ಚೀನೀ ಸಿಂಪಿಗ

ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು.

ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ ಭಾಗ ನಿಮಗಾಗಿ ಇಲ್ಲಿದೆ-
paradesiyadga-rangnath2
ಅಥೆನ್ಸ್ ನಿಂದ ಮ್ಯಾನಿಲಾಕ್ಕೆ, ದುಬಾಯಿ, ಬೊಂಬಾಯಿ, ಬ್ಯಾಂಕಾಂಗ್ ಗಳಲ್ಲಿ ನೆಲ ಮುಟ್ಟಿದರೂ ಒಟ್ಟು ಹಾರಿದ ಸಮಯ ಸುಮಾರು ಹದಿನಾಲ್ಕು ಗಂಟೆ. ಹಾರಾಟದಲ್ಲಿ ‘ಕಾಲ ವ್ಯತ್ಯಾಸದ’ ಕಾರಣ, ಹೆಚ್ಚು ಕಡಿಮೆ ಮೂವತ್ತು ಗಂಟೆಗಳಷ್ಟು ಅಂತರ. ನಾಲ್ಕು ತಾಸಿನಲ್ಲಿಯೇ ರಾತ್ರಿ ಕಳೆದು ಮುಂದಿನ ಐದು ತಾಸುಗಳಲ್ಲಿಯೇ ದಿನ ಉರುಳಿದ ಕಾರಣ, ಊಟ ನಿದ್ರೆಗಳ ಪರಿಪಾಠ ಅಡ್ಡಾದಿಡ್ಡಿಯಾಗಿ, ಮ್ಯಾನಿಲಾದಲ್ಲಿ ಇಳಿದು, ಹೋಟೆಲು ಮುಟ್ಟಿದಾಗ ಅಲ್ಲಿನ ಮಧ್ಯಾಹ್ನದಲ್ಲಿ ನಾಲ್ಕು ಗಂಟೆ. ಒತ್ತಿ ಅಡರಿದ ನಿದ್ರೆಯಿಂದಾಗಿ ಎಚ್ಚರಗೊಂಡಾಗ ಮುಂಜಾನೆ ಮೂರು ಗಂಟೆ: ವಿಪರೀತ ಹಸಿವು.
ಮುಂದೆ ನಿದ್ರೆಬಾರದೆ ಬೆಳಕುಮೂಡುವ ತನಕ ಕುಳಿತಿದ್ದು ಸಮುದ್ರದ ಗುಂಟ ಎರಡು ಮೈಲು ದೂರ ನಡೆದು ಮತ್ತೆ ಹಿಂದಿರುಗಿ ಬರುವಲ್ಲಿ ಮುಂಜಾನೆ ಹತ್ತು ಗಂಟೆ: ತಡೆಯಲು ಅಸಾಧ್ಯವಾದ ನಿದ್ರೆ !
ಮ್ಯಾನಿಲದಲ್ಲಿ ಮಾರ್ಷಲ್-ಲಾ ಮಾರ್ಕೊಸ್ ಆಡಳಿತ. ಆತನ ಹೆಂಡತಿ ಅಮಿಲ್ಡಾ ನಿಜಕ್ಕೂ ಸಾಮ್ರಾಜ್ಞಿ ಆಕೆಯ ನಿರ್ದೇಶನದಲ್ಲಿ ರಚನೆಗೊಂಡಿರುವ ಫಿಲಿಪಿನೋ ಆರ್ಟ್ ಸೆಂಟರ್, ಆ ರಾಷ್ಟ್ರದ ಒಂದು ಅದ್ಭುತ. ಅತ್ಯಾಧುನಿಕ ರಂಗ ಶಾಲೆಗಳ ಕೇಂದ್ರ ಅದು. ಸುಮಾರು ಹದಿನಾಲ್ಕು ನೂರು ಮಂದಿ ಸುಖಾಸೀನರಾಗಬಲ್ಲ ರಂಗಮಂದಿರದಲ್ಲಿ, ಇಟಲಿಯ ಸುಪ್ರಸಿದ್ಧ ಕಲಾವಿದರು ಪ್ರದರ್ಶಿಸಿದ  ‘ಮದಾಮ್-ಬಟರ್ ಪ್ಲೈ’ ಗೀತ ನಾಟಕ ನೋಡಿದೆ. ಆ ಮಂದಿರಕ್ಕೆ ಹತ್ತಿದ ಮತ್ತೊಂದು ಅಂತಸ್ತಿನ ರಂಗ ಮಂದಿರ ಚೊಕ್ಕವಾದರೂ ಚಿಕ್ಕದು. ‘ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲು ಅಲ್ಲಿಗೆ ಆಗಮಿಸಿದ್ದ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಸಂಗೀತ ಸಮಾರಂಭ ಅಲ್ಲಿ ವನದೆಯಿತು. ಆರುನೂರು ಮಂದಿ ಅತಿಥಿಗಳ ಸಮ್ಮುಖದಲ್ಲಿ ನಡೆದ ಆ ಕಾರ್ಯಕ್ರಮದಲ್ಲಿ ಅಮಿಲ್ಡಾ ಮಾರ್ಕೊಸ್ ಕಡೆಯವರೆಗೂ ಕುಳಿತಿದ್ದು ಎಂ.ಎಸ್.ಸುಬ್ಬುಲಕ್ಷ್ಮಿ ಅವರನ್ನು ಅಭಿನಂದಿಸಿದರು.
ಹಿಂದಿ,ತಮಿಳು,ತೆಲುಗು,ಬಂಗಾಳಿ ಗೀತೆಗಳನ್ನು ಹಾಡಿದ ನಂತರ ಎಂ.ಎಸ್. ಅವರು ಹಾಡಿದ ಪುರಂದರದಾಸರ ಗೀತೆಗಳನ್ನು ಕೇಳಿದಾಗ ನನಗೂ, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದ ಡಾ. ಷಣ್ಮುಗಂ ಅವರಿಗೂ ಆದ ಹಿಗ್ಗು ಅಷ್ಟಿಷ್ಟಲ್ಲ. ಕಲಾಕೇಂದ್ರದ ಮತ್ತೊಂದು ಪ್ರದರ್ಶನ ಮಂದಿರವೆಂದರೆ, ಜಾನಪದರಂಗ, ಸುಮಾರು ಹದಿನಾಲ್ಕು ಸಾವಿರ ಮಂದಿ ಸುಖಾಸೀನರಾಗಬಹುದಾದ ಅತ್ಯಂತ ಸುಸಜ್ಜಿತ ಮುಚ್ಚಮಂದಿರ ಅದು. ಹೆಸರಾಂತ ನಿರ್ದೇಶಕ ಲ್ಯಾಂಬರ್ಟೋ ಅವಲ್ಯಾನ ಅವರು, ಫೆಲಿಪಿನೋ ವಿಶ್ವವಿದ್ಯಾನಿಲಯಗಳಿಂದ ಆರಿಸಿದ ಸುಮಾರು ನಾಲ್ಕು ನೂರು ಮಂದಿ vidyaarti -vidyaarthini ಕಲಾವಿದರಿಂದ ಜಾನಪದ ನೃತ್ಯಗೀತೆ ಕಾರ್ಯಕ್ರಮವೊಂದನ್ನು ರೂಪಿಸುತ್ತಿದ್ದರು. ತುಂಬ ಆತ್ಮೀಯತೆಯಿಂದ ನನ್ನನ್ನು ಬರಮಾಡಿಕೊಂಡರು. ಅವರೊಡನೆ ಕಳೆದ ಮೂರು ಸಂಜೆಗಳ ಆನುಭವ ಮರೆಯುವಂಥದು.
tailors_shears2waskey
ಸಿಂಪಿಗನ ಮಾತು ಎಲ್ಲೋ ಬಿಟ್ಟು, ಸಂಗೀತಕ್ಕೆ ತೆಕ್ಕೆಗೆ ಬಿದ್ದಂತಾಯಿತು. ಕ್ಷಮಿಸಬೇಕು.
ಲಾಗೋಸ್ ನಲ್ಲಿ ಅತಿಕಡಿಮೆಯೆನಿಸಿದ ಬೆಲೆಯಲ್ಲಿ ಸೊಗಸಾದ ಬಟ್ಟೆಯನ್ನು ಕೊಂಡುಕೊಂಡಿದ್ದೆ. ಬೇರೆ ಬಗೆಯ ಈ ಬಟ್ಟೆಗಳಿಂದ ಎರಡು ಸೂಟು ಹೊಲಿಸಬಹುದಾಗಿತ್ತು. ನಾನು ದುಬಾರಿಯೆಂದರೂ ನಮ್ಮಲ್ಲಿ ಹೊಲಿಗೆಯ ಬೆಳೆ ಕಡಿಮೆ. ಅದರಿಂದ ಅಲ್ಲಿ ನಾನು ಕೊಂಡ ಬಟ್ಟೆಯನ್ನು ನಮ್ಮ ಊರಿಗೇ ತಂದು, ಎಂಥ ಒಳ್ಳೇ ಬಟ್ಟೆ ಕೊಟ್ಟರೂ ತನ್ನದೇ ವಿಶಿಷ್ಟ ರೀತಿಯಲ್ಲಿ ಕೆಡಿಸುವ ನಮ್ಮ ಪುಟ್ಟಸ್ವಾಮಿಗೇ ಕೊಡುವುದು ಎಂದುಕೊಂಡೆ. ಆದರೆ, ಆಕ್ರಾದಲ್ಲಿ ಈ ಬಟ್ಟೆಗಳನ್ನು ನೋಡಿ ಮೆಚ್ಚಿಕೊಂಡ ನಮ್ಮ ಶಾಸ್ತ್ರಿ, ಹೊಲಿಯದ ಬಟ್ಟೆಯನ್ನು ಕಂಡರೆ ಕಸ್ಟಮ್ಸ್ ನವರು ಹಿಡಿಯುತ್ತಾರೆ ಎಂದು ಹೆದರಿಸಿದರು: ಹೊಲಿಸಿಕೊಂಡು ಹೋದರೆ ಮಾತ್ರ ಭಯವಿಲ್ಲ ಎಂದರು. ಬುಖಾರೆಸ್ಟ್, ಆಥೆನ್ಸ್ ಗಳಲ್ಲಿ ಸರಿಯಾದ ಸಿಂಪಿಗ ಸಿಕ್ಕಲಿಲ್ಲ: ಸಿಕ್ಕಿದರೂ ಹೊಲಿಗೆಯ ಬೆಲೆ ನನಗೆ ಹೊಂದಲಿಲ್ಲ. ಅದರಿಂದಾಗಿ ಮ್ಯಾನಿಲಾದಲ್ಲಿ ಇಳಿದ ಮೂರನೆಯ ದಿನದಿಂದ ನನ್ನ ಬಿಡುವಿನ ವೇಳೆಯನ್ನು ಸಿಂಪಿಗನ ಬೇಟೆಯ ಸಲುವಾಗಿ ಕಳೆಯಬೇಕಾಯಿತು.
ನಾನು ಉಳಿದಿದ್ದ ಹೆಸರಾಂತ ಬೇ-ವ್ಯೂ ಹೋಟೆಲಿನ ಅಕ್ಕಪಕ್ಕ ಆಸು ಪಾಸುಗಳಲ್ಲಿ ತಲಾಷ್ ಮಾಡಿ, ನಮ್ಮ ಅಂತಸ್ತಿಗೆ ಬೆಲೆಯಲ್ಲಿ ಒಗ್ಗಬಹುದೆನಿಸದ ನಾಲ್ಕಾರು ಅಂಗಡಿಗಳಲ್ಲಿ ಉಪಾಯವಾಗಿ ವಿಚಾರಿಸಿದೆ: ಪೂಸಿಮಾಡಿ ಹೊಲಿಗೆಯ ಬಾಲೆ ಇಳಿಸಲು ಪ್ರಯತ್ನಿಸಿದೆ. ಏನೆಂದರೂ ಒಂದು ಸೂಟು ಹೊಲಿಯಲು ನಲವತ್ತು ಯು.ಎಸ್. ಡಾಲರುಗಳಿಂದ ಕೆಳಕ್ಕೆ ಯಾರೂ ಇಳಿಯಲಿಲ್ಲ. ನಾನು ಕೊಂಡಿದ್ದ ಎರಡೂ ಬಟ್ಟೆಗಳ ಒಟ್ಟು ಬೆಲೆ ಇಪ್ಪತ್ತೆರಡು ಡಾಲರು ! ಏನು ಮಾಡುವುದು? ಕಸ್ಟಮ್ಸ್ನಲ್ಲಿ ಬಟ್ಟೆ ಕಳೆದುಕೊಳ್ಳುವುದಕ್ಕಿಂತ ಹೊಲಿಸಿ ಉಳಿಸಿಕೊಳ್ಳುವುದೇ? ಎಂದು ಯೋಚಿಸುತ್ತ ಬರುತ್ತಿರುವಾಗಲೇ ಸುಂಗ್ಲೀಯ ಹೊಲಿಗೆ ಅಂಗಡಿ ಕಣ್ಣಿಗೆ ಬಿದ್ದಿತು.
