ಜನ ಕೂಡ ಅವಳನ್ನ ಮರೆತುಬಿಟ್ಟಿದ್ದಾರೆ…

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ
ಹಿಮಾಲಯದ ಹಾದಿಯಲ್ಲಿ ಬಿದ್ದುಬಿಟ್ಟಳು ದ್ರೌಪದಿ.
ಕಾಣದ ದನಿ ಹೇಳೀತು. “ನೀನು ಅರ್ಜುನನಲ್ಲಿ ಪಕ್ಷಪಾತ ತೋರಿದೆ. ಅದಕ್ಕೇ….”
ಕೊನೆಯ ನಗೆ ನಕ್ಕಳು. ಹಳತೆಲ್ಲ ನೆನಪಾದವು.
ಬೆಂಕಿಯ ಮಗಳಾಗಿ ಹುಟ್ಟಿದ್ದವಳು ಬೆಂಕಿಯಾಗೇ ಬೆಳೆದಿದ್ದಳು ದ್ರೌಪದಿ. ಅಲ್ಲಿ, ಸ್ವಯಂವರದಲ್ಲಿ ಕರ್ಣನಿಗೆ ಮನಸೋತಿದ್ದಳು ಹುಡುಗಿ.
ಏನೇನೋ ರಾಜಕೀಯ- ಧಾರ್ಮಿಕ ಕಾರಣಗಳು… ಅಂತೂ ಕರ್ಣ ಅವಮಾನದಿಂದ ಕುದಿಯುತ್ತ ಹೊರನಡೆಯಬೇಕಾಯ್ತು. ಈ ಗದ್ದಲದಲ್ಲಿ ಮಾರು ವೇಷದ ಅರ್ಜುನ ಅವಳನ್ನ ಗೆದ್ದಿದ್ದ.
ಪಾಂಡು ರಾಜನ ಹೆಂಡತಿ ಕುಂತಿ ಬಲು ಜಾಣೆ. ಮಕ್ಕಳ ಒಗ್ಗಟ್ಟು ಒಡೆಯಬಾರದೆಂದೇ ಐವರಿಗೂ ಒಬ್ಬಳನ್ನೇ ಕಟ್ಟಿ ಕೈತೊಳಕೊಂಡಳು.
ಅಲ್ಲಿಂದ ಮುಂದೆ, ಐವರಿಗೂ ‘ಪರ ಸತಿ’ಯಾಗಿಯೇ ದೂರವಾಗುತ್ತ, ಪರಿಪೂರ್ಣ ಪ್ರೇಮಕ್ಕಾಗಿ ಹಂಬಲಿಸುತ್ತ, ನಡುನಡುವೆ ‘ಕರ್ಣನ ಕೈಹಿಡಿದಿದ್ದರೆ…’ ಅಂದುಕೊಳ್ಳುತ್ತ, ಪತಿವ್ರತೆಯ ಪಟ್ಟ ನಿಭಾಯಿಸುತ್ತ ಉಳಿದುಹೋದಳು!
ನೆನಪಾಯಿತು ದ್ರೌಪದಿಗೆ. ಅರ್ಜುನ ಸುಭದ್ರೆಯನ್ನ ಮದುವೆಯಾದ ದಿನ ತಾನು ಪಟ್ಟ ಸಂಕಟ. ತನ್ನ ಪ್ರತಿರೋಧಕ್ಕೆ ಅಂವ “ನಿನಗೆ ಐವರಿರುವಾಗ ನನಗೆ ಇಬ್ಬರಿರಬಾರದ್ಯಾಕೆ?” ಅಂತ ಕೇಳಿದ್ದ. ನಂತರದ ದಿನಗಳಲ್ಲಂತೂ ಹೋದಬಂದಲ್ಲೆಲ್ಲ ಮದುವೆಯಾಗುತ್ತ ಸಂತಾನ ಬೆಳೆಸತೊಡಗಿದ!
“ಹ್ಹ! ಎಷ್ಟು ದ್ವೇಷವಿತ್ತು ಅರ್ಜುನನ ಮೇಲೆ ನನಗೆ!!” ಅಶರೀರ ವಾಣಿಯ ಪೆದ್ದುತನಕ್ಕೆ ನಕ್ಕಳು. “ನಿಜ! ಹೆಣ್ಣಿನ ಮನಸ್ಸು- ಮೀನಿನ ಹೆಜ್ಜೆ!! ನನಗೆ ಸ್ವರ್ಗ ನಿರಾಕರಿಸಲಿಕ್ಕೆ ಇದೆಂಥ ನೆವ ಹುಡುಕಬೇಕಾಯ್ತು ಇವರು!?”
ದೊಡ್ಡ ವಂಶವೊಂದರ ಒಳಗಿನಾಟಕ್ಕೆ ದಾಳವಾಗಿದ್ದಳು ದ್ರೌಪದಿ. ಬೇಕಂದಾಗ ಉರುಳಿಸಿದ್ದರು. ಬೇಕುಬೇಕಾದ ಫಲ ಗಳಿಸಿದ್ದರು. ಐದು ಗಂಡಂದಿರಿದ್ದೂ ವಿಧವೆಯಂತೆ, ಐದು ಮಕ್ಕಳಿದ್ದೂ ಬಂಜೆಯಂತೆ ಕೊನೆಯಾಗಿಹೋದಳು.

~
ಹ್ಹ್! ಚಾಲಾಕು ಜನ ಕೂಡ ಅವಳನ್ನ ಮರೆತುಬಿಟ್ಟಿದ್ದಾರೆ ನೋಡಿ…
ಕಾಲಿಗೆ ಬಿದ್ದ ಹೆಣ್ಣುಗಳಿಗೆಲ್ಲ ‘ಸೀತೆ ಹಾಗೆ ಬಾಳು’ ಅನ್ನುತ್ತಾರೆ.
ಹೇಳಿದ್ದು ಕೇಳಿಕೊಂಡು ಮರು ಮಾತು ಪ್ರಶ್ನಿಸದೆ, ಸೀತೆಯಂತೆ ಅವಮಾನ ನುಂಗುತ್ತ ಇದ್ದುಬಿಡಲೆಂದು ಬಯಸುತ್ತಾರೆ.
ಪಾಪ! ಅದೇನು ಹೆದರಿಕೆಯೋ? ರೋಷದ, ಕೆಚ್ಚಿನ, ಸ್ವಾಭಿಮಾನಿ ದ್ರೌಪದಿಯನ್ನ ಬೇಕಂತಲೇ ಮರೆಯುತ್ತಾರೆ.

‍ಲೇಖಕರು avadhi

June 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. Shwetha, Hosabale

  ಚೇತನಾ,
  ತುಂಬ ಚೆನಾಗಿ ಬರೀತೀರಾ, ನಾನಂತೂ ನಿಮ್ಮ ಬರಹಗಳನ್ನು ತುಂಬ ಇಷ್ಟಪಟ್ಟು
  ಓದ್ತೀನಿ; ದೌಪದಿಯ ಇನ್ನೊಂದು ಮುಖದ ಅನಾವರಣ, ವಿಷಯ ನಿರೂಪಣೆ ಚೆನ್ನಾ
  ಗಿದೆ,ಬೇರೆ ಬೇರೆ ಕೋನಗಳಿಂದ ಹೊರಹೊಮ್ಮುತ್ತಿರುವ ಸ್ತ್ರೀಪರ ಚಿಂತನೆಗಳು ಇನ್ನ
  ಷ್ಟು ಹರಿತವಾಗಿ ಬರಲಿ, ಧನ್ಯವಾದಗಳು. – ಪ್ರೀತಿಯಿಂದ
  ಶ್ವೇತಾ, ಹೊಸಬಾಳೆ.

  ಪ್ರತಿಕ್ರಿಯೆ

Trackbacks/Pingbacks

 1. ಕಾಗದ ಬಂದಿದೆ « ಅವಧಿ - [...] For ಜನ ಕೂಡ ಅವಳನ್ನ ಮರೆತುಬಿಟ್ಟಿದ್ದಾರೆ… [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: