ಜಪಾನ್ ನಲ್ಲಿ ಒಬ್ಬ ಸಸ್ಯಾಹಾರಿ…

-ಉದಯ್ ಶಂಕರ್ ಪುರಾಣಿಕ್

Facebook

ಜಪಾನ್ ಗೆ ಮೊದಲನೆ ಸಲ ಹೊರಟಾಗ,ನನಗಿಂತ ಮತ್ತು ನನ್ನ ಕುಟುಂಬದವರಿಗಿಂತ, ನನ್ನ ಕೆಲವು ಸಹೋದ್ಯೊಗಿಗಳಿಗೆ ಹೆಚ್ಚಿನ ಚಿಂತೆಯಾದಂತಿತ್ತು. ಜಪಾನ್ ಪ್ರವಾಸದ ಅನುಭವಿ ಸಹೋದ್ಯೋಗಿ “ಆರ್ “ನಂತೂ,”ಜಪಾನಿನಲ್ಲಿ ನೀನು ಸಸ್ಯಾಹಾರಿಯಾಗಿದ್ದರೆ, ಉಪವಾಸವಿರುವುದು ಖಂಡಿತ.” ಎಂದು ಭವಿಷ್ಯ ನುಡಿದಿದ್ದ.

ವಿಶ್ವದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿರುವ ಟೋಕಿಯೋದಲ್ಲಿ, ಸಸ್ಯಾಹಾರಿಗಳಿಗೆ ಸಮಸ್ಯೆ ಇರಲಾರದು ಎಂದು ನಾನೂ ಪ್ರವಾಸ ಮಾಡಲು ಒಪ್ಪಿದ್ದೆ.

ಜಪಾನ್ ತಲುಪಿದ ಮೊದಲ ದಿನವೇ “ಆರ್”ನ ಭವಿಷ್ಯ ನಿಜವಾಗವುದೇನೋ ಎಂಬ ಅನುಮಾನ ಕಾಡಿತ್ತು.ನಾನು ವಾಸವಾಗಿದ್ದ ಹೋಟಲ್ ನಲ್ಲಿರುವ ವಿವಿಧ ಉಪಹಾರ ಗೃಹಗಳಲ್ಲಿ ಸಸ್ಯಾಹಾರ ಲಭ್ಯವಿರಲಿಲ್ಲ.ಕೊನಗೆ ಸಮೀಪದಲ್ಲಿರುವ ಮ್ಯಾಕ್ ಡೋನಾಲ್ಡನಲ್ಲಿ ವೆಜ್ ಬರ್ಗರ್ ಗೆ ಶರಣಾಗಿದ್ದಾಯಿತು.

ಆದರೆ ಎಷ್ಟು ದಿನಗಳವರೆಗೂ ವೆಜ್ ಬರ್ಗರ್, ವೆಜೆ ತೆಂಪೂರಾ ( ಇದು ತರಕಾರಿ ಇರುವ ಪಕೋಡ ), ಹಣ್ಣು, ಹಾಲು ಎಂದು ಉಪಹಾರ,ಊಟ ಮಾಡುವುದು ಎಂಬ ಚಿಂತೆವಾರಂಭವಾದಾಗ, ನೆನಪಾಗಿದ್ದು ನನ್ನ ಜಪಾನ್ ಸಹೋದ್ಯೋಗಿಗಳಾದ ಕಾಟೋ ಮತ್ತು ರೆನ್.

ಕಚೇರಿಯಲ್ಲಿ ಎಲ್ಲರೊಡನೆ ಮಾತನಾಡುತ್ತಾ,ನಗುತ್ತಾ ಓಡಾಡಿಕೊಂಡಿರುವ ಕಾಟೋ,ಯಾವಾಗ ಕೆಲಸ ಮಾಡುತ್ತಾನೆ ಎಂಬ ಪ್ರಶ್ನೆಗೆ ನನಗೆ ಉತ್ತರ ಸಿಗಲಿಲ್ಲ. ಒಂದು ನಿಮಿಷವೂ ವ್ಯರ್ಥ ಮಾಡದೆ ಕೆಲಸ ಮಾಡುವ ರೆನ್ ಳ ಶಿಸ್ತು ಮತ್ತು ಸಮಯ ಪರಿಪಾಲನೆ ನನಗೆ ಮೆಚ್ಚುಗೆಯಾಗಿತ್ತು.ಇಬ್ಬರಿಗೂ ತಕ್ಕಮಟ್ಟಿಗೆ ಇಂಗ್ಲೀಷ್ ಭಾಷೆ ಬರುತ್ತಿದ್ದು ನನಗೂ ಅನುಕೂಲವಾಗಿತ್ತು.

ಒಂದು ದಿನ,ರೆನ್ ಮತ್ತು ಕಾಟೋ ಜೊತೆ ನನ್ನ ಆಹಾರದ ಸಮಸ್ಯೆ ಕುರಿತು ನೆಡೆದ ಸಂವಾದ ಹೀಗಿತ್ತು;

ರೆನ್ :ನೀನು ಸಸ್ಯಾಹಾರಿ ಆದರೆ ಮೀನು ಮತ್ತು ಕೊನೆಗೆ ಮೀನಿನ ಮೊಟ್ಟೆಗಳನ್ನು ಕೂಡಾ ತಿನ್ನುವುದಿಲ್ಲ.

ನಾನು : ಹೌದು.

ರೆನ್ : ಮೀನು ಇಲ್ಲದ ಅಡಿಗೆ ಸ್ಥಳೀಯರಿಗೆ ಇಷ್ಟವಾಗುವುದಿಲ್ಲ.ಆದ್ದರಿಂದ ಬಹುತೇಕ ಉಪಹಾರ ಗೃಹಗಳಲ್ಲಿ ಮೀನು ಅಥವಾ ಮೀನಿನ ಸಾಸ್ ಮೊದಲಾದ ಉತ್ಪನ್ನಗಳನ್ನು ಬಳಸುತ್ತಾರೆ.

ಕಾಟೋ : ಇರಲಿ,ಈಗ ನಿನಗೆ ಮೀನು ಇಲ್ಲದ ಸಸ್ಯಾಹಾರ ಬೇಕು.

ನಾನು : ಹೌದು

ಕಾಟೋ : ಮೀನು ಇಲ್ಲದಿದ್ದರೂ,ಮಾಂಸ ಖಂಡಿತ ಇರುತ್ತದೆ.ನಿನಗೆ ಒಪ್ಪಿಗೆಯೇ ?

ರೆನ್ : ಸಾಮಾನ್ಯವಾಗಿ ಮಾಂಸವನ್ನು ರುಬ್ಬಿ, ಪೇಸ್ಟಿನಂತೆ ಮಾಡಿ ಅಡಿಗೆಯಲ್ಲಿ ಬಳಸುತ್ತಾರೆ.ಅದಕ್ಕೆ ಕಾಟೋ ಹೀಗೆ ಕೇಳಿದ್ದು.

ನಾನು : ಕ್ಷಮಿಸಿ, ನಾನು ಸಸ್ಯಾಹಾರಿ.

ಕಾಟೋ :ಆಯಿತು,ನೀನೊಬ್ಬ ಮೀನು ತಿನ್ನದ,ಮಾಂಸ ತಿನ್ನದ ಸಸ್ಯಾಹಾರಿ.ಹೋಗಲಿ ಗೋಮಾಂಸ ಇದ್ದರೆ ನಿನಗೆ ಒಪ್ಪಿಗೆಯೇ?

ರೆನ್ : ಇಲ್ಲ. ಅವನು ಅದನ್ನು ತಿನ್ನುವುದಿಲ್ಲ. ಅಷ್ಟಕ್ಕೂ ನೀನು ಹೇಳಬಯಸುವುದಾದರೂ ಏನು ?

ಕಾಟೋ : ಮೀನು,ಮಾಂಸ,ಗೋಮಾಂಸ ಇಲ್ಲದ ಆಹಾರ ಬೇಕೆಂದರೆ ಇವನಿಗೆ ಸಿಗುವುದು ಖಾಲಿ ತಟ್ಟೆ,ಚಮಚಗಳು ಮಾತ್ರ.

: ಕೆಲವು ಬ್ರೆಡ್ ತಯಾರಿಸುವಾಗಲೂ ಮಾಂಸದ ಪೇಸ್ಟ್ ಬಳಸುತ್ತಾರೆ ಎಂದು ಇವನಿಗೆ ಗೊತ್ತಿರಲಿ. 🙂

ರೆನ್ : ಅನೇಕ ಉಪಹಾರ ಗೃಹಗಳಲ್ಲಿ ಗ್ರಾಹಕರು ಬಯಸಿದಂತೆ ಅಡಿಗೆಯಲ್ಲಿ ಬದಲಾವಣೆ ಮಾಡಲು ಬಾಣಸಿಗರು ಒಪ್ಪುವದಿಲ್ಲ.ಉದಾಹರಣೆಗೆ,
ಅಡಿಗೆಯಲ್ಲಿ ಕ್ಯಾರೆಟ್ ಬಳಸ ಬೇಡಿ ಎಂದು ನಾನು ಕೇಳಬಹುದು ಆದರೆ ನನಗಾಗಿ ಕ್ಯಾರೆಟ್ ಇಲ್ಲದ ಅಡಿಗೆ ಮಾಡಲು ಬಾಣಸಿಗರು ಒಪ್ಪುವುದಿಲ್ಲ.
ನಿನಗೆ ಇಷ್ಟವಿಲ್ಲದಿದ್ದರೆ, ನಾವು ಅಡಿಗೆಯಲ್ಲಿ ಬಳಸಿರುವ ಕ್ಯಾರೆಟ್ ತೆಗೆದಿರಿಸಿ ನೀನು ಊಟ ಮಾಡಬಹುದಲ್ಲವೆಂಬುದು ಅವರ ವಾದವಾಗಿರುತ್ತದೆ.

ಕಾಟೋ : ನೀನು ಶುದ್ಧ ಸಸ್ಯಾಹಾರ ಕೇಳಿದರೆ,ನಿನಗೆ ಸಿಗುವ ಉತ್ತರವೂ ಹೆಚ್ಚು ಕಡಿಮೆ ಹಾಗೆಯೇ ಇರುತ್ತದೆ.ಅಡಿಗೆಯಲ್ಲಿರುವ ಮೀನು ತೆಗೆದಿಟ್ಟರೆ ಆಯಿತು ನಿನಗೆ ಬೇಕಾದ ಆಹಾರ ದೊರೆಯುತ್ತದೆ ಮತ್ತು ಯಾರಿಗೂ ಸಮಸ್ಯೆ ಇಲ್ಲ.:)

ಈ ಸಂವಾದದ ನಂತರ,ನಾನು ಮತ್ತೆ ಬರ್ಗರ್ ಮತ್ತು ಬ್ರೆಡ್ ತಿನ್ನುವ ಧೈರ್ಯ ಮಾಡಲಿಲ್ಲ.ಏಕೋ “ಆರ್”ನ ಭವಿಷ್ಯವಾಣಿಯ ನೆನಪು ಹೆಚ್ಚಾಗ ತೊಡಗಿತು. ಒಂದು ದಿನ,ಟೋಕಿಯೋದ ಖ್ಯಾತ ಶಾಖಾಹಾರಿ ಉಪಹಾರ ಗೃಹವೊಂದಕ್ಕೆ ನಾವು ಮೂವರು ಹೋದೆವು.ಜಪಾನಿ ಭಾಷೆಯಲ್ಲಿ ರೆನ್ ವಿಚಾರಿಸಿದಾಗ, ಅಲ್ಲಿರುವ ಸಸ್ಯಾಹಾರಿ ತಿನಿಸುಗಳಲ್ಲಿ ಧಾರಾಳವಾಗಿ ಮೀನಿನ ಉತ್ಪನ್ನಗಳ ಬಳಕೆಯಾಗಿರುವುದು ತಿಳಿಯಿತು.:)

ಆ ಉಪಹಾರ ಗೃಹದ ಒಡತಿಗೆ ನನ್ನ ಮೇಲೆ ಕನಿಕರ ಬಂದಿರಬೇಕು, ಆದ್ದರಿಂದ ನನಗಾಗಿ ಶುದ್ಧ ಸಸ್ಯಾಹಾರವನ್ನು ಸ್ವತಃ ತಾನೇ ಸಿದ್ಧಪಡಿಸುವುದಾಗಿ ಹೇಳಿದಳು. ಸಹಾಯ ಮಾಡುವ ನೆಪದಲ್ಲಿ ರೆನ್ ಆಕೆಯೊಡನೆ ಹೊರಟಳು.ಆದರೆ,ರೆನ್ ಸಹಾಯ ಮಾಡುವ ನೆಪದಲ್ಲಿ,ಅವಳ ಅಡಿಗೆಯ ಮೇಲ್ಪಿಚಾರಣೆ ಮಾಡಲು ಹೋಗಿದ್ದಾಳೆ ಎಂಬ ಗುಮಾನಿ ಕಾಟೋವಿನದು.

ಅವರು ಬಿಸಿ ಅನ್ನ ಮತ್ತು ವಿಶೇಷವಾಗಿ ಮಾಡಿದ ಶುದ್ಧ ಸಸ್ಯಾಹಾರಿ ಸೂಪ್ ನ್ನು ನನ್ನ ಟೀಬಲ್ ತಂದಾಗ, ನನಗಾದ ಆಶ್ಚರ್ಯ ಮತ್ತು ಆನಂದ ಬಹಳ ಹೊತ್ತು ಇರಲಿಲ್ಲ. ಒಂದು ಎಲೆ ಪಾಲಕ್ ಸೊಪ್ಪು ಇದ್ದ ಬಿಸಿ ನೀರನ್ನು ಸೂಪ್,ರಸಂ,ಸಾರು – ಏನೆಂದು ಕಲ್ಪಿಸಿಕೊಂಡು ಊಟ ಮಾಡುವುದು ಎಂಬ ಪ್ರಶ್ನೆ ಕಾಡಿತ್ತು.

ಜಪಾನೀಯರಂತೆ ಚಾಪ್ ಸ್ಟಿಕ್ ಬಳಸಿ,ಒಂದು ಬಾರಿಗೆ ನಾಲ್ಕೈದು ಅಗಳು ಅನ್ನವನ್ನು ಹಿಡಿದು,ಈ ಸೂಪಿನಲ್ಲಿ,ಅಲ್ಲ ಸಾರು ಅಥವಾ ರಸಂನಲ್ಲಿ ಅದ್ದಿಕೊಂಡು, ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾ, ನಗುನಗುತ್ತಾ ಊಟ ಮಾಡಿದೆ. ಉಪಹಾರ ಗೃಹದ ಒಡತಿ,ರೆನ್ ಮತ್ತು ಕಾಟೋ ವಿಜಯದ ನಗೆ ಬೀರಿದರು.

ಪ್ರತಿದಿನ ಹಣ್ನು,ಹಾಲು,ಅನ್ನ ಮತ್ತು ಈ ವಿಶೇಷ ಸೂಪ್ ಸೇವಿಸಿದ್ದರಿಂದಲೋ ಏನೋ,ಮತ್ತೆ ಭಾರತಕ್ಕೆ ಹಿಂತಿರುಗಿದಾಗ 6 ಕೇಜಿ ತೂಕ ಕಡಿಮೆಯಾಗಿತ್ತು. ಅದಿರಲಿ, “ಆರ್” ನ ಭವಿಷ್ಯವಾಣಿ ನಿಜವಾಗದಿರುವ ಸಂತೋಷ ಹೆಚ್ಚಾಗಿತ್ತು 🙂

‍ಲೇಖಕರು avadhi

July 31, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. Manjunatha HT

    ಚೆನ್ನಾಗಿದೆ ಪುರಾಣಿಕರೆ, ಜಪಾನಿನ ಸಸ್ಯಾಹಾರದ ಪ್ರಹಸನ! ಅ೦ತೂ ೬ ಕೆಜಿ ತೂಕ ಇಳಿಯಿತಲ್ಲ, ಒಳ್ಳೆಯದೆ ಆಯಿತು ಬಿಡಿ!! 🙂

    ಪ್ರತಿಕ್ರಿಯೆ
  2. ಹಾಲ್ದೊಡ್ಡೇರಿ ಸುಧೀಂದ್ರ

    ಇಂಗ್ಲಿಷ್ ಮಾತನಾಡದ ದೇಶಗಳಲ್ಲಿ ನಮ್ಮ ಅಪ್ಪಟ ಸಸ್ಯಾಹಾರ ಪದ್ಧತಿಯನ್ನು ವಿವರಿಸುವುದೇ ಒಂದು ದೊಡ್ಡ ಸಮಸ್ಯೆ. ಬ್ರೆಝಿಲ್ ದೇಶದಲ್ಲಾದ ಕಟು ಅನುಭವದ ನಂತರ ಕಳೆದ ವರ್ಷ ರಶಿಯಾಗೆ ಹೋದಾಗ ತರಕಾರಿ ಹಣ್ಣುಗಳ ಚಿತ್ರವಿರುವ ಬಣ್ಣದ ಒಂದು ಚಾರ್ಟ್ ಸದಾ ಕೈಯ್ಯಲ್ಲಿಟ್ಟುಕೊಂಡಿದ್ದೆ – ಇವಿಷ್ಟು ಮಾತ್ರ ನಾನು ತಿನ್ನುವ ಪದಾರ್ಥಗಳೆಂದು ತೋರಿಸಲು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: