ವಸುಂಧರಾ ಕದಲೂರು
ಹೊಟ್ಟೆ ತುಂಬಿದ ಮೇಲೆ
ಹೊಲದ ದಾರಿಯ ಮರೆತೆ
ಪೀಠ ಏರಿದ ಮೇಲೆ
ಕಲಿತ ಪಾಠವ ಮರೆತೆ
ಹತ್ತಿ ಕುಳಿತ ಬಂಡಿಯನು
ಮತ್ತೆ ಜೋರು ಓಡಿಸಿದೆ
ಬಂಧು, ನೇಹ-ಬಳಗವನು
ಬಿಟ್ಟು ಮುಂದೆ ಹೋದೆ
ಅಗಣಿತ ಆಸೆ ಗಣಿಯಾದ ಮನ
ನೀ ಹೊಂದಿ; ಬಗೆದಷ್ಟು ತಣಿಯದ
ಬಯಕೆಯ ಮರುಭೂಮಿಯಾದೆ.
ಬರಿಯ ಮರಳಿಗೇ ಮರುಳಾಗಿ
ನೀನು ಮರೀಚಿಕೆಯಾಗಿ ಹೋದೆ.

ಅಳವಿರದ ಆಲೋಚನೆಯಲಿ,
ಆಳ ಅಗಲ ಮೀರಿದ ಚಿಂತನೆಗಳಲಿ,
ಪ್ರಳಯ ಸ್ವರೂಪಿನಿ ಮನವ ನೀ
ಮಿತಿಯಿರದೆ ಬಳಸಿದೆ ನೀನು
ಅನ್ಯಾಯ ವಾಹಿನಿಯಾದೆ.
ಎಂದಿಗಾದರೂ ಈ ನೆಲಕ್ಕಾಗುವ
ಜಲವಾಗಲಿಲ್ಲ; ತುತ್ತಿಗಾಗುವ
ಅನ್ನವಾಗಲಿಲ್ಲ; ಪ್ರಾಣಕ್ಕೊದಗುವ
ವಾಯುವಾಗಲಿಲ್ಲ; ಇದ್ದೂ ನೀ
ಇಲ್ಲದಂತಾದೆ, ಎಲ್ಲಿಯೂ ಸಲ್ಲದಾದೆ.
ಒಮ್ಮೆ ನಿಂತು ಆಲೋಚಿಸು; ಅತ್ತಿತ್ತ
ತಿರುಗಿ ನೋಡದೆ ನೀ ಸಾಗಿರುವುದು
ಎತ್ತ ಕಡೆಗೆ ! ಯಮನೂರಿನ ಆ
ದಾರಿ ಇನ್ನೀಗ ಬಹಳ ದೂರವಿಲ್ಲ.
ಚಿಂತನೆಗೆ ನೂಕುವ ಕವಿತೆ.olledide ವಸುಂಧರಾ