ಚಾಮ ಚಲುವೆ ಅ೦ದ ಚ೦ದ!

ಚಾಮ ಚಲುವೆ: ರಂಗಭೂಮಿಗೊಂದು ಚೆಲುವು

– ಜಿ.ಆರ್.ಸತ್ಯಲಿಂಗರಾಜು

ನಾಟ್ಕ ಅಂದ್ರೆ ಬರೀ ನಾಟ್ಕ ಅಲ್ಲ ತಾಯೀ

ನಾಟ್ಕದೊಳಗೊಂದು ನಾಟ್ಕ ಐತೆ ತಾಯಿ

ಚಾಮುಂಡಿ ನಂಜುಂಡ ಪ್ರೀತೀಯ ಮಾಡೋದು

ಸವತೀರು ಕಿತ್ತಾಡೋದು, ನರಮನುಷರಂಗೆ ಬೈದಾಡೋದು

ಬಣ್ಣಬಣ್ಣದ ಲೈಟಲ್ಲಿ ತೋರಿಸವ್ರೆ,

ಹಳ್ಳ ದಿಣ್ಣೇಲು ಪ್ರತ್ಯಕ್ಷ ಮಾಡವ್ರೆ..

ಮೈಸೂರಲ್ಲೇ ಬೆಟ್ಟಾನೂ, ನಂಜ್ಲಗೂಡ್ನು ತೋರ್ಸವ್ರೆ

ಮಹಿಷಾಸುರ ಸತ್ತೋಯ್ತಾನೆ, ನಂಜುಂಡ ಉಳ್ಕೋತಾನೆ

ಮೂರೆಂಡ್ರ ಗಂಡನಾಗಿ ಹೆಂಗೆ ಬಾಳುವೆ ಮಾಡ್ತಾನೆ..

ಅನ್ನೋದ ನೋಡೋಕೆ ಒಂದಪ ನಾಟಕಕ್ಕೆ ಬನ್ರಣ್ಣ… ತಂದನಾನ ತಾನಾನ..

ಎನುವಂತೆ ಮಾಡಿರುವುದು ಧ್ವನ್ಯಾಲೋಕದಲ್ಲಿ ಅಭಿನಯಿಸಲ್ಪಡುತ್ತಿರುವ ನಾಟಕ ಚಾಮ ಚಲುವೆ.

  ನಾಡ ದೇವತೆ ಚಾಮುಂಡೇಶ್ವರಿ, ನಂಜನಗೂಡಿನ ಹಕೀಂ ನಂಜುಂಡನ ಪ್ರಣಯ ಪ್ರಸಂಗದ ಜನಪದ ಕಾವ್ಯದ ಹಾಡುಗಳು ಕೇಳುಗರ ಕಿವಿ ನಿಮಿರಿಸಿ ಭಾವಪರವಶಗೊಳಿಸುವಂಥವು. ಈಗ ಅದೇ ಪ್ರಸಂಗವನ್ನ ದೃಶ್ಯ ಕಾವ್ಯದ ರೀತಿಯಲ್ಲಿ ಕಟ್ಟಿಕೊಟ್ಟು ನೋಡುಗರ ಕಣ್ಣುಗಳೂ ಅರಳುವಂತೆ ಮಾಡಿಕೊಟ್ಟಿರುವುದು ಚಾಮ ಚಲುವೆ. ಪ್ರೀತಿ ಮುಂದೆ ಮಹಿಷಾಸುರನನ್ನ ಸಂಹರಿಸಿದ ಮಾಂಸಾಹಾರಿ ಚಾಮುಂಡಿಯೂ ಒಂದೇ. ನಂದಕಾಸುರನನ್ನ ವಧೆ ಮಾಡಿದ ಸಸ್ಯಾಹಾರಿ ನಂಜುಂಡನೂ ಒಂದೇ ಎಂಬುದನ್ನ ಜನಪದದ ದೇವಾನುದೇವತೆಗಳ ಪ್ರಣಯ ಪ್ರಸಂಗದ ಮೂಲಕ, ಪ್ರೀತಿ ಪ್ರೇಮ ದೇವರು.. ಮನುಜರನ್ನೂ ಮೀರಿಸಿ ನಿಲ್ಲುವಂಥದ್ದು ಎಂಬುದನ್ನ ಹೇಳ ಹೊರಟಿರುವ ನಾಟಕ,ಕೊನೆಗೂ ಜಾತೀಯತೆಯನ್ನ ಬಿಡಿ, ಮಾಂಸಾಹಾರ ಸಸ್ಯಾಹಾರದ ಹೆಸರಲ್ಲಿ ಮೇಲು ಕೀಳು ಬೇಡ ಎಂಬ ಸಂದೇಶವನ್ನ ಸ್ಪಷ್ಟವಾಗಿ ನೀಡುವಲ್ಲಿ ಯಶಸ್ವಿಯಾಗಿದೆ. ಭಾವನಾದ ನಂಜುಂಡೇಶ್ವರನಿಗೆ ಕಣ್ಗಾವಲಾಗಿ ನಿಲ್ಲುವ ಇಬ್ಬರು ಸೋದರನ್ನುಳ್ಳ, ದೇವೀರಿ ಮತ್ತು ಪಾರ್ವತಿ ಎಂಬ ಇಬ್ಬರು ಹೆಂಡಿರ ಗಂಡ ನಂಜುಂಡ,; ಅಕ್ಕನಾದ ಚಾಮುಂಡಿಯ ಬೆವರಿನಿಂದ ಜನ್ಮ ತಳೆದು ಮಹಿಷಾಸುರನ ಹತ್ಯೆಗೆ ಉದ್ದ ನಾಲಗೆ ಚಾಚಿ,ರಕ್ತ ಬೀಜಾಸುರರ ಸಂತತಿಯನ್ನ ಮಟ್ಟ ಹಾಕಿದ್ದ ಉತ್ತನಹಳ್ಳಿ ಉರಿಕಾತಿ, ಅಣ್ಣನಾದ ಶ್ರೀರಂಗಪಟ್ಟಣದ ಶ್ರೀರಂಗನಾಥನ ಸಹಾಯದಿಂದ, ಮೂರನೇಯವಳನ್ನಾಗಿ ಚಾಮುಂಡಿಯನ್ನ ನಂಜುಂಡ ಕಟ್ಟಿಕೊಳ್ಳಲು ಯಶಸ್ಸಾಗುವಂತೆ ಮಾಡುವ ಕತೆಯೇ ನಾಟಕದ ಹೂರಣ. ಇಬ್ಬರು ಅಕ್ಕಂದಿರಿಗೆ ನೆರವಾಗಲು ನಿಲ್ಲುವ ಇಬ್ಬರು ಸೋದರರ ಜತೆಗೂಡಿ, ಸವತಿ ಚಾಮುಂಡಿ ಜತೆ ಜಗಳ ತೆಗೆಯುವುದು ಒಂದು ತಂಡವಾದರೆ; ಉರಿಮಾರಿ ಮತ್ತು ಶ್ರೀರಂಗನ ಸಹಾಯದಿಂದ ನಂಜುಂಡನನ್ನ ಗಂಡನನ್ನಾಗಿ ಉಳಿಸಿಕೊಳ್ಳಲು ಚಾಮುಂಡಿಯದೇ ಮತ್ತೊಂದು ತಂಡವಾಗಿ ರಂಗದ ಮೇಲೆ ಅಭಿನಯಿಸುತ್ತಿದ್ದರೆ, ನಂಜುಂಡ ಪೆಚ್ಚನಾಗಿ ಕೂರುವಂತೆ, ಪ್ರೇಕ್ಷಕ ತನ್ನನ್ನ ತಾನೇ ಮೈಮರೆತು ಕೂತು ತಂದನ್ನ ತಾನಾನ ತಂದ ನಾನಾ ತಾನಾನ…ಎಂದು ಗುನುಗಿಕೊಳ್ಳುವುದು ಖಚಿತ. ಅಷ್ಟರಮಟ್ಟಿಗೆ ಜನಪದ ಕತೆಯನ್ನ ರಂಗದ ಮೇಲೆ ತಂದಿರುವ ಮಂಡ್ಯ ರಮೇಶ್, ಧ್ವನ್ಯಾಲೋಕವನ್ನೇ ಚಾಮುಂಡಿ ಬೆಟ್ಟ, ನಂಜನಗೂಡನ್ನಾಗಿಸಿ, ನೋಡುಗರನ್ನೆಲ್ಲ ಜನಪದ ಕಾಲಕ್ಕೇ ಕರೆದೊಯ್ಯುವಲ್ಲಿ ಯಶಸ್ಸಾಗಿದ್ದಾರೆಂದರೆ ಅದಕ್ಕೆ ಸಂಗೀತ ನೀಡಿರುವ ಪಿಚ್ಚಳ್ಳಿ ಶ್ರೀನಿವಾಸ, ರಂಗಸಜ್ಜಿಕೆ, ದೀಪಾಲಂಕಾರ, ಧ್ವನಿವ್ಯವಸ್ಥೆ ಮಾಡಿರುವವರ ಪಾಲೂ ಇದೆ. ಸರೌಂಡೆಡ್ ಸ್ಟೀರಿಯೋ, ಗ್ರಾಫಿಕ್ ತಂತ್ರಜ್ಚಾನ ಇವೆಲ್ಲ ಚಿತ್ರರಂಗದಲ್ಲಿ ಹಾಸು ಹೊಕ್ಕಾಗಿಬಿಟ್ಟು, ಪ್ರಕ್ಷಕರಿಗೆ ಹೊಸಾ ಅನುಭವವನ್ನ ಕಟ್ಟಿಕೊಡುತ್ತಿವೆ. ಇಂಥದ್ದೇ ತಂತ್ರಜ್ಚಾನದ ಮಾಧರಿಗಳನ್ನ ನಾಟಕದಲ್ಲಿ ಅನುಸರಿಸಲು ಸಾಧ್ಯವಾ? ಹೌದು ಎನಿಸುವ ಮಟ್ಟಿಗೆ ಜನಪದ ಕತೆಯನ್ನ ರಂಗದ ಮೇಲೆ ತಂದಿರುವ ಮಂಡ್ಯ ರಮೇಶ್, ಧ್ವನ್ಯಾಲೋಕವನ್ನೇ ಚಾಮುಂಡಿ ಬೆಟ್ಟ, ನಂಜನಗೂಡನ್ನಾಗಿಸಿ, ನೋಡುಗರನ್ನೆಲ್ಲ ಭ್ರಮಾಲೋಕಕ್ಕೆ ಕರೆದುಕೊಂಡೋಗುವಲ್ಲಿ ಯಶಸ್ಸಾಗಿದ್ದಾರೆ. ಹಾಗೆಯೇ ಕರಾವಳಿ ಭಾಗದ ಯಕ್ಷಗಾನ ಬಯಲಾಟದ ಪಾತ್ರ ನಿರ್ವಹಣೆ ಧಾಟಿಯಲ್ಲೇ, ಪಾತ್ರಧಾರಿಗಳೆಲ್ಲ ನಿಲ್ಲಲ್ಲಿ ನಿಲ್ಲಲಾರದೇ, ಆ ತುದಿಯಿಂದ ಈ ತುದಿವರೆಗೆ ರಂಗದ ಮೇಲೆಲ್ಲ ಕುಣಿದು ಕುಪ್ಪಳಿಸುತ್ತಲೇ ಇರುವಂತೆ ಮಾಡುವ ಮೂಲಕ ಜನಪದ ಪಾತ್ರಗಳನ್ನ, ಬಿಂಬಿಸುವ ಮೂಲಕವೇ ಮಹಿಷಮರ್ಧನದ ತನಕ, ಸುರ-ಅಸುರ ಎಂಬ ಪರಿಕಲ್ಪನೆಗೂ, ಆನಂತರದಲ್ಲಿ ಲವ್ವು..ಸಿಡುಕು…ಜಗಳ…ಕದನ..ನಾಟಕ..ಇತ್ಯಾದಿಗಳನ್ನೆಲ್ಲ ಕುಣಿಯುವಿಕೆಯಿಲ್ಲದ, ನಿಂತಲ್ಲೇ ನಿಂತು ಮಾತಾಡುವ ಮೂಲಕ ನರ ಮನುಷ್ಯನ ಕಲ್ಪನೆಯನ್ನ ವಿಭಾಗಿಸುವ ತಂತ್ರಗಾರಿಕೆಯಲ್ಲು ಮಂಡ್ಯ ರಮೇಶ್ ಅತ್ಯುತ್ತಮ ನಿದರ್ೇಶಕ ಎಂಬುದನ್ನ ಸಾಧಿಸಿರುವುದು ಅಭಿನಂದನೀಯ. ನಾಟಕ ಶುರುವಾಗುವುದೇ ನಂಜುಂಡನ ತೇರು ಮಲ್ಲನಮೂಲೆ ಬಳಿ ಅದು ನಿಂತು ಬಿಟ್ಟಾಗ. ಆ ತೇರು ನಡೆಯುವುದು ವರ್ಷಕ್ಕೊಮ್ಮೆ. ಆದರೆ ನಾಟಕದಲ್ಲಿ ಆ ತೇರು ಎಳೆಯುವಾಗ ತಿಂಗಾ ತಿಂಗಳಿಗೆ ಚಂದ ನಮ್ಮ ನಂಜನಗೂಡು…ಎಂಬ ಹಾಡು ಹಾಡಲಾಗುತ್ತಿರುತ್ತೆ ಎಂಬುದನ್ನು, ಒಳ್ಳೆಯದು ಸಾಕಷ್ಟಿರುವಾಗ ಸಣ್ಣಪುಟ್ಟವು ಲೆಕ್ಕಕ್ಕಿಲ್ಲ ಎಂದುಕೊಂಡು ಬಿಡಬಹುದು. ಯಾವ ದೇವರ ಭಕ್ತರಿಗೂ, ಯಾವ ಜಾತಿ ಮನಸ್ಸುಗಳಿಗೂ ಕಿರಿಕಿರಿಯಾಗದೆ, ಆಗಿನ ದೇವತೆಗಳು ಜಾತಿ ಮಾಡ್ತಿರಲಿಲ್ಲ..ಹುಲು ಮಾನವರು ನಾವ್ಯಾಕೆ ಮಾಡಬೇಕು ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುವ ಚಾಮ ಚಲುವೆ ಸಖತ್ತಾಗಿ ನಗು ನಗಿಸುತ್ತಲೇ,ಪ್ರಸ್ತುತ ಸಮಾಜಕ್ಕೂ ಜಾತಿ ಬಿಟ್ಟರೆ ನೀವೇ ದೇವರು ಎಂಬಂತೆಯೂ ಮಂಡ್ಯ ರಮೇಶ್ ಮಾಡಿರುವುದನ್ನ ನೀವ್ಯಾಕೆ ನೋಡಬಾದರ್ು, ಆ ಹಳ್ಳ ದಿಣ್ಣೆಯೊಳ್ಗೂ, ಆ ಮೂಲೆ ಈ ಮೂಲೆಯೊಳ್ಗೂ, ಆ ಬಣ್ಣ ಈ ಬಣ್ಣದೊಳ್ಗೂ..ಪಾತ್ರಗಳೆದ್ದೆದ್ದು ಬರೋವಾಗ…ನೋಡಲು ಬರಾದಿದ್ರೆ ಚಾಮುಂಡಿ ನಂಜುಂಡ ಶಾಪವನ್ನಾಕ್ತಾರೆ ತಂದನ್ನ ತಾನಾನಾ… ತಂದ ನಾನಾ ತಾನಾನ…ಒಂದ್ಸಲ ಹೋಗಿ ನೋಡ್ರಣ್ಣಾ…  ]]>

‍ಲೇಖಕರು G

August 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವನ ತಲ್ಲಣ..

ಅವನ ತಲ್ಲಣ..

ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This