ಚಿಕ್ ಚಿಕ್ ಸಂಗತಿ : ನಿನ್ನ ಗುಡಿಗೆ ಬೆಂಕಿ ಹೊತ್ತೀಸ.. 

 

ಜಿ  ಎನ್ ಮೋಹನ್ 
‘ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..’

ಅಂದ ಆತ ತಕ್ಷಣ ಕಣ್ಣೀರಾದ

ನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ

‘ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ..’ ಅಂತ ಅಳಲು ಬಿಟ್ಟು ಬಿಡಬೇಕೋ ಗೊತ್ತಾಗದೆ ಕಂಗಾಲಾದೆ

ಆತನಿಗೆ ಅಳು ಕಂಟ್ರೋಲ್ ಮಾಡಲು ಆಗಲೇ ಇಲ್ಲ.

‘ಕ್ಷಮಿಸಿ ಸರ್, ಕ್ಷಮಿಸಿ ಸಾರ್’ ಎನ್ನುತ್ತಲೇ ಆತನ ಕಣ್ಣು ಎದುರಿಗಿದ್ದ ದಾರಿಯೂ ಕಾಣದಷ್ಟು ಮಂಜಾಗಿ ಹೋಯಿತು

ಇನ್ನೇನೂ ಮಾಡಲು ತೋಚದೆ ಆತ ರಸ್ತೆ ಬದಿಗೆ ಗಾಡಿ ನಿಲ್ಲಿಸಿದ
auto2ಆಟೋ ಹತ್ತಿದಾಗೆಲ್ಲಾ ಸುಮ್ಮನೆ ಕೂರುವುದು ನನ್ನ ಜಾಯಮಾನವಲ್ಲ.

ಹಾಗಾಗಿ ಇವನನ್ನೂ ಮಾತಿಗೆಳೆದುಕೊಂಡು ಕುಳಿತಿದ್ದೆ.
ಅವತ್ತು ಏನು ಮಾಡಿದರೂ ಉಬೆರ್/ ಓಲಾ ಸಿಗುವ ಲಕ್ಷಣವೇ ಕಾಣಲಿಲ್ಲ

ಹಾಗಾಗಿ ‘ಹಳೆ ಗಂಡನ ಪಾದವೇ ಗತಿ..’ ಎನ್ನುವಂತೆ ನಾನು ಆಟೋಗೆ ಕೈ ಅಡ್ಡ ಹಾಕಿದ್ದೆ
ಸ್ವಲ್ಪ ದೂರ ಹೋಗಿರಬೇಕು ಉಬೆರ್, ಓಲಾ ಬಂದು ನಿಮಗೆ ಪ್ರಾಬ್ಲಮ್ ಆಗಿಲ್ವಾ..?? ಅಂದೆ

ಆತ ಶತಮಾನಗಳ ಮಾತನ್ನು ನುಂಗಿ ಕುಳಿತಿದ್ದವನಂತೆ ಮಾತು ಆಡುತ್ತಲೇ ಹೋದ

ನಮ್ಮ ಆಟೋ ಸಂತೆ ದಾಟಿತು, ಮೇಲ್ಸೇತುವೆ ಏರಿತು, ಗಲ್ಲಿ ಹೊಕ್ಕಿತು,

ಮಾಲ್ ಮುಂದೆ ಹಾಯ್ದಿತು, ಬಾಳೆ ಹಣ್ಣು ಮಂಡಿಯನ್ನೂ ನೋಡಿತು

ಇನ್ನೊಂದು ಮಾಲ್ ಗಾಗಿ ಬಡವರಿಗೆ ಬಟ್ಟೆ ನೀಡುತ್ತಿದ್ದ ಮಿಲ್ ಮುಚ್ಚಿದ್ದ ಬೀದಿಯನ್ನೂ ದಾಟಿತು

ಆದರೆ ಅವನ ಮಾತು ನಿಂತಿರಲಿಲ್ಲ
‘ಯಾವುದೀ ಪ್ರವಾಹವು ..’ ಎನ್ನುವುದಕ್ಕೆ ಅರ್ಥ ಕೊಡಲೇಬೇಕು ಎಂದು ಮನಸ್ಸು ಮಾಡಿಬಿಟ್ಟವನಂತೆ ಮಾತು ಆಡುತ್ತಲೇ ಹೋದ

ಹಾಗೆ ಮಾತನಾಡುತ್ತಿದ್ದವನೇ ಹೀಗೆ ದಿಢೀರ್ ಕಣ್ಣೀರಾಗಿ ಹೋದ

ನಾನು ಅವನು ಸಂಪೂರ್ಣ ಕಣ್ಣೀರಾಗುವವರೆಗೂ ಏನೊಂದೂ ಮಾತನಾಡದೆ ಕುಳಿತೆ

ಅವನು ಭಿಕ್ಕಿ ಭಿಕ್ಕಿ ಅತ್ತ. ಇನ್ನೊಂದು ಹನಿಯೂ ಉಳಿದಿಲ್ಲ ಎನ್ನುವವರೆಗೂ ಅತ್ತ

ಆಗ ನಾನು ಕೇಳಿದೆ ‘ಏನಾಯ್ತು’ ಅಂತ
ನನಗೆ ಇನ್ನು ಬೇಕಿದ್ದದ್ದು ೨೦ ರೂಪಾಯಿ ಮಾತ್ರ ಸಾರ್

ಒಬ್ಬೇ ಒಬ್ಬರು ಆಟೋ ಹತ್ತಿದ್ದರೆ ಸಾಕಿತ್ತು ನನ್ನ ತಾಯಿಯನ್ನು ಗೌರವವಾಗಿ ಮನೆಗೆ ಸೇರಿಸುತ್ತಿದ್ದೆ ಎಂದ

ಅರೆ! ೨೦ ರೂಪಾಯಿಗೂ.. ಆ ತಾಯಿಗೂ ಏನು  ಸಂಬಂಧ ಅನಿಸಿತು

FB_IMG_1470849615479
ನನಗೆ ಇದೆಲ್ಲಾ ಅರ್ಥವಾಗುವ ಸಾಧ್ಯತೆಯೇ ಇಲ್ಲ ಅಂತ ಅವನಿಗೆ ಅನಿಸಿತೇನೋ

ಹೇಳಿದ- ನಾನು ಆ ದಿನ ದೂರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಟೋ ಓಡಿಸುತ್ತಿದ್ದೆ

ನನ್ನ ತಂಗಿಯಿಂದ ಫೋನ್ ಬಂತು- ಅಮ್ಮ ಹೋಗಿಬಿಟ್ಟರು ಅಣ್ಣ ಅಂದಳು

ನಾನೋ ಆಟೋ ಓಡಿಸುತ್ತಿದ್ದವನು ಜೊತೆಯಲ್ಲಿದ್ದ ಕಸ್ಟಮರ್ ನ ದಾರಿ ಅರ್ಧದಲ್ಲೇ ಇಳಿಸುವ ಹಾಗೂ ಇರಲಿಲ್ಲ

ಹಾಗಾಗಿ ಅವರು ಹೇಳಿದ ಕಡೆಗೆ ಕಣ್ಣಲ್ಲಿ ನೀರು ಇಟ್ಟುಕೊಂಡೇ ಆಟೋ ಓಡಿಸಿದೆ
ಅವರು ಇಳಿದ ತಕ್ಷಣವೇ ಆಸ್ಪತ್ರೆಗೆ ಫೋನ್ ಮಾಡಿದೆ

ಆಂಬುಲೆನ್ಸ್ ಇರಲಿ ಅಣ್ಣ ಒಂದು ಗಂಟೆಯೂಳಗೆ ಬಂದು ಬಿಡ್ತೀನಿ ಅಂತ

ಆಯ್ತಪ್ಪಾ ಆದ್ರೆ ೫೦೦ ರೂಪಾಯಿ ಆಗುತ್ತೆ ಅಂದ

ಶವ ಸಾಗಿಸಲು ಫ್ರೀ ಆಆಂಬ್ಯುಲೆನ್ಸ್ ಕೊಡ್ತೀವಿ ಅಂತ ಸರ್ಕಾರ ಹೇಳಿತ್ತು

ನಾನು ‘ಯಾಕೆ ಅಣ್ಣ’ ಅಂದೆ.  ‘ಅದು ನಮ್ಮ ಚಾರ್ಜ್ ಸತ್ತೋರ ಜೊತೆ ಓಡಾಡಬೇಕಲ್ಲಪ್ಪಾ’ ಅಂದ
ನನ್ನ ಜೋಬಲ್ಲಿ ಅದುವರೆಗೂ ದುಡಿದಿದ್ದೆಲ್ಲಾ ಎಣಿಸಿದೆ. ತಂಗಿ ಬಳಿ ಇದ್ದ ಪುಡಿಗಾಸು ಎಣಿಕೆ ಹಾಕಿದೆ. ಮನೆಯಲ್ಲಿ ಇರೋದು ಎಷ್ಟು ಫೋನ್ ಮಾಡಿ ಕೇಳಿದೆ

ಎಲ್ಲಾ ಸೇರಿದರೂ ೫೦೦ ಆಗುತ್ತಿಲ್ಲ

ಜೊತೆಗೆ ಕಂಡ ಡ್ರೈವರ್ ಗಳಿಂದಲೂ ಅಷ್ಟಿಷ್ಟು ಸೇರಿಸಿದೆ

ಇನ್ನು ೨೦ ರೂಪಾಯಿ ಮಾತ್ರ ಬೇಕಿತ್ತು

ಅಮ್ಮ ಅಲ್ಲಿ ಉಸಿರು ಇಲ್ಲದೆ ಮಲಗಿದ್ದಾರೆ ಅಂತ ಗೊತ್ತಿತ್ತು ತಕ್ಷಣ ಹೋಗಬೇಕು ಅನ್ನೋದು ಗೊತ್ತಿತ್ತು

ಏನು ಮಾಡಲಿ ೨೦ ರೂಪಾಯಿ ಇಲ್ಲದೆ ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗುವ ಹಾಗೇ ಇಲ್ಲ
ಸರಿ ಇದ್ದ ಎಲೆಕ್ಟ್ರಾನಿಕ್ ಸಿಟಿಯಲ್ಲೇ ಬೀದಿ ಬೀದಿ ಸುತ್ತಿದೆ

ಒಬ್ಬ, ಒಬ್ಬೇ ಒಬ್ಬ ನನ್ನ ಆಟೋ ಹತ್ತಲಿ ಅಂತ

ಸಾರ್ ಎಲ್ಲಿ ನೋಡಿದ್ರೂ ದೊಡ್ಡ ದೊಡ್ಡ ಬಿಲ್ಡಿಂಗ್ ಸಾರ್ ಸಾವಿರಾರು ಜನ ಬರ್ತಾರೆ ಹೋಗ್ತಾರೆ

ನನ್ನ ಕಣ್ಣೆದುರಿಗೇ ಬೇಕಾದಷ್ಟು ಉಬೆರ್ ಓಲಾಗಳು ಬಂತು

ಜನ ಹತ್ತಿ ಹೋದರು

ನಾನು ಕಣ್ಣಲ್ಲಿ ಆಸೆ ಇಟ್ಟುಕೊಂಡು ಎಲ್ಲರ ಮುಂದೆಯೂ ಸುತ್ತಿದೆ

ಆಗಲಿಲ್ಲ,, ಒಂದು ಗಂಟೆ ತಡವಾಯ್ತು ಆಟೋ ಗ್ಯಾಸ್ ಮುಗಿದು ಹೋದರೆ ಅನ್ನೋ ಭಯಾ ಶುರುವಾಯ್ತು
ಕೊನೆಗೆ ಆಸ್ಪತ್ರೆ ಕಡೆ ಗಟ್ಟಿ ಮನಸ್ಸು ಮಾಡಿ ಆಟೋ ಓಡಿಸಿದೆ

ಅಲ್ಲಿ ಅಂಬ್ಯುಲೆನ್ಸ್ ಡ್ರೈವರ್ ಗೆ ೨೦ ರೂಪಾಯಿ ಕಡಿಮೆ ಇದೆ ಅಣ್ಣ ಅಂದೆ

ಆತ ಫೋನ್ ನಲ್ಲಿದ್ದ . ಕೈ ಸನ್ನೆಯಲ್ಲೇ ‘ಹೋಗ್ ಹೋಗ್ ಆಗೋದಿಲ್ಲ’ ಅಂದ

ನಾನು ಎಲ್ಲಿಗೆ ಹೋಗ್ಲಿ, ಅಮ್ಮ ಇಲ್ಲದೆ ಹೇಗೆ ಹೋಗ್ಲಿ ?

ಅವನ ಮುಂದೆಯೇ ಕುಕ್ಕುರುಗಾಲಲ್ಲಿ ಕೂತೆ

ಅವನು ಈಗ ಒಪ್ತಾನೆ, ಆಗ ಒಪ್ತಾನೆ ಅಂತ
108 ambulance2ನಿಜ ಹೇಳ್ತೀನಿ ಸಾರ್ ಒಂದು ಗಂಟೆಗೂ ಜಾಸ್ತಿ ಫೋನ್ ಹಿಡಿದುಕೊಂಡೆ ನಿಂತಿದ್ದ, ನನ್ನ ಕಡೆ ಕಣ್ಣೆತ್ತಿ ಕೂಡಾ ನೋಡಲಿಲ್ಲ

ಅವನು ಒಂದು ಫೋನ್ ಕಡಿಮೆ ಮಾಡಿದ್ರೂ ನನ್ನ ೨೦ ರೂಪಾಯಿ ಅವನಿಗೆ ಮಿಕ್ಕಿ ಹೋಗ್ತಿತ್ತು ಆದರೆ ಮಾಡ್ಲಿಲ್ಲ

ನಾನು ಆಸ್ಪತ್ರೆಯಲ್ಲಿ ಕೈ ಮುಗಿಯದವರಿಲ್ಲ

ಡ್ರೈವರ್ ವಾಚ್ ಮ್ಯಾನ್ ರೆಸೆಪ್ಷನಿಸ್ಟ್ ಮ್ಯಾನೇಜರ್ ಎಲ್ಲಾ ಡಾಕ್ಟರ್
೨೦ ರೂ ಪಾಯಿ ನನ್ನ ಮತ್ತು ಅಮ್ಮನ ನಡುವೆ ಕಲ್ಲಿನಂತೆ ಕೂತು ಬಿಟ್ಟಿತ್ತು

ಬೆಳಗ್ಗೆ ಸತ್ತ ಅಮ್ಮನನ್ನ ಸಂಜೆ ಆದರೂ ಸಾಗಿಸಲಾಗಲಿಲ್ಲ

ಕೊನೆಗೆ ಒಂದು ನಿರ್ಧಾರಕ್ಕೆ ಬಂದೆ – ಸೀದಾ ಮ್ಯಾನೇಜರ್ ಹತ್ರ ಹೋಗಿ ಹೆಣ ನೀವೇ ಸುಟ್ಟು ಹಾಕಿಬಿಡಿ ನಮಗೆ ಬೇಡ ಅಂದೆ

ಅವರೇನೂ ಬಗ್ಲಿಲ್ಲ

ಆದರೆ ನಾನು ಇನ್ನೇನು ಮಾಡೋಕಾಗ್ತಿತ್ತು ಅಮ್ಮನ ಹಳೆ ಬಟ್ಟೆ, ಚೊಂಬು, ಮನೆಯಿಂದ ಅಮ್ಮನಿಗೆ ಇಷ್ಟ ಅಂತ ತಂದಿದ್ದ ಒಂದೆರಡು ಉಂಡೆ

ಎಲ್ಲ ಬ್ಯಾಗಿಗೆ ಹಾಕಿ ತಂಗಿಯೊಡನೆ ಹೊರಟೆ ಬಿಟ್ಟೆ

ಬಾಗಿಲು ದಾಟಿದೆ, ಗೇಟ್ ದಾಟಿದೆ, ರಸ್ತೆ ದಾಟಿದೆ

ಆಗ ಅವರಿಗೆ ಅನಿಸಿಹೋಯ್ತೆನೋ ಇವನು ನಿಜಕ್ಕೂ ಈ ಮಾತು ಹೇಳಿದ್ದಾನೆ ಇನ್ನು ನಾವೇ ಧಫನ್ ಮಾಡೋ ಹಾಗಾಗುತ್ತೆ ಅಂತ

ಆಗ ಬಂತು ನೋಡಿ ಸಾರ್ ನನ್ನ ಹಿಂದೆ ಆಂಬ್ಯುಲೆನ್

ಮನೆಗೆ ಕರೆದುಕೊಂಡು ಬಂದು ಅಮ್ಮನಿಗೆ ಚಾಪೆಯ ಮೇಲೆ ಮಲಗಿಸಿ ಕೈ ಮುಗಿದೆ ಅಂದ

 

ನಾನೂ ಆ ವೇಳೆಗೆ ನಿಟ್ಟುಸಿರಾಗಿದ್ದೆ

ಸ್ವಲ್ಪ ಹೊತ್ತು ಸುಮ್ಮನೆ ಕೂತೆ

ಹಾಗೆ ನಾವಿಬ್ಬರೂ ರಸ್ತೆ ಬದಿ ಆಟೋ ನಿಲ್ಲಿಸಿ ಎದೆ ಎದೆಗಳ ನಡುವೆ  ಸೇತುವೆ ಇದೆಯೋ ಇಲ್ಲವೋ ಅಂತ ಪರೀಕ್ಷಿಸಿ ಕೊಳ್ಳುತ್ತಿದ್ದೆವು
ಇಷ್ಟೆಲ್ಲಾ ಆದ ಮೇಲೂ ನನಗೆ ಒಂದು ಪ್ರಶ್ನೆ ಕೇಳಲು ಬಾಕಿ ಇತ್ತು

‘ಹಾಗಿದ್ರೆ ನಿಮ್ಮ ಅವತ್ತಿನ ಕಲೆಕ್ಷನ್ ಅಮ್ಮನ ಕಾರ್ಯಕ್ಕೆ ಬಳಿಸಿದ್ರಿ?’ ಅಂದೆ

ಅದುವರೆಗೂ ಅತ್ತಿದ್ದ ಆ ಡ್ರೈವರ್ ಜೋರಾಗಿ ನಕ್ಕು ಬಿಟ್ಟ

ಸಾರ್ ಮನೆ ತಲುಪಿದ್ದು ಅಷ್ಟೇ, ಇನ್ನೂ ಬಾಡಿ ಕೆಳಗೆ ಇಳಿಸಿಲ್ಲ ಆತ ಬಾಗಿಲೇ ತೆಗೀಲಿಲ್ಲ.

೪೮೦ ರೂಪಾಯಿ ಅವನ ಕೈಗೆ ಬಿದ್ದ ಮೇಲೇ ಅಮ್ಮ ಮನೆಗೆ ಎಂಟರ್ ಆಗಿದ್ದು ಅಂದ

ಏನು ಮಾಡಿದೆಯಪ್ಪಾ ಶಿವನೇ.. ನಿನ್ನ ಗುಡಿಗೆ ಬೆಂಕಿ ಹೊತ್ತೀಸ..

ಅನ್ನಬೇಕು ಅಂದುಕೊಂಡೆ
ಆಗ ಅವನೇ ಮಾತನಾಡಿದ

ಸಾರ್ ಅದು ಬಿಡಿ ಸಾರ್ ಈ ಕಥೆ ಕೇಳಿ ಅಂದ

ಅಮ್ಮ ಆಸ್ಪತ್ರೆ ಸೇರಿ ೧೪ ದಿನ ಆಗಿತ್ತು. ಡಾಕ್ಟರ್ ಬಂದವರೇ ಇವರನ್ನ ನೋಡಿಕೊಳ್ಳೋರು ಯಾರಮ್ಮಾ ಅಂತ ಕೇಳಿದ್ರು ನನ್ನ ತಂಗಿ ಬಂದು ನಿಂತಳು

ಪೇಶಂಟ್ ವೀಕ್ ಆಗಿದ್ದಾರೆ ಐ ಸಿ ಯು ಗೆ ಅಡ್ಮಿಟ್ ಮಾಡ್ಬೇಕು ಅಂದ್ರು

ತಕ್ಷಣ ತಂಗಿ ನನಗೆ ಫೋನ್ ಮಾಡಿದಳು

ಅಣ್ಣ ಹೀಗಂತೆ ಅಂತ

auto meterಅಮ್ಮನಿಗೆ ಪ್ರತೀ ದಿನ ಊಟ ತೆಗೆದುಕೊಂಡು ಹೋಗಬೇಕು ಅಂತ ಅಂದ್ರೂ ಅಷ್ಟು ಹೊತ್ತು ಡ್ಯೂಟಿ ಮಾಡದೆ ಹೋದ್ರೆ ಮನೇಲಿ ಅನ್ನ ಬೇಯಲ್ಲ ಸಾರ್ ಅಂತ ಸ್ಥಿತಿ ನಮ್ಮದು

ಹಾಗಿರುವಾಗ ಐ ಸಿ ಯು ಕಾಣಿಸೋದಿಕ್ಕೆ ಆಗುತ್ತಾ??

ಭಯ ಆಯ್ತು. ನಾನೇ ಡಾಕ್ಟರ್ ಗೆ ಫೋನ್ ಮಾಡಿದೆ ಸಾರ್ ಎಷ್ಟು ದಿನ ಇರಬೇಕಾಗುತ್ತೆ ಐ ಸಿ ಯು ನಲ್ಲಿ ಅಂತ

ಅವರು ಒಂದು ವಾರ ಆದ್ರೂ ಆಗಬಹುದು ಎರಡು ವಾರ ಆದ್ರೂ ಆಗಬಹುದು ಅಂದ್ರು

ಸಾರ್ ನಾನು ಬಡವ, ನೀವೇ ನೋಡಿದ್ದೀರಲ್ಲ ಸಾರ್ ನಾನು ಯೂನಿಫಾರ್ಮ್ ನಲ್ಲೆ ಆಸ್ಪತ್ರೆಗೆ ಬರ್ತೀನಿ ಅಂತ

ಡಾಕ್ಟರ್ ಫೋನ್ ಕಟ್ ಮಾಡಿದ್ರು

ಸರಿ ಇನ್ನೇನು ಅಮ್ಮ ಆಲ್ವಾ ಉಳಿದ್ರೆ ಉಳೀಲಿ ಇಲ್ಲಾ ಅಂದ್ರೆ ಸರಿಯಾಗಿ ನೋಡಿಕೊಳ್ಳಲಿಲ್ಲ ಅನ್ನೋ ಕೊರಗು ಇರೋದಿಲ್ಲ ಅಂತ ಅದಕ್ಕೂ ಸಜ್ಜಾದೆ
ಆಗ ಸಾರ್ ಅಗ್ಲೇ.. ಅಲ್ಲಿದ್ದ ಆಯಾ ಒಬ್ಬಳು ಫೋನ್ ಮಾಡಿದ್ಲು- ಯಾವ ಕಾರಣಕ್ಕೂ ಐ ಸಿ ಯು ಗೆ ಸೇರಿಸಬೇಡಿ

ದುಡ್ಡು ತಿನ್ನೋಕೆ ನಾಟಕ ಮಾಡ್ತಿದ್ದಾರೆ ನಿಮ್ಮ ತಾಯಿ ಸತ್ತು ಆಗ್ಲೇ ಒಂದು ಗಂಟೆ ಆಗಿದೆ ಅಂದರು
ನಾನು ಇದ್ದದ್ದು  ,ಕೋರಾಪುಟ್ ನಲ್ಲೂ ಅಲ್ಲ, ಬೆಹ್ರಾಮ್ ಪಾದದಲ್ಲೂ ಅಲ್ಲ.. ಬೆಂಗಳೂರಿನಲ್ಲಿ…

ಜಗತ್ತಿನ ಕಿರೀಟ, ಭಾರತದ ಸಿಲಿಕಾನ್ ಸಿಟಿ ಯಲ್ಲಿ

ಐಟಿ, ಬಿಟಿ ಎಂದು ಮೀಸೆ ತಿರುಗುತ್ತಿರುವ ನಗರಿಯಲ್ಲಿ

ಅಮೆರಿಕಾದ ಉಬೆರ್ ಸಹಾ ಕಣ್ಣಿಟ್ಟಿರುವ ಮಹಾನ್ ನಗರಿ ಬೆಂಗಳೂರಿನಲ್ಲಿ

ಆತ ಹೇಳುತ್ತಿರುವ ಕಥೆ ಇಲ್ಲಿನ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯದ್ದು
ಒಂದು ಕ್ಷಣ ಮಾತು ಹೊರಡಲಿಲ್ಲ

ಅದಕ್ಕೆ ಹೇಳಿದರಾ ಕವಿ ಎಕ್ಕುಂಡಿ – ಕೆಂಡದ ಮೇಲೆ ನಡೆದವನಿಗೆ ಮಾತ್ರವೇ ಕೆಂಡದ ಬಿಸಿ ಗೊತ್ತಾಗಲು ಸಾಧ್ಯ ಅಂತ
ಆತ ಆಟೋ ಸ್ಟಾರ್ಟ್ ಮಾಡಲು ಹೊರಟ

ಒಂದು ನಿಮಿಷ ಅಂದೆ

ಈಗ ಕಣ್ಣೀರಾಗುವ ಸರದಿ ನನ್ನದಾಗಿತ್ತು
ಇದೆಲ್ಲಾ ಯಾಕೆ ನೆನಪಾಯ್ತು ಅಂದರೆ ಗೆಳತಿಯೊಬ್ಬಳು ಒಂದು ಪೋಸ್ಟರ್ ವಾಟ್ಸ್ ಅಪ್ ಮಾಡಿದ್ದಳು

ಅದು ಪುಟ್ಟ ಹೋಟೆಲ್ ನ ಹೊರಗಡೆ ಇದ್ದ ಒಂದು ಫಲಕದ ಫೋಟೋ
ಅದರಲ್ಲಿತ್ತು- ಇಲ್ಲಿ ನೀವು ತಿಂಡಿ ತಿಂದರೆ ಒಂದು ಮನೆಯ ಮಗು ಶಾಲೆ ಸೇರುತ್ತೆ

ಸ್ಟಾರ್ ಹೋಟೆಲ್ ನಲ್ಲಿ ತಿಂದರೆ ಅದರ ಸಿಇಓ ಗೆ ಸಿಂಗಾಪುರ್ ನಲ್ಲಿ ಮಜಾ ಮಾಡಲು ಒಂದು ರಜಾ ಎಕ್ಸ್ಟ್ರಾ ಸಿಗುತ್ತೆ ಅಂತ

‍ಲೇಖಕರು Admin

August 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಿಕ್ ಚಿಕ್ ಸಂಗತಿ: ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!

ಚಿಕ್ ಚಿಕ್ ಸಂಗತಿ: ನಿಸಾರ್ ಅಹ್ಮದ್ ಯಾಕೆ ಸುಳ್ಳು ಹೇಳ್ತೀರಾ..!!

  ಈ ಬರಹದಲ್ಲಿ ನಿಸಾರ್ ಅಹ್ಮದ್ ಇಲ್ಲ. ಆದರೆ ನಿಸಾರ್ ಅಹ್ಮದ್ ಇದ್ದಾರೆ  ನಿಸಾರ್ ಅಹ್ಮದ್ ಅವರ ಅತ್ಯಂತ ಜನಪ್ರಿಯ ಕವಿತೆಗಳಲ್ಲಿ ಒಂದಾದ...

ಅಮ್ಮ ರಿಟೈರ್ ಆಗ್ತಾಳೆ..

ಅಮ್ಮ ರಿಟೈರ್ ಆಗ್ತಾಳೆ..

ಶ್ರೀಜಾ ವಿ ಎನ್ ಜಿ ಎನ್ ಮೋಹನ್  ಅಮ್ಮ ರಿಟೈರ್ ಆಗ್ತಾಳೆ.. ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು ಅಮ್ಮ.....

5 ಪ್ರತಿಕ್ರಿಯೆಗಳು

 1. Anonymous

  ಈ. ಆಟೊ ಡ್ರೈವರ್ ಕಷ್ಟ ಕ್ಕೆಸಹಾನುಭೂತಿ ಇದೆ..ಹಾಗೇ ಬೆಂಗಳೂರಿನ ಆಸ್ಪತ್ರೆ ಗಳಲ್ಲಿ ಸುಳ್ಳು ಚಿಕಿತ್ಸೆ ಯ ಹೆಸರಿನಲ್ಲಿ ಮುಗ್ಧ ರ ಶೋಷಣೆ ನಡೆಯಿತ್ತಿದೆ ..ಆದರೆ ಬೆಂಗಳೂರಿನ ಹೊರಗೆ ಜಿಲ್ಲಾ ಕೆಂದ್ರಗಳೂ ತಾಲ್ಲೂಕು ಕೇಂದ್ರ ಗಳಲ್ಲೂ ಜೀವನೋಪಾಯದ ಉದ್ಯೋಗಗಳಿವೆ…ಆದರೆ ಯಾರಿಗೂ ಬೇಡ .

  ಪ್ರತಿಕ್ರಿಯೆ
 2. Dr. Prabhakar M. Nimbargi

  ನಮ್ಮಲ್ಲಿ ಸಂವೇದನೆಯೇ ಉಳಿದಿಲ್ಲ. ದೇವರಿಗೆ ಮುಗಿಯೋ ಕೈಗಳಿಗಿಂತ ಸಹಾಯದ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವ ಕೈಗಳು ಶ್ರೇಷ್ಠ ಎನ್ನೋ ಮಾತನ್ನು ಪಾಲಿಸುವವರೆಷ್ಟು ಜನರು? ತುಂಬ ಮಾರ್ಮಿಕವಾಗಿ ಬರೆದಿದ್ದೀರಿ. ಆಗಾಗ ಇಂತಹ ಬರಹಗಳು ಬೇಕು, ಕೆಲವರಾದರೂ ಬದಲಾಗಬಹುದು.

  ಪ್ರತಿಕ್ರಿಯೆ
 3. ರಾಜಾರಾಂ ತಲ್ಲೂರು

  ಮೆಡಿಕಲ್ ಎಥಿಕ್ಸ್ ನಂತಹ ದೊಡ್ಡ ಮಾತುಗಳ ಸರಪಳಿ ಯಾರನ್ನು ಬೇಕಾದರೂ ಬಂಧಿಸೀತು… ಕಳೆದ 15 ವರ್ಷಗಳಿಂದ ಆಸ್ಪತ್ರೆ ಸುತ್ತುವ ಪತ್ರಕರ್ತನಾಗಿ, ಆರೋಗ್ಯ ಆರೈಕೆ ಹೇಗೆ ನಡೆಯುತ್ತದೆಂಬುದನ್ನು ಅಷ್ಟಿಷ್ಟು ಅರ್ಥ ಮಾಡಿಕೊಂಡು ಕೂಡ ಎರಡು ವರ್ಷಗಳ ಹಿಂದೆ ಅನುಭವಿಸಿದ “ಐಸಿಯು” ಸನ್ನಿವೇಶದಲ್ಲಿ ನಿಸ್ಸಹಾಯಕನಾಗಿ ನಿಲ್ಲಬೇಕಾಗಿಬಂದಿತ್ತು. ಮಾತೆತ್ತಿದರೆ ನಾನು “ಜೀವ ವಿರೋಧಿ” ಅನ್ನಿಸಿಕೊಳ್ಳಬೇಕಿತ್ತು; ಆರೋಗ್ಯ ವ್ಯವಸ್ಥೆ “ಜೀವದಾನಿ” ಆಗಿ ನಿಂತುಬಿಟ್ಟಿತ್ತು!

  ಪ್ರತಿಕ್ರಿಯೆ
 4. C. N. Ramachandran

  ಪ್ರಿಯ ಮೋಹನ್:
  ಏನು ಹೇಳಬೇಕು, ಬರೆಯಬೇಕು ಗೊತ್ತಾಗುತ್ತಿಲ್ಲ; ಬರೆದರೆ ತಾನೇ ಏನು ಪ್ರಯೋಜನ ಎನಿಸುತ್ತಿದೆ.
  ಇಷ್ಟು ಮಾತ್ರ ಹೇಳಬಲ್ಲೆ: ಇಂತಹ ಸಂಚಿಕೆಯನ್ನು ಮತ್ತೆಂದೂ ರೂಪಿಸದಂತಹ ಭಾರತ ನಾವು ಬದುಕಿರುವಾಗಲೇ ಸೃಷ್ಟಿಯಾಗಲಿ. ರಾಮಚಂದ್ರನ್

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Dr. Prabhakar M. NimbargiCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: