ಚಸ್ಮಾ ಒಂದ್ಕಡಿ, ಆಕೀನ ಒಂದ್ಕಡಿ ಮಾಡ್ತೀವಿ

 
ಕನ್ನಡ ರಂಗಭೂಮಿಗೆ ಸಮುದಾಯ ತಂಡ ತನ್ನದೇ ಆದ ಸ್ಪರ್ಶವನ್ನು ನೀಡಿತು. ಸಮುದಾಯ ಒಂದು ರಂಗ ಸಂಘಟನೆ ಎನ್ನುವುದಕ್ಕಿಂತ ಒಂದು ಚಳುವಳಿಯಾಗಿ ಬೆಳೆದು ನಿಂತಿತು. ಈ ತಂಡ ರಾಜ್ಯದ ಎಲ್ಲಾ ದಿಕ್ಕುಗಳಿಗೆ ಬೀದಿ ನಾಟಕಗಳನ್ನು ಕೊಂಡೊಯ್ದಾಗ ಹೊಮ್ಮಿದ ಪ್ರತಿಕ್ರಿಯೆ ಇಲ್ಲಿದೆ-
samudaya-shubashaya
ಸಮುದಾಯ 1976ರಲ್ಲಿ ಕರ್ನಾಟಕದಾದ್ಯಂತ 1600 ಕಿ.ಮೀ. ಕಲಾಜಾಥಾ ನಡೆಸಿದ್ದು ಹಳ್ಳಿಹಳ್ಳಿಗಳಿಗೆ ಬೀದಿ ನಾಟಕಗಳ ರುಚಿ ಉಣಬಡಿಸಲು ಸಾಧ್ಯವಾಯಿತು. ಬೀದಿ ನಾಟಕಗಳ ನಿಜ ಪರಿಣಾಮದ ಅರಿವು ಉಂಟಾದದ್ದು ಈ ಜಾಥಾದಿಂದಲೇ . ಬೀದಿನಾಟಕಕ್ಕೆ ಒಂದು ರೀತಿಯಲ್ಲಿ ಇದು ಪ್ರಯೋಗರಂಗವಾಯಿತು. ಜನತೆಯತ್ತ ಜನರ ಸಮಸ್ಯೆಗಳನ್ನೇ ಒಳಗೊಂಡ ಬೀದಿನಾಟಕ ಒಯ್ದದ್ದು ವ್ಯಾಪಕ ಪ್ರತಿಕ್ರಿಯೆಗೆ ದಾರಿ ಮಾಡಿತು. ಅದುವರೆಗೂ ಕಂಪನಿ ನಾಟಕಗಳ ಇಲ್ಲವೇ ಅದೂ ಕಂಡಿಲ್ಲದ ಗ್ರಾಮೀಣ ಜನ ಸಮುದಾಯವನ್ನು ತಮ್ಮನ್ನೇ ಕುರಿತ ನಾಟಕಗಳು ಅಲ್ಲಾಡಿಸಿಬಿಟ್ಟಿತು. ಅದುವರೆಗೂ ಸಾಂಸ್ಕೃತಿಕ ರಂಗದಲ್ಲಿ ತಮ್ಮ ದನಿ ಕೇಳದವರಿಗೆ ಈ ದನಿ ಬಹಳಷ್ಟು ಆತ್ಮೀಯವಾಯಿತು. ಒಬ್ಬೊಬ್ಬ ಪ್ರೇಕ್ಷಕನಿಗೂ ಅಂತೆಯೇ ನಟನಿಗೂ ಆದ ಅನುಭವ ಅತ್ಯಂತ ವಿಚಿತ್ರ ರೀತಿಯದ್ದು.
ಮುಳಬಾಗಿಲಿನಲ್ಲಿ ‘ಪತ್ರೆ ಸಂಗಪ್ಪ’ ನಾಟಕ ನಡೆಯುತ್ತಿತ್ತು. ಮುದುಕಿಯೊಬ್ಬಳು ನಾಟಕದ ಪ್ರತೀ ಸಂಭಾಷಣೆಗೂ ತನ್ನದೇ ಆದ ಪ್ರತಿಕ್ರಿಯೆ ತೋರಿಸುತ್ತಾ, ಉದ್ಘಾರಗಳನ್ನು ತೆಗೆಯುತ್ತಾ ಕುಳಿತಿದ್ದಳು. ನಾಟಕದಲ್ಲಿ ಪತ್ರೆಸಂಗಪ್ಪನ ಗೋಳನ್ನು ನೋಡುತ್ತಾ ಇದ್ದವಳು ಜಮೀನ್ದಾರ ಬಂದ ತಕ್ಷಣವೇ ‘ಹಿಡಿದು ಎಕ್ಕಬೇಕು. ಹುಂ, ಅವನ ಪೊಗರು ನೋಡು’ ಎಂದು ಗೊಣಗುತ್ತಿದ್ದಳು. ಜೀತದ ಸಂಗಪ್ಪನ ಗೋಳು ಕಂಡು ಮರುಗುತ್ತಿದ್ದ ಆಕೆ, ತನ್ನ ಸೆರಗಿನ ಗಂಟಿನಿಂದ ಚಾಕಲೇಟೊಂದನ್ನು ತೆಗೆದು ತನಗೆ ನಿಲುಕುವಂತಿದ್ದ ನಟನೊಬ್ಬನ ಕೈಯಲ್ಲಿ ಕೊಟ್ಟು ‘ಆ ಸಂಗಪ್ಪನಿಗೆ ಕೊಡು’ ಎಂದಳು. ನಾಟಕದ ನಡುವೆ ತೊಂದರೆಯಾಗುವುದೆಂದು ಆತ ಕೈಯಲ್ಲೇ ಹಿಡಿದುಕೊಂಡಿದ್ದರೆ ಆಕೆ ಆತನನ್ನು ಜಗ್ಗಿ, ‘ಏ ನಿನಗಲ್ಲ ಅದು, ಸಂಗಪ್ಪನಿಗೆ ಕೊಡು’ ಎಂದಳು. ಚಾಕಲೇಟು ಸಂಗಪ್ಪನ ಕೈ ತಲುಪಿದಾಗಲೇ ಆಕೆಗೆ ಸಮಾಧಾನವಾದದ್ದು.
* * * *
samudaya3copy
ಕುಂದಗೋಳದ ಗಾಂಧೀ ಚೌಕದ ಹತ್ತಿರ ‘ಬೆಲ್ಚಿ’ ನಾಟಕ ತುಂಬ ಹೃದಯಸ್ಪರ್ಶಿಯಾಗಿ ಮೂಡಿಬಂತು. ಮದೀನಾಬೀ ಎನ್ನುವ 80ವರ್ಷದ ಮುದುಕಿ ನಮ್ಮ ಹಾಡುಗಳನ್ನು ಕೇಳಿ, ‘ಬಾಳ ಚಂದ ಹಾಡ್ತೀರಿ, ತಿಳಕೊಳ್ಳವರಿಗೆ ಅರ್ಥ ಆಗ್ತಾವ. ಒಂದೊಂದು ಹಾಡಿನಾಗೂ ಅರ್ಥ ತುಂಬ್ಯಾವ. ನೀವು ಖರೇ ಖರೇ ನಡೆದದ್ದ ಹೇಳಾಕ ಹತ್ತೀರಿ. ನಮ್ಮೂರಾಗೂನೂ ಹೀಂಗನ ನಡೀತಾವ. ಕೂಲಿಗೆ ಕರೆಯೋ ಮುಂಚೆ ಒಂದು ಹೇಳ್ತಾರೆ, ಕೆಲಸ ಮಾಡಿಸಿಕೊಂಡಾದ ಮೇಲೆ ಒಂದು ಹೇಳ್ತಾರೆ’ ಎಂದಳು.
* * * *
ದಾಂಡೇಲಿಯ ನಾಟಕಕ್ಕೆ ಸುಮಾರು ಮೂರು ಸಾವಿರ ಜನ ಸೇರಿದ್ದರು. ಹೆಚ್ಚಿನವರೆಲ್ಲ ಕಾರ್ಮಿಕರು. ನಾಟಕ ಮುಗಿದ ಮೇಲೆ ಹೆಂಗಸರ ಗುಂಪೊಂದು ಬಂದು ‘ಇಂದಿರಾಗಾಂಧೀನ ಚಲೋ ತೋರ್ಸಿದ್ರಿ…. ಈ ಸಲವೂ ನಮ್ಮ ಊರಿಗೆ ಬರ್ತಾಳೇನು ಆಕಿ, ಬಂದ್ರ ಚಸ್ಮಾ ಒಂದ್ಕಡಿ ಆಕೀನ ಒಂದ್ಕಡಿ ಮಾಡ್ತೀವಿ. ಎಲ್ಲ ತಯಾರ ಮಾಡಿ ಇಟ್ಕೊಂಡಿದೀವಿ’ ಎಂದರು.
* * * *
‘ನಾನು ಏನು ಮಾಡಲಿ? ನಾನು ಮತ್ತೆ ಊರಿಗೆ ಹೋದ್ರೆ ಆ ಲೋಕೇಶಪ್ಪ ನನ್ನನು ಕೊಲೆ ಮಾಡಿಸಿ ಬಿಡುತ್ತಾನೆ
ಪತ್ರೆಸಂಗಪ್ಪ ನಾಟಕದಲ್ಲಿ ಸಂಗಪ್ಪ ಹೇಳುವ ಮಾತಿದು. ಮೈಸೂರಿನಲ್ಲಿ ಈ ಡೈಲಾಗ್ ಹೇಳಿದಾಗ ನಾಟಕ ನೋಡುತ್ತಿದ್ದವರಲ್ಲಿ ಒಬ್ಬ ಜೋರಾಗಿ ಹೇಳಿದ, ‘ಯಾಕೆ ನಾನಿಲ್ವ? ಅದೆಂಗೆ ಕೊಲೆ ಮಾಡಿಸ್ತಾನೋ ನೋಡೇ ಬಿಡೋಣ.
‘ ಕೊನೆಯಲ್ಲಿ ಸಂಗಪ್ಪನ ಕೊಲೆಯಾದಾಗ ಇವನೇ ಹೇಳಿದ, ‘ಸಾಯಿಸ್ಬಿಟ್ರ? ಅಯ್ಯೋ ನನ್ಮಕ್ಕಳ್ರ, ಎಲ್ಲ ಇಂಗೇನಾ?’ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದವ ಒಬ್ಬ ಕೂಲಿಯಾಳು. ನಾಟಕ ನೋಡುವಾಗ ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ತೀವ್ರವಾಗಿ, ಉತ್ಕಟವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದ
* * * *
ಮೈಸೂರಿನ ದಾಸ್ ಪ್ರಕಾಶ್ ಹೋಟೆಲ್ ನಲ್ಲಿ ಸುಮಾರು ವರ್ಷದಿಂದ ಕೆಲಸ ಮಾಡುತ್ತಿದ್ದ ಬಸವರಾಜ್ ಸಿಕ್ಕಿದ್ದ. ‘ಆ ಪತ್ರೆಸಂಗಪ್ಪ ನಾಟಕ ನೋಡಿದೆ ಸಾರ್, ಆತ ನಮ್ಮ ಊರಿನವನೆ, ಅವನನ್ನು ಅವನ ಅಣ್ಣ ತಮ್ಮಂದಿರನ್ನೂ ನೋಡಿದ್ದೀನಿ. ಊರಿನ ಕಡೆ ಈ ಸಲ ಹೋದಾಗ ಆತನೇ ಪತ್ರೆ ಸಂಗಪ್ಪನ ಕೊಲೆ ಮಾಡಿಸಿದ್ದಾನೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದರು. ಈಗ ನಾಟಕ ನೋಡಿದ ಮೇಲೆ ಅದು ನಿಜ ಅಂತ ಗೊತ್ತಾಯ್ತು’ ಎಂದ.
ದೊಡ್ಡಬಳ್ಳಾಪುರದಲ್ಲಿ ‘ಕೂಲಿಹೆಣ್ಣು’ ಬೀದಿ ನಾಟಕ ಪ್ರದರ್ಶನ. ಪ್ರದರ್ಶನದ ನಂತರ ಎಲ್ಲರೂ ಜಾಥಾದ ನಿರ್ವಹಣೆಗೆಂದು ಪ್ರೇಕ್ಷಕರಿಗೆ ಧನ ಸಹಾಯ ಮಾಡುವಂತೆ ವಿನಂತಿಸುತ್ತಿದ್ದೆವು. ಬಟ್ಟೆ ಹಿಡಿದು ನಟರು ಜನರ ಬಳಿ ಹೋದರು. ಬಂದು ನೋಡಿದಾಗ ನಾಟಕದಲ್ಲಿ ಸಮಾಜದಿಂದ ಎಲ್ಲ ರೀತಿಯ ತುಳಿತಕೊಳ್ಳಗಾದ ಹೆಣ್ಣಿನ ಪಾತ್ರ ಮಾಡಿದ ಪಾತ್ರಧಾರಿಯ ಬಟ್ಟೆಯಲ್ಲಿ ಇನ್ನಿಲ್ಲದಷ್ಟು ಹಣ. ಆದರೆ ಅದೇ ಹೆಣ್ಣನ್ನು ಶೋಷಿಸುವ ಗಂಡನ ಪಾತ್ರ ಮಾಡಿದವನ ಬಟ್ಟೆಯಲ್ಲಿ ಒಂದಿಷ್ಟು ಪುಡಿಗಾಸು ಮಾತ್ರ.
(ಸಮುದಾಯ ವಾರ್ತಾಪತ್ರದಿಂದ) 

‍ಲೇಖಕರು avadhi

December 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

2 ಪ್ರತಿಕ್ರಿಯೆಗಳು

  1. swamy

    ಜನ ಜನ ಜನ ಜನ ರಂಗದಲ್ಲಿ
    ಊರ ಮುಂದಿನ ಬೀದಿಯಲ್ಲಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: