ಜಯಂತ ಕಾಯ್ಕಿಣಿ ಬಗ್ಗೆ ಉಮಾರಾವ್ ಬರೆದದ್ದು

ಉಮಾರಾವ್

ಅವರ ಬ್ಲಾಗಿನ ಮೊದಲ ಬರಹ ಇಲ್ಲಿದೆ..


’ಕಾವ್ಯ ಸಮಾಜದ ಕಾರ್ಡಿಯೋಗ್ರಾಂ’


ಜಯಂತ ಕಾಯ್ಕಿಣಿಯವರೊಂದಿಗೆ ಒಂದಷ್ಟು ಮಾತುಕತೆ

ಜಯಂತ ಕಾಯ್ಕಿಣಿಯವರ ಬಗ್ಗೆ ಒಂದೇ ಸಾಲಿನಲ್ಲಿ ಹೇಳಬೇಕಾದರೆ, ೧೯೭೪ರಲ್ಲಿ ಬಂದ ಅವರ ಮೊದಲ ಕವನ ಸಂಕಲನ “ರಂಗದೊಂದಿಷ್ಟು ದೂರ”ಕ್ಕೆ, ಮುನ್ನುಡಿ ಬರೆಯುತ್ತಾ ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ನೆನಪಾಗುತ್ತದೆ. “ಬಹುಶಃ ಕನ್ನಡ ಸಾಹಿತ್ಯಕ್ಕೆ ಗೌರೀಶ ಕಾಯ್ಕಿಣಿಯವರ ಅತ್ಯಂತ ಮಹತ್ವದ ಕೊಡುಗೆಯೆಂದರೆ ಜಯಂತ.”
೧೯೫೫ರ ಜನವರಿ ೨೪ರಂದು ಗೋಕರ್ಣದಲ್ಲಿ ಹುಟ್ಟಿದ ಜಯಂತರು ಗೌರೀಶ ಕಾಯ್ಕಿಣಿ ಹಾಗೂ ಶಾಂತಾ ಅವರ ಒಬ್ಬನೇ ಮಗ. ತಮ್ಮ ವಿದ್ಯಾಭ್ಯಾಸವನ್ನು ಕುಮಟಾ ಹಾಗೂ ಧಾರವಾಡಗಳಲ್ಲಿ ಮುಗಿಸಿ, ೧೯೭೭ರಿಂದ ಮುಂಬೈಯ ಒಂದು ಫಾರ್ಮಸೆಟಿಕಲ್ ಕಂಪನಿಯಲ್ಲಿ ಬಯೋಕೆಮಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಬರೆಯಲು ಪ್ರಾರಂಭ ಮಾಡಿದ ಇವರು ಈವರೆಗೆ ೩ ಕವನ ಸಂಕಲನಗಳು, ೩ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ೪ನೆಯ ಕಥಾ ಸಂಕಲನ ಅಚ್ಚಿನಲ್ಲಿದೆ. ಇವರು “ಯಾವ ನದಿ ಯಾವ ಪಾತ್ರ” ಎಂಬ ದೃಶ್ಯರೂಪಕವನ್ನೂ, ಇತ್ತೀಚೆಗೆ ಎಲ್ಲರ ಗಮನ ಸೆಳೆದು ಜನಪ್ರಿಯವಾದ “ಪಿಗ್ಮೇಲಿಯನ್”ನ ರೂಪಾಂತರ “ಹೂ ಹುಡುಗಿ”ಯನ್ನೂ ಬರೆದಿದ್ದಾರೆ. “ರಂಗದೊಂದಿಷ್ಟು ದೂರ”, “ತೆರೆದಷ್ಟೇ ಬಾಗಿಲು” ಮತ್ತು “ದಗಡೂ ಪರಬನ ಅಶ್ವಮೇಧ”ಕ್ಕಾಗಿ ಅಕೆಡಮಿ ಪ್ರಶಸ್ತಿಗಳು ಸಿಕ್ಕಿವೆ. “ನಗರ ಪ್ರಜ್ಞೆಯ ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣ ಅಭಿವ್ಯಕ್ತಿ” ಕಾಣಬರುವ ಇವರ ಪ್ರತಿ ಕೃತಿಯಲ್ಲೂ ಅನನ್ಯ “ಜಯಂತತೆ” ಇದೆ. ಈಗ ಇವರು ಪತ್ನಿ ಸ್ಮಿತಾ ಮತ್ತು ಮಕ್ಕಳು- ೮ ವರ್ಷದ ಸೃಜನಾ ಹಾಗೂ ಎರಡೂವರೆ ವರ್ಷದ ರಿತ್‌ವಿಕ್‌ನೊಂದಿಗೆ ಮುಲುಂಡಿನಲ್ಲಿ ವಾಸಿಸುತ್ತಾರೆ.
ನಾನು ಅವರ ಮನೆಗೆ ಹೋದ ದಿನ ಮುಂಬೈ ತುಂಬಾ ಗಣಪತಿ ವಿಸರ್ಜನೆಯ ಸಂಭ್ರಮ. ಮೂರನೆಯ ಮಹಡಿಯಲ್ಲಿರುವ ಅವರ ಮನೆ ತಲುಪಿ ಬೆಲ್ ಮಾಡಿದಾಗ ಜಯಂತರೇ ಬಾಗಿಲು ತೆಗೆದರು. ಆಗ ತಾನೇ ತಿಂಡಿ, ಸ್ನಾನ ಮುಗಿಸಿದ್ದ ಜಯಂತ್ ಬಿಳಿ ಪೈಜಾಮಾ-ಕುರ್ತಾದಲ್ಲಿ ಫ್ರೆಶ್ ಆಗಿ ಕಾಣುತ್ತಿದ್ದರು. ಎಂದಿನ ನಗುಮುಖದಿಂದ ಸ್ವಾಗತಿಸಿ, ಪುಟ್ಟ ರಿತ್‌ವಿಕ್‌ನ ಕಪ್ಪು ಕನ್ನಡಕ ಹಾಕಿಕೊಂಡು ಅವನೊಡನೆ ಆಡವಾಡುತ್ತಲೇ, ಸಲುಗೆಯಿಂದ ನನ್ನೊಡನೆ ಹರಟಿದರು. ಸೃಜನಾ ಅಲ್ಲೇ ಕೂತು ಹೂವಿನ ಚಿತ್ರ ಬಿಡಿಸುತ್ತಿದ್ದಳು.
* ನೀವು ದಿನ ಹೇಗೆ ಪ್ರಾರಂಭಿಸುತ್ತೀರಿ?
– ನಾನು ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ನನ್ನ ಹಗಲು ರಾತ್ರಿಗಳಲ್ಲಿ ಯಾವುದು ಎಲ್ಲಿ ಮುಗಿಯಿತು, ನನ್ನ ರಾತ್ರಿ ಯಾವುದು, ಹಗಲು ಯಾವುದು ನನಗೇ ಖಚಿತವಾಗಿಲ್ಲ.
* ಅಂದರೆ ಮುಂಬೈ ಬಿಟ್ಟು ನೀವು ಬೇರೆ ಇನ್ನೇಲ್ಲಾದರೂ ಇದ್ದಿದ್ದರೆ, ಇನ್ನೂ ಹೆಚ್ಚು, ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಅನ್ನಿಸುತ್ತದೆಯೇ?
– ಇಲ್ಲ. ಮುಂಬೈ ಬದುಕು ಯಾಂತ್ರಿಕ ಅನ್ನುವುದು ಮಹಾ ಮಿತ್. ಎಂಥಾ ದೈನಿಕವನ್ನೂ ಯಾಂತ್ರಿಕಗೊಳಿಸಿಬಿಡುವುದು ನಮ್ಮ ಚೇತನಕ್ಕೆ ಸಂಬಂಧಪಟ್ಟ ವಿಷಯ. ಇನ್ ಫ್ಯಾಕ್ಟ್ ಮುಂಬೈ ಒಂದು ಮಹಾ ಬಿಡುಗಡೆಗೊಳಿಸುವ ಯೋಗ ಶಹರ. ಮುಂಬೈ ನನ್ನ ಗೆಳೆಯನಿದ್ದ ಹಾಗೆ.
* ನೀವು ಚಿಕ್ಕವಯಸ್ಸಿನಿಂದ ಬರೆಯುತ್ತಿದ್ದೀರಿ. ನಿಮ್ಮ ಬದುಕಿನಲ್ಲಿ ನಿಮ್ಮ ಮೇಲೆ ತುಂಬಾ ಪ್ರಭಾವ ಬೀರಿದವರು ಯಾರು?
_ ನನ್ನ ಬದುಕಿನಲ್ಲಿ ಬಂದ ಎಲ್ಲಾ ವ್ಯಕ್ತಿಗಳು.
* ಅದು ಸರಿ. ಆದರೆ ಸ್ಪೆಸಿಫಿಕ್ ಆಗಿ ಯಾರಾದರೂ ಇದ್ದಾರೇನು?
_ ಬಹುಶಃ ನನ್ನ ತಂದೆ ಅಥವಾ ಗೆಳೆಯ ಗೌರೀಶರು. ನನ್ನ ಕಣ್ಣು ತೆರೆದದ್ದೇ ಅವರ ಸತ್ಸಂಗದಲ್ಲಿ.

* ನಿಮ್ಮ ತಾಯಿ?
_ ನನಗೂ, ನನ್ನ ತಂದೆಗೂ ಒಂದು ವ್ಯಾವಹಾರಿಕ ಸ್ಥಿರತೆ ಕೊಟ್ಟವರು ನನ್ನ ತಾಯಿ ಶಾಂತಾ.
* ನಿಮ್ಮ ಬರವಣಿಗೆಯಲ್ಲಿ?
_ ನಾನು ಅಂಥಾ ಓದುಗನೇನಲ್ಲ. ನಮ್ಮ ತಂದೆ ತುಂಬಾ ಓದ್ತಿದ್ದರು. ಮನೆಯಲ್ಲಿ ಸಾಕಷ್ಟು ಪುಸ್ತಕ ಇರ್‍ತಿತ್ತು. ಬೇಂದ್ರೆಯವರಂತೂ ನಮ್ಮ ಮನೆ ದೇವರಂತೆ ಆಗಿಬಿಟ್ಟಿದ್ದರು. ಆದರೆ ನಾನು ಅಷ್ಟಾಗಿ ಪುಸ್ತಕಗಳ ಗೊಡವೆಗೆ ಹೋಗಿರಲಿಲ್ಲ. ನಾನು ಇಂಟರ್‌ನಲ್ಲಿದ್ದಾಗ ನನಗೆ ಪ್ಯಾರಾ ಟೈಫಾಯ್ಡ್ ಆಯ್ತು. ಆಗ ೩ ವಾರ ಹಾಸಿಗೆಯಲ್ಲಿದ್ದಾಗ, ಆಗ ಬರುತ್ತಿದ್ದ ಪತ್ರಿಕೆಗಳಲ್ಲಿ ಅಷ್ಟು ಕತೆ, ಕವಿತೆ ಓದಿದೆ. ನನಗೆ ಕವಿತೆಯ ರುಚಿ ಹುಟ್ಟಿಸಿದವರು ರಾಮಾನುಜನ್, ಗಂಗಾಧರ ಚಿತ್ತಾಲ ಮತ್ತು ತಿರುಮಲೇಶ್. ಹಾಗೆ ನೋಡಿದರೆ, ಚಂದಮಾಮ, ಅರೇಬಿಯನ್ ನೈಟ್ಸ್‌ನಿಂದ ಹಿಡಿದು ಎನ್.ನರಸಿಂಹಯ್ಯನವರ ಕಾದಂಬರಿಗಳ ತನಕ ನಮ್ಮ ಸಂವೇದನೆಯನ್ನು ರೂಪಿಸಿದ ಪುಸ್ತಕಗಳನ್ನು, ನಮ್ಮ ಶಾಲೆಯ ಮೇಷ್ಟ್ರುಗಳನ್ನು ಮರೆತಷ್ಟೇ ಸುಲಭವಾಗಿ ಮರೆತುಬಿಡುತ್ತೇವೆ.
* ನೀವು ಕತೆ, ಕವಿತೆ, ನಾಟಕ, ಸ್ಕ್ರೀನ್ ಪ್ಲೇ ಎಲ್ಲಾ ಬರೀತೀರಿ. ನಿಮಗೆ ತುಂಬಾ ಪ್ರಿಯವಾದದ್ದು ಯಾವುದು?
_ ಕವಿತೆ.
* ಏಕೆ?
_ ಅರ್ಧಗಂಟೇಲಿ ಬರೆದು ಮುಗಿದಿರುತ್ತೆ.
* ನೀವು ಬರೆಯುವಾಗ ಮೂಡಿಗಾಗಿ ಕಾಯುತ್ತೀರೇನು?
_ ಈ ಮೂಡುಗೀಡು ಎಲ್ಲಾ ಕೆಲವು ಸಾಹಿತಿಗಳೆಂಬ ಉಪಜೀವಿಗಳು ನಿರ್ಮಿಸಿಕೊಂಡ ಸುಳ್ಳುಪದಗಳು. ಅದರಲ್ಲಿ ನನಗೆ ನಂಬಿಕೆ ಇಲ್ಲ. ಬರೀಬೇಕೆಂದಾಗ ಕೂತು ಬರೀತೀನಿ.
* ನೀವು ಕವಿತೆಗೆ ಹೇಗೆ ಕಾಯುತ್ತೀರಿ?
_ ನಾನು ಕವಿತೆಗೆ ಕಾಯುವುದಿಲ್ಲ. ಬಹುಶಃ ನನ್ನ ಕವಿತೆಗಳು ನನಗಾಗಿ ಸಾಲುಗಟ್ಟಿ ಕಾಯುತ್ತವೆ.
* ನಿಮಗೆ ಅತ್ಯಂತ ತೃಪ್ತಿಕೊಟ್ಟ ನಿಮ್ಮ ಕತೆ, ಕವಿತೆ ಯಾವುದು?
_ ಹೇಳುವುದು ಕಷ್ಟ. ಪ್ರಯಾಣವೇ ಖುಷಿಯದಾದ್ದರಿಂದ ಯಾವ ಸೀಟು, ಯಾವ ಬಸ್ಸು, ಯಾವ ಟ್ರಾವೆಲ್ಸ್ ಏಕೆ ಬೇಕು?
* ಒಳ್ಳೆಯ ಕಾವ್ಯ ಅಂದರೇನು?
_ ಕಾವ್ಯ ಸಮಾಜದ ಹೃದಯಕ್ಕೆ ದಿಕ್ಸೂಚಿ, ಲಿಖಿತ ಕಾವ್ಯ ಸಮಾಜದ ಕಾರ್ಡಿಯೋಗ್ರಾಂ ಇದ್ದ ಹಾಗೆ. ಕಾವ್ಯದಲ್ಲಿ ಸಮಾಜ ತರುವುದು ಸುಲಭ. ಆದರೆ ಸಮಾಜದೊಳಗಿನ ಕಾವ್ಯವನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ ಮತ್ತು ಕಷ್ಟ.
* ಕಾವ್ಯದ ಕ್ವಾಲಿಟಿ ಹೇಗೆ ಇಂಪ್ರೂ ಮಾಡಬಹುದು?
_ ಒಳ್ಳೆ ಕಾವ್ಯ ರೇಡಿಯೋವೇವ್ಸ್ ಥರಾ ನಮ್ಮೆಲ್ಲರ ಮೂಲಕ ಹಾಯುತ್ತಲೇ ಇರುತ್ತದೆ. ಸಂಪನ್ನ ಮನಸ್ಸು, ವಿಶಾಲ ಹೃದಯ ಸಿಕ್ಕರೆ ಸಾಕು. ಕಾವ್ಯ ಲ್ಯಾಂಡ್ ಮಾಡಲು ಜಾಗ ಸಿಕ್ಕಂತೆ. ಒಬ್ಬ ವ್ಯಕ್ತಿ ಒಳ್ಳೆಯ ಜೀವಿಯಾಗಿದ್ದಾಗಲೇ ಒಳ್ಳೆಯ ಕಾವ್ಯ ಬರೆಯಬಲ್ಲ. ಸಾಹಿತ್ಯ- ಚರಿತ್ರೆ ಇಂಥಾದ್ದೆಲ್ಲಾ ರೋಲ್-ಪ್ಲೇಯಿಂಗ್‌ಗೆ ತೊಡಗಿದರೆ ಕಾವ್ಯ ಅವನ ಸಮೀಪ ಸುಳಿಯಲೂ ಹೆದರುತ್ತದೆ. ಅವನ ಕೃತಿಗೆ ಶರೀರ ಬೆಳೆಯಬಹುದೇ ಹೊರತು ಶಾರೀರ ಅಲ್ಲ.
* ಬದುಕಿನಲ್ಲಿ ಸಾಹಿತ್ಯದ ಸ್ಥಾನ ಏನು?
_ ಸಾಹಿತ್ಯದಲ್ಲಿ ಬದುಕಿನ ಸ್ಥಾನ ಏನು ಎನ್ನುವ ಗೊಡ್ಡು ಪ್ರಶ್ನೆಗಿಂತ ಇದು ಚೆನ್ನಾಗಿದೆ.
* ಇದಕ್ಕುತ್ತರ?
_ ಬಲ್ಲವರನ್ನು ಕೇಳಿ.
* ನೀವು ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಖ್ಯಾತಿ ಗಳಿಸಿದಿರಿ. ಅದರ ಫ್ಲಸ್ ಪಾಯಿಂಟ್ಸ್ ಏನು? ಮೈನಸ್ ಪಾಯಿಂಟ್ಸ್ ಏನು?
_ ಫೇಮ್ ಅನ್ನೋದು ದೊಡ್ಡ ಮಾಯಾಂಗನೆಯ ಸಹವಾಸ ಅನ್ನೋ ಭ್ರಮೆ ಬೇಗನೆ ಹೋಗಿರೋದರಿಂದ, ಫೇಮ್‌ನಲ್ಲಿ ಏನೂ ಇಲ್ಲಾಂತ ತಿಳಿದಿರೋದರಿಂದ ಎದೆ ಮೇಲೆ ಭಾರ ಇಲ್ಲ. ನಿರಾಳವಾಗಿರಬಹುದು. ಮೈನಸ್ ಪಾಯಿಂಟ್ಸ್- ನನ್ನ ಪರಿಚಯ ಇಲ್ಲದವರೆಲ್ಲಾ ನಾನು ಇನ್‌ಆಕ್ಸಿಸಿಬಲ್ ಜಂಬದವನು ಅಂದ್ಕೋತಾರೆ. ಸಮೀಪ ಹೋದರೆ ದೂರ ಓಡಿಹೋಗ್ತಾರೆ.
* ಈಗಿನ ಸಾಹಿತ್ಯ ಸಂದರ್ಭದಲ್ಲಿ ವಿಮರ್ಶೆಯ ಪಾತ್ರ…
_ ಈ ಸಾಹಿತ್ಯ ಪಾಹಿತ್ಯ ಎಲ್ಲಾ ಬೇಡ ಮೇಡಂ. ಪ್ರೇಮ, ಊಟ, ಆಟ… ಮಾಡಬೇಕು. ಅದರ ಬಗ್ಗೆ ಮಾತಾಡೋದೇನು? ಹಾಗೇ ಸಾಹಿತ್ಯವನ್ನೂ ಓದಬೇಕು, ಇಲ್ಲ ಬರೀಬೇಕು. ಅದರ ಬಗ್ಗೆ ಮಾತಾಡಬಾರದು.
* ಆವಾರ್ಡ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
_ ಆಸ್ ಲಾಂಗ್ ಆಸ್ ದ ವಿನ್ನರ್ ಡಸ್ ನಾಟ್ ಟೇಕ್ ಇಟ್ ಸೀರಿಯಸ್ಲಿ, ಅದರಲ್ಲೇನೂ ತೊಂದರೆ ಇಲ್ಲ. ಅದೊಂದು ಲಾಟರಿ ಇದ್ದಂತೆ. ಆದರೆ ಒಂದು ಅನಾಹುತ ಇದೆ. ಉಳಿದವರು ಸಾಹಿತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಪಾಯ ಇದೆ. ಒಬ್ಬ ಒಳ್ಳೆಯ ದಾದಿ, ಒಳ್ಳೆಯ ಡಾಕ್ಟರ್, ಒಳ್ಳೆಯ ಕಂಡಕ್ಟರ್, ಒಳ್ಳೆಯ ತೋಟಗಾರ- ಇವರೆಲ್ಲರಿಗಿಂತ ಸಾಹಿತಿ ಏನೂ ಮಿಗಿಲಲ್ಲ. ಇನ್ ಫ್ಯಾಕ್ಟ್ ೪-೫ ಪುಸ್ತಕ ಬರೆದ ವ್ಯಕ್ತಿಗಳಿಗಿಂತ, ೪-೫ ಬೆಕ್ಕು, ನಾಯಿ ಸಾಕಿಕೊಂಡು, ಮರ ಗಿಡ ಬೆಳೆಸಿಕೊಂಡಿರುವವರು ಹೆಚ್ಚು ಮಾನವೀಯರಾಗಿರುತ್ತಾರೆ. ಆದರೆ ಅದನ್ನು ಕುರಿತು ಯಾರೂ ಮಾತಾಡುವುದೇ ಇಲ್ಲ. ಅಂಥವರ ಮೌನ ಸಾಹಿತ್ಯಕ್ಕೆ ಬರುವಂತಾಗಬೇಕು.
* ಯೂ ಡೋಂಟ್ ಟೇಕ್ ಯುವರ್ ರೈಟಿಂಗ್ ಪ್ರೋsಸೆಸ್ ಸೀರಿಯಸ್ಲಿ. ನಿಮ್ಮದು ಅವಸರದ ಬರವಣಿಗೆ ಎನ್ನೋದು ನಿಮ್ಮನ್ನು ಸಮೀಪದಿಂದ ಬಲ್ಲವರಿಗೆಲ್ಲಾ ಗೊತ್ತಿದೆ. ಇದಕ್ಕೇನನ್ನುತ್ತೀರಿ?
_ ನಾನು ಏಳನೇ ತಿಂಗಳಲ್ಲಿ ಹುಟ್ಟಿದವನು ಮೇಡಂ. ನೋಡಿ ಪ್ರತಿಭೆ ಮತ್ತು ಶ್ರದ್ಧೆ ಇದ್ದರೆ ಸಾಲದು. ಇದರ ಜೊತೆಗೆ ಎಚ್ಚರ, ಶ್ರಮ, ಕಾರಕೂನಿ, ಮಹತ್ವಾಕಾಂಕ್ಷೆ ಎಲ್ಲ ಬೇಕು. ಇವು ನನ್ನಲಿಲ್ಲ. ಇದೆಲ್ಲ ಇದ್ದಿದ್ದರೆ, ಕೊಪ್ಪೋಲನ ಅಪ್ಪನಂಥಾ ಸಿನಿಮಾ ಮಾಡ್ತಿದ್ದೆ. ಇದು ಎಲ್ಲಿ ಸಿಗುತ್ತದೆಯೋ ಹೇಳಿ, ಕಂತಿನಲ್ಲಾದರೂ ಕೊಳ್ಳುವೆ.
* ನೀವು ಪ್ರೊಲಿಫಿಕ್ ಅಲ್ಲ. ಕೇಳಿದರೆ ಕೆಲಸ, ಸಂಸಾರ ಎನ್ನುತ್ತೀರಾ…
_ ಈ ಕುರಿತು ಖಂಡಿತ ಬೇಸರ ಇಲ್ಲ. ಉಲ್ಟಾ ಐ ಫೀಲ್ ಗುಡ್. ಅನ್‌ರಿಟನ್ ಥಿಂಗ್ಸ್ ಆರ್ ನಾಟ್ ವೇಸ್ಟೆಡ್ ಇನಸ್ಟಡ್, ಪರ್‌ಹ್ಯಾಪ್ಸ್ ದೇ ಎನ್‌ರಿಚ್ ಫ್ಯೂಚರ್ ರೈಟಿಂಗ್. ಜಾಣಮಾತಿನಲ್ಲಿ ಹೇಳುವುದಾದರೆ, ಬರೆಯುವವನಾಗಿ ಬದುಕುವುದಕ್ಕಿಂತ, ಬದುಕುವವನಾಗಿ ಬರೆಯುವುದು ಒಳ್ಳೇದಲ್ವಾ?
* ಪ್ರತಿ ಲೇಖಕರರೂ ತಮ್ಮ ಮ್ಯಾಗ್ನಮ್‌ಓಪಸ್ ಬಗ್ಗೆ ಕನಸು ಕಾಣುತ್ತಲೇ ಇರುತ್ತಾರೆ. ನಿಮಗೇನಾದರೂ ಹೀಗೆ ಇದೆಯೇ?
_ ಪ್ರತಿಸಲ ಬರೆದಾಗಲೂ ಥ್ಯಾಂಕ್ ಗಾಡ್, ಮೈ ಬೆಸ್ಟ್ ಈಸ್ ಯೆಟ್ ಟು ಕಮ್ ಎನ್ನುವ ನಿರಂತರದ ನಿರಂಬಳತೆ ಇರುತ್ತದೆ. ನನ್ನ ಬರಹ ಕುರಿತಾದ ಅತೃಪ್ತಿಯನ್ನು ಬಹುಶಃ ನಾನು ಈ ರೀತಿ ನೀಗಿಕೊಳ್ಳುತ್ತೇನೆ.
* ನೀವು ವಿಶೇಷಾಂಕಗಳಿಗೆ, ಯಾರಾದರೂ ಕೇಳಿದಾಗಷ್ಟೇ ಬರೀತೀರಿ. ಏಕೆ?
_ ನನ್ನ ಫಸ್ಟ್ ಲವ್ ಪೊಯೆಟ್ರಿ ನನ್ನ ಕವಿತೆಗಳನ್ನು ನನಗೆ ಬೇಕೆಂದಾಗ ಬರೀತೀನಿ. ಕವಿತೆ ಬರೆಯುವುದು ಪ್ರೇಮದ ಹಾಗೆ. ಕತೆ ಸ್ವಲ್ಪ ಮದುವೆ ಥರಾ. ಅದರಲ್ಲಿ ನಿರ್ವಹಣೆ, ವೇಳೆ, ಸಂಬಂಧಿಕರ ಒತ್ತಾಯ ಎಲ್ಲಾ ಬೇಕು.
* ಎಪ್ಪತ್ತರಲ್ಲಿ ನಿಮ್ಮ ಮೊದಲ ಕೃತಿ “ರಂಗದೊಂದಿಷ್ಟು ದೂರ”ಕ್ಕೆ ಅಕಾಡಮಿ ಆವಾರ್ಡ್ ಬಂದಾಗ, ನೀವು ಉದಯೋನ್ಮುಖರಾಗಿದ್ದಿರಿ. ಎಂಭತ್ತರಲ್ಲಿ ನಿಮ್ಮ ಕಥಾ ಸಂಕಲನ “ತೆರೆದಷ್ಟೇ ಬಾಗಿಲಿ”ಗೆ ಆವಾರ್ಡ್ ಬಂದಾಗ, ಆಗಿನ ಹೊಸ ಪೀಳಿಗೆಯ ಬರಹಗಾರರೊಂದಿಗೆ ನಿಮ್ಮ ಹೆಸರು ಕೇಳಿ ಬಂತು. ಈಗ ತೊಂಭತ್ತರಲ್ಲಿ ನಿಮ್ಮ “ದಗಡೂ ಪರಬ” ನಂತರ ಇಂದಿನ ತರುಣ ಪೀಳಿಗೆಯೊಂದಿಗೆ ನಿಮ್ಮ ಹೆಸರು ಕೇಳಿಬರುತ್ತಿದೆ. ಇದಕ್ಕೇನನ್ನುತ್ತೀರಿ?
_ ಹುಬ್ಬಳ್ಳಿ, ಧಾರವಾಡದ ಕಡೆಯಲ್ಲಿ ಕಾಯಕಲ್ಪ ಡಿಸ್ಪೆನ್ಸರಿ, ನವಜೀವನ ಡಿಸ್ಪೆನ್ಸರಿ ಅಂತ ನಿರಂತರ ತಾರುಣ್ಯಕ್ಕೆ ಔಷಧಿ ಕೊಡುವ ಡಾಕ್ಟರುಗಳಿದ್ದಾರೆ. ಅಂಥದ್ದೇನಾದರೂ ನನ್ನ ಬರವಣಿಗೆ ತೆಗೆದುಕೊಂಡಿದೆಯೋ ಯಾರಿಗೆ ಗೊತ್ತು.
* ನಿಮ್ಮ ಕತೆಯಲ್ಲಿ ಬರುವ, ವಿಶೇಷವಾಗಿ ಲೋವರ್ ಮಿಡ್ಲ್ ಕ್ಲಾಸ್ ಬದುಕಿನ ವಿವರಣೆ ಎಷ್ಟು ಸಹಜವಾಗಿರುತ್ತದೆ ಎಂದರೆ, ಇದನ್ನು ಹೇಗೆ ಸಾಧಿಸುತ್ತೀರಿ ಎಂದು ಅಚ್ಚರಿ ಪಡುವವರಿದ್ದಾರೆ. ಇದರ ಗುಟ್ಟೇನು?
_ ನನ್ನ ಸೌಂದರ್ಯದ ಗುಟ್ಟು ಲಕ್ಸ್ ಸುಪ್ರೀಮ್” ಎಂದು ರವೀನಾ ಟ್ಯಾಂಡೆನ್ ಹೇಳುವ ರೀತಿಯಲ್ಲಿ ಖಂಡಿತ ಹೇಳೋಕಾಗೋಲ್ಲ.
* ಈಗ ಸುತ್ತಮುತ್ತ ಇಷ್ಟೊಂದು ಕ್ರೌರ್ಯ, ಹಿಂಸೆ ಇದೆ. ದಿನೇದಿನೇ ಬರ್ಬರವಾಗುತ್ತಿರುವ ಈ ಸಮಾಜದಲ್ಲಿ ಬರವಣಿಗೆಯಿಂದ ಏನು ಮಾಡಬಹುದು?
_ ಬರವಣಿಗೆ ಮಾತ್ರ ಅಲ್ಲ, ಯಾವುದೇ ಆಸಕ್ತಿಗಳಿಂದ ನನ್ನ ಅಹಂಕಾರವನ್ನು ಕಳೆದುಕೊಂಡು ನನ್ನ ಸೇನಿಟಿ ಕಾಪಾಡಿಕೊಳ್ಳುವುದು ಮತ್ತು ನನ್ನ ಆರೋಗ್ಯವನ್ನು ನನಗೆ ನಿಲುಕಬಹುದಾದಷ್ಟು ಜೀವಿಗಳು, ಮಕ್ಕಳೊಂದಿಗೆ ಹಂಚಿಕೊಳ್ಳುವುದು. ಮಮತೆಯ ವಲಯವನ್ನು ವಿಸ್ತರಿಸುವುದು.
* ನಿಮ್ಮ ಬದುಕಿನ ಆಂಬಿಷನ್ ಏನು?
_ ಅಯ್ಯಯ್ಯೋ! ಎರಡು ಹೊತ್ತು ಮೀನಿನೂಟ ಗ್ಯಾರಂಟಿ ಇದ್ರೆ ಗೋಕರ್ಣಕ್ಕೆ ಹೋಗಿ ಹಾಯಂತ ಇದ್ದುಬಿಡ್ತೀನಿ.
* ಕನ್ನಡನಾಡಿನಿಂದ ದೂರವಿದ್ದೀರಿ. ನಿಮ್ಮ ಮನೆಮಾತು ಕೊಂಕಣಿ. ಇದೆಲ್ಲಾ ಯಾವ ರೀತಿ ನಿಮ್ಮ ಕನ್ನಡದ ಬರವಣಿಗೆಯನ್ನು ಅಫೆಕ್ಟ್ ಮಾಡುತ್ತದೆ?
_ ಗೋಕರ್ಣದ ನನ್ನ ಬಾಲ್ಯದ ದಿನಗಳಲ್ಲಿ ದೇವಸ್ಥಾನಗಳೇ ನಮ್ಮ ಆಟದ ಬಯಲುಗಳಾಗಿದ್ದವು. ಕಂಬಗಳ ಹಿಂದೆ, ಲಿಂಗಗಳ ಹಿಂದೆ ನಾವು ಆಡುತ್ತಿದ್ದೆವು. ಅಲ್ಲಿ ಒಬ್ಬ ಮೌನಿ ಸಾಧು ಇದ್ದ. ಅವನು ಯಾರೊಡನೆಯೂ ಮಾತಾಡುತ್ತಿರಲಿಲ್ಲ. ಆದರೆ, ಒಂದು ದಿನ ದೇವಸ್ಥಾನದ ಹಿಂಭಾಗದಲ್ಲಿ ಅವನು ಮಲಗಿದ್ದಾಗ ನಾವು ಕದ್ದು ನೋಡುತ್ತಿದ್ದೆವು. ಅವನು ನಿದ್ರೆಯಲ್ಲಿ ಸಿಕ್ಕಾಪಟ್ಟೆ ಬಡಬಡಿಸುತ್ತಿದ್ದ. ಅದೇನೆಂದು ಒಂದು ಚೂರೂ ತಿಳಿಯಲಿಲ್ಲ. “ಅದು ದೇವಭಾಷೆ. ಅವನು ದೇವರೊಡನೆ ಮಾತನಾಡುತ್ತಿದ್ದಾನೆ” ಎಂದು ನನ್ನ ಗೆಳೆಯ ಹೇಳಿದ್ದ.
* ನೀವು ಬಯೋಕೆಮಿಸ್ಟ್ ಆಗಿರದಿದ್ದರೆ, ಏನು ಮಾಡಬಯಸುತ್ತಿದ್ದಿರಿ?
_ ಸಿನಿಮಾ ಮಾಡಬಯಸುತ್ತಿದ್ದೆ.
* ನಿಮಗೆ ಸಿನಿಮಾ ಕುರಿತಾಗಿ ಇರುವ ಫ್ಯಾಸಿನೇಷನ್ ನಿಮ್ಮಬರವಣಿಗೆಯಲ್ಲೇನಾದರೂ ಮೈದೋರಿದೆಯೇ?
_ ಹೌದು. ನನ್ನ ಬರವಣಿಗೆಯಲ್ಲಿ ಸಾಕಷ್ಟು ವಿಷವಲ್‌ಗಳು ಬಂದು ನನ್ನನ್ನು ಪಾರುಮಾಡುತ್ತವೆ. ಐ ಆಮ್ ಥ್ಯಾಂಕ್‌ಫುಲ್ ಟು ದೆಮ್.
* ಎಷ್ಟೋ ಪುಸ್ತಕಗಳ ಕವರ್ ಡಿಜೈನ್ ನೀವೇ ಮಾಡಿದ್ದೀರಿ. ಚಿತ್ರಕಲೆಯಲ್ಲಿ ನಿಮಗೆ ತುಂಬಾ ಆಸಕ್ತಿ ಇದೆ. ನೀವು ಚೆನ್ನಾಗಿ ಹಾಡುತ್ತೀರಿ. ನಟಿಸುತ್ತೀರಿ. ಇದರಲ್ಲೆಲ್ಲಾ ಹೆಚ್ಚಿನದೇಕೆ ಸಾಧಿಸಲಿಲ್ಲ?
_ ಸೋಮಾರಿ.
* ನಿಮಗೆ ಹೇರಳವಾದ ಫ್ಯಾನ್ ಫಾಲೋಯಿಂಗ್ ಇದೆ. ಜಯಂತ್ ಎಂದರೆ ಒಂದು ಎನಿಗ್ಮಾ ಎಷ್ಟೋ ಜನರಿಗೆ. ಅದರಲ್ಲೂ ಹುಡುಗಿಯರಿಗೆ. ಇದಕ್ಕೇನನ್ನುತ್ತೀರಿ?
_ ಇದನ್ನು ಕೇಳೋದಕ್ಕೆ ತುಂಬಾ ಖುಷಿಯಾಗ್ತಿದೆ. ಇದು ನಿಜ ಆಗಿದ್ರೆ ಹೆಚ್ಚಿನ ಖುಷಿಯಾಗಿರೋದು.
* ನಿಮ್ಮದು ಪ್ರೇಮ ವಿವಾಹ. ನೀವು ಕೈಹಿಡಿದ ಹುಡುಗಿಯ ಯಾವ ಗುಣ ನಿಮ್ಮನ್ನು ಹೆಚ್ಚು ಆಕರ್ಷಿಸಿತು?
_ ನಾನು ಕೆಲಸ ಮಾಡುತ್ತಿದ್ದ ಔಷಧಿ ಕಂಪೆನಿಯಲ್ಲಿ ನಾನು ಪ್ರೊಡಕ್ಷನ್‌ನಲ್ಲಿದ್ದೆ. ಅವಳು ಕ್ವಾಲಿಟಿ ಕಂಟ್ರೋಲ್‌ನಲ್ಲಿದ್ದಳು. ನಾನು ಹೊಸದಾಗಿ ಸೇರಿದ ಹುಡುಗಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದೆ. ನನ್ನ ಯಾವ ಜೋಕುಗಳಿಗೂ ನಗದೆ ಅವಳು ಗಂಭೀರವಾಗಿ, “ನಿನ್ನನ್ನು ಮಹಾ ದೊಡ್ಡ ಜೋಕರ್ ಎಂದು ತಿಳಿದಿದ್ದಿಯೇನೋ” ಎಂದು ಕೇಳಿದ ಕ್ಷಣಕ್ಕೆ ನನ್ನ ಎಲ್ಲಾ ಸ್ಟಂಪುಗಳೂ ಹಾರಿದ್ದುವು.
* ನಿಮ್ಮಗೆ ಅತ್ಯಂತ ಪ್ರಿಯವಾದ ತಿಂಡಿ-ತಿನಿಸು ಯಾವುದು? ಯಾರು ತಯಾರಿಸಿದ್ದು?
_ ಅರವತ್ತರ ದಶಕದ ಬಿಮಲ್‌ರಾಯ್ ಹೀರೋನಂತೆ ಹೇಳುವುದಾದರೆ ನನ್ನ ಅಮ್ಮ ತಯಾರಿಸಿದ ಮೀನಿನಡಿಗೆ. ಸ್ಮಿತಾ ಕೈಯ್ಯಿನ ಚಹಾ. ನಾನೇ ಮಾಡಿದ ಬೆಂಡೆಕಾಯಿ ಉಪ್ಕರಿ.
* ನಿಮ್ಮ ಪ್ರೀತಿಯ ಹವ್ಯಾಸಗಳೇನು?
_ ನಿರುಪದ್ರವಿ ಸುಳ್ಳು ಮಾತಾಡೋದು, ಆಲಸಿಯಾಗಿರೋದು, ವ್ಯಾಕರಣಗಳನ್ನು ಮುರಿಯುವುದು, ಡೆಡ್‌ಲೈನ್‌ಗಳನ್ನು ತಳ್ಳುವುದು.
* ನಿಮ್ಮ ಹೀರೋಗಳು ಯಾರು?
_ ಬ್ಯೋರ್ನ್ ಬೋರ್ಗ್, ಶಿವರಾಮ ಕಾರಂತ, ಸ್ಟಿಲ್‌ಬರ್ಗ್, ನಮ್ಮ ರಾಜ್‌ಕುಮಾರ್, ಏಣಗಿಬಾಳಪ್ಪ, ಕಪಿಲ್‌ದೇವ್, ಅರವಿಂದನ್, ಖೈರ್‌ನಾರ್, ಬೂಬ್ಕಾ, ರಿತ್‌ವಿಕ್ ಘಟಕ್, ಕೆರೆಮನೆ ಶಂಭು ಹೆಗಡೆ, ಚಾರ್ಲಸ್ ಶೋಭರಾಜ್, ಓ.ಪಿ. ನಯ್ಯಾರ್, ಸಾಲ್ವದರ್ ದಾಲಿ, ತಲತ್, ದಿನಕರ ದೇಸಾಯಿ, ಪು.ಲ. ದೇಶಪಾಂಡೆ, ಚಾಪ್ಲಿನ್… ಈಗ ಹೊಳೆಯುತ್ತಿರುವುದು. ಹೀಗೆಯೇ ಮುಂದೆ ಹೋಗಬಹುದು.
* ವಾಟ್ ಅಬೌಟ್ ಹೀರೋಯಿನ್ಸ್
_ ಈ ವಿಶ್ವದಲ್ಲಿರುವ ಸಕಲ ಹೆಣ್ಣು ಜೀವಿಗಳೂ ನನ್ನ ಹೀರೋಯಿನ್‌ಗಳೇ.
* ನಿಮ್ಮ ಬದುಕಿನಲ್ಲಿ ಬಂದ ಹುಡುಗಿಯರ ಬಗ್ಗೆ…
_ ಅವರ ಕಾಳಜಿ ಬೇಡ ಮೇಡಂ. ಎಲ್ಲರೂ ನನ್ನ ಮನಸ್ಸಿನಲ್ಲಿ ಸುರಕ್ಷಿತವಾಗಿ ಉಂಡುತಿಂದು ಆರಾಮಾಗಿ ಸುಖವಾಗಿದ್ದಾರೆ.
* ನಿಮ್ಮನ್ನು ಬೋರ್ ಹೊಡೆಯುವ ಸಂಗತಿಗಳು ಯಾವುವು?
_ ಅಂತಃಕರಣವಿಲ್ಲದ ಸಿದ್ಧಾಂತಿಗಳು. ತಮ್ಮ ಬಗ್ಗೆಯೇ ಮಾತಾಡುವ ವ್ಯಕ್ತಿಗಳು. ಕಚಗುಳಿ ಮಾಡಿದರೂ ನಗದವರು.
* ನಿಮಗೆ ಅತ್ಯಂತ ಸುಂದರವೆನ್ನಿಸುವ ಸಂಗತಿಗಳು ಯಾವುವು?
_ ಅಪರಿಚಿತ ಬೀರುವ ಸಹಜ ನಗೆ..
_ ನಿಮ್ಮನ್ನು ವಿಸ್ಮಯಗೊಳಿಸುವ ಸಂಗತಿಗಳೇನು?
_ ಭಾಷೆ, ತರ್ಕ, ಸಿದ್ಧಾಂತಗಳಿಗೆ ನಿಲುಕದ ಬದುಕಿನ ದಿವ್ಯ ಕ್ಷಣಗಳು.
ನಿಮ್ಮನ್ನು ಕಾಡುವ ಸಂಗತಿಗಳು ಯಾವುವು?
_ ಮೋಡ ಮುಸುಕಿದ ಮಳೆಗಾಲದ ಸಮುದ್ರ. ಆಸ್ಪತ್ರೆಗಳು, ಜೈಲುಗಳು, ೪೦ ದಾಟಿದ ವೇಶ್ಯೆಯರು, ಮನೆಯಿಂದ ಓಡಿಹೋದ ಮಕ್ಕಳು…
(ಲಂಕೇಶ್ ಪತ್ರಿಕೆ, ಮಾರ್ಚ್ ೧೯೯೫)
 
 

‍ಲೇಖಕರು G

January 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

28 ಪ್ರತಿಕ್ರಿಯೆಗಳು

 1. lalithasiddabasavaiah

  ಹೆಚ್ಚುಕಡಿಮೆ ಇಪ್ಪತ್ತು ವರ್ಷಾತು ಈ ಇದು ಆಗಿ, ಈಗ ಇವೇ ಪ್ರಶ್ನೆಗೆ ಜಯಂತ್ ಉತ್ತರ ಇವೇ ಆಗಿರಲಾರವು

  ಪ್ರತಿಕ್ರಿಯೆ
 2. samyuktha

  “ಎಂಥಾ ದೈನಿಕವನ್ನೂ ಯಾಂತ್ರಿಕಗೊಳಿಸಿಬಿಡುವುದು ನಮ್ಮ ಚೇತನಕ್ಕೆ ಸಂಬಂಧಪಟ್ಟ ವಿಷಯ” ee saalu tumba ishtavaytu! olleya baraha

  ಪ್ರತಿಕ್ರಿಯೆ
 3. shwetha Hosabale

  ನಾನೂ ಓದಿ ತುಂಬಾ ಎಂಜಾಯ್ ಮಾಡಿದೆ 🙂

  ಪ್ರತಿಕ್ರಿಯೆ
 4. bharathi b v

  ದೇವ್ರೇ ! ಅಕ್ಷರ ಅಕ್ಷರಾನೂ ಎಂಜಾಯ್ ಮಾಡಿದೆ ….

  ಪ್ರತಿಕ್ರಿಯೆ
 5. Anil Talikoti

  ಇವೆ ಪ್ರಶ್ನೆಗಳನ್ನು ಜಯಂತರಿಗೆ ಇನ್ನೊಮ್ಮೆ ಹಾಕಿ ನೋಡಬೇಕು -ಈಗ ಅವರಿಗೆ ಕಾಡುವ ಸಂಗತಿಗಳು ಯಾವವು ಅಂತ.
  -Anil

  ಪ್ರತಿಕ್ರಿಯೆ
 6. sharadhi

  “ಒಬ್ಬ ಒಳ್ಳೆಯ ದಾದಿ, ಒಳ್ಳೆಯ ಡಾಕ್ಟರ್, ಒಳ್ಳೆಯ ಕಂಡಕ್ಟರ್, ಒಳ್ಳೆಯ ತೋಟಗಾರ- ಇವರೆಲ್ಲರಿಗಿಂತ ಸಾಹಿತಿ ಏನೂ ಮಿಗಿಲಲ್ಲ. ಇನ್ ಫ್ಯಾಕ್ಟ್ ೪-೫ ಪುಸ್ತಕ ಬರೆದ ವ್ಯಕ್ತಿಗಳಿಗಿಂತ, ೪-೫ ಬೆಕ್ಕು, ನಾಯಿ ಸಾಕಿಕೊಂಡು, ಮರ ಗಿಡ ಬೆಳೆಸಿಕೊಂಡಿರುವವರು ಹೆಚ್ಚು ಮಾನವೀಯರಾಗಿರುತ್ತಾರೆ. ಆದರೆ ಅದನ್ನು ಕುರಿತು ಯಾರೂ ಮಾತಾಡುವುದೇ ಇಲ್ಲ. ಅಂಥವರ ಮೌನ ಸಾಹಿತ್ಯಕ್ಕೆ ಬರುವಂತಾಗಬೇಕು.” – worth for the budding literary souls to mull over on this!.

  ಪ್ರತಿಕ್ರಿಯೆ
 7. shreedevi keremne

  ಈ ರೀತಿ ನಿಗ್ಲಿಜೆನ್ಸ ಾಗಿ ಅದೇ ಸಮಯಕ್ಕೆ ಸೀರಿಯಸ್ ಆಗಿ, ಅದರೊಟ್ಟಿಗೇನೇ ಜೋಕ್ ಮಾಡ್ತಾ ಉತ್ತರ ಕೊಡೋದು ನನ್ನ ಾನು ದಾದಾಗೆ ಮಾತ್ರ ಸಾಧ್ಯ.

  ಪ್ರತಿಕ್ರಿಯೆ
 8. shreedevi keremne

  ಖಂಡಿತಾ ಇಲ್ಲ. ಇಪ್ಪತ್ತು ವರ್ಷಗಳಾಗಲಿ, ಬೇಕಿದ್ದರೆ ಎಪ್ಪತ್ತು ವರ್ಷಗಳಾಗಲಿ, ಆನು ದಾದಾ ಈ ಪ್ರಶ್ನೆಗಳಿಗೆ ಉತ್ತರಿಸೋದು ಹೀಗೇನೇ. ಆ ತುಂಟಾಟದ ಬುದ್ಧಿ, ತಮಾಶೆ,ಎಲ್ಲವೂ ಹಾಗೇ ಇದೆ.

  ಪ್ರತಿಕ್ರಿಯೆ
 9. Venkataswamy

  ಜಯಂತರ ಜೀವನೋತ್ಸಾಹ,ಎಲ್ಲರನ್ನು-ಎಲ್ಲವನ್ನು ಪ್ರೀತಿಸುವ ಗುಣ ಸಂದರ್ಶನದಲ್ಲಿ ವ್ಯಕ್ತವಾಗಿದೆ. ಉಮಾ ಮೇಡಮ್ ಅಂತಹ ಪ್ರಶ್ನೆಗಳನ್ನು ಕೇಳಿದ್ದಾರೆ.ಗಾಂಭೀರ್ಯದ ಮಂಜುಗಡ್ಡೆ ಇಲ್ಲದ ತಂಗಾಳಿಯಂತ ಸಂದರ್ಶನ. ಮತ್ತೆ ಓದಿದ್ದಕ್ಕೆ ಖುಷಿಯಾಯಿತು.

  ಪ್ರತಿಕ್ರಿಯೆ
 10. ಅಕ್ಕಿಮಂಗಲ ಮಂಜುನಾಥ

  ನಾಲ್ಕು ಐದು ಪುಸ್ತಕ ಬರೆದವನಿಗಿಂತ ನಾಲ್ಕೈದು ಬೆಕ್ಕು ನಾಯಿ ಸಾಕಿದವನು ನಾಲ್ಕೈದು ಮರ ಗಿಡ ಬೆಳೆಸಿದವನು ಹೆಚ್ಚು ಮಾನವೀಯನಾಗಿರುತ್ತಾನೆ . ಕಾಯ್ಕಿಣಿಯವರ ಈ ಮಾತುಗಳು ಬಹಳಷ್ಟು ಸತ್ಯಕ್ಕೆ ಹತ್ತಿರವಾದಂತವು.

  ಪ್ರತಿಕ್ರಿಯೆ
 11. Preeti Bhandarkar Kumta.

  Ippattu varshada hindina chetohaari manastiti, moulya indigoo kaaydukondiddaralla jayant sir….eega vaishistyapoornha baravanigegalhinda kannadanadina kanhmanhiyaagiddare….nagu nagutaa nalee nalee ene aagali……

  ಪ್ರತಿಕ್ರಿಯೆ
 12. ಶಿವಾನನ್ದ ಸಿನ್ದಗಿ...

  ತುಂಬಾ ಸಂತೋಷುಿ ಆಯತು ಒದಿ

  ಪ್ರತಿಕ್ರಿಯೆ
 13. S. Bali

  Most wonderful interview, never anyone can say it is 20+ years old one; since the time i know him, Jayant has always been like this; endoo hrudayadindalae baruva satyavaada SATYA-VAADA. Jayant upa-jeevi alla embudakke idondu nidarshana .. .. indina literary people?!?!!

  ಪ್ರತಿಕ್ರಿಯೆ
 14. ಆನಂದ್ ಋಗ್ವೇದಿ

  ಜಯಂತ್ ಆಗ ಹೇಗಿದ್ದರೋ ಈಗಲೂ ಹಾಗೇ ಇದ್ದಾರೆ. ನಡು ವಯಸ್ಸಿನಲ್ಲಿ ಇದ್ದ ಕೆಲಸ ಬಿಟ್ಟು ಬದುಕಿಗಾಗಿ ಏನೆಲ್ಲಾ ಮಾಡುತ್ತಲೇ ಅವರ ಬತ್ತಲಾರದ ಬನಿ ಆ ಬದುಕಿನ ಪ್ರೀತಿ, ಸ್ಥಿತ ಪ್ರಜ್ಞತೆಯನ್ನು ನಾನಂತೂ ಬೆರಗಾಗಿ ನೋಡಿದ್ದೇನೆ. ಜಯಂತ್ ಗೆ ಜಯಂತ್ ಒಬ್ಬರೇ ಸಾಟಿ

  ಪ್ರತಿಕ್ರಿಯೆ
 15. ಕಲಾವತಿ.ಎಸ್

  ಮೋಡ ಮುಸುಕಿದ ಮಳೆಗಾಲದ ಸಮುದ್ರ. ಆಸ್ಪತ್ರೆಗಳು, ಜೈಲುಗಳು, ೪೦ ದಾಟಿದ ವೇಶ್ಯೆಯರು, ಮನೆಯಿಂದ ಓಡಿಹೋದ ಮಕ್ಕಳು…….. ಇವುಗಳೆಲ್ಲವೂ ಇವೊತ್ತಿಗೂ ಅವರನ್ನು ಕಾಡುತ್ತಿರುವ ಸಂಗತಿಗಳೇ ಆಗಿರುತ್ತದೆ. ಯಾವುದರ ಪರಿಸ್ಥಿತಿಯಲ್ಲೂ ಬದಲಾವಣೆಗಳಿರುವುದಿಲ್ಲ……… ಮಾನವೀಯ ಅಂತಕರಣದ ಬಡತನ… … ಇರಲಿ, ಅವರ ಬದುಕಿನ ದಿವ್ಯ ಕ್ಷಣಗಳು ಇಂದಿಗೂ ಹಾಗೇ ಮುಂದುವರಿಯಲಿ…………………

  ಪ್ರತಿಕ್ರಿಯೆ
 16. Anonymous

  ಜಯಂತ ಸರ ತರ್ಲೆ ಉತ್ತರಗಳಲ್ಲಿ ಸತ್ಯ ಮಿಥ್ಯ ಒಳಗು intersting ede

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: