನ ಐಷಾರಾಮಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡು ಕಳೆದ ರಾತ್ರಿಯಷ್ಟೇ ಸುರಿದ ಕುಂಭದ್ರೋಣ ಮಳೆಯ ಬಗ್ಗೆ ಅದೇನು ಸೊಗಸೇನೋ ಎಂಬಂತೆ ಮಾತನಾಡುತ್ತಿರುತ್ತಾಳೆ.

ಆದರೆ ಮುಂದಿನ ಸೀಟಿನಲ್ಲಿ ಕುಳಿತು ಈಕೆಯ ಮಾತುಗಳಿಗೆ ಕಿವಿಯಾಗುತ್ತಲೇ ಕಾರು ಓಡಿಸುತ್ತಿರುವ ಬಡ ಕಾರು ಚಾಲಕ ಕೂತಲ್ಲೇ ಕುದಿಯುತ್ತಿರುತ್ತಾನೆ. ಏಕೆಂದರೆ ಕಳೆದ ರಾತ್ರಿಯ ಜಡಿಮಳೆಯು ಇಕ್ಕಟ್ಟು ಗಲ್ಲಿಯಲ್ಲಿದ್ದ ಆತನ ಪುಟ್ಟ ಮನೆಯನ್ನು ನಿರ್ದಯವಾಗಿ ಕೊಚ್ಚಿಹಾಕಿರುತ್ತದೆ. ಬಡತನ ಮತ್ತು ಸಿರಿವಂತಿಕೆಯ ನಡುವಿನ ಬಹುದೊಡ್ಡ ಕಂದರವನ್ನು ಪರಿಣಾಮಕಾರಿಯಾಗಿ ಹಿಡಿದಿಟ್ಟಿರುವ ಈ ಚಿತ್ರದ ಕಾಡುವ ಹಲವು ಫ್ರೇಮುಗಳಲ್ಲಿ ಇದೂ ಒಂದು. 

ದಿಲ್ಲಿಯ ಚಳಿಗೆ ಶಹರದಷ್ಟೇ ಅಸಂಖ್ಯಾತ ಮುಖಗಳಿವೆ. ಬದಲಾಗುವುದು ಕೇವಲ ಋತುವಷ್ಟೇ ಎಂದೆನಿಸಿದರೂ, ಅದೆಷ್ಟೋ ಮಂದಿಯ ಬದುಕು ಜೊತೆಜೊತೆಗೇ ಸದ್ದಿಲ್ಲದೆ ಬದಲಾಗುತ್ತಿರುತ್ತವೆ. ನಿನ್ನೆಯವರೆಗೆ ಐಸ್ ಕ್ರೀಂ ಮಾರುತ್ತಿದ್ದ ಬಿಹಾರಿ ಹುಡುಗ, ಅಚಾನಕ್ಕಾಗಿ ಇಂದು ಶೇಂಗಾ, ಚುಕ್ಕಿ ಮಾರುವ ಕೈಗಾಡಿಯೊಂದಿಗೆ ಸಿಗುತ್ತಾನೆ. ಕೈಸೇ ಹೋ ಸಾಬ್ ಎಂದು ಎಂದಿನಂತೆ ನಗೆ ಬೀರುತ್ತಾನೆ. ಬೇರೆಯವರಿಗೆ ಅದು ಏನೂ ಆಗಿಲ್ಲದಿರಬಹುದು. ಆದರೆ ಅವನಿಗದು ಬದುಕು. ನಿಲ್ಲದ ಕಾಲಚಕ್ರದ ಭರದಲ್ಲಿ ಆತನ ಅಸ್ತಿತ್ವದ್ದೂ ಒಂದು ಪುಟ್ಟ ಸ್ಥಾನಪಲ್ಲಟ.  

ದಿಲ್ಲಿ ತಣ್ಣಗಿರಲಿ. ಅದು ಪ್ರಕೃತಿಯ ನಿಯಮ. ಚಳಿಗಾಲದಲ್ಲೂ ಎಲ್ಲರ ಬದುಕು ಬೆಚ್ಚಗಿರಲಿ. ಇದು ಒಲುಮೆಯ ಹಾರೈಕೆ!

December 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: