ಜಯದೇವ ಪ್ರಸಾದ ಮೊಳೆಯಾರ ಕಥೆ: ಬಿಪಾಶಾ ಪ್ರಸಂಗ

– ಜಯದೇವ ಪ್ರಸಾದ ಮೊಳೆಯಾರ.

ಹೆಸ್ರು ತಿರುಮಲೇಶ್. ಕೋವಳ್ಳಿ ತಿರುಮಲೇಶ್ ಪೂರ್ತಿ ಹೆಸ್ರು. ಕೋ.ತಿ ಅಂತ ಶಾರ್ಟ್ ಹೆಸ್ರು. ವಯಸ್ಸು 42; ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿ. ದಿನಾ ಬೆಳಗ್ಗೆ ಎದ್ದು ತಯಾರಾಗಿ, ಕಾಪಿ, ತಿಂಡಿ ಮುಗ್ಸಿ ಆಫೀಸ್ ಗೆ  ಹೋಗ್ತಾನೆ. ಸಂಜೆವರ್ಗೂ ಕತ್ತೆ ಥರಾ ಗುಲಾಮಿ ಮಾಡಿ ಮನೆಗೆ ತಲುಪುವಾಗ ರಾತ್ರಿಯಾಗಿರತ್ತೆ. ಆಯಾಸವಾಗಿರತ್ತೆ. ಹೆಂಡ್ತಿ ಜೊತೆ ಸರಿಯಾಗಿ ಮಾತನಾಡಲು ತಾಳ್ಮೆ, ಉತ್ಸಾಹ ಇರುವುದಿಲ್ಲ. ಸೀದಾ ಸ್ನಾನ ಊಟ ಮಾಡಿ ಸ್ವಲ್ಪ ಟಿ.ವಿ ನೋಡ್ತಾನೆ. ಎಷ್ಟೋ ಬಾರಿ ಅಲ್ಲೇ ಸೋಫಾದಲ್ಲಿ ನಿದ್ರೆ ಬೀಳ್ತಾನೆ.

ಮಕ್ಳು ಇಬ್ರೂ ವಿದ್ಯಾಭ್ಯಾಸ ಅಂತ ಮನೆ ಬಿಟ್ಟು ಎಲ್ಲೆಲ್ಲೋ ಇದ್ದಾರೆ. ಮನೇಲಿ ಅವ್ನೂ ಮತ್ತು ಅವ್ನ ಹೆಂಡ್ತಿ ಮಾತ್ರ. ಅವ್ಳು ಅಡಿಗೆ ಮನೇಲೇ ಇರ್ತಾಳೆ.  ಗಂಡ ತಂದ್ಕೊಟ್ಟ ತರ್ಕಾರಿ ಹೆಚ್ಚಿ ಸಾಂಬಾರ್ ಮಾಡ್ತಾಳೆ, ಅನ್ನ ಬೇಯಿಸ್ತಾಳೆ, ಬೇಗ ಬೇಗ ಅಡಿಗೆ ಕೆಲ್ಸ ಮುಗ್ಸಿ ಒಬ್ಳೇ ಕೂತು ಟಿ.ವಿ ನೋಡ್ತಾಳೆ. ಗಂಡ ಬರೋವರ್ಗೂ ಬೇರೇನೂ ಕೆಲ್ಸ ಇರೋದಿಲ್ಲ. ಬಂದ್ಮೇಲೆ ಊಟ ಬಡಿಸ್ತಾಳೆ. ಗಂಡ ಊಟ ಮಾಡಿ ಟಿ.ವಿ ನೋಡ್ತಾನೆ. ಹೆಂಡ್ತಿಯ ಮುಖ ನೋಡಲ್ಲ. ಆಗ ಹೆಂಡ್ತಿ ಒಮ್ಮೊಮ್ಮೆ ಕೋಪ ಮಾಡ್ತಾಳೆ, ಜಗಳ ಮಾಡ್ತಾಳೆ. ಆದ್ರೆ ಅದು ಯಾವುದೂ ಪ್ರಯೋಜನ ಇರಲ್ಲ. ಅದು ಇಬ್ರಿಗೂ ಗೊತ್ತು. ಆದ್ರೂ ಆಗಾಗ ಜೋರಾಗಿ ಜಗಳ ಆಡ್ತಾರೆ. ಗಂಡ ಕ್ಯಾರ್ ಮಾಡಲ್ಲ ಅಂತ ಹೆಂಡ್ತಿ ಕಂಪ್ಲೈಂಟ್; ಹೆಂಡ್ತಿ ರಕ್ತ ಕುಡಿತಾಳೆ ಅಂತ ಗಂಡನ ಕಂಪ್ಲೈಂಟ್.

ಸಂಡೇನೂ ಅಷ್ಟೇ. ಬೆಳಗ್ಗೆ ಕಾಪಿ-ತಿಂಡಿ ಮುಗ್ಸಿ ಪೇಪರ್ ಓದ್ತಾನೆ. ಆ ಮೇಲೆ ಟಿ.ವಿ ನೋಡ್ತಾನೆ. ಆಮೇಲೆ ಪುನಃ ಪೇಪರ್ ತಿರುವಿ ಹಾಕ್ತಾನೆ, ಆಮೇಲೆ ಟಿ. ವಿ ನೋಡ್ತಾನೆ… ಮನೆ ಡ್ರಾಯಿಂಗ್ ರೂಮಲ್ಲೇ ಕೂತಿರ್ತಾನೆ. ಅಲ್ಲೇ ಇಡೀ ದಿನ ಬೋರ್ ಹೊಡ್ದುಕೊಂಡು ಟಿ.ವಿ, ಪೇಪರ್, ಪತ್ರಿಕೆ ಎಲ್ಲಾ ಜಾಲಾಡ್ತಾ ಇರ್ತಾನೆ. ಹೆಂಡ್ತಿ ಅಡಿಗೆ ಮನೆಯಲ್ಲಿ ಕೂತ್ಕೊಂಡು ಅಡಿಗೆ ಮಾಡ್ತಾ ಇರ್ತಾಳೆ. ಒಂದೊಂದು ದಿನ ಹೊರಗ್ಬಂದು ಯಾವ್ಯಾವ್ದೋ ಕಾರಣಕ್ಕೆ ಗಂಡನ್ಜೊತೆ ಜಗಳ ಆಡಿ ಮತ್ತೆ ಸುಮ್ನಾಗ್ತಾಳೆ.

ಕೋ.ತಿ ಗೆ ಜೀವನಾನೇ ಬೋರ್ ಆಗಿರತ್ತೆ. ಜಿಗುಪ್ಸೆ ಬಂದಿರತ್ತೆ. ಇದೆಲ್ಲದ್ರಿಂದ ಹೊರಗ್ಬರ್ಬೇಕು ; ಜೀವನದಲ್ಲಿ ಸಂತೋಷ ಪಡೀಬೇಕು ಮತ್ತೆ ಅದು ಪಡಿಯೋಕೆ ಏನಾದ್ರು ಮಾಡ್ಬೇಕು. ಆದ್ರೆ ಏನ್ ಮಾಡೋದು ಅಂತ ಕೆಲ ದಿನಗಳಿಂದ ಯೋಚ್ನೆ ಮಾಡ್ತಾ ಇರ್ತಾನೆ.

ಹಾಗೇ ಯೋಚನೆ ಮಾಡ್ತಾ ಮಾಡ್ತಾ, ಒಂದಿನ ಕೋ.ತಿ ಗೆ  ಇದ್ದಕ್ಕಿದ್ದ ಹಾಗೆ ಕಥೆ ಬರಿಯೋ ಹುಚ್ಚು ಹಿಡೀತು. ಆದ್ರೆ ಕತೆ ಕಟ್ಟೋದು ಅಂದ್ರೆ ಹೇಗೆ? ಎನಾದ್ರೂ ಪ್ಲಾನು ಗೀನು ಬೇಕಲ್ವ? ಯಾವ್ ಥರಾ ಬರ್ಯೋದು ಅಂತಾ ಯೋಚಿಸ್ತಾ ಕೂತು ಬಿಟ್ಟ. ಎಷ್ಟ್ರಮಟ್ಟಿಗೆ ಅಂದ್ರೆ, ಟಿ.ವಿ-ಪೇಪರ್ ಬಿಟ್ಟು ಯಾವಾಗ್ಲೂ ಕೂತ್ಕೊಂಡು ಯೋಚಿಸ್ತಾ ಇರ್ತಿದ್ದ. ಮನೆಗೆ ತರೋ ಸಾಮಾನು ಕೂಡ ತರೋದು ನಿಲ್ಲಿಸ್ಬಿಟ್ಟು ಕನಸು ಕಾಣ್ತಾ ಕೂರ್ತಿದ್ದ. ಕೋ.ತಿಯ ಪತ್ನಿಗೆ ಹುಟ್ತು ಅನುಮಾನ. ಈ ಥರ ಯವತ್ತೂ ಆಗಿದ್ದಿಲ್ಲ. ಏನೋ ಮಿಡ್ಲೇಜು ಪ್ರಾಬ್ಲಂ ಇರ್ಬೇಕು. ಎಲ್ಲೋ ಆಫೀಸ್ ನಲ್ಲಿ ಹೊಸ ರಿಕ್ರೂಟ್ ಯಾರೋ ಬಂದೀದಾಳೆ. ಒಂದ್ ನಾಲಕ್ ದಿನ ಇರತ್ತೆ ಕೋತಿ ಚೇಷ್ಟೆ ಅಂತ ಶುರು ಶುರೂಗೆ ಸುಮ್ನಿದ್ಳು. ಆದ್ರೆ ಕೋ.ತಿ ಕತೆ ಮಾತ್ರ ಸುಧಾರ್ಸೋ ಹಂಗೆ ಕಾಣ್ಲಿಲ್ಲ. ಎಷ್ಟ್ದಿನಾ ಅಂತ ಅವ್ಳೇ ಅಂಗ್ಡೀಗೆ ಹೋಗಿ ಸಾಮಾನ್ ತರ್ತಾಳೆ? ಒಂದಿನಾ ಸಂಡೆ ಬೆಳಗ್ಗೆ ಆಲೋಚಿಸ್ತಾ ಕೂತಿದ್ದ ಕೋ.ತಿ ಹತ್ರ ಅವ್ಳು ಜೋರಾಗಿ ಕೇಳೇ ಬಿಟ್ಳು.

“ರೀ, ಏನ್ರೀ ಇದು ಈ ವಯಸ್ನಲ್ಲಿ? ಈ ಥರಾ ಕುಂತ್ರೆ ಆ ರಂಭೆ ಸಾಮಾನ್ ತಂದ್ ಹಾಕ್ತಾಳ? ಇಲ್ಲಿ ಊಟ ಮಾಡ್ಬೇಕೂಂದ್ರೆ ಈಗ್ಲೇ ಹೋಗಿ ಟೊಮೆಟೋ ತರಬೇಕು” ಅಂತ ಅಪ್ಪಟ ವಾಸ್ತವವಾದಿ ಥರಾ ಹೇಳೇ ಬಿಟ್ಳು.

” ರಂಭೆ, ಊರ್ವಶಿ ಎಲ್ಲಾ ಯಾರೂ ಇಲ್ಲ. ನಾನು ಕತೆ ಬರೀಬೇಕು ಅಂತ ಸೀರಿಯಸ್ಸಾಗಿ ಯೋಚಿಸ್ತಾ ಇದೀನಿ” ಅಂತ ಕೋತಿ ತನ್ನ ಹಂಬಲವನ್ನ ಅವಳಲ್ಲಿ ಅರುಹಿದ. ಒಂದಾದ್ರೂ ಕತೆ ಬರ್ದು ಒಂದು ಪತ್ರಿಕೆನಲ್ಲಿ ಪ್ರಿಂಟಾದ್ರೆ ಲೈಫ್ನಲ್ಲಿ ಹೊಸ ಉತ್ಸಾಹ ತುಂಬುತ್ತೆ,  ಜನ್ಮ ಸಾರ್ಥಕ ಅಗತ್ತೆ ಅಂತ ಹೇಳ್ದ. ಆದ್ರೆ ಒಂದೇ ಒಂಡು ಐಡಿಯಾ ಹೊಳೆಯೋದಿಲ್ಲಾ ಅಂತ ಗೋಳಾಡ್ದ. ಹೆಂಡ್ತಿಗೆ ಕನ್ವಿನ್ಸ್ ಆಗೋಯ್ತು ಇದು ಯಾವ ಆಫೀಸ್ ಹುಡ್ಗಿ ಚಕ್ಕರ್ ಅಲ್ಲ ಅಂತ. ಅದೇನೋ ಅವತ್ತು ಅವ್ಳ ಮನ ಮರುಗೋಯ್ತು.

ಸೋ. ಅವ್ಳು ಜಗಳ ಸ್ಟಾರ್ಟ್ ಮಾಡ್ಲಿಲ್ಲ. ಸಹಾನುಭೂತಿ ತೋರ್ಸಿದ್ಲು. “ಸುಮ್ನೆ ಕೂತ್ಕೊಂಡ್ರೆ ಆಗ್ತದೇನ್ರೀ, ಒಂದ್ನಾಲಕ್ಕು ಕತೆ ಓದಿದ್ರೆ ಇನ್ನೊಂದು ಬರೆಯೋದು ಏನ್ ಕಷ್ಟ? ” ಅಂತ ಒಂದೆರಡು ಪತ್ರಿಕೆ ತಂದು ಕೊಟ್ಳು. “ಇದೆಲ್ಲ ಫಸ್ಟ್ ಓದಿ, ಆಮೇಲೆ ಬರೀರಿ ಒಂದು ಕತೆ. ಆದ್ರೆ ಅದ್ಕಿಂತ್ಲೂ ಫಸ್ಟ್ ಹೋಗಿ ಒಂದ್ಕಿಲೋ ಟೊಮಟೋ ತಗೊಂಬನ್ನಿ, ಹಾಗೇ ಸೊಪ್ಪು, ಮೆಣಸಿನ ಕಾಯಿ.” ಅಂದಳು ವಾಸ್ತವವಾದಿ.

ಕತೆಯ ಯೋಚನೆಯಲ್ಲೇ ಟೊಮಟೊ ಬಂತು. ಕತೆಯ ಯೋಚನೆಯಲ್ಲೇ ಊಟವೂ ಮುಗಿಯಿತು.

ಊಟದ ಬಳಿಕ ಕತೆ ಓದಲು ಕುಳಿತ ತಿರುಮಲೇಶ್…

*                        *                                   *

ಒಂದಾನೊಂದು ರಾಜ್ಯ. ಆ ರಾಜ್ಯಕ್ಕೆ ಒಬ್ಬ ರಾಜ. ಅವನಿಗೊಬ್ಬಳು ರಾಣಿ. ಬಹಳ ವರ್ಷಗಳಾದರೂ ಅವರಿಗೆ ಮಕ್ಕಳೇ ಆಗಲಿಲ್ಲ. ಎಲ್ಲಾ ದೇವರ ಪೂಜೆ, ಹರಕೆ ಎಲ್ಲಾ ಮಾಡಿದ್ದಾಯಿತು. ಏನೂ ಪ್ರಯೋಜನ ಆಗಲೇ ಇಲ್ಲ. ಹಾಗಾಗಿ ಅವರು ದೇವರನ್ನೇ ನಂಬಿ ನಂಬಿಕೆಯಿಂದ ದಿನ ದೂಡುತ್ತಿದ್ದರು.

ಒಂದು ದಿನ ಒಬ್ಬ ಋಷಿ ಅವನ ಆಸ್ಥಾನಕ್ಕೆ ಬರುತ್ತಾನೆ.

ಬಂದು ಹೇಳುತ್ತಾನೆ, ” ಹೇ ರಾಜನ್,….. ನೀನು ಹನುಮಂತನನ್ನು ಸೇವಿಸು. ಕರುಣಿಯಾದ ಅವನು ನಿನಗೆ ಒಬ್ಬ ಅತ್ಯಂತ ಪ್ರತಿಭಾಶಾಲಿ ಪುತ್ರನನ್ನು ಕರುಣಿಸುತ್ತಾನೆ.”

ರಾಜನಿಗೆ ಆಶ್ಚರ್ಯ. “ವಾಯುಪುತ್ರನಿಂದ ಪುತ್ರಪ್ರಸಾದವೇ? ಅಪ್ಪಟ ಬ್ರಹ್ಮಾಚಾರಿಯಾದ ಆಂಜನೇಯನಿಗೆ ಓ.ಬಿ.ಜಿ ಯಲ್ಲಿ ಒಂದು ಎಂ.ಬಿ.ಬಿ.ಎಸ್ ಕೂಡಾ ಇಲ್ಲ. ಎಟ್ಲೀಸ್ಟ್ ಒಂದು ಮದ್ವೇನಾದ್ರೂ ಆಗಿದ್ರೆ ಬೇರೆ ಮಾತು….” ಅಂತ ಅನುಮಾನ ತೋರಿದ.

ರಾಜನ ಮಾತು ಕೇಳಿ ಋಷಿಗೆ ಎಕ್ ದಮ್ ಅವನ ಬಾಸು ವಿಶ್ವಾಮಿತ್ರ ಸ್ಟೈಲ್ನಲ್ಲೇ ಕೋಪಾ ಬಂತು.” ಹೌದು. ಆಂಜನೇಯನೇ ! ನನ್ನ ಮಾತು ಸುಳ್ಳಾಗದು. ಅವನನ್ನು ಸೇವಿಸು ಇಲ್ಲಾ, ನಿರ್ವಂಶಿಯಾಗಿ ಸಾಯಿ. ಮಕ್ಳಿದ್ದು ಕೊರಗಿ ಸಾಯ್ತೀಯಾ ಅಥ್ವಾ ಮಕ್ಳಿಲ್ದೆ ಕೊರಗಿ ಸಾಯ್ತೀಯಾ..? ದ ಚಾಯ್ಸ್ ಈಸ್ ಯುವರ್ಸ್…” ಅಂತ ಗುಡುಗಿನಂತೆ ಗುಡುಗಿ ಮಿಂಚಿನಂತೆ ಕಣ್ಮರೆಯಾದ.

ಹಾಗಾಗಿ, ಅವರು ಆಂಜನೇಯ ಸ್ತುತಿ ಆರಂಭಿಸಿದರು. ಮುನಿಗಳ ಶಕ್ತಿಯೋ, ರಾಜನ ಭಕ್ತಿಯೋ- ಅಲ್ಲ, ಎರಡೂ ಅಲ್ದೆ, ಬರೇ ರಾಣಿಯ ಯುಕ್ತಿಯೋ; ಅಂತೂ ರಾಣಿ ಗರ್ಭವತಿಯಾದಳು. ಒಂದು ಒಳ್ಳೇ ದಿನ ಆಂಜನೇಯನಂಥ ಗಂಡು ಮಗುವಿಗೆ ಜನ್ಮವಿತ್ತಳು. ಮಗು ಹುಟ್ಟಿದ ಕೂಡ್ಲೇ ಹಾರೋ ಚಪಲ, ಅವನಿಗೆ. ಆಡುತ್ತಾ ತೇಲುತ್ತಾ ಹಾರಾಡುತ್ತಿದ್ದ. ಹಿಡಿಯಲು ಬಂದರೆ ಮಾಯವಾಗುತ್ತಿದ್ದ. ಮಾನವರೂಪಿನಿಂದ ಜಿಂಕೆಯಾಗುತ್ತಿದ್ದ, ಹಂದಿಯಾಗುತ್ತಿದ್ದ; ಇಲ್ಲಾ ಹಕ್ಕಿಯಾಗಿ ಹಾರಿ ಮಾಯವಾಗುತ್ತಿದ್ದ. ಬಹುರೂಪೀ ಕಲೆ ಸಿದ್ಧಿಸಿತ್ತು ಅವನಿಗೆ. ಒಂದು ದಿನ ರಾಜಭಟರು ಹಿಡಿಯಲು ಬೆಂಬತ್ತಿ ಬರುವಾಗ ಹಕ್ಕಿಯಾಗಿ ಹಾರತೊಡಗಿದ. ಸುಯ್ ಸುಯ್ ಸುಯ್…ಸುಯ್ ಸುಯ್ ಸುಯ್….ಸುಯ್ ಸುಯ್ ಸುಯ್…ಅಂತ.

*                       *                             *

…..ತಿರುಮಲೇಶ್ ಓದ್ತಾನೇ ಇದ್ದ. ಹಡಗಿನಂತೆ ತುಂಬಿಸಲ್ಪಟ್ಟ ಹೊಟ್ಟೆ, ಮಧ್ಯಾಹ್ನದ ಮುಹೂರ್ತ ಬೇರೆ. ಸುಯ್…ಸುಯ್…. ಮೇಲ್ನಿಂದ ಫ್ಯಾನ್ ಒಂದೇ ಥರ ಸದ್ದು ಮಾಡ್ತಾನೇ ಇತ್ತು. ಸುಯ್ ಸುಯ್ ಸುಯ್…ಸುಯ್ ಸುಯ್ ಸುಯ್… ಅಂತ.

ಅಲ್ಲೇ ನಿದ್ದೆಗೆ ಜಾರಿದ ತಿರುಮಲೇಶ್…!!!

ಸುಯ್….ಸುಯ್…ಎಂದು ತಿರುಮಲೇಶ್ ನಿದ್ದೆಯಲ್ಲಿ ಹಾರತೊಡಗಿದ- ಹಕ್ಕಿಯಂತೆ; ಬಾನಾಡಿಯಾಗಿ, ಬಾರೀ ಖುಷಿಯಾಯ್ತು ಅವಂಗೆ. ಹಾರ್ತಾ ಹಾರ್ತಾ ಹಿರಿ ಹಿರಿ ಹಿಗ್ಗಿದ. ಹಿಗ್ಗಿ ಹಿಗ್ಗಿ ವಿಮಾನ ಥರಾ ಊದ್ಕೊಂಡು ಬಿಟ್ಟ. ದೊಡ್ಡ ಬೋಯಿಂಗ್ ವಿಮಾನಾನೇ ಆಗ್ಬಿಟ್ಟ. ಕೆಳಗೆ, ಆದಿಶೇಷ, ಅವನ್ ತಲೆ ಮೇಲೆ ಭೂಮಿ, ಅದ್ರ ಮೇಲೆ ಸಕಲ ಜೀವಾಚರರು-ಅಂದ್ರೆ, ನೀವು ನಾನು, ಅವನ್ಹೆಂಡ್ತಿ, ಇನ್ನು ಎಲ್ಲಾರೂ- ಎಲ್ಲರ್ಗೂ ಮೇಲೆ ನಮ್ಮ ವಿಮಾನೇಶ್! ಹಾರಾಡ್ಕೊಂಡೇ ಎಲ್ಲಾ ಊರೂ ಎಲ್ಲಾ ಊರೂ ಸುತ್ತ ತೊಡಗಿದ- ತಾನು ಹುಟ್ಟಿದ್ ಊರು, ಪ್ರೈಮರಿ ಶಾಲೆ, ಕಾಲೇಜು, ಶೀಲಾ ಮನೆ, ಪ್ರಭಾ ಮನೆ, ಗೀತಾ ಮನೆ, ಲಕ್ಷ್ಮಿ ಮನೆ, ಅರುಂಧತಿ ಮನೆ, ಪ್ರಮೀಳಾ ಮನೆ…ಎಲ್ಲಾ ನೋಡ್ಕೊಂಡು ಹಾರ್ತಾ ಬರ್ಬೇಕಾದ್ರೆ ಕೆಳಗೆ ಒಂದ್ಕಡೆ ಜನಾ ಗುಂಪು ಸೇರಿತ್ತು. ಎಲ್ಲಾರೂ ಸೇರ್ಕೊಂಡು ಏನೋ ನೋಡ್ತಾ ಇದ್ರು. ‘ಅಲ್ಲೇನು ಕೋತಿ ಕುಣಿತೈತಾ..?!  ಅಂದ್ಕೊಂಡ.

ಏನೂಂತ ನೋಡೋಕೆ ವಿಮಾನ ಕೆಳಗ್ಬಂತು. ಕಣ್ಣು ಪಿಳುಕಿಸ್ತು….ಕೆಳಗೇನು ನೋಡ್ತು ಅಂತೀರಾ…” ಬಿಪಾಶಾ ಬಸು !!!!!!” ಶೂಟಿಂಗ್ ನಡೀತಾ ಇದೆ. ಕ್ಯಾಮರ, ಡೈರೆಕ್ಟರ್, ಲೈಟಿಂಗ್ ಎಲ್ಲಾ ಇದೆ. ಬಿಪಾಶ ನಾರ್ಮಲ್ಲಾಗೇ ತನ್ನ ಇಲ್ಲದ ಡ್ರೆಸ್ಸ್ನಲ್ಲೇ ಇದ್ಳು. ಕೋ.ತಿ ಹೃದಯ ಬಡಿತ ಏರ್ತು..ಡಬಾ ಡಬಾ ಅಂತ- ನಮ್ಮೂರ್ನಗೆ ಅವ್ಲಕ್ಕಿ ಮಿಲ್ಲು ಇದ್ಯಲ್ಲ ಹಂಗೆ. ಮೊದ್ಲೇ ಕೋತಿ, ಅದ್ರಲ್ಲೂ ಹಾರಾಡೊ ಕೋತಿ, ಅದ್ರಲ್ಲೂ ಹೆಂಡ್ತಿ ಜೊತಿಗಿಲ್ದಿರೋ ಹಾರಾಡೋ ಕೋತಿ…ಸೀದಾ ಡೈವ್ ಹೊಡ್ದ ಬಿಪಾಶನ್ನ ತಬ್ಕೊಳೋಕೆ

ಕೆಳ್ಗಿರೋ ಜನ್ರೆಲ್ಲಾ ಹೆದ್ರೇ ಹೋದ್ರು. ಮೇಲ್ಗಡೇಂದ ಒಂದು ಕೋತಿ ಥರಾ ಕಾಣ್ಸೋ, ಬಕ್ಕ ತಲೆ, ದೊಡ್ ಹೊಟ್ಟೆ, ಮಿಡ್ಲೇಜು ಬೋಯಿಂಗು ಸೀದಾ ಡೈವ್ ಹೊಡೀತಿದೆ ಮೈಮೇಲೆ…!! ಜನ್ರೆಲ್ಲಾ ಇದ್ವೋ ಸತ್ವೋ ಅಂತ ದಿಕ್ಕಾಕೆಟ್ಟು ಒಡೋದ್ರು. ಬಿಪಾಶಾ ನೋಡ್ಕೊಂಡು, ಮೈಬಿಸಿ ಮಾಡ್ಕೊಂಡು ಮನ್ಸಲ್ಲೇ ಮಂಡಿಗೆ ತಿಂತಿದ್ದೋರ್ಗೆಲ್ಲಾ ವಾಂತಿ ಬಂದ್ ಹಂಗಾಯ್ತು. ದಾರೀ ಗೀರಿ ನೋಡ್ದೆ ಓಡೋದವ್ರೆಲ್ಲಾ ಬಿದ್ಬಿಟ್ರು. ಅತ್ಲಾಗಿ ಡೈರೆಕ್ಟರ್ ಸಾರ್ ಕಟ್ ಕಟ್ ಅಂತಾನೇ ಒಡೋದ್ರು. ಕ್ಯಾಮರಾ, ಲೈಟಿಂಗ್ ವ್ಯವಸ್ಥೆಗಳೆಲ್ಲಾ ಚಂಡಮಾರುತ ಕಂಡ ತೋಟದ್ ಥರ ಅಸ್ತವ್ಯಸ್ತ ಆಗಿ ಬಿದ್ಬಿಟ್ತು. ಲೈಟ್ ಬಾಯ್ಸ್ ಕೆಲವ್ರು ಅದ್ನೇ ಎಡವಿ ಬಿದ್ಬಿಟ್ಟ್ರು.

ಬಿಪಾಶಾ ಮಾತ್ರ ಅದ್ಯಾವ್ನೋ ಹೀರೊ ಬಂದೇ ಬರ್ತಾನೆ ತನ್ನನ್ನ ಕಾಪಾಡೋಕೆ ಅಂತ ಹೆದರ್ಕೊಂಡೆ  ಹೆದರ್ಕೊಂಡೆ ‘ಬಚಾವೋ, ಬಚಾವೋ…” ಅಂತ ಬರ್ದೇ ಇರೋ ಸ್ವರದಲ್ಲಿ ಕಿರುಚಾಡೋಕೆ ಶುರು ಮಾಡ್ಬಿಟ್ಳು. ಇಲ್ದೆ ಇರೋ ಡ್ರೆಸ್ ನೋಡೋಕೆ ಜನಾ ಬಂದಿದ್ರು. ಅದ್ರೆ ಈಗ ಬರ್ದೇ ಇರೋ ಸ್ವರಾ ಕೇಳೋಕೆ ಯಾರೂ ಉಳಿದಿರಲಿಲ್ಲ. ಬರೇ ಕ್ಯಾಮೆರಮ್ಯಾನ್ ಟೊಪ್ಪಿ ಮಾತ್ರ ಟ್ರಾಲಿ ಮೇಲೆ ನೇತಾಡ್ತಾ ಇತ್ತು.

ಸೂರ್ಯಾನ ಹಿಡ್ಕೊಳೋಕೆ ಹನುಮಂತ ಹಾರ್ಕೊಂಡು ಹೋಗೋ ಥರಾ ನಂ ಕೋತಿ ತನ್ನ ಬಿಪಾಶಾನ ಹಿಡ್ಕೊಳೋಕೆ ಉಲ್ಕೆ ತರಾ ಧಾವಿಸಿ ಬರ್ತಾ ಇದ್ದ. ಹತ್ರ ಹತ್ರ ಬರ್ತಾ ಇದ್ದ ಹಂಗೆ ಬಿಪಾಶ ಹೆದ್ರಿ ಮೂರ್ಚೆ ಹೋಗಿ ಬಿದ್ದೇ ಬಿಟ್ಳು. ಸದ್ಯ ವಿಮಾನಾವತಾರವಾಗಿದ್ದು ಛ್ಯಾಲೆಂಜರ್ ಥರಾ ಭೂಮಿಗೆ ಬೀಳ್ತಿರೋ ತಿರುಮಲೇಶ್ ಗೆ ಪರಿಸ್ಥಿತಿಯ ಅರಿವು ಆಗೋಯ್ತು. ಹಿಂಗೇ ಹೋದ್ರೆ ನಾನೂ ಸಾಯ್ತೀನಿ, ನನ್ ಬಿಪಾಶಾಳೂ ಸಾಯ್ತಾಳೆ ಅಂತ ಗೊತ್ತಾಯ್ತು. ಇನ್ನೇನು ಅವಳ್ ಮೇಲೆ ‘ಢಂ’ ಅಂತ ಬೀಳ್ಬೇಕು, ಅಷ್ಟ್ರಲ್ಲೇ ಒಂದು ಪಾರಿವಾಳದ ರೂಪ ಧರಿಸಿ ಮೆತ್ತಗೆ ಹೂ ತರಾ ಅವಳ ಹೊಟ್ಟೆ ಮೇಲೆ ಸಾಫ್ಟಾಗಿ ಲ್ಯಾಂಡ್ ಆದ. ಲ್ಯಾನ್ಡ್ ಆಗ್ಬಿಟ್ಟು ಅವಳ ಎದೆ ಮೇಲೆಲ್ಲ ಕುಪ್ಪಳ್ಸಿ, ತುಟಿ ಕಡೆ ಮೂತಿ ಉದ್ದ ಮಾಡ್ದ.

ಡೈರೆಕ್ಟರ್ ಕರೀಯೋದನ್ನೇ ಎದುರ್ಗಡೆ ಹೋಟೇಲ್ ಲಾಬ್ಬೀನಲ್ಲೇ ಕಾಯ್ತಾ ಕೂತಿದ್ದ ಜಾನ್ ಅಬ್ರಹಾಂಗೆ ಇದೆಲ್ಲಾ ಸಿಡ್ಲು ಬಡ್ದ ಹಾಗೆ ಕಣ್ಣೆದುರ್ಗೆ ಫ್ಲಾಶ್ ಆಯ್ತು. ಕೂಡ್ಲೇ ಚೇತರ್ಸ್ಕೊಂಡು ಬಂದೇ ಬಂದ ಬಿಪಾಶಾ ಕಡೆ. ಬೇರೆ ನಾಲ್ಕಾರು ಜನಾ ಕೂಡಾ ಸಹಾಯಕ್ಕೆ ಓಡಿ ಬಂದೇ ಬಿಟ್ರು. ಎಲ್ರೂ ಓಡಿ ಬರೋದ್ ನೋಡ್ಬಿಟ್ಟ ಪಾರಿವಾಳಾಗೆ ಸ್ವಲ್ಪ ಭಯ ಆಗೋಯ್ತು. ಇವರ್ ಕೈಗೆಲ್ಲಾ ಸಿಕ್ಬಿಟ್ರೆ ಕತೆ ಆಗೋಯ್ತು ಅಂತ ಭಯ ಪಟ್ಟು ಸೊಳ್ಳೆ ರೂಪ ಧರಿಸ್ಕೊಂಡ. ಯಾಗರ್ೂ ಕಾಣ್ದ ಹಾಗೆ ಬಿಪಾಶ ಸುತ್ತ ಮುತ್ತ ಹಾರಾಡ್ತಾ ಇದ್ದ.

ಯಾರೋ ಡಾಕ್ಟರ್ಗೆ ಫೋನ್ ಮಾಡ್ಬಿಟ್ರು. ನಾಲಕ್ಜನಾ ಅವಳ್ನ ಹೊತ್ಕೊಂಡು ಹೋಟೆಲ್ ರೂಮ್ಗೆ ಕರ್ಕೊಂಡ್ ಹೋದ್ರು. ಸ್ವಲ್ಪ ಹೊತ್ನಾಗೆ ಡಾಕ್ಟರ್ ಬಂದ್ರು ಹೋಟೆಲ್ಗೆ. ಪೇಪನರ್ನೋರು ಠೀವೀನೋರು ಅಂತ ಹೋಟೆಲೆಲ್ಲಾ ಜನಾ ಸೇರಿದ್ರು. ಸಂಬಂಧ ಇರೋರೂ, ಇಲ್ದಿರೋರು ಎಲ್ಲಾ ಅಲ್ಲಿ ಠಳಾಯ್ಸೋಕೆ ಶುರು ಮಾಡ್ಬಿಟ್ರು. ಯಾರ್ಯಾರ್ಗೋ ಟಿ.ವಿ ಗೆ ಇಂಟರ್ವ್ಯೂ ಕೊಡೋಕೂ ಶುರು ಮಾಡಿ ಬಿಟ್ರು. ಒಬ್ಬ ಅಂತೂ ಬಿಪಾಶಾ ಸಾಕ್ಷಾತ್ ದೇವೀನ ಹತ್ತನೇ ಅವತಾರ ಅಂತ್ಲೂ, ಅವ್ಳು ಭೂಲೋಕಕ್ಕೆ ಬಂದು ಹೊಡೀತಾ ಇದ್ದ ಒಂದು ಕಂಠಕಾನ ತನ್ನ ಮಾಯೆಯಿಂದ ಮೊದ್ಲು ಪಾರಿವಾಳ ಮಾಡಿ ಆಮೇಲೆ ಅದನ್ನೂ ನಾಶ ಮಾಡಿ ಇಡೀ ಮನುಕುಲಾನ ವಿನಾಶದ ಅಂಚಿನಿಂದ ಪಾರು ಮಾಡಿ ಸ್ವಯಂ ಈಗ ಮೂರ್ಚಿತಳಾಗಿ ಬಿದ್ದಿದ್ದಾಳೆ ಅಂತ್ಲೂ ಅವಳ ದೈವಿಕ ಶಕ್ತಿಯನ್ನು ಕೊಂಡಾಡಿದ. ಅಲ್ಪ ಸಮಯದಲ್ಲೇ ಎಲ್ಲಾ ಛಾನೆಲ್ಗಳಲ್ಲೂ ಬಿಪಾಶಾ ಮಹಾತ್ಮೆ ಬಿತ್ತರವಾಗತೊಡಗಿತು.

ಡಾಕ್ಟರ್ ಬಂದು ಇಂಜೆಕ್ಶನ್ ಕೊಟ್ ಕೂಡ್ಲೇ ಎಚ್ಚೆತ್ತ ಬಿಪಾಶಗೆ ರೆಸ್ಟ್ ತಗೋ ಬೇಕು ಅಂತ ಸ್ಟ್ರಿಕ್ಟ್ ಆಗಿ ಅವ್ರು ಹೇಳಿ ಹೋದ್ರು. ಎಲ್ಲಾ ವಾಹಿನಿಗಳಲ್ಲೂ ಡಾಕ್ಟರ್ರ “ಅಬ್ ವೋ ಖತ್ರೇ ಸೇ ಬಾಹರ್” ಎಂಬ ಉದ್ಘೋಷ ನಿಮಿಷಕ್ಕೊಮ್ಮೆ ಪ್ರಸಾರವಾಗುತ್ತಿತ್ತು. ಹಾಗೂ ಇಡೀ ಎಪಿಸೋಡು ಆ ಕಡೆ ಸೈನ್ಸ್ ಫಿಕ್ಷನ್ನೂ ಅಲ್ಲ ಈಕಡೆ ಆಧ್ಯಾತ್ಮಿಕವೂ ಅಲ್ಲ ಅನ್ನೋ ಥರಾ ಕಾಣಿಸ್ತಿತ್ತು. ಎಲ್ಲಾ ಕಡೆ ಸಾಧು ಸಂತರಿಂದ ಶುರುವಾಗಿ ವಿಜ್ಞಾನಿಗಳವರೆಗೆ ಬಿರುಸಿನ ಚರ್ಚೆ ನಡೆಯುತ್ತಿತ್ತು.

ಜಾನ್ ಗಂತೂ ತನ್ನ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಯ್ತು. ಇನ್ನು ಕೆಲವು ದಿನಗಳು ಅವಳೊಂದಿಗೆ ಏಕಾಂತದಲ್ಲಿ ಕಳೆಯುವ “ಬೆಡ್ ರೆಸ್ಟ್” ಅನ್ನ ನೆನೆಸಿಯೇ ಪುಲಕಗೊಳ್ಳುತ್ತಿದ್ದ. ಡೈರೆಕ್ಟರ್ ಅಂತೂ ಈ ಚಿತ್ರಕ್ಕೆ ಸಿಕ್ಕಿದ ಅದ್ಭುತವಾದ ದೈವಿಕ ಪಬ್ಲಿಸಿಟಿಯನ್ನು ಸಂಪೂರ್ಣವಾಗಿ ಕೊಳ್ಳೆ ಹೊಡೆಯುವುದರಲ್ಲಿ ತಲ್ಲೀನನಾಗಿದ್ದ ಕಾರಣ ಇನ್ನು ಕೆಲವು ದಿನಗಳ ಶೂಟಿಂಗ್ ಅಂತೂ ಇರೋಲ್ಲ.

ಏಕಾಂತದಲ್ಲಿ ಬಿಪಾಶ, ಜಾನ್ ಅಲ್ದೆ ಇಬ್ರಿಗೂ ಕಾಣ್ಸದೇ ರೂಮ್ನಲ್ಲೇ ಸುತ್ತಾಡೋ ಸೊಳ್ಳೆ ! ರೂಪಾಂತರ ಜ್ಞಾನವನ್ನ ಸಿದ್ಧಿಸಿದ್ದ ತಿರುಮಲೇಶ್ ಈವಾಗ ಸೊಳ್ಳೆಯಾಗಿ ಬಿಪಾಶಾ ಹಿಂಬಾಲಿಸಿ ರೂಮ್ ಸೇರ್ಕೊಂಡಿದ್ದ. ಆಹಾ ! ಎಂತಾ ಅದೃಷ್ಟ !!! ಬಿಪಾಶಾ ಬೆಡ್ ರೂಮಲ್ಲಿ ಸೇರ್ಕೊಲ್ಲೋಕೆ  ಸಾವಿರ ಜನ್ಮದ ಪುಣ್ಯ ಮಾಡಿಬರಬೇಕು. ಆದ್ರೆ ಆ ಜಾನ್ ಒಬ್ಬ ಶನಿ ಒಟ್ಗೇ ಇದ್ದಾನಲ್ಲಾ ! ಇರಲಿ,  ಸೊಳ್ಳೆ ಬಿಪಾಶಾ ನೆನಪಿನಲ್ಲಿ ಅವಳ ಅಂಗಾಂಗಳ ಸುತ್ತ ಸುಳಿಯತೊಡಗಿತು. ಆಸೆ ತಡಿಲಾರದೆ ಕೆನ್ನೆಗೆ ಗಲ್ಲಕ್ಕೆ ಮುತ್ತಿಕ್ಕೋಕೆ ಹೋಯ್ತು.

ಅಷ್ಟು ಹೊತ್ನಲ್ಲಿ ಜಾನ್ ಅವ್ಳ ಬೆಡ್ ಮೇಲೆ ಬಂದು ರೆಸ್ಟ್ ಆದ. ಬಿಪಾಶ ಸೊಳ್ಳೇನ ಓಡ್ಸಿ “ಓ ಜಾನ್ ..” ಅಂತ ಅವನ ತೋಳಲ್ಲಿ ಸೇರಿಕೊಂಡಳು . ಜಾನ್ ಬಗ್ಗೆ ಸೊಳ್ಳೆಗೆ ಅಸಾಧ್ಯ ಸಿಟ್ಟು ಬಂದ್ಬಿಟ್ತು. ಹತ್ತಾರು ವರ್ಷ ಲೌಕಿಕವನ್ನೆಲ್ಲಾ ತೊರೆದು ತಪಸ್ಸಿದ್ಧಿ ಮಾಡ್ಕೊಂಡ ಋಷಿವರೇಣ್ಯರ ಹಾಗೆ ನಖ ಶಿಖಾಂತ ಉರ್ದ. ಒಂದೆರಡು ಸಕತ್ತಾಗಿ ಕಚ್ಚೇ ಬಿಟ್ಟ. ಜಾನ್ ಎದ್ಬಿಟ್ಟ.

“ವಾಟ್ಯಾ…..” ಅಂದಳು ಅವಳು

“ವೈಟ್ಯಾ…..” ಅಂದನು ಅವನು. ” ಲೆಟ್ ಮಿ ಡೀಲ್ ವಿದ್ ದಿಸ್ ಮೋಸ್ಕಿಟೋ ಫಸ್ಟ್ …” ಅಂತ ಅಂದು ಕೋಪದಿಂದ ಎದ್ದೇ ಬಿಟ್ಟ.

ಸೊಳ್ಳೆ ಮಂಚದಡಿ ಅಡಗಿ ಕೂತ್ಕೊಂಡ್ತು. ಜಾನ್ ಪಾಪ ಎಲ್ಲಾ ಕಡೆ ಹುಡ್ಕಾಡಿ ಬೇಸತ್ತ. ಬಿಪಾಶ ಜೋರಾಗಿ ನಕ್ಕಳು.  ಒಂದು ಸೊಳ್ಳೇ ಹಿಡೀಲಾರ್ದ ನಿಂಗೆ ಇನ್ನೇನು ಮಾಡೊಕಾಗತ್ತೆ?? ಎಂಬಂತೆ ತನ್ನ ಸೆಕ್ಸೀ ಕಣ್ಗಳಲ್ಲೇ ಹಂಗಿಸಿದಳು. ಒಲಿದ ಹುಡ್ಗೀ ಮುಂದೆ ಅಪಮಾನ !!! ಜಾನ್ ಸಹಿಸದಾದ. ಹೊರ್ಟೆ ಹೊರ್ಟ ಸೊಳ್ಳೆ ಸಂಹಾರಕ್ಕೆ. ದಿಢೀರ್ ಆಗಿ ಅಲ್ಲೇ ಒಂದು ಲವ್ ಟ್ರಾಂಗಲ್ ಎರ್ಪಟ್ಟಿತು.

‘ಟಾಮ್ ಅಂಡ್ ಜೆರ್ರಿ’ ನೋಡ್ದೋರಿಗೆ ಜಾಸ್ತಿ ಹೇಳ್ಬೇಕಾಗಿಲ್ಲ. ನೀವೆಲ್ಲಾ ನೋಡೇ ನೋಡಿರ್ತೀರಿ ಈ ಸನ್ನಿವೇಶ. ಅದೇ ನಡೀತು ಅವ್ಳ ಬೆಡ್ ರೂಮ್ನಲ್ಲಿ. ಜಾನ್ ಸೋತು ಅವಮಾನದಿಂದ ಕುದೀತಾ ಸುಮ್ಕೆ ಕೂತ್ಬಿಟ್ಟ. ಬಿಪಾಶಾ ಜೋರಾಗಿ ನಗ್ತಾ ಇದ್ಲು. ಸೊಳ್ಳೆಗೆ ಸ್ಪಿರಿಟ್ ಬಂದ್ ಬಿಡ್ತು. ಅಡ್ಗೀ ಕೂತ್ ಜಾಗ್ದಿಂದ ಎದ್ಬಿಟ್ಟು ಹಾರುತ್ತಾ ಹೊರಡ್ತು ಅವಳ ಕೆನ್ನೆ ಕಡೆ.. ಅದೇ ಟೈಮ್ನಲ್ಲಿ ಜಾನ್ ಕೋಪಾದಿಂದ ಉಲ್ಟಾ ಕೈ ಎಳ್ದು ಒಂದ್ ತಪ್ರಾಕಿ ಹೊಡ್ದೇ ಬಿಟ್ಟ. ಅವಳ್ ನಗು ನಿಂತೇ ಹೋಯ್ತು. ಜಾನ್ ಸಿಟ್ಟೂ ಇಳ್ದಹಂಗೆ ಆಯ್ತು.

ಪಾಪ ಸೊಳ್ಳೆ ಮಾತ್ರ ಮಧ್ಯೆ ಸಿಕ್ಬಿಟ್ಟು ತನ್ನ ಸ್ವೀಟ್ ಬಿಪ್ಸ್ ನ ಹಾಲ್ಗೆನ್ನೆಯಲ್ಲೇ ರಕ್ತ ಕಾರಿ ಸ್ವರ್ಗ ಕಂಡಿತು. ಇಹ ಲೋಕ ತ್ಯಜಿಸಿದ ತಿರುಮಲೇಶ್ನ ಧಡೂತಿ ದೇಹ ಮಂಚದಿಂದ ಕೆಳಗೆ ದೊಪ್ಪಂತ ಬಿದ್ ಬಿಡ್ತು. ಕ್ಷಣಾರ್ಧದಲ್ಲಿ ನಡೆದ ಮಿಂಚಿನಂಥ ಘಟನೆಯಿಂದ ಮತ್ತೊಮ್ಮೆ ಶಾಕಿಗೆ ಒಳಗಾದ ಬಿಪಾಶ ‘ಓ ಗಾಡ್……” ಅನ್ನುತ್ತಾ ಜಾನ್ ಮೈಮೇಲೇ ಬಿದ್ದು ಮೂರ್ಚಿತಳಾದಳು. ಜಾನ್ ಕೂಡ ಎದುರಿಗೆ ಬಿದ್ದ ದೊಡ್ಡ ದೇಹಾನ ನೋಡ್ತಾಲೇ ಯಾವ ಭೂತದಾಟಾನೋ ಅರ್ಥವಾಗ್ದೆ ಕಣ್ಣೂ ಬಾಯಿ ಬಿಟ್ಟೂ ಥರ ಥರ ನಡುಗತೊಡಗಿದ…

*           *                 *                       *

ಬಿದ್ದ ಹೊಡ್ತಕ್ಕೆ ತಿರುಮಲೇಶ್ ಗೆ ಎಲ್ಲಾ ಬ್ಲಾಕ್ ಔಟ್…. ಏನಾಯ್ತು ಅಂತ್ಲೇ ಗೊತ್ತಾಗ್ಲಿಲ್ಲ. ಬಹುಃಶಾ ಸತ್ತೇ ಹೊಗಿದ್ದೀನಿ ಅಂತ ತಿಳ್ಕೊಂಡ. ಇರ್ಲಿ  ನನ್ ಬಿಪಾಶಾ ಕೆನ್ನೇನಲ್ಲಿ ಅಲ್ವೆ ಸತ್ತಿದ್ದು. ನಾನೀಗ ಸ್ವರ್ಗದಲ್ಲೇ ಇರ್ಬೇಕು. ಆಹಾ ಎಲ್ಲಿ ರಂಭೆ, ಎಲ್ಲಿ ಊರ್ವಶಿ, ಮೇನಕಾ, ತಿಲೋತ್ತಮಾ ಅಂತಾ ಕಣ್ಣೋಪನ್ ಮಾಡ್ತಾ ಇದ್ರೆ ಎದ್ರಿಗೆ ಸ್ಲೋ ಆಗಿ ಫೇಡ್-ಇನ್ ಆಗಿದ್ದು ಅವನ ಹೆಂಡ್ತಿ…

“ಅಯ್ಯೋ, ಹಾಗಾದ್ರೆ ಇದು ನರಕಾನಾ? ” ಅಂತ ನಿದ್ದೆಗಣ್ಣಲ್ಲಿ ಬಾಯ್ಬಿಟ್ಟ.

ಹೆಂಡ್ತಿಗೆ ಬಂತು ಕೋಪ. “ಹೌದು ನರಕಾನೇ, ಮತ್ತು ನಾನೇ ಇಲ್ಲಿನ ನರಕೇಶ್ವರಿ ! ಕತೆ ಬರ್ಯೋಕೆ ಬಿಟ್ರೆ, ಕನಸ್ನಲ್ಲೂ ರಂಭೆ, ಉರ್ವಶೀನಾ?? ಯಾರ್ರೀ ಅದು ಆ ರಂಭೆ? ನಾನಾವಾಗ್ಲೇ ತಿಳ್ಕೊಂಡೆ ಏನೋ ಹೊಸ ಚಕ್ಕರ್ ಇದೆ ಅಂತ. ನಿಮ್ ಬುದ್ಧಿ ನೀವು ಬಿಡ್ಬೇಕಲ್ವ?…. ಸರಿ ಇನ್ಮುಂದೆ ಕಾಫಿ ಗೀಫಿ ಏನಾರ ಬೇಕಿದ್ರೆ ಆ ನಿಮ್ ರಂಭೇನ್ನೇ ಕೇಳಿ..” ಅಂತಾ ನರಕೇಶ್ವರಿ ಯುದ್ಧದ ಕಹಳೆ ಊದೇ ಬಿಟ್ಳು. ಕೋತಿ ತನ್ನ ಗಂಟಲು ಸರಿ ಮಾಡ್ಕೊಂಡು ಯುದ್ಧಕ್ಕೆ ತಯಾರಾದ.

‍ಲೇಖಕರು avadhi

April 11, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೆರಿಗೆ ಹೆಂಗೆಲ್ಲಾ ಕದೀತಾರೆ ಗೊತ್ತಾ?

ದುಡ್ಡು ಕೊಟ್ಟ ಮೇಲೆ ’ಬಿಲ್ಲು ಕೇಳಿ ಸ್ವಾಮಿ ’ ಎಂದು ನಾರಾಯಣ ಸ್ವಾಮಿ ಅವರು ಬರೆದ ಲೇಖನದ ಮುಂದಿನ ಭಾಗ ಎನ್ ನಾರಾಯಣಸ್ವಾಮಿ ತೆರಿಗೆ ಕದಿಯುವ...

ಬಿಲ್ಲು ಕೇಳಿ ಸ್ವಾಮಿ

ತೆರಿಗೆ ನಿಮಗೆ ಅರಿವಿಲ್ಲದಂತೆ ಪಾವತಿಸಿರುವಿರಿ ಅರಿವುಂಟೇ ಎನ್  ನಾರಾಯಣಸ್ವಾಮಿ ಹೀಗೆ ತೆರಿಗೆ ಎಂದರೆ ಬೆಚ್ಚಿ ಬೀಳುತ್ತೀರಲ್ಲವೇ?ಏಕೆಂದರೆ...

ಕಾಸು – ಕುಡಿಕೆ ಈಗ ಪುಸ್ತಕವಾಗಿ

ಅವಧಿಯಲ್ಲಿ ಅಂಕಣವಾಗಿ ಬರುತ್ತಿದ್ದ ಕಾಸು ಕುಡಿಕೆ ಈಗ ಪುಸ್ತಕವಾಗಿ! ಮೊಳೆಯಾರರಿಗೆ ಅವಧಿಯ ಅಭಿನಂದನೆಗಳು.. ಬರುತ್ತಿದೆ ಕಾಸು ಕುಡಿಕೆ! -...

3 ಪ್ರತಿಕ್ರಿಯೆಗಳು

ಇದಕ್ಕೆ ಪ್ರತಿಕ್ರಿಯೆ ನೀಡಿ PramodCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: