ಚೂಪು ಕಲ್ಲಿನ ಮೇಲೆ ಶ್ರೀದೇವಿ ಕಳಸದ ಆಕ್ಯುಪ್ರೆಷರ್!

ಈ ಕಾಲದಲ್ಲಿ ಬರಿಗಾಲಿನಲ್ಲಿ  

– ಶ್ರೀದೇವಿ ಕಳಸದ

ಆಲಾಪ

ಮನೆಯೊಳಗೊಂದು, ಆಫೀಸಿಗೊಂದು, ಜೀನ್ಸ್‌ಗೊಂದು, ಸೆಲ್ವಾರ್‌ಗೊಂದು, ಸೀರೆಗೊಂದು, ಪ್ರವಾಸಕ್ಕೊಂದು, ವಾಕಿಂಗ್‌ಗೊಂದು… ಹೀಗೆ ಒಂದೊಂದೇ ಜತೆಯೆಂದು ಪೇರಿಸಿಟ್ಟ ಚಪ್ಪಲಿಗಳು ಆಗಾಗ ಕೆಲಗಂಟೆಗಳಾದರೂ ಗೂಡಿನಲ್ಲೇ ಇರಲಿ ಬಿಡಿ. ಮಂಜು ಸರಿಯೋ ಹೊತ್ತಿಗೆ ಕ್ಯಾಬ್‌ ಬಂದಾಗಿತ್ತು. ಅಂದು ಹೋಗಬೇಕೆಂದುಕೊಂಡಿದ್ದು ಸಾಗರದ ಬಳಿ ಇರುವ ವರದಪುರ ಬೆಟ್ಟಕ್ಕೆ. ಮುನ್ನೂರು ಮೆಟ್ಟಿಲು ಏರಿದ ನಂತರ ಸುಮಾರು ಒಂದು ಕಿ.ಮೀ. ನಷ್ಟು ಬೆಟ್ಟ ಹತ್ತಬೇಕಿತ್ತು. ಅಂಥಾ ಏನು ಮಹಾಸಾಹಸ ಎಂದು ಹುರುಪಿನಲ್ಲಿದ್ದವಳ ಮುಖ ಸಣ್ಣಗೆ ಮಾಡಿದ್ದು ’ಪಾದರಕ್ಷೆ ಇಲ್ಲೇ ಬಿಡಬೇಕು’ ಅನ್ನೊ ಬೋರ್ಡು. ಅದ್ರಲ್ಲೂ ನಾವು ಹೋಗಿದ್ದು ಮಳೆಗಾಲವಲ್ಲದ ಮಳೆಗಾಲದ ದಿನಗಳಲ್ಲಿ. ಮೆಟ್ಟಿಲು ಏರಿದ್ದೇನೋ ಆಯಿತು. ಸವಾಲಿನ ದಾರಿ ಈಗ ಶುರು… ಕೆಂಪುಮಣ್ಣೊಳಗೆ ಅರ್ಧಂಬರ್ಧ ಹೂತ ಚೂಪುಚೂಪು ಸಣ್ಣಕಲ್ಲುಗಳ ಹಾಸಿಗೆ?! ಮೇಲೆ ನಡೆಯೋದಂದ್ರೆ… ಏನ್‌ ಕೇಳ್ತೀರಿ. ಪಕ್ಕದಲ್ಲಿರೋವ್ನೇ ಕಾಪಾಡ್ತಿಲ್ಲ ಅಂದ್ಮೇಲೆ ಗುಡ್ಡದ ಮೇಲೆ ಸಮಾಧಿಸ್ಥಿತಿಯಲ್ಲಿರೋ ಶ್ರೀಧರ ಸ್ವಾಮಿಗಳು ಎದ್ದುಬಂದಾರೇ? ಹಾಗೊಂದು ವೇಳೆ ಅವರು ಎದ್ದು ಬಂದರೆ ನಾನಲ್ಲಿ ಇರ‍್ತಿದ್ನಾ? ನನಗಾಗಲ್ವೋ… ಅಂತ ಕಿರುಚಿದಾಗೆಲ್ಲ ’ಆಕ್ಯುಪ್ರೆಶರ್‌ ಕಣೆ… ಹೀಗೆ ತಿಂಗಳಿಗೊಮ್ಮೆ ಇಂಥ ಬೆಟ್ಟ ಹತ್ತಿದ್ರೆ ಯಾವ ಕಾಯಿಲೆಗಳೂ ಬರಲ್ಲ. ಹತ್ತು ಹತ್ತು… ಅಂತ ಹೇಳ್ತಾ ಕೇಕೆ ಹೊಡೆಯುತ್ತ ಓಡುತ್ತಲೇ ಇದ್ದ. ಹೋಗ್ತಾ ಹೋಗ್ತಾ ಅವನ ಧ್ವನಿ ಮಾತ್ರ ಕೇಳ್ತಿತ್ತು, ಅವನ ದಾಪುನಡಿಗೆಯನ್ನು ಆಕಾರವನ್ನು ಪೊದೆಗಳು ಮರೆಮಾಡಿಬಿಡುತ್ತಿದ್ದವು. ಇನ್ನು ಅವನನ್ನು ಹಿಂಬಾಲಿಸಕ್ಕಾಗಲ್ಲ ಅನ್ನೋದು ಖಾತ್ರಿಯಾಗ್ಹೋಯ್ತು. ದಟ್ಟ ಹಸಿರಿನ ಮಧ್ಯೆ ನೆಲ ಕಂಡ ದಾರಿಯಲ್ಲೇ ಹೊರಟೆ. ಕೈಯಲ್ಲಿ ಎರಡು ಲೀಟರ್‌ ನೀರಿನ ಬಾಟಲಿ ಭಾರ.. ಬೀಸಿ ಎಸೆದುಬಿಡೋಣ ಅನ್ನಿಸಿತ್ತು. ಆ ಹೊತ್ತಿಗೆ ಐದಾರು ಕಾಲೇಜು ಹುಡುಗಿಯರು ಎದುರಾದರು. ನೀರು ಕೊಡ್ತೀರಾ ಅಂತ ಸಂಕೋಚದಿಂದನೇ ಕೇಳಿದ್ರು. ಓಹ್‌ ದಯವಿಟ್ಟು… ಬಾಟಲಿ ಕೊಟ್ಟು ಹೊರಟರೆ… ನಿಮ್ಮ ಬಾಟಲಿ ಎಂದು ಕೂಗಿದರು. ಅದು ನಿಮಗೇ ಎಂದೆ. ನಿಜಾ? ಎಂದರು. ಹೌದು ಎಂದು ಕೂಗಿದೆ. ಹೇ…. ಎಂದು ಖುಷಿಯಿಂದ ಕುಣಿದು… ಅವಳಾದ ಮೇಲೆ ಇವಳು, ಇವಳಾದ ಮೇಲೆ ಅವಳು ಹೀಗೆ ನೀರು ಕುಡಿಯೋ ಅವರ ಸಂಭ್ರಮವೇ ಹೇಳುತ್ತಿತ್ತು ಅವರು ದಣಿವರಿದಿದ್ದನ್ನು. ಅಲ್ಲೇ ಇದ್ದ ಮರದ ಬೊಡ್ಡೆ ಮೇಲೆ ಉಶ್ಯಪ್ಪಾ ಅನ್ನೋ ಹೊತ್ತಿಗೆ ಇರುವೆ ಹುತ್ತದ ನೆತ್ತಿ ಮೇಲೆ ಕಾಲಿಟ್ಟುಬಿಟ್ಟಿದ್ದೆ! ಅವನಿದ್ದಿದ್ದರೆ ಇದನ್ನು ’ಆಕ್ಯುಪಂಕ್ಚರ್‌’ ಎನ್ನುತ್ತಿದ್ದನೋ ಏನೋ ಸದ್ಯ. ಅಂತೂ ಬೆಟ್ಟದ ತುದಿ ಬಂತು ಅಂತ ನಿಟ್ಟುಸಿರು ಬಿಡಬಹುದು; ಖುಷಿಯಿಂದ ಕುಣಿದಾಡೋ ಹಾಗಿರಲಿಲ್ಲ. ಕಾರಣ ಆ ಚೂಪುಕಲ್ಲುಗಳು. ಒಂದ್ರೀತಿ ಗಂಟಲಿನಲ್ಲಿ ಬಿಸಿತುಪ್ಪ; ಮತ್ತೆ ಇಳಿಯೋ ಸೆಷನ್‌ ನೆನಪಿಸಿಕೊಂಡು. ಅಬ್ಬಾ… ಅವಧೂತರು ಇಲ್ಲೇ ಯಾಕೆ ಬಂದು ತಪಸ್ಸು ಮಾಡುತ್ತಿದ್ದರೋ… ಅಂತ ಅನ್ನಿಸಿದ್ದು ಆ ಚೂಪುಕಲ್ಲುಗಳ ಆಣೆಗೂ ಸತ್ಯ. ಅವರ ಸಮಾಧಿಸ್ಥಳದ ದರ್ಶನ ಪಡೆಯಲು ಹೊರಡುತ್ತಿದ್ದಾಗ ಕಂಡಿದ್ದು ’ಜೀನ್ಸ್‌ಧಾರಿ ಮಹಿಳೆಯರಿಗೆ ಪ್ರವೇಶವಿಲ್ಲ’ ಅನ್ನೋ ಬೋರ್ಡು.. ವ್ಹಾರೆವ್ಹಾ.. ಕರ್ಮವೇ.. ಅಷ್ಟು ಕಷ್ಟಪಟ್ಟು ಬಂದಿದ್ದಕ್ಕೂ ಸಾರ್ಥಕ ಆಯ್ತು ಅಂತ ಅನ್ಕೊಂಡು ಸುಮ್ಮನೇ ನಿಂತೆ. ಇವನು ಬಾರೇ… ಎಂದ. ಅಲ್ಲಿದ್ದ ಪುರೋಹಿತರೂ ಆ ಬೋರ್ಡಿಗೂ ತಮಗೂ ಸಂಬಂಧವಿಲ್ಲ ಎಂಬಂತಿದ್ದರು. ಯಾವ ಮಹಾಶಯರು ಈ ಬೋರ್ಡ್‌ ಹಾಕಿಸಿದ್ದು.. ಖಂಡಿತ ಶ್ರೀಧರ ಸ್ವಾಮಿಗಳಂತೂ ಅಲ್ಲ ಮತ್ಯಾಕೆ ಯೋಚನೆ ಮಾಡೋದು ಅಂತ ಒಳಹೋದೆ. ಪಕ್ಕದಲ್ಲೇ ಸಮಾಧಿ. ಸ್ವಾಮಿಗಳು ಧ್ಯಾನಸ್ಥ ಸ್ಥಿತಿಯಲ್ಲಿರುವುದರಿಂದ ಶಾಂತತೆ ಕಾಪಾಡಿಕೊಳ್ಳಿ ಎಂಬ ಬೋರ್ಡ್‌ ಅಲ್ಲಿತ್ತು. ಚಿಕ್ಕಕಿಂಡಿಯಿಂದ ಕಣ್ಣಾಡಿಸಿದೆ. ಮಂದಬೆಳಕಷ್ಟೇ ಮನಸಲ್ಲುಳಿಯಿತು. ಮತ್ತದೇ ದಾರಿಯಲ್ಲಿ ವಾಪಸ್‌… ಚೂಪುಕಲ್ಲುದಾರಿ! ಮರಳುವಾಗ ಹೇಳುತ್ತಿದ್ದಾನೆ ’ಆ ಸಣ್ಣದಾರಿಯ ಪಕ್ಕ ಇದೆಯಲ್ಲ ಹುಲ್ಲುದಾರಿ. ಅದರ ಮೇಲೆ ಕಾಲಿಟ್ಟು ಬರಬೇಕು ಕಣೆ…’ ಈಗ ಹೇಳ್ತಾನೆ ಮಾರಾಯಾ ಎಂದು ಸಿಟ್ಟುಬಂದರೂ… ಕಣ್ಣವದ್ದೆ ಮಾಡಿದ್ದು; ಅಂದಿಗೂ ಇಂದಿಗೂ ಚಪ್ಪಲಿ ಇಲ್ಲದೇ ನಡೆದ, ನಡೆಯುತ್ತಿರುವ ಅದೆಷ್ಟೋ ಕಾಲುಗಳು… ನ್ಯಾಗೊಂದಿ ಮೇಲಿಟ್ಟ ಒಂದೇ ಜತೆ ಚಪ್ಪಲಿಯನ್ನು ಮನೆಮಂದಿಯೆಲ್ಲ ಒಬ್ಬೊಬ್ಬರಾಗಿ ಸರದಿಯಂತೆ ಊರಿಗೆ ಹೋಗುವಾಗ ಮಾತ್ರ ಬಳಸುತ್ತಿದ್ದರೆಂದು ಅಮ್ಮ, ಅಜ್ಜಿ ಹೇಳುತ್ತಿದ್ದದ್ದು. ಕಳೆದ ವರ್ಷ ದಾರಿಯಲ್ಲಿ ಕಿತ್ತ ಚಪ್ಪಲಿಯನ್ನು ಅಲ್ಲೇ ಬಿಟ್ರಾಯ್ತು ಎಂದುಕೊಳ್ಳೋ ಹೊತ್ತಿಗೆ ಅಪ್ಪ ತಡೆದದ್ದು. ನಡುರಸ್ತೆಯಲ್ಲಿ ತುದಿಗಾಲಲ್ಲಿ ಕುಳಿತು ಗುಂಡುಸೂಜಿ ತೂರಿಸಿ ರಿಪೇರಿ ಮಾಡಿಕೊಟ್ಟ ಅರವತ್ನಾಲ್ಕರ ಅಪ್ಪ ಈಗ ಹಾಕಿಕೋ ಎಂದು ನಕ್ಕಿದ್ದು… ಅವರು ರಿಪೇರಿ ಮಾಡಿಕೊಡುವ ತನಕ ನಿಂತಲ್ಲೇ ನಿಂತು, ನಕ್ಕಂತೆ ನಟಿಸಿ ಚಪ್ಪಲಿ ಮೆಟ್ಟಿ ದಾರಿ ಸವೆಸಿದ್ದು…]]>

‍ಲೇಖಕರು G

February 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

  1. D.RAVI VARMA

    ಚೆನ್ನಾಗಿದೆ.ಅದು ಬಹು ಸುಂದರವಾದ ಹಾಗು ಪ್ರಶಸ್ತವಾದ ಸ್ತಳ. ಅಲ್ಲಿಯ,ಹಾಗು ಶ್ರೀಧರಸ್ವಾಮಿ ಯವರ ಫೋಟೋ ಹಾಕ್ಬೇಕಾಗಿತ್ತಲ್ವಾ ಮೇಡಂ,ಅಸ್ತೆ ಅಲ್ಲ ಅಲ್ಲಿ ಒಂದು ವೇದಶಾಲೆ ಇದೆ ಅಲ್ಲವಾ ………… ಮೇಡಂ ..

    ಪ್ರತಿಕ್ರಿಯೆ
  2. Sharadhi

    ನಿಮ್ಮ ಬರಹದಲ್ಲಿ ಪ್ರತಿ-ಫಲನವಿದೆ. ಒಂದು ಘಟನೆ/ಚಿತ್ರದ ಸಂದು ಗೊಂದುಗಳಲ್ಲಿ ಹುಡುಕಿ ತಿರುವುಗಳನ್ನು ತಡವಿ ಪರ್ಯಾಯ ಚಿತ್ರಣಗಳನ್ನು/ಸತ್ಯವನ್ನೂ ಅನುಲಕ್ಷಿಸುವ ಗುಣವಿದೆ. ಬರಹ ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: