'ಚಿಟ್ಟಿ' ನನ್ನೊಳಗೆ ಓದಿನ ಹೊಳೆ ಹರಿಸಿತು..

ನನ್ನಮ್ಮ ಶೋಭಾ ಗುನ್ನಾಪೂರ ಅವರು… ಪಿ.ಚಂದ್ರಿಕಾ ಅವರ “ಚಿಟ್ಟಿ” ಕಾದಂಬರಿ ಓದಿದ ನನಗೆ ಹೇಳಿದ್ದು ಇಲ್ಲಿ ಬರಹವಾಗಿದೆ.. ನಮ್ಮ ತಾಯಿಯವರು ಓದಿದ್ದು ೯ನೇ ಕ್ಲಾಸ್ ಮಾತ್ರ. ಚಿಟ್ಟಿ ಓದಿ ಅವರ ಕಥೆಯೋ ಎನ್ನುವಂತೆ ಸಂಭ್ರಮಪಟ್ಟಿದ್ದಾರೆ.  ಕೃತಿಯಿಂದಾಗಿ ಅವರ ಓದಿನ ದಿನಗಳು ಪ್ರಾರಂಭವಾಗಿದೆ.

ಅನಿಲ್ ಕುಮಾರ್ ಟಿ . ಗುನ್ನಾಪೂರ

“ಚಿಟ್ಟಿ” ಕಾದಂಬರಿ ಬರೆದ ಪಿ.ಚಂದ್ರಿಕಾ ಅವರಿಗೆ ನಮಸ್ಕಾರಗಳು. ಈಗ ತಾನೇ ಓದಿ ಮುಗಿಸಿದೆ. ತುಂಬಾ ಸಂತೋಷವಾಯಿತು.

“ಚಿಟ್ಟಿ ” ಚಿಕ್ಕವಳಿದ್ದಾಗ ಎಷ್ಟೊಂದು ತರಲೆಗಳನ್ನು ಮಾಡುತ್ತಿದ್ದಳು ಎಂಬುದನ್ನು ಬಹಳ ವಿವರವಾಗಿ ಬರೆದು ನಮ್ಮ ಬಾಲ್ಯದ ದಿನಗಳು ಕಣ್ಮುಂದೆ ಬರುವ ಹಾಗೆ ಮಾಡಿದ್ದೀರಿ ಮತ್ತು ನೀವು ಬರೆದ ಬರವಣಿಗೆಯ ಶೈಲಿ ಮೊದಮೊದಲು ಸ್ವಲ್ಪ ಹಿಡಿತಕ್ಕೆ ಸಿಗಲಿಲ್ಲವಾದರೂ ನಂತರ ಸರಾಗವಾಗಿ ಓದಿಸಿಕೊಂಡುಹೋಯಿತು.

ಈ ಕಾದಂಬರಿಯಲ್ಲಿಯ ಮುಖ್ಯ ಪಾತ್ರ ಬ್ರಾಹ್ಮಣ ಸಮುದಾಯದ ಮಧ್ಯಮ ವರ್ಗದ “ಚಿಟ್ಟಿ” ಎಂಬ ಪುಟ್ಟ ಹುಡುಗಿಯದ್ದು. ಅವಳ ಕಥೆಯೊಂದಿಗೆ ಅವಳ ಬಾಲ್ಯದಲ್ಲಿಯ ರಸಮಯ ಲಕ್ಷಣಗಳನ್ನು ಹಾಗೂ ಆ ಸಂದರ್ಭದಲ್ಲಿಯ ಸುತ್ತಮುತ್ತಲಿನ  ವಾತಾವರಣದ ಬಗ್ಗೆ ಆಳವಾಗಿ ತಿಳಿದುಕೊಳ್ಳುವಂತೆ ಬರೆದಿರುವಿರಿ.

“ಚಿಟ್ಟಿ” ಎಲ್ಲ ಹುಡುಗಿಯರಂತಲ್ಲ ಸ್ವಲ್ಪ ಹುಡುಗ ಬುದ್ಧಿಯ ಹುಡುಗಿ ಎಲ್ಲ ಜಾತಿಯ ಗೆಳೆತಿಯರೊಡನೆ ಸೇರಿ ಜಾತ್ರೆ- ಕೇತ್ರಿ ಅಂತಾ ಸುತ್ತಾಡುವುದು. ಅಲ್ಲಿಯ ಮನರಂಜನೆಯನ್ನು ಕಂಡು ಸಂಭ್ರಮದಿಂದ ಕುಣಿದಾಡುವುದನ್ನು  ಬಹಳ ವಿವರವಾಗಿ ವರ್ಣಿಸಿದ್ದಿರಿ.

“ಚಿಟ್ಟಿ” ಯ ಬಾಲ್ಯ ಓದಿದರೆ ನಮ್ಮ ಬಾಲ್ಯದ ಕ್ಷಣಗಳು ನೆನಪಿಗೆ ಬರುವುದು ಸಹಜ. ಬಾಲ್ಯ ಎಂಬುದು ಬಹಳ ಮಹತ್ವದ್ದು; ಬಾಲ್ಯ, ಯೌವನ, ಮುಪ್ಪು ಮನುಷ್ಯನಿಗೆ ಬಿಟ್ಟುದ್ದಲ್ಲ. ಆದರೆ ನನಗೆ ಅನಿಸಿದ ಮಟ್ಟಕ್ಕೆ ಬಾಲ್ಯದ ನೆನಪುಗಳೇ ಮುಖ್ಯಪಾತ್ರ ವಹಿಸುತ್ತವೆ ಅನಿಸುತ್ತದೆ.

chitti

ಎಲ್ಲರ ಬಾಲ್ಯವು ಒಂದೊಂದು ತರ ಇರುತ್ತದೆ. ಪ್ರಸ್ತುತ ಸಂದರ್ಭದಲ್ಲಿ  ನೋಡಿದರೆ ಮಕ್ಕಳಿಗೆ ಆಟ ಆಡಲು ಪುರುಸೊತ್ತಿಲ್ಲ. ಬೆಳಗಾದರೆ ಸಾಕು ಮಕ್ಕಳಿಗೆ ಹೊರಲಾರದಷ್ಟು ಬುಕ್ಸ್ ಹೊರಸಿ ಟ್ಯುಶನ್,  ಸ್ಕೂಲ್ ಅಂತ ಕಳಿಸುವುದು. ಮತ್ತೆ Home Work ಎಂಬ ನೆಪದಲ್ಲಿ ಮಕ್ಕಳಿಗೆ ಬಾಲ್ಯ ಅನುಭವಿಸಲು ಸ್ವಂತಿಕೆ ಇಲ್ಲದಂತಾಗಿದೆ. ನಮ್ಮ ಬಾಲ್ಯಕ್ಕೂ ಈಗಿನ ಮಕ್ಕಳ ಬಾಲ್ಯಕ್ಕು ಅಜಗಜಾಂತರ ಅಂತರವಾಗುತ್ತಿದೆ.  ಬರೀ ಅಭ್ಯಾಸ, ಶಾಲೆ ಹೀಗೆ ಮಕ್ಕಳಿಗೆ ಹೊರಗಿನ ಪ್ರಪಂಚವೇ ಗೊತ್ತಿರದ ಹಾಗೆ ಆಗಿದೆ.

ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರನ್ನು ಮಾತನಾಡಿಸುವ knowledge ಸಹಿತಾ ಇರುವುದಿಲ್ಲ.  ಹೀಗಾಗಿ “ಚಿಟ್ಟಿ” ಕಾದಂಬರಿ ಓದಿದ ಬಳಿಕ ಈಗ  ಆಗಿರುವ ಸೂಕ್ಷ್ಮ ವ್ಯತ್ಯಾಸಗಳು ಕಣ್ಮುಂದೆ ಬರುತ್ತವೆ.

“ಚಿಟ್ಟಿ” ತನ್ನ ಒರೆಗೆಯ ಗೆಳತಿಯರೊಂದಿಗೆ ಸೇರಿ ಪ್ರಪಂಚದ ಜ್ಞಾನವನ್ನು ತಿಳಿದುಕೊಂಡವಳು. ಆದರೂ ಅವಳು ಎಲ್ಲರ ಕಣ್ಣಲ್ಲಿ ಹುಚ್ಚಿ ತರವೇ ಕಾಣುತ್ತಾಳೆ.

ಈ “ಚಿಟ್ಟಿ” ಕಾದಂಬರಿ ಮನೆಗೆ ಬಂದು ಬಹಳ ದಿನವಾಗಿತ್ತು. ಇದರ ಮುಖಪುಟ ಮತ್ತು ಒಂದೆರಡು ಪುಟ ಓದಿದ ಬಳಿಕ ಪೂರ್ತಿಯಾಗಿ ಓದಿ ಮುಗಿಸಲೇಬೇಕೆಂಬ ಹಟ ನನ್ನೊಳಗೆ ಮೂಡಿತು. ನಾನು ಹತ್ತಾರು ವರ್ಷಗಳ ಹಿಂದೆ ಜಿದ್ದಿಗೆ ಬಿದ್ದವರಂತೆ ಕಾದಂಬರಿಗಳನ್ನು ಓದಿ ಮುಗಿಸುತ್ತಿದ್ದೆ. ಇತ್ತೀಚೆಗೆ ಸಂಸಾರದ ಜಂಜಾಟದಲ್ಲಿ ಓದು ಕಡಿಮೆಯಾಗಿತ್ತು. ನನ್ನ ಮಗ ಅನಿಲ್ ಆಗಿನಿಂದಲೂ ಓದು..ಓದು.. ಎಂದು ಒತ್ತಾಯಿಸುತ್ತಲೇ ಇದ್ದ.  “ಚಿಟ್ಟಿ” ಕಾದಂಬರಿಯೊಂದಿಗೆ ಮತ್ತೆ ಓದಲು ಹಂಬಲಿಸಿದ್ದೇನೆ. ಪಿ.ಚಂದ್ರಿಕಾ ಮೆಡಮ್ ಅವರಿಗೆ Thanks ಹೇಳಲೇಬೇಕು.

“ಚಿಟ್ಟಿ” ಕಾದಂಬರಿ ಓದಿದ ಬಳಿಕ ಬಹಳ ಇಷ್ಟವಾಯಿತು. ಒಂದೊಂದು ಪುಟದಲ್ಲಿಯ ಪಾತ್ರಗಳು ನಮ್ಮ ಪರಿಚಯ ಇರುವುವೇ ಎಂದೆನಿಸಿಕೊಳ್ಳುತ್ತವೆ. ಪ್ರತಿಪುಟದಲ್ಲಿ ಹಿರಿದಾದ ಅರ್ಥವಿದೆ. ಸರಳವಾದ ಶೈಲಿಯಲ್ಲಿ ಓದುಗರಿಗೆ ಕುತೂಹಲ ಬರುವಂತೆ ಮತ್ತು ಮಕ್ಕಳು ಕೂಡಾ ಓದಿ ಆನಂದಿಸುಂತೆ ಬರೆದಿದ್ದಾರೆ.

ಚಿಟ್ಟಿಯ ಬಗ್ಗೆ ಹೇಳಬೇಕೆಂದರೆ ಬರಿ ಗೆಳತಿಯರ ಜೊತೆ ಹರಟೆ ಹೊಡೆಯುವುದು. ಗಿಡಮರಗಳಲ್ಲಿ ಮರಕೋತಿ ಆಟ ಆಡುವುದು. ಶಾಲೆಯಲ್ಲಿಯೂ ಅಷ್ಟೇ ಅಷ್ಟೊಂದು ಜಾಣಳಲ್ಲ. ” ಚಿಟ್ಟಿ” ಮೈನೆರೆದ ಬಳಿಕ ಅವಳ ಅಜ್ಜಿ ಮತ್ತು ತಾಯಿಯ ಮಾತಿಗೆ ಬೆಲೆಕೊಡದೆ ಓಡಾಡುವಳು. ಅಜ್ಜಿಯ ಸಂಪ್ರದಾಯದ ದಾಳಕೆ ಬಲಿಯಾಗದೆ… ಎಲ್ಲವನ್ನೂ ಪ್ರಶ್ನಿಸುತ್ತಾ..  ಸಾಗುತ್ತಿರುತ್ತಾಳೆ. ತಂದೆಯ ಮಾತು ಚಾಚು ತಪ್ಪದೇ ಕೇಳುವ ಅವಳು ಮ್ಯಾಟ್ರಿಕ್ ಪರೀಕ್ಷೆ ಪಾಸಾಗುತ್ತಾಳೋ ಇಲ್ಲವೋ ಎಂಬ ಗೊಂದಲದಲ್ಲಿ ಇರುತ್ತಾರೆ.  ಕೊನೆಗೆ ಸೆಕೆಂಡ್ ಕ್ಲಾಸ್ ಪಾಸಾಗಿ ಮನೆಮಂದಿಗೆಲ್ಲ ಖುಷಿ ನೀಡುತ್ತಾಳೆ.

unnamed-8ಮ್ಯಾಟ್ರಿಕ್ ಇರುವಾಗ “ಸತ್ಯವಾನ್ ಸಾವಿತ್ರಿ” ನಾಟಕದಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಾಳೆ.

ಚಿಟ್ಟಿಯ ಮದುವೆ ಇಂಜಿನಿಯರ್ ಆಗಿದ್ದವನೊಂದಿಗೆ ಆಗುತ್ತದೆ. ಅವಳು ಹಂತಹಂತವಾಗಿ ಬೆಳೆದು ಸೈಕಲ್,  ಮೋಟರ್ ಬೈಕ್,  ಕೊನೆಗೂ ಕಾರಿನಲ್ಲಿಯೂ ಕೂರುವ ಸೌಲಭ್ಯ ಪಡೆಯುತ್ತಾಳೆ. ಕೊನೆಗೆ ಎರಡು ಮಕ್ಕಳ ತಾಯಿಯಾಗಿ ನೆಮ್ಮದಿಯಿಂದ ಸಾಗುತ್ತಾಳೆ.

ಪಿ.ಚಂದ್ರಿಕಾ ಮೆಡಮ್ ಹೀಗೆ ಕಥೆ, ಕವಿತೆ, ಕಾದಂಬರಿಗಳನ್ನು ಬರೆಯುತ್ತೀರಿ. ನಿಮ್ಮ ಕವನ ಸಂಕಲನವೊಂದನ್ನು “ಒಬ್ಬಳೇ ಆಡುವ ಆಟ” ಓದುತ್ತಿದ್ದೇನೆ. ಕವಿತೆಗಳು ತುಂಬಾ ಚೆನ್ನಾಗಿವೆ. ಇನ್ನೂ ಕೆಲವೊಂದು ಕಠಿಣ ಪದಗಳು ಅರ್ಥವಾಗುತ್ತಿಲ್ಲ. ನನ್ನ ಮಕ್ಕಳಿಂದ ತಿಳಿದು ಖುಷಿ ಪಡುತ್ತಿದ್ದೇನೆ.

-ಶೋಭಾ. ಟಿ. ಗುನ್ನಾಪೂರ

‍ಲೇಖಕರು admin

October 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This