“ಚಿರಂಜೀವಿ” ಶ್ರೀನಿವಾಸರಾಜು

 nhu2.jpg

ರಾಜುಮೇಷ್ಟ್ರು, ವಿಮರ್ಶಕ ನಟರಾಜ್ ಹುಳಿಯಾರ್ ಜೊತೆಗೆ

———————————————–

ರಘುನಾಥ ಚ.ಹ.

ಕ್ರೈಸ್ಟ್ ಕಾಲೇಜು ಕವನಸ್ಪರ್ಧೆಯ ಬಹುಪಾಲು ಬಹುಮಾನಿತರು ಶ್ರೀನಿವಾಸರಾಜು ಅವರನ್ನು ಗುರ್ತಿಸುವುದು “ರಾಜು ಮೇಷ್ಟ್ರು” ಎಂದೇ. ಈ ರಾಜುಮೇಷ್ಟ್ರ ಶಿಷ್ಯ ಬಳಗ ದೊಡ್ಡದು. ಈ ಬಳಗದಲ್ಲಿ ಪಾಠ ಕೇಳಿದ ಶಿಷ್ಯರಿಗಿಂತ ಪಾಠ ಕೇಳದ ಶಿಷ್ಯರೇ ಹೆಚ್ಚಿರುವುದು ವಿಶೇಷ. ರಾಜುಮೇಷ್ಟ್ರ ಪರಿಚಯ, ಸ್ಪರ್ಧೆಯ ಮೂಲಕ ಆದದ್ದಾದರೂ ನಂತರದ ಸಂಬಂಧ ಸಂಪರ್ಕಕ್ಕೆ ಅವರಲ್ಲಿನ ಒಳ್ಳೆಯತನವೇ ಕಾರಣ. ನಾನು ಬಲ್ಲಂತೆ ಸ್ಪರ್ಧೆಯ ನಂತರವೂ ಅನೇಕ ಯುವ ಬರಹಗಾರರು ರಾಜುಮೇಷ್ಟ್ರೊಂದಿಗೆ ಸಂಪರ್ಕ ಉಳಿಸಿಕೊಂಡು ಬಂದಿದ್ದಾರೆ. ಈ ಸಂಪರ್ಕ ಅಪ್ಪಟ ಗುರುಶಿಷ್ಯ ವಾತ್ಸಲ್ಯದ್ದು.

ಶ್ರೀನಿವಾಸರಾಜು ಅವರು ಕ್ರೈಸ್ಟ್ ಕಾಲೇಜು ಸೇರಿದ್ದು ೧೯೬೯ರಲ್ಲಿ. ೧೯೭೨ರಲ್ಲಿ ಕನ್ನಡ ಸಂಘ ಆರಂಭಿಸಿದರು. ಈ ಕನ್ನಡ ಸಂಘದ ಮೂಲಕ ರಾಜುಮೇಷ್ಟ್ರು ಮಾಡಿದ ಕೆಲಸ ಎರಡು ರೀತಿಯದು: ಒಂದು ಪುಸ್ತಕ ಪ್ರಕಟಣೆ, ಇನ್ನೊಂದು ಕೇಳುವವರು ಗತಿಯಿಲ್ಲದ ಯುವ ಲೇಖಕರ ಬರಹಗಳಿಗೆ ವೇದಿಕೆ- ಮಾನ್ಯತೆ ಒದಗಿಸಿದ್ದು. ಫುಟ್ಬಾಲ್ ಆಟದಲ್ಲಿ ಚೆಂಡು ಹಿಡಿಯುವ ಗೋಲ್ ಕೀಪರ್ ಪಾತ್ರವನ್ನು ತುಂಬಾ ಇಷ್ಟಪಡುವ ರಾಜುಮೇಷ್ಟ್ರು ಸಾಂಸ್ಕೃತಿಕ ಲೋಕದಲ್ಲಿ ಮಾಡಿದ್ದೂ ಅದೇ ರೀತಿಯ ಕೆಲಸವನ್ನೇ; ಸೃಜನಶೀಲ ಯುವ ಮನಸ್ಸುಗಳನ್ನು ಒಟ್ಟುಗೂಡಿಸುವುದು. ರಾಜು ಮೇಷ್ಟ್ರು ತಮ್ಮ ಸಂಪರ್ಕಕ್ಕೆ ಬಂದ ಪ್ರತಿಭೆಗಳ ಬೆನ್ನು ತಟ್ಟಿ ಅಂಗಳಕ್ಕೆ ಬಿಟ್ಟರು. ಅವರು ಆರಂಭಿಸಿದ ಬೇಂದ್ರೆ ಸ್ಮೃತಿ ಕವನ ಸ್ಪರ್ಧೆ ಹಾಗೂ ಅನಕೃ ಸ್ಮಾರಕ ಲೇಖನ ಸ್ಪರ್ಧೆಯ ಮೂಲಕ ಅನೇಕ ಯುವ ಬರಹಗಾರರು ಬೆಳಕಿಗೆ ಬಂದು ಬೆಳೆದಿದ್ದಾರೆ. ಬಹುಮಾನಿತ ಬರಹಗಳ ಪುಸ್ತಕಗಳ ನೋಡಿ ಬರವಣಿಗೆಯ ಕಿಚ್ಚು ಹತ್ತಿಸಿಕೊಂಡವರೂ ಉಂಟು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗೆಂದೇ ಕಥೆ ಬರೆದಂತೆ, ಕನ್ನಡ ಸಂಘದ ಸ್ಪರ್ಧೆಗೆಂದೇ ಪದ್ಯ ಬರೆದವರೂ ಇದ್ದಾರೆ. ಇನ್ನು ಪ್ರಕಟಣೆಯ ವಿಷಯ: ಒಂದುನೂರ ಎಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ರಾಜುಮೇಷ್ಟ್ರು ಕನ್ನಡ ಸಂಘದ ಮೂಲಕ ಪ್ರಕಟಿಸಿದ್ದಾರೆ. ಇವುಗಳಲ್ಲಿ ಕವಿಗಳ ಮೊದಲ ಸಂಕಲನಗಳು ಬಹುಸಂಖ್ಯೆಯಲ್ಲಿರುವುದನ್ನು ಗಮನಿಸಬೇಕು. ಎಚ್.ಎಸ್.ಶಿವಪ್ರಕಾಶ್, ಎಸ್.ಮಂಜುನಾಥ್, ಪ್ರತಿಭಾ ನಂದಕುಮಾರ್, ಅಬ್ದುಲ್ ರಷೀದ್, ಟಿ.ಎನ್.ಸೀತಾರಾಂ, ಅಮರೇಶ ನುಗಡೋಣಿ, ಬಸವರಾಜ ಕಲ್ಗುಡಿ, ಎಚ್.ಎಸ್.ರಾಘವೇಂದ್ರರಾವ್, ಕೆ.ಎನ್.ಹನುಮಂತಯ್ಯ ಅವರ ಮೊದಲ ಪುಸ್ತಕಗಳನ್ನಿಲ್ಲಿ ನೆನಪಿಸಿಕೊಳ್ಳಬಹುದು. ಈ ಕಾರಣಗಳಿಂದಲೇ ಹೇಳುವುದು – ಶ್ರೀನಿವಾಸರಾಜು ಒಂದು ವಿಶ್ವವಿದ್ಯಾಲಯ!

ಬರೆಸುವುದರಲ್ಲೇ ಹೆಚ್ಚಿನ ಸುಖ ಕಂಡ ರಾಜುಮೇಷ್ಟ್ರು ಸ್ವತಃ ತಾವು ಬರೆದದ್ದು ಕಡಿಮೆ. ಕಥೆ, ಕವಿತೆ, ವಿಮರ್ಶೆ ಎಂದು ಪುರುಸೊತ್ತಾದಾಗ ಬರೆದಿದ್ದಾರಾದರೂ, ಅವರಿಗೆ ಹೆಸರು ತಂದು ಕೊಟ್ಟಿರುವುದು ಮೂಕ ನಾಟಕಗಳು. ಮಾತಿಲ್ಲದ, ಕ್ರಿಯೆಯೇ ಜೀವಾಳವಾದ ಈ ಮೂಕ ನಾಟಕಗಳನ್ನು ವಿಭಿನ್ನ ಪ್ರಯೋಗಗಳು ಎಂದು ಗುರ್ತಿಸಲಾಗಿದೆ. ಆರ್ಯಭಟ, ವಿಶ್ವೇಶ್ವರಯ್ಯ, ಸಂಸ, ಮನು ಪ್ರಶಸ್ತಿಗಳು ರಾಜುಮೇಷ್ಟ್ರಿಗೆ ಸಂದಿವೆ. ಕೋಲಾರ ಜಿಲ್ಲಾ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಕ್ರೈಸ್ಟ್ ಕಾಲೇಜಿನ ಕರ್ತವ್ಯದ ಕೊನೆಯ ದಿನಗಳಲ್ಲೇ ಕನ್ನಡ ಸಂಘಕ್ಕೆ ಸಂದ ಪುಸ್ತಕ ಪ್ರಾಧಿಕಾರದ “ಉತ್ತಮ ಪ್ರಕಾಶಕ” ಪ್ರಶಸ್ತಿ ಅವರ ಸೇವೆಗೆ ಸಂದ ಮನ್ನಣೆಯೂ ಹೌದು.

ಶ್ರೀನಿವಾಸರಾಜು ಸಾಹಿತ್ಯ ಪರಿಚಾರಕನಾಗಿ ಬೆಳೆದುಬಂದ ಬಗೆ ಅಚ್ಚರಿ ಹುಟ್ಟಿಸುವಂತಿದೆ. ಅವರು ಕಲಿತದ್ದು ಬಿ.ಎಸ್ಸಿ. ಮಗ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಆಸೆ ಅಪ್ಪನಿಗಿತ್ತು. ಇದೇ ಹೊತ್ತಿನಲ್ಲಿ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಸೀಟೂ ಸಿಕ್ಕಿತ್ತು. ಆದರೆ ಮಗ ಕಣ್ಣಳತೆಯಲ್ಲಿಯೇ ಇರಬೇಕೆನ್ನುವ ಚಿಕ್ಕರಾಜು-ಸಾವಿತ್ರಮ್ಮ ದಂಪತಿಗಳ ಆಸೆಯಿಂದಾಗಿ ಶ್ರೀನಿವಾಸರಾಜು ಇಂಜಿನಿಯರ್ ಆಗಲಿಲ್ಲ, ಪೊಲೀಸೂ ಆಗಲಿಲ್ಲ. ಆದದ್ದು “ಲೋಹ ಅಭಿವೃದ್ಧಿ ಮಂಡಳಿ”ಯಲ್ಲಿ ಸಾರಿಗೆ ಅಧಿಕಾರಿ. ಯಾಂತ್ರಿಕ ಚಾಕರಿ ಸಾಕೆನ್ನಿಸಿದಾಗ ಬಿ.ಎ. ಕ್ಲಾಸಿಗೆ ಸೇರಿಕೊಂಡರು. ಎಂ.ಎ. ಓದಿನ ಸಮಯದಲ್ಲಿ ದೊರೆತ ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರ ರಾವ್, ಕಿ.ರಂ.ನಾಗರಾಜು ಮುಂತಾದ ಗೆಳೆಯರು ಹಾಗೂ ಮುಗಳಿ, ಶಿವರುದ್ರಪ್ಪ, ರಾಜರತ್ನಂ, ವೀಸೀ ಮುಂತಾದ ಮೇಷ್ಟ್ರುಗಳ ಒಡನಾಟ, ಸೆಂಟ್ರಲ್ ಕಾಲೇಜು ಲೈಬ್ರರಿ ಮುಂದಿನ “ಪಿಪಿ ಕಟ್ಟೆ” (ಪೋಲಿ ಪಟಾಲಂ ಕಟ್ಟೆ)ಯ ಸಂಜೆಯ ಸಭೆಗಳು ಶ್ರೀನಿವಾಸರಾಜು ಮೇಲೆ ಗಾಢ ಪರಿಣಾಮ ಬೀರಿದವು. ಇದೇ ಸಮಯದಲ್ಲಿ ರಾಜು ಅವರನ್ನು ಆಕರ್ಷಿಸಿದ ಇನ್ನೊಂದು ಶಕ್ತಿ ಜಿ.ಪಿ.ರಾಜರತ್ನಂ ಹಾಗೂ ಸೆಂಟ್ರಲ್ ಕಾಲೇಜಿನಲ್ಲಿ ಅವರು ರೂಪಿಸಿ ಬೆಳೆಸಿದ ಕನ್ನಡ ಸಂಘ. ಮುಂದೆ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಸಂಘ ರೂಪಿಸುವಾಗ ಶ್ರೀನಿವಾಸರಾಜು ಅವರಿಗೆ ಮಾದರಿಯಾದದ್ದು ಇದೇ ಸಂಘ. ವಿಪರ್ಯಾಸ ನೋಡಿ: ಕ್ರೈಸ್ಟ್ ಕಾಲೇಜು ಕನ್ನಡ ಸಂಘಕ್ಕೆ ಬೀಜವಾಗಿದ್ದ ಸೆಂಟ್ರಲ್ ಕಾಲೇಜಿನ ಕನ್ನಡ ಸಂಘ ರಾಜರತ್ನಂ ನಂತರ ಕಳಾಹೀನವಾದಂತೆ ರಾಜುಮೇಷ್ಟ್ರ ನಂತರ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಕೂಡಾ ತೇಜಸ್ಸು ಕಳಕೊಂಡು ಪೇಲವವಾಗಿದೆ.

ಶ್ರೀನಿವಾಸರಾಜು ಅವರೊಂದಿಗೆ ಮಾತಾಡುವಾಗ ಅನೇಕರು ಅವರ ಹೆಸರಿನ ಜೊತೆಗಿನ “ಚಿ” ಕುರಿತು ಪ್ರಶ್ನಿಸುವುದುಂಟು. ಅವರ ತಂದೆಯ ಹೆಸರು ಚಿಕ್ಕರಾಜು. ಊರು ಚಿಕ್ಕಬಳ್ಳಾಪುರ. ಮನೆಯ ಹೆಸರು ಚಿರಂಜೀವಿ. ಕನ್ನಡ ಸಾರಸ್ವತ ಚರಿತ್ರೆಯಲ್ಲೂ ರಾಜುಮೇಷ್ಟ್ರು ಚಿರಂಜೀವಿ. ವ್ಯಕ್ತಿ ಅಲ್ಪಾಯುಷಿ; ಕೃತಿ ಚಿರಂಜೀವಿ.

* * *

(ಈಗ್ಗೆ ಮೂರು ವರ್ಷಗಳ ಕೆಳಗೆ “ಹಂಗಾಮ” ಪತ್ರಿಕೆಯಲ್ಲಿ ಗೆಳೆಯ, ಕಥೆಗಾರ ಚ.ಹ.ರಘುನಾಥ ಬರೆದಿದ್ದ ಲೇಖನ ಇದು. ರಾಜುಮೇಷ್ಟ್ರ ಕಾಲದ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಅಂಗಳದಲ್ಲಿ ಆಡಿ ಬೆಳೆದ ಯುವ ಬರಹಗಾರರ ಒಂದಿಡೀ ಪೀಳಿಗೆಯ ಮನಸ್ಸೇ ಈ ಲೇಖನದ ಮಾತುಗಳಲ್ಲಿ ಕಾಣಿಸುತ್ತಿದೆ. ಈ ಲೇಖನದ ಮೂಲಕವೇ ನಮ್ಮ ಪ್ರೀತಿಯ ರಾಜುಮೇಷ್ಟ್ರಿಗೆ ಅವಧಿಯ ಶ್ರದ್ಧಾಂಜಲಿ.)

‍ಲೇಖಕರು avadhi

December 28, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

  1. G N Mohan

    ನೀವು ‘ಚಿರಂಜೀವಿ ಮೇಷ್ಟ್ರು’ ಎಂದು ಬಣ್ಣಿಸಿದ್ದು ನೋಡಿ ತಕ್ಷಣವೇ ಶ್ರೀನಿವಾಸ ರಾಜು ಸರ್ ಅವರಿಗೇ ಕೇಳಬೇಕೆನಿಸಿತು-ಸಾಯುವನೇ ಚಿರಂಜೀವಿ?
    -ಜಿ ಎನ್ ಮೋಹನ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: