ಚಾನಲ್ ಗಳಿಗೆ ಈಗ ಅಗಾಧ ಹಸಿವು

ಇಂದು ವಿಶ್ವ ಟೆಲಿವಿಷನ್ ದಿನ 

ಜಿ ಎನ್ ಮೋಹನ್ 

ಮೊನ್ನೆ ಒಂದು ಮಾಧ್ಯಮ ಸಂಕಿರಣಕ್ಕೆ ಹೋಗಬೇಕಾಗಿತ್ತು. ಪತ್ರಿಕೆಗಳ ಪ್ರಸಾರ ಸಂಖ್ಯೆಯ ಸ್ಪರ್ಧೆ, ಚಾನಲ್ ಗಳ ಟಿ ಆರ್ ಪಿ ಆಟಾಟೋಪ, ರೇಡಿಯೋ ಚಾನಲ್ ಗಳ ಪಟ್ ಪಟಾಕಿ ಮಾತಿನ ನಡುವೆ ‘ಅಭಿವೃದ್ಧಿ ಪತ್ರಿಕೋದ್ಯಮ’ಕ್ಕೆ ಏನಾದರೂ ಜಾಗ ಉಂಟೇ ಎಂದು ಹುಡುಕಿ ನೋಡುವ ಪ್ರಯತ್ನ ಅದು.

ನನ್ನದು ಹೇಳಿ ಕೇಳಿ ಎಲೆಕ್ಟ್ರಾನಿಕ್ ಮಾಧ್ಯಮದ ಪ್ರಪಂಚ. ಇವತ್ತು ನಾಲ್ಕು ಜನ ಸೇರಿದರೆ ಚಾನಲ್ ಗಳು, ಅದು ಕೊಡುತ್ತಿರುವ ಕಾರ್ಯಕ್ರಮಗಳು ಪ್ರಸ್ತಾಪವಾಗದೆ ಮಾತು ಮುಗಿಯುವುದಿಲ್ಲ. ಚಾನಲ್ ಗಳಲ್ಲಿನ ಭಯ ಬಿತ್ತುವ, ಇನ್ನಷ್ಟು ಮೂಢರನ್ನಾಗಿಸುವ, ಅತಿ ರಂಜಿಸುವ ಗುಣವೇ ಈ ಚರ್ಚೆಗೆ ಕಾರಣವಾಗಿದೆ. ಯಾಕೆ ಹೀಗಾಯ್ತು? ಸುದ್ದಿಗಾಗಿಯೇ ಮೀಸಲಾದ ಚಾನಲ್ ಗಳು ಬರುವವರೆಗೆ ಇಲ್ಲದ ಒಂದು ಅಸಹನೆ ಆನಂತರ ಕಟ್ಟೆಯೊಡೆಯಲು ಏನು ಕಾರಣ? ನ್ಯೂಸ್ ಚಾನಲ್ ಗಳಲ್ಲಿ ಹಾಗಾದರೆ ಸಮಾಜಮುಖಿಯಾದದ್ದು ಏನೂ ಬರುತ್ತಿಲ್ಲವೇ? ಸಮಾಜದ ಒಳಿತು ಚಾನಲ್ ಗಳಿಗೆ ಕಾಣುತ್ತಲೇ ಇಲ್ಲವೇ ಎಂಬ ಪ್ರಶ್ನೆ ಹರಡಿಕೊಂಡು ಕುಳಿತೆ.

media

ಆಗ ಯಾಕೋ ಈ ಹಿಂದೆ ಹೀಗೇ ನೆಟ್ ಲೋಕದಲ್ಲಿ ವಿಹರಿಸುತ್ತಿದ್ದಾಗ ಗಮನಕ್ಕೆ ಬಂದ ಎರಡು ಖಾಯಿಲೆಗಳ ನೆನಪಾಯಿತು. ಆ ಖಾಯಿಲೆಗಳಿಗೂ ಚಾನಲ್ ನ ಇಂದಿನ ಸ್ಥಿತಿಗೂ ಏನಾದರೂ ಸಂಬಂಧವಿದೆಯಾ ಎಂದು ನಾನು ಹುಡುಕುತ್ತಾ ಹೋದೆ. ಆ ಖಾಯಿಲೆಯಲ್ಲಿ ಒಂದು Anosmia. ಇದು ವಾಸನೆಯೇ ಗೊತ್ತಾಗದ ಖಾಯಿಲೆ. ಅದು ಪರಿಮಳವಿರಲಿ, ದುರ್ನಾತವಿರಲಿ ಏನೇನೂ ಗೊತ್ತಾಗದ ಖಾಯಿಲೆ. ಇಂತಹ ಖಾಯಿಲೆಯೇನಾದರೂ ನಮ್ಮ ಚಾನಲ್ ಗಳಿಗೆ ಹರಡಿಕೊಂಡಿದೆಯೇ? ಪತ್ರಿಕೋದ್ಯಮದ ತರಗತಿಗಳಲ್ಲಿ ಮೊದಲು ಕಲಿಸುವ ಪಾಠವೇ ಸುದ್ದಿ ನಾಸಿಕದ ಬಗ್ಗೆ. Nose for the News. ಸುದ್ದಿ ಎಲ್ಲಿದ್ದರೂ ಅದರ ವಾಸನೆ ಹಿಡಿಯುವ ಶಕ್ತಿ ಪತ್ರಕರ್ತನ ಮೂಗಿಗಿರಬೇಕು. ಆದರೆ ಮೂಗಿಗೆ ಏನಾದರೂ ಈ Anosmia (ವಾಸನೆ ಹಿಡಿಯಲಾಗದ ರೋಗ) ಹತ್ತಿದೆಯೇ?

ನಾನು ಗುಲ್ಬರ್ಗದಲ್ಲಿದ್ದಾಗ ಒಂದು ದುರಂತವನ್ನು ಗಮನಿಸಿದೆ. ಯುಗಾದಿ ಎಂಬುದು ಅಲ್ಲಿ ಸಂಭ್ರಮವಲ್ಲ, ಸಾವಿನ ಕುಣಿಕೆಯಾಗಿತ್ತು. ಯುಗಾದಿ ಹತ್ತಿರ ಬರುತ್ತಿದ್ದಂತೆ ಗುಲ್ಬರ್ಗದ ಹಳ್ಳಿಗಳಲ್ಲಿ ಸಾಲು ಸಾಲು ಆತ್ಮಹತ್ಯೆಗಳಾಗುತ್ತಿದ್ದವು. ಏಕೆ ಹೀಗೆ? ಎಂದು ನಾನು ಬೆಂಬತ್ತಿದಾಗ ಅನಾವರಣಗೊಂಡದ್ದು ಕೃಷಿಕ ಜಗತ್ತಿನ ಧಾರುಣ ಕಥೆ. ಒಳ್ಳೆಯ ಫಸಲು, ನೆಮ್ಮದಿಯ ಜೀವನ ಬಯಸುವ ರೈತ ಆ ಕಾರಣಕ್ಕಾಗಿ ಪಡೆದ ಸಾಲವನ್ನು ಬಡ್ಡಿ ಸಮೇತ ತುಂಬಿಸಿ ಕೊಡಬೇಕಾಗಿತ್ತು. ಇದಕ್ಕೆ ಗಡುವು ಯುಗಾದಿ. ಇಲ್ಲದ ಮಳೆ, ಕಳಪೆ ಕ್ರಿಮಿನಾಶಕ, ಜೀವ ಕಳೆದುಕೊಂಡ ಬೀಜ ರೈತನ ನೆಮ್ಮದಿಯನ್ನು ಹೊಸಕಿಹಾಕಿಬಿಡುತ್ತಿತ್ತು. ಯುಗಾದಿ ಇನ್ನೇನು ಹತ್ತಿರ ಬಂತು ಎನ್ನುವಾಗ ಸಾಲ ತೀರಿಸಲಾಗದ ಭಯದಲ್ಲಿ ಆತ ಅದೇ ಕ್ರಿಮಿನಾಶಕಕ್ಕೆ ಶರಣಾಗಿಬಿಡುತ್ತಿದ್ದ. ಇಂತಹ ಹತ್ತು ಹಲವಾರು ಕಥೆಗಳು ಗ್ರಾಮೀಣ ಕರ್ನಾಟಕದಲ್ಲಿ ಹರಡಿ ಕೂತಿವೆ. ಗ್ರಾಮೀಣ ಭಾಗದ ಮಾತು ಇರಲಿ ನಗರಗಳಲ್ಲೇನಾದರೂ ಸಾವಿನ ಕಥೆಗಳಿಗೆ ಕಡಿಮೆ ಇವೆಯೇ?

ಇದನ್ನೇ ಸಾಯಿನಾಥ್ Sunshine ಮತ್ತು Sobbing stories ಅಂತ ಕರೆದರು. ಆರ್ಥಾತ್ ಜಗ ಮಗ ಹೊಳೆಯುವ ಮತ್ತು ಅಳುಬುರುಕ ಸುದ್ದಿಗಳು ಅಂತ. ಇಂದು ಮಾಧ್ಯಮಕ್ಕೆ ಬೇಕಿರುವುದು ಜಗಮಗ ಹೊಳೆಯುವ ಸುದ್ದಿಗಳು ಮಾತ್ರ. ಯುಗಾದಿ ಸಾವಿನಂಥಹ ಅಳುಬುರುಕ ಸುದ್ದಿಗಳಿಂದ ಟಿ ಆರ್ ಪಿ ಬರುತ್ತದೆಯೇ ಎನ್ನುವ ಪ್ರಶ್ನೆ ತಕ್ಷಣವೇ ಎದ್ದು ನಿಲ್ಲುತ್ತದೆ. ಆಗಲೇ ನನಗೆ ಇನ್ನೊಂದು ಖಾಯಿಲೆಯ ನೆನಪಾದದ್ದು. Gluttomy Gene ಅಂತ ಒಂದಿದೆ. ಇದು ಆಸೆಬುರುಕ ಜೀನ್. ಸಿಕ್ಕಷ್ಟೂ ಮುಕ್ಕಬೇಕು, ಅದು ಏನಾದರೂ ಸರಿ ಎನ್ನುವ ಚಪಲ.

television-media-mikes

 

ಈ ಜೀನ್ ಮೆದುಳು ಮತ್ತು ದೇಹದ ನಡುವೆ ಇರುವ ಸಂಪರ್ಕವನ್ನೇ ಕಿತ್ತುಹಾಕಿಬಿಡುತ್ತದೆ. ಆಗ ಮೊದಲು ಪೆಟ್ಟು ಬೀಳುವುದೇ ವಿವೇಚನೆಗೆ, ಎಷ್ಟು ತಿನ್ನಬೇಕು, ಏನು ತಿನ್ನಬೇಕು ಎನ್ನುವ ವಿವೇಚನೆಯೇ ಮರೆಗೆ ಸರಿಯುತ್ತದೆ. ಇವತ್ತಿನ ಸುದ್ದಿ ವಾಹಿನಿಗಳಿಗೆ ಸದಾ ಏನನ್ನಾದರೂ ಉಣಬಡಿಸುತ್ತಲೇ ಇರಬೇಕು. ಹೇಳಿ ಕೇಳಿ ನ್ಯೂಸ್ ಚಾನಲ್ ಗಳು ಕೆಲಸ ಮಾಡುವುದು ಸೆಕೆಂಡ್ ಗಳ ಲೆಕ್ಕದಲ್ಲಿ. ಅಂದರೆ ಒಂದು ದಿನ ಎನ್ನುವುದು ಚಾನಲ್ ಗಳಿಗೆ 86, 400 ಸೆಕೆಂಡ್ ಗಳು. ಈ 86 ಸಾವಿರ ಸೆಕೆಂಡ್ ಗಳ ಕಾಲ ಏನನ್ನಾದರೂ ತಿನ್ನುತ್ತಲೇ ಇರಬೇಕು. ಈ ಧಾವಂತದಲ್ಲಿ ಸರಿ/ತಪ್ಪು, ಅಗತ್ಯ/ಅನಗತ್ಯ ಎನ್ನುವುದನ್ನು ಯೋಚಿಸುವ ಬಗೆ ಹೇಗೆ? ನ್ಯೂಸ್ ಚಾನಲ್ ಗಳ ಧಾವಂತಕ್ಕೆ ಮೊದಲು ಬಲಿಯಾಗುವುದೆ ತರ್ಕ.

ಸರಿ ಬಿಡಿ. ಈ ಎರಡೂ ಖಾಯಿಲೆಗಳು ನ್ಯೂಸ್ ಚಾನಲ್ ಗಳಿಗೆ ಇದೆ ಎಂದೇ ಇಟ್ಟುಕೊಳ್ಳೋಣ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?. ಹೌದು ಇಲ್ಲವೇ ಎಂದು ನಾನೂ ಯೋಚಿಸಿದ್ದೇನೆ, ಇದಕ್ಕೊಂದು ಪುಟ್ಟ ಉತ್ತರವೂ ಇದೆ. ಪತ್ರಿಕೆಗಳ ಪ್ರಸಾರ, ಓದುಗರ ಸಂಖ್ಯೆಯ ವಿವರ ಪ್ರಕಟವಾಗುವುದು ವರ್ಷಕ್ಕೆ ಒಂದು ಬಾರಿ. ಟ್ರೆಂಡ್ ಗೊತ್ತಾಗುವುದು ತ್ರೈಮಾಸಿಕದಲ್ಲಿ. ಆದರೆ ನ್ಯೂಸ್ ಚಾನಲ್ ಗಳಿಗೆ ಹಾಗಲ್ಲ. ಟಿ ಆರ್ ಪಿ ಪ್ರತೀ ವಾರ ಪ್ರಕಟವಾಗುತ್ತದೆ. ಟ್ರೆಂಡ್ ವಾರ ಮಧ್ಯೆಯೇ ಸಿಕ್ಕುಬಿಡುತ್ತದೆ. ಹಾಗಾಗಿಯೇ ಪ್ರತೀ ವಾರ ಟಿ ಆರ್ ಪಿ ಯುದ್ಧದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ. ಇದ್ದ ಒಂದೇ ಕೇಕ್ ಗೆ ಹಲವರು ಕೈ ಹಾಕಬೇಕಾದ ಒತ್ತಡ.

ಆಗ ಹೊಳೆಯುವುದೇ ಸುಲಭ ದಾರಿಗಳು. ಅಥವಾ ರಾತ್ರಿ ಕಳೆದು ಬೆಳಗಾಗುವುದರೊಳಗೆ ಯಶಸ್ವಿಯಾಗಲು ಇರುವ ಶಾರ್ಟ್ ಕಟ್ ಗಳು. ಜನರನ್ನು ಭ್ರಮೆಗೆ ತಳ್ಳುವ, ಕತ್ತಲನ್ನು ಇನ್ನಷ್ಟು ಹೆಚ್ಚಿಸುವ, ಮೂಢ ನಂಬಿಕೆಗೆ ಇನ್ನಷ್ಟು ತುಪ್ಪ ಸುರಿಯುವ, ಅತಿ ರಂಜಿಸುವ ಶಾರ್ಟ್ ಕಟ್ ಗಳು ಎಲ್ಲರಿಗೂ ಅಸೆ ಹುಟ್ಟಿಸುವುದು ಆಗಲೇ.

ಟೆಲಿವಿಷನ್ ರೇಟ್ ಪಾಯಿಂಟ್ಸ್( ಟಿ ಆರ್ ಪಿ) ಎನ್ನುವ ವ್ಯವಸ್ಥೆ ನಿಜಕ್ಕೂ ವೈಜ್ಞಾನಿಕವಾಗಿದೆಯೇ ಎನ್ನುವುದು ಇನ್ನೊಂದು ಪ್ರಶ್ನೆ. ಕೆಲವೇ ನೂರು ಮೀಟರ್ ಗಳು ಆರು ಕೋಟಿ ಜನರ ಬೇಕುಬೇಡಗಳನ್ನು ನಿರ್ಧರಿಸುತ್ತದೆ. ಈ ಮಧ್ಯೆಯೇ ಸಂಸತ್ತು ಈಗ ವರ್ಷಕ್ಕೊಮ್ಮೆ ಟಿ ಆರ್ ಪಿ ಪ್ರಕಟಿಸುವ ಬಗ್ಗೆ ಗಂಭೀರ ಚಿಂತನೆಯಲ್ಲಿ ತೊಡಗಿದೆ. ಹಾಗಾದಲ್ಲಿ ಸಿಕ್ಕಂತೆ ಓಡುತ್ತಿರುವ ಕುದುರೆಗೆ ಒಂದಿಷ್ಟಾದರೂ ವಿವೇಚನೆಯ ಲಗಾಮು ಬೀಳಬಹುದು ಎನ್ನುವ ಆಸೆ ನನ್ನದು.

‍ಲೇಖಕರು Admin

November 21, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ಎಂಬ ‘ಜೋತಮ್ಮ’

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

‘ಎದೆ ತುಂಬಿ ಹಾಡಿದ’ ಎಸ್ ಪಿ ಸರ್…

-ಜಿ ಎನ್ ಮೋಹನ್ 'ಇದು ಕೇಳೋ ಪ್ರಶ್ನೆನಾ..' ಅಂತ ಗದರಿದ ದನಿಯಲ್ಲೇ ಕೇಳಿದೆ. ಎಸ್ ಪಿ ಬಾಲಸುಬ್ರಮಣ್ಯಂ ಅವರ 'ಎದೆ ತುಂಬಿ...

5 ಪ್ರತಿಕ್ರಿಯೆಗಳು

 1. ಶಮ, ನಂದಿಬೆಟ್ಟ

  “ಸಿಕ್ಕಂತೆ ಓಡುತ್ತಿರುವ ಕುದುರೆಗೆ ಒಂದಿಷ್ಟಾದರೂ ವಿವೇಚನೆಯ ಲಗಾಮು ಬೀಳಬಹುದು ಎನ್ನುವ ಆಸೆ” ಈಡೇರಿದರೆ ಅದು ಈ ಜಗತ್ತಿನ ಪುಣ್ಯವೆಂದು ಭಾವಿಸಬೇಕಿದೆ. ಸದ್ಯಕ್ಕದು ಕನಸೇನೋ ಅನ್ನುವದು ಬುದ್ಧಿಯ ಮಾತು !!!

  ಪ್ರತಿಕ್ರಿಯೆ
 2. Anonymous

  ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಇಂಟರ್ನೆಟ್ ಪ್ರೊಟೊಕಾಲ್ ಆಧರಿತ ಟೆಲಿವಿಷನ್ (IPTV) ಚಾನೆಲ್ಲುಗಳು ಪೂರ್ಣಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿದರೆ, TRP ಎಂಬುದೇ ಇಲ್ಲವಾಗಲಿದೆ. ಜೊತೆಗೆ ಇಡಿಯ ಟೆಲಿವಿಷನ್ ಜಾಹೀರಾತು ಮಾರುಕಟ್ಟೆ ಹೊಸ ರೂಪ ಪಡೆಯಲಿದೆ ಎಂದು ನನ್ನ ಎಣಿಕೆ. – ರಾಜಾರಾಂ ತಲ್ಲೂರು

  ಪ್ರತಿಕ್ರಿಯೆ
 3. Sarojini Padasalagi

  ಕಂಡದ್ದನ್ನು ರುಚಿಯಾಗಿಸಿ ಕಬಳಿಸುವ ಚಾನೆಲ್ ಗಳ ಬಕಾಸುರನ ಹಸಿವಿಗೆ ಬಲಿಯಾಗುತ್ತಿರುವುದು ಅಮಾಯಕ ಜನತೆ . ನೋಡಿದ್ದನ್ನೇ ಮತ್ತೆ ಮತ್ತೆ ನೋಡುತ್ತಾ ,ಕೇಳಿದ್ದನ್ನೇ ಕೇಳುತ್ತ ,ವಿವೇಚನೆಗೆ ಮಂಕು ಬಡಿದು , ಮೂಲ ಸುದ್ದಿಯನ್ನೇ ಮರೆತರೂ ಅಚ್ಚರಿಯೇನಿಲ್ಲ. .ಈ ಹಸಿವನ್ನೇ ಬಂಡವಾಳವಾಗಿಸಿಕೊಂಡು ಅರಿಯದ ಜನತೆಯ ಶೋಷಣೆಗೆ ಹೊಸ ಶಕ್ತಿಗಳು ಹುಟ್ಟಿದರೂ ಆಶ್ಚರ್ಯಪಡಬೇಕಿಲ್ಲ. ದಾರಿ ತೋರಬೇಕಾದ ಮಾಧ್ಯಮಗಳೇ ದಾರಿ ತಪ್ಪಿಸುವುದನ್ನ ತಪ್ಪಿಸಲು ವಿವೇಚನೆಯ ಲಗಾಮು ಬೀಳುವ ಕನಸು ನನಸಾದರೆ ಅದೆಷ್ಟು ಚೆನ್ನ !!

  ಪ್ರತಿಕ್ರಿಯೆ
 4. ಸುಧಾ ಚಿದಾನಂದಗೌಡ

  ನಿಜ, ಹಸಿವು ಎಲ್ಲವನ್ನು ಮರೆಸಿ ಕೇವಲ ಕಬಳಿಸುವುದನ್ನೇ ನೋಡುತ್ತದೆ. ಆದರೂ, ಹಸಿವಾಗಿದೆಯೆಂದು ಹುಲಿ ಹುಲ್ಲು ಮೇಯುವುದಿಲ್ಲ. ಎಷ್ಟೇ ಹಸಿವಾಗಿದ್ದರೂ ಜೇನು ಹೂವಿನ ಮೇಲಲ್ಲದೆ ಮುಳ್ಳಿನ ಮೇಲೆ ಕೂರುವುದಿಲ್ಲ. ಇಷ್ಟು ಕನಿಷ್ಟ ವಿವೇಚನೆಯನ್ನು ಮನುಷ್ಯ ಯಾಕಾಗಿ ಕಳೆದುಕೊಂಡ ಎಂಬುದೇ ವ್ಯಥೆ. ಮಾಧ್ಯಮದ ಲೋಪದೋಷಗಳನ್ನು ತುಂಬ ಮಾರ್ಮಿಕವಾಗಿ ಹಿಡಿದಿಟ್ಟಿದೆ ಈ ಲೇಖನ. ಸಮಾಜದ ಬಗೆಗಿನ ಒಂದು ಜವಾಬ್ದಾರಿ ಇಲ್ಲದೆ ಹೋದರೆ ಲಗಾಮಿಲ್ಲದ ಕುದುರೆಯೇ ಸೈ.

  ಪ್ರತಿಕ್ರಿಯೆ
 5. Gayatri Badiger, Dharwad

  ಟಿ ಆರ್ ಪಿ bennettiruva maadhyamagalige ಲಗಾಮುbilalebeku….

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಸುಧಾ ಚಿದಾನಂದಗೌಡCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: