ರಾಜಾರಾಂ ತಲ್ಲೂರು
ಚೀನಾ ಮಾಲುಗಳನ್ನು ಬಳಕೆ ಮಾಡದಿರುವ ಮೂಲಕ ದೇಶಭಕ್ತಿ ತೋರಿಸಬೇಕೆಂಬ ಹೊಸ ವಾದವೊಂದು ಹುಟ್ಟಿಕೊಂಡಿದೆ.
ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿಗಳನ್ನು ಅರಸಿಕೊಂಡು ಹೊರಟರೆ ಅವು ಬೇರೆಯೇ ಕಥೆ ಹೇಳುತ್ತಿವೆ.
ಚೀನಾ (1978)ಕ್ಕೆ ಹೋಲಿಸಿದರೆ ಭಾರತ ತನ್ನ ಮಾರುಕಟ್ಟೆಯನ್ನು ತೆರೆದುಕೊಂಡದ್ದು ಬಹಳ ತಡವಾಗಿ; ಅಂದರೆ ಸುಮಾರಿಗೆ 1991ರ ಹೊತ್ತಿಗೆ. ಈ ಎರಡು ಏಷ್ಯನ್ ದೈತ್ಯ ರಾಷ್ಟ್ರಗಳದು ಒಮ್ಮುಖ ವ್ಯವಹಾರ ಅಲ್ಲ. 2004-2005ರ ವೇಳೆಗೆ ಭಾರತ ಚೀನಾಕ್ಕೆ ರಫ್ತುಮಾಡುತ್ತಿದ್ದ ಸರಕಿನ ಪ್ರಮಾಣ ಭಾರತದ ಒಟ್ಟು ರಫ್ತಿನ 5.79% ಇತ್ತು ಮತ್ತು ಅಮೆರಿಕ, ಗಲ್ಫ್ ಹೊರತುಪಡಿಸಿದರೆ, ಚೀನಾ 3ನೇ ಸ್ಥಾನದಲ್ಲಿತ್ತು. ಚೀನಾದಿಂದ ಆಮದು ಕೂಡ ಸಂತುಲನದಲ್ಲೇ ಇತ್ತು. ಆದರೆ ಇತ್ತೀಚೆಗಿನ ಐದಾರು ವರ್ಷಗಳಲ್ಲಿ ಗಮನಿಸಿದರೆ ಚೀನಾದಿಂದ ಭಾರತಕ್ಕೆ ರಫ್ತು ಒಂದೇ ಸವನೆ ಏರುತ್ತಿದ್ದು, ಭಾರತದಿಂದ ಚೀನಾಕ್ಕೆ ಆಗುತ್ತಿರುವ ರಫ್ತಿನ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಾಣಿಸುತ್ತಿದೆ. ಕೊಡಲಾಗಿರುವ ಅಂಕಿ-ಸಂಖ್ಯೆಗಳು ಇದನ್ನು ಖಚಿತಪಡಿಸುತ್ತವೆ.
ಎಚ್ಚರ ಇಲ್ಲದ ರಫ್ತು!
ನಾನೀಗ ಹೇಳಹೊರಟಿರುವುದು ಬೋರ್ ಹೊಡೆಸುವ ಆಮದು-ರಫ್ತಿನ ಅಂಕಿಸಂಖ್ಯೆಗಳ ಕುರಿತಲ್ಲ; ಬದಲಾಗಿ ಬಹಳ ಕುತೂಹಲಕರ ಅಧ್ಯಯನವೊಂದರ ಬಗ್ಗೆ. ಅಂದಹಾಗೆ, ಈ ಅಧ್ಯಯನ ನಡೆದಿರುವುದು ಬೆಂಗಳೂರಿನಲ್ಲೇ. Council of scientific and industrial research fourth paradigm institute ನಡೆಸಿರುವ ಸಂಶೋಧನೆ ಇದು. ‘ವರ್ಚುವಲ್ ವಾಟರ್ ಟ್ರೇಡ್’ ಎಂದು ಕರೆಯಲಾಗುವ ಹೊಸ ವಿಶ್ಲೇಷಣಾ ಪರಿಕರ ಬಳಸಿ ಈ ಸಂಶೋಧನೆ ನಡೆದಿದೆ.
ಈ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತ ತನ್ನ ಆಮದು-ರಫ್ತುಗಳ ವಾಣಿಜ್ಯ ನೀತಿಯ ಕುರಿತು ಎಚ್ಚೆತ್ತುಕೊಳ್ಳದಿದ್ದರೆ, ಇನ್ನು 300 ವರ್ಷಗಳಲ್ಲಿ ಭಾರತ ನೀರೇ ಇಲ್ಲದ ಸ್ಥಿತಿಯೊಂದಕ್ಕೆ ತಲುಪಲಿದೆ! ಚೀನಾ ಈ ಎಚ್ಚರದ ನಿಟ್ಟಿನಲ್ಲಿ ಈಗಾಗಲೇ ದಾಪುಗಾಲಿಟ್ಟಿದ್ದು, ಭಾರತಕ್ಕಿಂತ ಬಹಳ ಮುಂದಿದೆಯಂತೆ.
2014ರಲ್ಲಿ ಬೀಜಿಂಗ್ ವಿಶ್ವವಿದ್ಯಾನಿಲಯ ಸಿದ್ಧಪಡಿಸಿದ ವರದಿಯ ಪ್ರಕಾರ 1986ರ ವೇಳೆಗೆ ಕೇವಲ 7.02 ಕ್ಯುಬಿಕ್ ಕಿ.ಮೀ. ಅಷ್ಟಿದ್ದ ಚೀನಾದ ‘ವರ್ಚುವಲ್ ನೀರಿನ ಆಮದು’ 2009ರ ವೇಳೆಗೆ 137.04 ಕ್ಯುಬಿಕ್ ಕಿ.ಮೀ.ನಷ್ಟಾಗಿದೆಯಂತೆ. ಈ ಹಠಾತ್ ಏರಿಕೆಗೆ ಕಾರಣ 2001ರಲ್ಲಿ ಚೀನಾ ತನ್ನ ಆಹಾರ ಆಮದು ನೀತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡಿಕೊಂಡದ್ದು!
ವಿಷಯ ಏನಪ್ಪ ಎಂದರೆ, ನೀರಿನ ಸುಯೋಜಿತ ಬಳಕೆ. ಆಮದು ಮಾಡಿಕೊಳ್ಳುವ ವೇಳೆ, ಉತ್ಪಾದನೆಗೆ ಹೆಚ್ಚಿನ ಪ್ರಮಾಣದ ನೀರು ಅಗತ್ಯ ಇರುವ ಕ್ರಷಿ ಉತ್ಪನ್ನಗಳನ್ನು ಆಮದು ಮಾಡಿಕೊಂಡು, ಕಡಿಮೆ ನೀರಿನ ಅಗತ್ಯ ಇರುವ ಉತ್ಪನ್ನಗಳನ್ನು ರಫ್ತು ಮಾಡುವುದು; ಆ ಮೂಲಕ ನೀರಿನ ಸಂತುಲನವನ್ನು ಸಾಧಿಸುವುದು.
ರಫ್ತುಗಾರನಾಗಿ ಭಾರತ ಈಗ ಈ ಲಾಜಿಕ್ಕಿಗೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದು, ಹೆಚ್ಚಿನ ನೀರು ಬಳಸಿ ಉತ್ಪಾದಿಸುತ್ತಿರುವ ಕ್ರಷಿ ಉತ್ಪನ್ನಗಳನ್ನೇ ರಫ್ತು ಮಾಡುತ್ತಿದೆ ಮತ್ತು ಕಡಿಮೆ ನೀರಿನ ಆವಶ್ಯಕತೆ ಇರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಕ್ರಮೇಣ ಭಾರತದಲ್ಲಿ ನೀರಿನ ನಷ್ಟಕ್ಕೇ ಕೊಡುಗೆಯಾಗಲಿದೆ ಎಂದು ಸಂಶೋಧನೆ ಹೇಳುತ್ತಿದೆ.
ವಾಸ್ತವದಲ್ಲಿ ಭಾರತಕ್ಕೆ ಚೀನಾಕ್ಕಿಂತ ಮಳೆ ವಾರ್ಷಿಕ 50% ಹೆಚ್ಚು ಪ್ರಮಾಣದಲ್ಲಿ ಲಭ್ಯ. ಆದರೆ, ಭಾರತದ ಒಟ್ಟು ಜಲಸಂಪನ್ಮೂಲ ಚೀನಾದ 67% ಮಾತ್ರ. ಒಂದೇ ಬೌಗೊಳಿಕ ವಲಯದಲ್ಲಿರುವ ಎರಡೂ ದೇಶಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆಯಾದರೂ, ಭಾರತದ ಪರ್ ಕ್ಯಾಪಿಟಾ ನೀರಿನ ಪ್ರಮಾಣ ಚೀನಾದ್ದಕ್ಕಿಂತ ತುಂಬಾ ಕಡಿಮೆ ಇದೆ.
ಒಟ್ಟಿನಲ್ಲಿ ಒಂದು ಸಮಗ್ರ ನೋಟ ಇಲ್ಲದ ದೇಶನಿರ್ವಹಣೆ ನಮ್ಮನ್ನು ವಿನಾಶದೆಡೆಗೆ ದೂಡುತ್ತಿರುವುದಂತೂ ಖಚಿತ. ಇಲ್ಲಿ, ಕಲ್ಲಿದ್ದಲು, ಕಬ್ಬಿಣ, ಮರ ಎಂದು ದೇಶದ ನೆಲವನ್ನೇ ಅಗೆದು, ಬಗೆದು ಮಾರಿ ಬದುಕಹೊರಟಿರುವವರ ನಡುವೆ ಇಂತಹ ಸಂಶೋಧನೆಗಳು ಬರಿಯ ಅರಣ್ಯರೋಧನ ಮಾತ್ರ…
ಹೆಚ್ಚಿನ ಓದಿಗಾಗಿ:
ಕೆಳಗೆ ಕೊಡಲಾಗಿರುವುದು ಚೀನಾಕ್ಕೆ ಭಾರತದ ಇತ್ತೀಚೆಗಿನ ರಫ್ತು ಮತ್ತು ಆಮದುಗಳ ಅಂಕಿ-ಸಂಖ್ಯೆ –(ಮೂಲ: ಕೇಂದ್ರ ವಾಣಿಜ್ಯ ಇಲಾಖೆಯ ವೆಬ್ ಸೈಟ್ )
ನೀವು ಉಲ್ಲೇಖಿಸಿರುವುದು ಸಂಪೂರ್ಣ ಹೊಸತೊಂದು ಆಯಾಮ. ಐವತ್ತು ವರ್ಷಗಳ ನಂತರ ಗಂಭೀರವಾಗಬಹುದಾದ ವಿಷಯವನ್ನು ಸದ್ಯ ಪರಿಗಣಿಸಬೇಕಾದ ಪರಿಸ್ಥಿತಿ ಇವೊತ್ತು ನಮ್ಮೆದುರು ಇದೆ. ಕ್ಷಣಿಕ ಸುಖಕ್ಕಾಗಿ ಹಂಬಲಿಸಿ ದೀಘ್ ಕಾಲ ದುಃಖ ಪಡುವುದನ್ನು ಕೈಬಿಡಬೇಕು.ಯೋಜನೆಗಳನ್ನು ಸಿದ್ಧಗೊಳಿಸುವವರು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಗಳು, ಅವರ ಪೀಳಗೆಗಳು ನಮ್ಮನ್ನು ಶಪಿಸುವುದು ಖಚಿತ.