ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ…

-ಡಿ ಎನ್ ಶ್ರೀದೇವಿ

ಶ್ರೀದೇವಿ ಆರ್ಥಾತ್ ಶ್ರೀ ಡಿ ಎನ್ ಪತ್ರಕರ್ತೆ. ಸದಾ ಚಟುವಟಿಕೆಯ ಶ್ರೀ ಸಾಕಷ್ಟು ವರ್ಷ ಈಟಿವಿ ಯಲ್ಲಿದ್ದು ಪ್ರಸ್ತುತ ಕಸ್ತೂರಿ ಚಾನಲ್ನಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಪ್ರತಿಯೊಬ್ಬರಲ್ಲಿರುವ ಪ್ರತಿಭೆಗೆ ನೀರೆರೆಯುವುದು ಇವರ ಆಸಕ್ತಿ. ಮಾಧ್ಯಮಗಳ ಓರೆಕೋರೆಗಳನ್ನು ಪತ್ತೆ ಹಚ್ಚುವುದು, ಅದನ್ನು ಸರಿ ದಾರಿಗೆ ತರಲು ಯತ್ನಿಸುವುದು ಪ್ರೀತಿಯ ಹವ್ಯಾಸ.

ಪಶ್ಚಿಮ ಘಟ್ಟಗಳನ್ನು ಸೀಳುತ್ತಾ ಓಡುವ ರೈಲು ಅದು ಬರೀ   ರೈಲಲ್ಲ.. ನೆನಪುಗಳ ನೇವರಿಕೆ. ಆ ಬರಹ ಇಲ್ಲಿದೆ .

ಬೆಳಕಿಲ್ಲದ ದಾರಿಯಲ್ಲಿ…

ಸುತ್ತಲೆತ್ತಲೆತ್ತಲೂ ಬರಿಯ ಕತ್ತಲೇ ಕತ್ತಲು… ಅದರ ನಡುವೆಯೂ ಗುಡ್ಡ… ಬೆಟ್ಟ… ಕಾಡು… ಕತ್ತಲಲ್ಲಿ ತೂರಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಒಳಗಣ್ಣು ಒಂಚೂರು ತೆರೆದು ಹೊರಗೆ ನೋಡಿದರೆ ಕಾಣುವುದು, ಕಣ್ಣು ಹಾಯುವಷ್ಟು ದೂರಕ್ಕೆ ಮತ್ತು ಅದರಿಂದಲೂ ಆಚೆಗೆ ಗುಡ್ಡಕ್ಕೆ ಹಾಸಿದ ಹಸಿರು ಮರಗಳ ಹಾಸು…
ಕಿಟಿಕಿಯ ಗಾಜು ಪೂರ್ತಿ ತೆರೆದು, ನೋಟ ಹೊರಗೆ ತೂರುತ್ತಾ ಹೊರಗಿನ ಶಬ್ದ ಜಗತ್ತಿಗೆ ಕಿವಿಯಾಗುತ್ತೇನೆ… ದಾರಿಯುದ್ದಕ್ಕೂ ಸಿಗುವ ಪುಟ್ಟ ಪುಟ್ಟ ತೊರೆಗಳ ಜುಳುಜುಳು… ಜೀರುಂಡೆಗಳ ಜೀರ್ಗುಟ್ಟುವಿಕೆ… ಹೆಸರು ತಿಳಿಯದ ಹಕ್ಕಿಗಳು ಮಾಡುವ ಇಲ್ಲಿವರೆಗೆ ಕೇಳದ ಶಬ್ದಗಳು…
ಇವೆಲ್ಲವನ್ನೂ ತೂರಿಕೊಂಡು, ಮೀರಿಕೊಂಡು ರೈಲು ತನ್ನದೇ ಆದ ಹದದಲ್ಲಿ ಸಾಗುತ್ತದೆ… ಅದರಲ್ಲಿರುವವರಲ್ಲಿ ಕೆಲವರಿಗೆ ತಮ್ಮದೇ ಚಿಂತೆ.. ಇನ್ನು ಕೆಲವರಿಗೆ ಯಾವುದೋ ಧ್ಯಾನ… ಗುಂಪುಗಳಿದ್ದ ಕಂಪಾರ್ಟ್-ಮೆಂಟುಗಳಲ್ಲಿ ತಡೆಯಿಲ್ಲದೆ ಸಾಗಿದ ಹರಟೆಗಳು… ಯಾವ ಉಸಾಬರಿಯೂ ಬೇಡವೆಂದು ಆಗಲೇ ಮುಸುಕು ಹೊದ್ದು ಮಲಗಿರುವ ಹಲವರು… ಇವರೆಲ್ಲರ ನಡುವೆ, ಕಿಟಿಕಿ ತೆಗೆದು ಕುಳಿತಿರುವವರು ಅಲ್ಲೊಬ್ಬರು, ಇಲ್ಲೊಬ್ಬರು…
ಹೌದು, ಕಿಟಿಕಿ ತೆಗೆದು ಹೆಚ್ಚಿನವರು ಹೊರನೋಡಲಿಕ್ಕಿಲ್ಲ… ಯಾಕೆಂದರೆ, ಆಗಾಗ ತಿರುವಿನಲ್ಲಿ ಕಾಣುವ ಅಲ್ಪಸ್ವಲ್ಪ ಬೆಳಕಲ್ಲಿ ರೈಲು ಹೋಗುವ ಹಾದಿ ನೋಡಿದರೆ ಸಾಕು, ಎಂಟೆದೆಯವರಿಗೂ ಒಂದು ಕ್ಷಣ ಎದೆ ಝಲ್ಲೆನ್ನಬಹುದು… ಗುಡ್ಡಗಳನ್ನೇ ಕಡಿದು ಮಾಡಿದ ರೈಲಿನ ಹಾದಿ, ಕೊರಕಲಿದ್ದಲ್ಲಿ ಅದು ಹೇಗೋ ಅದರ ಮೇಲೆಯೇ ಹಾದುಹೋಗುತ್ತದೆ… ಇದರ ಬಗ್ಗೆ ನಾ ಹೇಳುವುದನ್ನು ಕೇಳುವ ಬದಲು, ನೀವೇ ಅನುಭವಿಸಿದರೆ ಚೆನ್ನ…
ದೂರದೂರದವರೆಗೂ ಸುತ್ತ ಬರೀ ಕಾಡು… ಮರ… ಗುಡ್ಡ… ರಾತ್ರಿ ಮಾಡಿದ ಕರಾಮತ್ತೋ ಅಥವಾ ನಿಜವಾಗಿಯೂ ಅದು ಹಾಗೆಯೋ, ಮನುಷ್ಯರ ಅಥವಾ ಜನವಾಸದ ಸುಳಿವೇ ಇಲ್ಲ… ಯಾಮಿನಿ ತನ್ನೆಲ್ಲಾ ಸೌಂದರ್ಯದೊಡನೆ ಕಾಲುಮುರಿದುಕೊಂಡು ಬಿದ್ದ ಹಾಗಿದೆ ಇಲ್ಲಿ… ಹತ್ತಿಯ ಹಾಗೆ ಹರಡಿದ ಬಿಳಿಮೋಡಗಳು ಇನ್ನೇನು, ಕೈಚಾಚಿದರೆ ಕೈಗೆ ಸಿಕ್ಕೇಬಿಡುತ್ತವೇನೋ ಎಂಬ ಭ್ರಮೆ ಹುಟ್ಟಿಸುತ್ತವೆ… ಒಂದು ಗುಡ್ಡದಿಂದ ಇನ್ನೊಂದಕ್ಕಿರುವ ನಡುವಿನ ಅಂತರದಲ್ಲೆಲ್ಲ ಈ ಹತ್ತಿಮೋಡಗಳದೇ ಕಾರುಬಾರು…
ಮತ್ತೂ ಮೇಲೆ ಆಗಸಕ್ಕೆ ದೃಷ್ಟಿ ತೂರಿದರೆ ಕಾಣುವುದು, ಇನ್ನೇನು ಮಳೆ ಸುರಿಸಿಯೇ ಬಿಡುತ್ತವೆನ್ನುವ ಭಾರವಾದ ಕರಿಮೋಡಗಳ ರಾಶಿ ರಾಶಿ… ಚಂದ್ರನ ತಣ್ಣಗಿನ ಮಂದ ಬೆಳಕಿನ ಹೊನಲು ಆಗೀಗ ಇವುಗಳ ನಡುವೆ ಇಣುಕಿ ತಾನಿದ್ದೇನೆನ್ನುತ್ತದೆ…
ಬೆಟ್ಟಗಳ ನಡುವಿನ ಕೊರಕಲಿನಲ್ಲಿ ತಿರುವಿನ ದಾರಿಯಲ್ಲಿ ನಿಧಾನವಾಗಿ ರೈಲು ಸಾಗುವಾಗ ಮೆಲ್ಲನೆದ್ದು ಕಂಪಾರ್ಟ್ಮೆಂಟಿನ ಬಾಗಿಲು ತೆಗೆಯುವ ಸಾಹಸಕ್ಕಿಳಿಯುತ್ತೇನೆ. ಮೆಲ್ಲಗಿಣುಕಿದರೆ, ಆ ಕಡೆಯೂ ದೂರದಲ್ಲಿ ಬೆಟ್ಟ, ಈ ಕಡೆಯೂ ದೂರದಲ್ಲಿಯೇ ಬೆಟ್ಟ… ಹಿಂದೆ ಬೆಟ್ಟದ ನಡುವೆ ಕಾಣುವ ಸಾಗಿ ಬಂದ ದಾರಿ, ಮುಂದೆ ಕಾಣುವುದು ಇನ್ನೊಂದು ಬೆಟ್ಟ, ಮತ್ತು ಹೋಗಲಿರುವ ದಾರಿ. ಕೆಳಗೆ ಕೆಲವು ಅಡಿಗಳ ಆಳದಲ್ಲಿ ಸುಮ್ಮನೇ ಜುಳುಜುಳು ಹರಿವ ನೀರು ಚಂದ್ರನ ಬೆಳಕಿಗೆ ಪ್ರತಿಫಲಿಸುತ್ತದೆ. ಅಷ್ಟರಲ್ಲಿಯೇ ಅಲ್ಲಿ ಬಂದ ಗಾರ್ಡ್ ಕೈಲಿ ಬೈಗುಳ ತಿಂದು ಬಾಗಿಲು ಮುಚ್ಚಿ ತೆಪ್ಪಗೆ ನನ್ನ ಜಾಗದಲ್ಲಿ ಹೋಗಿ ಕೂರುತ್ತೇನೆ.
ಇದೊಂದು ಏಕಾಂಗಿ ಜಗತ್ತು. ಯಾವುದೋ ಲೋಕಕ್ಕೆ ಹೋಗುವ ದಾರಿಯಿದು ಎನ್ನುವ ಭ್ರಮೆ ಹುಟ್ಟಿಸುವ ಮಾಯಾಪ್ರಪಂಚ. ಹೊರಜಗತ್ತಿನೊಡನೆ ಸಂಪರ್ಕ ಸಾಧಿಸಬೇಕೆಂದರೆ ಇಲ್ಲಿ ಏನೇನೂ ಇಲ್ಲ… ದೂರದೂರದ ವರೆಗೆ ರೈಲು ಹೋಗುವ ದಾರಿಯಲ್ಲೆಲ್ಲೂ ಮೊಬೈಲ್ ನೆಟ್-ವರ್ಕ್ ಇಲ್ಲ… ಟೆಲಿಫೋನ್ ಅಂತೂ ಇಲ್ಲವೇ ಇಲ್ಲ. ಸುಮ್ಮಸುಮ್ಮನೇ ಮೊಬೈಲಿನಿಂದ SOS ಕಾಲ್ ಪ್ರಯತ್ನಿಸಿ ವಿಫಲಳಾಗುತ್ತೇನೆ.
ಇಲ್ಲಿ ಎಲ್ಲೂ ವಿದ್ಯುತ್ ಸಂಪರ್ಕವಿಲ್ಲ, ಬೆಳಕೇ ಇಲ್ಲ.. ಹಾಂ, ಬೆಳಕು ಇಲ್ಲವೇ ಇಲ್ಲವೆನ್ನುವುದು ಸುಳ್ಳು. ಅಲ್ಲಲ್ಲಿ, ಕೆಲವು ಕಿಲೋಮೀಟರುಗಳಿಗೊಮ್ಮೆ, ರೈಲ್ವೇ ಕಟ್ಟಿಸಿದ ಚಿಕ್ಕಚಿಕ್ಕ ನಿಲ್ದಾಣಗಳಂತಹ ಕಟ್ಟಡಗಳು ಕಾಣಬರುತ್ತವೆ… ಪ್ರತಿ ಕಟ್ಟಡಕ್ಕೊಬ್ಬ ರೈಲ್ವೇ ಸಿಬ್ಬಂದಿಯಿರುತ್ತಾನೆ… ಆತ ರೈಲು ಬರುವವರೆಗೆ ಎಚ್ಚರವಿದ್ದು, ಸಿಳ್ಳೆ ಹಾಕಿ ರೈಲು ಮುಂದೆ ಹೋಗಬಹುದೆನ್ನುವ ಸೂಚನೆ ನೀಡುತ್ತಾನೆ. ಬೆಳಕೇ ಇಲ್ಲದ ಈ ವಾತಾವರಣದಲ್ಲಿ ಒಂದು ರೀತಿಯಲ್ಲಿ ಈತನೇ ಬೆಳಕು… ಅರೆಬೆಳಕಿನ ದಾರಿಯನ್ನು ಕಾಯುತ್ತಿರುವ ಇಂತಹ ಹಲವಾರು ಮಾನವರೂಪದ ದೇವದೂತರಿಗೆ ಬೆಳಕು ನೀಡಲು ಸೋಲಾರ್ ಅಳವಡಿಸಿದ ಕಂಬಗಳಲ್ಲಿರುವ ದೀಪ ತಕ್ಕಮಟ್ಟಿಗೆ ಸಹಾಯ ಮಾಡುತ್ತದೆ. ಇವರನ್ನು ಬಿಟ್ಟರೆ ಸುತ್ತಮುತ್ತ ಎಲ್ಲೂ ನರಮಾನವರೆನ್ನುವವರ ಕುರುಹೇ ಇಲ್ಲ… ಅದ್ಯಾಕೋ ಭಾರತೀಯ ರೈಲ್ವೇ ಬಗೆಗೆ ಹೆಮ್ಮೆ ಮೂಡುತ್ತದೆ.
ಈ ಜಗತ್ತಿನ ಮಾಯೆಗೆ ಮರುಳಾಗಿ ಕಳೆದು ಹೋಗಿದ್ದೇನೆ… ಇದ್ದಕ್ಕಿದ್ದಂತೆ, ದೂರದಲ್ಲಿ, ಗುಡ್ಡಗಳ ನಡುವಿನ ತಳಭಾಗದಲ್ಲಿ, ಕತ್ತಲನ್ನು ಸೀಳಿ, ಸಾಲುಸಾಲು ಬೆಳಕಿನ ಮಾಲೆ ಗೋಚರಿಸುತ್ತದೆ…
ಕತ್ತಲ ಸೀಳಿ ಬೆಳಕು ನುಗ್ಗಿದರೆ ಅದಕ್ಕೊಂದು ಒಳ್ಳೆಯ ಅರ್ಥವಿದೆ… ಬೆಳಕು ಬದುಕಿನ ಸಂಕೇತ. ಇದಕ್ಕಾಗಿಯೇ ತಮಸೋಮಾ ಜ್ಯೋತಿರ್ಗಮಯ ಅಂತ ಮಾತೇ ಇದೆ… ಆದರೆ, ಇಲ್ಲಿ ಕಾಣುವ ಬೆಳಕು ಯಾಕೋ ಕ್ರೂರವಾಗಿದೆ… ಈ ಬೆಳಕು ಸುತ್ತ ಹೊನಲಾಗಿ ಸೂಸುತ್ತಿರುವ ಚಂದ್ರಧಾರೆಯ ಜತೆಗೆ ಬೆರೆಯದಾಗಿದೆ. ಅಲ್ಲಿ ಸೃಷ್ಟಿಯಾಗಿರುವ ಮಾಯಾಜಾಲದ ಪ್ರಪಂಚಕ್ಕೆ ಸೇರದಾಗಿದೆ… ಕೃತಕವಾದ ಬೆಳಕು ಏನೋ ಅಪಶಕುನದಂತೆ ತೋರುತ್ತದೆ.
ಅಷ್ಟೊಂದು ಬೆಳಕು ಚೆಲ್ಲುತ್ತ ದೂರದ ಗುಡ್ಡದ ತಪ್ಪಲಲ್ಲಿ ಕಾಣುತ್ತಿರುವುದು ಸಾಲು ಸಾಲಾಗಿ ಹೋಗುತ್ತಿರುವ ವಾಹನಗಳ ಫ್ಲಡ್ ಲೈಟ್-ಗಳ ಬೆಳಕು. ಗಂಟೆ ನೋಡುತ್ತೇನೆ. ಸರಿಯಾಗಿ ಒಂದು. ಅಷ್ಟು ಹೊತ್ತಿನಲ್ಲಿ ಆ ಗುಡ್ಡಗಳ ತಪ್ಪಲಲ್ಲಿ ಅಷ್ಟೊಂದು ವಾಹನಗಳಿಗೇನು ಕೆಲಸ? ಈ ಅಪರಾತ್ರಿಯಲ್ಲಿ ಏನು ಮಾಡುತ್ತಿರಬಹುದು? ಇತ್ಯಾದಿ ತರ್ಕಗಳು ಮನದಲ್ಲಿ ಮೂಡಲಾರಂಭಿಸುತ್ತವೆ…
ರಸಭಂಗವೆಂದರೆ ಇದೇ ಇರಬೇಕು. ಹಾಗೇ ಹೊರಗೆ ಕಣ್ಣು ತೂರಿಸಿ ಕೂರುವ ಯತ್ನ ಮಾಡುತ್ತೇನೆ. ಝರಿ-ತೊರೆಗಳ ಜುಳುಜುಳ ಆಗಲೇ ಕಡಿಮೆಯಾಗಿಬಿಟ್ಟಿದೆ. ಸ್ವಲ್ಪವೇ ಸಮಯದಲ್ಲಿ ಗುಡ್ಡ-ಬೆಟ್ಟಗಳ ಶ್ರೇಣಿಯೂ ಬರಬರುತ್ತ ಕಡಿಮೆಯಾಗಿ, ಅಲ್ಲೊಂದು-ಇಲ್ಲೊಂದು ಮನೆಗಳು ಕಾಣಲಾರಂಭ… ಯಾವುದೋ ಪಟ್ಟಣದ ಕುರುಹುಗಳು ಇಲ್ಲಿವರೆಗೆ ನೋಡಿದ್ದೆಲ್ಲ ಕನಸೆಂಬಷ್ಟು ಸತ್ಯವಾಗಿ ಕಣ್ಣಿಗೆದುರಾಗುತ್ತವೆ… ಸರಿ, ಇನ್ನೇನೂ ನೋಡಲು ಉಳಿದಿಲ್ಲ, ಕಿಟಿಕಿ ಹಾಕಿ ಮಲಗಿ ಕಣ್ಣು ಮುಚ್ಚುತ್ತೇನೆ…
ಕಣ್ಮುಚ್ಚಿದವಳೇ, ಇಲ್ಲಿವರೆಗೆ ನೋಡಿದ್ದು ಕನಸಲ್ಲದಿರಲಿ, ಕನಸಾಗದಿರಲಿ ಎಂದು ಜಗತ್ತನ್ನು ನಡೆಸುವ ಶಕ್ತಿಯೊಡನೆ ಬೇಡಿಕೊಳ್ಳುತ್ತೇನೆ…

‍ಲೇಖಕರು avadhi

July 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This