'ಚಿನುವಾ ಮತ್ತು ಚೆರಿ' ಎಂಬ ಮನಕಲಕಿದ ಕಥೆ

ಹಸುರು ಮನದೊಳಗೆ ಬೇರಿಳಿಸಿದ ಚೆರಿ

ನಾ ಕಾರಂತ ಪೆರಾಜೆ

ಹಸಿರುಮಾತು

ಹಿಂದಿನ ರಾತ್ರಿ ಚಿನುವಾ ನಿದ್ದೆಯಿಲ್ಲದೆ ಚಡಪಡಿಸುತ್ತಿದ್ದ! ಮನೆಯಂಗಳದಲ್ಲಿ ಬೆಳೆದು ನಿಂತ ಚೆರಿ ಗಿಡ/ಮರದೊಂದಿಗಿನ ನಂಟನ್ನು ಹೇಳಿದಷ್ಟೂ ಸಾಕಾಗದು. ನಾಲ್ಕು ವರುಷದಿಂದ ಸ್ನೇಹಿತನಂತಿದ್ದ ಚೆರ್ರಿ ಹಣ್ಣಿನ ಮರಕ್ಕಂದು ಶುಭ ವಿದಾಯದ ರಾತ್ರಿ! ಬರುವ ರಾತ್ರಿ ತಾನು ಕಲಿವ ಶಾಲೆಯ ತೋಟಕ್ಕೆ ಸ್ಥಳಾಂತರಗೊಳ್ಳುತ್ತದೆ. ಮನೆಯ ಸದಸ್ಯರಂತಿದ್ದ ಹಕ್ಕಿಗಳು ನಾಳೆಯಿಂದ ಮನೆಯಂಗಳದಲ್ಲಿ ಚಿಲಿಪಿಲಿ ಸದ್ದು ಮಾಡುವುದಿಲ್ಲ. ತನ್ನ ಬರುವಿಕೆಗಾಗಿ ಶಾಲಾ ತೋಟದಲ್ಲಿ ಕಾಯುತ್ತಿರುವ ಚೆರಿಯನ್ನು ನೆನೆಸಿಕೊಳ್ಳುತ್ತಾ ನಿದ್ದೆಗೆ ಜಾರುತ್ತಾನೆ. ಫೆಬ್ರವರಿ 17. ತಾನು ನಂಬಿದ, ತನ್ನನ್ನು ನಂಬಿದ ಚೆರಿ ಮರವನ್ನು ಬೀಳ್ಕೊಡಲು ಚಿನುವಾ ಮಾನಸಿಕವಾಗಿ ಸಿದ್ಧವಾಗಿದ್ದಾನೆ. ಕೊಡಲಿ, ಗುದ್ದಲಿಯೊಂದಿಗೆ ತನ್ನ ಸಹಾಯಕರೊಂದಿಗೆ ‘ಸ್ಥಳಾಂತರ’ ಪ್ರಕ್ರಿಯೆ ಕಾಯಕಕ್ಕೆ ಬಂದಿದ್ದ ದ್ಯಾಮಪ್ಪ ಚಿನುವಾನ ಕಣ್ಣಲ್ಲಿ ಜಿನುಗುತ್ತಿರುವ ಕಣ್ಣೀರನ್ನು ನೋಡುತ್ತಾರೆ. ಚೆರಿಯ ಗೆಲ್ಲುಗಳನ್ನು ಕಡಿಯಲು ಬರುತ್ತಿದ್ದಾಗಲೆಲ್ಲಾ ‘ಮರಕ್ಕೆ ನೋವಾಗುತ್ತಿದೆ, ಕಡಿಯಬೇಡಿ’ ಎಂದು ಅಲವತ್ತುಗೊಳ್ಳುತ್ತಿರುವ ಚಿನುವಾನ ಚಿಕ್ಕದಾಗುತ್ತಿದ್ದ ಮೋರೆ ದ್ಯಾಮಪ್ಪರಿಗೆ ನೆನಪಿಗೆ ಬಂತು. ಸರಿ, ಚೆರಿ ತನ್ನ ಟೊಂಗೆಗಳನ್ನು ದ್ಯಾಮಪ್ಪರ ಕೊಡಲಿಗೆ ಅರ್ಪಿಸಿತು. ಬುಡ ನುಸುಳಾಗಿ ಬೇರು ಸಹಿತ ಕೀಳಲು ಅನುವಾಗುವಂತೆ ಸಹಕರಿಸಿತು. ನೆಲದಾಳಕ್ಕೆ ಬೇರು ಬಿಟ್ಟ ಚೆರಿಯ ಬುಡದಲ್ಲಿ ದೊಡ್ಡ ಹೊಂಡವೇ ನಿರ್ಮಾಣವಾಗಿತ್ತು. ಆ ಹೊಂಡಕ್ಕೆ ಚಿನುವಾ ಇಳಿದೇರಿ, ‘ನನ್ನ ಮರ ಎಷ್ಟು ಗಟ್ಟಿ ಅಲ್ವಾ. ನನ್ನೊಂದಿಗೆ ಸ್ನೇಹಿತರ ಭಾರವನ್ನು ಇಷ್ಟು ವರುಷ ತಾಳಿಕೊಂಡ ಮರಕ್ಕೆ ಹೇಗೆ ಉಪಕಾರ ಮಾಡಲಿ’ ಎಂದು ಅಮ್ಮನಲ್ಲಿ ಕೇಳುತ್ತಾನೆ. ಚಿನುವಾನಲ್ಲಿ ಚೆರಿ ಹಲವು ಪ್ರಶ್ನೆಗಳನ್ನು ಮೂಡಿಸಿದ್ದು ಅವೆಲ್ಲವೂ ಮೌನವಾಗುವ ಸಮಯ. ಧಾರವಾಡದ ನಾರಾಯಣಪುರದಲ್ಲಿ ಚಿನುವಾನ ಮನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ, ‘ಬಾಲಬಳಗ’ ಶಾಲೆ. ಹತ್ತಾರು ಮಕ್ಕಳೊಂದಿಗೆ ಟ್ರಾಕ್ಟರ್ ಏರಿದ ಚೆರಿ ಮರವು ಚಿನುವಾನಿಗೆ ‘ಟಾಟಾ’ ಹೇಳಿತು. ಶಾಲಾ ಆವರಣದೊಳಕ್ಕೆ ಬಂದಾಗ ಚೆರಿ ಮರಕ್ಕೆ ಸ್ವಾಗತ. ಕೊಂಬು, ಕಹಳೆ, ಡ್ರಮ್ಸ್ಗಳ ನಿನಾದ. ತಮ್ಮ ಶಾಲೆಗೆ ಹೊಸ ಅತಿಥಿ ಆಗಮಿಸಿದ ಸಂತಸ-ಸಂಭ್ರಮ. ಅಲ್ಲಿರುವ ಚೆರಿ ಮರಗಳ ನಡುವೆ ಚಿನುವಾನ ಚೆರಿ ಮರವೂ ನೆಲೆ ಕಂಡಿತು. ಅದುವರೆಗೆ ಮೌನವಾಗಿದ್ದ ಚಿನುವಾನ ಮುಖ ಅರಳಿತು. ದುಃಖ ದೂರವಾಯಿತು. ಇದೊಂದು ರೂಪಕದ ಹಾಗೆ ಅನ್ನಿಸಿತಾ? ಆದರಿದು ವಾಸ್ತವ. ಮರಗಳು ಮಕ್ಕಳ ಮನದೊಳಗೆ ನೆಲೆ ನಿಂತ ಪರಿಣಾಮ. ನಿರ್ಜೀವವೆಂದು ಭಾವಿಸುವ ಸಜೀವ ಸಸ್ಯಗಳ ಬಗ್ಗೆ, ಸಜೀವರೆಂದುಕೊಳ್ಳುತ್ತಾ ನಿರ್ಜೀವ-ನಿರ್ಭಾವುಕರಾದ ನಮಗೆ ಇದೆಲ್ಲಾ ಢಾಳಾಗಿ ಕಾಣಬಹುದು! ಎಲ್ಲಾ ಮಕ್ಕಳ ಮನದಲ್ಲೂ ಹಸುರು ಪರಿಸರ ಆವರಿಸಿರುತ್ತದೆ. ಅಲ್ಲದು ಮೌನವಾಗಿರುತ್ತದೆ. ಅದಕ್ಕೆ ಮಾತನ್ನು ಕೊಡುವ ಪರಿಸರ ಮನೆಯಲ್ಲಿ ಸೃಷ್ಟಿಯಾಗಬೇಕು. ಅಪ್ಪಾಮ್ಮ ಅದಕ್ಕೆ ಜೀವ ತುಂಬಬೇಕು. ಆಗ ನೂರಾರು ಚೆರಿಮರಗಳು ಮಾತನಾಡುತ್ತವೆ! ಚಿನುವಾ ಎರಡನೇ ತರಗತಿಯ ವಿದ್ಯಾರ್ಥಿ. ಧಾರವಾಡದ ಬಾಲಬಳಗ ಕಲಿಕಾ ಶಾಲೆ. ಅಮ್ಮ ಅನಿತಾ ಪೈಲೂರು. ತಂದೆ ಶಿವರಾಂ ಪೈಲೂರು. ಚಿನುವಾನ ಹುಟ್ಟು, ಬಾಲ್ಯ, ಕಲಿಕೆ ಎಲ್ಲವೂ ಧಾರವಾಡದಲ್ಲೇ. ಹೆತ್ತವರ ವೃತ್ತಿ ಅನಿವಾರ್ಯತೆಗಾಗಿ ರಾಜಧಾನಿಗೆ ವಸತಿ ವರ್ಗಾವಣೆಯ ತರಾತುರಿ. ಅಮ್ಮನ ದಾಸವಾಳ ಗಿಡದೊಂದಿಗೆ ಕಳೆಯಾಗಿ ಬಂದ ಚೆರಿ ಗಿಡವನ್ನು ಚಿನುವಾ ತಾನೇ ನೆಟ್ಟು, ನೀರೆರೆದು, ಪೋಷಿಸಿದ್ದ. ತನ್ನಿಂದಲೂ ಎತ್ತರಕ್ಕೆ ಬೆಳೆದು ಹಣ್ಣು ನೀಡಿದಾಗ ತಿಂದು ಸಂತೋಷ ಪಟ್ಟಿದ್ದ. ಹಣ್ಣು ತಿನ್ನಲು ಬರುವ ಪಕ್ಷಿಗಳ ಸ್ನೇಹವನ್ನು ಸಂಪಾದಿಸಿದ್ದ. ‘ನಿಮಗರ್ಧ, ನನಗರ್ಧ ಎಂದು ಮರವನ್ನೇ ಪಾಲು ಮಾಡಿದ್ದ. ಅವುಗಳೊಂದಿಗೆ ಜಗಳ ಮಾಡಿದ್ದ. ಮರ ಮೇಲೆ ಅಟ್ಟಳಿಗೆ ಕಟ್ಟಿ ‘ಚೆರಿಮನೆ’ಯನ್ನು ನಿರ್ಮಾಣ ಮಾಡಿ ಸ್ನೇಹಿತರನ್ನು ಆಹ್ವಾನಿಸಿದ. ಮರದಲ್ಲೇ ಉಂಡ, ತಿಂದ. ಮರ ತುಂಬಾ ಅಡ್ಡಾಡಿದ. ಶಾಲೆ ಬಿಟ್ಟು ಬಂದ ನಂತರ ಮರವೇರಿದ ಬಳಿಕವೇ ತಿಂಡಿ-ಓದು. ‘ನನ್ನ ಮರದಲ್ಲಿ ಹದಿನಾಲ್ಕು ವಿಧದ ಪಕ್ಷಿಗಳು ಮನೆ ಮಾಡಿವೆ’ ಅಂತ ಗೊತ್ತಾದ ಕ್ಷಣ ಪುಳಕಗೊಂಡಿದ್ದ. ಚೆರಿಯ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿದ ಚಿನುವಾ ತಾನೂ ಹಸುರು ಮನಸ್ಸನ್ನು ರೂಪಿಸಿಕೊಳ್ಳುತ್ತಾ ಬೆಳೆಯುತ್ತಲಿದ್ದ. ಇದಕ್ಕೆ ಪೂರಕವಾಗಿ ಶಾಲೆಯ ವಾತಾವರಣ. ಅಲ್ಲೂ ಹಸುರು ಪಾಠ. ಹಸುರು ಮನಸ್ಸನ್ನು ಅರಳಿಸುವ ಪಠ್ಯ ಹೂರಣ. ಜಪಾನಿನಲ್ಲಿ ಏಳು ದಶಕಗಳ ಹಿಂದೆ ಇದ್ದ ಮಕ್ಕಳ ನಲಿವಿನ ಶಾಲೆ ‘ತೊಮೊಯೆ’ಯ ಅನುಭವ ಕಥನ ‘ತೊತ್ತೋ ಚಾನ್’ ಪುಸ್ತಕದಿಂದ ‘ಬಾಲಬಳಗ’ ಪ್ರೇರಣೆ ಪಡೆದಿದೆ. ಧಾರವಾಡದ ಜನಪ್ರಿಯ ವೈದ್ಯ ಡಾ. ಸಂಜೀವ ಕುಲಕರ್ಣಿಯವರ ಕನಸು ನನಸಾಗುತ್ತಿದೆ. ಮಗುವಿನೊಂದಿಗೆ ಮಗುವಾಗುವ ಡಾಕ್ಟರ್, ಮಕ್ಕಳ ಮನಸ್ಸಿಗೆ ರೆಕ್ಕೆಪುಕ್ಕ ಕಟ್ಟಿಕೊಡುವ ಸಂಜೀವ ಮಾಮ. ಇಲ್ಲಿ ಯೂನಿಫಾರ್ಮ್ ಇಲ್ಲ. ಮಣ್ಣಿನೊಂದಿಗೆ ಆಟ. ಪರಿಸರದೊಂದಿಗೆ ಒಡನಾಟ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡ ಕಲಿಕೆ. ಮಕ್ಕಳ ಅನುಭವ, ಅಭಿಪ್ರಾಯಕ್ಕೆ ಮಣೆ. ತಗ್ಗು, ದಿಣ್ಣೆ, ಕಾಡಿನಂತಹ ಪರಿಸರ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದನ್ನು ಕಲಿವ ಹೂರಣ. ನಿರಂತರ ನಲಿವಿನ ಕಲಿಕೆ. ಕೋಣೆಯೊಳಗೆ ಪುಸ್ತಕದೊಂದಿಗೆ ಕಳೆದರೆ, ಹೊರಗೆ ಹಸಿರಿನೊಂದಿಗೆ ಮಾತುಕತೆ. ಮಕ್ಕಳ ಅರಿವಿಗೆ ಬಾರದೇ ಹಸುರಿನ ಪಾಠ ಮೈಗಂಟಿರುತ್ತದೆ. ಜತೆಗೆ ಅಪ್ಪಾಮ್ಮನ ಪರಿಸರ ಕುರಿತಾದ ಕತೆಗಳು ಚಿನುವಾನನ್ನು ಗಟ್ಟಿಯಾಗಿ ಬೆಳೆಸಿದುವು. ಫಲವಾಗಿ ಚೆರಿ ಮರದ ಸುಖವನ್ನು, ಸಾಂಗತ್ಯವನ್ನು ಅನುಭವಿಸಿದ್ದಾನೆ. ಚಿಕ್ಕ ಮನಸ್ಸಿನ ಭಾವವನ್ನೊಮ್ಮೆ ಗಮನಿಸಿ. ಮರದ ಗೆಲ್ಲನ್ನು ಕಡಿದಾಗ ಅಮ್ಮನನ್ನು ಹೀಗೆ ಪೀಡಿಸುತ್ತಾನೆ, ‘ಅಮ್ಮ, ಪೋಲಿಸ್ ಸ್ಟೇಷನಿಗೆ ಹೋಗೋಣ. ನನ್ನ ಮರಕ್ಕೆ ದೊಡ್ಡ ಗಾಯ ಆಗಿದೆ. ನಾನು ಕಂಪ್ಲೇಂಟ್ ಕೊಡಬೇಕು’ ಎನ್ನುತ್ತಾನೆ. ಮರಕ್ಕಾದ ಗಾಯವಿದೆಯಲ್ಲಾ, ಅದು ತನಗೆ ಆದುದು ಎಂದು ಭಾವಿಸಿದ್ದಾನೆ. ಇಲ್ಲಿ ಭಾಷೆಗಳಿಗೆ ಪ್ರಾಧಾನ್ಯತೆಯಲ್ಲ. ಭಾವಕ್ಕೆ, ಭಾವ ಸ್ಫುರಿಸುವ ಭಾಷೆಗೆ. ‘ಎಲೆಗಳ ಬಣ್ಣ ಯಾಕೆ ಹೀಗೆ? ಅದರ ನರದಲ್ಲಿ ಹಸಿರು ರಕ್ತ ಇರುತ್ತಾ, ಹೂವು ಮಾತ್ರ ಬಿಳಿ, ಹಣ್ಣು ಕೆಂಪು ಯಾಕೆ? ಎಲೆ ಕೆಳಗೆ ಬಿದ್ದಾಗ ಅದಕ್ಕೆ ನೋವು ಆಗುವುದಿಲ್ವೇ? ಹಣ್ಣು ಕೆಳಕ್ಕೆ ಜಂಪ್ ಮಾಡಿದಾಗ ಸ್ಕಿಡ್ ಆಗಿ ನೋವಾಗುವುದಿಲ್ವೇ? ಉದುರಿದ ಎಲೆ ನೆಲಕ್ಕಂಟಿದಾಗ ಅದು ಮಲಗಿದ್ದಂತೆ ಭಾಸವಾಗುತ್ತದೆ. ಇಂತಹ ಪ್ರಶ್ನೆಗಳು ಮಗುವಿನಲ್ಲಿ ಮೂಡಬೇಕಾದರೆ ‘ಅತೀತ’ವಾದುದು ಇರಬೇಕಾಗಿಲ್ಲ. ಶಾಲೆಯಲ್ಲಿ, ಮನೆಯಲ್ಲಿ ವಾತಾವರಣದ ಇದ್ದರಾಯಿತು. ಚಿನುವಾನಿಗೆ ಈ ಭಾಗ್ಯ ಸಿಕ್ಕಿದೆ. ಹಾಗಾಗಿಯೇ ನೋಡಿ, ಅಪ್ಪಾಮ್ಮನೊಂದಿಗೆ ತಾನು ರಾಜಧಾನಿ ಸೇರುತ್ತೇನೆ ಎಂದು ಅರಿವಾದ ತಕ್ಷಣ, ಶಾಲಾ ವರಿಷ್ಠ ಸಂಜೀವ ಮಾಮನ ಮನವೊಲಿಸಿ, ಮನೆಯಂಗಳದ ಚೆರಿ ಮರವನ್ನು ಶಾಲೆಯ ತೋಟದಲ್ಲಿ ನೆಲೆಸುವಂತೆ ಮಾಡಿದ್ದಾನೆ ಚಿನುವಾ. ‘ತಾನು ಮುಂದೆ ಧಾರವಾಡಕ್ಕೆ ಬಂದಾಗ ನನ್ನ ಮರ ಇಲ್ಲಿ ಇರುತ್ತೆ ಅಲ್ವಾ’ ಎನ್ನುವಾಗ ಆತನ ಕಣ್ಣುಗಳು, ಮುಖ ಅರಳುತ್ತದೆ. ಬುಡವನ್ನು ಸಡಿಲಿಸಿಕೊಂಡು ಟ್ರಾಕ್ಟರ್ ಏರಿದ ಚೆರಿ ಮರ ಚಿನುವಾನಿಗೆ ಹೇಳಿದ್ದು ಏನು ಗೊತ್ತೇ? ‘ನಿನ್ನಂತಹ ನೂರಾರು ಮನಸ್ಸುಗಳು ರೂಪುಗೊಳ್ಳಲಿ. ಅವರೆಗಿಲ್ಲಾ ನನ್ನಲ್ಲಿ ಜಾಗವಿದೆ. ಅವರಿಗೆ ಮಾತು ಕಲಿಸುವೆ. ಹಣ್ಣು ನೀಡಿ ಬಾಯಿ ಸಿಹಿ ಮಾಡುವೆ. ಬದುಕು ಕಲಿಸುವೆ.’ ಚಿನುವಾನ ಚೆರಿ ಬಾಲಬಳಗದಲ್ಲಿ ಚಿಗುರುತ್ತಿದೆ. ಅದಕ್ಕೆ ನೀರೆರೆಯುವಾಗಲೆಲ್ಲಾ ಆತನ ಮನಸ್ಸು ಹೇಳುತ್ತದಂತೆ, ‘ಇದು ಈಗ ನನ್ನದಲ್ಲ. ನಮ್ಮದು.’ ನನಗಂತೂ ಚೆರಿ ಹಣ್ಣು, ಮರವನ್ನು ಕಂಡಾಗಲೆಲ್ಲಾ ಚಿನುವಾ ನೆನಪಾಗುತ್ತಾನೆ. ‘ಜವಾಬ್ದಾರಿ’ ನೆನಪಾಗುತ್ತದೆ. ನಮ್ಮ ಮಗುವಿನ ಅಂಕಪಟ್ಟಿಯಲ್ಲಿ ‘ವೆರಿಗುಡ್’ ಅಂತ ಕೆಂಪುಶಾಯಿಯಲ್ಲಿ ಷರಾ ಬರೆದುದನ್ನು ನೋಡಿ ಪರಮಾನಂದ ಪಡುತ್ತೇವೆ. ಮಗ/ಮಗಳಿಗೆ ಅರ್ಧ ಮಾರ್ಕ್ ಕಡಿಮೆಯಾದಾಗ ಅಧ್ಯಾಪಕರೊಂದಿಗೆ ತರಾಟೆಗಿಳಿಯುತ್ತೇವೆ. ಮಗುವಿನ ಅಂಗಿಗೆ ಹಾಕಿದ ಇಸ್ತ್ರಿ ಹಾಳಾದರೆ ಬ್ರಹ್ಮಾಂಡ ಒಂದು ಮಾಡುತ್ತೇವೆ. ನಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಿ ಖುಷಿ ಪಡುತ್ತೇವೆ. ಹೆತ್ತವರೇ, ಒಂದು ಕ್ಷಣ ನಿಲ್ಲಿ.. ಎಂದಾದರೂ ನಿಮ್ಮ ಮಗುವಿನ ಕನಸುಗಳನ್ನು ಓದಿದ್ದೀರಾ? ಕಂಡಿದ್ದೀರಾ? ಈ ಕುರಿತು ಪ್ರಯತ್ನ ಮಾಡಿದ್ದೀರಾ?  ]]>

‍ಲೇಖಕರು G

March 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. Kareem

  hey chinuva and parents ……
  eshtondu tumbida manasu mattu kriye !!…..nimma ee kriyeyannu eshtu jana gambheeravaagi pariganisuttaaro athava illavo …? tiliyadu…aadare…..nimmagala manassu patta santoshada anubhava ellarigu aagabeku aag ellaru tamma swa santoshkkaagiyaadaru parisaravannu preetisiyaaru mattu adara bagge poorakavaagi kriyeyalli todagisikondaaru. ee adhunika sprint otada baduku namma santhoshavannu kasidukondide ennuva badalu nammolage iruva namma suttalu iruva aarogya santosvannu padedukolluva nimma parige abhinandanegalu….

  ಪ್ರತಿಕ್ರಿಯೆ
 2. Harsha

  ಈ ಹಿಂದೆ ಅನಿತಾ ಪೈಲೂರು ಅವರು ಚೆರಿ ಮತ್ತು ಚಿನುವಾ ಸಂಬಂಧದ ಬಗ್ಗೆ ಸವಿರರವಾಗಿ, ನವಿರಾಗಿ ಬರೆದಿದ್ದಾರೆ. ಇದು ಮತ್ತೊಂದು ಮನಕಲಕುವ ಬರೆಹ. ಧನ್ಯವಾದಗಳು ಕಾರಂತ ಪೆರಾಜೆಯವರಿಗೆ.

  ಪ್ರತಿಕ್ರಿಯೆ
 3. malathi S

  Love you Chinua!!
  Wish all the schools were like ‘balabaLaga’
  proud of you Anita, Shivaram and Dr. Sanjeev Kulkarni Sir!!
  malathi aunty!!

  ಪ್ರತಿಕ್ರಿಯೆ
 4. Hima

  Hi Chinua,
  I had heard your love for the cherry tree,for the birds coming to the tree from your mother.Hope such sensitivity towards nature
  develops in every child.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: