ಜಯದೇವರ 'ಕಾಸು ಕುಡಿಕೆ'

ಕಾಸು ಕುಡಿಕೆ -1
ಕನ್ನಡದಲ್ಲಿ ವಾಣಿಜ್ಯದ ಬಗ್ಗೆ ಸರಳ ಬರಹಗಳು ಇಲ್ಲವೇ ಇಲ್ಲವೇನೋ ಎಂಬಷ್ಟು ಅಪರೂಪ. ಅಲ್ಲೊಬ್ಬರು ಶೈಲೇಶ್ ಚಂದ್ರ ಗುಪ್ತ ಬರೆದ ‘ಅರ್ಥ ನೋಟ’ ಇನ್ನೊಂದೆಡೆ ಟಿ ಆರ್ ಚಂದ್ರಶೇಖರ್ ಅವರ ವ್ಯಾಖ್ಯಾನ ಇವುಗಳು ಮಾತ್ರವೇ ಆತ್ಮೀಯವಾಗಿ ಹಣಕಾಸಿನ ಲೋಕವನ್ನು ಬಿಚ್ಚಿಡುತ್ತಿತ್ತು.
ಜಯದೇವ ಪ್ರಸಾದ ಮೊಳೆಯಾರ ಈಗ ‘ಕಾಸು ಕುಡಿಕೆ’ ಯೊಡನೆ ನಮ್ಮೆದುರು ನಿಂತಿದ್ದಾರೆ. ವಾಣಿಜ್ಯ ಬರಹ ಕಬ್ಬಿಣದ ಕಡಲೆಯಾಗಿರುವ ದಿನಗಳಲ್ಲಿ ಕಥೆಗಳನ್ನೂ, ಹಲವೊಮ್ಮೆ ಚುರುಕಾದ ಚಾಟಿಯನ್ನೂ ಬೀಸುತ್ತಾ ಅವರು ಈ ಲೋಕಕ್ಕೆ ಪ್ರವೇಶ ಒದಗಿಸುತ್ತಾರೆ.
‘ಉದಯವಾಣಿ’ ಯಲ್ಲಿ ಈಗಾಗಲೇ ಅವರು ಬರೆಯುತ್ತಿರುವ ಈ ಅಂಕಣ ಆನ್ ಲೈನ್ ಓದುಗರಿಗಾಗಿ ಇನ್ನು ಮುಂದೆ ‘ಅವಧಿ’ಯಲ್ಲಿ ಲಭ್ಯ.

‘ಕಾಸು, ಕನಸು ಮತ್ತು ಒಂದು ಮುಷ್ಟಿ ಜಾಣ್ಮೆ.
Money cannot buy you happiness,
But, it will give you a choice of lifestyle !
ಸುಮಾರು ದಶಕಗಳ ಹಿಂದೆ ಹಳ್ಳಿ ಹಳ್ಳಿಗಳಲ್ಲಿ ಎಲ್ಲರ ಮನೆಗಳಲ್ಲಿ ಒಂದು ಚಿಕ್ಕ ಕಾಸಿನ ಕುಡಿಕೆ ಇರುತ್ತಿತ್ತು. ಅದರೊಳಕ್ಕೆ ಮನೆಯ ಯಜಮಾನ ಅಗಾಗ್ಗೆ ಒಂದೊಂದು ನಾಣ್ಯವನ್ನು ‘ಟಣ್..’ ಎಂದು ಉದುರಿಸುತ್ತಿದ್ದ. ಅದು ಆತನ ಖರ್ಚು ಕಳೆದ, ಉಳಿತಾಯದ ಹಣ ಮತ್ತು ಭವಿಷ್ಯತ್ತಿಗಾಗಿ ಶೇಖರಿಸಿಟ್ಟ ಆಪದ್ಧನ. ಬರಗಾಲದ ದಿನಗಳಲ್ಲೋ, ನೆರೆಕಾಲದ ಸಮಯದಲ್ಲೋ,  ಮಕ್ಕಳ ಮದುವೆ ಸಂದರ್ಭಗಳಲ್ಲೋ ಎಂದಾದರು ಕೆಲಸಕ್ಕೆ ಬರುವಂತಹ ಭವಿಷ್ಯ ನಿಧಿ. ಹಾಗೇ ಹಣವನ್ನು ಶೇಖರಿಸಿಟ್ಟು ಆ ಕಾಸು-ಕುಡಿಕೆಯನ್ನು ಯಾರಿಗೂ ತಿಳಿಯದ ಜಾಗದಲ್ಲಿ ಕಳ್ಳಕಾಕರಿಂದ ಮರೆಯಾಗಿ ಜೋಪಾನಗೊಳಿಸಿಡುತ್ತಿದ್ದ, ಮನೆಯ ಯಜಮಾನ.
