
ಸಂಗಮೇಶ ಸಜ್ಜನ
ಈಗೀಗ ಎಲ್ಲಿ ನೋಡಿದರು
ಹಬೆ ತುಂಬಿದ ವಾತಾವರಣವೇ
ಒಂದು ಕಡೆ ಸಿಗರೇಟಿನ ಹೊಗೆಯಾದರೆ
ಇನ್ನೊಂದೆಡೆ ಈ ಚಹಾದ ಹಬೆ
ಒಮ್ಮೊಮ್ಮೆ ಹೊಗೆಯಿಂದ ಉಸಿರುಗಟ್ಟಿದಂತೆನಿಸಿದ್ದರೂ
ಈಗೀಗ ಈ ಕೊರೆಯುವ ಚಳಿಯಲ್ಲಿ ಕರಗಿ ಹೋಗಬೇಕೆನಿಸುತ್ತದೆ
ತುಟಿಗೆ ತುಟಿ ತಾಕಿಸುವಷ್ಟು ಧೈರ್ಯ ಇನ್ನೂ ಬರಲಿಲ್ಲ
ಅಂದ ಹಾಗೆ ಉಸಿರಿಗೆ ಉಸಿರು ತಾಕಿಸೋದು ಕಷ್ಟವೇ
ಹಾಗಾಗಿ ದಿನಕ್ಕೆ ಐದು ಬಾರಿಯಾದರೂ
ಚಹಾಪಾನ ಎಂದೋ ಚಹಾ ಹೀರುವೆ
ಕಪ್ಪಿಗೆ ತುಟಿ ತಾಕಿಸಿದಾಗ ಸಿಗುವ ಅನುಭವ ಈ ಚಳಿಯಲ್ಲಿ ಮತ್ತೆಲ್ಲೂ ಸಿಗಲಿಕ್ಕಿಲ್ಲ

ಬಾಲ್ಯದಲ್ಲೆಲ್ಲ ದಣಿವಾರಿ ಬಂದಾಗ ಅಮ್ಮನದೊಂದೇ ಮಾತು
ಅಪ್ಪ್ಯಾ ಚಹಾ ಕುಡಿ, ಸ್ವಲ್ಪ ದಣಿವಾರಿತು
ಈಗೀಗ ಕತ್ತೆ ದುಡಿತದ ನಡುವೆ ಅದೇ ಮಾತು
ಚಾ ಕುಡಿದು ಫ್ರೆಷ್ ಆಗುವ
ಅಮ್ಮನ ಕೈಯಾರೆ ಮಾಡಿದ್ದು ಅಮೃತವೇ
ಈಗ ಹೋಟೆಲಿನವ ಮಾಡಿದ್ದು ಅಮೃತ
ಆದರೆ ಅಮ್ಮನದ್ದು ಪ್ರೀತಿ ಮಮತೆಯದ್ದಾದರೆ
ಇವನದ್ದು ಬಡತನ ಮತ್ತು ಹಸಿವಿನ ಒರತೆ
ಎಲ್ಲೋ ದುಃಖದ ಮನೆಯಲ್ಲಿಯೂ ಸರಿ
ಇಲ್ಲಿಯ ಶುಭಸಮಾರಂಭದಲ್ಲೂ ಸರಿ
ಚಹಾ ಎಂಬ ಅಮೃತ ಎಲ್ಲರನ್ನು ಆವರಿಸಿಕೊಂಡು ಮಾಯವಾಗುವಂತೆ ಮಾಡಿ ಬಿಡುತ್ತದೆ.
ನನಗೂ ಈಗೀಗ ಎಲ್ಲವನ್ನೂ ಆವರಿಸಿ ಆವಿಯಾಗಬೇಕೆನಿಸುತ್ತದೆ
ಆದರೆ ಚಹಾದ ಹಾಗೆ ನನಗೆ ಬಣ್ಣ ಬಿಡಲು ಬರುತ್ತಿಲ್ಲ…
ವಾಸ್ತವದ ರೂಪಕ.ತುಂಬಾ ಚೆಂದದ ಕವಿತೆ.
ಇಷ್ಟವಾಯಿತು ❤