ಜಯದೇವರ ‘ಕಾಸು ಕುಡಿಕೆ: ಬಡ್ಡಿ ದರದ ನಾಡಿ ವಿಜ್ಞಾನ

ಕಾಸು ಕುಡಿಕೆ-2
– ಜಯದೇವ ಪ್ರಸಾದ ಮೊಳೆಯಾರ.
Money cannot buy you happiness, but neither can poverty! – Leo Rosten
(ದುಡ್ಡಿನಿಂದ ಸಂತೋಷವನ್ನು ಖರೀದಿಸಲಾಗುವುದಿಲ್ಲ, ಬಡತನದಿಂದಲೂ ಆಗುವುದಿಲ್ಲ!- ಲಿಯೋ ರೋಸ್ಟೆನ್.)

ಎರಡು ರೀತಿಯ ಜನರಿರುತ್ತಾರೆ.
ಒಂದು ವರ್ಗದ ಮಂದಿ, ರಿಸ್ಕ್ ತೆಗೆದುಕೊಂಡು ಹಣ ಹೂಡುವವರು. High ರಿಸ್ಕ್ ;  high return ಇವರ ಪಾಲಿಸಿ. ಎಂಟೆದೆಯ ಬಂಟರಂತೆ ಧೈರ್ಯದಿಂದ ಮುನ್ನುಗ್ಗಿ ರಿಸ್ಕ್ ಸ್ವಲ್ಪ ಜಾಸ್ತಿಯಾದರೂ ಶೇರುಗಳಲ್ಲಿ, ಮ್ಯೂಚುವಲ್ ಫಂಡುಗಳಲ್ಲಿ, ಉಳಿಪ್ ಗಳಲ್ಲಿ,  ಮತ್ತು ಇತರ ಶೇರು ಸಂಬಂಧಿತ  ಸ್ಕೀಂಗಳಲ್ಲಿ ಹಣ ಹೂಡಿ ಅಧಿಕ ಪ್ರತಿಫಲಕ್ಕಾಗಿ ದುಡಿಯುವವರು.
ಇನ್ನೊಂದು ರೀತಿಯ ಮಂದಿ ‘ರಿಸ್ಕ್-ಗಿಸ್ಕ್ ಎಲ್ಲ ಬೇಡ ಮಾರಾಯ್ರೇ, ರಿಟರ್ನ್ ಕಡಿಮೆಯಾದ್ರೂ ಚಿಂತೆಯಿಲ್ಲ. ನಮಗೆ ಸೇಫ್ಟಿ ಮುಖ್ಯ. ಹಾಕಿದ ಹಣ ಮುಳುಗದಿದ್ರೆ ಸಾಕು, ಆ ಶೇರು ಮಾರ್ಕೆಟ್  ಉಸಾಬರಿ ನಮಗೆ ಬೇಡವೇ ಬೇಡ.’ ಎನ್ನುವವರು. ಇವರದ್ದು ಒಂದು ರೀತಿಯ ‘Low risk; low return’ ಪಾಲಿಸಿ. ಇಂತಹವರು, ಭದ್ರತೆಯನ್ನು ಒದಗಿಸುವ, ನಿಗದಿತ ಬಡ್ಡಿ ದರಗಳ F.D, R.D, Postal savings  ಭದ್ರ ಕಂಪನಿಗಳ Corporate F.D, Debentures, RBI Bondsಇತ್ಯಾದಿ ಡೆಪಾಸಿಟ್ಗಳಲ್ಲಿ ಬಡ್ಡಿದರಕ್ಕಾನುಸಾರ ಹಣ ಹೂಡಿ ನಿಶ್ಚಿಂತರಾಗುತ್ತಾರೆ.
ಇದರಲ್ಲಿ ತಪ್ಪು ಸರಿ ಎಂಬುದಿಲ್ಲ. ಎರಡೂ ಬಗೆಗಳೂ ಸರಿಯೇ. ಅವರವರ ರುಚಿಗೆ ತಕ್ಕಂತೆ, ಮನೋಧರ್ಮಕ್ಕೆ ತಕ್ಕಂತೆ ಅವರವರು ತಮ್ಮ ಕುಡಿಕೆಯ ಹೂಡಿಕೆಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಕೆಲವರಿಗೆ ಸೇಬು ಇಷ್ಟವಾದರೆ ಇನ್ನು ಕೆಲವರಿಗೆ ಕಿತ್ತಳೆ ಇಷ್ಟ. ಅಲ್ಲವೇ? ಅದರಲ್ಲೇನಿದೆ ತಪ್ಪು-ಸರಿ?
ಆದರೆ, ನಾವು ಯಾವ ದಾರಿಯಲ್ಲಿ ಸಾಗುತ್ತೇವೋ ಆ ದಾರಿಯ ವಿವರಗಳನ್ನು ಸರಿಯಾಗಿ ತಿಳಿದುಕೊಂಡು, ಪೂರ್ತಿ ವಿಶ್ಲೇಷಣೆ ಮಾಡಿಯೇ ಇನ್ವೆಸ್ಟ್ ಮಾಡಬೇಕು.  ‘ನಾನು ಬ್ಯಾಂಕಿನಲ್ಲಿ ಎಫ್ ಡಿ  ಮಾಡುತ್ತೇನೆ, ಅಂಚೆ ಠೇವಣಿ ಮಾಡುತ್ತೇನೆ, ಸಿಂಪಲ್! ಅದರಲ್ಲೇನಿದೆ ತಲೆಬಿಸಿ?’ ಎಂದು ಅಸಡ್ಡೆ ಮಾಡುವಂತಿಲ್ಲ. ಅವುಗಳಲ್ಲೂ ಜಾಣ್ಮೆಯಿಂದ ಮಾಡುವಂತದ್ದು ತುಂಬಾ ಇದೆ.
ಡೆಪಾಸಿಟ್ ಮೇಲಿನ  ಬಡ್ಡಿಗೆ ಆದಾಯ ಕರ ಇದೆ. ಯಾವುದೇ ವಿನಾಯಿತಿ ಇಲ್ಲ. ಹೂಡಿಕೆಯ ಸಮಯದಲ್ಲಿ ಐದು ವರ್ಷದ ಮೇಲಿನ ಅವಧಿಯ ಡೆಪಾಸಿಟ್ಗಳಿಗೆ ಮಾತ್ರ ೮೦ c ಸೆಕ್ಷನ್ ಅನ್ವಯ ಆದಾಯ ವಿನಾಯಿತಿ ಇದೆ, ಐದು ವರ್ಷದ ಕೆಳಗಾದರೆ ಇಲ್ಲ! ಭದ್ರತೆಯ ಮಟ್ಟಿಗೆ ಹೇಳುವುದಾದರೆ, 1 ಲಕ್ಷ ರೂಪಾಯಿಷ್ಟರ ಮಟ್ಟಿಗೆ (ಒಬ್ಬನ ಹೆಸರಿನಲ್ಲಿ, ಒಂದು ಬ್ಯಾಂಕಿನಲ್ಲಿ) ಡೆಪಾಸಿಟ್ ಇನ್ಶೂರನ್ಸ್ ಇದೆ. ಅಂಚೆ ಠೇವಣಿ ಭದ್ರ. ಡಿಬೆಂಚರ್ ಗಳು ಭದ್ರವಲ್ಲ. ಇವೆಲ್ಲ ಎಲ್ಲರಿಗೂ ಅರಿವಿದೆ ಎಂದು ನಂಬಿದ್ದೇನೆ. ಹಾಗಾಗಿ ನಾನು ಅವುಗಳ ಬಗ್ಗೆ ಹೆಚ್ಚು ಹೇಳಲು ಹೊರಟಿಲ್ಲ. ನಾನು ಹೇಳ ಹೊರಟಿರುವುದು ಬಡ್ಡಿದರಗಳ ಕಾಲಾನುಕ್ರಮ ಏರಿಳಿತದ ಬಗ್ಗೆ ಮತ್ತು ಹೇಗೆ ಅದನ್ನು ಸ್ಟಡಿ ಮಾಡಿ ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು.
ಯಾವಾಗಲೋ ದುಡ್ಡು ಇದ್ದಾಗ ಬ್ಯಾಂಕಿಗೆ ಹೋಗಿ ಅತ್ಯಂತ ಹೆಚ್ಚು ಬಡ್ಡಿದರ ಸಿಗುವ ಅವಧಿಗೆ ಎಫ್ .ಡಿ ಮಾಡಿಕೊಂಡು ಆಮೇಲೆ ಅದು ಮಚ್ಯೂರ್ ಆದಾಗ ಪುನಃ ಬಡ್ಡಿ ದರದ ಕೋಷ್ಟಕ ನೋಡಿಕೊಂಡು ಗರಿಷ್ಟ ಬಡ್ಡಿ ನೀಡುವ ಅವಧಿಗೆ ನವೀಕರಿಸಿಕೊಳ್ಳುತ್ತಾ ಹೋಗುವುದು ಸುಮಾರಾಗಿ ಎಲ್ಲರೂ ಅನುಸರಿಸುವ ಒಂದು ಕ್ರಮ. ಬಡ್ಡಿ ದರಗಳು ಕೆಲವೊಮ್ಮೆ ತೀರಾ ಕಡಿಮೆಯಿರುತ್ತವೆ ಮತ್ತು ಕೆಲವೊಮ್ಮೆ ಜಾಸ್ತಿ ಇರುತ್ತವೆ. ಉದಾಹರಣೆಗೆ ಕೇವಲ ವರ್ಷ ಮೊದಲು 10%-11% ಇದ್ದ ಬ್ಯಾಂಕು ಬಡ್ಡಿ ದರಗಳು ಈಗ ಬರೇ 6%-7%. ಸಧ್ಯ  ಎಫ್ .ಡಿ ನವೀಕರಿಸಲು ಬ್ಯಾಂಕು ಮೆಟ್ಟಲು ಏರಿದವರಿಗೆಲ್ಲಾ ಈ ಕಹಿ ಸತ್ಯ ಚೆನ್ನಾಗಿ ಗೊತ್ತು.
ಬಡ್ಡಿ ದರಗಳನ್ನು ರಿಸರ್ವ್ ಬ್ಯಾಂಕು (ಆರ್.ಬಿ.ಐ) ನಿಯಂತ್ರಿಸುತ್ತದೆ. ಮತ್ತು ದೇಶದ ಆರ್ಥಿಕ ವ್ಯವಸ್ಥೆಯನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುವ ಕ್ರಮವಾಗಿ ಅದನ್ನು ಕಾಲಾನುಕ್ರಮ ಏರಿಳಿಸುತ್ತದೆ. ಅದರ ತತ್ವವನ್ನು ಅರ್ಥಮಾಡಿಕೊಂಡರೆ ನಾವು ಸುಲಭವಾಗಿ ಬಡ್ಡಿದರವನ್ನು ಯಾವುದೇ ಫಲ ಜೋತಿಷ್ಯರ ಸಹಾಯವಿಲ್ಲದೆ ಪ್ರೆಡಿಕ್ಟ್ ಮಾಡಬಹುದು. ಮತ್ತು ಅದನ್ನು ಬಳಸಿಕೊಂಡು ಗರಿಷ್ಟ ಬಡ್ಡಿದರದ ಲಾಭ ಪಡೆಯಬಹುದು.
ಮೂಲಭೂತವಾಗಿ ಇಷ್ಟು ತಿಳಿದುಕೊಂಡರೆ ಸಾಕು: ಬ್ಯಾಂಕು ಬಡ್ಡಿದರ ಕಡಿಮೆಯಿದ್ದಲ್ಲಿ ಜನರಿಗೆ ಉಳಿತಾಯ ಮಾಡುವ ಆಸಕ್ತಿ ಕಡಿಮೆಯಾಗುತ್ತದೆ. ಸಾಲ ತೆಗೆದು ಬೇಕಾದ್ದಕ್ಕೆ ಖರ್ಚು ಮಾಡಲು ಪ್ರೋತ್ಸಾಹ ಜಾಸ್ತಿಯಾಗುತ್ತದೆ. ಹಣದ ಹರಿವು ಜಾಸ್ತಿಯಾಗುತ್ತದೆ. ಇದರ ಒಟ್ಟು ಫಲ ಮಾರುಕಟ್ಟೆಯಲ್ಲಿ ಸರಕುಗಳ ಬೇಡಿಕೆ ಜಾಸ್ತಿಯಾಗಿ ಆರ್ಥಿಕ ಪ್ರಗತಿಯ ಒಟ್ಟೊಟ್ಟಿಗೆ ಬೆಲೆಯೇರಿಕೆ ಕೂಡಾ. ರಿಸೆಶನ್ ಚಿಕಿತ್ಸೆಗಾಗಿ ಬಡ್ಡಿದರ ಕಡಿಮೆ ಮಾಡಿ ಹಣದ ಹರಿವು ಜಾಸ್ತಿ ಮಾಡಿದ ಭಾರತವನ್ನು ಸಧ್ಯಕ್ಕೆ ಬಾಧಿಸುತ್ತಿರುವ ಸಮಸ್ಯೆ ಇದೇನೇ.
ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಲ್ವ? ಹೌದು. ಆಗ ರಿಸರ್ವ್ ಬ್ಯಾಂಕು ರಿಸರ್ವ್ ಬ್ಯಾಂಕು ಆಗುತ್ತದೆ! ಎಲ್ಲವೂ ಮೊದಲಿನ ತದ್ವಿರುದ್ದ! ಬಡ್ಡಿದರನ್ನು ಏರಿಸಿ ಜನರಲ್ಲಿ ಉಳಿತಾಯದ ಆಸಕ್ತಿ ಕುದುರಿಸಿ, ಸಾಲವನ್ನು ದುಬಾರಿಯಾಗಿಸಿ ಹಣದ ಹರಿವನ್ನು ಕುಂಠಿತಗೊಳಿಸುವುದು. ಸರಕುಗಳ ಬೇಡಿಕೆ ಕಡಿಮೆಯಾಗಿ ಬೆಲೆಯೇರಿಕೆ ಕಡಿಮೆಯಾಗುವುದಾದರೂ ಜೊತೆ ಜೊತೆಗೆ ಆರ್ಥಿಕ ಪ್ರಗತಿಯೂ ಕಡಿಮೆಯಾಗುವುದು.
ಹೀಗೆ ರಿಸರ್ವ್ ಬ್ಯಾಂಕು, ಹಣದ ಹರಿವನ್ನು ಹೆಚ್ಚು ಕಡಿಮೆ ಮಾಡಲು ಬಡ್ಡಿದರವನ್ನು ಏರಿಳಿಸುತ್ತಾ ಇರುತ್ತದೆ.  ಆಥರ್ಿಕ ಪ್ರಗತಿಗಾಗಿ ಶ್ರಮಿಸುತ್ತಾ, ಬೆಲೆಯೇರಿಕೆಯನ್ನು ನಿಯಂತ್ರಿಸುತ್ತಾ, ಎರಡನ್ನೂ ಬ್ಯಾಲನ್ಸ್ ಮಾಡುತ್ತಾ, ಹೋಗುತ್ತದೆ. ಇದನ್ನು ಆರ್.ಬಿ.ಐ ತ್ರೈಮಾಸಿಕ ಹಣಕಾಸಿನ ನೀತಿಯಾಗಿ ಪ್ರಕಟಿಸುತ್ತದೆ. ಮುಂದಿನ ಹಣಕಾಸಿನ ನೀತಿ ಜನವರಿಯಲ್ಲಿ ಬರಲಿದೆ.  ಹೊಸ ಬಡ್ಡಿದರಗಳು ಪ್ರಕಟವಾಗುವ ಮೊದಲೇ ಈ ತರ್ಕದ ಪ್ರಕಾರ ಅದರ ಗತಿಯನ್ನೂ ಪ್ರಮಾಣವನ್ನೂ ನಿರೀಕ್ಷಿಸಬಹುದು.
ಸಧ್ಯಕ್ಕೆ ಬಡ್ಡಿದರ ಕನಿಷ್ಟ ಮಟ್ಟದಲ್ಲಿದೆ. ಇಲ್ಲಿಂದ ಬಡ್ಡಿದರ ಏರುವುದು ಖಚಿತ. ಬೆಲೆಯೇರಿಕೆಯ ನಿಯಂತ್ರಣಕ್ಕೆ ಅದು ಅಗತ್ಯ. ಆರ್.ಬಿ.ಐ ಮುಂದಿನ ತಿಂಗಳು ಸುಮಾರು ಅರ್ಧ ಶೇಖಡಾದಷ್ಟು ಬಡ್ಡಿದರವನ್ನು ಏರಿಸುವ ನಿರೀಕ್ಷೆ ಇದೆ. ಮುಂದಕ್ಕೆ ಇನ್ನೂ ಜಾಸ್ತಿಯಾದೀತು. ಹಾಗಾಗಿ ದೀರ್ಘಕಾಲಕ್ಕೆ ಎಫ್ .ಡಿ ಮಾಡುವವರಿಗೆ ಇದು ಸರಿಯಾದ ಸಮಯವಲ್ಲ. ಸ್ವಲ್ಪ ಕಾದರೆ ಹೆಚ್ಚಿನ ದರ ಸಿಗಬಹುದು. ಹಾಗಾಗಿ ಬೇರೆ ಪಯರ್ಾಯ ದಾರಿಗಳನ್ನು ನೋಡಬಹುದು. ಅಂಚೆ ಠೇವಣಿಯಲ್ಲಿ 8%-8.5% ಈಗಲೂ ಸಿಗುತ್ತದೆ. ಭದ್ರ ಕೂಡಾ. ಕಂಪೆನಿ ಎಫ್ .ಡಿ ಗಳಲ್ಲಿ 11% ಮೀರಿ ಸಿಗುತ್ತದೆ ಆದರೆ ಅಲ್ಲಿ ರಿಸ್ಕ್ ಇದೆ.
ಹಾಗೆಯೇ, ಬಡ್ಡಿದರ ಏರಿದ ಸ್ಥಿತಿಯಲ್ಲಿರುವಾಗ ಹಾಗೂ ಇನ್ನು ಕೆಳಕ್ಕೆಯೇ ಹೋಗುತ್ತದೆ ಎಂದಿರುವಾಗ ದೀರ್ಘ ಅವಧಿಗೆ ಎಫ್ .ಡಿ ಮಾಡಿಕೊಳ್ಳಬೇಕು. ಕಳೆದ ವರ್ಷ ಬಡ್ಡಿದರ ಒಂದು ವರ್ಷಕ್ಕೆ 11% ವರೆಗೆ ಇತ್ತು. ಮೂರು ವರ್ಷಕ್ಕೆ  10% ಇತ್ತು. 1% ಜಾಸ್ತಿ ಬಡ್ಡಿಯ ಆಸೆಗೆ ಒಂದೇ ವರ್ಷಕ್ಕೆ ಎಫ್ .ಡಿ ಮಾಡಿದ ಎಲ್ಲರೂ ಈಗ ಅದನ್ನು ಕೇವಲ 6%-7% ಗೆ ನವೀಕರಿಸುವಂತಹ ಪರಿಸ್ಥಿತಿ ಬಂದಿದೆ. ಈ ರೀತಿ ಬಡ್ಡಿದರದ ಚಲನೆಯನ್ನು ಅರಿತು ಮುಂದಿನ ಹೆಜ್ಜೆ ತೆಗೆದುಕೊಳ್ಳಬೇಕು. ಯಾಂತ್ರಿಕವಾಗಿ ಎಫ್ .ಡಿಗಳನ್ನು ಮಾಡುತ್ತಾ, ನವೀಕರಿಸುತ್ತಾ ಹೋಗುವುದು ನಮ್ಮ ಕುಡಿಕೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಏರು ಸ್ಥಿತಿಯಲ್ಲಿ ಎಫ್ .ಡಿ ಮಾಡಿ. ಜೊತೆಗೆ ಬ್ಯಾಂಕಿನಲ್ಲಿ ಅಥವ ಅಂಚೆ ಇಲಾಖೆಯಲ್ಲಿ ದೀರ್ಘಾವಧಿಗೆ  ಆರ್.ಡಿ ಕೂಡಾ ಮಾಡಿ. ಆರ್.ಡಿಯ ಅವಧಿ ಪೂರ್ತಿ ಅದೇ ಬಡ್ಡಿದರ ಲಗಾವ್ ಆಗುತ್ತದೆ. ಇನ್ನೂ ಒಂದು ಕೆಲಸ ಮಾಡಬಹುದು – ಬಡ್ಡಿ ದರ ಹೆಚ್ಚು ಇರುವಾಗ ಡಿಬೆಂಚರ್ ಖರೀದಿಸಬಹುದು. ಬಡ್ಡಿ ದರ ಇಳಿದಂತೆಲ್ಲಾ ಅದರ ಬೆಲೆ ಮಾರುಕಟ್ಟೆಯಲ್ಲಿ ಏರುತ್ತದೆ. ಬೇಕಾದಾಗ ಅದನ್ನು ಮಾರಿ ದುಡ್ಡು ಕಿಸೆಗೇರಿಸಬಹುದು. ಈ ಸೌಲಭ್ಯ ಎಫ್ .ಡಿ ಗಳಲ್ಲಿ ಸಿಗದು. ಉಲ್ಟಾ, ಎಫ್ .ಡಿ ಗಳಲ್ಲಿ ಸಮಯಕ್ಕೆ ಮೊದಲು ಕೊಟ್ಟರೆ ನಷ್ಟ ಉಂಟಾಗುವುದು.
ಠೇವಣಿಗೆ ಅನ್ವಯಿಸುವ ತತ್ವಗಳು ಸಾಲಕ್ಕೆ ಅನ್ವಯಿಸದೇಕೆ? ಇದೀಗ ನಾಲ್ಕಾರು ಬ್ಯಾಂಕುಗಳಲ್ಲಿ (SBI, HDFC, ICICI, Kotak, ಇತ್ಯಾದಿ) ಅತ್ಯಂತ ಕನಿಷ್ಟ ದರಕ್ಕೆ (8%-8.5%ರಷ್ಟು) ಗೃಹ ಸಾಲ ದೊರೆಯುತ್ತದೆ. ಈಗಲೇ ಅದನ್ನು ಪಡೆದುಕೊಂಡರೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯದ ಲಾಭ ಪಡೆಯಬಹುದು. ಎಪ್ರಿಲ್ನಿಂದ ಈ ದರ ಏರತೊಡಗೀತು.
ಬಡ್ಡಿದರದ ಏರಿಳಿತದ ಬಗ್ಗೆ ಸಾಕಷ್ಟು ಚರ್ಚೆ ಪತ್ರಿಕೆಗಳಲ್ಲಿ ನಡೆಯುತ್ತಲೇ ಇರುತ್ತದೆ.  ಓದುತ್ತಾ ಇರಿ. ಬಡ್ಡಿದರಗಳ ಏರಿಳಿತವನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳಬೇಕು.

‍ಲೇಖಕರು avadhi

March 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This