ಇಗ ಕಾಲ ಬದಲಾಗಿದೆ.  ಹೆಜ್ಜೆ ಹೆಜ್ಜೆಗೆ ಬ್ಯಾಂಕುಗಳಿವೆ. ಸಂಬಳ ಬ್ಯಾಂಕು ಎಕೌಂಟಿಗೆ ನೇರವಾಗಿ ಕ್ರೆಡಿಟ್ ಆಗುತ್ತದೆ ಮತ್ತು ವೆಚ್ಚವೂ ಚೆಕ್ ಇಲ್ಲವೇ, ಕ್ರೆಡಿಟ್, ಡೆಬಿಟ್ ಕಾರ್ಡುಗಳ ಮೂಲಕ ನಡೆಯುತ್ತವೆ. ನಗದು ವ್ಯವಹಾರ ದೈನಂದಿನ ಪುಡಿಗಾಸು ಖರ್ಚಿಗೆ ಮಾತ್ರ. ಕುಡಿಕೆಗಳು ಜೀವನದಿಂದ ಮಾಯವಾಗಿವೆ. ಎಲ್ಲವೂ ವಿದ್ಯುನ್ಮಾನ. ಅದು ಈ ಶತಮಾನದ ಲೀಲೆ. ಇನ್ನು ಉಳಿತಾಯವೋ, ಆಯ್ಕೆಗಳ ಮಹಾಪೂರ! ಭೂಮಿ, ಚಿನ್ನಗಳೆಂಬ ಸಾಂಪ್ರದಾಯಕ  ದಾರಿಗಳಲ್ಲದೆ, ಫಿಕ್ಸೆಡ್ ಡೆಪಾಸಿಟ್, ಡಿಬೆಂಚರ್, ಪೋಸ್ಟಲ್ ಸಣ್ಣ ಉಳಿತಾಯ, ಇನ್ಶೂರನ್ಸ್, ಮ್ಯೂಚುವಲ್ ಫéಂಡ್, ಪಿ.ಎಫ್, ಪೆನ್ಶನ್ ಫಂಡ್ , ಶೇರು, ಟೈಮ್ ಶೇರ್, ಪ್ಲಾಂಟೇಶನ್, ಚಿಟ್ಸ್, ಇತ್ಯಾದಿ ಇತ್ಯಾದಿ ನೂರಾರು ದಾರಿಗಳಿವೆ. ಇವೆಲ್ಲ  ನಮ್ಮ ನಮ್ಮ ಆಧುನಿಕ ‘ಕಾಸಿನ ಕುಡಿಕೆ’ಗಳೇ. ಭವಿಷ್ಯತ್ತಿಗಾಗಿ ಕೂಡಿಡುವ ಆಪದ್ಧನ. ಮಧ್ಯಮ ವರ್ಗದ ಬೆವರು, ಉಸಿರು ಆಶೋತ್ತರಗಳು ಅವಲ್ಲಿ ಅಡಕವಾಗಿವೆ. ನಾವೆಲ್ಲ ಬಹಳ ಜೋಪಾನವಾಗಿ  ಕಾಪಿಡುವ ನಮ್ಮ ಭವಿಷ್ಯತ್ತಿನ ಕನಸಿನ ಪ್ರತೀಕ. ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚು, ಮೆಡಿಕಲ್ ಎಮರ್ಜೆನ್ಸಿ, ಇಳಿವಯಸ್ಸಿಗೆ ಬೇಕಾದ ದುಡ್ಡು, ಅಥವ ಯಾವ ಸಮಯದಲ್ಲಿಯೂ ಕರೆಯದೆಯೇ ಬರಬಹುದಾದ ವಿಪತ್ತುಗಳು – ಎಲ್ಲದಕ್ಕೂ ಆಧಾರ ಇದುವೇ. ಆದ್ದರಿಂದ ಸಾಕಷ್ಟು ಉಳಿತಾಯ ಮಾಡಿ, ಅದನ್ನು ಗರಿಷ್ಟ ಬೆಳವಣಿಗೆಯ ಹಾದಿಯಲ್ಲಿ  ಹೂಡಿ, ಈ ನಮ್ಮ ಕನಸಿನ ಕುಡಿಕೆಗೆ ಯಾವುದೇ ತೊಂದರೆಯೂ ಬಾರದಂತೆ ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವುದೇ ನಮ್ಮಲ್ಲರ ಜೀವನದ ಒಂದು ಪ್ರಾಮುಖ್ಯ ಆಶಯ.
ಒಂದೂರಿನಲ್ಲಿ ಒಬ್ಬ ವ್ಯಕ್ತಿ ಇದ್ದ. ಅವನ ಬಳಿಯೂ ಒಂದು ಕುಡಿಕೆ. ಅದರಲ್ಲಿ ದುಡ್ಡು ಸಿಕ್ಕಂತೆಲ್ಲಾ ಶೇಖರಿಸಿಡುತ್ತಿದ್ದ. ಒಮ್ಮೆ ಆತನಿಗೆ ಆ ದುಡ್ಡನ್ನು ಯಾವುದೋ ತುರ್ತಿಗೆ ಹೊರಗೆ ತೆಗೆಯಬೇಕಾದ ಅಗತ್ಯ ಬಂತು. ಕುಡಿಕೆ ಎತ್ತಿಕೊಂಡ, ತಿರುಗಣಿ ತೆಗೆದು ಕುಡಿಕೆಯೊಳಗೆ ಕೈತೂರಿ ಸಿಕ್ಕಿದಷ್ಟು ನಾಣ್ಯವನ್ನು ಮುಷ್ಟಿಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡ. ಆದರೆ ಎಷ್ಟು ಪ್ರಯತ್ನ ಪಟ್ಟರೂ ಮುಷ್ಟಿಯನ್ನು ಹೊರಕ್ಕೆಳೆದುಕೊಳ್ಳಲು ಆಗಲೇ ಇಲ್ಲ. ಹೆಂಡತಿ ಬಂದಳು, ಊಹೂಂ. ಎಷ್ಟು ಬಲ ಪ್ರಯೋಗ ಮಾಡಿ ಎಳೆದರೂ ಮುಷ್ಟಿ ಹೊರಕ್ಕೆ ಬರಲೇ ಇಲ್ಲ. ಕೊನೆಗೆ ಹೆಂಡತಿ ನೆರೆಮನೆಯಾತನ ಬಳಿ ಹೋಗಿ ಸಹಾಯಕ್ಕೆ ಬರುವಂತೆ ಬೇಡಿಕೊಂಡಳು.
ನೆರೆ ಮನೆಯಾತ ಬಂದು ಮೊದಲು ಕೇಸ್ ಸ್ಟಡಿ ಮಾಡಿದ. ಕೈ ಹೊರಕ್ಕೆ ಬರಬೇಕಾ?, ಹಾಗಾದರೆ, ಮೊತ್ತ ಮೊದಲು ಕೈಯನ್ನು ಇನ್ನಷ್ಟು ಒಳಕ್ಕೆ ತೂರಿಸಿ ಎಂಬ ಸಜೆಶನ್ ಕೊಟ್ಟ, ಕೂಲಾಗಿ!
ಇದೊಳ್ಳೆ ಪಚೀತಿ ಆಯ್ತಲ್ಲ ಮಾರಯ್ರೇ, ನಾನಿಲ್ಲಿ ಮುಷ್ಟಿ ಹೊರಕ್ಕೆಳೆಯಲಾರದೆ ಪೇಚಾಡುತ್ತಿದ್ದೇನೆ. ಇವನೊಬ್ಬ ಬಂದ ಇನ್ನೂ ಒಳಕ್ಕೆ ತೂರಿಸುವ ಬುದ್ದಿವಂತಿಕೆ ನೀಡಲು! ವ್ಯಕ್ತಿಗೆ ಇರ್ರಿಟೇಶನ್ ಆಯ್ತು.
ನಾನು ಹೇಳಿದಷ್ಟು ಕೇಳಿ, ಮೊದಲು ಕೈ ಇನ್ನಷ್ಟು ಒಳಕ್ಕೆ ತೂರಿಸಿ. ನಿಮಗೆ ಪ್ರಾಬ್ಲೆಂ ಸೋಲ್ವ್ ಆಗ್ಬೇಕಾ ಬೇಡ್ವಾ? ನೆರೆಯಾತನೂ ಬಿಟ್ಟುಕೊಡಲಿಲ್ಲ.
ಸರಿ. ಬೇರೆ ಉಪಾಯ ಕಾಣದೆ ವ್ಯಕ್ತಿ ಕೈಯನ್ನು ಕುಡಿಕೆಯೊಳಕ್ಕೆ ಇನ್ನಷ್ಟೂ ತೂರಿಸಿದ.
ಈಗ ಮುಷ್ಟಿ ಸಡಿಲ ಬಿಟ್ಟು ನಾಣ್ಯಗಳನ್ನೆಲ್ಲ ಬಿಟ್ಟು ಬಿಡಿ ನೆರೆಯಾತನ ಕನ್ಸಲ್ಟೆನ್ಸಿ ಮುಂದುವರಿಯಿತು.
ವ್ಯಕ್ತಿ ಹಾಗೇ ಮಾಡಿದ.
ಈಗ ಉದ್ದಕ್ಕೆ ಚೂಪಾಗಿ ಬೆರಳುಗಳನ್ನೆಲ್ಲಾ ಒಟ್ಟಾಗಿಸಿ ನಿದಾನವಾಗಿ ಕೈಯನ್ನು ಹೊರಕ್ಕೆಳೆದುಕೊಳ್ಳಿ
ವ್ಯಕ್ತಿ ಅದನ್ನೂ ಮಾಡಿದ. ಕೈ ಹೊರಕ್ಕೆ ಬಂತು. ಎಲ್ಲರಿಗೂ ಹರ್ಷ. ಆದರೆ ವ್ಯಕ್ತಿಗೆ ಮಾತ್ರ ಯಾಕೋ ಬೇಜಾರು. ಕೈ ಹೊರಕ್ಕೆ ಬಂತು, ಆದ್ರೆ ಕಾಸು ಅಲ್ಲೇ ಉಳಿಯಿತಲ್ವಾ? ಅಂತ.
ನೆರೆಮನೆಯವ ಕುಡಿಕೆಯನ್ನು ಅಡ್ಡಕ್ಕೆ ಬಗ್ಗಿಸಿದ. ಠಣ, ಠಣ, ಠಣ, ನಾಣ್ಯಗಳು ಹೊರಬಿದ್ದವು. ವ್ಯಕ್ತಿ ಅಚ್ಚರಿಯಿಂದ ನೆರೆಮನೆಯಾತನನ್ನೇ ಬೆರಗಿನಿಂದ ನೋಡುತ್ತಾ ಕುಳಿತ!  [ ಆಧಾರ: ‘ದೇಶ ವಿದೇಶಗಳ ವಿನೋದ ಕತೆಗಳು’ (ಸಂ: ಶಾಂತಾರಾಮ ಸೋಮಯಾಜಿ)]
ಹಣವೂ  ನಮ್ಮದೇ ಕುಡಿಕೆಯೂ ನಮ್ಮದೇ; ಆದರೂ ಇಂದಿನ ಈ ಮಾಯಾ ಜಗತ್ತಿನಲ್ಲಿ ಕುಡಿಕೆಯಿಂದ ನಮ್ಮದೇ ಹಣವನ್ನು, ಎಲ್ಲೆಲ್ಲೋ ಮಾಯವಾಗದಂತೆ ವಾಪಾಸು ಪಡೆಯಬೇಕಾದರೂ ಮಾಹಿತಿ, ಬುದ್ಧಿ, ಜಾಣ್ಮೆ ಬೇಕಾಗುತ್ತದೆ.  ಉಳಿತಾಯಕ್ಕೆ ಹಲವು ಹಾದಿಗಳು ಹುಟ್ಟಿಕೊಂಡಂತೆ ಅದನ್ನು ಕಳೆದುಕೊಳ್ಳಲೂ ಅಷ್ಟೇ ಹಾದಿಗಳು ಹುಟ್ಟಿಕೊಂಡಿವೆ. ಮೊದಲಿನಂತೆ ಒಂದು ದೊಡ್ಡ ಪಾವಲಿಯನ್ನು ಕುಡಿಕೆಯಲ್ಲಿ ‘ಟಣ್..’ ಎನ್ನಿಸಿ ನಿರಾಳನಾದ ಹಾಗೆ, ಈಗ ಎಲ್ಲೋ ಒಂದು ಕಡೆ ಎಪ್ಪ್ಲಿಕೇಶನ್ನಲ್ಲಿ ಸಹಿ ಹಾಕಿ ಚೆಕ್ ಕೊಟ್ಟುಬಿಟ್ಟರೆ ಸಾಲದು.  ‘ದೇಶದ ಆಥರ್ಿಕ ಪರಿಸ್ಥಿತಿ ಈಗ ಹೇಗಿದೆ? ಮುಂದೆ ಹೇಗೇನೋ? ಉಳಿತಾಯದ ಮೇಲಿನ ಬಡ್ಡಿದರ ಇಳಿಮುಖವಾದರೆ?, ಬೆಲೆಯೇರಿಕೆ ಏರುತ್ತಲೇ ಇದೆ, ಮುಂದೆ ಹೇಗೆ? ಕೊಂಡ ಶೇರು ಮೇಲೇರಬಹುದೇ? ಅಥವ ಮುಳುಗಿಯೇ ಹೋದೀತೇ?’ ಮುಂತಾದ ಹಲವು ಆತಂಕಗಳು. ಒಮ್ಮೆ ರಿಸೆಶನ್, ಒಮ್ಮೆ ವಿತ್ತೀಯ ಗುಳ್ಳೆ- ಜಾಗತಿಕ ಪರಿಸ್ಥಿತಿ ಡೋಲಾಯಮಾನವಾಗಿದೆ. ಇವೆಲ್ಲಾ ನಮ್ಮ ಕೂಡಿಟ್ಟ ಕುಡಿಕೆಯ ಮೌಲ್ಯವನ್ನು ನೇರವಾಗಿ ಕಬಳಿಸುತ್ತವೆ. ದಿನಕ್ಕೊಂದರಂತೆ ಬರುವ ಹೊಸ ಕಾನೂನು, ತೆರಿಗೆ ಪದ್ದತಿ, ತೆರಿಗೆ ವಿನಾಯಿತಿ ಪದ್ಧತಿ – ಎಲ್ಲವೂ ಗೋಜಲು ಗೋಜಲು! ಅರ್ಥವೇ ಆಗಲೊಲ್ಲದು. ಆದರೂ ಅವುಗಳು ನಾವು ಕೂಡಿಟ್ಟ ಕುಡಿಕೆಯನ್ನು ತಟ್ಟದೆ ಇರುವುದಿಲ್ಲ. ಇವೆಲ್ಲಾ ಸಾಲದೆಂಬಂತೆ ಹೂಡಿದ ಇಡುಗಂಟನ್ನೇ ಹೊತ್ತು ಕೊಂಡು ರಾತ್ರಿ-ಬೆಳಗಾಗುವುದರೊಳಗೆ ಮಾಯವಾಗುವ ವಿನಿ ವಿಂಕ್ ಶಾಸ್ತ್ರಿಗಳು, ಬಡ್ಡಿ ಬಾಬಣ್ಣರು! ಅಲ್ಲದೆ, ವೈವಿಧ್ಯಮಯ ಆಕರ್ಷಕ ಜಾಹೀರಾತುಗಳು! ಬೆನ್ನು ಬಿಡದ ಏಜೆಂಟರು! ದುಡಿದು ಸಂಪಾದಿಸುವುದೇ ಕಷ್ಟವಾದ ಕಾಲದಲ್ಲಿ ಅದನ್ನು ಕಾಪಿಡುವುದೂ ಅಷ್ಟೇ ಕಷ್ಟವೆಂಬ ಅರಿವು ಭೀತಿ ಹುಟ್ಟಿಸುತ್ತದೆ.  ಮತ್ತೆ ಹೇಗೆ ನಮ್ಮ ಕನಸುಗಳ ಸಾಕಾರ?
ಇಂದಿನಿಂದ ಪ್ರತೀ ಭಾನುವಾರ,  ‘ಕಾಸು ಕುಡಿಕೆ’ – ಹೀಗೊಂದು ನಮ್ಮ ಕಾಲಂ!  ನಮ್ಮ ನಮ್ಮ ಕಾಸಿನ ಕುಡಿಕೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗುವಂತೆ ಸಂಬಂಧಪಟ್ಟ ವಿತ್ತ ವಿಚಾರಗಳನ್ನು ವಿವೇಚಿಸುವ, ವಿಶ್ಲೇಷಿಸುವ ಒಂದು ವೇದಿಕೆ. ಜನಸಾಮಾನ್ಯರ ದೈನಂದಿನ ಆರ್ಥಿಕ ವ್ಯವಸ್ಥೆಗೆ ಸಾಧಕ-ಬಾಧಕವಾಗುವಂತಹ ಆಗು-ಹೋಗುಗಳೆಲ್ಲವೂ ಇಲ್ಲಿ ಪ್ರಸ್ತುತ. ಪ್ರತಿ ವಾರವೂ, ಪ್ರಚಲಿತವಾಗಿರುವಂತಹ ವಿತ್ತೀಯ, ಆರ್ಥಿಕ ವಿಚಾರಗಳನ್ನು ಚರ್ಚೆಗೆ ಎತ್ತಿಕೊಳ್ಳಲಾಗುವುದು. ಇಲ್ಲಿ ದೇಶದ, ಜಾಗತಿಕ ಆರ್ಥಿಕತೆ, ಹಣಕಾಸು ವ್ಯವಸ್ಥೆ, ಕರನೀತಿಗಳು, ವಿತ್ತೀಯ ಕಾನೂನುಗಳು, ಬಿಸಿನೆಸ್ ಜಗತ್ತು, ಶೇರು-ಮಾರುಗಳಂತಹ ಹೂಡಿಕೆಯ ವಿವಿಧ ಹಾದಿಗಳು, ಇತ್ಯಾದಿ ನಮ್ಮ ಕುಡಿಕೆಗೆ ಸಂಬಂಧ ಪಡುವಂತಹ ಎಲ್ಲಾ ವಿಷಯಗಳನ್ನೂ ಸರಳವಾಗಿ, ಎಳೆ ಎಳೆಯಾಗಿ ಯಾವುದೇ ‘ಇಸಂ’ಗಳ ಹಂಗಿಲ್ಲದೆ ಚರ್ಚಿಸಲಾಗುವುದು. ಓದುಗರಿಗೆ ಇಷ್ಟವಾಗುವುದು, ಪ್ರಯೋಜನಕಾರಿಯಾಗುವುದು ಎಂದು ನಂಬಿದ್ದೇವೆ.
ಹ್ಹಾಂ! ಇನ್ನೊಂದು ಮುಖ್ಯ ವಿಚಾರವೇನೆಂದರೆ, ಇದೊಂದು ಏಕಮುಖಿ ಭಾಷಣವಲ್ಲ. ಓದುಗರು ಕಳುಹಿಸುವ ಪ್ರಶ್ನೆಗಳನ್ನು, ಗೊಂದಲಗಳನ್ನು, ವಿತ್ತೀಯ ತವಕ ತಲ್ಲಣಗಳನ್ನು ಚರ್ಚೆಗೆ ಆದ್ಯತೆಯೊಂದಿಗೆ ಎತ್ತಿಕೊಳ್ಳಲಾಗುವುದು. ಇ-ಮೈಲ್ ಮುಖೇನ ನನ್ನನ್ನು  ([email protected]) ಸಂಪರ್ಕಿಸಬಹುದು.
ನಮಸ್ಕಾರ.
ಇತಿ,
ಜಯದೇವ ಪ್ರಸಾದ ಮೊಳೆಯಾರ.

‍ಲೇಖಕರು avadhi

February 28, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: