ಚಿನುವ ಅಚೀಬೆ ಕೇಳಿದ ಪ್ರಶ್ನೆ

 ಗಾಳಿ ಬೆಳಕು
ನಟರಾಜ ಹುಳಿಯಾರ್
`ನೀವು ಯಾಕೆ ರಾಜಕೀಯ ಅಧಿಕಾರ ಹಿಡಿಯಬೇಕು ಅಂತ ಇದ್ದೀರಿ? ನೀವು ಆಡಳಿತ ನಡೆಸುವ ಉದ್ದೇಶ ಏನು?’
-ಇಂಥದೊಂದು ಸರಳ, ಆದರೆ ಗಂಭೀರ ಪ್ರಶ್ನೆಯನ್ನು ತಮ್ಮ ನಾಯಕನೊಬ್ಬನಿಗೆ ಕೇಳಬೇಕೆಂದುಕೊಂಡರು, ಚಿನುವ ಅಚೀಬೆ. ನೈಜೀರಿಯಾದ ಲೇಖಕ ಅಚೀಬೆ ಇವತ್ತು ಜಗತ್ತಿನ ಬಹುದೊಡ್ಡ ಕಾದಂಬರಿಕಾರಲ್ಲೊಬ್ಬರು. ಈ ಪ್ರಶ್ನೆ ಕೇಳಬೇಕೆಂದುಕೊಂಡ ಅಚೀಬೆಗೆ ಎಲ್ಲ ರಾಜಕಾರಣಿಗಳೂ ಕೊಡುವ ಸಲೀಸು ಉತ್ತರ ಕೂಡ ಗೊತ್ತಿತ್ತು. ಅಚೀಬೆ ಬರೆಯುತ್ತಾರೆ:
`ಈ ರಾಜಕಾರಣಿಗಳ ಉತ್ತರ ಕೇಳಿಕೇಳಿ ಎಲ್ಲರಿಗೂ ಜಿಗುಪ್ಸೆಯಾಗಿದೆ. ಇಡೀ ದೇಶದ ಜನ ಈ ರಾಜಕಾರಣಿಗಳಿಂದ ಫೂಲ್ ಆಗುತ್ತಲೇ ಬಂದಿದ್ದಾರೆ. ಆದರೆ, ಚೈನಾ ಭಾಷೆಯಲ್ಲಿ ಒಂದು ಗಾದೆಯಿದೆ: ನೀನು ನನ್ನನ್ನು ಒಂದು ಸಾರಿ ಫೂಲ್ ಮಾಡಿದರೆ ಅದಕ್ಕೆ ನಾಚಿಕೆಪಟ್ಟುಕೊಳ್ಳಬೇಕಾದವನು ನೀನು; ನೀನು ಮತ್ತೆ ನನ್ನನ್ನು ಫೂಲ್ ಮಾಡಿದರೆ ನಾನೇ ನಾಚಿಕೆಗೇಡಿ.’
ಮತ್ತೆಮತ್ತೆ ಈ ರಾಜಕಾರಣಿಗಳ ಕೈಯಲ್ಲಿ ಸಿಕ್ಕು ಮೂರ್ಖರಾಗುತ್ತಿರುವ ನಾವೇ ನಾಚಿಕೆಗೇಡಿಗಳಲ್ಲವೆ? ಯಾಕೆ ಹೀಗಾಗುತ್ತಿದೆ? ಹಾಗಾದರೆ ನಾವು ಜಗತ್ತಿನ ಉಳಿದೆಲ್ಲ ಜನರಿಗಿಂತ ದಡ್ಡರೆ? ಅಲ್ಲ, ಆದರೆ ಚುನಾವಣೆಯ ವಿಚಾರದಲ್ಲಿ ಮಾತ್ರ ನಾವು ನಮ್ಮ ನಿಜವಾದ ಶಕ್ತಿಯನ್ನು ತೋರಿಸದೆ, ನಮ್ಮ ರಾಜಕಾರಣಿಗಳು ಹೊಂಚು ಹಾಕಿ ರೂಪಿಸಿದ ಅನೇಕ ರೀತಿಯ ಒಡೆದು ಆಳುವ ಸಂಚುಗಳಿಗೆ ಬಲಿಯಾಗುತ್ತಿದ್ದೇವೆ. ಹೀಗೆ ನಮ್ಮನ್ನು ಒಡೆದು ಗೆದ್ದ ರಾಜಕಾರಣಿಗಳು, ತಾವು ಹಿಂದೆ ಯಾರನ್ನು ಶತ್ರು ಎಂದು ಕರೆದಿದ್ದರೋ ಅವರ ಜೊತೆ ಸೇರಿಕೊಂಡು ತಮ್ಮ ಶ್ರೀಮಂತವರ್ಗಕ್ಕೆ ಬೇಕಾದ ಕಾನೂನುಗಳನ್ನು ಮಾಡಿಕೊಳ್ಳುತ್ತಾರೆ; ತಂತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಾರೆ. ಅಂದರೆ, ಕಾಲಕಾಲಕ್ಕೆ ಈ ರಾಜಕಾರಣಿಗಳು ಹುಟ್ಟು ಹಾಕುವ ಜಗಳಗಳು ಸಾಮಾನ್ಯವಾಗಿ ತಮ್ಮ ರಾಜಕೀಯ ಗುರಿ ಸಾಧನೆಗಾಗಿ ಮಾತ್ರವೇ ಹೊರತು ಮತದಾರನ ಏಳಿಗೆಗಲ್ಲ.
ಆದ್ದರಿಂದ ಈಗ ನಾವು ಈ ಅಪಾಯವನ್ನು ಸರಿಯಾಗಿ ಅರಿತು ಎಚ್ಚೆತ್ತುಕೊಳ್ಳಬೇಕು. ಅತಿಮುಖ್ಯ ಪ್ರಶ್ನೆಯನ್ನು ಕೇಳಲಾರಂಭಿಸಿಬೇಕು: `ನಿನಗೆ ನನ್ನ ಓಟು ಯಾಕೆ ಬೇಕು?’ ನಮ್ಮ ಈ ನಿಣರ್ಾಯಕ ಪ್ರಶ್ನೆಗೆ ರಾಜಕಾರಣಿ ಕೊಡುವ ಉತ್ತರವನ್ನು ಅತ್ಯಂತ ಅನುಮಾನದಿಂದ ನೋಡಬೇಕು.
ಈ ರೀತಿ ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಜನಸಮುದಾಯಕ್ಕೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆಯೇ ಇಲ್ಲದ ಈ ದೇಶದಲ್ಲಿ ಅದು ಇನ್ನಷ್ಟು ಕಷ್ಟ. ಆದರೂ ಇದು ಎಷ್ಟೇ ಕಷ್ಟವಾಗಿದ್ದರೂ ಈ ದೇಶದ ವಿದ್ಯಾವಂತ ಉನ್ನತವರ್ಗ ಈ ಸಮಸ್ಯೆಯನ್ನು ಮುಖಾಮುಖಿಯಾಗಲೇಬೇಕು ಅಥವಾ ಚರಿತ್ರೆಯ ನಿರ್ದಯ ಶಿಕ್ಷೆಗೆ ತಯಾರಾಗಬೇಕು. ದೇಶ ದಿಕ್ಕೆಟ್ಟು ಹೋಗುತ್ತಿರುವ ಬಗ್ಗೆ ದಿನನಿತ್ಯ ಕೈ ಹಿಸುಕಿಕೊಳ್ಳುವ ನಮ್ಮ ಚಿಂತನಶೀಲ ವಿದ್ಯಾವಂತರು ಒಂದಿಷ್ಟಾದರೂ ಸಭ್ಯವಾದ ನಾಗರಿಕವಾದ ರಾಜಕೀಯ ಮೌಲ್ಯಗಳು ಇಲ್ಲಿ ತಳವೂರುವಂತೆ ಮಾಡುವ ರಾಷ್ಟ್ರಪ್ರೇಮದ ಕೆಲಸ ಮಾಡಬೇಕು. ನಾವು ಬಹುಕಾಲ ರಸ್ತೆಯ ಅಂಚಿನಲ್ಲೇ ನಿಂತಿದ್ದೇವೆ; ಅಥವಾ ನಮ್ಮಲ್ಲಿ ಬಹಳಷ್ಟು ಜನ `ಅಯ್ಯೋ ಅವರನ್ನು ಸೋಲಿಸುವುದು ಕಷ್ಟ; ಆದ್ದರಿಂದ ಅವರ ಜೊತೆ ಸೇರಿಕೊಂಡು ಬಿಡೋಣ’ ಎನ್ನುವ ಸಿನಿಕ ಧೋರಣೆ ತಳೆದುಬಿಟ್ಟಿದ್ದೇವೆ.
ನಮ್ಮ ನಿಷ್ಕ್ರಿಯತೆ ಅಥವಾ ಸಿನಿಕಕ್ರಿಯೆಗಳ ಅರ್ಥ ಏನು ಗೊತ್ತೆ? ನಾವು ಪಡೆದಿರುವ ಶಿಕ್ಷಣಕ್ಕೆ, ನಾವು ನಿರ್ವಹಿಸಬೇಕಾದ ಚಾರಿತ್ರಿಕ ಕರ್ತವ್ಯಕ್ಕೆ ಹಾಗೂ ನಮ್ಮ ಮುಂದಿನ ತಲೆಮಾರಿಗೆ ನಾವು ದ್ರೋಹ ಬಗೆಯುತ್ತಿದ್ದೇವೆ. ವಿದ್ಯಾವಂತನಾಗಿರುವುದು ಎಂದರೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುವುದು, ಸಲೀಸು ಭರವಸೆಗಳ ಬಗ್ಗೆ ಅನುಮಾನಿಯಾಗಿರುವುದು, ಹಾಗೂ ಹಳೆಯ ಅನುಭವಗಳ್ನು ಕ್ರಿಯೇಟಿವ್ ಆಗಿ ಬಳಸಿಕೊಳ್ಳುವುದು ಎಂದು ಅರ್ಥ ತಾನೆ?
ಆದರೆ ಕಳೆದ ಕೆಲವು ದಶಕಗಳ ಈ ದೇಶದ ಚರಿತ್ರೆ ಏನು ಹೇಳುತ್ತಿದೆ? ಹೊಸ ವಿದ್ಯಾವಂತ ತಲೆಮಾರು ಬಂತು; ಕಾಲೇಜು, ಯೂನಿವಸರ್ಿಟಿ, ತಂತ್ರಜ್ಞಾನ ಎಲ್ಲವೂ ಬಂತು. ಅಲ್ಲಿ ಓದಲಾರಂಭಿಸಿದ ಹುಡುಗ, ಹುಡುಗಿಯರಿಗೆ ಅವರ ತಂದೆ, ತಾಯಂದಿರಷ್ಟು ಕಷ್ಟವಿರಲಿಲ್ಲ. ಇವರೆಲ್ಲ ಸೇರಿ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಎಂದು ನಾವು ತಿಳಿದಿದ್ದೆವು. ಆದರೆ ಕೊನೆಗೂ ಬನರ್ಾಡರ್್ ಶಾ ಹೇಳಿದಂತೇ ಆಯಿತು: `ನಾವು ಅನುಭವದಿಂದ ಏನನ್ನು ಕಲಿಯುತ್ತೇವೆ ಎಂದರೆ-ನಾವು ಅನುಭವದಿಂದ ಏನನ್ನೂ ಕಲಿಯುವುದಿಲ್ಲ ಎಂಬ ಸತ್ಯವನ್ನು.’ ಅಂದರೆ, ನಾಟಕಗಳಲ್ಲಿನ ವಿದೂಷಕರು ಕೇವಲ ಒಂದು ನಿಮಿಷದ ಕೆಳಗೆ ಯಾವ ಅಡೆತಡೆಗೆ ತಲೆಯೊಡ್ಡಿಕೊಂಡಿದ್ದರೋ, ಅದನ್ನು ಮರೆತು ಮತ್ತೆ ಅದೇ ಅಪಾಯಕ್ಕೆ ಮತ್ತೆ ತಲೆ ಕೊಡುವ ಮೂರ್ಖತನ ಮಾಡುತ್ತಾರಲ್ಲಾ, ಹಾಗೇ ನಾವೂ ಮಾಡುತ್ತಿದ್ದೇವೆ.
ಆದರೂ, ಇವತ್ತು ಈ ದೇಶದ ಸಾಮಾಜಿಕ ಪ್ರಜ್ಞೆಯ ಒಳಗೆ ಶಾಂತಿಯುತ ಹಾಗೂ ನ್ಯಾಯಯುತ ರಾಜಕಾರಣದ ಬಗೆಗಿನ ತುಡಿತವೂ ಇದೆ. ಅದನ್ನು ಈ ಖೂಳ ರಾಜಕಾರಣಿಗಳು ತಾತ್ಕಾಲಿಕವಾಗಿ ತಡೆ ಹಿಡಿಯುತ್ತಿರಬಹುದು. ಆದರೆ ಅದರಿಂದ ನಾವು ನಮ್ಮ ಮನಸ್ಸನ್ನು ಬಿಡಿಸಿಕೊಂಡ ತಕ್ಷಣ, ಈ ಮನಸ್ಸು ನಮ್ಮ ಬಿಕ್ಕಟ್ಟಿನ ಕಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ರಾಜಕಾರಣಿಗಳ ಹೊಸ ತಲೆಮಾರನ್ನು ರೂಪಿಸಬಲ್ಲದು.
ಒಂದು ಸಮಾಜಕ್ಕೆ ಅಮೀನು ಕಾನೊ (ನೈಜೀರಿಯಾದಲ್ಲಿ ಮೌಲ್ಯಗಳನ್ನು ಪ್ರತಿಪಾದಿಸಿದ ರಾಜಕಾರಣಿ) ಅಥವಾ ಮಹಾತ್ಮಾಗಾಂಧಿಯವರ ಮಹತ್ವವಿರುವುದು ಎಲ್ಲ ರಾಜಕಾರಣಿಗಳೂ ಅವರಂತೇ ಆಗಬಹುದು ಎಂಬುದರಲ್ಲಲ್ಲ; ಅದು ಅಸಾಧ್ಯವಾದ ಹಾಗೂ ತೀರಾ ಅವಾಸ್ತವವಾದ ನಿರೀಕ್ಷೆಯಾಗಬಹುದು. ಆದರೆ ಒಂದನ್ನು ನಾವು ನೆನಪಿಡಬೇಕು. ಅಮೀನು ಕಾನೊ ಹಾಗೂ ಗಾಂಧಿ ಇಬ್ಬರೂ ಈ ಭೂಮಿಯ ಮೇಲೇ ಇದ್ದವರು. ಅವರೇನೂ ಸ್ಪರ್ಗದಿಂದಿಳಿದ ದೇವತೆಗಳಲ್ಲ; ನೈಜೀರಿಯಾದಲ್ಲಿ ಹಾಗೂ ಭಾರತದಲ್ಲಿ ನಮ್ಮ ನಿಮ್ಮಂತೆಯೇ ಇದ್ದವರು. ಅಂಥವರ ಉದಾಹರಣೆ ನಮ್ಮೆದುರು ಇರುವಾಗ, ಅವರು ರಾಜಕೀಯದ ಮಹೋನ್ನತ ಉದ್ದೇಶವನ್ನು ನಮಗೆ ತಮ್ಮ ನಡೆ, ನುಡಿಗಳಲ್ಲಿ ಬದುಕಿ, ಸಾಧಿಸಿ ತೋರಿಸಿರುವಾಗ ಅದರ ಉದ್ದೇಶವನ್ನು ಹಾಳುಗೆಡವುವನು ಭೀಕರ ಅಪರಾಧಿಯಾಗುತ್ತಾನೆ ಎಂಬುದನ್ನು ಎಲ್ಲರೂ ಮತ್ತೆಮತ್ತೆ ಒತ್ತಿ ಹೇಳಬೇಕು.’
-ನೈಜೀರಿಯಾ ದೇಶದ ಸಂದರ್ಭದಲ್ಲಿ ಚಿನುವ ಅಚೀಬೆ ಇಪ್ಪತ್ತೈದು ವರ್ಷದ ಹಿಂದೆ ಬರೆದ ಎಲ್ಲ ಮಾತುಗಳು ಭಾರತಕ್ಕೂ ಅನ್ವಯವಾಗುವುದರಿಂದ ಅವನ್ನು ಸಂಗ್ರಹ ರೂಪದಲ್ಲಿ ಇಲ್ಲಿ ಕೊಡಲಾಗಿದೆ. ಇವತ್ತು ಭಾರತದ ಅಧಿಕಾರ ರಾಜಕಾರಣದಲ್ಲಿ ಕಾಣೆಯಾಗಿರುವ ಗಾಂಧೀರಾಜಕಾರಣವನ್ನು ಚಿನುವ ಅಚೀಬೆ ನಮಗೆ ನೆನಪಿಸಿದ್ದಾರೆ.  ನಾವು ಸದಾ ನೆನಪಿಟ್ಟುಕೊಳ್ಳಬೇಕಾದ ಒಳನೋಟಗಳು ಇಲ್ಲಿವೆ ಎಂಬ ಕಾರಣಕ್ಕೆ ಈ ಟಿಪ್ಪಣಿ.
ಈ ಟಿಪ್ಪಣಿ ಬರೆಯುವ ಕಾಲಕ್ಕೆ ಹಾಲಪ್ಪ ಎಂಬ ಸಾಮಾನ್ಯ ಕನ್ನಡಿಗರೊಬ್ಬರು ಪತ್ನಿ ಸಮೇತ ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಮಾಹಿತಿಯೊಂದನ್ನು ಹಾಲಪ್ಪನವರು ಬರೆದ ಅನುಭವ ಕಥನದಲ್ಲಿ ಓದಿದೆ. ಆ ಅನುಭವ ಅಚೀಬೆ ನಮಗೆ ನೆನಪಿಸುವ ಗಾಂಧಿಗಳು ಸಾವಿರಾರು ಸಂಖ್ಯೆಯಲ್ಲಿ ಈ ನೆಲದಲ್ಲಿ ನಡೆದಾಡಿದ್ದನ್ನು ಸೂಚಿಸತೊಡಗಿತು.

‍ಲೇಖಕರು avadhi

June 6, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This