ಒಳಗೆ ನುಗ್ಗಿದೆ. ಮುದುಕ, ಮಗ, ಮೊಮ್ಮಗಳು ಹೊಲಿಗೆಯಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮುದುಕ ಆದರಿಸಿ ಆಹ್ವಾನಿಸಿದ. ಮೊಮ್ಮಗಳು ಮನೋಹರವಾಗಿ ನೆಗೆಯಾಡಿದಳು. ಮಗ ಮಾತ್ರ ಶಿಲೆಯಂತೆ ಸೆಡೆತಿದ್ದ. ಬಟ್ಟೆ ತೋರಿಸಿ ಹೊಲಿಗೆಯ ಬೆಲೆ ಕೇಳಿದೆ. ಮೂವರೂ ಮುಟ್ಟಿ ನೋಡಿ ಒಳ್ಳೆಯ ಬಟ್ಟೆಯೆಂದರು. ‘ಒಂದೊಂದು ಸೂಟಿಗೆ ನಲವತ್ತು ಡಾಲರ್, ಕಡಿಮೆ ಆಗುವುದಿಲ್ಲ’ ಎಂದ ಮಗ. ಕ್ಷಣ ತಡೆದು ಮದುಕ ‘ಹಾಗೆ ಬೇಡ, ಒಂದೊಂದಕ್ಕೆ ಮೂವತ್ತು ಡಾಲರ್ ಕೊಡಿ’ ಎಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಬಟ್ಟೆ ಕೊಟ್ಟೆ. ನನ್ನ ಅವಸರ ಹೇಳಿದೆ. ‘ಮೂರನೆಯ ಸಂಜೆ ಐದು ಗಂಟೆಗೆ ಸಿದ್ಧಮಾಡಿ ಇಡುತ್ತೇವೆ.’ ಎಂದ ಮುದುಕನನ್ನು ಮಗ ಕೆಕ್ಕರಿಸಿ ನೋಡಿದ. ಮೊಮ್ಮಗಳು ಮಂದಹಾಸ ಬೀರುತ್ತಿದ್ದಳು.
ಅತ್ಯಂತ ವಿವರವಾಗಿ ಅಳತೆ ತೆಗೆದುಕೊಂಡಿದ್ದಾಯಿತು. ‘ಟ್ರಯಲ್ ಗೆ ಯಾವಾಗ ಬರಬೇಕು?’ ಕೇಳಿದಾಗ ಮುದುಕ ‘ಬರುವ ತೊಂದರೆ ಬೇಡ. ನಾಳಿದ್ದು ಕೊಂಡೊಯ್ಯುವಾಗ, ಬೇಕಾದರೆ ಧರಿಸಿ ನೋಡಬಹುದು’ ಎಂದ. ಅಡ್ವಾನ್ಸ್ ಬೇಕೆ? ಎಂದರೆ ಬೇಡ ಎಂಬ ಉತ್ತರ. ಮಗ ಕೆಕ್ಕರಿಸಿ ನೋಡುತ್ತಲೇ ಇದ್ದ: ಮೊಮ್ಮಗಳು ಮಂದಹಾಸ ಬೀರುತ್ತಲೇ ಇದ್ದಳು.
ಹೋಟೆಲಿಗೆ ಹಿಂದಿರುಗಿದ ಮೇಲೆ ಹಗುರವಾಗಿದ್ದ ಮನಸ್ಸು ವಿಪರೀತ ಭಾರವಾಯಿತು. ಸಿಂಪಿಗ ಆಗ ನಮ್ಮ ಹಗೆಯಾಗಿದ್ದ ಚೀನೀಯ. ಅತೆನೆಕೆ ಭಾರತೀಯನಾದ ನನಗೆ ಅಂತಹ ಆದರ ತೋರಿಸಬೇಕು? ಅದರಲ್ಲಿ ಏನೋ ಮೋಸ ಬೆರೆತಿದೆ ಎನ್ನಿಸಿತು. ಬಟ್ಟೆ ಕೊಟ್ಟುದಕ್ಕೆ ರಸೀತಿಯಿಲ್ಲ. ಅದನ್ನೇ ಲಪಾಟಿಯಿಸಿದರೆ ? ಹಾಗಿದ್ದರೆ ಅಡ್ವಾನ್ಸ್ ದುಡ್ಡನ್ನು ಏಕೆ ಕೊಳ್ಳಲಿಲ್ಲ ? ನಮ್ಮ ಪುಟ್ಟಸ್ವಾಮಿಯೇ ಉತ್ತಮ ಎನ್ನುವಂತೆ ಹೊಲಿಗೆಯನ್ನೇ ಕೆಡಿಸಿದರೆ ?
ಮನಸ್ಸಿನ ತುಂಬ ಗೊಂದಲ. ಹೋಟೆಲ್ ಮ್ಯಾನೆಜರ್ ಜೊತೆ ನನ್ನ ಸಂಶಯ ತೋಡಿಕೊಂಡೆ. ಚೀನಿಯರೇನು ! ಇಲ್ಲಿಯ ಯಾವ ಸಿಂಪಿಗನನ್ನೂ ನಂಬುವ ಹಾಗಿಲ್ಲ’ ಎಂದ ಆತ. ಎದೆ ಧಸಕ್ಕೆಂದಿತು. ಕೂಡಲೇ ಹೋಗಿ ಬಟ್ಟೆ ತಂದುಬಿಡಲೇ ? ಏನು ನೆವ ಹೇಳಬಹುದು ? ರಾತ್ರಿ ಸರಿಯಾಗಿ ನಿದ್ರೆ ಬರಲಿಲ್ಲ. ಮಾರನೆಯ ದಿನ ಕೊಠಡಿಯನ್ನು ಸ್ವಚ್ಛ ಮಾಡಬಂದ ಹುದುಗನಿಂದಲೂ ಯಾವ ನಂಬಿಕೆಯೂ ಸಿಕ್ಕಲಿಲ್ಲ. ದಿನವೆಲ್ಲ ಕೆಲಸದಲ್ಲಿ ಕಳೆದುಹೋಯಿತು. ಸಂಜೆ ಈ ಯೋಚನೆ ಮತ್ತೆ ಮತ್ತೆ ಕಾಡಿತು. ಈಗ ಆತನಲ್ಲಿಗೆ ಹೋದರೂ ಯಾವ ಪ್ರಯೋಜನ ? ಬಟ್ಟೆಯನ್ನು ಖಂಡಿತ ಕತ್ತರಿಸಿರುತ್ತಾನೆ. ಅಂಥ ತುಂಡುಗಳನ್ನು ತರುವುದರಲ್ಲಿ ಅರ್ಥವಿಲ್ಲ. ಇಂತಹ ಸಮಯಗಳಲ್ಲಿ, ಎಲ್ಲರೂ ಮಾಡುವಂತೆ ‘ದೇವರ ಮೇಲೆ ಭಾರ’ ಹಾಕಿ, ಮುಸುಕೆಳೆದು ಮಲಗಿದೆ.
ಮಾರನೆಯ ಸಂಜೆ ಏನೆಲ್ಲ ಊಹಿಸಿಕೊಂಡು ಮನಸ್ಸಿನಲ್ಲಿಯೇ ತಾಳಮೇಳ ಮಾಡುತ್ತ ಸುಂಗ್ ಲೀ ಅಂಗಡಿಯ ಕಡೆ ಹೊರಟೆ. ದೂರದಿಂದ ಅಂಗಡಿ ಕಂಡಾಗಲೇ ಎದೆಯಲ್ಲಿ ಡವಡವ. ಏನೋ ಕಾತರ; ಏನೋ ಸಂಶಯ. ಹೂತಿಟ್ಟ ಯಾವುದೋ ಆತಂಕ.
ಅಂಗಡಿಯ ಎದುರು ನಿಂತೆ. ಗಾಜು ಕನ್ನಡಿಗಳ ಹಿಂದೆ ಅದೇ ಮುದುಕ, ಮಗ, ಮೊಮ್ಮಗಳು! ಬಾಗಿಲು ದಬ್ಬಿ ಒಳಗೆ ಹೋದೆ. ಮುಖದ ತುಂಬ ಆದರ ತುಂಬಿಕೊಂಡು ‘ಬನ್ನಿ’ ಎಂದ ಮುದುಕ. ನನ್ನನ್ನು ನೋಡಿದ ಮಗ ಹುಬ್ಬುಗಂಟಿಕ್ಕಿದ. ಮೊಮ್ಮಗಳು ಮುಗುಳು ನಗುತ್ತಿದ್ದಳು. ಸುತ್ತ ನೋಡಿ ಹೊಲಿದಿಟ್ಟ ಸೂಟುಗಳ ಹ್ಯಾಂಗರುಗಳಲ್ಲಿ ನನ್ನದಕ್ಕಾಗಿ ತಡಕಾಡಿತು ನನ್ನ ಕಣ್ಣು.
ನನ್ನ ಬಟ್ಟೆ ಎಲ್ಲೂ ಕಾಣಲಿಲ್ಲ.
‘ಸೂಟು ಹೊಲಿದು ಸಿದ್ಧವಾಯಿತೆ ? ಎಂದು ಕೇಳಿದೆ.
‘ಸಿದ್ಧವಾಗಿದೆ. ಅಂದೇ ಹೇಳಿದ್ದೆನಲ್ಲ’ ‘ಎಲ್ಲಿ ತೋರಿಸಿ’ ಎಂದೆ ಗಡುಸಾಗಿ. ‘ತೋರಿಸುತ್ತೇನೆ. ಅದಕ್ಕೆ ಮೊದಲು, ಒಂದು ಕೇಕು, ಕೋಕ ಕೋಲಾ ತೆಗೆದುಕೊಳ್ಳಲೇಬೇಕು’ ಎಂದ ಮುದುಕ.
ನನ್ನ ಅನುಮಾನ ಹೆಚ್ಚಾಯಿತು. ಬೇಡ ಬೇಡವೆಂದರೂ ತಲೆಕೊಡವಿದರೂ ಬಿಡದೆ ಮೊಮ್ಮಗಳನ್ನು ಎದುರು ಅಂಗಡಿಗೆ ಓಡಿಸಿ, ಕೇಕು, ಕೋಕ ಕೋಲಾಗಳನ್ನು ತರಿಸಿದ. ಮನಸ್ಸು ಬೇಡ ಬೇಡವೆನ್ನುತ್ತಿದ್ದರೂ ಆ ಮೂವರೊಡನೆ ಕುಳಿತು ಕೇಕು ತಿಂದೆ, ಕೋಲಾ ಕುಡಿದೆ.
‘ತಂದೆ’ ಎಂದು ಆ ಮುದುಕ ಒಳಗಿನ ಕಪಾಟು ತೆರೆದು ಅಲ್ಲಿಂದ ರಟ್ಟಿನ ಪೆಟ್ಟಿಗೆ ತಂದು ಮುಂದಿಟ್ಟ. ಆತುರದ ಬೆರಳುಗಳಿಂದ ಮುಚ್ಚಳ ತೆರೆದು ನೋಡಿದೆ. ನಿಜ. ನಾನು ತಂದ ಬಟ್ಟೆ. ಎರಡು ಸೂಟುಗಳು.
‘ಬೇಕಾದರೆ ಧರಿಸಿ ನೋಡಿ’
ಸೂಟು ಎತ್ತಿ ಬಿಚ್ಚಿದೆ. ಒಳಗಿನ ಲೈನಿಂಗ್ ಬಟ್ಟೆ ಮಲ್ಲಿಗೆ ಹೂವಿನಂತೆ ಮೃದು. ಹೊಲಿಗೆ ತುಂಬ ಸೊಗಸು ಎನ್ನಿಸಿತು. ಕೋಟು ಹಾಕಿಕೊಂಡು ಕನ್ನಡಿಯಲ್ಲಿ ನೋಡಿದೆ. ನಮ್ಮೂರಿನ ಪುಟ್ಟಸ್ವಾಮಿ, ಮುಂದಿನ ಮೂರು ಜನ್ಮಗಳಲ್ಲಿಯೂ ಇಷ್ಟು ಒಳ್ಳೆಯ ಒಳಬಟ್ಟೆ ಹಾಕಿ ಎರಡೇ ದಿನಗಳಲ್ಲಿ ಇಷ್ಟು ಸೊಗಸಾಗಿ ಹೊಲಿಯಲಾರ. ಮನಸ್ಸನ್ನು ತೃಪ್ತಿ ತುಂಬಿಕೊಂಡಿತು. ಇಷ್ಟು ಒಳ್ಳೆಯ ಒಳಬಟ್ಟೆ ಹಾಕಿ. ಎರಡೇ ದಿನಗಳಲ್ಲಿ ಇಷ್ಟು ಸೊಗಸಾಗಿ ಎರಡು ಸೂಟುಗಳನ್ನು ಹೊಲಿದ ಬೆಲೆ ಮೂವತ್ತು ಡಾಲರುಗಳಿಗಿಂತ ತುಂಬ ಹೆಚ್ಚು ಎಂದಿತು ಮನಸ್ಸು.
‘ಎಷ್ಟು ಕೊಡಲಿ ?’ ಎಂದೆ.
‘ಎರಡು ಸೂಟುಗಳ ಹೊಲಿಗೆಯ ಬೆಲೆ ಅರವತ್ತು ಡಾಲರು. ಅಂದೇ ಹೇಳಿದ್ದೆನಲ್ಲವೇ ? ಆದರೆ ನಿಮ್ಮಲ್ಲಿ ಅದಕ್ಕಿಂತ ಕಡಿಮೆ ಇದ್ದರೆ ಅಷ್ಟೇ ಕೊಡಿ ಚಿಂತೆಯಿಲ್ಲ ಎಂದ ಮುದುಕ.
ನನಗೆ ತುಂಬಾ ಆಶ್ಚರ್ಯವಾಯಿತು. ‘ಅಲ್ಲ ಇಷ್ಟು ಒಳ್ಳೆಯ ಒಳ ಬಟ್ಟೆ ನಿಮ್ಮದೇ ವೆಚ್ಚದಲ್ಲಿ ಹಾಕಿದ್ದೀರಿ. ಉಸಿರುಕಟ್ಟುವಂತೆ ಕೆಲಸ ಮಾಡಿ ಎರಡೇ ದಿವಸಗಳಲ್ಲಿ ಇಷ್ಟು ಸೊಗಸಾಗಿ ಹೊಲಿದಿದ್ದೀರಿ. ಊರಿನಲ್ಲಿ ಎಲ್ಲಿ ಕೇಳಿದರೂ ನಲವತ್ತು ಡಾಲರ್ ಕಡಿಮೆ ಬೆಲೆಗೆ ಒಂದು ಸೂಟು ಹೊಲಿಯುವುದಿಲ್ಲ. ಎಲ್ಲ ಕಡೆ ಕೇಳಿಬಂದಿದ್ದೇನೆ. ನನಗೆ ಗೊತ್ತಿದೆ. ಹೀಗಿರುವಲ್ಲಿ ಇದರಿಂದ ನಿಮಗೆ ಲಾಭ ಇದೆಯೇ? ಎಂದು ಕೇಳಿದೆ.
‘ ಲಾಭಕ್ಕಾಗಿ ಹೊಲಿಯಲಿಲ್ಲ; ಸ್ನೇಹಕ್ಕಾಗಿ ಹೊಲಿದೆ’ ಎಂದ ಮುದುಕ. ತನ್ನ ಮುಖದ ತುಂಬ ಮಂದಹಾಸ ತುಂಬಿಕೊಂಡಿದ್ದ.
ನನ್ನ ಹುಬ್ಬು, ನೆತ್ತಿಗೇರಿತು. ಸ್ನೇಹ ಎಂದೆ. ಹೌದು, ಸ್ನೇಹ. ಮುರುಕು ಇಂಗ್ಲಿಷ್ನಲ್ಲಿ ಮುದುಕ ಮುಂದುವರಿಸಿದ- ‘ಚೀನಾ -ಭಾರತಗಳ ಸ್ನೇಹ ಇಂದಿನದೆ? ನಿಮಗೆ ಗೊತ್ತಿಲ್ಲವೆ ? ಇಂದೇನೋ ಎರಡೂ ದೇಶದ ರಾಜಕೀಯ ಮುಂದಾಳುಗಳು, ಕಾಲದ ಗುಂಟ ಕೂಡಿಬಂದ ಸ್ನೇಹವನ್ನು ಒಡೆದಿದ್ದಾರೆ. ಅವರು ಕೆಡಿಸಿದ ಸ್ನೇಹವನ್ನು ನಾನೂ-ನೀವೂ ಕೂಡಿಸಬೇಡವೆ ? ಎಂದು ನುಡಿದ ಏನನ್ನೋ ಭಾವಿಸಿ, ಆ ಮುದುಕ ಒಂದು ಕ್ಷಣ ನಿಶ್ಚಲನಾಗಿ ನಿಂತಾಗ ಅರಿವಿಲ್ಲದೆಯೇ ನನ್ನ ಕೈಗಳು ಆತನ ಕೈಯನ್ನು ಅರಸಿ ಹಿಡಿದುಕೊಂಡಿದ್ದವು.
‘ತಲತಲಾಂತರದಿಂದ ಹರಿದುಬಂದ ಆ ಸ್ನೇಹವನ್ನು ಮುರಿಯಲು ಯಾರಿಗೂ ಹಕ್ಕಿಲ್ಲ. ನಮ್ಮ ನಿಮ್ಮ ಮುಂದಾಳುಗಳಿಗೂ ಹಕ್ಕಿಲ್ಲ’ ಎಂದು ನುಡಿದ ಆತ ಥಟಕ್ಕನೆ ಇಳೆಗೆ ಇಳಿದಂತೆ- ‘ತಾಳಿ, ಈ ಎರಡು ಸೂಟುಗಳಿಗೂ ಹೊಂದುವಂತಹ ನೆಕ್ ಟೈ ಹುಡುಕಿ ಕೊಂಡುತಂದಿದ್ದೇನೆ. ನಮಗಾಗಿ ನೀವು ಧರಿಸಲೇಬೇಕು’ ಎಂದು ತನ್ನ ಹೊಲಿಗೆ ಮೇಜಿನ ಡ್ರಾಯರನ್ನು ಎಳೆದು ಪುಟ್ಟ ಪೆಟ್ಟಿಗೆಯನ್ನು ತೆಗೆದು ಮುಂದಿಟ್ಟ. ಬಹಳ ಸೊಗಸಾದ ಎರಡು ನೆಕ್ ಟೈ.
ಮನಸ್ಸು ತಬ್ಬಿಬ್ಬಾಯಿತು. ಕ್ಷಣದಲ್ಲಿ ಚೇತರಿಸಿಕೊಂಡು, ಹಿಂದಿನ ದಿನವೇ ಕೊಂಡಿದ್ದ ಹೊಸ ಷೀಫರ್ ಪೆನ್ನನ್ನು ಮೊಮ್ಮಗಳ ಕೈಯಲ್ಲಿಟ್ಟು, ‘ನಾನಿಲ್ಲಿ ಬಂದ ನೆನಪಿಗಾಗಿ’ ಎಂದು ನುಡಿದು, ತಿರುಗಿ ಮಗನ ಕೈ ಹಿಡಿದು ಕುಲುಕಿದೆ. ಇದೀಗ ಆತನ ಮುಖವೂ ಸಡಿಲವಾಗಿ ನಗೆಮೂಡಿತು. ಏನೂ ತೋಚದೆ, ಏನನ್ನೂ ಹೇಳಲಾರದೆ, ಯಾವುದೋ ಆನಂದಾನುಭವದಲ್ಲಿ ನಾಲ್ವರೂ ಕೈ ಕೈ ಹಿಡಿದು ನಿಂತೆವು.

‍ಲೇಖಕರು avadhi

December 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

ಅಮೃತಾ ಪ್ರೀತಮ್ ರ ‘ಪಿಂಜರ್’

ಅಮೃತಾ ಪ್ರೀತಮ್ ರ ‘ಪಿಂಜರ್’

ಪಿಂಜರ್ ಅಂದರೆ ಕನ್ನಡದಲ್ಲಿ ಪಂಜರ ಅಥವಾ ಮಾನವನ ಅಸ್ಥಿಪಂಜರ ಎಂದು ಹೇಳಬಹುದು. ಏನು ಈ ಕಾದಂಬರಿಯ ಹೆಸರು ಹೀಗಿದೆ? ಇದು ಸತ್ತವರ ಕತೆಯನ್ನು...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: